ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ..

ಪ್ರಜಾವಾಣಿಗೆ ಅತಿಥಿ ಸಂಪಾದಕರಾಗಿದ್ದರು ದೇವನೂರು ಮಹಾದೇವ.

ಆ ಸಂದರ್ಭದಲ್ಲಿ ಬರೆದ ಸಂಪಾದಕೀಯ ಇದು

ಅವರು ಕಾಣಲು ಬೆಂಕಿ ಕೆಂಡದಂತೆ ಇದ್ದರು. ಅವರು ಮಾತಾಡಿದರೆ ಆ ಮಾತೊಳಗಿನ ಕಾವು ತಟ್ಟುತ್ತಿತ್ತು. ಇವರು ಪ್ರೊ. ಎಂ.ಮರಿಸ್ವಾಮಿ ಅಂತ. ಹಿಂದೂ ಅಸ್ಪೃಶ್ಯರಾಗಿ ಹುಟ್ಟಿದ ಇವರು ಬೌದ್ಧರಾಗಿ ನಿಧನರಾದರು. ಇವರು ಬದುಕಿದ್ದಾಗ ಎಸ್.ತುಕಾರಾಂ ಮಾಡಿರುವ ಸಂದರ್ಶನ ದಲಿತನೊಬ್ಬನ ಅಂತರಂಗವನ್ನು ತೆರೆದಿಟ್ಟಂತಿದೆ.

ಆ ಸಂದರ್ಶನದಲ್ಲಿನ ಒಂದು ಘಟನೆ ನನ್ನನ್ನು ಸದಾಕಾಲ ಕೊರೆಯುತ್ತಿರುತ್ತದೆ. ಆಗ ಮರಿಸ್ವಾಮಿಯವರು ಮಾಧ್ಯಮಿಕ ಶಾಲಾ ಶಿಕ್ಷಕರು. ಅವರು ತಮ್ಮ ಪಕ್ಕದೂರಿನ ಬಸ್ಸು ನಿಲ್ಲುತ್ತಿದ್ದ ಲಿಂಗಾಯತ ಬೀದಿಯಲ್ಲಿ ಬಸ್ಸಿಗೆ ಕಾಯುತ್ತಾ ಕೂತಿರುವಾಗ ಕಳ್ಳಂಬಳ್ಳಿ ಮಾದಪ್ಪ ಎಂಬ ಹಳೇಕಾಲದ ವಯಸ್ಸಾದ ವ್ಯಕ್ತಿ ತನ್ನ ಮನೆಯಿಂದ ಹೊರಬಂದು ಮರಿಸ್ವಾಮಿಯವರತ್ತ ಕೈತೋರಿಸುತ್ತಾ ‘ಯಾರ್ಲಾ ಅವನು ಅಲ್ಲಿ ಕೂತಿರೋನು’ ಎಂದು ತನ್ನ ಮಗನನ್ನು ಕೇಳಿದಾಗ ಅವರ ಮಗ- ‘ಹೆಂಡದ ಮಾದಯ್ಯನ ಮಗ, ಮೇಷ್ಟ್ರು ಕೂತಿದ್ದಾರೆ’ ಎಂದಾಕ್ಷಣವೇ ಆ ಯಜಮಾನನ ಬಾಯಿಂದ ಹೊಲಸು ಮಾತು ಬರುತ್ತದೆ. ‘ಎದ್ದೇಳೋ ಮೇಲಕ್ಕೆ’ ಎಂದು ಗದರಿಸುತ್ತಾರೆ. ಇದನ್ನು ನೆನಪಿಸಿಕೊಂಡು ಮರಿಸ್ವಾಮಿಯವರು ಆಗ ನಾವು ಬದುಕೋ ರೀತಿ ಇರೋದೇ ಹಾಗೆ ಅಂದುಕೊಂಡಿದ್ದೆವು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರಹಗಳನ್ನು ಓದಿದ ಮೇಲೆಯೇ ಅದು ‘ಗಾಯ’ ಎಂದು ಗೊತ್ತಾಯಿತೇ ವಿನಾ ಅಲ್ಲೀತನಕ ಅದು ಗಾಯ ಅಂತಲೇ ಅನಿಸಿರಲಿಲ್ಲ ಎನ್ನುತ್ತಾರೆ.

ಭಾರತ ಗಾಯಗೊಂಡು ಬಿದ್ದಿದೆ. ಅದರ ‘ಗಾಯ’ ಅದಕ್ಕೆ ಗಾಯ ಅನಿಸುತ್ತಿಲ್ಲ. ಅಸ್ಪೃಶ್ಯತೆ ಜಾತಿ ಮತೀಯತೆಯ ಗಾಯ ನಂಜಾಗಿ ಮಿದುಳಿಗೇರಿ ಭಾರತ ಹುಚ್ಚಾಗಿದೆ. ಈ ಗಾಯವನ್ನೇ, ಈ ಹುಚ್ಚನ್ನೇ ಸಮಾಜದಲ್ಲಿ ಸಂಸ್ಕೃತಿ ಅಂತ, ಪರಂಪರೆ ಅಂತ ಬಿಂಬಿಸಲಾಗಿದೆ. ಸಮಾಜವೂ ಹಾಗೇ ನಂಬಿಕೊಂಡಿದೆ. ಇಲ್ಲಿ ಹುಟ್ಟಿದ ವ್ಯಕ್ತಿಯ ಶಕ್ತಿ ಸಾಮರ್ಥ್ಯದ ಅರ್ಧದಷ್ಟು ಭಾಗ ಈ ಹುಚ್ಚಿನೊಡನೇ ಹೆಣಗಿ ಸುಸ್ತಾಗುತ್ತಿದೆ.

ಇದು ಗಾಯ, ಇದು ಹುಚ್ಚು ಎಂಬ ಅರಿವಿದ್ದಿದ್ದರೆ- ‘ಊರಾಚೆ ಎಸೆಯಲ್ಪಟ್ಟ ಅಸ್ಪೃಶ್ಯ ಸಮುದಾಯವು ಜಾತಿ ಕಾರಣಕ್ಕಾಗಿ ಯಾರನ್ನೂ ಕೊಂದಿಲ್ಲ, ಯಾರನ್ನೂ ತುಳಿದಿಲ್ಲ, ಯಾರನ್ನೂ ಕೀಳಾಗಿ ನೋಡಿಲ್ಲ. ಹಾಗಾಗಿ ಈ ಸಮುದಾಯವೇ ಅವಮಾನಕ್ಕೆ ತುತ್ತಾಗುವ ಬದಲು ಗೌರವಕ್ಕೆ ಪಾತ್ರವಾಗಬೇಕಾಗಿತ್ತು’ ಎಂಬ ಭಾವನೆ ಸಮಾಜದಲ್ಲಿ ಉಂಟಾಗುತ್ತಿತ್ತು.

ಜತೆಗೆ, ಅಸ್ಪೃಶ್ಯರನ್ನಾಗಿಸಿ ಊರಾಚೆ ಎಸೆಯಲ್ಪಡಲು ಇರುವ ನೂರೆಂಟು ಕಾರಣಗಳಲ್ಲಿ- ಚಾತುರ್ವರ್ಣದ ವಿಂಗಡನೆಯನ್ನು ಒಪ್ಪದ ತಾತ್ವಿಕರು ಹಾಗೂ ಶೂದ್ರರಾಗಲು ಎಂದರೆ ಸೇವಕರಾಗಲು ಒಪ್ಪದ ಸ್ವಾಭಿಮಾನಿಗಳನ್ನು ಅಸ್ಪೃಶ್ಯರನ್ನಾಗಿಸಿ ಊರಾಚೆ ಎಸೆಯಲ್ಪಟ್ಟಿದ್ದೂ ಕಾಣಿಸುತ್ತಿತ್ತು. ಆಗ ಎಸೆಯಲ್ಪಟ್ಟು ಈಗ ಬಡತನ, ಅವಮಾನಗಳಿಂದ ಜರ್ಝರಿತವಾಗಿರುವ ಈ ಅಸ್ಪೃಶ್ಯ ಸಮುದಾಯದ ಹಿಂದಿನ ಚರಿತ್ರೆಯ ಘನತೆ ಕಾಣಿಸುತ್ತಿತ್ತು. ಅಸ್ಪೃಶ್ಯತೆಯ ತಾರತಮ್ಯಕ್ಕೆ ಒಳಗಾದವರು ಆ ನೋವನ್ನು ‘ಬದುಕುವ ರೀತಿ’ ಎಂದುಕೊಂಡರೆ ಅದು ಸ್ಥೂಲವಾಗಿ ದೈಹಿಕವಾಗಿರುತ್ತದೆ. ಅದೇ ಆ ನೋವು ತಾರತಮ್ಯಗಳು ‘ಗಾಯ’ ಎಂದು ಅರಿವಿಗೆ ಬಂದರೆ ಅವು ಸೂಕ್ಷ್ಮವಾಗಿ ಮನೋಮಯವಾಗಿ ಕ್ಷಣಕ್ಷಣವೂ ಹಿಂಸಿಸುತ್ತವೆ.

ಆಗ ಆ ಹಿಂಸೆಯನ್ನು ತಾಳಲಾರದವರು ತಾವು ಅಸ್ಪೃಶ್ಯರೆಂಬುದನ್ನೇ ಮರೆಮಾಚಲು ಹವಣಿಸುತ್ತಾರೆ. ಯಾರಿಗೆ ತಮ್ಮ ಸ್ಥಿತಿಯನ್ನು ತಾತ್ವಿಕ ನೆಲೆಗಟ್ಟಿನಲ್ಲಿ ನೋಡುವ ಅರಿವು ಬರುತ್ತದೋ ಅವರು ತಮ್ಮ ವಿಮೋಚನೆಗೆ ತವಕಿಸುತ್ತಾರೆ. ಆಗ ವಿಮೋಚನೆ ಅವರದು ಮಾತ್ರವಾಗಿರುವುದಿಲ್ಲ, ಇದರಿಂದ ಇಡೀ ಸಮಾಜವೇ ವಿಮೋಚನೆಗೊಳ್ಳುವ ದಿಕ್ಕಲ್ಲಿ ಚಲಿಸುತ್ತದೆ.

ಈ ಹಿನ್ನೆಲೆಯಲ್ಲೇ ಹಿಂದೊಂದು ಸಲ ನಾನು- ಚಿಕಿತ್ಸೆ ಯಾರಿಗೆ ಬೇಕಾಗಿದೆ? ಮೇಲು-ಕೀಳು ರೋಗವನ್ನೇ ಸಂಸ್ಕೃತಿಯೆಂದುಕೊಂಡಿರುವವರಿಗೆ ಸಾಂಸ್ಕೃತಿಕ ಚಿಕಿತ್ಸೆ, ತಾರತಮ್ಯದ ಕಟ್ಟುಪಾಡುಗಳನ್ನೇ ಸಂಪ್ರದಾಯ ಎಂದುಕೊಂಡಿರುವವರಿಗೆ ಸಾಮಾಜಿಕ ಚಿಕಿತ್ಸೆ, ಬಡತನದಿಂದ ಎದ್ದುನಿಲ್ಲಲು ತ್ರಾಣವಿಲ್ಲದ ತಳಸಮುದಾಯಕ್ಕೆ ಆರ್ಥಿಕ ಚಿಕಿತ್ಸೆ- ನೀಡಬೇಕಾಗಿದೆ ಎಂದು ಮಾತಾಡಿದ್ದೆ.

ಆ ಸಂದರ್ಭದಲ್ಲೇ ದಲಿತರು ಸಂಘಟಿತರಾಗಬೇಕು, ತಮ್ಮ ಕೀಳರಿಮೆಯ ರೋಗದಿಂದ ಮೊದಲು ತಪ್ಪಿಸಿಕೊಂಡು, ಮೇಲರಿಮೆ ಹುಚ್ಚಿನ ಸಮುದಾಯದ ಏಟುಗಳಿಂದಲೂ ತಪ್ಪಿಸಿಕೊಳ್ಳುತ್ತಲೇ, ಆ ಮೇಲರಿಮೆಯವರ ಹುಚ್ಚಿಗೂ ಚಿಕಿತ್ಸೆ ಕೊಡಬೇಕು ಎಂದು ಹೇಳಿದ್ದೆ. ಅಂದರೆ ಒಂದು ವಿಮೋಚನಾ ಸಂಘಟನೆ ಹುಚ್ಚಾಸ್ಪತ್ರೆಯ ವೈದ್ಯರಂತೆ ಕಾರ್ಯನಿರ್ವಹಿಸಬೇಕು ಎಂಬುದು ನನ್ನ ಆಶಯವಾಗಿತ್ತು.

ಯಾವುದೇ ಒಂದು ಜಾತಿ ಸಂಘಟಿತವಾಗುವುದರಿಂದ ಜಾತಿಸಮಾಜದ ಕಟ್ಟುಪಾಡು ತಾರತಮ್ಯಗಳು ಬಿಗಿಯಾಗುವುದಾದರೆ ಅದು ನಮ್ಮ ಸಂವಿಧಾನದ ಆಶಯಗಳಿಗೆ ಪೂರಕ ಅಲ್ಲ. ಯಾವುದೇ ಒಂದು ಜಾತಿಸಂಘಟನೆಯು ಜಾತಿಯ ಕಟ್ಟುಪಾಡು ತಾರತಮ್ಯಗಳನ್ನು ಸಡಿಲಗೊಳಿಸಿ ಮುಂದಕ್ಕೆಳೆಯುವುದಾದರೆ ಆಗ ಮಾತ್ರ ಅದಕ್ಕೊಂದು ನೈತಿಕತೆ ತಂತಾನೆ ಬಂದುಬಿಡುತ್ತದೆ.

ಈ ‘ಜಾತಿ’ಯಿಂದ ನಾವು ಕಳೆದುಕೊಂಡದ್ದು ಏನೇನು? ಆಸ್ತಿ ಅಂತಸ್ತು ಸ್ಥಾನಮಾನ ಅನುಕೂಲ ಇತ್ಯಾದಿಗಳನ್ನು ಬಿಟ್ಟೇ ಬಿಡೋಣ. ಒಬ್ಬ ವ್ಯಕ್ತಿ ತಾನು ಒಂದು ಜಾತಿಯಲ್ಲಿ ಹುಟ್ಟಿದ ಕಾರಣಕ್ಕಾಗಿ ತನ್ನ ನ್ಯಾಯಪರತೆಯನ್ನೇ ಸತ್ಯಸಂಧತೆಯನ್ನೇ ಕಳೆದುಕೊಂಡು ಬಿಟ್ಟಿರುತ್ತಾನೆ. ಈ ಸಾಮಾಜಿಕ ಕಟ್ಟುಪಾಡುಗಳ ದೆಸೆಯಿಂದಾಗಿ ಅನ್ಯಾಯವೂ ಕೂಡಾ ಅನ್ಯಾಯವಾಗಿ ಕಾಣಲಾರದು. ಆತ ತನ್ನ ಅಂತಃಸಾಕ್ಷಿಯನ್ನೇ ಕುರುಡಾಗಿಸಿಕೊಂಡಿರುತ್ತಾನೆ. ತನ್ನದಲ್ಲದ ಜಾತಿ-ಮತಗಳ ಕಷ್ಟ ಸುಖ ಆತನಿಗೆ ಮುಟ್ಟುವುದೂ ಇಲ್ಲ. ಕೆಲವು ಸಲ ತನ್ನದಲ್ಲದ ಜಾತಿಯವನ ಸುಖ ಇವನಿಗೆ ಕಷ್ಟವಾಗಬಹುದು! ಅವನ ಕಷ್ಟ ಇವನಿಗೆ ಸುಖವಾಗಬಹುದು.

ಒಟ್ಟಿನಲ್ಲಿ ಆತನ ಸಂವೇದನೆಗೆ ಕುಷ್ಠ ತಗುಲಿರುತ್ತದೆ, ಸ್ಪಂದನೆ ಇರುವುದಿಲ್ಲ. ಈ ಜಾತಿಯಿಂದ ನಾವು ಕಳೆದುಕೊಂಡದ್ದು ಏನೇನು? ಗಾಬರಿಯಾಗುತ್ತದೆ. ನಾವು ಕುಬ್ಜರೂ ರೋಗಿಗಳೂ ಆಗಿಬಿಟ್ಟಿದ್ದೇವೆ. ಎಲ್ಲಾ ನಷ್ಟಕ್ಕಿಂತಲೂ ಇದು ನನಗೆ ದೊಡ್ಡ ನಷ್ಟವಾಗಿ ಕಾಣುತ್ತದೆ. ಹಾಗಾಗಿ ಜಾತಿಯಿಂದ ಬಿಡುಗಡೆ ಪಡೆಯುವುದು ಎಂದರೆ ಅದು ನಮ್ಮೊಳಗಿನ ನ್ಯಾಯಪರತೆ ಸತ್ಯಸಂಧತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ, ನಮ್ಮ ಸಂವೇದನೆಯನ್ನು ಉಳಿಸಿಕೊಳ್ಳುವುದಕ್ಕಾಗಿ, ನಾವು ಮನುಷ್ಯರಾಗಿ ಸ್ಪಂದಿಸಲು, ಎಂದರೆ ನಮ್ಮ ವಿಮೋಚನೆಗಾಗಿಯೇ ನಾವು ಜಾತ್ಯತೀತರಾಗಬೇಕಾಗಿದೆ. ನಾಳೆ ಬದುಕಿಬಾಳಬೇಕಾದ ನಮ್ಮ ಎಳೆಯ ಮಕ್ಕಳಲ್ಲಾದರೂ ಈ ಭಾವನೆಯನ್ನು ಬಿತ್ತ ಬೇಕಾಗಿದೆ. ಹಾಗಾಗಿ, ಇದು ಶಿಕ್ಷಣದ ಭಾಗವಾಗಲೂ ಬೇಕಾಗಿದೆ.

ಜಾತಿ ಪದ್ಧತಿಯಿಂದ ಘಾಸಿಗೊಂಡು ‘ಈ ಜಾತಿ ಅನ್ನೋದೇ ಇರಬಾರದು’ ಎಂಬ ಸಂಕಟದ ಬದುಕಿನ ದಲಿತರನ್ನು ಎಚ್ಚರಿಸಬೇಕಾದರೂ ಅವರ ‘ಜಾತಿ’ಯನ್ನೇ ಕೆರಳಿಸಿ ಅಷ್ಟೋ ಇಷ್ಟೋ ನಡೆಯುವಂತೆ ಮಾಡಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಲ್ಲಿ, ತಳ ಸಮುದಾಯಗಳು ಎಚ್ಚರಗೊಂಡು ತಮಗೆ ಆದ ಅನ್ಯಾಯಕ್ಕೆ ಸೆಟೆದು ನಿಂತು ಕೂಗುವುದೂ ಕೂಡ ಬಿಗಿಯಾದ ಜಾತಿ ಕಟ್ಟುಪಾಡುಗಳನ್ನು ಅಳ್ಳಾಡಿಸಬಲ್ಲದು. ಹೀಗೆ ಗುರುತಿಸಿ ಎಚ್ಚರಗೊಳಿಸುವ ಐಡೆಂಟಿಟಿ, ಅಸ್ಮಿತೆ ಎನಿಸಿಕೊಳ್ಳುವ ಈ ಕ್ರಿಯೆ ಇಂದು ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ. ಆದರೆ ನಾವು ಚಚರ್ಿಸಬೇಕಾಗಿರುವುದು ಯಾವುದೇ ಕ್ಷೇತ್ರದ ಈ ಗುರುತಿಸುವಿಕೆಯ ಐಡೆಂಟಿಟಿ ಎಷ್ಟಿರಬೇಕು ಮತ್ತು ಯಾಕಾಗಿ ಇರಬೇಕು ಎಂಬುದರ ಬಗ್ಗೆಯೂ ಕೂಡಾ ಇರಬೇಕಾಗುತ್ತದೆ. ಜಾತಿಯನ್ನು ಗುರುತಿಸಿ ಸಂಘಟಿತರಾಗಿ ಹೋರಾಡುತ್ತಲೇ ಅದರೊಳಗೇನೇ ಜಾತ್ಯತೀತತೆಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ವಿವೇಕ, ಎಚ್ಚರ ಇಲ್ಲಿ ಬೇಕಾಗಿದೆ.

ತಂತಿ ನಡಿಗೆಯಂತೆ ಇದು. ಯಾವುದೇ ಐಡೆಂಟಿಟಿ ಸಂಘಟನೆ ಯಾಕಾಗಿ? ಅದು ಸಮಾನತೆಗಾಗಿ, ವಿಕೇಂದ್ರೀಕರಣಕ್ಕಾಗಿ, ತಾರತಮ್ಯ ನಿವಾರಣೆಗಾಗಿ….. ಈ ದಿಕ್ಕಲ್ಲಿ ಹೆಜ್ಜೆ ಇಡುವ ನಡಿಗೆಗಳಾಗಬೇಕು. ಯಾವುದೇ ಐಡೆಂಟಿಟಿ ನಡಿಗೆ, ತಾನೊಂದು ಅಸಮಾನತೆಗೆ ಒಳಗಾದ ಝರಿ, ತಾನು ಇರುವುದೇ ಸಮಾನತೆಯ ನದಿಗೆ ಕೂಡುವುದಕ್ಕಾಗಿ ಎಂಬಂತೆ ತನ್ನ ಆಶಯಗಳ ಇತರ ಝರಿಗಳ ಜೊತೆ ಕೂಡಿಕೊಳ್ಳುತ್ತಾ ಸಮಾನತೆಯ ನದಿಯ ಕಡೆ ಚಲಿಸಬೇಕಾಗುತ್ತದೆ. ಇಲ್ಲದಿದ್ದರೆ ಮತ್ತೆಲ್ಲಿಗೋ ತಲುಪಿಬಿಡಬಹುದು ಅಥವಾ ತಾನೇ ಸರ್ವಸ್ವ ಎಂದುಕೊಂಡು ಅತಿಗೆ ಹೋಗಿ ದಿಕ್ಕು ತಪ್ಪಲೂಬಹುದು.

ಸಮಾನತೆ ಬಯಸುವ ಐಡೆಂಟಿಟಿಯ ಆಂದೋಲನಗಳಿಗೆ ಅಂದರೆ- ಆದಿವಾಸಿ, ಮಹಿಳೆ, ದಲಿತ, ದಲಿತ ಒಳಪಂಗಡಗಳು, ಅಲ್ಪಸಂಖ್ಯಾತ, ಯಾವುದೇ ತಳಸಮುದಾಯ, ರೈತಾಪಿ ಹೋರಾಟಕ್ಕೆ ಈ ಅರಿವಿಲ್ಲದಿದ್ದರೆ ಐಕ್ಯತೆಗೆ ಬದಲು ಛಿದ್ರತೆಗೆ ತಾನೂ ಕಾರಣವಾಗಬಹುದು. ಸಮಾನತೆಯ ಆಶಯದ ಯಾವುದೇ ಸಂಘಟನೆಗಳು ಈ ಅರಿವಿನಲ್ಲಿ ನಡೆಯಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.

ಇದು ಇಂದಿನ ತುರ್ತು ಅಗತ್ಯವಾಗಿದೆ. ಯಾಕೆಂದರೆ ಭಾರತ ಧಾವಿಸುತ್ತಿರುವ ದಿಕ್ಕು ವೇಗ ನೋಡಿದರೆ- ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರ ಕನಸು ಇಂದು ಅಪಹಾಸ್ಯಕ್ಕೆ ವಸ್ತುವಾಗಿದೆ. ಸಮಾನತೆ ಅಂದರೆ ಇಂದು ನಗುತ್ತಾರೆ. ಬಡವ ಬಲ್ಲಿದರ ನಡುವೆ ಅಂತರ ಕಮ್ಮಿ ಇರಬೇಕು ಎಂದರೆ ಇನ್ನೂ ನಗುತ್ತಾರೆ. ಹಾಗಾದರೆ ನಮಗೆ ಯಾವ ಭಾರತ ಬೇಕು? ಮುಂಬೈನಲ್ಲಿ ಮುಖೇಶ್ ಅಂಬಾನಿಯವರ ಮನೆ ಇಪ್ಪತ್ತೇಳು ಅಂತಸ್ತು. ಮೂರು ಹೆಲಿಪ್ಯಾಡ್. ಒಂಬತ್ತು ಲಿಫ್ಟ್ಗಳು. ತೂಗು ಉದ್ಯಾನಗಳು. ಡ್ಯಾನ್ಸ್ರೂಮುಗಳು. ಬಗೆಬಗೆಯ ಹವಾಕೋಣೆಗಳು. ಜಿಮ್ಗಳು. ಆರು ಅಂತಸ್ತಿನ ಪಾರ್ಕಿಂಗು, 600 ಸೇವಕರು ಇತ್ಯಾದಿ ಇರುವ ಈ ಮನೆಯ ಸುತ್ತಾ ಸಾವಿರಾರು ಸ್ಲಂ ಜೋಪಡಿಗಳು. ಇದು ಭಾರತವಾಗಬೇಕೇ?

ನಮ್ಮ ಬಳ್ಳಾರಿಗೆ ಬಂದರೆ ಸಾರ್ವಜನಿಕ ಆಸ್ತಿಯಾಗಬೇಕಾದ ಸಂಪತ್ತನ್ನು ಕೆಲವೇ ವ್ಯಕ್ತಿಗಳು ಡಕಾಯಿತಿಸಿ ಅದಿರು ತೋಡಿ ಪಾತಾಳ ಕಾಣಿಸುವ ಹಳ್ಳಗಳು, ಗಾಳಿ ನೀರೂ ಕೆಂಪು ಕೆಂಪು- ಇದು ಭಾರತವಾಗಬೇಕೇ? ನೂರಿಪ್ಪತ್ತು ಕೋಟಿ ಜನಸಂಖ್ಯೆಯ ಭಾರತದಲ್ಲಿ ಕೇವಲ ನೂರು ಜನ ಶ್ರೀಮಂತರು ಒಟ್ಟು ರಾಷ್ಟ್ರೀಯ ಉತ್ಪನ್ನದ ಕಾಲುಭಾಗದ ಒಡೆಯರಾಗಿದ್ದಾರೆ! ಇದು ಎಲ್ಲಿಗೆ ಕೊಂಡೊಯ್ಯುತ್ತದೆ? ಇದು ಶ್ರೀಮಂತಿಕೆ ಐಷಾರಾಮಿಗೆ ಮಾತ್ರ ನಿಲ್ಲುವುದಿಲ್ಲ. ಮಿತಿಮೀರಿ ಕುಣಿದಾಡುವ ಆ ದುಡ್ಡು ಎಲ್ಲವನ್ನೂ ಕೊಂಡುಕೊಳ್ಳುತ್ತಾ ಎಲ್ಲವನ್ನೂ ಹರಾಜಿಗೆ ಹಾಕುತ್ತದೆ. ಯಾರನ್ನೂ ಬಿಡುವುದಿಲ್ಲ.

ಜನಪ್ರತಿನಿಧಿಗಳನ್ನು, ಶಾಸಕರನ್ನು, ಸಂಸದರನ್ನು, ಸಚಿವರನ್ನು, ಅಷ್ಟೇ ಸಾಲದು ಎಂಬಂತೆ ಜನತಂತ್ರ ವ್ಯವಸ್ಥೆಯನ್ನೂ ಬುಡಮೇಲು ಮಾಡಿ ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾರಂಗಕ್ಕೂ ಕೈಚಾಚುತ್ತದೆ. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದಕ್ಕಾದರೂ ಖಾಸಗಿ, ಕಾರ್ಪೊರೇಟ್ ಒಡೆತನದ ಸಂಪತ್ತಿಗೆ ಒಂದು ಹಂತ ನಿಗದಿಪಡಿಸಿ, ಅದಾದ ಮೇಲೆ ಮಿತಿ ಮೀರಿದ ಆ ಸಂಪತ್ತು ಸಾರ್ವಜನಿಕ ಆಸ್ತಿಯಾಗಬೇಕು, ಆ ಸಂಪತ್ತು ಉಂಟಾಗಲು ಅದು ಬಳಸಿಕೊಂಡ ಗಾಳಿ ನೀರು ಬೆಳಕಿಗೆ ಅಂದರೆ ನಾಡಿಗೆ ಸಲ್ಲುವಂತಹ ಏನೋ ಒಂದು ಉಳಿಗಾಲದ ವ್ಯವಸ್ಥೆಯನ್ನು ನಾವು ಕಂಡುಕೊಳ್ಳಬೇಕಾಗಿದೆ.

ಇಂದು ನಗರ ಉಸಿರಾಡಲು ಕಷ್ಟಪಡುತ್ತಿದೆ, ಹಳ್ಳಿ ನಡೆದಾಡಲು ತ್ರಾಣವಿಲ್ಲದೆ ಕಷ್ಟಪಡುತ್ತಿದೆ. ಅನ್ನ ನೀಡುವಾತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಎಲ್ಲರಿಗೂ ಈಗ ಉಳಿಯಲು ಇರುವ ದಾರಿ ಒಂದೇ- ಇಲ್ಲಿ ಮತ್ತೆ ಸಮಾನತೆಯ ಕನಸನ್ನು ಬಿತ್ತಬೇಕಾಗಿದೆ. ಬಡವ ಬಲ್ಲಿದರ ನಡುವಿನ ಅಂತರ ಕಮ್ಮಿ ಇರಬೇಕು ಎಂಬ ಆಸೆಗೆ ಮತ್ತೆ ನೀರೆರೆಯಬೇಕಾಗಿದೆ. ವಿಕೇಂದ್ರೀಕರಣ, ಎಲ್ಲರಿಗೂ ಉದ್ಯೋಗ, ಸ್ವಾವಲಂಬನೆ ಎಂಬ ಹುದುಗಿ ಹೋಗಿರುವ ಈ ಹಳೆ ಮಾತುಗಳನ್ನು ಮತ್ತೆ ಮತ್ತೆ ಹೇಳಬೇಕಾಗಿದೆ. ಈ ಹಳೇ ಮಾತುಗಳನ್ನು ಎಳೆ ಮಕ್ಕಳು ಹೇಳುವಂತಾದರೆ ಆ ಮಾತುಗಳಲ್ಲಿ ಜೀವಸಂಚಾರ ಉಂಟಾಗಬಹುದು. ಮೊದಲು ಆ ಮಕ್ಕಳ ಶಿಕ್ಷಣದಲ್ಲಿ ಭಿನ್ನಭೇದ ತೊಡೆದು ಸಮಾನ ಶಿಕ್ಷಣ ಪದ್ಧತಿಯ ಮೂಲಕ ಸಂವಿಧಾನದ ಆಶಯಗಳಿಗೆ ತಕ್ಕಂತೆ ಪಠ್ಯ ರಚಿಸಿ ನಾಳಿನ ಭಾರತ ಕಟ್ಟಬೇಕಾಗಿದೆ.

‍ಲೇಖಕರು G

September 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: