ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಲವು ದಿನಗಳು ತುಂಬ ನೋಯಿಸುತ್ತವೆ..

ಬದುಕಿನ ಬೀದಿಯಲ್ಲೊಂದು ದಿನ …

bharathi b v

ಭಾರತಿ ಬಿ ವಿ

 

ಪ್ರಿಯ ಗೆಳೆಯ

ನಿನ್ನನ್ನು ಭೇಟಿಯಾದ ನಂತರ ಹಿಂದಿರುಗುವ ಸಮಯ ಬರುವುದರಲ್ಲಿ‌ ಮನಸ್ಸು ಮೈನಸ್ ನಿಂದ ಸೊನ್ನೆಗೆ ಬಂದು ನಿಂತಿತ್ತು. ಆದರೂ ಎಂದಿನ ಉತ್ಸಾಹ ಇನ್ನೂ ಮರಳಿರಲಿಲ್ಲ. ಸದಾಶಿವನಗರದಿಂದ ಚೌಡಯ್ಯ ಹಾಲ್ ನ ಮಾರ್ಗವಾಗಿ ಸಂಪಿಗೆ ರಸ್ತೆಯ ದಾರಿ ತೋರಿಸಿ ನೀನು ಹೊರಟಾಗ ನಾನು ಬೆಪ್ಪಳಂತೆ “ದಾರಿ ಗೊತ್ತಾಗದಿದ್ರೆ?” ಅಂದೆ. “ಬಾಯಿದೆ ಅಲ್ವಾ ನಿನಗೆ. ತಪ್ಪಿ ಹೋದ್ರೆ ಕೇಳು ಅಷ್ಟೇ” ಅಂತ ನೀನು ಗದರಿಸಿದಾಗಲೇ ನನಗೂ ಹೊಳೆದದ್ದು!

ದಾರಿ ತಪ್ಪೋ ಹಾಗೇನೂ ಇರಲಿಲ್ಲ. ನೇರ ಒಂದೇ ರಸ್ತೆ. ನಡೆಯುತ್ತಾ ಹಾಗೇ ಒಂದಿಷ್ಟು ದೂರ ನಡೆಯುವುದರಲ್ಲಿ ಮಲ್ಲೇಶ್ವರಂ ಸರ್ಕಲ್ಲಿನವರೆಗೂ ನಡೆದೇ ಬಿಡೋದು ಒಳ್ಳೇದು ಅನ್ನಿಸಿತು.

bellಸಂಪಿಗೆ ರಸ್ತೆಯಲ್ಲಿ ಹಾಗೆ ನಡೆದು ವರ್ಷಗಳೇ ಕಳೆದುಹೋಗಿದ್ದವು. ಒಬ್ಬಳೇ ನಡೆಯುವಾಗ ಸುತ್ತಲಿನ ಬದುಕನ್ನು ನೋಡುತ್ತ ಹೋಗುವುದು ಎಂಥ ಆಸಕ್ತಿಯ ವಿಷಯ ನಿನಗೆ ಗೊತ್ತಾ?

ಹಾಗೇ ನಡೆಯುತ್ತಿರುವಾಗ ಒಬ್ಬ ಹುಡುಗ ಬಗ್ಗಿ ನೆಲದ ಮೇಲೆ ಏನೋ ಹೆಕ್ಕುತ್ತಿರುವ ಹಾಗೆ ನಿಂತಿದ್ದ. ಅವನ ಕೈನಲ್ಲಿ ಏನೋ ಕಾರ್ಡ್ ಇದ್ದ ಹಾಗಿತ್ತು. ನಾನು ಅದರ ಕಡೆಗೆ ಹೆಚ್ಚು ಗಮನ ಕೊಡದೇ ಮುಂದೆ ನಡೆದೆ. ಎಂಟು ಹೆಜ್ಜೆ ಹಾಕುವುದರಲ್ಲಿ ಅವನ ವಿಷಯದಲ್ಲಿ ಮನಸ್ಸಿಗೆ ಏನೋ ಕರಕರ ಅನ್ನಿಸಲು ಶುರುವಾಯಿತು. ನಡೆಯುವುದು ನಿಲ್ಲಿಸಿ ಹಿಂದೆ ತಿರುಗಿ ನೋಡಿದ್ದಷ್ಟೇ .. ನಾಲಗೆ ಆರಿಹೋಯ್ತು ಕಣೋ. ಆ ಹುಡುಗ ಏನೋ ಎತ್ತಲು ಬಗ್ಗಿದ್ದಲ್ಲ, ಅವನ ಅರ್ಧ ದೇಹವೇ ಬಾಗಿಹೋಗಿತ್ತು. ಋಷಿಗಳು ತಪಸ್ಸು ಮಾಡುವಾಗ ಕೈ ಇಟ್ಟುಕೊಳ್ಳಲು ಬಳಸುತ್ತಿದ್ದರಲ್ಲ, ಅದಕ್ಕೇನು ಹೇಳ್ತಾರೆ ಹೇಳು.. ಆ ಥರದ ಒಂದು ಕೋಲಿನ ಮೇಲೆ ಕೈ ಆಧರಿಸಿ ನಿಂತು ಹಣ ಸಹಾಯ ಕೇಳ್ತಿದ್ದ. ಅವನ ಕಾಲುಗಳೂ ತುಂಬ ಬಾಗಿಹೋಗಿ ಒಂದು ಹೆಜ್ಜೆ ಇಡುವುದಕ್ಕೆ ಅದೆಷ್ಟು ಕಷ್ಟ ಪಟ್ಟ ಗೊತ್ತಾ?

ಹಾಗೆಯೇ ನೋಡ್ತಾ ನಿಂತಿದ್ದೆ … ನಿಜಕ್ಕೂ ಅವನು ಅದೇ ರೀತಿಯೇ ಇದ್ದಾನಾ ಅನ್ನುವ ಸಣ್ಣ ಅಪನಂಬಿಕೆಯಲ್ಲಿ. 5 ನಿಮಿಷ ಕಳೆಯುವುದರಲ್ಲಿ ಅವನು ಪ್ರಯಾಸದಿಂದ ನಾಲ್ಕೈದು ಹೆಜ್ಜೆ ಹಾಕಿದ್ದ. ನಾನು ಸಂಕಟದಿಂದ ನೋಡುತ್ತಲೇ ಇದ್ದವಳು ಅವನ ಹತ್ತಿರ ಹೋಗಿ ಒಂದಿಷ್ಟು ದುಡ್ಡು ಕೊಟ್ಟೆ. ಇನ್ನೂ ಜಗತ್ತು ತುಂಬ ಅಮಾನವೀಯ ಅಲ್ಲ ಅನ್ನುವುದಕ್ಕೆ ಸಾಕ್ಷಿ ಎನ್ನುವ ಹಾಗೆ ಅವನ ಕೈನಲ್ಲಿ ಹತ್ತು, ಇಪ್ಪತ್ತು, ಐವತ್ತರ ಸುಮಾರು ನೋಟುಗಳಿದ್ದವು. ಎಲ್ಲವೂ ಅಸ್ತವ್ಯಸ್ತವಾಗಿ ಜಾರುತ್ತಿದ್ದವು.. ಆದರೂ ಅವನು ಜೋಡಿಸಿಕೊಳ್ಳಲಾರ. ಇದ್ದಿದ್ದರಲ್ಲಿ ಎಲ್ಲವನ್ನೂ ಚೂರು ಒಪ್ಪ ಮಾಡಿ ಅವನ ಕೈನಲ್ಲಿ ಸರಿಯಾಗಿ ಜೋಡಿಸಿಟ್ಟೆ. ಎದುರು ಅಂಗಡಿಯ ಬಾಗಿಲಲ್ಲಿ ಕೂತಿದ್ದ ಸೆಕ್ಯುರಿಟಿಯವನು ಹತ್ತು ರೂಪಾಯಿ ಅವನ ಕೈಗಿಟ್ಟಿದ್ದು ಕಂಡಿತು. ಹುಡುಗ ಮತ್ತೆ ದೇಹ ಮುಂದೆ ನಡೆಸುವ ಪ್ರಯತ್ನಕ್ಕಿಳಿದ… ನಾನು ಮತ್ತೆ ನಡೆಯಲು ಶುರು ಮಾಡಿದೆ.

ಮಲ್ಲೇಶ್ವರಂ ಹೂವಿನ ಮಾರ್ಕೆಟ್ ಇತ್ತಲ್ಲ ಹಿಂದೆ, ಅಲ್ಲಿಗೆ ಬಂದೆ. ವರ್ಷದ ಕೆಳಗೆ ಇಡೀ ಮಾರ್ಕೆಟ್ ನೆಲಸಮವಾಗಿದ್ದು ನೋಡಿದ್ದೆ. 50 ವರ್ಷಗಳಿಂದ ಅಲ್ಲೇ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ, ಎಷ್ಟೋ ಸಲ ಚೌಕಾಸಿ ಮಾಡಿದಾಗ ಅತ್ಯಂತ ನಿರ್ಲಕ್ಷ್ಯದಿಂದ ನೋಡುತ್ತಿದ್ದ ವ್ಯಾಪಾರಿಗಳು ಎದೆಎದೆ ಬಡಿದುಕೊಳ್ಳುತ್ತಿದ್ದುದನ್ನೂ ನೋಡಿದ್ದೆ. ಈಗ ನೋಡಿದರೆ ಸಂಪಿಗೆ ರಸ್ತೆಗುಂಟ ಸಣ್ಣಸಣ್ಣ ಅಂಗಡಿ ಕಟ್ಟಿಕೊಂಡು ನಳನಳಿಸುವ ಹೂವು, ತರಕಾರಿ ವ್ಯಾಪಾರದಲ್ಲಿ ಮುಳುಗಿದ್ದಾರೆ! ಬದುಕು ಕಟ್ಟುವ ಆಸೆಯೊಂದು ಎಲ್ಲರಲ್ಲೂ ಹೇಗೆ ಜಾಗೃತವಾಗಿರುತ್ತದೆ ನೋಡು! ಹಿಂದಿದ್ದ asbestos ಶೀಟಿನ ಸಂದಿಯಿಂದ ನೆಲಸಮವಾದ ಜಾಗ ಕಾಣುತ್ತಿತ್ತು…

ನಾನು ಬದುಕಿನ ಸಾಧ್ಯತೆಗಳ ಬಗ್ಗೆ ಆಶ್ಚರ್ಯ ಪಡುತ್ತಾ ಮುಂದೆ ನಡೆದೆ..

ಒಂದು ಅಂಗಡಿಯನ್ನು ದಾಟುತ್ತಿರುವಾಗ ‘ಅತ್ತಾಗೆ ರಾತ್ರಿ ಅನ್ನೆಲ್ಡಕ್ಕೆ ಬಂದ್ಬುಡು ರಾಜ. ನಾನಿಲ್ಲೇ ಬಿದ್ದಿರ್ತೀನಿ’ ಅಂತ ದೊಡ್ಡ ಗಂಟಲಿನಲ್ಲಿ ಹೆಂಗಸೊಬ್ಬಳು ಹೇಳಿದ್ದು ಕೇಳಿಸಿತು. ಅತ್ತ ನೋಡಿದರೆ ಒಂದು ಕೈ ಅರ್ಧವೇ ಇದ್ದ ಹೆಂಗಸೊಬ್ಬಳು ಒಂದಿಷ್ಟು ಹಣ್ಣು ಮುಂದೆ ಹಾಕಿಕೊಂಡು ಕೂತಿದ್ದಾಳೆ. ಯಾರೊಡನೆ ಮಾತಾಡ್ತಿದ್ದಾಳೆ ಅಂತ ನೋಡುವುದರಲ್ಲಿ ಎದುರಿದ್ದ ಯುವಕ “ಮೊನ್ನೆ ಬೇಗ ಬಂದಿದ್ಕೆ ಯಾಪಾರ ಮಾಡೋದು ಬ್ಯಾಡ್ವಾ. ಚಂಜೀಗೆ ಬಂದು ಸಾಯ್ತಿ ಅಂತ ಬೊಯ್ದೆ. ಇವತ್ ವಸಿ ಲೇಟಾಗಿ ಬರುಮಾ ಅಂತ ಬಂದ್ರೆ ಲೇಟು ಅಂತ ಬೊಯ್ತೀಯಾ ..’ ಎಂದದ್ದು ಕೇಳಿತು.
ಕುತೂಹಲಗೊಂಡ ನನ್ನ ರಥ ಮತ್ತೆ ಅಲ್ಲೇ ನಿಂತಿತು.

bellಆಕೆ “ಊ ಮತ್ತೆ. ಬಿರ್ನೇ ಬಾ ಅಂದ್ರೆ ಆರು ಗಂಟೇಗೇ ಬಂದು ಯಾಪಾರಾನೇ ಮಾಡಕ್ಕೆ ಬಿಡಾಕಿಲ್ಲ. ತಡ್ವಾಗಿ ಬಾ ಅಂದ್ರೆ ರಾತ್ರಿ ಅನ್ನೆಲ್ಡಕ್ಕೆ ಬತ್ತಿ…’ ಅಂತ ವಟಗುಟ್ಟುತ್ತಲೇ ಇತ್ತು. ಅವನು ನಗುಮುಖದಲ್ಲೇ ಅವಳ ಮುಂದಿದ್ದ ಹಣ್ಣನ್ನು ಚೀಲಕ್ಕೆ ತುಂಬಿಸಲು ಶುರು ಮಾಡಿದ.
ಓಹ್ ಆಗ ಅರ್ಥವಾಯ್ತು .. ಕೈ ಸರಿಯಿಲ್ಲದ ಆಕೆ ವ್ಯಾಪಾರ ಮಾಡಬಲ್ಲಳು. ಆದರೆ ಅಲ್ಲಿ ಕರೆತಂದು ಕೂಡಿಸಲು ಮತ್ತು ಕರೆದೊಯ್ಯಲು ಮತ್ತೊಂದು ಸಹಾಯ ಹಸ್ತ ಬೇಕೇ ಇತ್ತು ಎನ್ನುವುದು. ಆ ರೀತಿಯ ಸ್ಥಿತಿ ಇದ್ದರೂ ಅತೀ ದೈನ್ಯತೆ ತೋರಿಸದೇ, ದುಃಖಿಸದೇ ಜಗಳವಾಡುತ್ತ, ಜಬರದಸ್ತು ಮಾಡುತ್ತ ಇದ್ದ ಅವಳನ್ನು ಮೆಚ್ಚುಗೆಯಿಂದ ನೋಡಿದೆ.

ಅಲ್ಲಿಂದ ಮಲ್ಲೇಶ್ವರಂ ಸರ್ಕಲ್ಲಿನವರೆಗೆ ರಸ್ತೆ ಬದಿಯಿದ್ದ ಹೊಳೆವ ಕ್ಲಿಪ್ಪು-ಬಳೆ-ಸರ, ನೈಟಿ, ಕೆಂಡಸಂಪಿಗೆಯ ಘಮ, ಕರ್ಚೀಫು, ಅಗ್ಗದ ಒಳವಸ್ತ್ರಗಳು, ಸ್ವೀಟ್ ಕಾರ್ನ್ ಗಾಡಿ, ಪೆಟ್ಟಿಕೋಟು, ಚಪ್ಪಲಿ ಎಲ್ಲ ನೋಡುತ್ತಾ ನಡೆದೆ … ಅದೆಷ್ಟು ಬಗೆಯ ವ್ಯಾಪಾರ ಈ ಬದುಕು!

ಕೆಲವು ದಿನಗಳು ತುಂಬ ನೋಯಿಸುತ್ತವೆ. ಏಪ್ರಿಲ್ 18 ಅಂಥದ್ದೇ ಒಂದು ದಿನ. ಅದು ಮನಸ್ಸಿನಲ್ಲಿ ಸೃಷ್ಟಿಸುವ ಶೂನ್ಯ ಅಂತಿಂಥದ್ದಲ್ಲ. ಇಂಥ ಒಂದು ದಿನ ಮನೆಯ ಒಳಗೆ ಕೂರದೇ ಜಗತ್ತಿಗೆ ಕಾಲಿಟ್ಟಿದ್ದಕ್ಕೆ ನಾನಿವತ್ತು ನಿನಗೆ ಋಣಿಯಾಗಿದ್ದೇನೆ. ಜಂಗಮಕ್ಕೆ ಯಾಕೆ ಅಳಿವಿಲ್ಲ ಅನ್ನುವುದು ಅರಿವಾದ ಕ್ಷಣವದು. ಇಂಥದ್ದೊಂದು ಪಯಣ ಇವತ್ತು ಶುರುವಾಗಿದ್ದು ನಿನ್ನಿಂದಲ್ಲವಾ, ಹಾಗಾಗಿ ಮನೆ ಸೇರಿದವಳಿಗೆ ನಿನಗಿದೆಲ್ಲ ಹೇಳಬೇಕು ಅನ್ನಿಸಿ ಈ ಪತ್ರ.
ನಾಳೆ ಮತ್ಯಾವ ದಾರಿ ಮತ್ತೇನು ತೋರಿಸುತ್ತದೋ ಗೊತ್ತಿಲ್ಲ … ಹೊರಡುತ್ತೇನೆ …

‍ಲೇಖಕರು admin

20 April, 2016

7 Comments

  1. umavallish

    ಚೆನ್ನಾಗಿದೆ ಭಾರತಿ ”ಸೂಕ್ಷ್ಮಾವಲೋಕನ” ಅಂದರೆ ನೋಡು ಇದು. ಅದಕ್ಕೆ ಸುಂದರ ಬರಹದರೂಪ ಕೊಟ್ಟಿದ್ದೀಯಾ.

  2. Aparna Rao

    ನಿತ್ಯ ಸಾಯುವ ಮನಸ್ಸಿನ ಸಂಜೀವಿನಿ ಬರಹ ಭಾರತಿ. _/_. 🙂

  3. ಅಮರದೀಪ್.ಪಿ.ಎಸ್.

    ಚೆನ್ನಾಗಿದೆ ಮೇಡಂ………….

  4. Anonymous

    Thanks Uma, Aparna, amardeep

  5. Malur Ramaswamy Kumaraswamy

    Elligee payana!!! Yaavudo daari, bidda taragelegalu, moodive lekhaniha anchininda!!! Truth of lifes journey beautifully narrated.

  6. chaithra

    ಇದು ನೋವೋ, ಬದುಕಿನ ಕುರಿತಾದ ವಿಮರ್ಷೆಯೋ, ಅಲ್ಲ ದಾರಿ ತೋರಿದವರಿಗೊಂದು ಅಭಿನಂದನೆಯೋ ! ಒಟ್ಟಾರೆ ಬದುಕು ಜಟಕಾ ಬಂಡಿ !

  7. Bharathi b v

    Thanks malur sir, chaithra

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading