ಡಾ. ದಿನಮಣಿ ಬಿ.ಎಸ್.
**
ಸುರಿವ ಮಳೆಗೆ ಹರಿವ ಹೊಳೆಗೆ
ಯಾವ ಗಡಿ
ನೀನೇ ಸೃಷ್ಟಿಸಿಕೊಂಡದ್ದಲ್ಲವೇ
ಮೈಲಿಗೆ – ಮಡಿ
ಪೊರೆವ ಬುವಿಗೆ ಬೆಳೆವ ಪೈರಿಗೆ
ಯಾವ ದೇಶ
ಹುಟ್ಟು ಹಾಕಿಕೊಂಡದ್ದು ನೀನಲ್ಲವೇ
ಜಾತಿ – ಧರ್ಮಗಳ ದ್ವೇಷ
ಗುರಿಯಾಗಿಸಿಕೋ ನನ್ನನೆಂದು
ಕರೆದಿದೆ ಆಕಾಶ
ಅಸಮಾನತೆಯನೆ ಬೇರಾಗಿಸಿಕೊಂಡ ಮೇಲೆ ಎತ್ತರಕ್ಕೇರಲು ಬಿಟ್ಟು ಕೊಡುವುದೇ ಪಾಷ?
ನೀ ಬದುಕಲೋಸುಗ
ಕೊಲುವುದೂ ಧರ್ಮವಾದರೆ
ಇತರರನು ಬದುಕಲು ಬಿಡುವುದು
ಅಧರ್ಮವೇನು?
ನೀ ಬೆಳೆಯಲೋಸುಗ
ತುಳಿಯುವುದೇ ನ್ಯಾಯವಾದರೆ
ಇತರರು ಬೆಳೆಯುವುದು
ಅನ್ಯಾಯವೇನು?
ಪೂಜೆ ಯಾವುದು ಧ್ಯಾನ ಯಾವುದು
ನಿನ್ನ ಧರ್ಮದ್ದು
ತತ್ವ ಯಾವುದು ಸತ್ವ ಯಾವುದು
ನೀನು ನಂಬಿದ್ದು
ಕರ್ಮ ಭಕ್ತಿ ಜ್ಞಾನಯೋಗ
ಎಲ್ಲ ಬದುಕಲಿರುವ ಮಾರ್ಗ
ಬದುಕಿ ಬದುಕಗೊಟ್ಟು ನೋಡು
ನೀನಿರುವುದೆ ನಿಜ ಸ್ವರ್ಗ
ಕೊಲುವ ನೀತಿ ಕೈ ಬಿಡು ಒಲಿವ ದಾರಿ ಹುಡುಕು
ಸುಗಮವೆನಲು ಬದುಕ ತೇರು
ಒಡೆವ ಕೃತಿಯ ನಿಲಿಸು ಕಟ್ಟುವುದನೆ ಬಯಸು
ಅರಿತು ನಡೆವ ಅರಿವೇ ಗುರು






0 Comments