ಕೊನೆಯದಾಗಿ, ಗಾಯತ್ರಿ ಮಂತ್ರ!

ಡಾ ಯು ಆರ್ ಅನಂತಮೂರ್ತಿಯವರ

‘ಆರು ದಶಕದ ಆಯ್ದ ಬರಹಗಳು’ ಸಂಕಲನವನ್ನು ಬಿಡುಗಡೆ ಮಾಡಿ ಆಡಿದ ಮಾತು

ನಾನೀಗ ಅನಂತಮೂರ್ತಿಯವರ ಲೇಖನ ಸಂಗ್ರಹ ಬಿಡುಗಡೆ ಮಾಡಬೇಕಾಗಿದೆ. ಅವರು ಉದಯೋನ್ಮುಖ ಲೇಖಕನಂತೆ ಸಂಭ್ರಮಿಸುತ್ತ ವೇದಿಕೆ ಮೇಲೆ ರಾರಾಜಿಸುತ್ತಿದ್ದಾರೆ. ಅವರ ಎಳೆತನಕ್ಕೆ ಬೆರಗಾಗಿದ್ದೇನೆ.

ಅವರ ಪರಿಚಯವಾದಾಗ ನಾನು ಎಳೆ ಹುಡುಗ, ಪಿಯುಸಿ ಫೇಲಾಗಿದ್ದೆ. ಅವರೂ ಪಿಯುಸಿ ಫೇಲಾದವರಾಗಿದ್ದು ನಮ್ಮಂಥಹ ಫೇಲು ಪರಂಪರೆಯವರಿಗೆ ಸೀನಿಯರ್ ಆಗಿ ಒಂದು ಭರವಸೆಯ ಬೆಳಕಾಗಿದ್ದರು. ಯಾಕೆಂದರೆ ಅವರು ಆಗಲೇ ವಿಜೃಂಬಿಸುವ ಲೇಖಕರಾಗಿದ್ದರು.

ನನಗೆ ಇನ್ನೂ ನೆನಪಿದೆ. ಸಂಸ್ಕಾರ ಚಿತ್ರ ಬ್ಯಾನ್ ಆದುದಕ್ಕೆ ನಡೆದ ಪ್ರತಿಭಟನೆ. ಹೆಚ್ಚು ಕಮ್ಮಿ ನೂರು ಜನರಿದ್ದ ಮೆರವಣಿಗೆ ಅದು.ಇದರಲ್ಲಿ ಭಾಗವಹಿಸಿದ್ದವರೆಲ್ಲರೂ ಆ ಮೆರವಣಿಗೆಯನ್ನು ಮಾಡುತ್ತಿರುವುದು ತಮಗಾಗೇ ಎಂಬಂತೆ ಇದ್ದರು.ಅಲ್ಲಿ ಬುದ್ಧಿಭಾವ ತಾತ್ವಿಕತೆ ಬೇರ್ಪಡಿಸಲಾಗದಂತೆ ಇತ್ತು.ಇದು ಕಳೆದು ಹೋದುದಕ್ಕೆ ಹಳಹಳಿಸುವ ಮನಸ್ಥಿತಿ ಅನ್ನಿಸುತ್ತಿದೆ, ನಿಜ. ಆದರೆ ಆ ಮೆರವಣಿಗೆಯ ದ್ರವ್ಯ ಇಂದು ನಮಗೆ ಹೆಚ್ಚು ಬೇಕಾಗಿದೆ.

ಆಗ ನನ್ನಂಥವರಿಗೆ ಶಿಕ್ಷಣವಾಗಿದ್ದುದು ಕಾಲೇಜು ಪಠ್ಯವಲ್ಲ. ಮುಖ್ಯವಾಗಿ ಅನಂತಮೂರ್ತಿ ಲಂಕೇಶ್ರ ನಡುವಿನ ವಾಗ್ವಾದಗಳು ಶಿಕ್ಷಣವಾಗಿತ್ತು.ಯುವ ಜನರನ್ನು ರೂಪಿಸುತ್ತಿತ್ತು.ನಾನು ಅನಂತಮೂರ್ತಿ ಲಂಕೇಶರನ್ನು ಕನ್ನಡ ಸಾಹಿತ್ಯದ ಸವತಿಯರು ಎಂದು ಚುಡಾಯಿಸಿದ್ದೆ.ಆಗ ಲಂಕೇಶರನ್ನು ಯಂಗ್ ಅಂಡ್ ಚಾರ್ಮಿಂಗ್ ಎಂದು ಹೇಳಿದ್ದ ನೆನಪು.

ಇವರ ಲೇಖನಗಳು ಎಷ್ಟು ಪ್ರಭಾವಿಸುತ್ತಿದ್ದವು ಎಂಬುದಕ್ಕೆ ಒಂದು ಉದಾ: ಇವರ ಲೇಖನವೊಂದು ಬಹುಶಃ ಸಾರ್ತ್ರೆ ಬಗ್ಗೆ ಏನೊ-‘ನಮ್ಮ ಆಯ್ಕೆಗಳು ನಮ್ಮ ಬದುಕನ್ನು ರೂಪಿಸುತ್ತವೆ’ ಎಂಬ ಮಾತು ಕನ್ನಡ ಎಂಎ ಓದುತ್ತಿದ್ದ ಹುಡುಗಿಗೆ ಆಕೆ ಬೇರೆ ಜಾತಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಧೈರ್ಯ ತುಂಬಿತ್ತು. ಆವರಿಸಿಕೊಂಡು ಪ್ರಭಾವಿಸುವ ಗುಣ ಇವರ ಲೇಖನಗಳ ಸಾಧಾರಣ ಸಂಗತಿಯಾಗಿದೆ. ಹಾಗಾಗೇ ನನಗೆ ಇವರ ಕೆಲವು ಲೇಖನಗಳು ಇವರ ಕಾವ್ಯಕ್ಕಿಂತಲೂ ಮಿಗಿಲು, ಕೆಲವು ಲೇಖನಗಳಂತು ಇವರ ಕತೆಗಳಿಗೆ ಸಮಸಮ ಎಂಬಂತೆ ಇವೆ. ಬ್ರಹ್ಮ ತನ್ನ ಸೃಷ್ಟಿಗೆ ತಾನೇ ಮೋಹಗೊಳ್ಳುವ ಮೋಹಕತೆ ಇವರ ಲೇಖನಗಳಲ್ಲಿರುವುದು ಇದಕ್ಕೆ ಕಾರಣವೇನೊ ಅಥವಾ ಹಾಡುಗಾರನೊಬ್ಬನ ತನ್ಮಯ ಗುಣವೂ ಇರಬಹುದು.

ಅವರ ವಿವಾದಾತ್ಮಕವಾದ- ಜಾತಿ, ಬಹುತ್ವ, ಸೃಜನಶೀಲತೆಯನ್ನು ನಾನು ಗ್ರಹಿಸುತ್ತಿದ್ದ ಬಗೆಯನ್ನು ಹೇಳಿದರೆ ಇಲ್ಲಿಗೆ ಸಾಕು ಅನ್ನಿಸುತ್ತದೆ.ಅವರ ಈ ದೃಷ್ಟಿಕೋನ ತಪ್ಪು ಅರ್ಥಕ್ಕೂ ಕಾರಣವಾಗುತ್ತಿತ್ತು.ತಪ್ಪು ಅರ್ಥ ಮಾಡಿಕೊಂಡವರದು ತಪ್ಪು ಎಂದು ಸಾರಸಗಟಾಗಿ ಹೇಳಲಾಗದ ಸಂದಿಗ್ಧತೆಯನ್ನು ಅವರ ಲೇಖನಗಳೇ ಉಂಟುಮಾಡುತ್ತಿದ್ದವು. ಇದಕ್ಕೆ ಕಾರಣ ಅವರ ಲೇಖನಗಳಲ್ಲಿನ ಓಘ.ಅವರ ಲೇಖನಗಳು ನಿಂತ ನೀರಿನ ಕೊಳವಾಗಿರಲಿಲ್ಲ. ಅಥವಾ ಜಲ ಜಿನುಗಿಸುವ ಜಲದ ಕಣ್ಗಳೂ ಆಗಿರಲಿಲ್ಲ. ಅದು ಅನೇಕ ಝರಿಗಳನ್ನು ಕೂಡಿಕೊಂಡು ವೇಗದಲ್ಲಿ ಹರಿಯುವ ನದಿಯಂತೆ. ಹಾಗಾಗಿ ಸ್ವಲ್ಪ ಅತ್ತ ಇತ್ತ ಇರುತ್ತಿತ್ತು. ಜೊತೆಗೆ ಅವರು ಇಲ್ಲಿದ್ದರೆ, ಇನ್ನೊಂದು ಕಡೆಗೆ ಕಣ್ಣು ಹೊಡೆಯುತ್ತಿದ್ದರು. ಈ ಕಣ್ಣು ಹೊಡೆವುದನ್ನು ಅಪಾರ್ಥ ಮಾಡಿಕೊಳ್ಳುವುದು ಬೇಡ, ಎಲ್ಲವನ್ನೂ ಒಳಗೊಳ್ಳಬೇಕೆಂಬ ಅವರ ಹಂಬಲ ಅಷ್ಟೆ.

ನಾನು ಒಟ್ಟಾಗಿ ಗ್ರಹಿಸಲು ಪ್ರಯತ್ನಿಸುತ್ತಿದ್ದೆ – ಅವರು ಒಂದು ಸಂದರ್ಶನದಲ್ಲಿ ‘ಮೀಸಲಾತಿ ಬೇಕು.ಅದು ಸಮುದ್ರದಲ್ಲಿ ಮೀನು ಹಿಡಿದಂತೆ’ ಅನ್ನುತ್ತಾರೆ. ಇದು ಕಾಣ್ಕೆ ನುಡಿಯಂತೆ ನನಗೆ ಕಾಣಿಸುತ್ತದೆ. ಎಲ್ಲರಿಗೂ ಅವಕಾಶವಿರುವ ವಾತಾವರಣದಲ್ಲಿ ಮಿಗಿಲಾದ ಪ್ರತಿಭೆಗಳು ಅರಳುತ್ತವೆ, ಅದಕ್ಕಾಗಿ ಮೀಸಲಾತಿ ಬೇಕು ಎನ್ನುವ ಇವರ ಇಂಥ ಅದ್ಭುತ ಸಮರ್ಥನೆಯನ್ನು ನಾನೆಲ್ಲೂ ಕೇಳಿಲ್ಲ. ಅದೇ ಲೇಖನದಲ್ಲಿ ಅವರು- ‘ನಾನು ಮಡಿಬಿಟ್ಟೆ, ಮೈಲಿಗೆಯಾದೆ ಹಾಗಾಗಿ ಲೇಖಕನಾದೆ’ಅನ್ನುತ್ತಾರೆ. ಈ ಮಾತು ಸೃಜನಶೀಲತೆಗೆ ಭಾರತ ಏನಾಗಬೇಕೆಂದು ಹೇಳುತ್ತದೆ. ಮೊಟ್ಟೆಯೊಡೆದು ಜೀವ ತಳೆದು ಹೊರಬಂದ ಮರಿಯಂತೆ ಈ ಮಾತಿದೆ.ನಾನು ಈ ಹಿನ್ನೆಲೆಯಿಂದ ಗ್ರಹಿಸುತ್ತಿದ್ದೆ.

ಕೊನೆಯದಾಗಿ, ಗಾಯತ್ರಿ ಮಂತ್ರ!  ಅನಂತಮೂರ್ತಿಯವರ ಆರೋಗ್ಯ ಬಿಗಡಾಯಿಸಿ ದೆಹಲಿ ಆಸ್ಪತ್ರೆಯಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿದ್ದಾಗ, ಅವರು ನನಗೆ ಗಾಯತ್ರಿ ಮಂತ್ರವನ್ನು ಹೇಳಿಕೊಟ್ಟಂತೆ ಬೋಧೆಯಾಯ್ತಂತೆ. ಅವರು ಇದನ್ನು ನನಗೆ ಹೇಳಿದಾಗ ನಾನೆಂದೆ-‘ಸಾರ್, ಇದು ಮಾಮೂಲಿ ನಡಿಗೆ. ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಾದರೂ ನಾನು ನಿಮಗೆ ಗಾಯತ್ರಿ ಮಂತ್ರ ಹೇಳಿಕೊಟ್ಟಂತೆ ಬೋಧೆಯಾಗಿದ್ದರೆ ಭಾರತದ ಮನಸ್ಸಿಗೆ ಚಲನೆ ಬರುತ್ತಿತ್ತಲ್ಲವೆ?’ಎಂದೆ. ಅವರು ಮೌನವಾದರು. ಇದನ್ನೂ ಸ್ವೀಕರಿಸಿ ದಕ್ಕಿಸಿಕೊಂಡು ಬೆಳೆಯುವ ಹದ ಅವರ ವ್ಯಕ್ತಿತ್ವದಲ್ಲಿದೆ. ಇದು ತುಂಬಾ ದೊಡ್ಡದು ಅನ್ನಿಸುತ್ತದೆ.

 

‍ಲೇಖಕರು G

September 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

೧ ಪ್ರತಿಕ್ರಿಯೆ

  1. laxminarasimha

    “ಕೊನೆಯದಾಗಿ, ಗಾಯತ್ರಿ ಮಂತ್ರ! ಅನಂತಮೂರ್ತಿಯವರ ಆರೋಗ್ಯ ಬಿಗಡಾಯಿಸಿ ದೆಹಲಿ ಆಸ್ಪತ್ರೆಯಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿದ್ದಾಗ, ಅವರು ನನಗೆ ಗಾಯತ್ರಿ ಮಂತ್ರವನ್ನು ಹೇಳಿಕೊಟ್ಟಂತೆ ಬೋಧೆಯಾಯ್ತಂತೆ. ಅವರು ಇದನ್ನು ನನಗೆ ಹೇಳಿದಾಗ ನಾನೆಂದೆ-’ಸಾರ್, ಇದು ಮಾಮೂಲಿ ನಡಿಗೆ. ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಾದರೂ ನಾನು ನಿಮಗೆ ಗಾಯತ್ರಿ ಮಂತ್ರ ಹೇಳಿಕೊಟ್ಟಂತೆ ಬೋಧೆಯಾಗಿದ್ದರೆ ಭಾರತದ ಮನಸ್ಸಿಗೆ ಚಲನೆ ಬರುತ್ತಿತ್ತಲ್ಲವೆ?’ಎಂದೆ. ಅವರು ಮೌನವಾದರು. ಇದನ್ನೂ ಸ್ವೀಕರಿಸಿ ದಕ್ಕಿಸಿಕೊಂಡು ಬೆಳೆಯುವ ಹದ ಅವರ ವ್ಯಕ್ತಿತ್ವದಲ್ಲಿದೆ. ಇದು ತುಂಬಾ ದೊಡ್ಡದು ಅನ್ನಿಸುತ್ತದೆ”.—-ಇದು ದೇವನೂರು ಹಾಗು ಅನಂತಮೂರ್ತಿ ಅವರ ಇಡೀ ವ್ಯಕ್ತಿತ್ವಗಳ ಸಾರ ರೂಪದಂತಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: