ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕೂದಲು ಸಿಕ್ಕು ಬಿಡಿಸುವಾಗ ಎದುರು ಮನೆಯಾಕೆ ಪ್ರಶ್ನೆ…' – ಪ್ರಜ್ಞಾ ಮತ್ತೀಹಳ್ಳಿ

ಹಬ್ಬದ ಪದ್ಯಗಳು

ಪ್ರಜ್ಞಾ ಮತ್ತಿಹಳ್ಳಿ

1
ತಲೆಬಾಗಿಲ ಮೇಲೆ ಮಾವಿನೆಲೆ ಮಡಿಸಿ
ಚುಚ್ಚಿದ ಹಸಿರು ತೋರಣ
ಅಪರೂಪಕ್ಕೆ ನೆನಪಿಸಿಕೊಳ್ಳುತ್ತ
ಚುಕ್ಕಿಯಿಟ್ಟು ಎಳೆ ತಪ್ಪಿದ ರಂಗೋಲಿ
ವಿಶೇಷಕ್ಕಾಗೇ ಅಟ್ಟವಿಳಿದ ಡಳ್ಳೆ ತಪ್ಪಲೆ
ಇರುವೆ ಮುತ್ತಬಾರದೆಂದು ನೀರಿನ
ತಾಟಲ್ಲಿಟ್ಟ ಹೂರಣ ಘಮ
ನಾದಿ ನಾದಿ ಕೈ ಸೋತು ಕಣಕ ಹಾಗೇ
ತುಂಬಿ ಹೆಂಚಲ್ಲೇ ಹರಿದು
ಚಿಂದಿಯಾಗುವ ಹೋಳಿಗೆ
2
ಪುರುಸೊತ್ತಿನ ಪೂಜೆಯಲ್ಲಿ ಹೂ
ಕುಂಕುಮ ಕಂಡ ದೇವರು
ಹೊಸ ಬಟ್ಟೆ ತೊಟ್ಟ ಹುಡುಗನಂತೆ
ನಕ್ಕ ಸದ್ದಿಗೆ ಎಳೆ ಶ್ಯಾವಿಗೆ ಬೆಂದ
ಕೆನೆ ಹಾಲು ಸರಕ್ಕನೆ ಉಕ್ಕಿದ ಹಾಗೆ
3
ಬೆಲ್ಲ ಮೆತ್ತಿದ ಬೇವು ನೆಕ್ಕಿ
ಬಿಡಬಹುದು ಹಾಗೇ ಕೈಯಲ್ಲಿ
ಪರಮಾನ್ನ ಕೋಸುಂಬರಿ
ಊಟಕ್ಕಾದರೂ ಬೇಕಲ್ಲ ಕುಡಿಬಾಳೆ
ಬೆವರು ಬಸಿದು ಹಸಿರುಕ್ಕಿಸಿದ ಬದುಕು
ನಕ್ಕಾಗ ಕುಡಿಯೊಡೆದ ತುದಿ
ಕೊಯ್ದು ತರಲು ಹಿತ್ತಲಿಗೆ ಹೋದವನ
ಬರವ ಕಾಯಬೇಕು ಕಿಡಕಿಗೇ ಕಣ್ಣು ನೆಟ್ಟು
4
ಊಟ ಹೆಚ್ಚಾಗಿದ್ದಕ್ಕೆ ಎಳೆದು ಮುಚ್ಚುವ
ಕಣ್ಣು ನಿಚ್ಚಳಗೊಂಡಾಗ ನಲ್ಲಿಯ ಕೆಳಗೆ
ರಾಶಿ ರಾಶಿ ಮುಸುರೆ ಪಾತ್ರೆ
ಸೂರೆಯಾದ ಕೋಟೆ ಅವಶೇಷ
ಅರ್ಧ ಅಳಿಸಿದ ರಂಗೋಲಿ
ಕಟ್ಟಿದ ಮುಡಿಯಲ್ಲೇ ಒಣಗಿ ಜಡಕಾದ
ಕೂದಲು ಸಿಕ್ಕು ಬಿಡಿಸುವಾಗ ಎದುರು
ಮನೆಯಾಕೆ ಪ್ರಶ್ನೆ, ‘ಹಬ್ಬವಾಯಿತೇ?’
ಫಳಫಳ ಸೀರೆಯ ತಾರೆಯರು
ಟೀವಿ ತುಳಕುವಷ್ಟಗಲ ನಕ್ಕು ಹೇಳಿದ
ಶುಭಾಶಯಗಳ ರೆಪ್ಪೆ ಬಡಿಯದೇ
ನೋಡುತ್ತಿದ್ದಾರೆ ಗಂಡ ಮಕ್ಕಳು
ದಣಿದ ಬೆನ್ನುಹುರಿಗುಂಟ ಜುಳುಜುಳು
ನೋವಿನ ನೈಲುನದಿ ಅಯ್ಯೋ
ಹಬ್ಬ ಆಗಿ ಹೋಯಿತೇ
 
 
 
 

‍ಲೇಖಕರು avadhi

11 April, 2013

7 Comments

  1. ಅಶೋಕ ಶೆಟ್ಟರ್

    “ಪುರುಸೊತ್ತಿನ ಪೂಜೆಯಲ್ಲಿ ಹೂ
    ಕುಂಕುಮ ಕಂಡ ದೇವರು
    ಹೊಸ ಬಟ್ಟೆ ತೊಟ್ಟ ಹುಡುಗನಂತೆ
    ನಕ್ಕ ಸದ್ದಿಗೆ ಎಳೆ ಶ್ಯಾವಿಗೆ ಬೆಂದ
    ಕೆನೆ ಹಾಲು ಸರಕ್ಕನೆ ಉಕ್ಕಿದ ಹಾಗೆ”
    ಬದುಕಿನ ಸಡಗರ ಮತ್ತು ಯಾಂತ್ರಿಕತೆಯ ಕ್ಯಾನ್ವಾಸ್‌ನಲ್ಲಿ ಹಬ್ಬದಾಚರಣೆಯ ನಲಿವು ದಣಿವುಗಳನ್ನು ತುಂಬ ಹದವಾಗಿ ಮತ್ತು ಹೃದ್ಯವಾಗಿ ಹೇಳಿದೆ ಈ ಕವಿತೆ.ಚೆನ್ನಾಗಿದೆ.

  2. arun joladkudligi

    ಯುಗಾದಿಯಿನ್ನೂ ಕಾವ್ಯವಾಗಲು ಸಜ್ಜಾದಂತಿದೆ.

  3. chalam

    ಪುರುಸೊತ್ತಿನ ಪೂಜೆಯಲ್ಲಿ ಹೂ
    ಕುಂಕುಮ ಕಂಡ ದೇವರು
    ಹೊಸ ಬಟ್ಟೆ ತೊಟ್ಟ ಹುಡುಗನಂತೆ
    ನಕ್ಕ ಸದ್ದಿಗೆ ಎಳೆ ಶ್ಯಾವಿಗೆ ಬೆಂದ
    ಕೆನೆ ಹಾಲು ಸರಕ್ಕನೆ ಉಕ್ಕಿದ ಹಾಗೆ…
    ಸೂಪರ್ ಲೈನ್ಸ್…

  4. laxmikant mirajakar

    Tumba uttam kavan.abhinandanegalu.

  5. Jayalaxmi Patil

    ನಾಲ್ಕನೇಯ ನುಡಿ ಆಹಾ, ಗೃಹಿಣಿಯರ ಮುಖಕ್ಕೆ ಕನ್ನಡಿ ಹಿಡಿದಂತೆ! ಹಾಗೇ ಎಲ್ಲರಿಗೂ ಇಷ್ಟವಾದ ಎರಡನೇಯ ನುಡಿ ‘ಪುರುಸೊತ್ತಿನ ಪೂಜೆಯಲಿ….’ ನನಗೂ ತುಂಬಾ ಇಷ್ಟವಾಯ್ತು.

  6. Tejaswini Hegde

    wow…tumba ista aaytu kavite… 🙂

  7. bharathi bv

    Ishtavaythu prajna …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading