ನಂದಿನಿ ಹೆದ್ದುರ್ಗ
**
ನಾನು ನಿನ್ನ
ಕೈಬಟ್ಟಲಿಗೆ ಸುರಿದಿದ್ದು
ಮಾಗಿಕಾಲವನ್ನೇ
ಎತ್ತು ಸೋಲುತ್ತವೆಂದು
ನೆಲ ದೊರಗೆಂದು
ಬಿತ್ತ ಈ ಹೊತ್ತಿನಲ್ಲಿ
ಹುಟ್ಟುವುದೇ ಇಲ್ಲವೆಂದು
ಒಳಕೋಣೆ ಹೊಕ್ಕು
ಅಕ್ಷರಗಳ ಚಿತ್ರ ಬಿಡಿಸುತ್ತ
ಸಂಗತಿಗಳಿಗೆ ತುಸು ರಂಗು ಬಳಿಯುತ್ತಾ
ಮಡದಿ
ಕೊಟ್ಟ ಸೆರಾಮಿಕ್ ಚಹಬಟ್ಟಲಿನಲ್ಲಿ
ಬಿಸಿಬಿಸಿ ಅಸ್ಸಾಮಿ ಟೀ
ಹೀರುತ್ತಿದ್ದೆ ನೀನು
ಉಟ್ಟ ಒಂಬತ್ತು ಗಜದ
ಹತ್ತಿಯ ಸೀರೆ
ಕಳಚಿ
ನಡುಪಟ್ಟಿ ಕಾಲುಂಗರ
ಬಿಚ್ಚಿ
ಮೂರು ಮೊಳದ ಕಚ್ಚೆ
ಮೇಲೊಂದು ವಲ್ಲಿ ಧರಿಸಿ
ನಿನಗೆಂದೇ ಮೀಸಲಿಟ್ಟ
ಹೊಲಕ್ಕೆ ನಡೆದು
ಹೊಂಗೆಯಡಿಯಲ್ಲಿ
ನೆತ್ತಿ ಮೇಲಿದ್ದ ಬುತ್ತಿ
ಇಳುಕಿ
ತುಟಿಯ ತುದಿಯಲ್ಲಿ
ಮೀಸಲು ಜೇನು ಹೊತ್ತು
ಹೊಸಿಲಾಚೆ ಬಂದೆ ನಾನು
ಸಿಕ್ಕಿದ ಹಸಿರು ಮೇದು
ಚಿಲುಮೆಯ ತಿಳಿನೀರು
ಕುಡಿದು
ಒಡೆಯನ ಕಾದ ಜೋಡೆತ್ತು
ಊರಾಡಲು ಹೊರಟವು
ಉರಿವ ಸೂರ್ಯನ ಧಗೆಗೆ
ಮಣ್ಣು ಮತ್ತೆಮತ್ತೆ ಕಾದು
ಒಡಲ ಜಲವೆಲ್ಲ ಸೀದು
ಈಗೊಂದು ಉಳುಮೆ ಸಿಕ್ಕರೆ
ಅನ್ನುವ ಸಿಹಿಕನಸ ನೇದು…
ಸಂಜೆ ಮುಂದಾಗುತ್ತಲೂ
ಮೈ ಕೊರೆವ ಚಳಿ;
ಕಾಡುಮಲ್ಲಿಗೆ ಹೂವ
ತುಂಬಿಕೊಂಡಿದೆ ವಲ್ಲಿ!!
ಅಕ್ಷರಗಳಿಗೊಂದು
ಆಕಾರ ಕೊಟ್ಟು ದಣಿದು
ಧರ್ಮಪತ್ನಿಯ ತಬ್ಬಿ
ಅಡ್ಡಾಗಿದ್ದೆ ಒಳಕೋಣೆಯಲ್ಲಿ ನೀನು
ಬೊಗಸೆಯಲ್ಲಿದ್ದ ಮಾಗಿ ಮುಗಿದು
ಮೋಡ ಚಿಗುರಿದ ಹೊತ್ತು
ಹೊಂಗೆ ಮರದಡಿಯಲ್ಲಿದ್ದ
ಹೊಸಿಲು ದಾಟಿದ್ದ
ಕಚ್ಚೆ ಸೀರೆಯ ಹೆಣ್ಣು ಮೊಳೆತು
ಹಬ್ಬಿ
ಗಾಢ ನೀಲಿ ಹೂವಿನ
ಕಳೆ ಬಳ್ಳಿಯಾಗಿದ್ದಾಳೆ
ಬದುವಿನ ಮೇಲೊಂದು
ಅಗಲ ಎಲೆಯ ಗಡಸು ತೇಗದ ಮರ
ಹೊಲದ ಮೈಯಲ್ಲರಳಿದ
ಕಳೆ ಹೂವಿಗೆ ದುಂಬಿ ಮರ್ಮರ
ನೀಲಿ ಹೂಬಳ್ಳಿ ಹೊಂಗೆ ತುದಿ
ತಲುಪಿ
ಕತ್ತು ಎಟುಕಿಸಿ ನಿನ್ನ ದಾರಿ ನೋಡಿ
ಹಬ್ಬಿದ ಹೊಸಚಿಗುರ
ಬದಿಯ ತೇಗಕ್ಕೂ ಹರವಿದ್ದಾಳೆ
ಬಿಡುವಾದಾಗ ಬಂದು
ಹುಡುಕಬೇಡ






ಚೆನ್ನಾಗಿ ಬರೆದಿದ್ದೀರಿ,
ಅಭಿನಂದನೆಗಳು ಮೇಡಂ