ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಮುದ್ದೆ ಮಹಾತ್ಮೆ..

ಕೃಷ್ಣಮೂರ್ತಿ ಬಿಳಿಗೆರೆ

ಮುದ್ದೆ ಎಂದರೆ ರಾಗಿ ಮುದ್ದೆ ಎಂದೇ ಅರ್ಥ. ಇನ್ನಾವುದೇ ದವಸದಲ್ಲಿನ ಮುದ್ದೆಗಳು ರಾಗಿ ಮುದ್ದೆ ಮುಂದೆ ಗೌಣ. ಜೋಳದ ಮುದ್ದೆ ನಂತರದ ಸ್ಥಾನದ್ದು. ರಾಗಿ ಹಿಟ್ಟಿನ ಜೊತೆಗೆ ಅಕ್ಕಿ ನುಚ್ಚು ಬೆರಸಿ ಮಾಡುವ ಮುದ್ದೆಯೂ ಕೆಲವು ಕಡೆ ತನ್ನ ಸ್ಥಾನ ಉಳಿಸಿಕೊಂಡಿದೆ. ಆದರೆ ಪ್ಯೂರ್‌ ಮುದ್ದೆಗೆ ತುಮಕೂರು ಮುದ್ದೆ ಹೆಚ್ಚು ನುಣ್ಣಗೆ ತುಂಬಾ ದುಂಡಗೆ. ಕೋಟ್ಯಾಂತರ ಬಿಸಿ ಮುದ್ದೆಗಳನ್ನು ಉತ್ಪಾದಿಸುತ್ತಾ ಸಾಗಿರುವ ಸಿದ್ದಗಂಗಾ ಮಠದ ಮುದ್ದೆ ಚರಿತ್ರೆ ಯಾರಿಗೆ ತಾನೆ ಗೊತ್ತಿಲ್ಲ. 

ದಕ್ಷಿಣ ಭಾರತದ ಬಹುತೇಕ ಆಹಾರ ಪದ್ದತಿಯಲ್ಲಿ ಬಲು ದೊಡ್ಡ ಸ್ಥಾನ ಹೊಂದಿದ್ದ ರಾಗಿ ಈಗ ಗೋಧಿಯ ಬಗೆಗಿನ ಕಟ್ಟು ಕತೆಗಳಿಂದಾಗಿ ಅದರ ಬಳಕೆ ಹೆಚ್ಚಾಗಿದೆ. ಅದರ ಬಣ್ಣಕ್ಕೆ ಜನ ಮರುಳಾಗಿರುವುದು ಗೊತ್ತಾಗಿದೆ. ಇದಕ್ಕೆ ಪಿಲ್ಸ್‌ ಬರಿ ಅನ್ನಪೂರ್ಣ ಹಿಟ್ಟುಗಳ ಜಾಹಿರಾತು ಬಹುಜನರನ್ನು ಮೋಡಿಮಾಡಿ ಬಿಸಾಕಿರುವುದು ನಿಜ. ‘ಗೋಧಿ ತಿನ್ನುವವರು ಬಲು ದೊಡ್ಡ ಸಂಖ್ಯೆಯಲ್ಲಿ ಮಲಬದ್ದತೆಯಿಂದ ನರಳುತ್ತಿರುವುದಕ್ಕೆ ಗೋಧಿಯೇ ಕಾರಣ, ಅದು ಯಾವ ದೃಷ್ಟಿಯಿಂದಲೂ ರಾಗಿ ಅಥವಾ ಇತರ ತೃಣ ಧಾನ್ಯಗಳಿಗೆ ಗುಣದಲ್ಲಿ ಗೋಧಿ ಸಮವಲ್ಲ’ವೆಂಬ ಡಾ ಖಾದರ್‌ ಕೂಗು ಸಾಕಷ್ಟು ಜನರಿಗೆ ಕೇಳತೊಡಗಿದೆ. ಸಕ್ಕರೆ ಕಾಯಿಲೆಗೆ ಗೋಧಿ ಸರ್ವಶ್ರೇಷ್ಟವೆಂಬ ಹುಸಿಯನ್ನು ನಂಬಿ ಗೋಧಿಗೆ ಮರುಳಾದ ಕತೆ ದೊಡ್ಡದು. ಸಾವಿರಾರು ವರ್ಷಗಳಿಂದ ನಮ್ಮ ದೇಹಕ್ಕೆ ಹೊಂದಿಕೊಂಡು ಜೀವಜೀವಾಳವಾದ ರಾಗಿಯನ್ನು ಬಿಟ್ಟ ಪರಿಣಾಮಗಳು ಹೊಟ್ಟೆಗೆ ಹೊಡೆದಮೇಲೆ ಜನ ಎಚ್ಚರಗೊಂಡಿರುವುದು ನಿಜ. ಇವೆಲ್ಲ ವಿಚಾರಗಳು ರಾಗಿ ಮಹಾತ್ಮೆಯ ವ್ಯಾಪ್ತಿಯಲ್ಲಿ ಬರುವುದರಿಂದ ಅದನ್ನಿಲ್ಲಿ ಲಂಬಿಸುವುದು ಸರಿಯಲ್ಲ.

ಚಿಟಕಿ ಒಪ್ಪು ಒಂದು ಸೌಟು ತುಪ್ಪ ಹಾಕಿ ಮಿದ್ದು ಅವ್ವ ಕೈಗೆ  ಕೊಡುತ್ತಿದ್ದ ಒಂದು ಮಿದಿಕೆ ಮುದ್ದೆಯಿಂದ ನಮ್ಮ ಮುದ್ದೆ ಪ್ರೀತಿ ಆರಂಭವಾಗಿರಬೇಕು. ಮೊಳಕೆ ಹುರಳಿ ಸಾರು, ಹಸಿ ಅವರೇ ಕಾಳು ಸಾರುಗಳೇ ಇತ್ಯಾದಿ ರುಚಿಕರ ಪದಾರ್ಥಗಳೊಂದಿಗೆ ಬೆರೆತ ಮುದ್ದೆ ನಮ್ಮ ಮುದ್ದೆ ಬಗೆಗೆಗಿನ ವ್ಯಸನವನ್ನು ಹೆಚ್ಚಿಸಿರಲು ಸಾಧ್ಯ.ನಮ್ಮ ಮನೆಗಳಲ್ಲಿ ರಾಗಿ ಮುದ್ದೆ, ರಾಗಿರೊಟ್ಟಿ. ರಾಗಿ ಶಾವಿಗೆ, ರಾಗಿ ದೋಸೆ, ಹೀಗೆ ರಾಗಿ ರಾಗಗಳ ಮನೆಯ ವಾತಾವರಣದ ವ್ಯಾಪ್ತಿಯನ್ನು ದಾಟಿ ನಾನು ತುಮಕೂರಿನ ಸಿದ್ದರಾಮಣ್ಣ ಫ್ರೀ ಹಾಸ್ಟೆಲ್‌ ಹೊಕ್ಕ ಮೇಲೆ ಮುದ್ದೆ ಬೇಟೆ ಮುಂದುವರಿಯಿತು.

ಫ್ರೀ ಹಾಸ್ಟೆಲ್‌ ನಲ್ಲಿ ಸೀಟ್‌ ಸಿಕ್ಕಿದವರು ಎರಡು ಬಗೆಯ ಅಭಿಪ್ರಾಯಗಳನ್ನು ಸಹಿಸಬೇಕಾಗಿತ್ತು. ಒಂದನೆಯದು ಪುಕ್ಕಟೆ ಊಟದ ಗಿರಾಕಿಗಳು ಎಂಬ ಉಡಾಫೆ ಮತ್ತು ಹೀನ ದೃಷ್ಟಿ, ಇನ್ನೊಂದು ಪರ್ಸೆಂಟೇಜ್‌ ಇರುವವರಿಗೆ ಮಾತ್ರ ಫ್ರೀ ಹಾಸ್ಟೆಲ್‌ ಸಿಕ್ಕುತ್ತದೆ ಎಂಬ ಮಾನ ದೃಷ್ಟಿ. 

ಹಾಸ್ಟೆಲ್‌ನಲ್ಲಿ ತಿಂಡಿ ವ್ಯವಸ್ಥೆ ಇರಲಿಲ್ಲ. ಎರಡು ಹೊತ್ತಿನ ಸರಳ ಜೀವನಕ್ಕೆ ಸಿದ್ದಪಡಿಸುವುದು ಇದರ ಉದ್ದೇಶವೆಂದು ಕಾಣತ್ತದೆ, ಬೆಳಬೆಳಗ್ಗೆಯೇ  ಊಟ ಕೊಡುತ್ತಿದ್ದರು, ಮತ್ತೆ ಸಂಜೆ ಏಳಕ್ಕೆ. ಊರಿನಲ್ಲಿ ಬೆಳಗ್ಗೆ ರೊಟ್ಟಿ ತಿಂದು ರೂಢಿಯಾಗಿದ್ದ ದೇಹಕ್ಕೆ ಬೆಳ ಬೆಳಗ್ಗೆ ಮುದ್ದೆ ಉಣ್ಣುವುದು ಬಲು ಕಷ್ಟವಾಗುತ್ತಿತ್ತು. ಮುದ್ದೆ ಉಣ್ಣುವುದಕ್ಕೆ ಹಸಿವಿನ ಅವಶ್ಯಕತೆ ಬಹಳವಾಗಿರುತ್ತದೆ. ಏಕ್ದಮ್‌ ಆಹಾರವನ್ನು ನುಂಗುವುದು ಪ್ರಪಂಚದಲ್ಲಿ ಎಲ್ಲಾದರೂ ರೂಢಿಯಲ್ಲಿದ್ದರೆ ಅದು ಕರ್ನಾಟಕದಲ್ಲಿ ಮತ್ತು ಆಂಧ್ರ, ತಮಿಳುನಾಡುಗಳ ಕೆಲವು ಭಾಗಗಳಲ್ಲಿ ಮಾತ್ರ. 

ಎಲ್ಲಿ ಏನು ತಿಂದರೂ ಹೊಟ್ಟೆ ತುಂಬುತ್ತಿರಲಿಲ್ಲ. ಕೊನೆಗೆ ಮುದ್ದೆ ಸಿದ್ದಪ್ಪನೆ ಗತಿಯಾಯ್ತು. ಮೊದಮೊದಲು ಎರಡು ಮುದ್ದೆ ಉಣ್ಣುವುದಕ್ಕೆ ಮುಜುಗರವಾಗುತ್ತಿತ್ತು. ಮನೆಯಿಂದ ತರುತ್ತಿದ್ದ ತುಪ್ಪ ಉಪ್ಪಿನಕಾಯಿಗಳನ್ನು ಕದ್ದು ಬಳಸುವ ಕಲೆಯನ್ನು ಕಲಿತದ್ದು ಇಲ್ಲಿಯೇ, ಅದರ ಪರಿಣಾಮವಾಗಿ ನಾಲ್ಕು ಮುದ್ದೆಯವರೆಗೆ ಬೆಳೆದೆ. ಹಾಸ್ಟೆಲ್ಲಿನಲ್ಲಿ ಹೆಚ್ಚು ಹೆಚ್ಚು ಮುದ್ದೆ ಉಣ್ಣುವುದು, ಗೌರವದ ವಿಷಯವಾಗಿ ಹಬ್ಬಿ ಬೆಳೆದಿತ್ತು. ನಮ್ಮ ಮನೆಯಲ್ಲಿ ನಮ್ಮವ್ವ ಕಟ್ಟುತ್ತಿದ್ದಷ್ಟು ದಪ್ಪದ ಮುದ್ದೆಗಳೇನು ಅವಾಗಿರಲಿಲ್ಲ.

ಮುದ್ದೆ ಉಣ್ಣುವ ಸ್ಪರ್ಧೆ ನಡೆಯುತ್ತಿದೆಯೇನೋ ಎನ್ನುವಂತೆ ದಿನಾಲೂ ಹರೆಯದ ಹುಡುಗರಾಗಿದ್ದ ನಾವು ಕ್ರೀಡಾ ಮನೋಭಾವದಿಂದ ಮುದ್ದೆ ಗದಿಯುವುದನ್ನು ನೋಡುವುದೇ ಒಂದು ವೈಬೋಗವಾಗಿತ್ತು. ಸಾರು ಚೆನ್ನಾಗಿದ್ದ ದಿನವಂತೂ ಮುದ್ದೆ ಬಕೇಟುಗಳು ಬಗ್ಗಂ ಬರಿಯಾಗುತ್ತಿದ್ದವು. ಅಡಿಗೆ ಭಟ್ಟರು ಇನ್ನೊಮ್ಮೆ ಮುದ್ದೆ ಹೆಸರು ಇಡಬೇಕಾದ ಅನಿವಾರ್ಯತೆ ಉಂಟಾಗುತ್ತಿತ್ತು. ಇದನ್ನರಿತಿದ್ದ ಅಡಿಗೆ ಭಟ್ಟರು ಹಾಸ್ಟೆಲ್‌ ಮ್ಯಾನೆಜರ್‌ ನಿರ್ದೇಶನದಂತೆ ಈ ಬಗೆಯ ತುರ್ತುಸ್ಥಿತಿ ಬರದಂತೆ ಕಟ್ಟೆಚ್ಚರ ವಹಿಸುತ್ತಿದ್ದರು. ಆದರೂ ಸಾರು ಒಮ್ಮೊಮ್ಮೆ ಇವರ ಕೈಮೀರಿ ಅದರಷ್ಟಕ್ಕದೇ ಘಮಾರಿಸಿಬಿಡುತ್ತಿದ್ದುದುಂಟು. ಅದರ ಪರಿಣಾಮ ಮುದ್ದೆಗಳಿಗೆ ಡಿಮ್ಯಾಂಡ್‌ ಏರಿ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಕಡಿಮೆ ಮುದ್ದೆ ಉಣ್ಣುವವರನ್ನು ಮುದ್ದೆ ಸರದಾರರು ಪಕ್ಕಕ್ಕೆ ಕೂರಿಸಿಕೊಳ್ಳುತ್ತಿದ್ದುದು ಅನೂಚಾನವಾಗಿ ನಡೆದುಬಂದ ವಾಡಿಕೆಯಾಗಿತ್ತು.

ಈ ಸರದಾರರು ಹತ್ತರವರೆಗೂ ಮುದ್ದೆ ಬಾರಿಸುತ್ತಿದ್ದರು. ತರಕಾರಿ, ಕಾಳು ಹೆಚ್ಚಿಗೆ ಹಾಕಿಸಿಕೊಳ್ಳಲು ಅಡಿಗೆ ಭಟ್ಟರಿಗೆ ಭಕ್ಷೀಸು ಕೊಡುವ ಪರಿಪಾಠವನ್ನು ಕೆಲವರು ಇಟ್ಟುಕೊಂಡಿದ್ದರು. ಈ ಬಗೆಯ ತರತಮ್ಯಕ್ಕಾಗಿ ಎಷ್ಟೋ ದಿನ ಮಾಮೇರಿ ಜಗಳಗಳಾಗುತ್ತಿದ್ದುದೂ ಉಂಟು. ಕೆಲವರು ಹೆಚ್ಚಿಗೆ ಅನ್ನಕ್ಕಾಗಿ ಅಡಿಗೆ ಭಟ್ಟರೊಂದಿಗೆ ಸಂಧಾನ ಮಾಡಿಕೊಂಡವರಿದ್ದರು. ನಾನು ಮನೆಯಿಂದ ತರುತ್ತಿದ್ದ ಉಪ್ಪಿನಕಾಯಿ ಕೊಟ್ಟು ಎರಡು ಪುಟ್ಟ ಕಾಯಿ ಚೂರುಗಳನ್ನು ಎರವಲು ಪಡೆಯುತ್ತಿದ್ದುದನ್ನು ಮರೆಮಾಚಿ ಫಲವೇನು. 

ಮುದ್ದೆ ಸರದಾರರ ನಡುವೆಯೂ ಒಮ್ಮೊಮ್ಮೆ ಅಂತಃಕಲಹ ನಡೆಯುತ್ತಿತ್ತು. ಅದಕ್ಕೆ ಮುಖ್ಯ ಕಾರಣ ಶಿವರುದ್ರಯ್ಯ ಎಂಬ ಮುದ್ದೆ ಸಿದ್ದರು. ಇವರೆ ಈ ಬರಹಕ್ಕೆ ಪ್ರೇರಕ ಶಕ್ತಿ ಎಂಬುದನ್ನು ಹೇಳಿಬಿಡಬೇಕು. ಇಂಥ ಶಿವರುದ್ರಯ್ಯನಿಗೆ ಅಡಿಗೆ ಭಟ್ಟರು ತೋರುತ್ತಿದ್ದ ಅಪಾರ ಅಕ್ಕರೆಯೇ ಈ ಅತ:ಕಲಹಕ್ಕೆ ಕಾರಣವಾಗಿತ್ತು. ಶಿವರುದ್ರಯ್ಯ ನಾವು ಹೋಗಿ ಸೇರುವ ಮೂರು ವರ್ಷ ಮೊದಲಿನಿಂದಲೂ, ನಾವು ಮೂರು ವರ್ಷಗಳು ಅಲ್ಲಿ ಮುದ್ದೆ ಮುರಿದ  ನಂತರದ ಮೂರು ವರ್ಷಗಳು ಸದರಿ ಹಾಸ್ಟೆಲ್‌ ನಲ್ಲಿದ್ದರು. ಕೇವಲ ಇರಲಿಲ್ಲ, ಮುದ್ದೆ ಉಣ್ಣುವುದರಲ್ಲಿ ಇತಿಹಾಸ ನಿರ್ಮಿಸಿದರು.

ಸದರಿ ವಿದ್ಯಾರ್ಥಿಯನ್ನು ಬಹುವಚನದಲ್ಲಿ ಸಂಭೋಧಿಸುತ್ತಿರುವುದಕ್ಕೆ ಬಲವಾದ ಕಾರಣವಿದೆ. ಇವರು ನನಗಿಂತಾ ದೊಡ್ಡವರು ಎನ್ನುವುದು ಕಾರಣವೇ ಅಲ್ಲ, ಇವರ ನಡೆ ಗಂಭೀರ, ನುಡಿ ಮೃದು ಮಧುರ, ಬೃಹದಾಕಾರ. ಹೀಗಾಗಿ ಎಲ್ಲರಿಗೂ ಅವರ ಬಗೆಗೆ ವಿಶೇಷ ಗೌರವ. ಇದಕ್ಕೆ ಅವರು ಉಣ್ಣುತ್ತಿದ್ದ ಮುದ್ದೆಗಳಷ್ಟೇ ಕಾರಣವಾಗಿರಲಿಲ್ಲ. ಆದರೆ ಅದೇ ಮುಖ್ಯ ಕಾರಣವೆನ್ನದೆ ಬೇರೆ ದಾರಿಯಿಲ್ಲ. ಮುದ್ದೆಯಷ್ಟೇ ಮೃದು ಮನುಷ್ಯ ಶಿವರುದ್ರಯ್ಯ ಗೆಳೆಯರಿಗೆ, ಎಳೆಯರಿಗೆ ಅಚ್ಚು ಮೆಚ್ಚಿನವರಾಗಿದ್ದರು. ಸಲಹೆ ಸೂಚನೆ ಕೊಟ್ಟುಕೊಂಡು ಓದಿನತ್ತ ಗಮನ ಸೆಳೆಯುತ್ತಿದ್ದರು. ಅಡಿಗೆ ಭಟ್ಟರನ್ನು ಎಂದೂ ಬೈಯ್ಯದೆ ಬಯ್ಯಾ ಆಗಿದ್ದರು. ಅವರ ಜೊತೆ ಅನ್ಯೋನ್ಯ ಸಂಬಂಧ ಸಾಧಿಸಿದ್ದರು. ಅದರಿಂದ ಅವರಿಗೆ ಒಳ್ಳೆಯದೇ ಆಗಿತ್ತು. ನಾನು ಅವರ ಜೊತೆಗಿದ್ದಾಗ ಅವರು ಪಿಯುಸಿ, ಬಿಎಸ್ಸಿ ಮುಗಿಸಿ ಇಂಜಿನಿಯರಿಂಗ್‌ ಸೇರಿದ್ದರು, ಅವರಿಗೆ ಕಿಂಚಿತ್ತೂ ಇಂಜಿನಿಯರಿಂಗ್‌ ಅಹಂಕಾರವಿರಲಿಲ್ಲ.

ಬೆಳಗ್ಗೆ ಎಂಟು ಮುದ್ದೆ, ಸಂಜೆ ಊಟದಲ್ಲಿ ಹತ್ತು ಮುದ್ದೆ ಉಣ್ಣುತ್ತಿದ್ದುದೇ ಇದಕ್ಕೆ ಸಾಕ್ಷಿಯಾಗಿತ್ತು. ಶಿವರುದ್ರಯ್ಯನವರು ಅಷ್ಟು ಮುದ್ದೆ ಉಣ್ಣುವುದು ಯಾರಿಗೂ ಅಷ್ಟಾಗಿ ಗೊತ್ತಾಗುತ್ತಲೇ ಇರಲಿಲ್ಲ. ಬೇರೆಲ್ಲ ಹುಲು ಮಾನವರು ಮೂರು ನಾಲ್ಕು ಮುದ್ದೆ ಉಣ್ಣುವು ಹೊತ್ತಿಗೆ ಇವರು ತಮ್ಮ ಪಾಲಿನ ಅಷ್ಟು ಮುದ್ದೆಗಳನ್ನು ಇಲ್ಲವಾಗಿಸಿ ನಗುತ್ತಿದ್ದರು. ಅವರ ಮುಖದಲ್ಲಿ ನಗು ಚಿರಸ್ಥಾಯಿಯಾಗಿರುತ್ತಿತ್ತು. ಹಳೆಯ ಅಡಿಗೆ ಭಟ್ಟರು ಹೇಳುವ ಪ್ರಕಾರ ಶಿವರುದ್ರಯ್ಯ ಪಿಯುಸಿಯಿಂದಲೂ ಈ ಕಾಯಕವನ್ನು ಚಾಚು ತಪ್ಪದೆ ಮಾಡಿಕೊಂಡು ಬಂದಿದ್ದರಂತೆ. ಇದಕ್ಕೆ ಮೊದಲು ಸಿದ್ದಗಂಗಾ ಮಠದಲ್ಲಿ ಓದಿದ್ದನ್ನು ನಮಗೆ ಹೇಳಿದ್ದರಾದರೂ ಮುರಿದ ಮುದ್ದೆಗಳ ಬಗೆಗೆ ಅವರೇನು ಹೇಳಿರಲಿಲ್ಲ.

ನಾನೂ ಒಮ್ಮೊಮ್ಮೆ ಅವರ ಪಕ್ಕದಲ್ಲಿ ಕೂತು ಉಣ್ಣುವ ಸಾಹಸ ಮಾಡುತ್ತಿದ್ದೆ. ಕಬಡ್ಡಿ ಆಟಗಾರನಾದ ನನ್ನನ್ನು ಅವರು, ನನ್ನ ಕ್ಯಾಚ್‌ ಹಾಕುವ ತಂತ್ರವೊಂದರ ಕಾರಣಕ್ಕಾಗಿ (ಏಕಕಾಲದಲ್ಲಿ ಕೈ ಮತ್ತು ಕಾಲನ್ನು ಹಿಡಿದು ಕೆಡವುವ ತಂತ್ರ) ಬಹುವಾಗಿ ಮೆಚ್ಚಿಕೊಂಡಿದ್ದರು. ಪ್ರತಿ ವರ್ಷಾಂತ್ಯದಲ್ಲಿ ನಡೆಯುತ್ತಿದ್ದ  ಹಾಸ್ಟೆಲ್‌ ಕ್ರೀಡಾ ಕೂಟದ ಕಬಡ್ಡಿ  ಪಂದ್ಯದಲ್ಲಿ ಅವರಿಗೆ ಅದರ ರುಚಿ ತೋರಿಸಿದ್ದೆ. ಅದರ ಕಹಿ ಭಾವ ಅವರಲ್ಲಿರಲಿಲ್ಲ. 

ಶಿವರುದ್ರಯ್ಯ ಪ್ರತಿವರ್ಷವೂ ಸುದ್ದಿಯಾಗುತ್ತಿದ್ದರು. ಅವರು ಉಂಡ ಸುಮಾರು ೪೮,೦೦೦ ಮುದ್ದೆಗಳು ಇದಕ್ಕೆ ಕಾರಣವಿರಬಹುದೆಂದು ಓದುಗರು ಯೋಚಿಸಿದ್ದರೆ. ಅದು ತಪ್ಪಾಗುತ್ತದೆ. ಪ್ರತಿ ವರ್ಷವೂ ಅವರು ಓದುತ್ತಿದ್ದ ಕೋರ್ಸ್‌ ನಲ್ಲಿ ಮೊದಲ ರಾಂಕ್‌ ಬರುತ್ತಿದ್ದರು. ಅದಕ್ಕಾಗಿ ಅವರಿಗೆ ಸನ್ಮಾನಗಳಾಗುತ್ತಿದ್ದವು. ಅವರು ಎಷ್ಟೇ ಮುದ್ದೆ ಉಂಡರೂ ಅವರನ್ನು ಯಾರೂ ಗೇಲಿ ಮಾಡಲು ಆಗುತ್ತಿರಲಿಲ್ಲ. ಮುದ್ದೆ ಉಣ್ಣುವವರನ್ನೇ ಗೇಲಿ ಮಾಡುವ ಕಾಲದಲ್ಲಿ ದಿನಕ್ಕೆ ಸರಿಸುಮಾರು ಇಪ್ಪತ್ತು ಮುದ್ದೆ ಉಣ್ಣುವವರನ್ನು ಎಷ್ಟು ಗೇಲಿ ಮಾಡಬಹುದಿತ್ತು, ಆಗಲಿಲ್ಲ. ಅದಕ್ಕೆ ಶಿವರುದ್ರಯ್ಯ ಕಾರಣವಾಗಿದ್ದರು.     

‍ಲೇಖಕರು Admin

November 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: