ಪದಗಳನ್ನು ನಾನೇ ಹೆಕ್ಕಿ ಹೆಕ್ಕಿ ಬರೆಯುತ್ತೇನೆ: ಸೂಚಿಸುವ ಉಸಾಬರಿ ನಿನಗೆ ಬೇಡ
ಶ್ರೀವಿಭಾವನ
**
ಟೈಪಿಸುವಾಗಲೆಲ್ಲ
ನಾನು ಬರೆಯಬೇಕಾದುದನ್ನು
ಊಹಿಸುವ ಕಷ್ಟ ನಿನಗೆ ಬೇಕಿಲ್ಲ
ಸಲಹೆಯಂತೂ ಮೊದಲೇ ಬೇಡ
ತಪ್ಪೋ, ಸರಿಯೋ
ನಾನು ಬರೆಯಬೇಕಾದುದನ್ನು ಬರೆಯಲು ನನಗೆ ಬಿಡು.
ಏಕೆಂದರೆ ನಿನ್ನಂತೆ ಅಕ್ಷರಗಳು ನನಗೆ ಕೇವಲ ಆಯ್ಕೆಯಲ್ಲ

ನೀನು ಊಹಿಸುವ-ಸೂಚಿಸುವ ಪದಗಳು
ನಿನಗಿಂತ ಮೊದಲೇ ನನಗೆ ಪರಿಚಿತ
ಕೆಲವು ಪದಗಳ ಹಂಗು ನನಗೆ ಬೇಕಿಲ್ಲ
ಅದಕ್ಕೆ ದೂರವಿಟ್ಟಿದ್ದೇನೆ ಅವುಗಳನ್ನು
ಹೊಸ ಪದಗಳು ಬೇಕಿವೆ ಅದಕ್ಕ ಈ ಜಂಜಾಟ!
ಈ ಹುಡುಕಾಟದ ಬೇಗುದಿಯ ನಡುವೆ
ಮತ್ತೆ ಮತ್ತೆ ಅದೇ ಪದಗಳ ತೋರಿಸಬೇಡ
ನಾನು ಬರೆಯಬೇಕಾದ ಪದಗಳು ನನಗೆ ಮಾತ್ರ ತಿಳಿದಿವೆ
ನನ್ನ ಸ್ಮೃತಿಪಟಲದ ಮೂಲೆಯಲ್ಲಾದರೂ ಅವುಗಳಿರಬಹುದು.
ಅವುಗಳನ್ನು ನಾನೇ ಹೆಕ್ಕಿ ಹೆಕ್ಕಿ ಬರೆಯುವೆ
ಅವುಗಳು ತಪ್ಪಾಗಿರಬಹುದು
ಆದರೆ ನಿನ್ನ ಪದಗಳ ಕಡ ಬೇಡ
ಅದು ನಿನ್ನಂತೆಯೇ ಇರಬಹುದು ಇದ್ದೂ ಇಲ್ಲದ ರೀತಿಯಲ್ಲಿ






0 Comments