ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇಳಿದ್ದೇನೆ..

ವಿಜಯ ವಾಮನ್

ಕೇಳಿದ್ದೇನೆ
ಊರಲ್ಲಿ ಜನ ಅವಳನ್ನು ಕಣ್ತುಂಬ ತುಂಬಿಕೊಂಡು ನೋಡುತ್ತಾ ರಂತೆ
ಹಾಗಾದರೆ ನಡಿ ಅಲ್ಲಿಗೆ ಎರಡು ದಿನ ಇದ್ದು ನೋಡೋಣಂತೆ.

ಕೇಳಿದ್ದೇನೆ
ಮಾತಾಡಿದರೆ ಅವಳು ಮಲ್ಲಿಗೆ ಚೆಲ್ಲುತ್ತದಂತೆ
ಇದೇ ಮಾತಾದರೆ ಮಾತಾಡಿಸಿ ನೋಡೋಣಂತೆ.

ಕೇಳಿದ್ದೇನೆ
ಅವಳ ಕುರುಳು ಇರುಳಿಗಿಂತಲೂ ಕಪ್ಪಂತೆ
ಅವಳ ಭೇಟಿಗೆ ನಿಶೆಗಪ್ಪಿನಲ್ಲಿ ನೆರಳು ಸುಳಿಯುತ್ತವಂತೆ.

ಕೇಳಿದ್ದೇನೆ
ಅವಳು ಮಲಗುವ ಕೋಣೆ ಸ್ವರ್ಗಕ್ಕಂಟಿ ಕೊಂಡಿದೆಯಂತೆ
ಆ ಕಡೆಯವರೂ ಈ ಕಡೆಗೆ ಬಾಯ್ದೆರೆದು ನೋಡುತ್ತಾರಂತೆ.

ಕೇಳಿದ್ದೇನೆ
ಸಾಧ್ಯವಾದರೆ ಕಲ್ಪಿಸಿಕೊಳ್ಳಿ ಅವಳ ಸೊಂಟದ
ತಿರುವನ್ನು ಕಾಣಲು ಪಲ್ಲಂಗವೇ ಹೊರಳಿ ನೋಡುತ್ತದಂತೆ.

ಕೇಳಿದ್ದೇನೆ
ಮುಂಜಾನೆ ಅವಳಿಗೆ ಚಿಟ್ಟೆಗಳ ಕೀಟಲೆ
ರಾತ್ರಿ ಕೋರೈಸುವ ಅವಳನ್ನು ಮಿಂಚು ಹುಳುಗಳು ನಿಂತು ನೋಡುತ್ತವಂತೆ.

ಕೇಳಿದ್ದೇನೆ
ಅವಳು ನಿಂತರೆ ಚುಕ್ಕಿಗಳು ಸುತ್ತ ಸುತ್ತುತವಂತೆ
ಅವಳು ನಡೆದರೆ ಜಗ ತಲ್ಲಣಿಸಿ ನಿಲ್ಲುತ್ತದಂತೆ

ಕೇಳಿದ್ದೇನೆ
ಕಟೆದ ಚೆಲುವಿನ ಪುತ್ಥಳಿಯಿರಬಹುದು ಅವಳು
ಆ ಗಿಡದಲ್ಲೂ ಮೊಗ್ಗೊಡೆದು ಹೂವರಳುವುದು ನೋಡೋಣಂತೆ

ಕೇಳಿದ್ದೇನೆ
ಅವಳ ಮೈಮಾಟದ ಕುಸುರಿಯನ್ನು
ಕುಸುಮಗಳು ಎಸಳುಗಳ ಸರಿಸರಿಸಿ  ನೋಡುತ್ತವಂತೆ.

ಕೇಳಿದ್ದೇನೆ
ಇರುಳಿಡೀ ಚಂದ್ರ ಎವೆಯಿಕ್ಕದೇ ನೋಡುತ್ತಾನಂತೆ
ಮೇಲ್ಛಾವಣಿಯೇರಿ ಚುಕ್ಕಿಗಳು ಕಣ್ಣು ಹೊಡೆಯುತ್ತವಂತೆ

ಕೇಳಿದ್ದೇನೆ
ಈ ಹರಿಣ ಕಂಗಳ ತರಳೆಯನ್ನು
ಹರಿಣಗಳು ಕಾಡಂಚಿನಿಂದ ಕಣ್ಣರಳಿಸಿ ನೋಡುತ್ತವಂತೆ

ಕೇಳಿದ್ದೇನೆ
ಕತೆಯಾದರೇನೀಗ ಅತಿಯಾದರೇನೀಗ
ಕನಸಾದರೇನೀಗ ಮತ್ತೊಮ್ಮೆ ನೋಡೋಣಂತೆ

ಹಾಯ್! ಉಳಿಯುವುದಾ
ಇಲ್ಲ ಹೊರಟುಬಿಡುವುದಾ?
ಬಾರಯ್ಯ ಫರಾಜ಼್ ತಾರೆಗಳು ಕರೆಯುತ್ತಿವೆ
ಪಯಣವಿದೆ ಇನ್ನೂ..

‍ಲೇಖಕರು Avadhi

26 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading