ಸದಾಶಿವ ಸೊರಟೂರು
ನಿನ್ನೆಯಷ್ಟೇ ಸಿಡಿದು
ದೇವರ ಕೆಲಸವನ್ನು
ಸುಲಭ ಮಾಡಿಟ್ಟ
ಬಾಂಬಿನ ಘಾಟು ವಾಸನೆ
ಮೂಗಿಗೆ ಬಡಿಯುತ್ತಿತ್ತು
ಇಲ್ಲೂ ಮರಗಳಿವೆ
ಮತ್ತು
ಗಡಿಯಾಚೆಯ ಮರಕ್ಕೂ
ಹಸಿರು ಬಣ್ಣವಿದೆ!
ಹಾರಿ ಬಂದು ಕೂತ
ಒಂದು ಜೊತೆ ಪಿಕಳಾರದ
ಕೆನ್ನೆ ತುಂಬಾ ತುಂಟ
ಕೆಂಪು ಬಣ್ಣ
ಆಗ ನನಗೊಂದು ಗೀಳಿತ್ತು
ಸಿಕ್ಕ ಸಿಕ್ಕ ಹಕ್ಕಿಗಳನ್ನೆಲ್ಲಾ
ನನ್ನ ಕ್ಯಾಮೆರಾದೊಳಗೆ
ಸೆರೆ ಹಿಡಿದು ಹಾಕುತ್ತಿದ್ದೆ
ಪಿಕಳಾರ ಕಂಡಿದ್ದೆ
ಕೈಗಳು ಕ್ಯಾಮೆರಾ ಕ್ಕೆ
ತಡಕಾಡಿದವು!

ನನ್ನ ಹೆಗಲಿಗೆ ನೇತು
ಬಿದ್ದಿರುವುದು ಕ್ಯಾಮೆರಾವಲ್ಲ
ಜೀವ ಎಣಿಸುವ
ಬಂದೂಕು,
ಜೋಡಿ ಪಿಕಳಾರವನ್ನು
ಹೊರಳಿಸಿ ಹೊರಳಿಸಿ
ನೋಡಿದೆ
ಮೈ ಮೇಲೆ ಎಲ್ಲೂ
ತನ್ನ ವಿಳಾಸ ಬರೆದುಕೊಂಡಿರಲಿಲ್ಲ
ಜಾತಿ ಧರ್ಮದ ಗುರುತುಗಳು
ಮೊದಲೆ ಇರಲಿಲ್ಲ
ಅತ್ತ ಇತ್ತ ನೋಡಿ
ಒಮ್ಮೆ ಬಾಲ ತಿರುಗಿಸಿ
ಹಾರಿದವು,
ಇತ್ತ ಬರಬೇಡಿ
ಇಲ್ಲಿ ಬಾಂಬುಗಳು ಸಿಡಿಯುತ್ತವೆ
ಎಂದು ಹೇಳಬೇಕೆಂದಿದ್ದೆ
ಗಡಿಯಾಚೆಯಿಂದ ಬಂದ
ಹಿಂಡು ಪಿಕಳಾರಗಳು
ನನ್ನನ್ನು ನೋಡಿ
ಮೂದಲಿಸುವಂತೆ ನಕ್ಕು
ಇವುಗಳನ್ನೂ ಸೇರಿಸಿಕೊಂಡು
ಮತ್ತೊಂದು ದಿಕ್ಕಿಗೆ ಹಾರಿದವು
ಮತ್ತೆ ಬಾಂಬುಗಳ ಸದ್ದು
ಸುರಿಯಬಹುದು ರಕ್ತ..
ಇರಿ,
ಕೆಂಪು ಬರೀ ರಕ್ತಕ್ಕೆ ಸ್ವಂತವಲ್ಲ;
ಪ್ರೀತಿಗೂ..,
ಪಿಕಳಾರದ ಕೆನ್ನೆಗೂ..!






ಒಳ್ಳೆಯ ಕವಿತೆ
ಪಿಕಳಾರದಂತೆ ನಮ್ಮ ಮನಸುಗಳು ಯಾಕಾಗುತ್ತಿಲ್ಲ…? ಉತ್ತರವಿಲ್ಲದ ಪ್ರಶ್ನೆ…ಚೆಂದದ ಕವಿತೆ ಸರ್
ನಿಮ್ಮ ಕ್ಯಾಮೆರಾ ಜೀವಂತವಾಗಿರಲಿ.
ಪಿಕಳಾರದ ಬಳಗ ನಮ್ಮೊಳಗಿಳಿಯಲಿ