ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಲವು ನತದೃಷ್ಟ ಹನಿಗಳು.. 

ಸದಾಶಿವ್ ಸೊರಟೂರು

ಮಳೆ ಸುರಿಯುವಾಗ
ಕೊಡೆ ಬಿಚ್ಚಿ ನಡೆಯಲು
ಎದೆಯೊಳಗೊಂದು ಪಾಪ ಪ್ರಜ್ಞೆ.

ಕೇಳಿಸಿಕೊಂಡಿದ್ದೀನಿ
ಇಷ್ಟು ದಿನವೂ
ಕೊಡೆ ಮೇಲೆ ಬೀಳುತ್ತಿದ್ದ
ಹನಿಗಳ ಆರ್ತನಾದ;
ಮಳೆ ಹಾಡ ಕೇಳಿಸಿಕೊಂಡ
ಇದೇ ಕಿವಿಗಳಲ್ಲಿ!

ಪ್ರತಿ ಹನಿಗಳೂ ಶಪಿಸುತ್ತವೆ
ಕೊಡೆಯ ಬಟ್ಟೆಯನು
ಮತ್ತೆ ಮತ್ತೆ ಶಪಿಸಿಕೊಂಡೆ
ಬಂದಿದೆಯೇನೊ
ಕೊಡೆಗೊಂದು ಕಪ್ಪು ಬಣ್ಣ

ನನ್ನದೇ ತಪ್ಪು
ತವರು ಸೇರಲು ಹೊರಟ ಹನಿಗಳಿಗೆ
ಕೊಡೆ ತೆರೆದು ನಿಲ್ಲಿಸಿದ್ದು

ಕೊಡೆಯ ಮೈ ತುಂಬಾ ಹರಿದಾಡಿ
ಹುಡುಕಿ ಇಳಿ ಮೂಲೆಯ
ತೆವಳಿಕೊಂಡು ಹರಿದು
ನೆಲಮುಟ್ಟಿ ತನ್ನವರ ಸೇರುವ ಹೊತ್ತಿಗೆ
ಎಲ್ಲಿದ್ದಾರು ಜೊತೆಗಾರರು?

ಛತ್ರಿಯಿಂದ ಸುರಿದ ಒಂಟಿ ಹನಿಗಳೆಲ್ಲಾ
ಒಮ್ಮೆ ತಿರುಗಿ ನೋಡಿ
ಮತ್ತೆ ಮತ್ತೆ ನನ್ನನ್ನು ಶಪಿಸುತ್ತವೆ

ಆಚೆ ಮಳೆ ಸುರಿಯುತ್ತಿದೆ
ಮೂಲೆಯಲಿ ಕೂತ ಛತ್ರಿ ನಗುತ್ತಿದೆ
ಎದೆಯಲ್ಲಿದ್ದ ಪಾಪ ಪ್ರಜ್ಞೆ
ಈಗ ಕಾಲಿಗೂ ಇಳಿದಿರಬೇಕು
ಪಾದಗಳು ಮೌನ ಮೌನ!

‍ಲೇಖಕರು avadhi

18 August, 2019

4 Comments

  1. Parameshwarappa Kudari

    ನೈಸ್ ಹನಿಗಳು ಸರ್

  2. Raghavendra E

    ಸುಂದರ ಬರಹ

  3. Raghavendra E Horabylu

    ಸುಂದರ ಬರಹ

  4. T S SHRAVANA KUMARI

    ಒಳ್ಳೆಯ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading