ಕೆ ಎನ್ ಲಾವಣ್ಯ ಪ್ರಭಾ
*
ನಮಗೆ ನಾವೇ ಹೆಗಲಾಗೋಣ
ನಮ್ಮ ಕೊರಗನ್ನು ಬೆರಗನ್ನು
ನೋವನ್ನು ನಲಿವನ್ನು
ನಮ್ಮನಮ್ಮಲ್ಲೇ ಅರುಹಿಕೊಂಡು
ಹಗುರಾಗೋಣ
ರೊಟ್ಟಿಯನ್ನೂ ನೀರನ್ನು
ಹಂಚಿಕೊಂಡು ಸವಿಯೋಣ
ಪೌರುಷತ್ವವನ್ನು ಮೆಲುದನಿಯಲ್ಲೇ
ಕಡೆಗಣಿಸೋಣ
ಹೆಣ್ತನದ ಮಮತೆ ಕಾಳಜಿಯನ್ನು
ಧೀಮಂತವಾಗಿ ಸಹಜೀವಿಗಳಿಗೆಲ್ಲಾ
ಉಣಿಸೋಣ
ಅನ್ಯಾಯ ದಬ್ಬಾಳಿಕೆಗಳಿಗೆಲ್ಲಾ
ಬೆದರದೆ ಒಟ್ಟಿಗೆ ಕೈಹಿಡಿದು ನಿಲ್ಲೋಣ
ಉರಿವ ಸೂರ್ಯನ ಬಿಸಿಲಿಗೂ
ಅಳುಕದೆ ಒಬ್ಬರಿಗೊಬ್ಬರು
ನೆರಳಾಗೋಣ
ಮಾಯಮೋಹದ ಮಾತುಗಳಿಗೆ
ಬಲಿಯಾಗದೆ ನಮ್ಮ ಎಚ್ಚರವನ್ನು
ಮತ್ತಷ್ಟು ಚೂಪುಗೊಳಿಸೋಣ
ಗಾಡಾಂಧಕಾರದೊಳಗೂ ಪರಸ್ಪರ
ಕಣ್ಣ ದೀಪದೊಳಗೆ ಬೆಳಕ ಕಾಣೋಣ
ಕಲ್ಲು ಮಣ್ಣು ಧೂಳಿನ ಕಠಿಣ
ದಾರಿಯುದ್ದಕ್ಕೂ
ಗಿಡಮರಗಳ ನೆಟ್ಟು ಬೆಳೆಸಿ
ನಮ್ಮ ಹಿಂದೆ ಸಾಗಿ ಬರುವವರಿಗೆ
ನೆರಳ ಹಾಸೋಣ
ಮನೆಯೊಳಗೂ ಹೊರಗೂ ಹುಟ್ಟುವ
ಸವಾಲುಗಳನ್ನು ಒಟ್ಟುಗೂಡಿ
ಕೈ ಕೈ ಬೆಸೆದು ಎದುರಿಸೋಣ
ಬೆಳಕಾಗೋಣ ನೆರಳಾಗೋಣ
ಹಗಲಾಗೋಣ ಬದುಕಿಬಿಡೋಣ
ಒಬ್ಬರ ಹೆಗಲಿಗೊಬ್ಬರು ಒರಗಿ
ಪರಸ್ಪರ ಹೆಗಲಾಗೋಣ
ಅಂಜದೆ ಅಳುಕದೆ ಮುಂದೆ ಸಾಗೋಣ






0 Comments