ಕೆ ವಿ ತಿರುಮಲೇಶ್ ಹೊಸ ಕೃತಿ

ಕೆ. ವಿ. ತಿರುಮಲೇಶ್

ಪುಸ್ತಕಕ್ಕೆ ಬರೆದ ಮಾತು 

“ವಾಚನಶಾಲೆ” ಎಂದರೆ ಓದುವ ಕೊಠಡಿ (ಹಜಾರ). ಇದೊಂದು ರೂಪಕವೆಂದು ಬೇರೆ ಹೇಳಬೇಕಿಲ್ಲ.

ಪುಸ್ತಕಗಳು, ಸಾಹಿತ್ಯ, ಓದುವಿಕೆ ಇಲ್ಲಿನ ಲೇಖನಗಳ ಮುಖ್ಯ ವಿಷಯ, ಆದ್ದರಿಂದ ಇದೊಂದು ಓದುವ ಕೊಠಡಿ. ದೀಪದಿಂದ ದೀಪ ಉರಿಸುವಂತೆ ಒಬ್ಬನ ಓದು ಇನ್ನೊಬ್ಬನ ಓದಿಗೆ ಕಾರಣವಾಗಬೇಕು. ಕಾರಣರೂಪದ ದೀಪ ಎಷ್ಟು ಚಿಕ್ಕದಾಗಿದ್ದರು ಕೂಡ ಅದರಿಂದ ಬೆಳಗುವ ದೀಪ ಹೆಚ್ಚು ಪ್ರಕಾಶಮಾನವಾಗುವ ಸಾಧ್ಯತೆ ಇದ್ದೇ ಇದೆ. ಈ ಲೇಖನಗಳು ಹಲವು ಕಾಲಾವಧಿಯಲ್ಲಿ ಬರೆದುವಾದ್ದರಿಂದ ಕೆಲವೆಡೆ ಮಾಹಿತಿಗಳು, ವಿಚಾರಗಳು ಮರುಕಳಿಸಿರುವುದು ಸಾಧ್ಯ. ಅದಕ್ಕಾಗಿ ನಾನು ಓದುಗರ ಕ್ಷಮೆ ಕೇಳುತ್ತೇನೆ.

ಅದೇ ರೀತಿ ನನ್ನ ಓದಾಗಲಿ, ಅಭಿಪ್ರಾಯವಾಗಲಿ ಕೆಲವರಿಗೆ ಹಿಡಿಸದೆ ಇರಬಹುದು. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿಲ್ಲ. ಕೇವಲ ವಿಷಯ ಕೇಂದ್ರಿತವಾಗಿ ಬರೆದ ಲೇಖನಗಳು ಇವು, ವ್ಯಕ್ತಿಕೇಂದ್ರಿತವಾಗಿ ಅಲ್ಲ. ವ್ಯಕಿಗಳ ಕುರಿತಾಗಿ ಬರೆದಾಗಲೂ ಅವರ ಸಾಹಿತ್ಯ ಮಾತ್ರವೇ ನನ್ನ ಆಸಕ್ತಿ ವಿಷಯವಲ್ಲದೆ ಇನ್ನೇನಲ್ಲ.

ನನ್ನ ವ್ಯಾಸಂಗ ವಿಷಯ ಇಂಗ್ಲಿಷ್ ಜೀವನದ ಅಧಿಕ ಕಾಲವನ್ನೂ ಇಂಗ್ಲಿಷ್ ಭೋದನೆಯಲ್ಲಿ ಕಳೆದಿದ್ದೇನೆ. ಆದ್ದರಿಂದ ಇಲ್ಲಿನ ಹಲವು ಲೇಖನಗಳಲ್ಲಿ ಇಂಗ್ಲಿಷ್ ಹಾಗೂ ತನ್ಮೂಲಕ ನನಗೆ ಲಭ್ಯವಾದ ಯುರೋಪಿಯನ್ ಸಾಹಿತಿಗಳ ಮತ್ತು ಅವರ ಕೃತಿಗಳ ಪ್ರಸ್ತಾಪ ಬರುತ್ತದೆ. ಇದಕ್ಕೆ ಯಾವುದೇ ಸಂಕುಚಿತ ಅರ್ಥವನ್ನು ಕಲ್ಪಿಸಬೇಕಾಗಿಲ್ಲ. ಸಾಹಿತ್ಯದ ಚುಂಬಕ ಶಕ್ತಿಗೆ ನಮ್ಮನ್ನು ನಾವು ಬಿಟ್ಟುಕೊಡುವುದಿದೆಯಲ್ಲ ಅದು ನಾವು ಬೆಳೆಸಿಕೊಳ್ಳಬಹುದಾದ, ಬೆಳೆಸಿಕೊಳ್ಳಬೇಕಾದ ಗುಣ.

ನಮ್ಮ ಕನ್ನಡದಲ್ಲಿ ಅನಂತಮೂರ್ತಿ, ಕಿ.ರಂ., ಡಿ.ಆರ್., ಸಿ. ಎನ್ ಆರ್., ಎಸ್. ದಿವಾಕರ್, ಎಚ್. ಎಸ್. ಆರ್., ಶೂದ್ರ ಶ್ರೀನಿವಾಸ್, ನರೇಂದ್ರ ಪೈ ಮುಂತಾದವರಲ್ಲಿ ನಾವೀ ‘ಮೋಹ’ವನ್ನು ಕಾಣಬಹುದು. (ವಾಸ್ತವದಲ್ಲಿ ಇದೊಂದು ಅನನ್ಯ ನಿರ್ಮೋಹವೇಸರಿ.) ಅವರ ಸಂಪರ್ಕದಲ್ಲಿ ನಾವೂ ಅದಕ್ಕೆ ಪರವಶರಾಗುತ್ತೇವೆ.

ಅನಂತಮೂರ್ತಿ ಬಿ. ಎಂ. ಶ್ರೀ. ಅವರ “ಮುದ್ದಿನ ಕುರಿಮರಿ”ಯ (ವರ್ಡ್ಸವರ್ತ್ The Pet Lamb ಅನುವಾದ) ‘ಹಿಡಿದು ಮಂಜು ಬೀಳುತಿತ್ತು’ ಎಂಬ ಸಾಲನ್ನು ಬಹುವಾಗಿ ಕೊಂಡಾಡುತ್ತಿದ್ದರು. ‘ಹಿಡಿದು’ ಎಂದರೇನು? ಅದನ್ನು ವಿವರಿಸಹೊರಟರೆ ಮಂಜನ್ನು ಹಿಡಿಯ ಹೊರಟಂತಾಗುತ್ತದೆ. ಸಾಹಿತ್ಯದ ಸುದೂರ ನಾವು ಅದಕ್ಕೆ ಕೊಡಬೇಕಾದ ಗೌರವ ಮತ್ತು ಪ್ರೀತಿ. ಕನ್ನಡದ ಪ್ರತಿಯೊಬ್ಬ ಓದುಗನೂ ಬಿ. ಎಂ. ಶ್ರೀ. ಯವರ ಇಂಗ್ಲಿಷ್ ಗೀತೆಗಳನ್ನು ಒಮ್ಮೆಯಾದರೂ ಓದಬೇಕು.

ಬಹುಶಃ ಕನ್ನಡಕ್ಕೆ ಹೊಸ ಕವಿತೆಯ ಹುಚ್ಚನ್ನು ಹಿಡಿಸಿದವರೇ ಬಿ. ಎಂ. ಶ್ರೀ. ಮತ್ತು ಅವರ ಮೂಲಕ ಅವರ ನಂತರದ ಪೀಳಿಗೆಯ ಅನಂತಮೂರ್ತಿ (ಇನ್ನೊಂದು ವಿಧದಲ್ಲಿ ಪಿ. ಲಂಕೇಶ್). ಅನಂತಮೂರ್ತಿ ಕೂಡ ಬಿ. ಎಂ. ಶ್ರೀ. ಯವರಂತೆಯೇ ತಾವು ಅನುವಾದಿಸಿದ, ಮೆಚ್ಚಿದ ಕವಿತೆಗಳನ್ನು ತಮ್ಮದಾಗಿ ಮಾಡಿಕೊಳ್ಳುತ್ತಿದ್ದರು. ನಮ್ಮಲ್ಲಿ ಹಲವರಿಗೆ ಅನಂತಮೂರ್ತಿ ಪ್ರಿಯರಾಗುವುದೇ ಆ ಕಾರಣಕ್ಕೆ.

ಓದು ಕೂಡ ಹಾಗೆಯೇ: ಒಂದು ರೀತಿಯ ಅನುವಾದ. ಅದು ನಮ್ಮ ಮನಸ್ಸಿನೊಳಗೆಯೇ ನಡೆಯುವಂಥದು: ‘ಆನ್—ಲೈನ್’!

ಯಾವುದು ಒಳ್ಳೆಯ ಸಾಹಿತ್ಯ, ಯಾವುದು ಸಾಮಾನ್ಯದ್ದು ಎನ್ನುವ ಅಳತೆಗೋಲು ಇಲ್ಲ, ನಿಜ. ಹೆಚ್ಚಿನ ಮಟ್ಟಿಗೆ ಅದು ನಮ್ಮ ನಮ್ಮ ಅನುಭವಕ್ಕೆ ಬರಬೇಕಾದ ಸಂಗತಿ. ಕೆಲವು ಓದುಗರು ಒದುತ್ತ ಬೆಳೆಯುತ್ತಾರೆ. ಆದರೆ ದಿನವೂ ಪತ್ರಿಕೆಗಳನ್ನಷ್ಟೇ ಓದುವ ವ್ಯಕ್ತಿಗಳ ಕುರಿತು ಯೋಚಿಸಿ ನೋಡಿ. ಅವರು ಅಷ್ಟಕ್ಕೆ ತೃಪ್ತರಾಗುತ್ತಾರೆ. ಅಲ್ಲದೆ ಇಲ್ಲೊಂದು ಅಪಾಯವೂ ಇದೆ: ಗ್ರೆಶಮ್ಸ್ ಲಾ!

ಕೆಟ್ಟ ಹಣ ಒಳ್ಳೆಯ ಹಣವನ್ನು ಕೊಚ್ಚಿಕೊಂಡು ಹೋಗುವಂತೆ, ಸಾಮಾನ್ಯ ಸಾಹಿತ್ಯ ಉತ್ಕೃಷ್ಟ ಸಾಹಿತ್ಯವನ್ನು ಒತ್ತರಿಸಬಹುದು. ಆಗ ನಮಗೆ ಶೇಕ್ಸ್ಪಿಯರ್ ಓದುವುದಕ್ಕೆ ಆಗುವುದಿಲ್ಲ, ಯಾಕೆ ಓದಬೇಕು, ಪಂಪ ರನ್ನರು ನಮಗೆ ಇಂದು ಯಾಕೆ ಬೇಕು ಎಂದು ಮುಂತಾದ ಮಾತುಗಳು ಕೇಳಿಬರುತ್ತವೆ. ಇಂದಿನ ಅತಿವೇಗದ ಯುಗದಲ್ಲಿ ಈ ಅಪಾಯ ಇಂಗ್ಲಿಷ್ ತೀವ್ರವಾಗಿದೆ

 

‍ಲೇಖಕರು avadhi

May 2, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. kvtirumalesh

    ಪ್ರಿಯ ಮೋಹನ್
    ನಾನು ಕೇಳದೆಯೇ ಕೇವಲ ಪುಸ್ತಕಪ್ರೀತಿಯಿಂದ ನನ್ನ “ವಾಚನಶಾಲೆ”ಯ ಕುರಿತು
    ‘ಅವಡಿ’ಯಲ್ಲಿ ಪ್ರಕಟಣೆ ನೀಡಿದ್ದೀರಿ. ತುಂಬಾ ಕೃತಜ್ಞತೆಗಳು! ನಿಮ್ಮ ಈ ನಿರ್ವ್ಯಾಜ ಪ್ರೀತಿ
    ಬೆಳಕಿನಂತೆ ಹರಡಲಿ.
    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
  2. ಗೋನವಾರ ಕಿಶನರಾವ್.

    ಓದಿದೆ.ಕುತೂಹಲ ದ್ವಿಗುಣಗೊಂಡಿತು.ನಾಳೆಯೇ ತಿರುಮಲೇಶ ಸರ್ ಮನೆಗೆ ಪಯಣ.’ವಾಚನಾಲಯ ‘ತರಲು.ಅವಧಿಗೆ ಧನ್ಯವಾದಗಳು.

    ಪ್ರತಿಕ್ರಿಯೆ
  3. ಸತ್ಯಕಾಮ ಶರ್ಮಾ

    ನಿಮ್ಮ ಓದಿನ ವಿಸ್ತಾರ ಎಷ್ಟು ಎಂದು ಅರಿತಿರುವ ನಾನು ನಿಮ್ಮ ಕೃತಿಗಳನ್ನು ನನ್ನ ಪಟ್ಟಿಯಲ್ಲಿ ಸೇರಿಸುತ್ತೇನೆ. ( ಅಣಿಮುತ್ತುಗಳು, ಪುಸ್ತಕಗಳ ಪ್ಯಾರಗಳು, ಉತ್ತಮ ಸಿನೆಮಾ ಟೈಟಲ್ ಗಳು ಇತ್ಯಾದಿಗಳನ್ನು ಬರೆದಿಡುವ ನೋಟ್ ಬುಕ್ ನಲ್ಲಿ ಪುಸ್ತಕಗಳ ವಿವರಗಳನ್ನು ಕೂಡಾ ಸೇರಿಸುತ್ತೇನೆ)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: