ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಡ ತುಂಬಿಬಿಟ್ಟರೆ ಕತೆಗಳೆಲ್ಲಿ ಕೂರಬೇಕು..

ಖಾಲಿ ಕೊಡ

ವಿನತೆ ಶರ್ಮ

 

ಅವು ಕಿಲಿಕಿಲಿಯೆಂದವು, ಗಹಗಹಿಸಿದವು ಒಂದನೊಂದು ನೋಡಿ ನಲಿದಾಡಿದವು

ಹೋದ ವಾರವಷ್ಟೇ ಮಾತಾಡಿದ್ದು, ಆದರೂ ಸಹ ಅಬ್ಬಾ ವರ್ಷವಾಯಿತೇನೋ ಎಂಬಂತೆ

ಅವಳು ಇವಳು ಉಸ್ಸೆಂದು ಕೆಳ ಕುಕ್ಕಿದರೂ

ಖಾಲಿ ಕೊಡಗಳು ನಿನ್ನದು ನನ್ನದು ಏನ್ಕತೆ, ಏನ್ಸಮಾಚಾರ ಅಂದವು

ವಿಚಾರ ವಿನಿಮಯದ ಕಾಲವದು ವಾರಪೂರ್ತಿ ಕಾದಿದ್ದ ಪ್ರಶಸ್ತ ಸಮಯ

ಅಷ್ಟೆಯೇ? ಖಾಲಿಕೊಡಗಳು ಅವಿತಿಟ್ಟಿವೆ

ಅವಳ ಇವಳ ಖಾಸಗಿ ಕತೆಗಳ

ವಾರಪೂರ್ತಿ ಹಗಲಿರುಳು ತುಂಬಿಸಿಟ್ಟ ಸಖೀಗೀತೆಗಳಿವೆ ಅವಲ್ಲಿ

ಅಕ್ಕ ಕೇಳೇ ತಂಗಿ ಹೇಳೇ, ಗೆಳತಿಗಿಷ್ಟು ಸಾಂತ್ವನವಿದೆ

ಚಪ್ಪಲಿಯ ಪಕ್ಕ ಕೂತಿದ್ದ ಖಾಲಿ ಕೊಡದಲಿ ಬಿದ್ದ ಒಡತಿಯ

ಕಣ್ಣೀರ ಕತೆ ಕೊಡ ತುಂಬಿಸದಿದ್ದರೂ, ನೀರಾಗಲಿಲ್ಲವಾದರೂ

ಅವಳಿಗೆ ಬೇಡವಾದರೂ ಖಾಸಗಿ ಹಕ್ಕು ಆ ಕೊಡವಾಗಿದೆ

ಬರಿದಾದ ನೀರಿಲ್ಲದ ಮೂಲೆಯಲಿ ಕೂತ ಖಾಲಿ

ಕೊಡಗಳೆಂದರೆ ಅವಳ ಉಸಿರ ಪ್ರತಿಧ್ವನಿಸುವ ಕೋಟೆಗೋಡೆಗಳು.

ಬಿಸಿಲಲಿ ಮೈ ಮಿನುಗಿಸುತ್ತಾ ಒಂದಿಷ್ಟು ಸೊಟ್ಟಮೂತಿ ತೊಟ್ಟು

ಒಣಗಿ ಒಂಟಿಕಾಲಲಿ ನಿಂತಿದ್ದ ನಲ್ಲಿ ಮುಂದೆ ಖಾಲಿಕೊಡಗಳ ಮೇಳ

ಅದ್ಯಾರದು ತುಂಬಿದ ಕೊಡಕೆ ಭೇಷ್ ಕೊಟ್ಟು

ಖಾಲಿತನವ ಛಿ ಎಂದವರು

ಕಂಠಪೂರ್ತಿ ಕೊಡ ತುಂಬಿಬಿಟ್ಟರೆ

ತುಳುಕುವುದಿಲ್ಲ ಸರಿ ಒಡತಿಗೆ ಬೊಗಸೆ ನೀರು ಹೆಚ್ಚು ಸರಿ

ಕೊಡ ತುಂಬಿಬಿಟ್ಟರೆ ಕತೆಗಳೆಲ್ಲಿ ಕೂರಬೇಕು

ನಿಲ್ಲಬೇಕು, ಹೊರಳಬೇಕು, ಅಳಬೇಕು, ನಗಬೇಕು, ಬೈಯಬೇಕು

ಹರಟಬೇಕು, ಮಾತನಾಡಬೇಕು?

ಖಾಲಿತನದಲಿರುವ ಅಕ್ಕಕೇಳೇ ತಂಗಿಹೇಳೇ ಕಕ್ಕುಲತೆ

ಕೊಡತುಂಬಿದ ಮೇಲೆ ಉಳಿದೀತೇ?

ದಾಹವಿಂಗಿಸಲು ನೀರು, ತುಂಬಿದ ಕೊಡವೇ ಆತ್ಮೋದ್ಧಾರದ ಹದ

ನೀರಕೊಡ ಹೊತ್ತು ಬೆಂಗಾಡು ತುಳಿದು ಮನೆಹಾದಿ ತುಳಿವ ನೀರೆ

ಹಿಂದಿರುಗಿ ನೋಡನೋಡುತ್ತಾ ನಡೆವಾಗ ಕತೆಗಳು ಬಿಕ್ಕುತ್ತವೆ

ಮನೆಮಂದಿಯ ಉಳಿಸಲು ತೊಳೆಸಲು ಕೊಡದ ತುಂಬಾ ನೀರು

ಖಾಲಿಯಾದಂತೆಲ್ಲಾ ಕೊಡ ತುಂಬುವುವು ಅವಳ ಪ್ರಶ್ನೆಗಳು

ಇಷ್ಟಿಷ್ಟೇ ಬಯಲಾಗುವ ಕೊಡದ ಆಳಅಗಲಗಳಲಿ ಹುದುಗಿಹೋಗುವ

ಮಾಚಿಮರೆಯಾಗುವ ಅವಳೆಂಬ ಅವಳು ಮಾತಾಡುವ ಕೊಡವಾದವಳು.

‍ಲೇಖಕರು avadhi

26 August, 2019

5 Comments

  1. Sarayu

    ಎಷ್ಟು ಚೆನ್ನಾಗಿ ಬರೆದಿದ್ದೀರಿ ವಿನತೆಯವರೆ, ಕವನ ನನಗೆ ಬಹಳ ಇಷ್ಟವಾಯ್ತು.

    • Vinathe

      Dhanyavaadagalu!

  2. Vinathe

    Thank you, Avadhi!

  3. Shrivatsa Desai

    ಕವನ ಬಹಳ ಹಿಡಿಸಿತು ವಿನತೆಯವರೆ!
    ಚಂದನ್ನ ಸಾಲುಗಳು.
    “ಖಾಲಿ ಕೊಡಗಳೆಂದರೆ ಅವಳ ಉಸಿರ ಪ್ರತಿಧ್ವನಿಸುವ ಕೋಟೆಗೋಡೆಗಳು.”!
    .ಶ್ರೀವತ್ಸ ದೇಸಾಯಿ

    • Vinathe

      Thank you, Desai avare!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading