ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಮೆಸ್ಟ್ರಿ ಲ್ಯಾಬಿನ ನಿರ್ವಾತದಿ ಬಚ್ಚಿಟ್ಟ ಗುಡುಗು ಮತ್ತು…

ಮಳೆ ನೆರಳು

– ರಾಘವೇಂದ್ರ ಹೆಗಡೆ

 
ಕಿಟಕಿಯಿಂದಾಚೆ ಇಣುಕುತ್ತೇನೆ
ಹೊಗೆ ಮೋಡಗಳ ಪಟ್ಟಿ
ಹಸಿರು ತರಂಗಗಳ ಹೊದ್ದು ಹಾಸುವ ನಕ್ಷತ್ರ
ತೊಳೆದು ಒಣಗಿಸಿಟ್ಟ ಬೆರಳಿಗೆ
ಅಂಟಿದ ನೀಲಿಶಾಯಿಯಲಿ ಕಂಡ ಆಕಾಶ
ಮತ್ತು ಒದ್ದೆ ಮಣ್ಣು ತೂಕ ಅಳೆದು
ಹೊತ್ತದ್ದು ನಿನ್ನ ನೆರಳೇ ಇರಬೇಕು
 
ಬೆಳಗ್ಗೆ ಹೂವ ದಳದ ಮೇಲೆ ಕೂತ ಉಲ್ಕೆ
ಈಗ ಈ ಅಲ್ಯೂಮಿನಿಯಂ ಫ್ರೇಮಿನ
ಕಪ್ಪು ಗ್ಲಾಸುಗಳ ದಾಟಿ ಬಂದಿದೆ
ಕೆಮೆಸ್ಟ್ರಿ ಲ್ಯಾಬಿನ ನಿರ್ವಾತದಿ ಬಚ್ಚಿಟ್ಟ
ಗುಡುಗು ಮತ್ತು ಫಿಸಿಕ್ಸ್ ಲ್ಯಾಬಿನ
ಡಾರ್ಕುರೂಮಿನ ಮಿಂಚು ಬಲಾಬಲಕ್ಕೆ ಇಳಿದಿರಬೇಕು
 
ಬಿಡಿಸಿಟ್ಟ ನೆರಳ ಬೊಗಸೆಯಲ್ಲಿ ಮಡಚಿ
ಹೊತ್ತೋಡಿಹೋದ ಬೆಳಕ
ಕಣಕೆ ಜೀವದ ಹಂಗಿಲ್ಲ
ಇದಕ್ಕೆ ಸರಕ್ಕನೆ ಎದೆಯಿಂದೆದ್ದು
ಅಂತರಾಳವನನವರಿಸಿ ಕಡಲೊಡಲಾಳಕ್ಕಿಳಿವಂತೆ
ಹೋದ ಕವಿತೆ ಸಾಲುಗಳೇ ಸಾಕ್ಷಿ
 
ಪ್ರಾಸಗಳನ್ನು ಬಿಟ್ಟು ಹಾರುತ್ತದೆ
ಮೋಡ ಚಾದರದಡಿ ಹಕ್ಕಿ
ತ್ರಾಸುಗಳ ಬದಿಗಿರಿಸಿ
ಬಾಗಿ ಬಾಗಿ ನಿಲ್ಲುವ ಮರಕ್ಕೆ ತೂಫಾನುಗಳ ಲೆಕ್ಕವಿಲ್ಲ
ನೀಲಿಗೆಂಪು ಬಣ್ಣದ ಶೀಟಿನ ಈ ಹಾಳು ಮಾಡಿಗೆ
ಪಟಪಟ ಸಪ್ಪಳ ಮಾಡಲಷ್ಟೇ ಗೊತ್ತು;
ಇರುಳ ಬೀದಿ ದೀಪಕೆ ಗಿರಕಿ ಹೊಡೆವ ಹಾತೆಯಂತೆ
 

‍ಲೇಖಕರು avadhi

8 July, 2013

5 Comments

  1. Kajooru sathish

    ಕವಿತೆ ಚೆನ್ನಾಗಿದೆ..

  2. ಪ್ರಮೋದ್

    ನಿಮ್ಮ ತಲೆಯೆ೦ಬ ಕೆಮೆಸ್ಟ್ರಿ ಲ್ಯಾಬ್ ನಲ್ಲಿ ಆಮ್ಲ ಪ್ರತ್ಯಾಮ್ಲಗಳು ರಸಾಯನ ಮಾಡಿ ರಸವತ್ತಾದ ಕವಿತೆ ಬರುತ್ತದೆ 🙂 ಒಳ್ಳೆಯ ಕವಿತೆ

  3. Badarinath Palavalli

    ಆಗಾಗ ಪ್ರಾಸಗಳನ್ನು ಬಿಟ್ಟು ಹಾರಿದಾಗಲೇ ಕವಿತೆಗೂ ಸ್ವಾತಂತ್ರ್ಯ.
    ಚಿತ್ರಗಳನ್ನು ಕಟ್ಟಿಕೊಡುವ ಪದ್ಧತಿ ನಿಮಗೆ ಮೈ ಒಗ್ಗಿದೆ. ತುಂಬಾ ಹಿಡಿಸಿತು.

  4. ರಾಘವೇಂದ್ರ ಹೆಗಡೆ

    ಪ್ರೀತಿಯಿಂದ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ತಮ್ಮೆಲ್ಲರಿಗೂ, ಕವಿತೆಯನ್ನು ಪ್ರಕಟಿಸಿದ ‘ಅವಧಿ’ ಬಳಗಕ್ಕೂ ಕೃತಜ್ಞತೆಗಳು. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading