ಕೆ ವಿ ಮುದ್ದವೀರಪ್ಪ ಓದಿದ ‘ಉರಿವ ಕರುಳ ದೀಪ’

ಜೀವಕಾರುಣ್ಯದ ಬದುಕಿಗೆ ಹಂಬಲಿಸುವ ಕವಿ ಬಿದಲೋಟಿ ರಂಗನಾಥ್

ಡಾ ಕೆ ವಿ ಮುದ್ದವೀರಪ್ಪ

ಆಂಗ್ಲಭಾಷಾ ಕವಿ, ವಿಮರ್ಶಕ ಅಲೆಕ್ಸಾಂಡರ್ ಪೋಪ್ ‘ಆ್ಯನ್ ಎಸ್ಸೇ ಆನ್ ಕ್ರಿಟಿಸಿಸಂ’ನಲ್ಲಿ “ಕಾವ್ಯ ಮನುಷ್ಯ ಜೀವನದ ಪ್ರತಿಬಿಂಬ, ಅವನಿಗೆ ಅತ್ಯಂತ ಸಂತೋಷವನ್ನು ಕೊಡುವುದರ ಜೊತೆಗೆ ಅವನಿಗೆ ನ್ಯಾಯಬದ್ಧವಾದ ದಾರಿಯನ್ನೂ ತೋರಿಸುತ್ತಿರುತ್ತದೆ. ಕಲೆ ಕಲೆಗಾಗಿ ಅಲ್ಲ. ಮನುಕುಲದ ಉದ್ಧಾರಕ್ಕಾಗಿ” ಎಂದು ಬಹಳ ಸೂಕ್ಷ್ಮ ಹಾಗೂ ಅರ್ಥಪೂರ್ಣ ನೆಲೆಯಲ್ಲಿ ಹೇಳುತ್ತಾನೆ. ಹೌದು ಪ್ರತಿ ಕವಿಯೂ ನ್ಯಾಯದ ದಾರಿಯನ್ನೇ ಹುಡುಕುತ್ತಾ ಆ ದಾರಿಯಲ್ಲಿ ಸಮಾಜ ಸಾಗಬೇಕೆಂಬ ಕಳಕಳಿಯನ್ನು ಹೊತ್ತು ಸಾಗುತ್ತಾನೆ. ಕಾವ್ಯ ಅವನಿಗೆ ಎಷ್ಟೇ ಖುಷಿಕೊಟ್ಟರೂ ಅವನ ಮೂಲಸೆಲೆ, ಆಸ್ಥೆ ಇರುವುದು ಉತ್ತಮ ಸಮಾಜದ ನಡೆಯಲ್ಲಿ.

ಕವಿ ಸದಾ ಕಲುಷಿತ ಸಮಾಜ ಕಂಡರೆ ಕ್ರುದ್ಧನಾಗುತ್ತಾನೆ, ಸೆಟೆದುನಿಲ್ಲುತ್ತಾನೆ. ಅದನ್ನು ತಿದ್ದಲು ನಿರಂತರವಾಗಿ ಹೋರಾಟ ಮಾಡುತ್ತಲೇ ಇರುತ್ತಾನೆ. ಯಾಕೆಂದರೆ ಮನುಷ್ಯ ಯಾವಾಗಲೂ ಸಮಾಜದ ಮುಖ್ಯ ಅಂಗವಾಗಿದ್ದರಿಂದ ಕವಿ ಸಾಹಿತ್ಯ ಸೃಷ್ಟಿಯ ಕೇಂದ್ರದಲ್ಲಿದ್ದು ಹದ್ದಿನ ಕಣ್ಣಿನ ರೀತಿಯಲ್ಲಿ ಕಾವಲು ಕಾಯುತ್ತಿರುತ್ತಾನೆ. ಈ ಕಾರ್ಯ ನಿರಂತರವಾಗಿ ಕಾವ್ಯ ನಡೆಯಲ್ಲಿ ನಡೆಯುತ್ತಾ ಬರುತ್ತಿರುವುದರಿಂದ ಆ ನಿಟ್ಟಿನಲ್ಲಿ ಬಿದಲೋಟಿ ರಂಗನಾಥ್‌ರವರ ಕಾವ್ಯವೂ ಪರಂಪರೆಯನ್ನು ಮತ್ತು ಅಧೋಗತಿಗಿಳಿಯುತ್ತಿರುವ ಸಮಕಾಲೀನ ನೆಲೆಯ ಮನುಷ್ಯನ ಮದವನ್ನು ಟೀಕಿಸುತ್ತಿರುವುದು ‘ಉರಿವ ಕರುಳ ದೀಪ’ ಕವನ ಸಂಕಲನದಲ್ಲಿ ಕಾಣಬಹುದಾಗಿದೆ.

ಜೀವಕಾರುಣ್ಯದ ಹಳ್ಳಿಸೊಗಡಿನ ಬಿದಲೋಟಿ ರಂಗನಾಥ್ ವೃತ್ತಿಯಲ್ಲಿ ವಕೀಲರಾದರೂ ಪ್ರವೃತ್ತಿಯಲ್ಲಿ ಪಕ್ವಗೊಂಡ ಕವಿ. ಆದರೂ ಕಾವ್ಯ ಹೆಣೆಯುವ ಕರ್ಮ ಅವರಿಗೆ ಹೇಗೆ ಒಗ್ಗಿತೋ ಗೊತ್ತಿಲ್ಲ. ರಂಗನಾಥ್ ಇಂದು ನಾಡಿನ ಉದ್ದಗಲಕ್ಕೂ ಒಬ್ಬ ಉತ್ತಮ ಕವಿಯೆಂದು ಚಿರಪರಿಚಿತರಾಗುವುದೊಂದಿಗೆ ದೆಹಲಿಯಲ್ಲಿರುವ ಸಂಸ್ಕೃತಿ ಚಿಂತಕರಾಗಿರುವ ಪುರುಷೋತ್ತಮ ಬಿಳಿಮಲೆಯವರು ನಾಡಿನ ಕಾವ್ಯ ಚರ್ಚೆಯಲ್ಲಿ ರಂಗನಾಥರ ಕಾವ್ಯ ಜೀವಪರವಾಗಿ ಸಮಾಜಮುಖಿಯಾಗಿ ನಿಲ್ಲುತ್ತದೆಂದು ಶ್ಲಾಘಿಸಿದ್ದಾರೆ. ಹಾಗೆ ನೋಡಿದರೆ ರಂಗನಾಥ್ ಬರೆದ ಕಾವ್ಯವೆಲ್ಲವೂ ಗಂಭೀರದ್ದು, ಸಹೃದಯರಿಗೆ ಸದಾ ಕಾಡುವಂತದ್ದು.

ಕವಿ ಬದುಕನ್ನು ಕಾವ್ಯವಾಗಿಸಿಕೊಂಡು ಈಗಾಗಲೇ ಕಾವ್ಯವನ್ನೇ ಉಸಿರಾಗಿಸಿಕೊಳ್ಳುವ ಮಟ್ಟಕ್ಕೆ ಅವರಲ್ಲಿ ಕಾವ್ಯ ಒಗ್ಗಿಕೊಂಡಿದೆ. ಆ ಕಾವ್ಯಶಕ್ತಿಯೂ ಬಲಿತ ನೆಲೆಯಲ್ಲಿ ಒಳಗೊಳಗೆ ಸಂಕಟವನ್ನು, ಕುದಿತವನ್ನು ವ್ಯಕ್ತಪಡಿಸುತ್ತದೆ. ಕಾವ್ಯದೊಳಗಿನ ಬಡವರ, ನಿರ್ಗತಿಗರ, ದಲಿತರ, ಅಸಹಾಯಕರ ಆರ್ದ್ರತೆಯ ಧ್ವನಿ ಮತ್ತೆ ಮತ್ತೆ ಅನುರಣಿಸುತ್ತದೆ. ಆ ಕೂಗಿಗೆ ದನಿಯಾಗುವ ಹಾಗೂ ಹಸನಾದ ಬದುಕ ಕಡೆಗೆ ಹಂಬಲಿಸುವ ತಹತಹ ಈ ಕಾವ್ಯದಲ್ಲಿ ಎದ್ದು ಕಾಣಿಸುತ್ತದೆ.

ಜೋಳದ ದಿಂಡಿನಿಂದ ಮಾಡಿದ್ದ ಹಲುವೆ
ತೆಂಗಿನ ಬೂರೆಯಿಂದ ಮಾಡಿದ್ದ ಗದೆ
ಜೋಳದ ಕಡ್ಡಿ ಗೂಡಲಿ ಆಡಿದ್ದ
ಕಣ್ಣಾಮುಚ್ಚಾಲೆ
ಅವ್ವ ಬಡಿಯುತ್ತಿದ್ದ ಕತ್ತಾಳಿ ಮಟ್ಟೆಯ ಸದ್ದು
ಸಾಕ್ಷರತೆಯ ಬ್ಯಾಗಿನಲಿ
ಹುದುಗಿದ್ದ ಅಕ್ಷರದೀಪಗಳು…
ಹೀಗೆ
ಬದುಕಿನುದ್ದಕ್ಕೂ ಮುಗಿಯದ ನೆನಪು (ಬದುಕುಳಿದ ನಡುಮನೆಯಲ್ಲಿ… ಪುಟ-೪)

ಕಷ್ಟಗಳ ಸರಮಾಲೆಯಾಗಿ ಬರುವ ಈ ಬದುಕಿನಲ್ಲಿ ಕಳೆದುಹೋಗುವ ದೀನರಿಗೆ, ಅಸಹಾಯಕರಿಗೆ, ದಲಿತರಿಗೆ ಬದುಕು ಹಸನಾಗಲಿಲ್ಲ. ಹಸನಾಗಲಿಕ್ಕೆ ವ್ಯವಸ್ಥೆ ಬಿಡಲಿಲ್ಲ. ಆಗ ಅನುಭವಿಸಿದ ಬದುಕೇ ಮುಗಿಯದ ನೆನಪು. ಮತ್ತೆ ಮತ್ತೆ ಅವು ಕಾಡುವ, ಹಿಂಸಿಸುವ ಕಹಿ ನೆನಪುಗಳು. “ಅವ್ವ ಬಡಿಯುತ್ತಿದ್ದ ಕತ್ತಾಳೆ ಮಟ್ಟೆ”ಯ ರೀತಿಯಲ್ಲಿ ತಮ್ಮ ಬದುಕು ಹಿಂಸೆಗೆ ಒಳಗಾದದ್ದು ಸುಳ್ಳಲ್ಲ. ಅವುಗಳಿಂದ ಸಂಸ್ಕೃತಿಯ ವಕ್ತಾರಿಕೆಯ ಸೊಬಗು ದಲಿತರಿಗೆ ದೊರೆತರೂ ಬದುಕು ಮಾತ್ರ ಹಸನಾಗದೇ ಉಳಿದದ್ದು ದುರಂತ.

ಬದುಕಬೇಕೆನಿಸಿದವರಿಗೆ ಬದುಕು ಅರ್ಧದಲ್ಲೇ ನಿಂತದ್ದು, ಪೂರ್ಣಗೊಳಿಸಲಾರದ ದುಃಸ್ಥಿತಿ. ಇದೆ ತೆರನಾದ ಕವಿತೆ ‘ನೆಲದ ಬೆವರಲಿ ಅರಳಿದ ಗುಲಾಬಿ’ಯಲ್ಲೂ “ಅಪ್ಪನೆಂಬ ಸೂರ್ಯನೆದೆಯ ಮೇಲೆ ಸುಡುವ ಕೆಂಡಗಳು ಸುಟ್ಟ ರಾಗಿರೊಟ್ಟಿಯ ಎದೆಯ ಅಮ್ಮನ ಬೆರಳು… ಅಪ್ಪನೆದೆಯ ತಮಟೆಯ ಸದ್ದಿಗೆ ಮೆರವಣಿಗೆ ಹೊರಟ ಹೋರಾಟದ ಹಾಡು” (ಪುಟ-೧೫) ಈ ತರದ ನೋವಿನ ಹಳವಂಡಗಳೊಳಗೆ ಕರಗುವ ಎಷ್ಟೋ ಜನರ ಬದುಕು ಹಸನಾಗದೆ ಕಳೆದುಹೋಗಿದೆ. ಇಲ್ಲಿ ಬಳಸಿರುವ ರೂಪಕಗಳು ಸೊಗಸಾಗವೆ, ಅರ್ಥಪೂರ್ಣವಾಗಿವೆ. ಕೆಂಡದೊಳಗಿನ ಉರಿವ ಕಾವು ನೋವಿನ ಆರ್ದ್ರತೆಯಾಗಿಸಬಹುದೇ ಹೊರತು ಕಡಿಮೆಯಾಗಿಸಿ ಬದುಕ ಕೊಡಲೊಲ್ಲದು.

ಒಳಗೊಳಗೆ ಉರಿದು ಬೂದಿಯಾದೆ
ಉರಿಯುವಾಗ ನೀರು ಚಿಮುಕಿಸಲಿಲ್ಲ ಯಾರೂ
ಹೂಜಿಯಲಿ ನೀರು ಸುರಿಯಲು ಹೋದವರು
ಕನ್ನಡಿಯೊಳಗಿನ ಬಿಂಬವಾದರು. (ಚಂದ್ರ ಕಾಂತಿಯ ಬೆಳಕು, ಪುಟ-೧೨)

ಭೂಮಿಯ ಮೇಲೆ ಜನಿಸಿದ ಪ್ರತಿ ಜೀವಿಗೂ ಬದುಕುವ ಹಂಬಲವಿರುತ್ತೆ. ಅದು ಸ್ವಾಭಿಮಾನದ ಬದುಕೇ ಆಗಿರುತ್ತೆ. ಮನುಷ್ಯ ಬದುಕಿನಲ್ಲಿ ಸಾಕಷ್ಟು ತಾರತಮ್ಯ ಇರುವುದು, ಸ್ವತಂತ್ರಿಕೆ ಇಲ್ಲದೆಯಿರುವುದು ಕನಸು ನನಸಿಗೆ ಅವಕಾಶದ ಕೊರತೆ ಎದ್ದು ಕಾಣುತ್ತದೆ. ‘ಒಳಗೊಳಗೆ ಉರಿದು ಬೂದಿಯಾದೆ’ ಎಂಬುದು ಎಂಥಹ ನೋವಿನ ಆರ್ದ್ರತೆ. ತಮ್ಮ ವಿಮೋಚನೆಯ ಹಾದಿಯ ಕನಸು ಹೊತ್ತವನಿಗೆ ಹಾದಿ ಸುಗಮವಾಗಲು, ಆ ಹಾದಿಯಲ್ಲಿ ಚಂದ್ರ ಕಾಂತಿಯ ಬೆಳಕ ಮೂಡಿಸಲು ಬರುವವರು ಬರದೇ ಇದ್ದಾಗ ಬದುಕಿನ ಭಾಗವೇ ಇಲ್ಲದಂತಾಯಿತಲ್ಲವೆಂಬ ಸಂಕಟ ಕವಿಗೆ ಕಾಡುತ್ತದೆ.

ಬಾಗಿದ ಬಾಹುಗಳಲ್ಲಿ ನಡೆದು
ಬೆದರಿದ್ದು ಬದುಕಿಗಲ್ಲ
ಒಡಲ ಹಸಿವಿಗೆ
ಮುಚ್ಚಿದ ದಾರಿಗೆ
ತೊಗಲು ಬಿಚ್ಚಿದ ಕಣ್ಣ ಕುಣಿಕಿಗೆ
ಹಸಿರಾಗದ ನೆಲದ ಬೆನ್ನಿಗೆ (ತೆಪ್ಪ ಹೊರುವ ಹೆಗಲಿಲ್ಲದ ಕೂಸು ಪುಟ-೦೯)

ಬರಡಾದ ಬದುಕಿನಿಂದ ಹೊರಳಿ ಹೊಸ ಬದುಕಿಗೆ ತೆರೆದುಕೊಳ್ಳುವ ಹಂಬಲಿಕೆ ಮಾತ್ರ ರಂಗನಾಥರವರ ಪ್ರತಿ ಕವಿತೆಗಳಲ್ಲಿ ಅನಂತವಾಗಿ ಒಡಮೂಡುತ್ತದೆ. ಕವಿಗೆ ಪ್ರತೀ ಕ್ಷಣವೂ ಪ್ರತೀ ದಿನವೂ ಸುಂದರವಾದ ಬಾಳು ನಮ್ಮದಾಗಬಹುದೆಂದು ಹಾತೊರೆಯುವುದಾಗಿದೆ. ಕಾರ್ಕೋಟಕದಂತಹ ಕಷ್ಟ ಎದೆಯ ಮೇಲಿದ್ದರೂ ಹಸಿದವರು ಬದುಕಿಗಾಗಿ ವಿಮುಖರಾಗಿಲ್ಲ. ಬದುಕು ಹಸಿರಾಗಬೇಕಾದದ್ದು ಆಗದೆ ಜಾತಿಯೆಂಬ ಸಂಕೋಲೆಯ ಸಿಲುಕಿನಲ್ಲಿ ಮುಳುಗಿಸಿದ್ದಕ್ಕೆ, ಅದರ ಬಿಡುಗಡೆಯ ಹಾದಿಗೆ ತಪಸ್ಸಿದ್ದಕ್ಕೆ. ಆಕ್ರೋಶವಿದೆ. ಆದರೂ ಕವಿಗೆ ತುಂಬಾ ಭರವಸೆ “ಬತ್ತಿದ ಬದುಕಿನೆದುರು ಹನಿ ನೀರಾದರೂ ಚಿಮುಕಿಸಿ, ಭಾವದ ಪೈರ ಕಳೆಗಟ್ಟಿಸು ಮುಂದೆ ಮಳೆಬಂದರೂ ಬರಬಹುದು.” (ಕರುಳ ಹಿಂಡುವ ಭಾವದ ನುಡಿಗೆ, ಪುಟ-೭೫) ಈ ಆಶಾವಾದದಿಂದಲೇ ಮುಂದೆ ಸುಂದರ ಬದುಕು ಬರಬಹುದೆಂದು ಕನಸು ಕಾಣುವುದಿದೆ.

ಕಣಕಾಲ ಕಣ್ಣು ಜಗದ ಮಗು
ಬೆತ್ತಲ ಸೇವೆಯಲಿ ಅಂಧನಾದ ದೇವರು
ದೇವದಾಸಿಯರ ಮಡಿಲಲ್ಲಿ ಮುಚ್ಚಿಟ್ಟ ಕೂಸು
ಬಯಲಾಗಿ ನಡೆದು
ಸೆರಗಿನಲಿ ಹೂವಾಗಿ ಅರಳಿದ ಭಾವ. (ಉರಿವ ಕರುಳ ದೀಪ, ಪುಟ-೦೭)

ಬಿದಲೋಟಿ ರಂಗನಾಥ ಅವರು ತಮ್ಮ ಈ ಕವನ ಸಂಕಲನಕ್ಕೆ ಇಟ್ಟಿರುವ ಹೆಸರು ‘ಉರಿವ ಕರುಳ ದೀಪ’. ಇದು ಮೊದಲಿಗೆ ಸಂಕಟವನ್ನು ಹೇಳುತ್ತಲೇ, ಸಂಕಟವನ್ನು ಮುಂದುವರಿಸದೆ ಸುಂದರವಾದ ಬದುಕೆಂಬ ಬೆಳಕಿನೆಡೆಗೆ ಕೊಂಡೊಯ್ಯುವ ದೀಪವಾಗಬೇಕೆಂಬ ಕನಸನ್ನು ಕಾಣುವ ಹಂಬಲಿಕೆ ಕವಿತೆಗಳದಾಗಿದೆ. ಇದುವರೆಗೂ ಅನುಭವಿಸಿದ ನೋವುಗಳು ಅನಂತ. ಹಿಂದಿನಿಂದಲೂ ಕಣ್ಣು ಅರಿಯಲಾಗದ್ದು, ಕರುಳು ಅರಿಯಲಾಗಲಿಲ್ಲವೇ! ಮಮತೆಯ ಕಾರುಣ್ಯವನ್ನು ಬಿತ್ತಬೇಕಾದವರು ಬಿರುಸಾಗಿ ಮುನ್ನೆಡೆಯದೆ ಕುಂದಿದರೆಂಬ ನೋವಿನ ಭಾವ ಇಲ್ಲಿ ಕಾಡದೆಯಿರದು.

ಉರಿಯುವ ಬತ್ತಿಯನು ಕಳಚುವ
ಕರಗಳ ನಡೆಯನು ಕಂಡು
ಕರುಳ ನುಡಿಗಳ ಸಂಕಟವನು
ಸರಿಸಿ ನೋಡಿ ಸುರಿವ ಬೆಳಕಿನ ನೆರಳು….
ಉರಿವ ಕರುಳ ದೀಪ
ಊರಗಲ ನಾಲಿಗೆ ಚಾಚಿ
ಕತ್ತಲೆದೆಯ ಮೈಯಲ್ಲಿನ ಮೈಲಿಗೆ ಸುಟ್ಟು
ನೆಲದ ನಡಿಗೆಯ ಮೇಲೆ
ಸಮತೆಯ ಹೂವಿನ ಹೆಜ್ಜೆ. (ಉರಿವ ಕರುಳ ದೀಪ ಪುಟ-೦೭)

ನಿಕೃಷ್ಟತೆ ಬದುಕಿನಲ್ಲಿ ಸಾಗುವುದು ಎಷ್ಟು ದುಸ್ತರದ ಕೆಲಸ. ಉರಿಯ ತಾಪದ ಉರಿಬಿಸಿಲಿಗೆ ಮೈಯೊಡ್ಡಿ ಬರಡಾಗುವಂತೆ ನಡೆಸಿಕೊಂಡ ಸಮುದಾಯದಿಂದ ಬಿಡುಗಡೆ ಬಯಸುತ್ತದೆ ಕವಿಯ ಭಾವ. ಇತರರ ನೋವೇ ತನ್ನ ನೋವೆಂದು ಭಾವಿಸುವ ಮನಸ್ಸು ಎಂಥ ಮಾನವೀಯವಾದುದು. ಈ ಕವಿತೆಯ ಮೂಲಕವೇ ಸಮತೆಯ ಸಾರುವ, ಜನಪರ, ಜೀವಪರವಾಗಿ ನಿಲ್ಲುವ ಜೀವಕಾರುಣ್ಯದ ಬದುಕ ಬಯಸುವ ಕವಿಯ ಆರ್ದ್ರತೆ ಮೆಚ್ಚುವಂತದ್ದು.

ಕಣ್ಣಿಲ್ಲದ ರಾತ್ರಿಗಳಿಗೆ
ಕಣ್ಣು ತೊಡಿಸಲು ಕಾದಾಟ
ನಂಜಾದವರ ಎದೆಗಳಲ್ಲಿ
ನೋವನು ಮಾಗಿಸುವ ಸಾಹಸ
ಹೊತ್ತನು ನಾದು
ಕಾದಕಣ್ಣಲ್ಲಿ ಮಿಂಚು ಸತ್ತು
ಪಾಪದ ಮೂಟೆ ಇಳಿಸಿ
ಸೋತ ರಟ್ಟೆಗಳಲ್ಲಿ
ಮೂಡುವ ಬೆಳಂದಿಗಳ ನೋಡಲು
ಇನ್ನು ಎಷ್ಟು ದಿನ ಬೇಕೋ (ಇನ್ನ ಎಷ್ಟು ದಿನ ಬೇಕೋ ಪುಟ-೩೧)

ಮನುಷ್ಯ ಕುಲಕೆ ಒಳ್ಳೆಯದನ್ನು ಹೊತ್ತು ತರುವ ಹಾದಿಗಾಗಿ ಕಾಯುವ ಮನಸ್ಸು ಬಹಳ ಭಾರ. ಬರುವವರು ಬರದೇ ಇದ್ದಾಗ ಹಾದಿ ಇನ್ನು ದುಸ್ತರವಾಗಿ ಕಾಡುತ್ತದೆ. ಕಾದ ಭಾವಕ್ಕೆ ಕಾಯುವುದೇ ದೊಡ್ಡ ನೋವು. ಹಿಂದೆ ಒಂದು ಆಶಾಭಾವವಿತ್ತು ಕಾದರೂ ಉಪಯೋಗವಾಗಬಹುದೆಂದು. ಆದರೆ ಈಗ ಯಾವುದೇ ಭರವಸೆಯಿಲ್ಲದಾಗಿದೆ. ಕಾರುಣ್ಯದ ಬೆಳಕಿಲ್ಲದ ಹಾದಿ ನಡೆದರೂ ಸುಖವಿಲ್ಲವೆಂದು ಅನಿಸಿದಾಗ ಮೌನದ ಕತ್ತಲು ಆವರಿಸುತ್ತದೆ. ಬದುಕೇ ನಿಂತ ನೀರಾಗುತ್ತದೆ.

ಹಸಿವು ಕಿವುಚುತ್ತಿದೆ
ಮಕ್ಕಳು ಆಳುವ ಸದ್ದು ಕಿವಿಯ ತುಂಬಿದೆ
ಒಂದು ಚೌಲಿಯೂ ಮಾರಲಿಲ್ಲ
ಬಂದ ದಾರಿಗೆ ಸುಂಕವಿಲ್ಲ
ಚೌಲಿ ಮಾರುವ ಹೆಂಗಸಿನ ಕಾಲುಗಳಲ್ಲಿ ಶಕ್ತಿಯಿಲ್ಲ
ಸುಡುವ ಹಸಿವಿಗೆ ತಣ್ಣೀರ ಬಟ್ಟೆ (ಸುಂಕವಿಲ್ಲದ ದಾರಿ, ಪುಟ-೩೯)

ಅಲಕ್ಷಿತ ಸಮುದಾಯ ತಮ್ಮ ವೃತ್ತಿಗಳಲ್ಲಿ ಮುಂದುವರೆಯಲು ಜಾಗತೀಕರಣವೆಂಬ ವಿರಾಡ್ರೂಪ ಶಕ್ತಿಗಳು ಬದುಕನ್ನು ಕಿತ್ತುಕೊಂಡಿವೆಂಬ ನೋವು ಇದನ್ನತವರಿಗೆ ಹೃದಯ ಹಿಂಡುತ್ತದೆ. ಹಸಿದ ತುತ್ತಿನ ಚೀಲ ತುಂಬಿಸಲಷ್ಟೇ ಬೀದಿಬೀದಿ ಅಲೆಯುವ ಚೌಲಿ ಮಾರುವ ಹೆಂಗಸಿನ ಸ್ಥಿತಿಯನ್ನು ವರ್ಣಿಸಲಸದಳ. ಯಾವ ಹೆಂಗಸಿನ ತಲೆಯ ಕೂದಲೂ ಮಾರುದ್ದವಿದ್ದಾಗ ಚೌಲಿ ಬಯಸುವವರು ಕಂಡುಬರುವುದಿಲ್ಲ. ಇದು ಮುಂದುವರೆದ ಸಮುದಾಯಕ್ಕೆ ಇಂತಹ ವಿಷಯಗಳು ಗೌಣ ಮತ್ತು ಮಾರುದ್ದ ನಿಲ್ಲುತ್ತವೆ. ನೊಂದವರು ಮಾತ್ರ ಇನ್ನೊಬ್ಬರ ನೋವನ್ನು ಅರಿಯಬಲ್ಲರು. ಅದೇ ರೀತಿ ತನ್ನಟ್ಟಿಯ ಅಳವಂಡಗಳನ್ನು ಅನುಭವಿಸಿದ ಕವಿಗೆ ಹೀಗೆ ನೋವು ಅನುಭವಿಸುವವರು ಹತ್ತಿರವಾಗುತ್ತಾರೆ.

ಕವಿಗೆ ಅಮಾಯಕರ ಹಸಿವಿನ ಆರ್ಭಟದ ಆರ್ದ್ರತೆ ಆರ್ಥವಾಗಿದೆ. ಇದೇ ತೆರನಾದ ಒಂದು ಕಥನವು ಬಂಗಾಳಿ ಕವಿಯಿತ್ರಿ ಮಹಾಶ್ವೇತಾದೇವಿಯವರ ‘ರುಡಾಲಿ’ ನಾಟಕದಲ್ಲಿ ಕಂಡುಬರುತ್ತದೆ, ‘ರುಡಾಲಿ’ ಜನಾಂಗ ಸತ್ತವರ ಮನೆಯ ಮುಂದೆ ಅಳುವುದು ಅವರ ವೃತ್ತಿ. ಮಾಲೀಕ ಕೊಟ್ಟ ಹಣದಲ್ಲೆ ಬದುಕು ಸಾಗುವುದು. ಊರಲ್ಲಿ ಸಾವೇ ಇಲ್ಲವಾದಾಗ ಅದನ್ನೇ ನಂಬಿದ ಸಮುದಾಯದ ಬದುಕು ಮೂರಾಬಟ್ಟೆಯಾಗುತ್ತದೆ. ಅಂತಹದ್ದೇ ಚಿತ್ರಣ ‘ಚೌಲಿ’ ಮಾರುವ ಸಮುದಾಯದ್ದಾಗಿದೆ. ಇಂತಹ ನಿರ್ಗತಿಗರ ಬದುಕು ಏರಿಳಿತವಿಲ್ಲದೆ ಹಸನಾಗಬೇಕೆಂಬ ಹಂಬಲಿಕೆ ಕವಿಯದಾಗಿದೆ.

ಕವಿತೆಯ ಸ್ಪರ್ಶತಾಕಿ
ನನ್ನುಸಿರ ನೋವು
ಕವಿತೆಯ ಬೆನ್ನ ಭಿತ್ತಿಯಲಿ ಚಿತ್ರ ಬರೆದು
ಅವಳು ಬಿಟ್ಟೋದ ಕನಸುಗಳ
ಆಕಾರವನು ಬಿಡಿಸಿ
ಕಾಯುವೆನು ಗೋರಿಯ ಮೇಲೆ. (ಬೆನ್ನ ಭಿತ್ತಿಯ ಚಿತ್ರ, ಪುಟ-೪೦)

ಕವಿತೆಯೆಂದರೆ
ಖಾಲಿದೋಣಿಯ ಪಯಣ
ಸಿಕ್ಕಿ ಸೋಲುವ ಮಿಂಚು
ತಾಯೆ ಕರುಳ ಬೇನೆ
ಆಗ ತಾನೆ ಬಿದ್ದ ಮಣ್ಣ ಮಳೆಯ ವಾಸನೆ… … …

ಕವಿತೆಯೆಂದರೆ
ತನ್ಮಯತೆಯಲಿ ಅರಳುವ ಗುಲಾಬಿ
ಹೆಣ್ಣಿನ ಹೊಕ್ಕಳ ಕಾವು
ಭಾವ ಸುಲಿದು
ಬಟ್ಟೆ ನೇಯ್ಯುವ ಸೂಜಿ ದಾರ
ಕತ್ತಲೆಯ ಶತ್ರು
ಬದುಕಿನುದ್ದಕ್ಕೂ ಮುಗಿಯದ ಹಾದಿ (ಕವಿತೆಯೆಂದರೆ, ಪುಟ-೩೫)

ಕವಿತೆಯೆಂದರೆ ತನ್ಮಯತೆಯ ಧ್ಯಾನಸ್ಥ ನೆಲೆ. ಅದರಲ್ಲಿ ಬೆಳಗು, ಬೆವರು, ಉಸಿರು ಮಿಂಚು, ಕರುಳಬೇನೆ, ಮಣ್ಣ ಮಳೆಯ ವಾಸನೆ, ಕರುಳ ತಬ್ಬುವ ವಾಂಚೆ, ಹೆಣ್ಣಿನ ಹೊಕ್ಕಳ ಕಾವು, ಬದುಕಿನುದ್ದಕ್ಕೂ ಮುಗಿಯದ ಹಾದಿ -ಹೀಗೆ ಎಲ್ಲವನ್ನೂ ತನ್ನೊಳಗೆ ತಬ್ಬುವ, ಅಡಗಿಸಿಟ್ಟುಕೊಳ್ಳುವ ಶಕ್ತಿ ಕವಿತೆಗಿದೆ. ಹಾಗೂ ಕವಿತೆಯಿಂದ ದೂರವುಳಿಯುವಂತದ್ದು, ಗೌಣವಾಗುವಂತದ್ದು, ಮರೆಯಾಗಿ ನಿಲ್ಲುವಂತದ್ದು ಯಾವುದೂ ಇಲ್ಲ. ರಂಗನಾಥರವರೇ ಕವಿನುಡಿಯಲ್ಲಿ ಹೇಳಿಕೊಂಡಂತೆ “ಕಡಿವಾಣವಿಲ್ಲದ ನಿರಂತರ ಧ್ಯಾನಸ್ಥ ಸ್ಖಲನ ಕಾವ್ಯವೆಂದು ಭಾವಿಸಿಕೊಂಡವನು ನಾನು. ಅನಿವಾರ್ಯತೆಗೆ ಕಾವ್ಯ ಬರೆಯಬೇಕೆಂದೇ ಬರೆದವನಲ್ಲ.

ಹಸಿವಿನ ಸಂಕಟ ಬದುಕಿನ ಬಿಡಿಸಲಾಗದ ಗೋಜಲು ಕಾವ್ಯದ ಹೆಗಲೇರಿ ಕೂತು ಬರೆಸಿತು.. ಬಟಾಬಯಲ ನೆಲದಲ್ಲಿ ಗರಿಕೆ ಕೊನರಿಸುವುದು. ಕನ್ನೊಳಗೆ ತಾನು ಅದೃಶ್ಯವಾಗುವ ಕಲೆ-ಕಾವ್ಯ. ಅದೊಂದು ತಪ್ಪಸ್ಸಿಗೆ ಕೂತು ಗಿಟ್ಟಿಸಿಕೊಂಡ ಸಿದ್ಧಿಯೇ ಸರಿ.” ಕವಿಗೆ ಲೋಕದ ಅನುಭವ ಅಡಿಪಾಯವಾದರೆ ಕಾವ್ಯದ ಶಕ್ತಿ ದಿಟವಾದ ನೆಲೆಯಲ್ಲಿ ಹೊರಹೊಮ್ಮುತ್ತದೆ. ರಂಗನಾಥರವರ ಅನುಭವ “ಕವಿತೆಯೆಂದರೆ ಪದಗಳ ಉಸಿರು ನೆಲದ ನಡಿಗೆ ಮಗುವಿನ ಮುಗ್ಧ ಅಳು” ಈ ಬಟಾಬಯಲ ನೆಲದಲ್ಲಿ ನೆಲಕ್ಕಂಟಿದ ಮಾತುಗಳಲ್ಲಿ ತನ್ನದೇ ಭವ್ಯ ಪದರಾಶಿಯಿಂದ ತಪಸ್ಸಿಗೆ ಕುಳಿತು ಗಳಿಸಿಕೊಂಡಿರುವ ಸಿದ್ಧಿ ಇವರ ಕವಿತೆಗಳಲ್ಲಿ ಅಡಗಿದೆ.

ಕಾವ್ಯ ಮಾನವ ಬದುಕಿನ ಕನ್ನಡಿ, ಬದುಕನ್ನೆ ಹೊದ್ದು ಯಾವಾಗಲೂ ಮಲಗುವುದು ಕಾವ್ಯ. ಮಾನವ ಬದುಕಿನ ಅನಂತತೆಯ ನಿರ್ಮಾಣವೇ ಈ ಕಾವ್ಯದ ಗುರಿ. ಬದುಕಿನ ಬಹುಮುಖೀ ನೆಲೆಯನ್ನು ಕಾವ್ಯ ಲೋಕದಲ್ಲಿ ಸದಾ ಅನಾವರಣಗೊಳ್ಳುತ್ತದೆ. ಎಲ್ಲಿ ಅಸಮಾನತೆಯ ಕ್ರೌರ್ಯ ದಾಂಗುಡಿಯಿಡುತ್ತದೋ ಅಲ್ಲಿ ಕಾವ್ಯ ಅದರ ವಿರುದ್ಧ ದನಿಯೆತ್ತುತ್ತದೆ. ಕವಿ ತನ್ನ ಅಸ್ಮಿತೆಯೊಂದಿಗೆ ಸಮಾಜದೊಟ್ಟಿಗೆ ಮುಖಾಮುಖಿಯಾಗಿ ಜನಪರವಾಗುವ, ಜೀವಪರವಾಗುವ ಹಕ್ಕುಗಳನ್ನು ಮಂಡಿಸುತ್ತಾನೆ. ಅದೇ ನಿಟ್ಟಿನಲ್ಲಿ ರಂಗನಾಥರ ಕಾವ್ಯ ಶೋಷಿತ ಪರ ದನಿಯಾಗುತ್ತಲೇ ಅವರ ಪರವಾಗಿ ಹಕ್ಕುಗಳನ್ನು ಪ್ರತಿಪಾದಿಸುತ್ತ ನೆಮ್ಮದಿಯ ಬದುಕಿಗೆ ಹಾತೋರೆಯುತ್ತದೆ.

ಉರಿವ ದೀಪವು ಆರುವ ಆತಂಕ
ಎಣ್ಣೆಗೆ ಬತ್ತಿ ಹೊಸೆಯಬೇಕು
ಕತ್ತಲೆಯ ದಾರಿಗೆ
ಬುಡ್ಡಿ ಬೆಳಕನ್ನಾದರೂ ಕೊಡುವ ಭರವಸೆ (ತನ್ನದಲ್ಲದ ಹೆಜ್ಜೆಯ ಮೇಲೆ.. ಪುಟ-೬೩)

ಎಷ್ಟೊಂದು ಗಾಯಗಳಿವೆ
ಸಮಾಜದ ಮೈಯಲ್ಲಿ
ಅಲೆದ ಮನಸುಗಳು
ಪ್ರತಿಮೆಗಳಾದರೂ
ವಾಸಿಯಾಗಲೇ ಇಲ್ಲ ಮೈಗಂಟಿದ ಗಾಯಗಳು
ಕೀವು ರಕ್ತದ ವಾಸನೆ
ಗಾಳಿಯೊಂದಿಗೆ ಬೆರೆತು ಅಲೆಯುತ್ತಿವೆ
ಮೂಗು ಮುಚ್ಚಿಕೊಳ್ಳುವ ಕೈಗಳ್ಯಾವೂ
ಮದ್ದನ್ನು ಹುಡುಕುತಿಲ್ಲ. (ಮುಲಾಮು ಹುಡುಕುತ್ತ ಪುಟ-೪೫)

ಕವಿಯಾದವನು ಯಾವಾಗಲೂ ಸಮಾಜದ ಓರೆಕೋರೆಗಳನ್ನು ತಿದ್ದುವ ಪ್ರಯತ್ನ ಮಾಡುತ್ತಾನೆ. ವಾಸಿಯಾಗದಿದ್ದರೂ ಪ್ರಯತ್ನ ಮಾಡದೆಯಿರಲಾರನು. ದೋಸೆ ತೂತಾದರೂ ಪರವಾಗಿಲ್ಲ, ಕಾವಲಿಯೇ ತೂತಾದರೆ ಹೇಗೆ? ಸರಿಪಡಿಸಲು ಸಾಧ್ಯವಿಲ್ಲವೆಂಬ ಆತಂಕದಲ್ಲಿದ್ದರೂ, ಸಮಾಜದ ಸಮಸ್ಥಿತಿಗೆ ಹುಡುಕುತ್ತಲೇ ಮುಂದುವರಿಯುತ್ತಾನೆ. ಸಮಾಜದ ಶುಶ್ರೂಷೆಗಾಗಿ ಮಹಾನ್ ಚೇತನಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಿದರೂ ಅದು ಸಂಪೂರ್ಣವಾಗಿ ನಡೆದಂತೆ ಕಾಣುತ್ತಿಲ್ಲ. ಮತ್ತೆ ಮತ್ತೆ ಅದನ್ನು ಸರಿದಾರಿಗೆ ತರುವವರು ಈ ಸಮಾಜದಲ್ಲಿ ಯಾರಾದರೂ ಹುಟ್ಟಿ ಬರುವರಾ! ಎಂಬ ಆಲೋಚನೆಯು ಕವಿತೆಗಳಲ್ಲಿದೆ. ಕಟ್ಟಕಡೆಯ ನೆಲೆಗೆ ತಳ್ಳಲ್ಪಟ್ಟವರನ್ನು ಮುಖ್ಯವಾಹಿನಿಯ ಹಾದಿಗೆ ತರುವವರು ಮಾತ್ರ ಸಿಗುತ್ತಿಲ್ಲವೆಂಬ ಕೊರಗು ಕವಿಗೆ ಕಾಡಿದೆ.

ಕಿಟಕಿಯಿಲ್ಲ
ಕದವಿಕ್ಕಿ ಬೀಗ ಜಡಿದಿದ್ದಾರೆ
ಕೂಗುತ್ತಲೇ ಇದ್ದೇನೆ
ಒಂದೇ ಒಂದು ಸಾಸಿವೆ ಕಾಳಿನ ಗಾತ್ರದ ಬೆಳಕಿಗೆ…

ಅಗೋ
ಯಾರೋ ಕದ ತಟ್ಟುವ ಸದ್ದು!
ಈ ಸಪ್ಪಟ ಸರಿರಾತ್ರಿ
ತಟ್ಟಿ ತಟ್ಟಿ ಸುಮ್ಮನಾದರು
ಸುಸ್ತಾದರು
ಅವರೇ……….
ಬುದ್ಧ ಬಸವ ಭೀಮರಿರಬೇಕು
ಮೌಢ್ಯದ ಕದ ತೆರೆಯಲೇ ಇಲ್ಲ
ಜಾತಿಗೆ ಕವಿದ ಕತ್ತಲು ತಿಳಿಯಾಗಲೇ ಇಲ್ಲ
ಅವರು ಒಡೆದ ಹೊಡೆತಕ್ಕೆ
ಕದ ಸೀಳುಬಿಟ್ಟು
ಒಂಚೂರು ಬೆಳಕಿನ ಹೆಜ್ಜೆ ಕಂಡಂತಿದೆ
ಬೊಗಸೆಯಷ್ಟು ಗಾಳಿಯ ಆಗಮನವಿದೆ…

ಕತ್ತಲೆಗೆ ಎಸೆದ ಕೈಗಳು
ಬೆಳಕು ಕಾಣಲೆಂದು
ಬೇಡಿಕೊಳ್ಳುತ್ತಲೇ ಇದ್ದೇನೆ. (ಬೆಳಕಿನ ಹಸಿವು, ಪುಟ-೫೧)

‘ಬೆಳಕಿನ ಹಸಿವು’ ಈ ಕವಿತೆಯ ಶೀರ್ಷಿಕೆಯೇ ತುಂಬಾ ಅರ್ಥಪೂರ್ಣವಾದುದು. ‘ಬೆಳಕು’ ಬದುಕಿಗೆ ಎಷ್ಟು ಅಗತ್ಯ. ಬುದ್ಧನೂ ಕತ್ತಲೆಂಬ ಬೆಳಕಿನೊಳಗೆ ಮಂಪರುಗೊಂಡು ನಿಸ್ತೇಜನಾಗಿದ್ದ. ನಿಜದ ಬೆಳಕಿನೆಡೆಗೆ ಆತ ತುಡಿತಗೊಂಡು ಜಾಗೃತವಾದ ಕೂಡಲೇ ಜ್ಞಾನದ ದಾಹವೆಂಬ ಬೆಳಕಿನ ಬಟ್ಟಲಿಗೆ ಹಾರಿದ. ಹಾಗೆ ಹಾರುವ ಬೆಳಕಿನ ಹಸಿವಿನ ಹಂಬಲವಿರುವ ಕೋಟಿ ಕೋಟಿ ಮನಸ್ಸುಗಳು ತುಡಿತ ಈಗಲೂ ಹೊಂದಿವೆ ಎಂದು ಕವಿ ರಂಗನಾಥ ಅವರ ಆಶಯ. ‘ಒಂದೇ ಒಂದು ಸಾಸಿವೆ ಕಾಳಿನ ಗಾತ್ರದ ಬೆಳಕಿಗೆ…’ ಕಡೆಗೆ ನಡೆಯಲೇಬೇಕೆಂಬ ಹಾತೊರೆಯುಕೆ ಮಾತ್ರ ಪರಂಪರೆಯಿಂದಲೂ ನಿಂತಿಲ್ಲ.

ಸಮತೂಕದ ಬದುಕು ಬೇಕೆಂಬ ಹಾತೊರೆಯುವಿಕೆ ಇನ್ನೂ ಕಳೆದುಹೋಗಿಲ್ಲ. ಆದರೂ ಜಡಗಟ್ಟಿದ ಈ ಸಮಾಜದಲ್ಲಿ ಈಗಲೂ ಬದುಕು ಸುಂದರವಾಗುತ್ತಿಲ್ಲ. ಕಾಲಕಾಲಕ್ಕೆ ಬದುಕು ಸುಂದರವಾಗಿಸಲು ಬಂದ ಬುದ್ಧ, ಬಸವ, ಅಂಬೇಡ್ಕರರು ಹಠತೊಟ್ಟವರಂತೆ ನಿಂತರೂ ಸಮಸಮಾಜ ಪೂರ್ಣವಾಗಲು ಬಿಡಲೇ ಇಲ್ಲ. ಸಮಬಾಳನ್ನು ಸಮಪಾಲನ್ನು ಇಡೀ ಸಮಾಜ ಅನುಭವಿಸುವಂತಾಗಬೇಕೆಂದು ಹಾತೊರೆದ ಕಾರುಣ್ಯದ ಜೀವಿಗಳಿಗೆ ಮುನ್ನೆಡೆಯಲು ದಾರಿ ಮಸುಕಾಗಿಸಿದರು. ಅವರ ತಾತ್ವಿಕ ಹಾದಿ ಹಿಡಿದು ಬೆಳಕಿಗಾಗಿ ಮುನ್ನಡೆಯುವ ಯುವ ಮನಸ್ಸುಗಳಿಗೆ ಕಾಣದ ಕೈಗಳಿಂದ ವಿರೋಧಗಳೇ ಎದುರಾಗುತ್ತಿವೆ. ಆದರೂ ದನಿಯೆತ್ತುವವರು ಕಡಿಮೆಯಾಗುತ್ತಿಲ್ಲವೆಂಬ ಭರವಸೆ ಮಾತ್ರ ರಂಗನಾಥರ ಕವಿತೆಗಳ ಮೂಲಕ ಬಲವಾಗಿದೆ.

ಜಾತಿ ಮೌಢ್ಯವೆಂಬ ಅಂಧಕಾರದಲ್ಲಿ ಮುಳುಗಿದವರಿಗೆ ತಿಳುವಳಿಕೆ ಮಾಡಿಸುವ ಪ್ರಯತ್ನವಾದರೂ ಕವಿದ ಕತ್ತಲು ತಿಳಿಯಾಗಲಿಲ್ಲ. ಆಗಿದೆಂದು ಯಾರೇಳಿದರೂ ಆ ಕೂಪದಿಂದ ಮೇಲೇಳಲೇ ಇಲ್ಲ. ವಿಜ್ಞಾನ-ತಂತ್ರಜ್ಞಾನಗಳು ನಮ್ಮನ್ನು ಹೊಸದಿಕ್ಕಿಗೆ ಕೊಂಡೊಯ್ಯುತ್ತಿವೆAದು ಮನುಷ್ಯ ಬೀಗಿದರೂ ತನ್ನ ಜಾತಿಯ ಕೊಳಕೆಂಬ ಭಾವವನ್ನು ಬಿಡುತ್ತಿಲ್ಲ. ಇದರಿಂದ ಅಂಧಕಾರದೊಳಗೆ ಮತ್ತೆ ಮತ್ತೆ ಮುಳುಗುತ್ತಿದ್ದಾನೆ. ಮೇಲೇಳೊಲ್ಲದೆ ಹೆಣಗುತ್ತಿದ್ದಾನೆ.

ಮಣ್ಣು ಮಸಣವಲ್ಲ
ಅದು ಹಸಿವು ನೀಗಿಸುವ ತಾಯಿ
ಬಿರಿದ ಮನಸುಗಳನು ತ್ಯಾಪೆ ಹಾಕಿ
ಬುಟ್ಟಿ ಹೊತ್ತ ಬಡ ಮನಸ್ಸುಗಳು

ಹೊಕ್ಕಳ ಬಳ್ಳಿಯ ನೋವು
ಎದೆ ಬಿರಿದು ಹಾಡಾಗುತ್ತಿದೆ
ಪ್ರೀತಿ ಮಾಡಿದ ಮಣ್ಣು
ಎಂದೂ ಬಂಜೆಯೆಲ್ಲ
ಮಸಣವಲ್ಲ ಅದು
ಹೆಣ್ಣು ಕಣ್ಣಾಗುವ ಬಿಂದು (ಬದುಕಿಗೆ ಬಣ್ಣ ಹಚ್ಚುವ ದೇವರು, ಪುಟ-೫೭)

ಸಿಕ್ಕಿರುವ ಬದುಕು ಕಮರಿತೆಂಬ ಭಯ. ಬದುಕು ಸುಂದರ ಹಾದಿಯನ್ನು ಹಾಗೆಯೋ ಉಳಿಸಿಕೊಳ್ಳುವ ಧಾವಂತ. ಬರಹ ಬದುಕನ್ನು ಬುದ್ದಿಯ ಬೆಳಕ ಮೂಲಕವಾದರೂ ಕತ್ತಲನ್ನು ಓಡಿಸುವ ಛಲ. ಕವಿಯ ಪ್ರತಿ ಪದ್ಯವೂ ಬದುಕಿನ ಸುಂದರತೆಯನ್ನು ಹಾದಿಯ ಸುಗಮತೆಯನ್ನು ಬಯಸುತ್ತದೆ.

ಜಾತಿ ಸೋಂಕನು ಜಾಡಿಸಿ
ಬಿದ್ದ ಕಲ್ಲು ಮುಳ್ಳುಗಳು ಸರಿಸಿ
ಸಮತೆಯ ಬೀಜ ಬಿತ್ತಿ
ನೊಂದ ಕೊರಳಿಗೆ ದನಿಯಾಗಿ
ನಡೆದೂ-ನಡೆದೆ
ಬೆತ್ತಲಲ್ಲಿ ಬೆತ್ತಲಾಗಿ.. (ಬೆತ್ತಲಾಗಿ ಪುಟ-೬೯)

ಮಾನವ ಬೆಳೆದಂತೆ ಮತ್ತೆ ಮತ್ತೆ ಕುಬ್ಜನಾಗುತ್ತಿದ್ದಾನೆ. ಸಣ್ಣತನಗಳ ಸಂಕೋಲೆಯಿಂದ ಬಿಡಿಸಿಕೊಳ್ಳದೆ ಅಲ್ಲಿಯೇ ಹೊಲಸೆಬ್ಬಿಸಿಕೊಂಡಿದ್ದಾನೆ. ಸಮಾಜವನ್ನು ಜಾತಿಯೆಂಬ ಕೂಪದೊಳಗೆ ಮತ್ತೆ ಮತ್ತೆ ಮುಳುಗಿಸುತ್ತಿದ್ದಾನೆ. ಪಂಪನಂಥವರು ‘ಮನುಷ್ಯ ಕುಲಂ ತಾನೊಂದೇ ವಲಂ’ ಎಂದರೂ, ಬಸವಣ್ಣನಂತವರು ‘ಕುಲವು ಆವಂದಿರ ಕುಲವೇನು?’ ಎಂದು ಪ್ರಶ್ನಿಸಿದರೂ, ಸರ್ವಜ್ಞನಂಥವರು ‘ಜಾತಿಹೀನನ ಮನೆಯಲ್ಲಿ ಜ್ಯೋತಿ ಹೀನವೇ’ ಎಂದರೂ, ಕನಕದಾಸರು ‘ಕುಲ ಕುಲವೆಂದು ಹೊಡೆದಾಡದಿರಿ’ಯೆಂದರೂ, ಕುವೆಂಪು ವಿಶ್ವಮಾನವತೆಯ ನೆಲೆಯಲ್ಲಿ ಬದುಕು ಎಲ್ಲರಿಗೂ ದೊರೆಯಲಿಯೆಂದು ಎಷ್ಟೇ ಹೇಳಿದ ಮಾತುಗಳು ನಮ್ಮಾಳದ ಹೃದಯಕ್ಕೆ ತಟ್ಟಿಲ್ಲಾ, ತಟ್ಟುತ್ತಿಲ್ಲ. ಮನುಷ್ಯತ್ವ ಬಲಿತವಾಗುತ್ತಿಲ್ಲ. ಇಂದು ಜಾತಿ ಬಲಿತವಾಗುತ್ತಿದೆ, ಬಲಿತವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಇದು ಅಮಾನವೀಯ.

ಬಯಲಾಗುವ ನಿದ್ದೆಗೆ
ಮನಸುಗಳು ಸೋತು ಶರಣಾಗಿದೆ
ಅಲ್ಲೆಲ್ಲೋ ಅಜ್ಜನೊಬ್ಬನ ನೆಲವಿಡಿದ ಕೆಮ್ಮು
ಮಗು ಆಳುವ ಸದ್ದು
ಸೆಕ್ಯೂರಿಟಿಯ ಸಿಳ್ಳೆಯ ಶಬ್ದ
ನರಳಿ ನೆಲವಾಗುವ
ಮಹಿಳೆಯ ಆರ್ತನಾದದ ಸುಖ. (ಗೂಡು ಕಟ್ಟಿದ ನೋವು, ಪುಟ-೭೧)

ಉಳ್ಳವರಿಗಾಗಿ ಮಾತ್ರ ಬದುಕು. ಇಲ್ಲದವರ ಬದುಕು ಮೂರಾಬಟ್ಟೆಯಾಗಿ ಆರ್ತನಾದವಾಗಿದೆ. ನೆಮ್ಮದಿಯಿಲ್ಲದೆ ನೋವಿನಿಂದ ಸಾಗುವುದೇ ಅಸಹಾಯಕರ ಸ್ಥಿತಿಯಾಗಿದೆ. ದಲಿತರ, ರೈತರ, ಹೆಣ್ಣು ಮಕ್ಕಳ, ಅಸಹಾಯಕರ, ಬಡವರ ಬದುಕನ್ನು ಬೀದಿಗೆ ಎಸೆಯಲಾಗಿದೆ. ಸರಿದಾರಿಗೆ ಬರಲು ಅವರೆಲ್ಲರೂ ಹೆಣಗುತ್ತಿದ್ದರೆ, ಇದನ್ನು ನೋಡಿ ಉಳ್ಳವರು ಗಹಗಹಿಸಿ ನಗುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಷಯಗಳನ್ನು ರಂಗನಾಥ್ ಗ್ರಹಿಸಿ, ಕಾವ್ಯವನ್ನು ಕಟ್ಟುವ ಸೃಜನಶೀಲ ಮನಸ್ಸು ಮಾತ್ರ ಹದಗೊಂಡು ಕೆಲಸ ಮಾಡಿದೆ. ಕವಿ ‘ಗೂಡು ಕಟ್ಟಿದ ನೋವು’ ಕವಿತೆಯ ಮೂಲಕ ಅಬಲರ ದನಿಯಾಗುತ್ತಲೇ ಸಾಮಾಜಿಕ ಬದ್ಧತೆಯನ್ನು ಮೆರೆಯುತ್ತಾರೆ.

ಬದುಕುವ ಜೀವದ ನಾಡಿಮಿಡಿತ ಸದ್ದು
ಮುಚ್ಚಿದ ದಾರಿಗಳು ತೆರೆದುಕೊಳ್ಳುವ ಪರಿ
ಬೆಳಕಿನ ಬೆನ್ನಾಡುವ ಸೋಜಿಗ (ಭಯವಿಲ್ಲದ ಬಯಲು ಪುಟ-೭೫)

ಬದುಕನ್ನು ಅರಸುವ ತುಡಿತ ಸದಾ ಕಾಡುತ್ತದೆ. ಬದುಕಿಗಾಗಿ ಹಾತೊರೆಯುತ್ತದೆ ಮನಸ್ಸು. ಬದುಕಿಲ್ಲದ ದಾರಿ ದಾರಿಯಲ್ಲ. ಬದುಕಿಗಾಗಿ ಹೋರಾಟ ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ. ಅದು ಸಿರಿವಂತರು ಕಿತ್ತುಕೊಂಡ ದಾರಿ. ಅವರಿಂದ ಮುಕ್ತಗೊಂಡ ದಾರಿ ಬೇಕೆನ್ನುವ ಹಂಬಲವನ್ನು, ಭಯವಿಲ್ಲದ ಮುಕ್ತ ಬಯಲು ಬೇಕೆನ್ನುವ ಹಂಬಲಿಕೆ ‘ಭಯವಿಲ್ಲ ಬಯಲು’ ಕವಿತೆಯಲ್ಲಿ ಕಾಣುತ್ತದೆ.

‘ಸಾವಿಗಾಗಿ ಸತ್ತವರಿಲ್ಲ ಬದುಕಿಗಾಗಿ ಸತ್ತವರೇ ಎಲ್ಲಾ’ ಎನ್ನುವಂತೆ ಬದುಕಿನ ದಾರಿ ಕತ್ತಲಾಗಬಾರದು, ಅದು ಸದಾ ತೆರೆದುಕೊಳ್ಳುವ ಪರಿಗಾಗಿ ಆಲೋಚಿಸುವುದೇ ಕವಿಯ ಆಶಯವಾಗಿದೆ.

ಬತ್ತಿದ ಬದುಕಿನೆದುರು
ಹನಿ ನೀರಾದರು ಚಿಮಿಕಿಸಿ
ಭಾವದ ಪೈರ ಕಳೆಗಟ್ಟಿಸು
ಮುಂದೆ ಮಳೆ ಬಂದರೂ ಬರಬಹುದು (ಕರುಳು ಹಿಂಡುವ ಭಾವದ ನುಡಿಗೆ ಪುಟ-೭೫)

ಭರವಸೆಯ ಬದುಕಿನಲ್ಲಿ ಬವಣೆಯಿಂದ ಪಾರಾಗುವ ಮನಸ್ಥಿತಿ ನಿರ್ಮಿಸುವುದೇ ಸಾಹಸದ ಕೆಲಸ. ಇಂದಲ್ಲದಿದ್ದರೂ ನಾಳೆಯೂ, ನಾಳೆಯಲ್ಲದಿದ್ದರೂ ಮುಂದೊಂದು ದಿನ -ಹೀಗೆ ಕರಾಳತೆಯಿಂದ ಸರಿಯುವ ದಿನಗಳನ್ನು ಕನಸೊತ್ತೆ ನಡೆಯಬೇಕು, ಬೆಳಕಿನ ಆಸೆಹೊತ್ತು. ಇಲ್ಲಿ ಕವಿ ಹಲವು ಸಂಕೇತಗಳನ್ನು ಬಳಸಿದರೂ ಭಾವದ ಆಶಯ ಮಾತ್ರ ಬದುಕು ಹಸನಾಗುವುದರ ಕಡೆಗೆ ತುಡಿತ ಹೊತ್ತಿದೆ.

ಕರಾಳ ಕತ್ತಲೆಯಲ್ಲಿ
ಮಚ್ಚು ಕತ್ತಿ ಗುರಾಣಿ ನಡೆದಾಡಬಹುದು
ಆದರೇ
ಮನುಷ್ಯತ್ವ ಎಂದಿಗೂ
ಬೆಳಕಿನ ದಾರಿಯ ಮೇಲೆ ನಡೆಯುವುದು (ಕರುಳು ಹಿಂಡುವ ಭಾವದ ನುಡಿಗೆ ಪುಟ-೭೫)

ಮಾನವೀಯತೆ ಕಮರಿದ ಸ್ಥಳದಲ್ಲಿ ಮನುಷ್ಯತ್ವಕ್ಕೆ ಎಡೆಯಿರುವುದಿಲ್ಲ, ತನ್ನನ್ನೇ ಅರಿಯದ ಮನುಷ್ಯ ಕೊಲ್ಲುವ ಆಯುಧಗಳಿಗೆ ಜೀವತುಂಬಿ ಅಹಿಂಸೆಯೆಂಬ ವಾತಾವರಣದಲ್ಲಿ ಮೇಲುಗೈ ಸಾಧಿಸುತ್ತಿದ್ದಾನೆ. ಅವನ ಕ್ರೌರ್ಯವೇ ತಾಂಡವಾಡುತ್ತದೆ. ಅಲ್ಲಿ ಶಾಂತಿಗೆ ಅವಕಾಶವೇ ಇರುವುದಿಲ್ಲ. ಜಗತ್ತು ತಳಮಳಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಬುದ್ಧ, ಮಹಾವೀರ, ಏಸು, ಬಸವ, ಗಾಂಧಿ, ಅಂಬೇಡ್ಕರರ ತಿಳಿವುಗಳ ಮೂಲಕ ನಮ್ಮ ತಿಳಿಗೇಡಿ ಬುದ್ಧಿಗಳಿಗೆ ಚಿಕಿತ್ಸೆ ಕೊಡಿಸಬೇಕಾಗಿದೆ. ಆ ಮೂಲಕ ಮನುಷ್ಯತ್ವ ಹಾದಿ ತುಳಿಸಲು ಹಾದಿ ಸುಗಮವಾಗಬಹುದೆಂದು ಕವಿ ಹಂಬಲವಾಗಿದೆ.

ನೀನೆ ಕಟ್ಟಿದ ಗೂಡಿನಲ್ಲಿ
ಸೀಮೆ ಮುಕರಿ ನಿನ್ನಾಸೆಗಳ ತಿನ್ನುತ್ತಿವೆ
ನೀನೆ ತೀಡಿದ ಮೂತಿಯಿಂದ ಉದುರಿದ ಆ ನಗುವು
ಬೆವರುವ ತುಟಿಗೆ ಮೆತ್ತಿಕೊಂಡರೂ
ಕಚ್ಚಿಕೊಳ್ಳದ ಬದುಕಿನ ನಡುವೆ ಸೊರಗಿದೆ (ಕೆಂಪು ನಕ್ಷತ್ರದ ಹಾಡು, ಪುಟ-೮೧)

ಈ ಅಧ್ವಾನದ ಕಾಲದಲ್ಲಿ ಜನರ ಬದುಕು ಮೂರಾಬಟ್ಟೆಯಾಗಿದೆ. ತಾವೇ ವಿಧಿಸಿಕೊಂಡ ನಿರ್ಬಂಧದಲ್ಲಿ ಸಿಲುಕಿ ವಿಲವಿಲನೆ ಒದ್ದಾಡುವಂತಾಗಿದೆ. ‘ಬಿಟ್ಟೆನೆಂದರೂ ಬಿಡದೀ ಮಾಯೆ’ಯೆಂಬಂತೆ ಮತ್ತೆ ಮತ್ತೆ ಘೋರ ಸಿಲುಕಿಗೆ ಸಿಲುಕಿ ಬದುಕೇ ದುಸ್ತರವಾಗಿ ಕಳೆದುಹೋಗುತ್ತಿದೆ. ಕಿಂಡಿಯಲ್ಲಾದರೂ ಭರವಸೆಯ ಬದುಕು ದೊರೆಯುತ್ತದೆಯೇನೋ ಧಾವಂತ ಇವರದಾಗಿದೆ.

ಹಸಿವು ಕರೆಯುವ ಸದ್ದಿಗೆ
ಮೈಥುನವೂ ಹೆಣಭಾರವಾಗಿದೆ
ಕೊಡಲಾರದ ಉಕ್ಕೆಯಲಿ ಕರುಣೆ ಸತ್ತು ಬಿದ್ದಿದೆ
ಹರಿದ ಬಟ್ಟೆಯೊಳಗೆ ಕನಸುಗಳು
ಮೂರ್ಚೆ ಹೋಗಿವೆ
ಹನಿ ನೀರೂ ಚಿಮುಕಿಸಲಾರದೆ (ಸೂಜಿಗೂ ಸಿಗದವನ ಹೆಜ್ಜೆ ಗುರುತು, ಪುಟ-೯೪)

ಈ ಕವಿತೆಯ ಸಾಲುಗಳು ಓದುಗರನ್ನು ತುಂಬಾ ಕಾಡುತ್ತವೆ. ಹೌದು ಮತ್ತೆ ಮತ್ತೆ ಮಾನವೀಯತೆ ಸತ್ತು ಬೀಳುತ್ತಿದೆ. ಅದಕ್ಕೆ ಜೀವಕೊಡುವವರು ಇಲ್ಲವಾಗುತ್ತಿದ್ದಾರೆ. ಚಿಂದಿವುಟ್ಟವನು, ಹಸಿದವನು ತನ್ನ ಕನಸುಗಳ ಹಾದಿಯಲ್ಲಿ ಹೋಗಲಾರದಷ್ಟು ನಿಶಕ್ತನಾಗಿದ್ದಾನೆ. ಆದರೂ ಧನಾತ್ಮಕ ನೆಲೆಯಲ್ಲಿ ಯೋಚಿಸುತ್ತಲೇ ಕೊರಗಿನಿಂದ ಕವಿ ಭರವಸೆಯ ಕನಸು ಕಾಣಬೇಕಾಗಿದೆ.

ಬಿದಲೋಟಿ ರಂಗನಾಥ ಅವರು ‘ಉರಿವ ಕರುಳ ದೀಪ’ ಕವನಸಂಕಲನದಲ್ಲಿ ಹೊಸ ತೆರೆನಾದ ಹಾದಿಯನ್ನು ತುಳಿದಿದ್ದಾರೆ. ಯಾವ ಪಂಥದ ಹಿಡಿತದಲ್ಲಿಲ್ಲದೆ ತಾನೇ ಹೊಸ ಪಂಥವನ್ನು ಕಟ್ಟಿಕೊಂಡಿದ್ದಾರೆ. ಎಲ್ಲಾ ಪಂಥಗಳ, ಅಲ್ಲಾ ಕವಿಗಳ ಸಾರವನ್ನು ಅರಗಿಸಿಕೊಂಡು ವಿಭಿನ್ನ ಶೈಲಿಯ ಹಾದಿಯಲ್ಲಿ ಮುನ್ನಡೆದಿದ್ದಾರೆ. ಮಾನವ ಬದುಕಿನ ಸಾರ್ಥಕ್ಯದ ಮುನ್ನೋಟವೇ ಕಾವ್ಯದ ಹಾದಿಯಾಗಿದೆ, ಇಲ್ಲಿ ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗೆ, ಪಿ.ಲಂಕೇಶ್, ದೇವನೂರು ಮಹಾದೇವ, ಸಿದ್ಧಲಿಂಗಯ್ಯ -ಹೀಗೆ ಎಲ್ಲರ ದನಿಗಳು ಇಲ್ಲಿ ಅಡಗಿವೆ. ಅಲ್ಲದೆ ಈ ನಾಡಿನಲ್ಲಿ ಮಹಾನ್ ಚೇತನಗಳು ಕನಸು ಕಂಡ ಸಮಾಜದಲ್ಲಿ ಸರ್ವರಿಗೂ ಸಮಬದುಕು ಇರುವಂತಾಗಬೇಕೆಂಬ ಹಂಬಲವೂ ಇಲ್ಲಿದೆ. ಈ ಮಾನವತೆಯ ಬದುಕಿನ ಹಾದಿಯ ಒಟ್ಟು ಸಾರವೇ ರಂಗನಾಥ ಅವರ ಕವಿತೆಗಳ ಆಶಯವಾಗಿದೆ.

‘ಉರಿವ ಕರುಳ ದೀಪ’ ಮುನ್ನುಡಿಯಲ್ಲಿ ಎಲ್.ಎನ್.ಮುಕುಂದರಾಜ್ ಅವರು ಹೇಳುವಂತೆ “ನಿಸ್ಸಂದೇಹವಾಗಿ ಇದು ಕುವೆಂಪು ಯುಗ. ಕುವೆಂಪು ಬಿತ್ತಿದ ಬೆಳಕಿನ ಬೀಜಗಳು ವರ್ತಮಾನದ ನೂರಾರು ಕವಿಗಳ ಎದೆಯಲ್ಲಿ ಹೊಸ ಫಸಲಾಗಿ ಒಡಮೂಡುತ್ತಿವೆ. ಇದು ನಿಜಕ್ಕೂ ಸೋಜಿಗದ ವಿಚಾರವಾಗಿದೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ನಮ್ಮ ದೇಶಕ್ಕೆ ಹೊಸ ದಿಕ್ಕು ತೋರಿದ ಮಹನೀಯರು. ವರ್ತಮಾನದಲ್ಲಿಯ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳುತ್ತಾ, ಹೊಸ ಭವಿಷ್ಯದ ಬಗ್ಗೆ ಬೆರಗಿನಿಂದ ನೋಡುವ ರಂಗನಾಥರAತಹ ತರುಣ ಕವಿಗಳು ನಮ್ಮಂತವರಲ್ಲಿ ಭರವಸೆ ಹುಟ್ಟಿಸಿದ್ದಾರೆ. ಇವರ ಕವಿತೆಗಳನ್ನು ಒಂದೇ ಉಸಿರಿನಲ್ಲಿ ಓದಬಾರದು.

ಧಾವಂತದ ಓದಿಗೆ ದಕ್ಕದೆ ಸಮಾಧಾನದಿಂದ ನಿತ್ಯವೂ ಓದುತ್ತಿದ್ದರೆ ಸಹೃದಯನಿಗೆ ಆಗುವ ಅನುಭವವೇ ವಿಶಿಷ್ಟವಾದುದು”.(ಉರಿವ ಕರುಳ ದೀಪ, ಮುನ್ನಡಿ…) ವರ್ತಮಾನದ ಸಮಸ್ಯೆಗಳು ಹೇರಳವಾಗಿವೆ. ಅವುಗಳನ್ನು ಅರಿಯುವ, ಚಿಕಿತ್ಸೆಗೆ ವೇಗವಾಗಿ ಮುಲಾಮು ಹುಡುಕುವ ಪ್ರಯತ್ನಗಳು ಆಗಲೇಬೇಕು.

ವರ್ತಮಾನದ ಸಮಸ್ಯೆಗಳು ಭೂತದ ಸಮಸ್ಯೆಗಳಷ್ಟೇ ಆರ್ದ್ರವಿದ್ದರೂ ಅವುಗಳ ವಿರುದ್ಧ ಸೆಟೆದು ನಿಲ್ಲಲು ಮಾತ್ರ ದೇಹ ಸಿದ್ದವಿದ್ದರೂ ಮನಸ್ಸು ಹಿಂದುಳಿಯುತ್ತಿದೆ. ಆದರೂ ಚಿಕಿತ್ಸೆ ನೀಡಿಕೆಯಿಂದ ದೂರವುಳಿಯಬಾರೆದೆನ್ನುವ ಎಚ್ಚೆತ್ತ ಪ್ರಜ್ಞೆ ಮಾತ್ರ ಕವಿಯದಾಗಿದೆ. ಪ್ರತೀ ಹಂತದಲ್ಲೂ ವರ್ತಮಾನಕ್ಕೆ ಮುಖಾಮುಖಿಯಾಗುವ ಕವಿ, ಭವಿಷ್ಯ ಸಮಾಜದ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ವೇದಿಕೆಗೆ ದಾರಿಯನ್ನು ನಿರ್ಮಿಸುವ ಕನಸು ಹೊತ್ತಿದ್ದಾರೆ. ಅದು ಮಹನೀಯರ ಆಶಯದೊಂದಿಗೆ ಮುನ್ನೆಡೆಯುವಂತಿದೆ.

ಈ ಕವನ ಸಂಕಲನದಲ್ಲಿರುವ ೪೬ ಕವಿತೆಗಳು ಒಂದೇ ಗುಕ್ಕಿಗೆ ದಕ್ಕುವುದಿಲ್ಲ. ಓದಿದಷ್ಟು ಹೊಸಹೊಸ ಹೊಳವುಗಳನ್ನು ವ್ಯಕ್ತಪಡಿಸುತ್ತಲೇ ಇರುತ್ತವೆ. ಬಳಸುವ ರೂಪಕ, ಸಂಕೇತಗಳಲ್ಲಿ ಹೊಸ ಭಾಷೆಯ ಹಿಡಿತವನ್ನು ದಕ್ಕಿಸಿಕೊಂಡಿದ್ದಾರೆ. ಒಂದು ಓದಿಗೆ ದಕ್ಕಿದ ಅನುಭವ ಮತ್ತೊಂದು ಓದಿನಲ್ಲಿ ಬೇರೆಯದೇ ಅನುಭವನ್ನು ಇಲ್ಲಿನ ಕವಿತೆಗಳು ತೆರೆದಿಡುತ್ತವೆ. ಆದ್ದರಿಂದ ರಂಗನಾಥ್ ದಲಿತ ನೆಲೆಯಿಂದ ಬಹು ದೂರ ನಡೆದಿರುವ ಮತ್ತು ಸಮಾಜದಲ್ಲಿ ಪ್ರತೀ ಮನುಷ್ಯನ ಬದುಕೇ ಮುಖ್ಯವೆಂಬ ಆಶಯ ಹೊತ್ತಿದ್ದಾರೆ. ಅದು ಈಡೇರಲಿಕ್ಕೆ ಪ್ರತಿಯೊಬ್ಬರೂ ಎದ್ದು ನಡೆಯಬೇಕಿದೆ. ಎಚ್ಚೆತ್ತವರಾಗಬೇಕಿದೆ.

ರಂಗನಾಥರವರ ‘ಮಣ್ಣಿಗೆ ಬಿದ್ದ ಹೂಗಳು’, ‘ಬದುಕು ಸೂಜಿ ಮತ್ತು ನೂಲು’ ಮೊದಲರೆಡು ಕಾವ್ಯಗಳಿಗಿಂತ ‘ಕರುಳ ಉರಿವ ದೀಪ’ ಕಾವ್ಯ ಭಿನ್ನ ಹಾದಿಯನ್ನು ತುಳಿದಿದೆ. ಭಾಷೆ, ವಸ್ತು, ಶೈಲಿ -ಹೀಗೆ ಎಲ್ಲದರಲ್ಲೂ ಹೊಸತನವನ್ನುಂಟು ಮಾಡುವ ರೀತಿ ಕಾವಯ ಸೃಜನೆಗೊಂಡಿದೆ. ತಮ್ಮ ಬದುಕಿನ ಮುಖಾಮುಖಿಯಲ್ಲಿ ಪಕ್ವಗೊಂಡ ಭಾವ ಇಲ್ಲಿನ ಕವಿತೆಗಳಲ್ಲಿ ಒಡಮೂಡಿದೆ.

ತಮ್ಮ ನೆಲಮೂಲದ ಅಸ್ಮಿತೆಯನ್ನು ಬಿಡದೆ ಬದುಕಿನ ತಾತ್ವಿಕತೆಯನ್ನು ಕೇಂದ್ರವಾಗಿಸಿಕೊಂಡು ಸೂಕ್ಷ ಸಂವೇದನೆಯ ನೆಲೆಯಲ್ಲಿ ಸಹೃದಯನು ಒಪ್ಪುವಂತೆ ಆಪ್ತವಾಗಿ ಇಲ್ಲಿನ ಕವಿತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಹಳ್ಳಿಸೊಗಡಿನ ನುಡಿಗಟ್ಟುಗಳು ಹೇರಳವಾಗಿ ತಮ್ಮ ಕಾವ್ಯಭಾಷೆಯಲ್ಲಿ ಉತ್ತಮ ಸ್ಥಾನ ಪಡೆದಿವೆ. ಒಟ್ಟಾರೆ ಕನ್ನಡ ಕಾವ್ಯ ಪರಂಪರೆಗೆ ಒಬ್ಬ ಜೀವಪರ ದನಿಯುಳ್ಳ ಕವಿಯಾಗಿ ಬಿದಲೋಟಿ ರಂಗನಾಥ ಅವರು ಸೇರಿರುವುದು ನಮಗೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ. ಇವರ ಕಾವ್ಯದ ಓಘ ತಡೆಯಾಗದೆ ಮುನ್ನಡೆಯಲಿಯೆಂದು ಆಶಿಸುವೆ.

‍ಲೇಖಕರು Admin

March 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: