“ಕೂರಿಗೆಯೊಳಗೆ ಮಣ್ಣಿಗಿಳಿವ ಕಾಳುಗಳ ಸಖ್ಯವಿಡಿದು ಎರೆ ಬಯಲಿನಲ್ಲಿ”

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿಮಣ್ಣ ಒಡನಾಟರಂಗಭೂಮಿಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಮಣ್ಣೆಂಬ ಮಹತ್ತು ಆಂತರ್ಯ ಹೊಕ್ಕ ಮೇಲೆ ಹೊಸತೊಂದು ಧ್ಯಾನಕ್ಕೆ ಮೊದಲಾದೆ. ನಾನು ನನ್ನೂರಿನಲ್ಲಿ ಕಂಡ ಎಲ್ಲವೂ ಒಂದೊಂದು ದಿಕ್ಕಿನಲ್ಲಿ ಏನೆಲ್ಲವನ್ನೂ ಕಲಿಸುತ್ತಲೇ ಹೋದ ಅರಿವಿನೊಳಮನೆಗೆ ನಾನು ಆಪ್ತವಾದಾಗ ದಕ್ಕಿದ ಮೊದಲ ಬಂಧ ಮಣ್ಣು. ಮಣ್ಣಿನ ಮನೆಯಲ್ಲಿ ಗಳಿಸಿದ ಎಲ್ಲವೂ ಬದುಕಿನ ಕಣ್ಣಿಗೆ ದೃಷ್ಟಿಯಾದದ್ದೇ ವಿಶೇಷ ನನಗೆ. ನಮ್ಮ ಕಡೆ ಕರಿಮಣ್ಣಿನ ಬಯಲಿವೆ. ಇವೆಲ್ಲ ಎರೆಹೊಲಗಳೆನಿಸಿಕೊಂಡು ಎಷ್ಟು ಫಸಲು ಕೊಟ್ಟರು ತಮ್ಮ ಸಾರವನ್ನು ಬರಿದು ಮಾಡಿಕೊಳ್ಳದೆ ಅಚಲವಾಗಿ ನಿಂತಿವೆ.

ಹಳೆ ಎರೆ, ಹೊಂಗೆ ಮರದ ಎರೆ, ಅಜಾಮ್ರೆರೆ ಹೀಗೆ ಅನೇಕ ಹೆಸರುಗಳಿಂದ ಗುರುತಿಸಲ್ಪಡುವ ಈ ಎರೆ ಇಳೆಯ ಕಾಳಮಣ್ಣಿನಂಗಳದಲ್ಲಿ ನಾವೆಲ್ಲ ಬೆಳೆದಿದ್ದು. ಎಳ್ಳು, ಅತ್ತಿಯನ್ನು ಹೇರಳವಾಗಿ ಬೆಳೆದ ಈ ನೆಲೆಗಳಿಗೆ ಬಂಗಾರ್ದೆರೆ ಎಂಬ ಹೆಸರಿದೆ. ವರ್ಷ ವರ್ಷ ಆಗವಷ್ಟು ಫಸ್ಲಾಗುತ್ತ; ಈ ಮಣ್ಣು ಅದಿನ್ನೆಂತ ಬಲ ಒದ್ಗಿಸ್ಕಮುತ್ತೋ ಕಾಣೆ ಅನ್ನುವ ಹಿರಿಯರ ಮಾತುಗಳಲ್ಲಿ ಎರೆ ತಿರೆಯ ಗುಣಗಾನ ಇದ್ದೇ ಇರುತ್ತದೆ. ನಮ್ಮ ಭಾಗದಲ್ಲಿ ಕೆಂಪ್ನೆಲ, ಕಲ್ನೆಲ, ಕರೆನೆಲ ಹೀಗೆ ಒಂದೊಂದು ದಿಕ್ಕಿನಲ್ಲಿ ಒಂದೊಂದು ಪ್ರಬೇಧದ ಲಕ್ಷಣಗಳಿಂದ ಅವನಿಯನ್ನು ಹೆಸರಿಸುತ್ತಾರೆ. ಎಲ್ಲ ನೆಲ ಬಯಲುಗಳು ತರಾವರಿ ಬೆಳೆಯೊತ್ತು ಸಿಂಗಾರಗೊಳ್ಳುತ್ತವೆ.

ಎರೆಯ ಹೊಲಗಳಲ್ಲಿ ವರ್ಷದಲ್ಲಿ ಒಮ್ಮೆ ಕಡ್ಲೆ ಚೆಲ್ಲುತ್ತಾರೆ. ಕುಡಿಯೊಡೆದು ತಲೆಎತ್ತಿ ನಿಂತ ಕಡ್ಲೆಕುಡಿಯನ್ನು ಒಮ್ಮೆ ಕೊಯ್ಯಲೇಬೇಕು. ಆಗ ಇಡೀ ಊರಿನ ಹೆಣ್ಣು ಮಕ್ಕಳ ಕನಸು ಒಂದೆರಡು ದಿನವಾದರೂ ಗುತ್ನಾಗಿ ಕಡ್ಲೆಕುಡಿ ಮಚ್ಚೊಪ್ಪು ಮಾಡಿ ಉಣ್ಬೇಕು ಮನ್ಮಕ್ಳಿಗೆಲ್ಲ ತುಪ್ಪ ಒಯ್ದು ಈ ಹೆಸ್ರುನಗೆ ಉಣ್ಣುಸ್ಬೇಕು ಅನ್ನೋ ಹಂಬಲ. ಮೂರ್ಗೇಣು ಕಡ್ಲೆಗಿಡ ಬೆಳುದ್ವು ಅಂದ್ರೆ ಊರೆಣ್ಮಕ್ಳೆಲ್ಲ ಎರೆಹೊಲ್ದಗೆ ಗಿಜ ಗಿಜ ಗಿಜ್ಗುಟ್ಟದು. ಹೊತ್ತಿಳಿಸ್ಕಂಡು ಕುಡಿಕೊಯ್ಯಕೋದ್ರೆ ಹೊತ್ಮುಣ್ಗಿದ್ಮೇಲೆ ಕುಡಿಮಡ್ಲು ಜೊತೆಗೆ ಮನೆಸೇರದು. ಉಪ್ನೀರು ಸಿಮ್ಕುಸಿ ಕುಡಿಕೊಡ್ವಿರೆ ಒಂದುಳ ಇಲ್ದಂಗೆ ಉದ್ರೋಗ್ತವೆ. ಕಡ್ಲೆಕುಡಿ ಮಸ್ತಾಮ್ರ ಅಂದ್ರೆ ನಮ್ಗೆಲ್ಲ ಪರ್ವ ಇದ್ದಂಗೆ.

ಡ್ಲೆಕೊಯ್ಲು ಮುಗ್ಯತಕ ಉಳಿಗಮ್ಲು ಕುಡ್ಕಂಡೆ ಒಲ್ದಗೆ ಅಡ್ಡಾಡದು ಅಂದ್ರೆ ನಮ್ಗಿನ್ನೇನು ಬೇಡ. ಗಿಡ ಬೆಳ್ದು ಬುಡ್ಡು ಮೂಡಿರೆ ಇಲಿಬುಡುಕ್ನಂಗೆ ಸೇರ್ಕಂಡು ಗಿಡ್ ಗಿಡ್ದಗೆ ಬುಡ್ಬಿಡಿಸ್ಕಂಡು ತಿನ್ನೋದು ನಮಗೆ ನಿಜಸುಗ್ಗಿ. ಕಡ್ಲೆಕೊಯ್ಲು ಮುಗುದ್ಮೇಲೆ ಎರೆ ಒಂದಿಷ್ಟು ದಿನ ಬೀಳಿರೋದು. ಇನ್ನೇನು ಮಳ್ಗಾಲ ಹುಟ್ತು ಅನ್ನೋವತ್ಗೆ ಊರಮನೆಯ ಅಂಗಳದಲ್ಲಿ ಒಂದ್ಸಾಲು ಮಡ್ಕೆ ಒಡ್ದು ಅಸ್ನುಮಾಡೋ ಮಾತುಗಳು. ಒಂದ್ಸಾಲಿನ ಮಡ್ಕೆ ಒಡಿವಗ್ಗೆ ಇಡೀ ಹೊಲದ ತುಂಬಾ ಪುಲ್ಗ ಅರ್ದಾಡ್ದಂಗೆ ನಾವು ಅರ್ದಾಡ್ತಿದ್ವಿ.

ಮಡಿಕೆಯ ಎತ್ತುಗಳ ಮೈತ್ರಿ ಎಂದರೆ ನಮಗೆ ಎಲ್ಲಿಲ್ಲದ ಸಿರಿ. ಧೂಳು ಒಯ್ಕಮ್ತವೆ ಉಡುಗ್ರುನ್ನ ಮಂತಕೆ ಕರ್ಕಂಡೋಗ್ರಿ ಅಂದ್ರು ನಾವೇನು ಮಣ್ಬಿಟ್ಟು ಕದ್ಲುತಿರ್ಲಿಲ್ಲ. ಮಣ್ಣೆಂಬ ಮಾಯೆ ನಮ್ಮೊಳಗೆ ಬಿತ್ತಿದ ಸಹಜ ಆನಂದಗಳು ಋತುಗಳ ಬೆರಗನ್ನು ಗ್ರಹಿಸಲು ಸಾಧ್ಯಮಾಡಿಕೊಟ್ಟದ್ದು. ಮಡಿಕೆಯಲ್ಲಿ ಹೊಲ ಗೆಯ್ಯುವಾಗ ಮೃಚ್ಛ ಹದಗೊಳ್ಳುವ ಪರಿ ನೋಡಬೇಕು. ನೆಲದೆದೆಗೆ ಮೆದುವಾದ ಸ್ಪರ್ಶದಂತೆ ಎಲ್ಲವೂ ಮುಗಿದು ಮುಂಗಾರು ಹುಟ್ಟವತ್ಗೆ ಒಂದೇ ಒಂದು ಗಂಟ್ಕ, ಗೇಕು, ಗರ್ಕೆ ನೆಗ್ಲುಗಿಡ ಇಲ್ದಂಗೆ ಹೊಲ್ವೆಲ್ಲ ಹಸನಾದ ಮಣ್ಣಿನ ಮಹಿಮೆಯನ್ನು ಕಾಣಿಸುವಂತೆ ಸಿದ್ಧ ದ್ರವ್ಯವಾಗಿ ನಿಂತಿರುತ್ತವೆ.

ಮುಂಗಾರು ಮೊದ್ಲಾತು ಅಂದ್ರೆ ಊರಿನೆಲ್ಲ ಅನ್ನದೈವಗಳು ಹೊಲದ ಪಸ್ಮೆಯನ್ನು ಗಮನಿಸುತ್ತಾ ಒಂದದ ತಿಪ್ಪೆಗೊಬ್ರ ಚೆಲ್ಲಿ ಬೆಳೆ ಇಕ್ಕಕೆ ಸಿದ್ದತೆಗಳು ಭರದಿಂದ ಸಾಗುತ್ತವೆ.

ಲಂಕೇಶ್ ಮಾಸ್ತರು ಹೇಳುವಂತೆ “ಆಧುನಿಕ ಮನುಷ್ಯನ ತಪ್ಪು ಹೆಜ್ಜೆ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಗೀಳು, ಕೃಷಿಯನ್ನು ಕೂಡಾ ಅಂತರಾಷ್ಟ್ರೀಯ ಶೋಷಣೆಯ ಭಾಗವಾಗಿಸಿರುವುದು ಎಲ್ಲರಿಗೆ ಸ್ಪಷ್ಟವಾಗಿ ಕಾಣುತ್ತಿದೆ.” ಇಷ್ಟೆಲ್ಲಾ ಕೃಷಿ ವಿದ್ಯಮಾನಗಳು ಬದಲಾವಣೆಗೊಳ್ಳುತ್ತಿದ್ದರೂ ಕೂಡ ನನ್ನ ಊರಿನ ಬೇಸಾಯ ಶಕ್ತಿ ಮಾತ್ರ ನೇಗಿಲು ತಿಪ್ಪೆ ಗೊಬ್ಬರಗಳ ಮಹತ್ತನ್ನು ಧರಿಸಿಯೇ ತನ್ನತನವನ್ನು ಕಾಯ್ದುಕೊಂಡಿದೆ.

ಋತುಗಳಿಗೆ ಬದ್ಧನಾಗಿ ಬೆಳೆಯದೆ ಗಾಜಿನ ಮನೆಯಲ್ಲಿ ಕೃತಕ ವಾತಾವರಣದಲ್ಲಿ ಬೆಳೆ ತೆಗೆಯಲು ಯತ್ನಿಸುವುದು ಪ್ರಕೃತಿಯನ್ನು ತನ್ನ ಸ್ವಪ್ರತಿಷ್ಠೆಗೆ ತಕ್ಕಂತೆ ತಿರುಚಲು ಯತ್ನಿಸುವುದು ಪುಕುವೋಕಾನ ಕಟು ಟೀಕೆಗೆ ಗುರಿಯಾದ ಸಂದರ್ಭವನ್ನು ಲಂಕೇಶ್ ಮಾಸ್ತರರು ಎಚ್ಚರಗೊಳ್ಳುವ ನಿಟ್ಟಿನಲ್ಲಿ ವಿವರಿಸುತ್ತಾರೆ. ಪುಕುವೋಕಾ ಕೂಡ ತನ್ನ ಪುಟ್ಟ ಗದ್ದೆ, ತೋಟದಲ್ಲಿ ಪ್ರಕೃತಿ ತಾನಾಗಿಯೇ ಋತುಮಾನಕ್ಕೆ ತಕ್ಕಂತೆ ನೀಡುವ ಮೀನು ಹೂವು ಹಣ್ಣು ಧಾನ್ಯಗಳನ್ನು ವಿವರಿಸುತ್ತಾನೆ.

ಪುಕುವೋಕಾ ಮಾದರಿಯ ಕೃಷಿ ಜಾಗತೀಕರಣದ ದಾಳಿ ಗೆ ಸಿಕ್ಕು ತತ್ತರಿಸಿರುವ ನೆಲಗಳಿಗೆ ನುಗ್ಗಿ ಸಹಜ ಬೇಸಾಯ ಕ್ರಮಗಳು ಮರುಸೃಷ್ಟಿಗೊಳ್ಳುವ ತುರ್ತಿನ ಕಡೆಗೆ ಸಾಗುವ ವಿಪ್ಲವ ಕೂಡ ಇವತ್ತಿಗೆ ಮುಖ್ಯವಾಗಿ ಬೇಕಿದೆ. ನನಗೊಂದು ಸಡಗರವೆಂದರೆ ನನ್ನ ಹಳ್ಳಿಗೆ ಆಧುನಿಕ ಕೃಷಿ ಉಪಕರಣಗಳು ಕಾಲಿಟ್ಟರೂ ಕೂಡ ನೇಗಿಲು ತಿಪ್ಪೆಗಳು ಜೀವಂತಿಕೆ ಕಳೆದುಕೊಳ್ಳದೆ ಇರುವ ಕಾರಣದಿಂದ ನಾವಿನ್ನೂ ಸಹಜ ಕೃಷಿಯ ಒಲುಮೆಯೊಳಗೆ ಉಸಿರಾಡುತ್ತಿದ್ದೇವೆ.

ರೈತರ ನೈಜ ಪ್ರಜ್ಞೆಯ ಮೇಲೆ ಹಲ್ಲೆ ಮಾಡುತ್ತಿರುವ ರಾಜಕಾರಣ ಕೂಡ ಬೇಸಾಯದ ಭೂಮಿಯನ್ನು ವ್ಯಾಪಾರಕ್ಕಿಟ್ಟು ಎಲ್ಲಾ ಮೂಲಗಳನ್ನು ದಿವಾಳಿಗೊಳಿಸುತ್ತಿರುವ ಕುರಿತಾಗಿಯೂ ರೈತರು ಮತ್ತೂ ಒಗ್ಗೂಡಿ ಚಳುವಳಿ ತರಬೇಕಿದೆ. ಬುವಿಯೊಂದಿಗೆ ನಿಚ್ಛ ಸಖ್ಯಹೊಂದಿದ ನಮಗೆ ಮಣ್ಣೇ ಹೆಚ್ಚು ಫಲ ಕೊಟ್ಟಿದೆ. ನಮ್ಮ ಎರೆಗಳಲ್ಲಿ ಬೆಳೆದ ಅಳ್ಳೆಯಂತೂ ಬೆಳ್ಳನೆಯ ಬೆಟ್ಟಗಳಾಗಿ ನಮ್ಮ ಹೊಲ ಮನೆಗಳ ಮುಂದೆ ರಾಶಿಬಿದ್ದು ಉಂಡೆಗಳಾಗಿ ಮಾರುಕಟ್ಟೆಗೆ ಹೋಗುವ ಮೊದಲು ನಾವು ಅಳ್ಳೆಯ ಮಕ್ಕಳಾಗಿ ಆಡಿದ ದಿನಗಳೇ ತಾದಾತ್ಮ್ಯ ಕೊಟ್ಟಿವೆ.

ವರ್ಷದಲ್ಲಿ ಒಮ್ಮೆ ಕೊತ್ತಂಬರಿ ಬೀಜವನ್ನು ಎರೆಬಯಲಿಗೆ ಚೆಲ್ಲೋರು. ಬೀಜ ಕಣ್ಬಿಟ್ಟು ಗಮಲು ಚೆಲ್ಲುವ ವೇಳೆಗೆ ಯಾವ್ಯಾವ ದಿಕ್ಕಿನ ಎರೆಗಳಲ್ಲಿ ಗಮಲು ಬಂದರು ಅಲ್ಲಿ ನಾವಿರ್ತಿದ್ವಿ. ಅಲ್ಲಿನ ನೆಲಶಕ್ತರಾದ ರೈತರು ಉದಾತ್ತವಾಗಿ ಕೊತ್ತಂಬರಿ ಸೊಪ್ಪು ಕೋಡೋರು. ದೊಡ್ಡ ಸಿವ್ಡುಗಳ ಜೊತೆಗೆ ಮನೆಗೆ ಬಂದ್ರೆ ಸಿಟ್ ಬೆಳ್ವನೊ, ಬೂದ್ಬೆಳ್ವನೊ ಇಲ್ಲ ಮುತ್ತಿನ್ ಶೆಟ್ಟಿನೊ ಸಿಡಿಗೆ ಬಿದ್ದಿರವು. ಸಂಬಾರ ಅರಿವಾಗ ಸಂಬಾರ್ ಸೊಪ್ಪು ಬಿದ್ದು ಅಕ್ಕಿಬಾಡು ರುಚಿ ಏರದು. ವರ್ಷವಿಡೀ ನೆಲದ ಬೇರುಗಳನ್ನೇ ನಂಬಿಕೊಂಡು ಹಸಿರು ಸ್ವಪ್ನಗಳಲ್ಲಿ ಕಾಲವನ್ನು ಎದುರುಗೊಳ್ಳುವ ನನ್ನೂರಿನ ಅನ್ನದಾತರೊಳಗೆ ನಾನು ಸದಾ ಜೀವಂತ.

ಆಡಿದ ಹೊಲಗಳ ಹಸಿರೊಳಗೆ ಬುವಿ ಬಾನುಗಳ ಸಾಮರಸ್ಯ ಕಂಡುಂಡು ಪುಳಕಗೊಂಡ ನನಗೆ ಹಸಿರ್ಬಯಲ ಪಸ್ಮೆಯೇ ಜೀವಸೊಬಗಾಗಿ ಕೃಷಿಯ ನಿಜದ ಅಸ್ತಿತ್ವದ ಮೆರುಗಿನ ದರ್ಶನ ತೋರಿದ್ದು. ಕೆಂಪುನೆಲದಲ್ಲಿ ಸಂಜೆಯ ಕೆಮ್ಮುಗಿಲಂತೆ ಆಡಾಡಿ ಬೆಳೆದ ನಾವು ಕಲ್ನೆಲದ ಕಡ್ಲೆ ಉಕ್ಕೆಗಳಲ್ಲಿ ದಿನವಿಡೀ ನಲಿದು ಮಣ್ಣೊಲುಮೆಯೊಳಗೆ ಬೆಳೆದೆವು.

ಒಕ್ಕಲುತನದ ವಿಸ್ಮಯಗಳೆಂದರೆ ಮಳೆಕಾಯುವುದು ಒಂದು ಸೋಜಿಗ. ಫಸ್ಲು ಒಣ್ಗುತ್ತೆ ಒಂದದ ಮಳ್ಬೇಕಾಗಿತ್ತು ಅಂತ ಮುಗಿಲು ನೋಡುವ ಅನ್ನದಾತರ ಕಣ್ಣುಗಳಲ್ಲಿ ಜಗದ ಇರವಿನ ಚಿಂತೆಯಿರುತ್ತದೆ. ಮಳೆ ಮಾಡ್ವಾತು ಅಂದ್ರೆ ನಿಮ್ಮೂರಗೆ ಮಳ್ಯಾತ. ಬಿತ್ನೆ ಮಾಡ್ಬೌದ? ದೋಣಿನೀರ್ ಬಿದ್ವು ಬಿತ್ಬೌದು! ಅನ್ನೋ ಮಾತುಗಳು, ಕೆಲವರು ನಮ್ಕಡೆ ಅದ್ಮಳೆ ಇಲ್ಲ, ಒಂದ್ಬಟ್ಟೆ ನೆನ್ಯಂಗ್ ಬಂತು ಹೊಲ್ಮಾಳ್ದಗೆ ನೀರರ್ದಾಡಂಗೆ ಬಂದ್ರೆ ಬೀಜ ಬಿತ್ತನೆಯ ಕುತೂಹಲಗಳು. ಉತ್ತು ಬಿತ್ತು ಅರ್ತೆ, ಕುಂಟೆ ಒಡ್ದು ಸಾಲಿಡ್ದು ಕಳೆ ಒರ್ದು ಬೆಳೆಕಾಯುವ ರೈತರೊಕ್ಕಲಿನ ಎಲ್ಲವೂ ಮಹತ್ತುಗಳೆ.

ಇತ್ತೀಚೆಗೆ ನಮ್ಮ ಭಾಗದ ಸುತ್ತೆಲ್ಲ ವಿಸ್ತಾರವಾದ ಎರೆಹೊಲಗಳು ಕಣ್ಣಾಯುವವರೆಗೂ ಅರಿಶಿಣದ ಹೂ ಹೊತ್ತು ರಂಗೇರುತ್ತವೆ. ಸೂರ್ಯಕಾಂತಿಯ ಕಡೆಗೆ ಒಲಿದ ರೈತರು ಹಲವು ಸ್ಥಿತ್ಯಂತರಗಳ ಪಾಲಾಗ್ತಿರೋದು ಸತ್ಯವಾದರೂ ಒಕ್ಕಲುಳಿಯಲು ಬೇಕಾದ ಎಲ್ಲವನ್ನೂ ಸೆಳೆಯುವ ಮಹಾ ಇಚ್ಛೆಯನ್ನಂತೂ ನೀಗಿಕೊಂಡಿಲ್ಲ. ಕುವೆಂಪುರವರು ಹೇಳುವಂತೆ “ಹಾರೈಸಿ ಹಾರೈಸಿ ಹಾರೈಸಿ ಹಸುರನುಸುರ್ದವೊ ಕಲ್ಲು ಮಣ್ಣು” ಎಂಬಂತೆ ಹಸಿರುಸಿರಿಗೆ ಜೊತೆಯಾದ ಕಲ್ಮಣ್ಣುಗಳ ಮೈತ್ರಿಯಲ್ಲಿ ಸುಖಿಸುವ ಕಣ್ಣುಗಳಿಗೆ ಮಳೆ ಇಳಿಯಬೇಕು ನೆಲಕ್ಕೆ. ಬ್ಯಾಸಿಗ್ನಗೆ ದನಕರಿಗೆ ನೀರಾಗ್ಬೇಕು ಎಲ್ಲವೂ ಒಕ್ಕಲಿನ ಉಳಿವಿನ ಕಡೆಗಿನವೆ.

ಪುಕುವೋಕಾ ಆಧುನಿಕತೆಯ ಭ್ರಮೆಗಳಿಂದ ಹೊರಬಂದು ಸಹಜ ಕೃಷಿ ಕ್ರಿಯೆಯಲ್ಲಿ ತೊಡಗಿ ಮಣ್ಣಿನ ಜೊತೆ ಸೇರಿಯೇ ಆಧುನಿಕತೆಗೆ ಸವಾಲಾಗಬಲ್ಲ ನೈಸರ್ಗಿಕ ವಿಧಾನ ಕಂಡುಕೊಂಡದ್ದು ಅಪೂರ್ವದ್ದು. ಮನುಷ್ಯ ತನ್ನ ಐಲುಗಳ ನಡುವೆಯೂ ಕೈಚಾಚಿ ಪಡೆಯಬಲ್ಲ ನಿಧಿ ಪುಕುವೋಕಾನ ಕೃಷಿ ಮತ್ತು ತತ್ವದಲ್ಲಿದೆ ಎಂಬ ಲಂಕೇಶ್ ಮಾಸ್ತರರ ಮಾತು ದಿಟ… ನನ್ನ ಹಳ್ಳಿಯ ತುಂಬಾ ನೈಸರ್ಗಿಕ ಬೇಸಾಯದ ತಪಸ್ಸು ಅಂತ್ಯಗೊಳ್ಳದೆ ಆಧುನಿಕತೆಯನ್ನು ಅಣಕಿಸುವಂತೆ ಆಧುನಿಕ ಉಪಕರಣಗಳನ್ನು ಜಡಗೊಳಿಸಿ ಕುಂಟೆ ಕೂರ್ಗೆ ಮಡ್ಕೆಯಲ್ಲೇ ನೆಲಕೊಲಿದು ಬೆವರು ಬಸಿದು ದುಡಿವವರಿದ್ದಾರೆ. ಇವರೆಲ್ಲರ ನೆಲ ಉಳಿದು ಹಸಿರುಕ್ಕಿ ನಗಲಿ.

ಹೊಸ ಹೂವಿನ ಕಂಪು ಹಸಿರು
ಎಲುರಿನ ತಂಪೂ ಹಸುರು
ಹಕ್ಕಿಯ ಕೊರಲಿಂಪು ಹಸುರು
ಹಸುರು ಹಸುರಿಳೆಯುಸಿರೂ! (ಕುವೆಂಪು)
ಹಸುರಿನ ಉಸಿರಲಿ ಮಣ್ಣಿನ ಬಯಲಲ್ಲಿ ಹಸಿರಾಗುವ ಕನಸುಗಳು ವಿಸ್ತರಿಸಲಿ.

December 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Dr. Arjun

    Nice article mam, you have done lot of hardwork to reach this position, feeling proud of you mam

    ಪ್ರತಿಕ್ರಿಯೆ
  2. Kavishree

    ನಮ್ಮ ಕಡೆ ಗಾದೆ ಇದೆ ಯರೆನಂಬದೋನು ದೊರೆ ಇದ್ದಂಗೆ ಅಂದ್ರೆ ಯರೆ ಹೊಲದಲ್ಲಿ ಅಷ್ಟು ಒಳ್ಳೆಯ ಫಸಲು ಸಿಗುತ್ತದೆ ಅಂತ ಈ ಮಣ್ಣಿಗೆ ಯಾವುದೇ ಗೊಬ್ಬರ ಬೇಕಿಲ್ಲ ಮಳೆ ಆದರೆ ಸಾಕು ಯರೆ ಹೊಲದ ಅನುಭವ ತುಂಬಾ ಸೊಗಸು ಫಸಲು ಕಾಲದಲ್ಲಿ ಹೊಲ ಮೇಯಲು ಬರುವ ಜಿಂಕೆ ಗಳ ಹಿಂಡು ನೋಡೋದೇ ಒಂದು ಸಂಭ್ರಮ

    ಪ್ರತಿಕ್ರಿಯೆ
  3. Kavishree

    ನಮ್ಮ ಕಡೆ ಒಂದು ಗಾದೆ ಇದೆ ಎರೆ ನಂಬದೋರು ದೊರೆ ಇದ್ದಂಗೆ ಅಂತ ಎರೆ ಭೂಮಿ ಅಷ್ಟು ಫಲವತ್ತಾದ ಕಪ್ಪು ಭೂಮಿ ಒಳ್ಳೆಯ ಫಸಲು ಕೊಡುತ್ತದೆ ಎರೆ ಹೊಲದ ಅನುಭವ ತುಂಬಾ ಸೊಗಸು ಫಸಲು ಕಾಲದಲ್ಲಿ ಹೊಲ ಮೇಯಲು ಬರುವ ಜಿಂಕೆ ಹಿಂಡು ನೋಡೋದೇ ಒಂದು ಸಂಭ್ರಮ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: