ಮಂಜುನಾಯಕ ಟಿ
ಡಿಗ್ರಿಯಲ್ಲಿ ಅವತ್ತು ಕೆಮಿಸ್ಟ್ರಿ ಲ್ಯಾಬ್ ಇತ್ತೆಂದರೆ ಬೆಳಿಗ್ಗೆಯಿಂದಲೇ ಮನಸಲ್ಲಿ ಕಸಿವಿಸಿ ಹೊಗೆಯಾಡಲಿಕ್ಕೆ ಶುರುವಿಟ್ಟುಕೊಂಡಿರುತ್ತಿತ್ತು. ಮೊದಲೇ ನಂಗೆ ಕೆಮಿಸ್ಟ್ರಿಯೆಂದರೆ ಎಲ್ಲಿಲ್ಲದ ಭಯ ಭಕ್ತಿ. ಪಿಯುಸಿಯಲ್ಲಿ ಕೂದಲೆಳೆ ಅಂತರದಲ್ಲಿ ಪಾಸುಮಾಡಿಕೊಂಡಿರುವ ವಿಷಯವೆನ್ನುವ ಮರ್ಯಾದೆಗೋ, ಅಥವಾ ಇನ್ನೂ ಅರ್ಥವಾಗದೆ ನನ್ನ ಪಾಲಿನ ಚಿದಂಬರ ರಹಸ್ಯಗಳಾಗಿ ಉಳಿದಿರುವ ತರಲೆ ಆರ್ಗಾನಿಕ್ ರಿಯಾಕ್ಷನ್ನುಗಳ ಕಾರಣಕ್ಕೋ, ಇಲ್ಲಾ ‘ಗುರುಭಯಂಕರ ಕಮನವಳ್ಳಿ ಮಾಸ್ತರ’ರಂತ ಸ್ಟ್ರಿಕ್ಟು ಗುರುಗಳಿರುವ ಸಬ್ಜೆಕ್ಟೆನ್ನುವ ಭಕ್ತಿಗೋ…ಒಟ್ಟಿನಲ್ಲಿ ಯಾಕೋ ಸರಿಯಾಗಿ ಗೊತ್ತಿಲ್ಲ. ಕೆಮಿಸ್ಟ್ರಿ ಲ್ಯಾಬ್ ಇದ್ದ ದಿನವಂತೂ ವಿನಾಕಾರಣ ಆತಂಕವೊಂದು ಎದೆಯಲ್ಲಿ ಕುಣಿಯುತ್ತ ಕುಂಟಾಬಿಲ್ಲೆ ಆಡುತ್ತಿತ್ತು.
ಕೆಮಿಸ್ಟ್ರಿ ಲ್ಯಾಬಿನ ಖದರ್ರೇ ಹಂಗಿತ್ತು. ಅಲ್ಲಿ ಬೈಸಿಕೊಳ್ಳದಿರಬೇಕಾದರೆ ಒಂದಷ್ಟು ನಿಯಮಗಳಿದ್ದವು. ಅವನ್ನು ಪಾಲಿಸಲೇಬೇಕಿತ್ತು. ಎಪ್ರಾನ್ ತೊಟ್ಟುಕೊಂಡೇ ಒಳಹೋಗಬೇಕು. ವಾರ ವಾರ ಮಾಡುತ್ತಿದ್ದ ಪ್ರಾಕ್ಟಿಕಲ್ಲುಗಳನ್ನು ಬರೆದಿಡುತ್ತಿದ್ದ ಜರ್ನಲ್ ಅಥವ ರೆಕಾಡರ್ು ಬುಕ್ಕಿಗೆ ಕಂದು ಬಣ್ಣದ ಕವರ್ರನ್ನೇ ಹಾಕಬೇಕು. ಅದಕ್ಕೊಂದು ಲೇಬಲ್ ಅಂಟಿಸಿರಬೇಕು. ಹಿಂದಿನ ವಾರದ ಪ್ರಾಕ್ಟಿಕಲ್ಲನ್ನು ಪೂರ್ತಿ ಬರೆದುಕೊಂಡೇ ಬರಬೇಕು. ಕಂಟೆಂಟು, ಪೇಜ್ ನಂಬರ್ರು, ದಿನಾಂಕ ಎಲ್ಲವೂ ಕರಾರುವಕ್ಕಾಗಿ ವಿಧಿಸಿದಂತೆಯೇ ಇರಬೇಕು. ಆಬ್ಸರ್ವೇಷನ್ ಬುಕ್ಕು, ಮ್ಯಾನುವಲ್ಲು, ಕಡ್ಡಿಪಟ್ಣ, ನ್ಯಾಪ್ಕಿನ್ನು, ಪ್ಲಾಟಿನಂ ವಯರ್ರು, ಫ್ರ್ಯಾಕ್ಷನಲ್ ವೇಟ್ ಬಾಕ್ಸುಗಳನ್ನು ಅಪ್ಪಿ ತಪ್ಪಿಯೂ ಮರೆತು ಬರುವಂತಿಲ್ಲ (ಕೆಲವು ಸರ್ತಿ ಕಡ್ಡಿಪಟ್ಣ ಮರ್ತುಬಂದು ಬೈಸಿಕೊಂಡು ಲ್ಯಾಬಿನಿಂದ ಹೊರಹಾಕಿಸಿಕೊಂಡು ಕೆಸಿಡಿ ಸರ್ಕಲ್ಲಿಗೆ ಓಡುತ್ತ ಹೋಗಿ ತಂದು ಬೆವರುತ್ತ ವಾಪಸ್ಸು ಲ್ಯಾಬು ಸೇರಿಕೊಂಡ ಉದಾಹರಣೆಗಳಿವೆ)
ಲ್ಯಾಬಿನ ಮುಂಬಾಗಿಲ ಪಕ್ಕದಲ್ಲಿ ಸ್ಟೂಲಿನ ಮೇಲಿಟ್ಟಿರುತ್ತಿದ್ದ ಹೈಡ್ರೋಜೆನ್ ಸಲ್ಫೈಡ್ ದ್ರಾವಣದ ಗಬ್ಬು ವಾಸನೆ ನಮ್ಮನ್ನು ಸ್ವಾಗತಿಸುತ್ತಿತ್ತು. ಅದರ ಘಾಟು ಊರಿಗೆಲ್ಲಾ ‘ಇಲ್ಲೊಂದು ರಾಸಾಯನಿಕ ವಿಜ್ಞಾನದ ಪ್ರಯೋಗಾಲಯವಿದೆ’ ಎಂದು ಸಾರುವಂತೆ ಪಸರಿರುತ್ತಿತ್ತು. ಒಳಗಿಟ್ಟರೆಲ್ಲಿ ಅದರ ಘೋರ ಗಂಧಕ್ಕೆ ಲ್ಯಾಬೊಳಗಿನ ಎಲ್ಲಾ ವಿದ್ಯಾರ್ಥಿಗಳು ಮತ್ತು ಮಾಸ್ತರರು ಮೂರ್ಚೆ ತಪ್ಪಿ ಬಿದ್ದು 108 ಲಾರಿಯನ್ನೇ ಕರೆಸಬೇಕಾದೀತು ಎಂಬ ಎಚ್ಚರಿಕೆಯಿಂದ ಅದನ್ನು ಹೊರಗಿಟ್ಟಿರುತ್ತಿದ್ದರು ಅನ್ಸುತ್ತೆ. ನಾವೆಲ್ಲ ಹೊರಗಿದ್ದ ಕಟ್ಟೆಯ ಮೇಲೆ ಕೂತು ಹರಟುತ್ತ ಅಟೆಂಡರ್ ಬೆಳ್ಳುಳ್ಳಿ ಅಂಕಲ್ರ ಕರೆಗಾಗಿ ಕಾಯುತ್ತ ಕೂತಿರುತ್ತಿದ್ದೆವು. ಬೆಳ್ಳ ಬೆಳ್ಳನೆಯ ಎಪ್ರಾನ್ ತೊಟ್ಟಿರುತ್ತಿದ್ದ ನಾವೆಲ್ಲ ಸಾಮೂಹಿಕ ಸರ್ಜರಿಯೊಂದಕ್ಕೆ ತಯಾರಾಗಿ ನಿಂತ ಅಪ್ರಾಪ್ತ ವೈದ್ಯರುಗಳಂತೆ ಕಾಣುತ್ತಿದ್ದೆವು.

ಒಳಹೋದ ಮೇಲೆ ನೆನ್ನೆ ರಾತ್ರಿ ಕೂತು ಕಂಪ್ಲೀಟ್ ಮಾಡಿರುತ್ತಿದ್ದ ಜರ್ನಲ್ಲುಗಳನ್ನು ಬೋರಲಾಗಿ ಬಿದ್ದುಕೊಂಡಿರುತ್ತಿದ್ದ ಭಾರೀ ಟೇಬಲ್ ಒಂದರ ಮೇಲಿಟ್ಟು ನಮ್ಮ ನಮ್ಮ ನಂಬರಿನ ಟೇಬಲ್ಲಿಗೆ ಬಂದು ಸೈಲೆಂಟಾಗಿ ನಿಲ್ಲಬೇಕಿತ್ತು. ಮೊದಲಿಗೆ ಗುರುಗಳು ಅವತ್ತಿನ ಪ್ರಾಕ್ಟಿಕಲ್ಲಿನ ಪ್ರೊಸೀಜರ್ ಅನ್ನು, ಆ ಪ್ರಾಕ್ಟಿಕಲ್ಲಿಗೆ ಸಂಭಂದಿಸಿದ ರಿಯಾಕ್ಷನ್ನುಗಳನ್ನು, ಥಿಯರಿಯನ್ನು, ವಹಿಸಬೇಕಾದ ಎಚ್ಚರಿಕೆಗಳನ್ನು ಮುಂತಾಗಿ ಹೇಳುತ್ತಿದ್ದರು. ನಾವೆಲ್ಲ ಅತ್ಯಂತ ವಿನಯಶೀಲರಾಗಿ ನಿಂತು ಕೇಳುತ್ತಿದ್ದೆವು. ಅಥವ ಕೇಳುವವರಂತೆ ಪೋಸುಕೊಡುತ್ತಿದ್ದೆವು. ಆಮೇಲೆ ಅವತ್ತಿಗೆ ಬೇಕಾದ ಸಾಮಾನು ಸರಂಜಾಮುಗಳು ಅಂದರೆ ಅಪರೇಟಸ್ಸು, ಸೊಲುಷ್ಯನ್ನೂ, ಫಿಲ್ಟರ್ ಪೇಪರ್ ಇತ್ಯಾದಿಗಳನ್ನು ನಮ್ಮ ನಮ್ಮ ಕಾರ್ಯಕ್ಷೇತ್ರಗಳಿಗೆ ಅಂದರೆ ಟೇಬಲ್ಲುಗಳಿಗೆ ತಂದಿಟ್ಟುಕೊಳ್ಳಬೇಕಿತ್ತು. ನಾಲ್ಕು ತಾಸು ನಿಂತೇ ಲ್ಯಾಬು ನಿರ್ವಹಿಸಬೇಕಿತ್ತು. ಹಾಗಾಗಿ ಆಗೊಬ್ಬರು ಈಗೊಬ್ಬರು ನಾಸ್ಟಾ ಮಾಡದೆ ಬಂದೋರು ತಲೆತಿರುಗಿ ಬೀಳೋದು ಕಾಮನ್ನಾಗಿತ್ತು. ಆಗೆಲ್ಲ ನಮ್ಮೆಲ್ಲರ ಫೆವರಿಟ್ಟಾಗಿದ್ದ ಸಾಳುಂಕೆ ಮೇಡಂ ತಲೆತಿರುಗಿ ಬಿದ್ದೋರಿಗೆ ಪಾರ್ಲೇಜಿ ತರಿಸಿಕೊಡುತ್ತಿದ್ದರು. ದಿನಾಲೂ ನಾಷ್ಟಾ ಮಾಡಿಕೊಂಡು ಬನ್ನಿ ಅಂತ ಎಲ್ಲರಿಗೂ ಮತ್ತೊಮ್ಮೆ ಹೇಳುತ್ತಿದ್ದರು.
ಮೂರು ವರ್ಷವೂ ಲ್ಯಾಬಿನಲ್ಲಿ ನನಗೆ ಪಾರ್ಟ್ನರ್ ಆಗಿ ಪಟಿಂಗ ಗೆಳೆಯ ಅಕ್ಷಯ ಇದ್ದ. ಇಬ್ಬರೂ ಅಪರಾಧಶಾಸ್ತ್ರವೆಂಬ ನಮ್ಮ ಕಾಲೇಜಿನ ಅತಿ ಭಯಂಕರ ಸಬ್ಜೆಕ್ಟನ್ನು ತೆಗೆದುಕೊಂಡಿದ್ದೆವು. ಅವನ ಎಫ್ರಾನಿನ ಜೇಬಿನಲ್ಲಿ ಯಾವಾಗಲೂ ರೇಷನ್ ಇರುತ್ತಿತ್ತು. ಹೆಲೋ. ಉಪ್ಕಾರ್, ರಾಜು, ಸಾಜನ್, ಇತ್ಯಾದಿ ಸುಪಾರಿಗಳಿಗೆ ಅಂವ ರೇಷನ್ ಅಂತ ಕರೀತಿದ್ದ. ನಾನು ಕೇಳಿದಾಗ ಇಷ್ಟೇ ಇಷ್ಟು ಕೊಟ್ಟು ‘ಎಂಜಾಯ್ ಮಾಡು’ ಅಂತಿದ್ದ ಕರ್ಣಕುಂಡಲವನ್ನೇ ಕಿತ್ತುಕೊಟ್ಟ ದಾನಶೂರ ಕರ್ಣನಂತೆ. ಬಹಳ ಸಾರಿ ಗುರುಗಳು ಚಾ ಕುಡಿಯಲು ಹೊರಹೋದಾಗ ಇಲ್ಲವೇ ಜರ್ನಲ್ ಚೆಕ್ ಮಾಡುತ್ತ ಬಿಜಿಯಾಗಿದ್ದಾಗ ಲ್ಯಾಬಿನಲ್ಲಿ ಸಣ್ಣಗೆ ಸಂತೆ ಶುರುವಾಗಿಬಿಡುತ್ತಿತ್ತು. ಅಂತ ಸಂದರ್ಭಗಳಲೆಲ್ಲ ಅಂವ ರಾಡಿಯಾಗಿರುತ್ತಿದ್ದ ಟೇಬಲ್ ಹತ್ತಿರ ನನ್ನೊಬ್ಬನನೇ ಬಿಟ್ಟು ಹೆಣ್ಣುಮಕ್ಕಳ ಕುಶಲ ಕ್ಷೇಮ ವಿಚಾರಿಸಿಕೊಂಡುಬರಲು ಮೆಲ್ಲಗೆ ಹೊರಟುಬಿಡುತ್ತಿದ್ದ. ಯಡವಟ್ಟುಗಳನ್ನು ಯಥೇಚ್ಚವಾಗಿ ಮಾಡುತ್ತ ನನ್ನಿಂದ ಬೈಸಿಕೊಳ್ಳುತ್ತಿದ್ದ. ಮೊದಲೇ ನಾನು ಹಂಗು ಹಿಂಗೂ ಮಾಡಿ ರೀಡಿಂಗ್ಗಳು ಸರಿ ಬರುವಂತೆ ಮಾಡಲು ಹೆಣಗಾಡುತ್ತಿದ್ದೆ. ಇಂವ ಎನೋ ಮಾಡಲು ಹೋಗಿ ಅವತ್ತಿನ ಪ್ರಯೋಗವನ್ನು ಹಳ್ಳದ ದಾರಿ ಹಿಡಿಸಿಬಿಡುತ್ತಿದ್ದ.
ಬಿಎಸ್ಸಿ ಮೂರನೇ ಸೆಮಿಸ್ಟರ್. ಡಿಸ್ಟ್ರಿಬ್ಯೂಷನ್ ಅಂತ ಪ್ರಾಕ್ಟಿಕಲ್ಲಿನ ಹೆಸರು. ಆ ಪ್ರಾಕ್ಟಿಕಲ್ಲಿನಲ್ಲಿ ಕಡು ನೇರಳೆ ಬಣ್ಣದ ದ್ರಾವಣವನ್ನು ಎರಡು ಬಾಟಲಿಗಳಲ್ಲಿ ತಯಾರಿಸಿಕೊಂಡು ತಾಸುಗಟ್ಟಲೆ ಅವನ್ನು ಅಲುಗಾಡಿಸುತ್ತ ನಿಲ್ಲಬೇಕಿತ್ತು. ಅವತ್ತು ಅಕ್ಷಯ ಶೇಕ್ ಮಾಡುತ್ತ ನಿಂತಿದ್ದ. ನಾ ಅವನೊಂದಿಗೆ ಸುಮ್ಮನೆ ಹರಟುತ್ತ ನಿಂತಿದ್ದೆ. ಶೇಕ್ ಮಾಡುವುದನ್ನು ಒಂಚೂರು ಜೋರು ಮಾಡಿದ. ಮತ್ತೂ ಜೋರು ಮಾಡುತ್ತ ಹೋದ. ಅದ್ಯಾವುದೋ ಖರಾಬು ಕ್ಷಣದಲ್ಲಿ ಒಂದಕ್ಕೊಂದು ಬಾಟಲಿಗಳು ತಾಗಿ ಠಳ್,,, ಕ್ಷಣಾರ್ಧದಲ್ಲಿ ಅವನ ಎಪ್ರಾನೆಲ್ಲಾ ನೇರಳೆಮಯವಾಗಿ ಯಾವುದೋ ನೇರಳೆ ರಕ್ತದ ಪ್ರಾಣಿಯನ್ನು ಬರ್ಬರವಾಗಿ ಹತ್ಯೆಗೈದು ಬಂದವನಂತೆ ಬೆಪ್ಪಾಗಿ ನಿಂತಿದ್ದ. ನಾವೆಲ್ಲ ಆಪ್ತಮಿತ್ರರು ಕಕ್ಕಾಬಿಕ್ಕಿಯಾಗಿದ್ದ ಅವನನ್ನು ಸಮಾಧಾನಿಸುವುದು ಬಿಟ್ಟು ಪಕಪಕ ನಗುತ್ತ ಅವನ ಅಸಹಾಯಕತೆಯನ್ನು ಮತ್ತಷ್ಟು ಹೆಚ್ಚಿಸಿದೆವು. ಮೊದಲೇ ಆದ ಅನಾಹುತವನ್ನು ಅರಗಿಸಿಕೊಳ್ಳಲಿಕ್ಕಾಗದೆ ಗಾಭರಿಯಲ್ಲಿದ್ದ ಸ್ನೇಹಿತನನ್ನು ಮತ್ತಷ್ಟು ಕಂಗೆಡಿಸೋದು ಬ್ಯಾಡ ಅಂತ ನಿರ್ಧರಿಸಿದರು ಅನ್ಸುತ್ತೆ ಅವತ್ತು ಲ್ಯಾಬಿನಲ್ಲಿದ್ದ ಡೆಡ್ಲಿ ಕಮನವಳ್ಳಿ ಸರ್. ಲೈಟಾಗಿ ಒಂದೆರಡು ವ್ಯಂಗ್ಯದ ಮಾತುಗಳನ್ನಾಡಿ ತಮ್ಮದೇ ಟಿಪಿಕಲ್ ಶೈಲಿಯಲ್ಲಿ ಕುಹಕದ ನಗೆಯೊಂದನ್ನು ಬೀರಿ ಸುಮ್ಮನಾದರು. ಅವರು ಅಕ್ಷಯನಿಗೆ ಮಹಾಮಂಗಳಾರತಿ ಮಾಡಿ ಭರ್ಜರಿ ಮನರಂಜನೆ ನೀಡುತ್ತಾರೆಂದು ಕಾದಿದ್ದ ನಮಗೆಲ್ಲ ನಿರಾಶೆಯಾದದ್ದಂತು ಸತ್ಯ!
ಇಂಥವೇ ನೂರೊಂದು ತರಲೆ ನೆನಪುಗಳನ್ನು ದೊರಕಿಸಿಕೊಟ್ಟ ಜಾಗ ಅದು. ನಮ್ಮವೆಷ್ಟೋ ಸವಿಸವಿ ನೆನಪುಗಳಿವೆ ಆ ಗ್ಲಾಸು ಬಜಾರಿನ ತರಹೇವಾರಿ ಗ್ಲಾಸುಗಳಲ್ಲಿ, ಎಷ್ಟು ಹೇಳಿದರೂ ತೊಳೆಯದೇ ಇಟ್ಟು ಬರುತ್ತಿದ್ದ ಬ್ಯುರೆಟ್ಟು, ಫ್ಲಾಸ್ಕುಗಳಲ್ಲಿ, ಸುಮ್ಸುಮ್ನೆ ಠಳ್ ಅನ್ನಿಸುತ್ತಿದ್ದ ಟೆಸ್ಟ್ ಟ್ಯೂಬುಗಳಲ್ಲಿ, ಕಿಟಕಿಯಲ್ಲಿ ಸಿಗರೇಟು ಸೇದುತ್ತ ನಿಂತಿರುವ ಊಛಿಟ, ಊ2ಠ4, ಊಓಔ3 ಬಾಟಲಿಗಳಲ್ಲಿ, ಅವುಗಳ ಘಾಟು ಗಂಧದಲ್ಲ್ಲಿ, ಕೆಟ್ಟು ನಿಂತಿರುವ ಕೆಮಿಕಲ್ ತಕ್ಕಡಿಗಳಲ್ಲಿ, ಆಗಾಗ ನಮ್ಮ ನಿರ್ಲಕ್ಷತೆಗೆ ಬಲಿಯಾಗಿ ಬೆಂಕಿ ಹಚ್ಚಿಸಿಕೊಂಡು ಉರಿಯುತ್ತಿದ್ದ ಕಸದಬುಟ್ಟಿಗಳಲ್ಲಿ, ಕಂದು ಕಟ್ಟಿಗೆಯ ರ್ಯಾಕಿನಲ್ಲಿ ಸಾಲಾಗಿ ನಿಂತು ನಗುತ್ತಿರುವ ಬಾಟಲಿಗಳಲ್ಲಿ, ಫಳ್ ಅಂತ ಮೂಡಿ ಅಚ್ಚರಿ ಹುಟ್ಟಿಸುತ್ತಿದ್ದ ಬಣ್ಣ ಬಣ್ಣದ ಪ್ರೆಸಿಪಿಟೇಟು, ಬ್ರೌನ್ ರಿಂಗು ಇತ್ಯಾದಿಗಳಲ್ಲಿ…






chemistry is always mystery:)
ನಾನೂ ಒಂದು ಕಾಲದಲ್ಲಿ , ಮೂರು ವರ್ಷ ಇಂಥ ಲ್ಯಾಬಿನಲ್ಲಿ , ಇಂಥದೇ ಅನುಭವ ಅನುಭವಿಸಿದ್ದೆ. ಲೇಖನ ಓದಿ ಮತ್ತೆ ನೆನಪುಗಳ ಜ್ಞಾಪಿಸಿಕೊಂಡೆ.ಸಂತೋಷವಾಯಿತು.ಲೇಖನ ಚೆನ್ನಾಗಿದೆ; ಅಭಿನಂದನೆಗಳು.
ತುಂಬಾ ಧನ್ಯವಾದಗಳು:-):-)