ಕೃಷ್ಣ ಮೂರ್ತಿ ಬಿಳಿಗೆರೆ
ಆಕಾಳ ಕಳಚಿ ಬಿದ್ರೆ
ಆಗ ನಾನು ಬದುಕೇ ಇದ್ರೆ /ಪ/
ಚೆಲ್ಲಾಪಿಲ್ಲಿ ನಕ್ಷತ್ರ
ಬಿದ್ದಿರ್ತಾವೆ ನೆಲದಲೆಲ್ಲ
ಮಿಂಚು ಹುಳುಗಳು ಹಾಗೆತಾನೆ
ಓಡಿ ಹೋಗಿ ಹಿಡಿತೇನೆ
ಚಂದ್ರ ಚಂದದ ಚೆಂಡಿನ ಹಾಗೆ
ಉರುಳಿ ಉರುಳಿ ಹೋಗ್ತಾ ಇದ್ರೆ
ನಾನು ಅದರ ಹಿಂದೆ ಹಿಂದೇನೆ
ಓಡಿ ಹೋಗಿ ಹಿಡಿತೇನೆ
ಮೋಡದ ಗೂಡು ಕೆಳಗೆ ಬಿದ್ದು
ಗೂಡಿನ ಗುಡುಗು ನಡುಗಿ ಬಿದ್ದು
ಹಾಗೆ ಹಾಗೆ ಕರಗ್ತಾ ಇದ್ರೆ
ಓಡಿ ಹೋಗಿ ಕುಡಿತೇನೆ
ಉರಿಯೋ ಸೂರ್ಯ ಕಡಲಿಗೆ ಬಿದ್ದು
ಕೆಂಪು ಸೂರ್ಯ ತಂಪಗಾಗಿ
ದಡಕ್ಕೆ ಈಜಿ ಬರ್ತಾ ಇದ್ರೆ
ಓಡಿ ಹೋಗಿ ಮುಟ್ತೀನಿ

ದಾಸಯ್ಯನ ಕಟ್ಟೇಲಿ
ದಾಸಯ್ಯನ ಕಟ್ಟೇಲಿ ದಾಸಯ್ಯನ ತಟ್ಟೇಲಿ
ಏಸೊಂದು ಕಪ್ಪೆಗಳು ಈಜುತಿದ್ದೋ
ಆಕಾಶದ ನಕ್ಷತ್ರ ಹೋಲುತಿದ್ದೋ
ದಾಸಯ್ಯನ ಕಟ್ಟೇಲಿ ದಾಸಯ್ಯನ ತಟ್ಟೇಲಿ
ಏಸೊಂದು ಎಮ್ಮೆಗಳು ಮುಳುಗುತಿದ್ದೋ
ಕಾಡು ಕಪ್ಪಿನ ಆನೆ ಹೋಲುತಿದ್ದೋ
ದಾಸಯ್ಯನ ಕಟ್ಟೇಲಿ ದಾಸಯ್ಯನ ತಟ್ಟೇಲಿ
ಏಸೊಂದು ಹಕ್ಕಿಗಳು ನೀರು ಹೀರುತಿದ್ದೋ
ಬಣ್ಣ ಬಣ್ಣದ ಹೂವ ಹೋಲುತಿದ್ದೋ
ದಾಸಯ್ಯನ ಕಟ್ಟೇಲಿ ದಾಸಯ್ಯನ ತಟ್ಟೇಲಿ
ತರತರದ ಹೂವುಗಳು ತೇಲುತಿದ್ದೋ
ಉರಿಯೋ ದೀಪದ ಹಾಗೆ ಕಾಣುತಿದ್ದೋ
ದಾಸಯ್ಯನ ಕಟ್ಟೇಲಿ ದಾಸಯ್ಯನ ತಟ್ಟೇಲಿ
ಪಾಚಿ ಪ್ರಪಂಚಗಳು ಹಬ್ಬುತಿದ್ದೋ
ಅಚ್ಚ ಹಸಿರಿನ ಸೀರೆ ಹೋಲುತಿದ್ದೋ
ನೀರು ಧ್ಯಾನ
ಕಪ್ಪೆ:
ನೀರಿನಲಿರುವೆ ಊರಿನಲಿರುವೆ
ಉಭಯವಾಸಿ ನಾನೆಸಿರುವೆ
ನೀರಿಲ್ಲದೆಯೆ ಊರು ಸಾಧ್ಯವೆ
ವಾಟರ್ ವಟರ್ ವಾಟರ್ ಎನ್ನುವೆ

ಗಿಣಿ:
ಕೊಕ್ಕಿನ ಲಿಪ್ ಸ್ಟಿಕ್ ಮೈಯ್ಯಿನ ಹಸಿರು
ಮಾಸಿ ಹೋದರೆ ಹೋಗಲಿ ಎನ್ನುವೆ
ಹೋಗಕೂಡದು ಮರಿಗಳ ಉಸಿರು
ಗುಟುಕು ನೀರೆ ನೀನೆಲ್ಲಿರುವೆ
ನವಿಲು:
ಗರಿಗಳು ಬೇಡ ಬಣ್ಣವು ಬೇಡ
ಪುಟ್ಟ ಪುಕ್ಕಗಳೆ ಸಾಕು
ರಾಷ್ಟ್ರಪಕ್ಷಿ ಕಿರೀಟ ಬೇಡ
ಏನೆ ಇದ್ದರು ನೀರೇ ಬೇಕು
ಹುಲಿ:
ರಾಷ್ಟ್ರ ಪ್ರಾಣಿ ಬಿರುದು ಬಿಸಾಕುವೆ
ಚರ್ಮದ ಬಣ್ಣವ ತೊರೆದೇ ಬಿಡುವೆ
ಮೂರು ಕಾಸಿಗೆ ಘರ್ಜನೆ ಮಾರುವೆ
ನೀರು ಕೊಟ್ಟರೆ ಪ್ರಾಣವ ಕೊಡುವೆ
ಕೋಗಿಲೆ:
ನನ್ನ ಹಾಡನು ಕಡ ಕೊಡುವೆ
ನನ್ನ ಕಂಠವ ಅಡ ಇಡುವೆ
ಬೇಡಾ ಕಾಗೆಯ ಗೂಡಿನ ಗೊಡವೆ
ನೀರು ಧ್ಯಾನಕೆ ಕೂತೇ ಬಿಡುವೆ
ಹಾವು:
ಹಾಲಿನ ಪೂಜೆ ಬೇಡಾ ಬೇಡಾ
ಪಶುಪತಿ ಗಣಪತಿ ಸಂಘವು ಬೇಡ
ತಿಂಗಳು ಹಸಿವನು ಸಹಿಸೇ ಬಿಡುವೆ
ನೀರಿಗಾಗಿ ನಾ ಕೈ ಮುಗಿವೆ
ಆನೆ:
ಬಕೆಟ್ ನೀರನೆ ಸಾಕು ಎನ್ನುವೆ
ನೀರಿನಾಟವ ಈಗಲೆ ನಿಲಿಸುವೆ
ಮೋಡಕೆ ತಲೆಯಲಿ ಡಿಕ್ಕಿ ಹೊಡೆಯುವೆ
ಮಂತ್ರಿಯ ಕಾರಿಗಡ್ಡ ಮಲಗುವೆ







Hosa bhava punjada taja taja makkala kavitegalu.indina makkalige tumba agtyaviruva kavitegalu.