ಕೇದಾರದ ವನಮಾಲಿಯ ಕೊಳಲಗಾನವು…

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಒಂದು ರುದ್ರಾಕ್ಷಿ ಮಾಲೆ. ಸ್ವಲ್ಪ ಉದ್ದ ಬಿಟ್ಟ ಕೂದಲು. ನೀಲಿ ಜೀನ್ಸು, ಅದರ ಮೇಲೊಂದು ಜಾಕೆಟ್ಟು ತೊಟ್ಟ ಈ ವನಮಾಲಿ ಮೌನಿ ಅಂದರೆ ಮೌನಿ. ತನ್ನ ಪಾಡಿಗೆ ತಾನಿದ್ದ ಆತ ನಾವು ಬಂದಾಗ ಒಂದು ನಿಂಬೆ ಪಾನಕ ಮಾಡಿ ಕೊಟ್ಟ ಎತ್ತಲೋ ದೃಷ್ಟಿ ನೆಟ್ಟ. ಅಲ್ಲೇ ಬೆಟ್ಟದಿಂದ ಹರಿದು ಬಂದ ಸಿಹಿನೀರನ್ನೇ ಸುರಿದು ಮಾಡಿದ್ದ ತಂಪಾದ ಪಾನೀಯವದು. ಹತ್ತಿ ಬಂದ ಸುಸ್ತೆಲ್ಲ ಆ ತಂಪಿನೊಂದಿಗೆ ಮಾಯ. ʻಮ್ಯಾಗಿ ತಿಂತೀರಾ?ʼ ಅಂತ ನಮ್ಮ ಗೈಡ್‌ ಕೇಳಿದ. ಕೆಳಗೆ ಸಾಂಕ್ರಿ ಹಳ್ಳಿಯಿಂದ ಕಟ್ಟಿಸಿಕೊಂಡು ಬಂದಿದ್ದ ಆಲೂ ಪರಾಠಾ, ಸಬ್ಜಿ ಇತ್ತು.

ಇದಿಷ್ಟು ಹೊಟ್ಟೆ ಭರ್ತಿ ಮಾಡಿದರೂ ಇನ್ನೂ ಮಿಕ್ಕೀತು ಎಂದನಿಸಿ ಮ್ಯಾಗಿ ಬೇಡ ಎಂದೆ. ಮಗ ಪುಣ್ಯಕ್ಕೆ ಮ್ಯಾಗಿ ಗಿರಾಕಿ ಅಲ್ಲ. ಅವನೂ ಹೊಟ್ಟೆ ಫುಲ್‌ ಎನ್ನುತ್ತಲೇ ಅಲ್ಲೇ ಮೇಯುತ್ತಿದ್ದ ಕುದುರೆಗಳ ಹಿಂದೆ  ಬಿದ್ದಾಗಿತ್ತು. ಹುಷಾರು ಪುಟ್ಟಾ, ಜಾಸ್ತಿ ಹಿಂದಿಂದೆ ಹೋದರೆ ಝಾಡಿಸಿ ಒದ್ದೀತು ಎಂದೆ. ಕೇಳಲು ಅವನೆಲ್ಲಿ ನಿಂತಾನು!

ಡಾಬಾದಲ್ಲಿ ಅಡ್ಡಕ್ಕೆ ಹಾಸಿದ್ದ ಮರದ ದೊಡ್ಡ ತೊಲೆಯ ಮೇಲೆ ಕೂತು ಪೊಟ್ಟಣ ಬಿಚ್ಚಿದೆ. ಊಟದ ಹೊತ್ತಾಗಿರೋದ್ರಿಂದ ಹಾಗೂ ಈ ಜಾಗದಲ್ಲೊಂದು ಅರ್ಧ ಮುಕ್ಕಾಲು ಗಂಟೆ ಕೂರಲು ಟೈಮಿದೆ ಅಂದಿದ್ದಕ್ಕೆ ಈಗಲೇ ಹೊಟ್ಟೆಗಿಳಿಸುವ ಕಾರ್ಯವೊಂದು ಮುಗಿದುಬಿಡಲಿ ಎಂದು ಕೂತಿದ್ದು ಅಷ್ಟೇ. ಅಷ್ಟರಲ್ಲಿ ದೊಡ್ಡ ತಂಡವೊಂದು ಅಲ್ಲಿ ಹೊರಗಡೆ ಕೂತು ಹೋ ಎಂದು ಸದ್ದು ಮಾಡುತ್ತಿತ್ತು. ಹಕ್ಕಿಗಳ ಚಿಲಿಪಿಲಿ, ಸುತ್ತಲ ಕಾಡಿನ ಮೌನವೆಲ್ಲ ಇವರ ಸದ್ದಿನೊಳಗೆ ತನ್ನತನ ಕಳೆದುಕೊಂಡಂತೆ ಮಂಕಾಗಿದ್ದವು. ನಮ್ಮ ಕೈ ಬಾಯಿಗೆ ನಿರಾಯಾಸವಾಗಿ ಹೋಗಿ ಬರುತ್ತಾ ತನ್ನ ಕೆಲಸ ಮಾಡಿದಷ್ಟೇ ಸಹಜವಾಗಿ ಸುತ್ತಲ ಪ್ರಪಂಚ ತನ್ನ ಪಾಡಿಗೆ ತಾನಿತ್ತು ಅಷ್ಟೆ.

ಪರಾಠಾ ಮುಗಿಸಿ, ಮಿಕ್ಕವನ್ನು ಮತ್ತೆ ಬ್ಯಾಕ್‌ಪ್ಯಾಕಿನೊಳಗಿಟ್ಟು ಅಲ್ಲೇ ಬದಿಯಲ್ಲಿ ಹರಿಯುತ್ತಿದ್ದ ಜುಳುಜುಳು ಸದ್ದಿಗೆ ಕೈಯೊಡ್ಡಿ ತೊಳೆದುಕೊಂಡು, ಮುಖವನ್ನೂ ಆ ಸದ್ದಿನೊಳಗೆ ಅದ್ದಿ ತೆಗೆಯುವಷ್ಟರಲ್ಲಿ ಹಾಯೆನಿಸಿತು. ಸ್ವಲ್ಪ ಹೊತ್ತು ಆ ಬಿಸಿಲಿಗೆ ಮುಖವೊಡ್ಡಿ ಆ ತೊಲೆಯ ಮೇಲೆ ಬಿದ್ದುಕೊಳ್ಳುವ ಅಂತ ಯೋಚನೆ ಮಾಡಿದ್ದವಳಿಗೆ ಈಗ ಮತ್ತೆ ಉತ್ಸಾಹ ಬಂತು. ಕ್ಯಾಮರಾ ನೇತಾಕಿ ಅತ್ತಿತ್ತ ತಿರುಗಾಡಿ ಒಂದಿಷ್ಟು ಕ್ಲಿಕ್ಕು ಎಲ್ಲವೂ ಮುಗೀತು.

ನಿಂಬೆ ಪಾನಕ ಮಾಡಿಕೊಟ್ಟ ಆ ಮೌನಿಯನ್ನು ಮಾತನಾಡಿಸುವುದು ಅಷ್ಟು ಸುಲಭವಿರಲಿಲ್ಲ. ಎಲ್ಲರ ಜೊತೆ ಸುಮ್ಮನೆ ಹರಟುವಾತ ಈತನಲ್ಲ ಎಂದು ಆತನನ್ನು ನೋಡಿದಾಗಲೇ ನನಗೆ ಅರಿವಾಗಿತ್ತು. ಅಷ್ಟೂ ಕೆಲಸಗಳನ್ನು ಮಾಡುವಾಗಲೆಲ್ಲ ಸುಮ್ಮನೆ ಆತನನ್ನು ಗಮನಿಸುತ್ತಿದ್ದೆ. ಸುಮ್ಮನೆ ಮಾತಿಗೆಳೆಯದೆ ಆತ, ತನ್ನ ಕೆಲಸ ಮುಗಿಸಿ, ಡಾಬಾದೊಳಗೂ ಕೂರದೆ ಅಲ್ಲೇ ಹೊರಗೆ ಹಾಸಿದ್ದ ಮರದ ತೊಲೆಯಲ್ಲಿ ಕೂತು ಪ್ರಕೃತಿಯ ಸಹಜತೆಯಲ್ಲಿ ಕಳೆದುಹೋಗಿದ್ದ.

ಈತನಲ್ಲೇನೋ ಕಥೆ ಇದೆ ಎಂದು ಅನಿಸತೊಡಗಿತ್ತು. ಆದರೆ ಗೊತ್ತಿಲ್ಲದೆ ಮಾತನಾಡಿಸೋದು ಹೇಗೆ? ಇಂಥದ್ದೊಂದು ಸಂದರ್ಭವನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಇಂಥವರ ಮುಂದೆ ಕೂತು ನಿಮ್ಮ ಬಗ್ಗೆ ಹೇಳಿ ಎಂದು ಪೆನ್ನು ಪೇಪರು ಹೊತ್ತು ಕೂರುವಷ್ಟು ಮೂರ್ಖತನ ಇನ್ನೊಂದಿಲ್ಲ. ಅಲ್ಲೊಂದು ಬಂಧ ಏರ್ಪಡಬೇಕು. ಅವರು ನಮ್ಮೊಂದಿಗೆ ಪ್ರೀತಿಯಿಂದ ಮಾತಾಡಬೇಕು. ತಾನೇ ತಾನಾಗಿ ಹೇಳಿಕೊಳ್ಳುವ ಅಂತ ಅವರಿಗೇ ಅನ್ನಿಸಬೇಕು. ಆಗ ಮಾತ್ರ ಅಲ್ಲೊಂದು ಚಂದನೆಯ ಕಥೆಯ ಉಗಮವಾಗುತ್ತದೆ. ಹಾಗಾಗಿ ಸುಮ್ಮನೆ ಕೂತೆ.

ಸ್ವಲ್ಪ ಹೊತ್ತು ಮೌನವೇ ಮಾತಾಡಿತು ಅನ್ನಬೇಕಷ್ಟೆ. ಆತನಿಂದೊಂದು ಮುಗುಳ್ನಗೆ, ಕೈಯಲ್ಲಿ ಕಂಡೂ ಕಾಣದಂತೆ ಹಿಡಿದಿಟ್ಟಿದ್ದ ಕೊಳಲು. ಬಾನ್ಸುರಿವಾಲಾ ಡಾಬಾ ಎಂಬ ಬೋರ್ಡು ಹೊತ್ತಿದ್ದ ಆತನ ಢಾಬಾ… ಇಷ್ಟು ಸಾಕಿತ್ತು ನಿಧಾನವಾಗಿ ಮಾತು ಶುರುವಾಗಲು.

ಆತ ಮಾತಿಗೂ ಮೊದಲು ತನ್ನ ಕೊಳಲನ್ನು ಮೆತ್ತಗೆ ತೆಗೆದು ನುಡಿಸಿದ. ಹಳೇ ಬಾಲಿವುಡ್‌ ಗೀತೆ. ಅಲ್ಲಿ ಹೋ ಎಂದು ಸದ್ದು ಮಾಡುತ್ತಿದ್ದ ಗುಂಪೂ ಕೂಡ ತಮ್ಮ ಹೋ ರಪ್ಪನೆ ನಿಲ್ಲಿಸಿದ್ದರಿಂದ ಆ ಪರಿಸರದಲ್ಲೊಂದು ಹಿತವಾದ ಸಂಗೀತ ಅನುರಣಿಸಿತು. ಹಚ್ಚ ಹಸುರು ಮರಗಳು, ಅರಳಿ ನಿಂತಿದ್ದ ಸುಮ, ಜುಳುಜುಳು ನೀರು, ಹುಲ್ಲು ಮೇಯುವ ಕುದುರೆಗಳ ಕಾಲಿನ ಲಯಬದ್ಧ ಸಪ್ಪಳ, ಆಗೀಗ ಮಧ್ಯೆ ಮಧ್ಯೆ ಚಿಲಿಪಿಲಿ, ಮಧ್ಯಾಹ್ನದ ಕಾಡಿನ ಗಾಢ ಮೌನದ ಜೊತೆಗೆ ಈ ಕೊಳಲನಾದ ಅಲ್ಲೊಂದು ಹೊಸ ಜಗತ್ತನ್ನೇ ಸೃಷ್ಟಿ ಮಾಡಿತು. ಕೊಳಲು ತುಟಿಗಿಟ್ಟಷ್ಟೇ ನಿಧಾನವಾಗಿ ಆತ ಕೊಳಲನ್ನು ಮತ್ತೆ ಕೆಳಗಿರಿಸಿದ. ಮತ್ತೆ ಪ್ರಕೃತಿ ವಾಸ್ತವಕ್ಕೆ ಮರಳಿದರೂ ಬೇರೆಯದೇ ಸೊಗಸನ್ನು ಪಡೆದುಕೊಂಡಂತಿತ್ತು.

ಹೆಸರು ವಿಜಯ್‌ ಪಾಲ್‌ ಸಿಂಗ್‌ ರಾವತ್. ವರ್ಷದ ಐದಾರು ತಿಂಗಳು ಸಾಂಕ್ರಿಯಿಂದ ಕೇದಾರಕಂಠಕ್ಕೆ ಹತ್ತುವ ಚಾರಣದ ಹಾದಿಯಲ್ಲಿ ಈ ರಾವತ್‌ನ ಡಾಬಾ ಸಿಗುತ್ತದೆ. ನಿಂಬೆ ಪಾನಕ, ಮ್ಯಾಗಿ, ಚಹಾ ಬಿಟ್ಟರೆ ಅಂಥ ವಿಶೇಷವೇನಿಲ್ಲ. ಒಂದಿಷ್ಟು ಕುರುಕಲು, ಜ್ಯೂಸು ಪ್ಯಾಕೆಟ್ಟುಗಳೇ ನೇತಾಡಿಕೊಂಡಿವೆ. ಆದರೆ, ಈ ಡಾಬಾ ವಿಶೇಷವೆನಿಸುವುದು ಅದರ ಹೆಸರಿನಿಂದ. ಬಾನ್ಸುರಿವಾಲಾ ಡಾಬಾ! ಈ ಡಾಬಾದೊಡೆಯ ವಿಜಯ್‌ ಪಾಲ್ ಸಿಂಗ್‌ ರಾವತ್‌, ಬರುವ ಚಾರಣಿಗರಿಗೆ ಒಂದಿಷ್ಟು ಬೇಯಿಸಿ ಹಾಕೋದು ಬಿಟ್ಟರೆ, ಬೇರೆ ಕೆಲಸ ಇಲ್ಲ. ಪ್ರಕೃತಿ ಮಧ್ಯೆ ತಾನಾಯಿತು, ತನ್ನ ಕೊಳಲಾಯಿತು.

ನಿಮಗೆ ಗೊತ್ತಾ? ಎಂದು ಮಾತು ಶುರು ಮಾಡಿದ ಆತ, ʻನಾನಿಲ್ಲಿ ಐದಾರು ವರ್ಷದ ಹಿಂದೆ ಡಾಬಾ ಹಾಕುತ್ತೇನೆ ಎಂದು ಹೊರಟಾಗ ನಮ್ಮ ಊರಿನ ಮಂದಿಯೆಲ್ಲ ನಕ್ಕರು. ಅಲ್ಲಿ ಹೋಗಿ ಡಾಬಾ ಹಾಕ್ತೀಯಾ? ಊಟಕ್ಕೇನು ಮಾಡ್ತಿ? ಎಂದರು. ಆದರೆ ಹೊಟ್ಟೆ ಹೊರೆದುಕೊಳ್ಳಲು ನನಗೆ ಈ ಡಾಬಾದಿಂದ ಸಿಕ್ಕಿದೆ. ಜೊತೆಗೆ ಈ ಕಾಡಿನ ಮೌನವೂ, ನನ್ನ ಮತ್ತು ಈ ನನ್ನ ಬಾನ್ಸುರಿಗೆ ಸಾಕಷ್ಟು ಸಮಯವೂ. ಇಲ್ಲಿ ಸಿಕ್ಕ ಸಂತೋಷ ನನಗೆ ಎಲ್ಲೂ ಸಿಕ್ಕಿಲ್ಲʼ ಎಂದು ನಕ್ಕ. ಈ ಗಂಭೀರ ಮೌನಿಯ ಮುಖದಲ್ಲೂ ಈಗ ಸಣ್ಣಗೆ ನಗು ಮಿಂಚತೊಡಗಿತ್ತು. ನಾನು ಸುಮ್ಮನೆ ಆತನ ಕಥೆ ಆಲಿಸುತ್ತಿದ್ದೆ. ನಡುನಡುವೆ ಬೋನಸ್‌ ಆಗಿ ಸಿಗುವ ಕೊಳಲಗಾನ.

ʻಹೆಂಡತಿ ಮಕ್ಕಳೆಲ್ಲ ಹಳ್ಳಿಯೊಳಗಿದ್ದಾರೆ. ಚಾರಣದ ಸೀಸನ್ನಿನಲ್ಲಿ ಮಾತ್ರ ಇಲ್ಲಿ ಬರುತ್ತೇನೆ. ಮತ್ತೆ ಉಳಿದ ಸಮಯ ಹಳ್ಳಿ, ಗದ್ದೇ ಇದ್ದೇ ಇದೆಯಲ್ಲʼ ಎಂದ. ನನಗೆ ಮಾತಾಡಿ ನುಡಿಸಿ ಮತ್ತೆ ಮಾತಾಡಿ ಗಂಟೆ ಅರ್ಧವೇ ಕಳೆದಿತ್ತೇನೋ. ನನಗೆ ಹೊತ್ತು ಹೋದದ್ದೇ ಗೊತ್ತಾಗಿರಲಿಲ್ಲ. ಆತ ಒಳಹೋಗಿ ಇನ್ನೂ ಎರಡು ಕೊಳಲನ್ನೂ, ಒಂದೆರಡು ಕೋಲುಗಳನ್ನೂ ಎತ್ತಿಕೊಂಡು ಬಂದು ತೋರಿಸಿದ. ಏನಿದು ಎಂದೆ. ಇವೆಲ್ಲ ಹೀಗೆ ಬಂದವರು ಪ್ರೀತಿಯಿಂದ ಕೊಟ್ಟ ಕೊಳಲುಗಳು ಎಂದ. ಅರೆ, ಹೌದಾ? ಯಾರು ಕೊಟ್ಟಿದ್ದು ಎಂದೆ.

ಒಬ್ಬರು ವಿದೇಶೀ ವ್ಯಕ್ತಿ ಚಾರಣಕ್ಕೆಂದು ಬಂದಿದ್ದರು. ಇಲ್ಲಿ ಡಾಬಾದ ಬಳಿ ಟೆಂಟ್‌ ಹಾಕಿ ತಂಗಿದ್ದರು. ಆತನಿಗೆ ನನ್ನ ಕೊಳಲ ಗಾಯನ ಬಹಳ ಇಷ್ಟವಾಯ್ತು. ಚಾರಣ ಮುಗಿಸಿ ಹೋಗಿ ಒಂದೆರಡು ವರ್ಷ ಬಿಟ್ಟು ಮತ್ತೆ ಬಂದರು. ಆಗ ಕೊಳಲೂ ತಂದು ಉಡುಗೊರೆಯಾಗಿ ಕೊಟ್ಟರು. ಈ ಕೊರೋನಾ ಬಂದು ಎಲ್ಲ ಹಾಳಾಯಿತು. ಇಲ್ಲದಿದ್ದರೆ, ಇಷ್ಟರಲ್ಲಿ ಮತ್ತೆ ಬರುತ್ತಿದ್ದರುʼ ಎಂದ. ಅರೆ, ತಮ್ಮ ದೇಶಕ್ಕೆ ಮರಳಿದ ಮೇಲೆ ಮತ್ತೆ ಭಾರತ ಪ್ರವಾಸಕ್ಕೆ ಬಂದಾಗ ನೆನಪಿಟ್ಟುಕೊಂಡು ಇಲ್ಲಿ ಬಂದು ಕೊಳಲು ಉಡುಗೊರೆ ಕೊಟ್ಟ ಆತನ ಪ್ರೀತಿ ನೋಡಿ!ʼ ಎಂದೆ. ಆತ ಬರೀ ಕೊಳಲು ಮಾತ್ರ ಅಲ್ಲ. ಈ ರಿದಮ್‌ ಸ್ಟಿಕ್‌ ಕೂಡಾ ಕೊಟ್ಟು ಹೋಗಿರುವರು ಎಂದು ಕೈಯಲ್ಲಿದ್ದ ಆ ಎರಡು ಕಡ್ಡಿಗಳನ್ನು ತೋರಿಸಿದ.

ಓಹ್‌ ಇದು ಯಕ್ಷಗಾನದ ಚೆಂಡೆ ಕೋಲಿನ ಹಾಗಿದೆಯಲ್ಲಾ ಎನಿಸಿತು. ವಿಶೇಷವೆನಿಸಿದ್ದು ಆ ಕೋಲುಗಳಲ್ಲಿ ಬಿಡಿಸಿದ್ದ ಆಕರ್ಷಕ ಚಿತ್ತಾರ. ಎಲ್ಲಿಯದ್ದು ಇದು ಅಂತ ಗೊತ್ತಾ? ಬಹಳ ಚಂದ ಇದೆ ಇದು ಎಂದೆ. ʻಗೊತ್ತಿಲ್ಲ. ಅವರು ನನಗಾಗಿ ತಮ್ಮದನ್ನು ಕೊಟ್ಟುಬಿಟ್ಟರುʼ ಎಂದ. ಕೋಲಾಟದ ಕೋಲಿಗೆ ಬಣ್ಣ ಹಚ್ಚಿ ಚಂದ ಮಾಡುವಂತೆ ಆ ಕೋಲುಗಳಲ್ಲಿ ಚುಕ್ಕೆಗಳಲ್ಲೇ ಬಿಡಿಸಿದ್ದ ಚಿತ್ತಾರ ಯಾವುದೋ ಟ್ರೈಬಲ್‌ ಆರ್ಟ್‌ನಂತಿತ್ತು. ʻತಕ್‌ ದಿನದಿನ್‌ ತಕ್‌ ದಿನದಿನ್‌…ʼ ಅಂತ ಕೋಲನ್ನು ಒಂದಕ್ಕೊಂದು ತಾಗಿಸಿಕೊಂಡು ಸದ್ದು ಬರಿಸುತ್ತಾ ಆಮೇಲೆ ನಿಲ್ಲಿಸಿ ನಕ್ಕು ನನ್ನ ಮುಖ ನೋಡಿದ.

ಗೈಡ್‌ ಸಮಯವಾಯಿತು ಎಂಬಂತೆ ಮತ್ತೆ ಮತ್ತೆ ನನ್ನ ಮುಖ ನೋಡಿದ. ನಾನಂತೂ ಈತನ ಕೊಳಲಿನಲ್ಲೇ ಕಳೆದುಹೋಗಿದ್ದೆ. ಹೊರಡೋಣ, ಐದೇ ನಿಮಿಷ ಎನ್ನುತ್ತಾ ಒಂದೆರಡು ಫೋಟೋ ಕ್ಲಿಕ್ಕಿಸಿ, ತುಂಬ ಖುಷಿಯಾಯ್ತು ನೀವು ಸಿಕ್ಕಿದ್ದು ಎಂದು ಕೈಜೋಡಿಸಿ ಹೊರಡಲನುವಾದರೆ ಆತ, ಛೇ, ಇಷ್ಟು ಬೇಗ ಹೊರಡುವಿರಿ? ಸ್ವಲ್ಪ ಹೊತ್ತು ಇನ್ನೂ ಕೂರಬಹುದಿತ್ತಲ್ವಾ? ಎನ್ನುತ್ತಾ ಮುಖ ನೋಡಿದ.

ಒಂದ್ಹತ್ತು ನಿಮಿಷದವಾದರೂ ಇರಿ, ಕಡೇ ಪಕ್ಷ ನಿಮಗೊಂದು ನಿಂಬೆ ಪಾನಕವಾದ್ರೂ ಮಾಡಿಕೊಡುತ್ತಿದ್ದೆ ಎಂದ. ʻಇಳಿಯುವಾಗ ಖಂಡಿತ ನಿಮ್ಮ ಡಾಬಾದಲ್ಲೇ ಇವತ್ತಿನ ಬಾಕಿಯನ್ನೂ ಸೇರಿಸಿ ಎರಡು ನಿಂಬೆ ಪಾನಕ ಒಬ್ಬಳೇ ಕುಡಿದೇ ಹೊರಡೋದು. ಸಿಗೋಣʼ ಎನ್ನುತ್ತಾ ಆಗಲೇ ಕರೆದು ಕರೆದು ಸುಸ್ತಾಗಿ, ನಾನು ಹಿಂದಿಂದ ಬಂದೇನೆಂದು ಬಿಟ್ಟು ಹೊರಟುಬಿಟ್ಟಿದ್ದ ಗೈಡ್‌ ಕಡೆಗೆ ಓಡಿದೆ.

ಬಹಳ ಮುಂದೆ ಹೋದ ಮೇಲೆ, ʻಅರೆ, ಛೇ! ನಾವು ಇಳಿಯಲಿರುವ ಹಾದಿಯೇ ಬೇರೆ. ಮತ್ತೆ ಸಿಗುತ್ತೇನೆ ಎಂದು ಬಂದೆನಲ್ಲ!ʼ ಎಂದು ತಲೆ ಕೆರೆದುಕೊಂಡೆ.

ಆತ ಮತ್ತೆ ಸಿಗಲಿಲ್ಲ!

‍ಲೇಖಕರು Avadhi

June 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: