ಒಳ್ಳೆ ಪ್ರಿಯತಮನಾಗಲಾರದವರು..
ಹೇಮಲತಾ
ಫುಲ್ ಮೀಲ್ಸ್- ಅದೇನಂತ ಕೊಡ್ತಾರೋ ಎತ್ತಾಗ್ಲು ಸಾಕಾಗಲ್ಲ, ಇನ್ನೊಂಚೂರು ಹಾಕಿ ಅಂದರೆ ಕಳ್ಳನ ನೋಡಂಗೆ ನೋಡಿ, ಕೇಳಿಸಿದ್ರು ಕೇಳಿಸದ ಹಂಗೆ ಮುಂದಕ್ಕೆ ಕಳಿಸುದ್ರು , ಇವರ ಅಪ್ಪನ ಮನೆಯಿಂದ ಏನಾದರು ತಂದು ಹಾಕ್ತಾರ? ಸುತ್ತಲು ಕೂತವರ ಒಂದೆರಡು ತಲೆ ಈ ಕಡೆಗೆ ತಿರುಗಿದ ಹಾಗೆ ಭಾಸವಾಯಿತು. ಅಷ್ಟು ಹೇಳಿದವನೆ ತಟ್ಟೆಯನ್ನ ಎದುರಿಗೆ ಇಟ್ಟುಕೊಂಡು, ಸುತ್ತಲಿನ ಪ್ರಪಂಚ ಕಣ್ಮರೆಯಾದಂತೆ ಬಕಬಕ ತಿನ್ನಲು ಶುರುಮಾಡಿದ… ಅದರಲ್ಲೂ ಅವನ ಹಳೆಯ ಗೆಳತಿ ಮುಂದೆ ಕೂತಿರುವಾಗ!
ನಾನಾಗೆ ಮಾತನ್ನು ಮುಂದುವರಿಸದಿದ್ರೆ ಬಹುಷ್ಯ ಅಷ್ಟೆ ಅವನ ಈ ಹೊತ್ತಿನ ಊಟದ ಸಂವಾದ ಎನಿಸತೊಡಗಿತು. ತಂದ ಪುಟ್ಟ ಡಬ್ಬದ ಅರ್ಧವನ್ನ ನಲವತ್ತನಾಲ್ಕು ಸಲ ಸ್ಪೂನ್ ಆಡಿಸಿ ಚೂರೇಚೂರು ತೆಗೆದುಕೊಂಡು ತುಟಿ ಬಿರಿಯದಂಗೆ ನಾಜೂಕಾಗಿ ತಿನ್ನುವ ಹುಡುಗಿಯರು ಒಂದು ಕಡೆಯಾದರೆ, ಒಂದರ ನಂತರ ಎರಡನೆ ಡಬ್ಬ ಓಪನ್ ಮಾಡಿ ನಿಸ್ಸಂಕೋಚ ಮುಗಿಸೋ ಹುಡುಗರು ಇನ್ನೊಂದು ಕಡೆ… ಹುಡುಗರು ವಯಸಲ್ಲಿ ಹಂಗೇ ಕಣೇ,ಹೊಟ್ಟೆ ದೊಡ್ಡದು ಅಮ್ಮ ಅಂತಿರ್ತಳೆ..ಆದರೆ ಇದು ಅದೆಲ್ಲದ್ದಕ್ಕಿಂತ ಭಿನ್ನ…
ಕ್ಯಾಂಟೀನ್ ಊಟ ಅದು ಹೇಗೆ ತಾನೇ ರುಚಿ ಹತ್ತಲು ಸಾಧ್ಯವೋ ಏನೋ ಮಧ್ಯೆಮಧ್ಯೆ , ಇರುವ ಐದು ಬೆರಳನ್ನು ಒಂದರ ನಂತರ ಒಂದು ಚೀಪಿ ತೆಗೆಯುತ್ತಿರುತ್ತಾನೆ … ರುಚಿ ನೋಡಲು ಚೂರು ತೆಗೆದುಕೊಳ್ಳೋಣ ಅನಿಸಿದ್ದನ್ನು ಮುಟ್ಟಲೇಬಾರದು ಅನಿಸುವ ಹಾಗೆ ….
ನೋಡಿ ನೋಡಿ ಸಾಕಾಗಿ ಹೇಳಿಯೇಬಿಟ್ಟೆ..ನಾವು ಕೂತಿರೋದು ದೊಡ್ಡ ಎಂ ಎನ್ ಸಿ ಯೊಂದರ ಸಹೋದ್ಯೋಗಿಗಳ ಮಧ್ಯೆ ಸ್ವಲ್ಪ ಡಿಸೆಂಟ್ಟಾಗಿ ತಿನ್ನಬಾರದ?
ಮುಜುಗರವಿರಲಿ ಚೂರು ವಿಚಲಿತನಾಗದೆ, ನೋಡು ರೇಖಾ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡ ಊಟ ತನ್ನಿಚ್ಚೆ, ನೋಟ ಪರರಿಚ್ಛೆ – ಅಂದು ಏನೋ ಗೆದ್ದವನಂತೆ ಗಹಗಹ ನಕ್ಕ… ಮುಂದುವರಿಸಿ ನಾವು ನಮ್ಗೋಸ್ಕರ ಬದುಕ ಬೇಕು, ಬೇರೆಯವರು ನೋಡ್ತಾರೆ ಅಂತಲ್ಲಾ, ಅಲ್ವಾ…? ಅಂತ ಪ್ರಶ್ನೆ ಕೇಳಿ ಇನ್ನಷ್ಟು ಗಸಗಸ ನಕ್ಕ.. ಈ ತರದ ಬುದ್ದಿವಂತರಿಗೆ ಹೇಳಿ ಪ್ರಯೋಜನ ಇಲ್ಲಾ ಅಂದುಕೊಂಡು ಸುಮ್ಮನಾದೆ.
ಹೆಂಡತಿ ಚೆನ್ನಾಗಿ ಅಡಿಗೆ ಮಾಡ್ತಾಳ ಕೇಳಿದೆ… ಹೆಂಗೆ ಮಾಡಿಹಾಕುದ್ರು ನಷ್ಟಮಾಡಿಕೊಳ್ಳದೆ ತಿಂತೀನಿ , ಇದು ಚಂದ ಇದು ಚೆನ್ನಾಗಿಲ್ಲ ಅಂತ ರಗಳೆ ಮಾಡಲ್ಲ, ಎಷ್ಟೊಳ್ಳೆ ಗಂಡ ಅಲ್ವಾ…? ನೋಡು ಎಂತ ಒಳ್ಳೆ ಆಫರ್, ನೀನು ಮಿಸ್ ಮಾಡ್ಕೊಂಡೆ … ಅಲ್ವಾ ..? ಅಂತ ಮತ್ತೆ ಗಸಗಸ ನಕ್ಕ
ಹೊಟ್ಟೆ ಪುಟಿದು ಮುಂದೆ ಬಂದಿದೆ, ಕೊದಲು ಉದುರಿ ಮಂಡೆ ಖಾಲಿಯಾಗಿದೆ ಅನ್ನೋದು ಬಿಟ್ರೆ ನಡವಳಿಕೆ , ಮಾತು ಯೋಚನೆ ಏನು ಬದಲಾಗಿಲ್ಲ …
ಇಷ್ಟು ಚಿಕ್ಕ ವಯಸ್ಗೆ ಇಷ್ಟೊಂದು ಬಾಲ್ಡ್ ಆಗಿದ್ಯ, ಏನಾದ್ರು ಟ್ರೀಟ್ಮೆಂಟ್ ತಗೋಬಾರದ… ಅಷ್ಟೊಂದು ದುಡಿತೀಯ ಹೇರ್ transplant ಹೇರ್ ಫಿಕ್ಸಿಂಗ್ ತರಹ ಏನೇನೋ ಬಂದಿದೆ ಹೋಗಬಾರದ ? ಅಯ್ಯೋ, ಹೋದರೆ ಸುಮ್ಮನೆ ಎಷ್ಟೊಂದು ದುಡ್ಡು ಕೀಳ್ತಾರೆ, ಹೆಂಗು ಮದುವೆ ಆಗಿದ್ಯಲ್ಲ ಇನ್ಯಾರು ನೋಡ್ಬೇಕು,ಅಲ್ವಾ…??? ಮತ್ತದೇ ನಗು…
ಅವನು ಕೊಡುವ ಉತ್ತರ ಅತ್ತಾಗಿರಲಿ, ಮಾತುಮಾತಿಗೂ ಸಕ್ಕತ್ತಾಗಿ ಉತ್ತರ ಕೊಟ್ಟೆ ಅನ್ನೋತರಹ ನಕ್ಕೂ, ಪ್ರತ್ಯುತ್ತರವಾಗಿ ಅಲ್ವಾ… ??? ಅಂತ ಮರು ಪ್ರಶ್ನೆನೆ ಕೇಳ್ತಾನಲ್ಲ ಅದು ಕೋಪ ತರಿಸುತ್ತಿತ್ತು ..
ಹಳೆ ನೆನಪುಗಳು ಮನದಲ್ಲಿ ಹೂಯ್ದಾಡತೊಡಗಿತು
ಇವನ ನಡವಳಿಕೆ , ಇವನ ಮ್ಯಾನರಿಸಂ ಬೇರೆಲ್ಲರಿಗೂ ನಗುವ ವಿಷಯ ಆದ್ರೆ ನಂಗೆ ಮಾತ್ರ ಚೂರೇ ಮರುಕ … ಮಿಕ್ಕವರಿಗೆ ಇರ್ರಿಟೇಟ್ ಆಗೋಕೆ ಶುರು ಆದ್ರೆ ನನಗೆ ಪಾಪ ಅನಿಸೋದು …ಚಂದ ಇದ್ದನೋ ಇಲ್ವೋ ಆ ವಯಸ್ಸಿಗೆ ಚಂದ ಕಂಡಿದ್ದ … ಅದಕ್ಕಾಗೆ ಲೈಟ್ ಆಗಿ ಒಂದು ಸಣ್ಣ ಕ್ರಶ್, ಒಂದೆರಡು ನಗು, ಒಂದೆರಡು ತಿರುಗು ನೋಟ .. ಅದಕ್ಕೋ ಏನೋ ಬೆನ್ನು ಬಿಡದ ಬೇತಾಳನ ಹಾಗೆ ಹಿಂದೆ ಬಿದ್ದ ..
ಡಿಗ್ರಿ ಮುಗಿಸಿದ್ಯ ಇಷ್ಟು ಆರಾಮಾಗಿ ತಿನ್ನುತ್ತಾ ಮಲಗ್ತಾ ತಿರುಗಾಡ್ಕೊಂಡಿದ್ರೆ ಚೆನ್ನಾಗಿರಲ್ಲ .. ಕೆಲಸ ಸಿಗ್ತಿಲ್ಲ ಅನ್ನೋದು ಒಂದು ನೆಪ …ಇಂಟರ್ವ್ಯೂ ಪಾಸ್ ಆಗಕ್ಕೆ ಬೇಕಾಗಿರೋ ಅರ್ಹತೆಗಳನ್ನ ಸಂಪಾದಿಸು .. ನೀನು ಇಂಗ್ಲಿಷ್ ಮಾತಾಡುದ್ರೆ ಎಲ್ಲರು ನಗ್ತಾರೆ , ಒಂದೊಳ್ಳೆ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಗೆ ಸೇರ್ಕೋ, ಯಾವ್ದಾದ್ರು ಕೋರ್ಸ್ ಮಾಡು, ಸರ್ಟಿಫಿಕೇಟ್ ತಗೋ ಅಂತ ಹೇಳ್ತಾಯಿದ್ರೆ ಡಿಗ್ರಿ ಓದಿ ಇಂಗ್ಲಿಷ್ ಕ್ಲಾಸ್ ಗೆ ಸೇರಬೇಕ, ನನಗಿಂತ ಕೆಟ್ಟದಾಗಿ ಮಾತಾಡೋರು, ಕಡಿಮೆ ಮಾರ್ಕ್ಸ್ ತಗೊಂಡವರು ಇಲ್ವಾ, ಅವರಿಗೆಲ್ಲ ಕೆಲಸ ಸಿಕ್ಕಿದೆ.. ಎಲ್ಲ ಪಾಲಿಟಿಕ್ಸ್ ! ಅದೃಷ್ಟ ಶುರುವಾದಾಗ ಬಾಗಿಲು ತೆರೆಯುತ್ತೆ ಬಿಡು ಏನೋ ಒಂದು ಕೆಲಸ ಅಂತು ಸಿಗುತ್ತೆ , ಸಿಕ್ಕಾಗ ಹೋದರಾಯಿತು ಏನೇನೋ ವಿತಂಡ ವಾದ ಮಾಡ್ತಿದ್ದ .
ನೀನು ಇಂಜಿನಿಯರಿಂಗ್ ಮಾಡಿರೋದು ಸಿಕ್ಕಿದ್ದನ್ನ ಮಾಡೋಕೆ ಅಲ್ಲ , ಅರ್ಥ ಮಾಡ್ಕೋ ಎಷ್ಟೆಲ್ಲಾ ಹೇಳಿ ಒಪ್ಪಿಸಿದ್ದೆ .. ಕಡೆಗೂ ಕಷ್ಟ ಪಟ್ಟು ಕ್ಲಾಸ್ ಗೆ ಸೇರಿದ.. ಆದರೆ ರೆಗ್ಯುಲರ್ ಆಗಿ ಹೋಗ್ತಾ ಇರ್ಲಿಲ್ಲ… ವಾರದಲ್ಲಿ ಎರಡು ದಿನ ಲೇಟ್ ಆಯಿತು ಅಂತ , ಶುಕ್ರವಾರ ಬಂತು ಅಂದ್ರೆ ಊರಿಗೆ ಹೋಗಬೇಕು ಅಂತ, ಶನಿವಾರ ಭಾನುವಾರ ಊರಲ್ಲೇ, ಸೋಮವಾರ ಬಂತು ಅಂದ್ರೆ ಬೆಳಗ್ಗೆ ಬೇಗ ಎದ್ದು ಬಸ್ ಹತ್ತಿ ಬಂದಿದ್ದಕ್ಕೆ ನಿದ್ದೆ ಬಂತು ಅಂತ ಹೋಗುತ್ತಾ ಇರಲಿಲ್ಲ
ಕೇಳುದ್ರೆ ಅಲ್ಲಿರೋರಲ್ಲೆಲ್ಲ ನಾನೇ ಎಷ್ಟೋ ವಾಸಿ, ಇನ್ಯಾಕೆ ಹೋಗ್ಬೇಕು … ಏನೇನೋ ತಲೆ ಹರಟೆ
ಗಂಡಸಿಗೆ ಒಂದು ಛಲ ಇರಬೇಕು, ನಿಲ್ಲುವ ವಯಸಲ್ಲಿ ಸರಿಯಾಗಿ ನಿಂತುಕೊಳ್ಳೋ ಛಲ .. ಅದಿಲ್ಲದ ಗಂಡಸನ್ನು ಮನಸು ಒಪ್ಪೋದಿಲ್ಲ ..
ಸಂವಾದಿಸಲು ಎಷ್ಟೆಲ್ಲಾ ವಿಷಯಗಳು ಭೂಮಿಮೇಲೆ ಇರುವಾಗ ಇವನ ಆಸಕ್ತಿ ಎಲ್ಲ ಅಡುಗೆ ಮನೆ ಬಿಟ್ಟು ದಾಟ್ಟಲ್ಲ .. ರಾತ್ರಿ ಅನ್ನಕ್ಕೆ ಹುಳಿ ಹೂಯ್ದು , ಒಗ್ಗರಣೆ ಕೊಟ್ಟು ತಿನ್ತಾಯಿದ್ರೆ ಹೆಂಗಿರುತ್ತೆ ಗೊತ್ತಾ ಇಂದ ಈ ಚಳಿಗೆ ಚೆನ್ನಾಗಿ ತಿಂದುಂಡು ರಗ್ ಓದ್ಗೊಂದು ಮಲಗಿ ಬಿಟ್ರೆ ಆಹಾ ಅನ್ನೋವರೆಗೂ ಅದೇ ..
ಬಹುಷ್ಯ ಅಪ್ಪ ಅಡಿಗೆಮನೆಗೆ ಕಡೆಗೆ ನೀರು ಕುಡಿಯಲು ಸಹ ತಲೆ ಹಾಕದ್ದವರಾಗಿದ್ರಿನ್ದಾನೋ ಏನೋ ಅಡಿಗೆ ಮನೆ ಬಗ್ಗೆ ವಿಪರೀತ ಮಾತಾಡೋ ಗಂಡಸರನ್ನ ಕಂಡರೆ ಒಂತರ … ಮಾತು ಮಾತಿಗೆ ನಗುವ ಹುಡುಗಿಯರನ್ನ ಕಂಡರೆ ಇರುಸುಮುರುಸಾಗುವಾಗ ಮಾತು ಮಾತಿಗೆ ಗಂಡಸು ನಗುತ್ತಿದ್ದರೆ ಯಪ್ಪಾ …!
ಆಗ ನಾ ಕಂಡಿದ್ದ ಶಿಸ್ತಿನ ಗಂಡಸು ಅಂದರೆ ಅಪ್ಪ .. ಜೇಬಲ್ಲಿ ದುಡ್ಡು ಎಷ್ಟಿತ್ತೋ ಏನೋ , ಬೆಂಗಳೂರಿನಲ್ಲಿ ಕಾರ್ಖಾನೆಯ ಉದ್ಯೋಗಿ ಎನ್ನುವ ಭಾವ ಅವರನ್ನು ಹೇಗೆ ಆವರಿಸಿತ್ತು ಎಂದರೆ inshirt ಇರದೇ, ಇಸ್ತ್ರಿ ಇರದೇ , ಶೇವಿಂಗ್ ಇರದೇ ಈಚೆ ಹೊರಟ್ಟಿದ್ದನ್ನೇ ನಾ ಕಾಣೆ ….ಹೆಣ್ಣು ಮಕ್ಕಳು ಮೊದಲು impress ಆಗೋದು ಅಪ್ಪನಿಂದನೆ ಅಂತೆ
ತೋಳು ಮಡಿಚಿದ ಓವರ್ ಸೈಜ್ ಶರ್ಟು , ಐರನ್ ಮಾಡದ ಪ್ಯಾಂಟು , ಬಾಚದ ಕ್ರಾಪು, ಹುಡುಗಿ ಎದುರಿದ್ದರು ಕೆಲ್ಸಕ್ಕೆ ಬಾರದವರ ಫೋನ್ ಬಂದಾಗ ತೆಗೆದುಕೊಂಡು ಗಂಟೆಗಟ್ಟಲೆ ಮಾತಾಡುತ್ತ , ಏನೋ ಗಹನವಾದ ಕೆಲಸದಲ್ಲಿ ತೊಡಗಿಕೊಂಡಂತೆ ಗೇಮ್ ಆಡುತ್ತ, ಬ್ರೌಸ್ ಮಾಡುತ್ತಾ ಕೂರವ್ರು , ಕೈ ತೊಳೆಯುವ ಬೇಸಿನ್ ನಲ್ಲಿ ಗಂಟಲು ತೇಯ್ದು ತುಪಕ್ ಮಾಡುತ್ತ ನಿಲ್ಲುವ ಹುಡುಗರನ್ನ ಕಂಡರೆ ಓಡಿ ಹೋಗೋಷ್ಟು ಪಿರಿಪಿರಿ ..
ಈತ ಅವರೆಲ್ಲರ ಅಧಿನಾಯಕ ಇದ್ದಹಾಗೆ ಇದ್ದ ..
ಅವಾಗಲೇ ನಿನ್ನ ಕಂಡರೆ ಪ್ರೀತಿ ಅಂತೆಲ್ಲ ಅಂದ .. ನಾ ಒಪ್ಪುವುದು ಸಾಧ್ಯವೇ ಇರಲಿಲ್ಲ ಚೂರು ಕನಿಕರ ಕಾಳಜಿ ತೋರಿಸುದ್ರೆ ವಿಪರೀತ ಸಲಿಗೆ ತಗೋತಾರೆ ಕೋಪ ಬಂತು .. ದುಂಬಾಲು ಬಿದ್ದು, ಹೇಳಿದ್ದನ್ನೇ ಹೇಳಿ , ನಾನೆಷ್ಟು ನುಣುಚಿಕೊಳ್ಳಲು ಯತ್ನಿಸಿದರು ಮರ್ಯಾದೆ ಬಿಟ್ಟು ತಲೆ ತಿನ್ನತೊಡಗಿದ .. ಕಟುವಾಗಬಾರದು, ಅವಮಾನ ಮಾಡಬಾರದು ಎಂದು ಎಷ್ಟೇ ಸುಮ್ಮನಾದರು ವಿಪರೀತಕ್ಕಿಟ್ಟುಕೊಂಡು ಗೋಳು ಶುರುಮಾಡಿದ . ಕಡೆಗೊಂದು ದಿನ ಕೆಲಸದ ಬಗ್ಗೆ ಜೀವನದ ಬಗ್ಗೆ serious ಅಲ್ಲದವನನ್ನ ನಾ ಒಲ್ಲೆ ಎಂದು ದೂರಾಗಿದ್ದೆ .

fakeಕೋ- ಗೀಕೋ ಅಂತು ಒಂದು ದೊಡ್ಡ ಕಂಪನಿಲಿ ಕೆಲಸ ಅಂತ ತೆಗೆದುಕೊಂಡ ಅನ್ನೋದು ಆಮೇಲೆ ಯಾವಾಗಲೋ ಗೊತ್ತಾಯಿತು ..
ಉಪ್ಪುಪ್ಪು ಅಲೆ ತೋಯ್ದು ಹೋದ ಹಾಗೆ …
ಮತ್ತೆ ಹೇಗಿದೆ ಜೀವನ ಕೇಳಿದೆ
ಕೆಲಸ ಕೆಲಸ ಅಂತ ತಗೊಂಡು ಇಲ್ಲಿ ಬಂದು ನೋಡಿದ ಮೇಲೆ ಗೊತ್ತಾಯ್ತು ಇಲ್ಲಿರೋರು ಏನಂಥ ದೊಡ್ಡ ಕೆಲಸ ಮಾಡ್ತಿಲ್ಲ ಅಂತ …ಅಲ್ವಾ…??? ಮತ್ತದೇ ನಗು…
ಯಾವುದನ್ನೂ ನೇರ ನೋಡಲಾರ , ಎಲ್ಲದರಲ್ಲೂ ತಾತ್ಸಾರ ..ನಮ್ಮತನವನ್ನ ಬಿಡಬೇಕು ಅಂತ ಅಲ್ಲ , ಬೇರೆ ಆಯಾಮದಲ್ಲಿ ಬದುಕಬೇಕಾದಾಗ, ವ್ಯವಸ್ಥೆಯ ಒಳಗೊಂದಾಗಿ ಅಲ್ಲಿ ಅನ್ಯರೆನಿಸದೆ ನಡೆದುಕೊಳ್ಳಬೇಕಾಗುತ್ತದೆ. ಆದರಿವನಿಗೆ ಸೂಕ್ಹ್ಮಗಳನ್ನು ತಿಳಿಸಿದರು ಪ್ರಯೋಜನವಿಲ್ಲ
ಸರಿ ಕೈ ತುಂಬಾ ಸಂಬಳ ಬರುತ್ತಲ ಏನೇನ್ ಮಾಡಿದ್ದೀಯ ಕೇಳಿದೆ …ದುಡ್ಡು ಉಳಿಸೋ ನನ್ನ ಎಲ್ಲ ಯೋಜನೆಗಳು ರಾಜಿಯಾಗದೆ ಕೈ ಕೊಡುವುದಕ್ಕೂ ಅಥವಾ ಬಚಿಟ್ಟ ವಿಷಯದ ಮೇಲೆ ಹೆಚ್ಚು ಕುತೂಹಲ ಹೊರಳುತ್ತೆ ಅಂತಾರಲ್ಲ ಅದಕ್ಕೋ ಮುಂಚಿನಿಂದಲೂ ಇವನ ಇದೊಂದು ವಿಷಯದ ಮೇಲೆ ನನಗೆ ಮಸ್ತು ಆಸಕ್ತಿ …
ಏನು ಮಾಡಿಲ್ಲ ಇನ್ನು ಮುಂದಕ್ಕೆ ಮಾಡಬೇಕು ಅಂತ ಹಾರಿಕೊಳ್ಳೋಕೆ ನೋಡಿದ..
ಪಕ್ಕ ಪೈಸೇ ಟು ಪೈಸೆ ಮನಷ್ಯ ಸುಳ್ಳು ಹೇಳುತ್ತಿದ್ದಾನೆ !!.
ಇನ್ನು ನೆನಪಿದೆ … ದುಡ್ಡು ಪಾವತಿಸಬೇಕಾದಾಗ ಮುಖದಲ್ಲೊಂದು ಸಂಕಟ , ಮತ್ತೆ ಮತ್ತೆ ತಿರುತಿರುಗಿ ಎಣಿಸಿ , ಕೈ ಚಾಚಿ ನೀಡುವಾಗ ಸುಲಭವಾಗಿ ಮುಂದುವರಿಯದ ಹಸ್ತ… ಹಿಂದೆ ನಿಂತಿರುತ್ತಿದ್ದ ನನಗೆ ಕಸಿವಿಸಿಯಾಗುತ್ತಿತ್ತು…
ಅಂಗಡಿಯವನು fridgeನಲ್ಲಿ ಇಟ್ಟಿದ್ದಕ್ಕೆ ಒಂದು ರೂಪಾಯಿ ಹೆಚ್ಚು ತೆಗೆದುಕೊಂಡರೆ, ಕಂಡಕ್ಟರ್ ಒಂದು ರೂಪಾಯಿ ತಾನೇ ಅನ್ನೋ ತಾತ್ಸಾರದಲ್ಲಿ ಸುಮ್ಮನಾದರೆ ದೊಡ್ಡ ಹೀರೋ ತರಹ ಜಗಳಕ್ಕೆ, ವಾಗ್ವಾದಕ್ಕೆ ನಿಂತುಬಿಡುತ್ತಿದ್ದ … ಹಿಂದೆ ಇದ್ದ ಹುಡುಗಿಗೆ ಏನು ಅನಿಸಬಹುದು ಅನ್ನೋದನ್ನು ಮರೆತು
5 ವರ್ಷದಿಂದ ಏನು ಮಾಡಿಲ್ಲ ಅಂದ್ರೆ ನಂಬೋಕೆ ಸಾಧ್ಯ ಇಲ್ಲ…ಎಷ್ಟು ಪೆದ್ದು ಪೆದ್ದಂಗೆ ತೋರಿಸಿಕೊಂಡರು , ವ್ಯವಹಾರಿಕ ಚಾತುರ್ಯ ಜಿಪುಣತನವಂತೂ ಎಲ್ಲರನ್ನು ಮೀರಿಸೋ ಹಾಗೆ ಇತ್ತು . ಎಷ್ಟೇ ಬುದ್ದಿವಂತಿಕೆಯಿಂದ ಬೇರೆ ಬೇರೆ ತರಹ ಪ್ರಶ್ನೆ ಬದಲಾಯಿಸಿ ಕೇಳುದ್ರೂ ,ದುಡ್ಡು ಕಾಸಿನ ವಿಷಯಗಳಿಗೆ ಯಾವತ್ತೂ ನೇರ ಉತ್ತರ ಬರೋದಿಲ್ಲ ನಿಜವಾದ ಸಂಖ್ಯೆ ಬಾಯಿ ಬಿಡದೆ ಬೇರೆ ಬೇರೆ ಉತ್ತರ ಕೊಡುತ್ತಾ ಹೋಗ್ತಾನೆ …. ಗೊತ್ತು … ಗೊತ್ತಿದ್ದೂ ಮತ್ತೆ ತಿರುಗಿ ಕೇಳಿದೆ ಸಂಬಳ ಎಷ್ಟು ಬರತ್ತೆ ..?
ಲೆಕ್ಕ ಹಾಕಪ್ಪ ನೀನು ಈ ಲೆವೆಲ್ ನ ಜಾಬ್ ನಲ್ಲಿದ್ಯ ನಾನು ಆ ಲೆವೆಲ್, ನಿನಗೆ ಬರೋದರಲ್ಲಿ ಇಂತಿಂತದನ್ನ ಕಳಿ , ಇಂತಿಂತದನ್ನ ಸೇರ್ಸು… ಆಗ ಎಷ್ಟು ಆಗುತ್ತೋ ಅಷ್ಟು . ತಲೆಗೆ ಕೈ ಹಾಕೋ ಜಾಣ್ಮೆ … ಅಬ್ಬಾ ನಾನೇನು ಲೆಕ್ಕ ಬಿಡಿಸಲು ಕೂತ್ತಿದ್ದೀನ ಇಲ್ಲಿ !!! ಇಷ್ಟು ಬಂತು , ಹಿಂಗೆ ಮಾಡಿದೆ , ಇನ್ನಿಷ್ಟೇ ಉಳಿದಿದೆ, ಏನಲ್ಲ ಮಾಡಬೇಕು ಅನ್ಕೊಂಡೆ ಅಂತ ಪಟಪಟ ಅಂತ ಹೇಳೋ ನನ್ನಂತವರಿಗೆ most irritatable ಇದು
ಒಂದಷ್ಟು ಜನರನ್ನ ಕಂಡಿದ್ದೀನಿ … ತುಂಬಾ ಕ್ಯಾಶುಯಲ್ ಆಗಿ ಪ್ರಶ್ನೆ ಕೇಳುದ್ರು , ಉತ್ತರಿಸೋದ್ರಲ್ಲಿ ಬಹಳ ಬುದ್ದಿವಂತಿಕೆ ತೋರಿಸಿಬಿಡ್ತಾರೆ..
ನಮ್ಮ ಅಪ್ಪಂಗೆ ಎಷ್ಟು ಸಂಬಳ ಬರುತ್ತೋ ಗೊತ್ತಿಲ್ಲ, ಅಪ್ಪ ಎಲ್ಲೆಲ್ಲಿ ಸೈಟು ಮಾಡಿದರೋ ಗೊತ್ತಿಲ್ಲ , ನಮ್ಮ ಜಾತಿ ಯಾವುದು ಅಂತ ಗೊತ್ತೇ ಇಲ್ಲ
ಹೀಗೆ ಚ್ಯೂಸಿ ಪ್ರಶ್ನೆಗಳಿಗೆ ಗೊತ್ತಿಲ್ಲವನ್ನೇ ಸಿದ್ದ ಉತ್ತರ ಅಂತ ಎತ್ತಿಟ್ಟುಕೊಂಡವರು .. ವಯಸು ಬಲಿತ್ತಿದ್ದರು ಮನೆಯ ವಿಚಾರಗಳು ಗೊತ್ತೇ ಆಗಿರಲ್ವಾ ಅಥವಾ ಯಾರಾದರು ಕೇಳಿದರೆ ಹೀಗೆ ಹೇಳಬೇಕು ಅಂತ ಮನೆಯಲ್ಲಿ ಚಿಕ್ಕವಯಸಿಂದಲೇ ಹೇಳಿ ಕೊಟ್ಟಿರ್ತಾರ ಅಂತ ಬಹಳಷ್ಟು ಬಾರಿ ಬೆರಗಾಗಿದ್ದೇನೆ ..
ಜೊತೆಗೆ ಇನ್ನೊಂದು ನಮೂನೆಯವರಿದ್ದಾರೆ … ಫೋನ್ ಮಾಡುತ್ತಾರೆ ಯಾರು ಅಂತ ಕೇಳಿದರೆ , ಗೆಸ್ ಮಾಡು ನೋಡೋಣ ಅಂತ 15 ನಿಮಿಷ ಕಾಡಿಸುತ್ತಾರೆ ,ತುಂಬಾ flirt ಮಾಡಲು ಪ್ರಯತ್ನಿಸಿ ರೇಜಿಗೆ ತರಿಸಿ , ನಿಮಗೆ ಮದ್ವೆ ಆಗಿದ್ಯ ಅಂದ್ರೆ , ಹೌದು ಅಥವ ಇಲ್ಲ ಬಿಟ್ಟು, ಆಗಿದ್ರೆ ಏನಿವಾಗ, ಆಗಿಲ್ಲ ಅಂದ್ರೆ ಏನಿವಾಗ ಅಂತ ಅಸಂಭದ್ದ ಮಾತಾಡಿ ತಾಳ್ಮೆ ಬಸಿಯುತ್ತಾರೆ . ಅಂತಹವರನ ಕಂಡರೆ ನನಗೆ ಕಂಬಳಿ ಹುಳ ಮೈಮೇಲೆ ಮುಲುಮುಲು ಮಾಡಿದಂಗೆ .. ಇವನು ಅದೇ ಗುಂಪಿಗೆ ಸೇರಿದವನು ..ಅದು ಹೇಗೆ ಮೆಚ್ಚಿದಳೋ ಮದುವೆಯಾದವಳು ಅಂದುಕೊಳ್ಳುತ್ತಿದ್ದಾಗಲೇ
ಅವನ ಮೊಬೈಲ್ ಗುರುಗುರು ಮಾಡಿತು …
ಹೆಂಡತಿಯ ವಾಟ್ಸಾಪ್ ಮೆಸೇಜ್ .. ವೈಫ್ ಅಂತ ಸೇವ್ ಮಾಡಿದ್ದ .
ಪ್ರತಿ ಸಂಭಾಷಣೆಯ ತುದಿಗೂ ರೀ ಹಚ್ಚಿದ್ದಳು , ಯಾವುದೇ ಅಡೆಯಿರದೆ ಎಲ್ಲಾ ಅನ್ಯೋನ್ಯ ದಂಪತಿಗಳಂತೆ ಮಾತು ಕತೆ ..
ಎಲ್ಲಾ ಮುಗಿದಿದೆ ಈ ಹೊತ್ತು ನಾ ಯಾಕೆ ಇನ್ನು ಇಷ್ಟೊಂದು ಪಿರಿಪಿರಿ ಅನುಭವಿಸುತ್ತಿದ್ದೇನೆ .. ಗುದ್ದಿ ಬಂದ ಪ್ರಶ್ನೆ ….
ಅರೆ ಹೌದಲ್ಲಾ,ಒಳ್ಳೆ ಪ್ರಿಯತಮನಾಗಲಾರದವರು ಒಳ್ಳೆ ಗಂಡ ಆಗಬಾರದು ಅಂತ ಏನಿಲ್ವಲ್ಲ ?
ಏನು ಬಡಿಸಿದರು ಚಕಾರವೆತ್ತದೆ ತಿನ್ನುವ , ದುಡಿದದ್ದನ್ನು ಕಳೆಯದೆ ನಾಳೆಗೆಂದು ಪ್ರತಿ ಕಾಸು ಕೂಡಿಡುವ , ಬಟ್ಟೆ ತೊಳಿ, ಐರನ್ ಮಾಡು ಅಂತ ಹೊರೆ ಹೊರೆ ಜವಾಬ್ದಾರಿ ಹೊರಿಸದ ಗಂಡ ಸುಸೂತ್ರ … ಪುಣ್ಯವಂತಳು ಅಂದುಕೊಳ್ಳುವಾಗ ಕೈನಲ್ಲಿದ್ದ ಕಾಫಿಯಲ್ಲಿ ನಗುವಿನ ಅಲೆಯೊಂದು ಮೂಡಿ ಲೋಟದಾಚೆ ಚೆಲ್ಲಿತು…. “ಅಲ್ವಾ…?” ಅನ್ನೋ ಅವನ ರಾಗದಂತೆ





superb…