ಕೂಮಾ ಬಂತು ಕೂಮಾ..!

ತೇಜಸ್ವಿ ಹೆಗಡೆ

ಅವತ್ತು ಮಧ್ಯಾಹ್ನ ಸುಮಾರು ೪.೩೦ರ ಹೊತ್ತು. ನಾನು ಮನೆಯ ಮಾಳಿಗೆಯಲ್ಲಿ ರೂಮಿನಲ್ಲಿ ಬಾಗಿಲು ಲಾಕ್ ಮಾಡಿಕೊಂಡು ನನ್ನ ಓದಿನ ಕೆಲಸದಲ್ಲಿದ್ದೆ. ಅಪ್ಪ ಮಾಳಿಗೆ ಹತ್ತಿ ಬಂದು ಒಂದೇ ಸಮನೆ ಬಾಗಿಲು ಬಡಿದ್ರು, ಕಾಲಿಂಗ್ ಬೆಲ್ ಮಾಡಿದ್ರು. ‘ಇದು ಇದ್ದೇ ಇರೋದು ಯಾವಾಗ್ಲೂ’ ಅಂತಾ ಸುಮ್ಮನೆ ಇದ್ದೆ. ಆದರೆ ಅಪ್ಪನ ಆರ್ಭಟ ಜೋರಾಯ್ತು. ನನಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಓದೋದನ್ನ ನಿಲ್ಲಿಸಿ ಆ ಸಿಟ್ಟಿನಲ್ಲೇ ಬಾಗಿಲು ತೆರೆದೆ. ಆವಾಗ ಅಪ್ಪ ‘ಕೂಮಾ ಬಂದಿದೆ, ನೋಡು’ ಅಂತ ಕೆಳಗಡೆ ಅಂಗಳದ ಕಡೆ ಕೈ ಮಾಡಿ ತೋರಿದರು. ನನಗೆ ಅರ್ಥ ಆಗಲಿಲ್ಲ. ಸ್ವಲ್ಪ ಮುಂದೆ ಬಂದು ಬಗ್ಗಿ ಅಂಗಳದಲ್ಲಿ ನೋಡಿದರೆ ಪುಟ್ಟದಾದ ಆಮೆ!

ನನಗೆ ಬಂದಿದ್ದ ಸಿಟ್ಟೆಲ್ಲ ಒಂದೇ ಸಲ ಇಳಿದುಹೋಯ್ತು. ನನ್ನ ಜೀವನದಲ್ಲಿ ಮೊದಲ ಸಾರಿ ಆಮೆಯನ್ನ ಅಷ್ಟು ಹತ್ತಿರದಿಂದ ನೋಡ್ತಿರೋದು. ಡಿಸ್ಕವರಿ ಚಾನಲ್‌ನಲ್ಲಿ, ಮೊಬೈಲ್‌ನಲ್ಲಿ ನೋಡಿದ್ದು ಮಾತ್ರ. ಅವತ್ತು ನನ್ನ ಕಣ್ಣೆದುರೇ ನೋಡ್ತಿರೋದಕ್ಕೆ ನಂಬೋಕೆ ಆಗ್ತಾ ಇಲ್ಲಾಗಿತ್ತು.
ಅಪ್ಪನ ಗೆಳೆಯ ಯೋಗೀಶ ಅದನ್ನು ತಂದಿದ್ದ. ನೆಲದ ಮೇಲೆ ಬಿಟ್ಟು ನಿಧಾನಕ್ಕೆ ಹೋಗ್ತಿದೆ ಅಂತಾ ಕಂಡ್ರೂ ಸಾಕಷ್ಟು ಸ್ಪೀಡ್ ಆಗೇ ಹೋಗ್ತಿತ್ತು. ಯೋಗೀಶ ಅದನ್ನು ಹಿಡಿದ ತಕ್ಷಣ ಅದು ತನ್ನ ತಲೆ, ಕಾಲುಗಳನ್ನ ಒಳಕ್ಕೆ ಎಳೆದುಕೊಂಡುಬಿಟ್ಟಿತು. ಹಿಡಿದುಕೊಂಡರೆ ಜಾರುತ್ತಿದ್ದ ಮೈಚಿಪ್ಪಿನ ಅದನ್ನು ಹಿಡಿದು, ಹೇಗೆ ಹಿಡಿದುಕೊಳ್ಳಬೇಕೆಂದು ತೋರಿಸಿ, ಆಮೇಲೆ ತೊಳೆದು ಯೋಗೀಶ ನನ್ನ ಕೈಗೆ ಕೊಟ್ಟ.

ನನಗೊಂಥರ ರೋಮಾಂಚನವಾದಂತಾಯ್ತು. ಅಷ್ಟರಲ್ಲಿ ಅಪ್ಪನಿಗೆ ಅಮ್ಮ ಜೋರು ಮಾಡುತ್ತಿದ್ದಳು. ಆಮೆಯನ್ನು ತಂದ ಯೋಗೀಶನಿಗೂ ಸೇರಿಸಿ. ಯೋಗೀಶ ಅವನ ಗದ್ದೆ ಹತ್ತಿರದ ಕೆರೆಯಲ್ಲಿ ಬಲೆ ಹಾಕಿ ಮೀನು ಹಿಡಿಯೋಕೆ ಹೋಗಿದ್ದಾಗ ಅದು ಸಿಕ್ಕಿತ್ತಂತೆ. ಅದನ್ನು ನಮ್ಮ ಮನೆಯ ಬಾವಿಗೆ ಬಿಡೋಕೆ ಅಂತ ತಂದಿದ್ದ. ಆದರೆ ಅಮ್ಮ ಬಾವಿಗೆ ಬಿಡೋದು ಬೇಡ ಅಂದುಬಿಟ್ಲು. ನನಗೆ ಆಶ್ಚರ್ಯ ಆಯ್ತು, ಯೋಗೀಶ ಅದನ್ನು ತಿನ್ನದೇ ನಮಗೆ ತಂದುಕೊಟ್ಟ ಎಂದು. ಹಾಗೆಯೇ ಸಂತೋಷವೂ ಆಯ್ತು. ಅಪ್ಪ ಮೊದಲು ನನ್ನ ಹತ್ತಿರ ‘ಕೂಮ’ ಅಂತ ಹೇಳಿದ್ದು ನೆನಪಿಗೆ ಬಂದು ಅವನ ಬಳಿ ಕೇಳಿದೆ. ‘ಆಮೆಗೆ ಗ್ರಾಮೀಣ ಜನ ಕೂಮ ಅಂತಾ ಕರೆಯೋದು’ ಎಂದ.

ಕೊನೆಗೆ ನಾವು ಅದನ್ನು ನಮ್ಮ ತೋಟದಲ್ಲಿದ್ದ ಕೆರೆಗೆ ಬಿಡೋದು ಅಂತಾ ನಿರ್ಧಾರ ಮಾಡ್ದಿದ್ವಿ. ಅಷ್ಟರಲ್ಲಿ ಅಪ್ಪ ಮನೆಯ ಗೋಡೌನ್‌ನಿಂದ ಒಂದು ದೊಡ್ಡ ಪೈಬರ್ ಪೀಪಾಯಿ ತಂದ. ಅದಕ್ಕೆ ನೀರು ತುಂಬಿಸಿ ಅದರೊಳಗೆ ಆಮೆಯನ್ನು ಬಿಟ್ವಿ. ಅದು ಸ್ವಲ್ಪ ಹೊತ್ತಿಗೆ ತಲೆ,ಕಾಲುಗಳನ್ನ ಹೊರಗೆ ಹಾಕಿ ನೀರಲ್ಲಿ ಆಡೋಕೆ ಶುರು ಮಾಡ್ತು. ಅಪ್ಪ ತೋಟದ ಕೆರೆಯಲ್ಲಿ ಬಿಟ್ಟಿದ್ದ ಮೀನುಗಳಿಗೆ ಹಾಕಲೆಂದು ತಂದಿದ್ದ ಫಿಶ್‌ಫುಡ್ ಆ ಪೀಪಾಯಿಯೊಳಕ್ಕೆ ಉದುರಿಸಿದ. ಆಮೆ ಅದರ ಕಡೆ ನೋಡಲೂ ಇಲ್ಲ.

ಆಮೇಲೆ ನಾವೆಲ್ಲ ನಮ್ಮ ಕೆಲಸದಲ್ಲಿ ತೊಡಗಿದ್ವಿ. ನಾನು ಸಂಜೆ ಅದನ್ನು ನೀರಿಂದ ಹೊರಗೆ ತೆಗೆದು ನೆಲದ ಮೇಲೆ ಬಿಟ್ಟು ಆಟ ಆಡಿ, ಫೊಟೊ,ಸೆಲ್ಫಿ ಎಲ್ಲ ತೆಗೆದುಕೊಂಡೆ. ಅದಕ್ಕೆ ಒಂದು ಹೆಸರು ಕೊಡೋಣ ಅಂತಾ ಯೋಚನೆ ಬಂತು. ಸಾಕಷ್ಟು ಯೋಚನೆ ಮಾಡಿ ಹಾಲಿವುಡ್ ಸ್ಟಾರ್ ಆದ ಜಾನಿ ಡೆಪ್‌ನ ನೆನಪಿಗೆ ಇರ‍್ಲಿ ಅಂತ ಜಾನೀ ಅಂತಾ ನಾಮಕರಣ ಮಾಡ್ದೆ. ರಾತ್ರಿ ಮಲಗೋವರೆಗೂ ಒಂದು ೫೦ ಸಾರಿ ಹೋಗೋದು, ನೋಡೋದು, ಜಾನೀ, ಜಾನೀ ಅಂತಾ ಕರೆಯೋದು, ಬರೋದು ಮಾಡ್ತಾ ಇದ್ದೆ. ಅಮ್ಮ ಸ್ವಲ್ಪ ಅನ್ನ ಕೊಟ್ರು, ಅದಕ್ಕೆ ಹಾಕು ಅಂತ. ಅದನ್ನು ಹಾಕಿದೆ. ಅದನ್ನು ತಿಂದಿದ್ದು ಅನುಮಾನ.

ಬೆಳಿಗ್ಗೆ ಎದ್ದ ಕೂಡಲೇ ಅದನ್ನು ನೋಡಿದೆ. ಅಪ್ಪ ಆಮೆಯನ್ನ ತೋಟಕ್ಕೆ ಬಿಟ್ಟು ಬರೋಣ ಅಂದ್ರು. ನನಗೆ ಅದನ್ನು ಬಿಡೋಕೆ ಮನಸ್ಸಿಲ್ಲಾಗಿತ್ತು. ಆವರೆಗೂ ಅದು ಏನೂ ತಿಂದಿಲ್ಲಾಗಿತ್ತು. ಮತ್ತು ನಾವು ಅದನ್ನ ಹಾಗೇ ಇಟ್ಟುಕೊಂಡ್ರೆ ಅದಕ್ಕೆ ತೊಂದರೆ ಆಗುತ್ತೆ ಅಂತಾ ಅಡ್ಡಿಲ್ಲ ಅಂದೆ. ಆಮೆಯನ್ನ ನೀರಿನಿಂದ ತೆಗೆದು ಆಟ ಆಡಿ ಫೋಟೊ, ವಿಡಿಯೋ ಎಲ್ಲ ತೆಗೆದುಕೊಂಡೆ. ಪಾಪು, ಪಾಪು ಅಂತ ಪ್ರೀತಿಯಿಂದ ಕರೀತಾ ಇದ್ದೆ. ಅದು ಒಂದೇ ದಿನಕ್ಕೆ ನನ್ನ ಮನಸ್ಸನ್ನ ಗೆದ್ದುಬಿಟ್ಟಿತ್ತು. ಆಮೇಲೆ ಅಮ್ಮನಿಗೆ ಟಾಟಾ, ಬೈ ಮಾಡಿಸಿ ಜಾನೀಯನ್ನ ಒಂದು ಕವರ್‌ನಲ್ಲಿಟ್ಟು, ಅದನ್ನು ಇನ್ನೊಂದು ಚೀಲದಲ್ಲಿ ಹಾಕಿ ಸೇಪ್ ಆಗಿ ತೆಗೆದುಕೊಂಡು ಹೋದ್ವಿ.

ತೋಟದ ಕೆರೆಯಲ್ಲಿ ಜಾನೀಯನ್ನ ಬಿಡಬೇಕಾದರೆ ಕಷ್ಟ ಆಯ್ತು. ನೀರು ಕೆಳಕ್ಕೆ ಹೋಗಿದ್ದರಿಂದ ಅದನ್ನು ನೀರಿಗೆ ಬಿಡಲು ಒದ್ದಾಟ ಆಯ್ತು. ಆಮೆಯನ್ನ ಇಟ್ಟಿದ್ದ ಪ್ಲಾಸ್ಟಿಕ್ ಕವರ್ ಸಮೇತ ಉದ್ದ ಕೋಲಿಗೆ ಕಟ್ಟಿ ನೀರಲ್ಲಿ ಬಿಟ್ಟಾಗ ಕವರ್ ಸಮೇತ ನೀರಲ್ಲಿ ಕೆಳಗೆ ಹೋಯ್ತು. ನಂತರ ಹೇಗೋ ಮಾಡಿ ಕವರ್‌ನಿಂದ ಹೊರಗೆ ತೆಗೆದ್ವಿ. ಕೊನೆಯಲ್ಲಿ ಜಾನೀ ಒಂದು ಸಾರಿ ಮೇಲೆ ಬಂದು ಹಾಗೇ ನೀರಿನೊಳಕ್ಕೆ ಹೋಗಿಬಿಟ್ಟಿತು.

‍ಲೇಖಕರು Avadhi

May 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: