ಕೆ ಎಸ್ ಎಸ್ ಕೆ ಕೊಪ್ಪ
ಅಂಗೈಯಲ್ಲಿನ ಪಾರಿಜಾತ
ನೀಲಿ ಚಿಟ್ಟೆಯ ಮಂದಗತಿಯ ಹಾರಾಟ….
ನೋಡಿದಷ್ಟೂ ಮುಗಿಯದ ಮುಗಿಲು
ಮೋಡಿ ಮಾಡುವ ಮಳೆಹನಿಗಳು….
ಇನ್ನೂ ಅನೇಕ ಸಂಗತಿಗಳು
ಕಾರಣಗಳಾಗಿವೆ ಕವಿತೆಗಳು
ಜನ್ಮತಾಳಿ ಉಸಿರಾಡಿ ಜೀವಿಸಲು!!….
ಕವಿತೆಗಳ ಜನ್ಮಕ್ಕೂ
ನೋವಿನ ಅನುಭವವಿದೆ!!….

ಪುಟ್ಟ ಕಂದನ ಆಕ್ರಂದನ ಆಲಿಸಿದಾಗ
ಅಸಹಾಯಕ ಮುದುಕಿಯ
ಸಂಕಟಗಳು ಕಂಡಾಗ
ಸಮಾಜದ ಸಂಘರ್ಷಗಳ ಮರ್ಮ ಅರಿತಾಗ
ಭ್ರಮೆಯ ಬದುಕುಗಳ ಕಂಡಾಗ
ಪ್ರೀತಿ ಮರೀಚಿಕೆಯಾಗಿ ಇರಿದಾಗ
ಅಚಾನಕ್ಕಾದ ಅಗಲುವಿಕೆಗಳಾದಾಗ
ಕವಿತೆಗಳು ಹುಟ್ಟುತ್ತವೆ….
ಹೇಗಾದರೂ ಹುಟ್ಟಲಿ ಕವಿತೆಗಳು
ಒಮ್ಮೆ ಹುಟ್ಟಿದ ಮೇಲೆ
ಖಂಡಿತ ಅವಕ್ಕೆ ಸಾವಿಲ್ಲ…..






0 Comments