ನಿಜ ಕಾವ್ಯ!

ಸದಾಶಿವ್ ಸೊರಟೂರು
ಕವನಗಳು ಪ್ರಾಸಗಳ
ಹುಡುಕುತ್ತಲೇ
ಗರ್ಭಕಟ್ಟುತ್ತವೆ!
ಬರೀ ಔಷಧಿ ಮಾತ್ರೆಗಳ
ತಿನ್ನುತ್ತಲೇ
ಅಕಾಲ ಪ್ರಸವ ಕಾಣುತ್ತವೆ,
ಇಲ್ಲಿ ಕವನಗಳು
ಹುಟ್ಟುವುದಿಲ್ಲ,
ತಿಣುಕುವುವು ಪದಗಳು
ಅರ್ಥ ಸೇರುವುದಿಲ್ಲ
ಎಳೆದೆಳೆದ ಸಾಲುಗಳು!
ಭಾವಕೆ ಕೊನೆಮೊದಲಿಲ್ಲ,

ಗಳಿಸಿದ ಪದವಿಯಲ್ಲಿ
ಮಾಡಿದ ಹೆಸರಿನಂಗಲಿ
ಬಂದ ಪದಗಳು ಕವನಗಳಾಗುತ್ತವೆ
ಮಾಲಿಕನ ಹೆಸರೊತ್ತು ಬೀದಿಯಲಿ
ಬಿರುದು ಸನ್ಮಾನಗಳ ಬಾಚುತ್ತವೆ
ಬೀದಿಯಲಿ ಕವನಗಳು ನಗುತ್ತವೆ,
ಎಲೆಯಿಂದ ಎಲೆಗೆ
ಹರಿವ ಇಬ್ಬನಿ ಸದ್ದು,
ಎಳೆ ತೃಣಗಳ ತರಲೇ
ಕತ್ತಲು ಬೆಳಕಿನ ನಡುವಣ ಗುದ್ದು!
ಪದಗಳ ಹಂಗಿಲ್ಲದೇ
ನವ್ಯ ಕವನಗಳ ಹೆಣೆಯುತ್ತವೆ,
ತುದಿ ನೇಗಿಲ ಹೊಳಪು
ದಾರಿ ಬಿಡುವ ಮಣ್ಣ ಹೆಂಟೆಗಳು,
ಹಳ್ಳಿಯ ಹೆಣ್ಣುಗಳಿವು
ಕೆಸರಲಿ ಹಸಿರೂರುವಾಗ
ಕವನ ಗರಿ ಬಿಚ್ಚಿ ಮೂಡುತ್ತದೆ!
ಒಂಚೂರು ಹೆಸರು ಬೇಡದೆ,
ತನ್ನಷ್ಟಕ್ಕೆ ಗರ್ಭಿಸಿಕೊಂಡ
ಕವನಗಳ ಸರಾಗ ಹೆರಿಗೆಗೆ
ಪ್ರಕೃತಿಯೊಬ್ಬಳೇ ಸೂಲಗಿತ್ತಿ!
ಬದುಕನ್ನೇ ಕಾವ್ಯವಾಗಿಸಿ
ಮುಂದೆ ತಂದಿಟ್ಟರೂ
ಪದಗಳಲಿ ಹುಡುಕುವ ಇವನೊಬ್ಬ ಮರುಳೇ!?





sir nimma kavite nannanu tanmayannagi maditu