ಕೆ.ಮಹಾಂತೇಶ

ಪುಸ್ತಕ ಬಿಡುಗಡೆ-ಸಂವಾದದಂತಹ ಕಾರ್ಯಕ್ರಮಗಳನ್ನು ಸೋಮವಾರ ಸಾಧಾರಣವಾಗಿ ಯಾವ ಸಾಹಿತಿಗಳು ಸಂಘಟಕರು ನಿಗದಿ ಮಾಡುವುದಿಲ್ಲ . ಅದಕ್ಕೆ ಒಂದು ಪ್ರಮುಖ ಕಾರಣ.ಅದು ವಾರದ ಆರಂಭದ ಬ್ಯೂಸಿ ದಿನ. ಮತ್ತು ಜನರನ್ನು ಕೂಡಿಸಲು ಇರುವ ಭಯ.ಈ ಆತಂಕ ನಮಗೂ ಕಾರ್ಯಕ್ರಮ ನಿಗದಿ ಮಾಡುವ ಪೂರ್ವ ದಲ್ಲಿ ಕಾಡಿದ್ದು ನಿಜ. ಆದರೆ ನಾವು ಮಾಡುವ ಕೆಲಸ ಅದು ಅದು ಪರಿಣಾಮಕಾರಿಯಾಗಿದ್ದರೆ ನಮ್ಮ ಕಾರ್ಯಕ್ರಮ ಖಂಡಿತ ಯಶಸ್ವಿಯಾಗುತ್ತದೆ ಎಂದು ನಮ್ಮಲ್ಲೇ ಆತ್ಮ ವಿಶ್ವಾಸ ಮೂಡಿಸುತ್ತದೆ. ಇದಕ್ಕೆ ದಾವಣಗೆರೆಯಲ್ಲಿ ನಾವು ಸಂಘಟಿಸಿದ್ದ ಪುಸ್ತಕ ಬಿಡುಗಡೆ ಹಾಗೂ ಸಂವಿಧಾನ ಓದು ಒಂದು ಯಶಸ್ವಿ ಪ್ರಯತ್ನವೆನ್ನಬಹುದು.

ಡಿಸೆಂಬರ್ 10 ರ ಮಧ್ಯಾಹ್ನ 4 ರಿಂದಲೇ ದಾವಣಗೆರೆ ರೋಟರಿ ಬಾಲ ಭವನದತ್ತ ಚಿತ್ರದುರ್ಗ, ಚಳ್ಳಕರೆ, ಹರಪನಹಳ್ಳಿ,ಜಗಳೂರು ಹರಿಹರ ಹೀಗೆ ನಾನಾ ಕಡೆಗಳಿಂದ ನಮ್ಮ ಪ್ರೀತಿಯ ಒಡನಾಡಿಗಳು,ಹಿರಿಯರು, ಗೆಳೆಯರು ಕಾರ್ಯಕ್ರಮದತ್ತ ಮುಖಮಾಡಿದ್ದರು. ಅದರಲ್ಲಿ ತುಂಬಾ ಜನ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು. ಸೋಮವಾರದ ತಮ್ಮ ತಮ್ಮ ಕೆಲಸಗಳನ್ನು ಧಾವಂತ ಹಾಗೂ ಇನ್ನೂ ಕೆಲವರು ಒತ್ತಡದಲ್ಲಿ ಮುಗಿಸಿ 5 ಗಂಟೆಯ ಹೊತ್ತಿಗೆಲ್ಲಾ ದಾವಣಗೆರೆ ರೋಟರಿ ಬಾಲ ಭವನದತ್ತ ನಮ್ಮ ಪ್ರೀತಿಯ ಆಹ್ವಾನಕ್ಕೆ ಒಪ್ಪಿ ಆಗಮಿಸಿದ್ದರು.
ಅವರೆಲ್ಲ ನನ್ನ ಒಡಲಾಳದ ಕಥನಕಗಳು ಪುಸ್ತಕ ಬಿಡುಗಡೆ ಹಾಗೂ ಸಂವಿಧಾನ ಓದು ಅಭಿಯಾನದ ಭಾಗವಾಗಬಯಸಿದ್ದರು. ಹೀಗಾಗಿ ಪುಸ್ತಕ ಬಿಡುಗಡೆ-ಸಂವಾದ ಆರಂಭಗೊಳ್ಳುವಾಗ ಇಡೀ ಸಭಾಂಗಣವೇ ಕಿಕ್ಕಿರಿದು ತುಂಬಿತ್ತು. ಹಲವು ವರ್ಷಗಳ ಗೆಳೆಯರು ಒಡನಾಡಿಗಳು ಈ ನೆಪದಲ್ಲಿ ಅಲ್ಲಿ ಒಂದಾಗಿದ್ದರು.ತಮ್ಮ ಹೋರಾಟದ ದಿನಗಳನ್ನು ಕಾರ್ಯಕ್ರಮದ ಬಳಿಕಾವು ಮೆಲುಕು ಹಾಕುತ್ತಿದ್ದರು.
ಆ ಮೂಲಕ ಅವರೆಲ್ಲ ನನ್ನ ಒಡಲಾಳದ ಕಥನಗಳು ಹಾಗೂ ಸಂವಿಧಾನ ಓದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಮತ್ತು ಸಂವಾದಿಸಿದರು.ಚಹಾ,ಪಕೋಡ ಮೆಲುಕಿದರು,ಪುಸ್ತಕಗಳನ್ನು ಕೊಂಡು ಕೊಂಡರು…..
ನನ್ನ ‘ಒಡಲಾಳದ ಕಥನಗಳು’ ಕೃತಿಯನ್ನು ಬಿಡುಗಡೆ ಮಾಡಿದವರು ನನ್ನ ಬಹುಕಾಲದ ಹಿರಿಯ ಮಿತ್ರರೂ ದಾವಣಗೆರೆ ಪತ್ರಿಕಾ ರಂಗದಲ್ಲಿ ವಿಶಿಷ್ಟ ಹೆಸರುಗಳಿಸಿರುವ, ಕವಿಗಳು ಆದ ಬಿ.ಎನ್.ಮಲ್ಲೇಶ್ ರವರು. ಪ್ರತಿಯೊಂದುಸುದ್ದಿ ಮನೆಯಲ್ಲಿ ಒಬ್ಬ ಪ್ರಜಾಪ್ರಭುತ್ವ ವಾದಿಗಳು ಇರಬೇಕು ಎನ್ನುವ ಕಳವಳದ ಮಾತು.ಇವತ್ತು ಮಾಧ್ಯಮ ರಂಗದ ಸುದ್ದಿಮನೆ ಯಾರ ಹಿಡಿತದಲ್ಲಿದೆ ಎನ್ನುವುದನ್ನು ಎತ್ತಿತೋರಿಸಿತು. ಹೋರಾಟಗಾರರು ಅತ್ಯುತ್ತಮ ಬರಹಗಾರರು ಆಗಿರುತ್ತಾರೆ ಹಾಗಾಗಿ ಇಂತಹವರು ನಮ್ಮ ಮಾಧ್ಯಮ ರಂಗದ ಸುದ್ದಿಮನೆಯಲ್ಲಿ ಇದ್ದರೆ ಅದರ ಘನತೆ ಹೆಚ್ಚುತ್ತದೆ ಎನ್ನುವುದು ಅವರ ಆಗ್ರಹವಾಗಿತ್ತು.

ಸಂವಿಧಾನ ಓದು ಯಾಕೆ ಹೇಗೆ ಎನ್ನುವುದರ ಮಹತ್ವವನ್ನು ವಿವರಿಸಿದ ‘ನ್ಯಾಯಮೂರ್ತಿ ನಾಗಮೋಹನ್ ದಾಸ್’ ಸಂವಿಧಾನ ವಿರೋಧಿಸುವರನ್ನು ಪ್ರಶ್ನಿಸಿ, ಹಾಗಾದರೆ ನಿಮ್ಮ ಮುಂದೆ ಇರುವ ಪರ್ಯಾಯ ಯಾವುದು ಎನ್ನುವುದನ್ನು ಜನರಮುಂದಿಡಿ ಎನ್ನುವ ಸವಾಲು ಎಸೆದರು.ಸಂವಿಧಾನ ಓದು ಎನ್ನುವುದು ಕೇವಲ ಓದಿದರೆಮಾತ್ರ ಅರ್ಥವಾಗುದಿಲ್ಲ ಬದಲಾಗಿ ಅದರ ಐತಿಹಾಸಿಕ ಬೆಳವಣಿಗೆಗಳ ಮೂಲಕ ಓದುತ್ತಾ ಆಡಳಿದಲ್ಲಿರುವವರು ಅದನ್ನು ಆರ್ಥಿಕ – ಸಾಮಾಜಿಕ ತಳಹದಿಮೂಲಕ ಅನ್ವಹಿಸುವಂತಹ ಒತ್ತಡ ಮಾಡಬೇಕು ಎಂದು ಕರೆ ನೀಡಿ ಸಭೆಯಲ್ಲಿ ಎದ್ದು ಬಂದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಪುಸ್ತಕ ಹಾಗೂ ಸಂವಿಧಾನ ಓದು ಕುರಿತು ಎಸ್.ವೈ .ಗುರುಶಾಂತ್ ಹಾಗೂ ಡಾ.ವಿಠ್ಠಲಭಂಡಾರಿ ಮಾತನಾಡಿ ಚಳವಳಿಗಳ ಮೂಲಕ ಒಡಮೂಡಿದ ಮಹಾಂತೇಶ ಬರಹಗಳು ಹೊಸದಾಗಿ ಚಳವಳಿ ಪ್ರವೇಶಿಸುವವರಿಗೆ ಕೈಪಿಡಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ಬಂಡಾಯ ಸಾಹಿತಿ ಹಾಗೂ ಅಧ್ಯಾಪಕರಾದ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ ಚರ್ಚೆಗಳು ಹಾಗೂ ಸಂವಾದಗಳಿಗೆ ಬೆದರಿಕೆ ಬರುತ್ತಿರುವ ಈ ಸಂದರ್ಭದಲ್ಲಿ ಅದಕ್ಕೆ ತಕ್ಕನಾದ ಪ್ರತಿರೋಧವನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ವ್ಯಕ್ತಪಡಿಸುವುದಕ್ಕೆ ನಾವು ಭಯಪಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.
ಎರಡೂವರೆ ಗಂಟೆಗಳ ಕಾಲ ನಡೆದ ಈ ಪುಸ್ತಕಬಿಡುಗಡೆ ಕಾರ್ಯಕ್ರಮ ದ ನಿರ್ವಹಣೆಯನ್ನು ವಿಜ್ಞಾನ ಹಾಗೂ ಶಿಕ್ಷಕ ಚಳವಳಿಯ ನಾಯಕ ಚಂದ್ರಪ್ಪ ನೀಲಗುಂದ ಅಚ್ಚುಕಟ್ಟಾಗಿ ನೇರವೇರಿಸಿದರೆ, ಪತ್ರಕರ್ತ ಮಿತ್ರ ಹಾಗೂ ಈ ಕಾರ್ಯಕ್ರಮಕ್ಕೆ ಓಡಾಡಿದ ಮಂಜುನಾಥ ಕಾಡಜ್ಜಿ ಎಲ್ಲರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಕುಟುಂಬ ಸಹಿತ ಭಾಗವಹಿಸಿದ ನಮ್ಮ ಮಿತ್ರರೂ ಹಾಗೂ ಜಗಳೂರು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾದ ಕೆ.ಸಿ. ಮೋಹನ್ ಕುಮಾರ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.








0 Comments