
ಕುಸುಮ ಪಟೇಲ್
ತಪ್ಪು ನಿನ್ನದಲ್ಲ ಬಿಡು
ತಪ್ಪು ನನ್ನದೇ …… ???
ಗಾಳಿಯಲಿ ನೀ ಮೊರೆದ
ನೀರಿನಲಿ ನೀ ಕೊರೆದ
ಅಕ್ಷರಗಳು ..
ರೂಪಾಂತರಗೊಂಡು
ಶಬ್ಧಗಳಾಗಿ ಮನ ಮೀಟಿದ್ದು
ನಿನ್ನ ತಪ್ಪಲ್ಲ ಬಿಡು….
ಅಳಿಯದ ನೆನಪುಗಳ
ಫಲಿಸದ ಕನವರಿಕೆಗಳ
ನನಸಾಗದ ಕನಸುಗಳ
ಹೊತ್ತ ಜೀವ ……
ಸೋತು ..ಬಳಲಿ …ಬೆಂಡಾಗಿ
ಬಂಡೆಯಾದದ್ದು …
ಯಾವ ಕಾಲವೋ??

ರಿಂಗಣಿಸುತ್ತಿವೆ ಶಬ್ಧಗಳು
ನಾಕು ಗೋಡೆಯ
ಮುಚ್ಚಿದ ದರ್ವಾಜದ ಹಿಂದೆ
ನೀ ಉಸುರಿದ ‘ಅಭಯ…..ದ’
ಸದ್ದು ರಿಂಗಣಿಸುತ್ತಿದೆ
ಧ್ವನಿ ಸುರಳಿಯಾಗಿ ….
ಕಣ್ಣಿಗಂಟಿದ
‘ಅಭಯ’ದ ಕನಸೀಗ
ಕಾದುಕೂತಿದೆ ಕೇಳಲು
ನಿನ್ನ ಆ ಸುಲಲಿತ ವ್ಯಾಖ್ಯಾನ……
ಯಾವಾಗಲೂ ಸತ್ಯ ನಿನ್ನ ಪಾಲಿನದೇ
ಎಷ್ಟಾದರೂ ಈ ಹಿಂದೆ
“ಅಶ್ವಥ್ಹಾಮ ಹತಃ ಕುಂಜರಃ ಎಂದವನು
ನೀನೇ ಅಲ್ಲವೇ”…..???
ತಪ್ಪು ನಿನ್ನದಲ್ಲ ಬಿಡು…
ಮನ ಭೇದಿಸಿದ
ಶಬ್ದಗಳದು
ಆ ಶಬ್ದವೇಧಿಯದು…
ಮರುಳು ಮನದ್ದು….





Thank you Avadhi