ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಪ್ರತಿಮನೆಯ ಪಾತ್ರೆಯದೂ ಬೇರೆ ಬೇರೆ ಆಕಾರ

ಬಕ್ರೀದು, ಬೆಂಗಳೂರು ಬಂದ್, ಪಂಚಮಿ ಅಂತೆಲ್ಲ ವಾರವೆಲ್ಲ ಮಗನ ಸ್ಕೂಲಿಗೆ ರಜೆಯಿತ್ತು. ಅಪರೂಪಕ್ಕೆ ನಮ್ಮ ಶೂಟಿಂಗಿಗೂ ನಾಕು ದಿನಗಳ ಬ್ರೇಕು. ಸಿಕ್ಕಿದ್ದೇ ಚಾನ್ಸು ಅಂತ ಊರಿಗೆ ಹೊರಟೆವು. ಮೈನ್ ರೋಡಿಗೆ ಬರುತ್ತಲೇ ಪಕ್ಕದ ದೊಡ್ಡ ಕಾಂಪೌಂಡಿನ ಮನೆಯ ಸೊಸೆ ತನ್ನ ಇಬ್ಬರು ಮಕ್ಕಳ ಜೊತೆ ಬರ್ತಿದ್ದಳು. ಮಕ್ಕಳು ಬೈ ಬೈ ಹೇಳಲು ನಿಂತವು.”ಇವನಿಗೇನೋ ರಜೆ. ನಿಮ್ಮ ಕೆಲಸ?” ಕೇಳಿದಳು. ನಾನು ಲ್ಯಾಪ್ ತಗೊಂಡಿದೀನಿ, ಊರಿಂದಾನೇ ಕೆಲಸ ಮಾಡಬಹುದು” ಅಂದೆ. ಅವಳು “ಅಯ್ಯೋ ನಿಮ್ಮದೇ ಸರಿರೀ.. ನಾನು ನೋಡಿ ಇದ್ದ ಕೆಲಸ ಬಿಟ್ಟೆ. ಈ ಮಕ್ಕಳು ಅತ್ತೆ, ಮಾವ ಎಲ್ರನೂ ನೋಡ್ಕೋಬೇಕಲ್ಲ?” ಅಂದಳು. “ಮನೇಲೇ ಕೂತು ಮಾಡೋ ಕೆಲಸಗಳು ಬೇಕಾದಷ್ಟಿವೆಯಲ್ಲ ಈಗ? ಅದೂ ನಿಮ್ಮ ಸಾಫ್ಟ್ವೇರ್ ಜಗತ್ತಿನಲ್ಲಿ ತುಂಬಾ ಇದೆ. ನಿಮಗೇನು? ಎಲ್ಲಾನೂ ಕೆಲಸದವರೇ ಮಾಡ್ತಾರೆ. ಅಡುಗೆ ಉಸ್ತುವಾರಿ ಒಂದು ತಾನೇ? ಟೈಂ ಮಾಡ್ಕೋಬಹುದಪ್ಪ.” ಅಂದೆ.
“ಅಯ್ಯೋ ಆಗಲ್ಲ ರೀ. ಇದ್ ಮಾಡೋಷ್ಟರಲ್ಲೆ ಸಾಕಾಗತ್ತೆ. ನಮ್ಮತ್ತೆ ಒಂಚೂರ್ ಅಡುಗೆ ನೋಡ್ಕೊಂಡಿದ್ರೆ ಆಗಿತ್ತು. ಮೊದ್ಲು ಮಾಡ್ತಿದ್ರು ಈಗ ಹುಷಾರಿಲ್ಲ, ಅವರ ಕೈಲಾಗಲ್ಲ. ಏನ್ಮಾಡೋದು ಬೇಜಾರಾಗತ್ತೆ. ಒದೊಂದ್ಸಲ ಅಂತು ಹುಚ್ ಹಿಡಿದ ಹಾಗಾಗತ್ತೆ” ಅಂತ ದಪ್ಪ ದೇಹದಿಂದ ಏದುಸಿರು ಬಿಟ್ಟಳು. ಹಣದ ಅಗತ್ಯ, ಕರಿಯರ್ ಲೈಫ್ ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆ ಎರಡೂ ಆಕೆಗಿರಲಿಲ್ಲ. ಮನೆಯಿಂದ ತುಸು ಕಾಲ ಹೊರಗಿರಲು ಮಾತ್ರ ಆಕೆ ಕೆಲಸ ಬಯಸುತ್ತಿದ್ದಳು.
ಬಸ್ಸತ್ತಿದೆವು. ಪಕ್ಕದಲ್ಲಿ ಬಂದು ಕೂತಳು ಅಪ್ರತಿಮ ಸುಂದರಿ, ಕಿವಿ, ಕೈ ಕುತ್ತಿಗೆ ಎಲ್ಲ “ಹೆಚ್ಚೇ” ಅನಿಸುವಷ್ಟು ಬಂಗಾರದೊಡವೆಗಳೇ. “ಯಾಕಿಷ್ಟೊಂದು ಒಡವೆ ಹಾಕೊಂಡ್ ಬಸ್ಸಲ್ಲಿ ಓಡಾಡ್ತೀರಿ? ಅಪಾಯ ಅಲ್ವ?” ಅಂದೆ. ಒಂದು ಫಂಕ್ಷನಿತ್ತು. “ ಬಸ್ಟಾಂಡಲ್ಲಿ ತಮ್ಮ ಬರ್ತಾನೆ” ಅಂದಳು. ಮಾತಾಡ್ತಾ ಗೊತ್ತಾಗಿದ್ದು ಆಕೆ ಶ್ರೀಮಂತರ ಮನೆಯ ಮಗಳು ಮತ್ತು ಶ್ರೀಮಂತರ ಮನೆಯ ಒಬ್ಬಳೇ ಸೊಸೆ. ಮಾವ ಪ್ರೊಫೆಸರು, ಗಂಡ ಡಾಕ್ಟರು, ಈಕೆ ಲಾಯರು. ಗಂಡನ ಇಬ್ಬರು ಅಕ್ಕತಂಗಿಯರದೂ ಅಮೆರಿಕೆಯ ವಾಸ. ಈ ಸುಂದರಿಗೂ ಇಬ್ಬರು ಹೆಣ್ಣುಮಕ್ಕಳಂತೆ.
ಅತ್ಯಾಚಾರ ಪ್ರಕರಣಗಳಿಂದ ನನ್ನಷ್ಟೇ ಆಕೆಯೂ ಬೇಸತ್ತಿದ್ದರು. ಹೆಣ್ಣುಮಕ್ಕಳು, ಸಮಾಜದಲ್ಲಿ ಸ್ತ್ರೀಯರ ಸ್ಥಾನ-ಮಾನ ಇತ್ಯಾದಿಗಳ ಬಗ್ಗೆ ಆಕೆ ಮಾತಾಡುತ್ತಿದ್ದರು. “ಈಗ ನಮ್ಮನೇಲೇ ನೋಡಿ, ನಾನು ಲಾ ಪ್ರಾಕ್ಟೀಸ್ ಮಾಡ್ತೀನಿ. ನನಗೆ ಗಂಡ, ಅತ್ತೆ, ಮಾವ ಎಲ್ರೂ ಸಪೋರ್ಟ್ ಮಾಡ್ತಾರೆ. ಆದರೆ ಯಾರೂ ಕೋ – ಆಪರೇಟ್ ಮಾಡಲ್ಲ ಅಂದಳು. ಸಪೋರ್ಟ್ ಮತ್ತು ಕೋಆಪರೇಷನ್!! ಎಂತದೋ ಹೊಸ ಇಂಟರ್ಪ್ರಿಟೇಷನ್ ಅನಿಸಿ, ಕುತೂಹಲದಿಂದ ಕಿವಿ ಚುರುಕಾಗಿಸಿದೆ. ಅತ್ತೆ ಎಂಟು ಗಂಟೆವರೆಗೆ ಮೇಲೇಳಲ್ಲ. ಮಾವನಿಗೆ ಅಷ್ಟರಲ್ಲಿ ಎರಡು ರೌಂಡ್ ಕಾಫಿಯಾಗಬೇಕು. ಗಂಡ ಯೋಗ ಧ್ಯಾನ ಅಂತ ಕೂರುವವ. ಇನ್ನು ವಯಸಾದ ಅಜ್ಜಿ, ಮತ್ತು ಮಕ್ಕಳು, ಇದನ್ನೆಲ್ಲ ನಾನೇ ಮಾಡಬೇಕೆಂಬುದು ಯಾವ ಕಾನೂನಲ್ಲೂ ಬರೆಯದ ಸಾಮಾಜಿಕ ನಿಯಯ.ಬೆಳಗ್ಗೆ ಎದ್ದು ಕೇಸ್ ಸ್ಟಡಿ ಮಾಡಿಕೊಂಡು, ರೆಡಿಯಾಗಿ ಹೊರಟುಬಿಡೋಕಾಗತ್ತಾ? “ಬೆಳಗಾಗೆದ್ದು ಗಂಡ, ಅತ್ತೆ, ಮಾವ, ಮಕ್ಕಳು ಆ ಅಜ್ಜಿ ಎಲ್ರನ್ನು ಬಿಟ್ಟು,ಡ್ರೆಸ್ ಮಾಡಿಕೊಂಡು ಹೋಗ್ಬಿಡ್ತಾಳೆ” ಅಂತ ಅಕ್ಕಪಕ್ಕದೋರು ಆಡ್ಕೋತಾರೆ. ಅವರ ಮಾತು ಬಿಡಿ, ನಮಗಾದರೂ ಮನಸು ಒಪ್ಪಬೇಕಲ್ಲ? ಅಂದಳು. ನಾಲ್ಕಕ್ಕೇ ಎದ್ದು ಎಲ್ಲ ಮಾಡಿಟ್ಟು, ಮಕ್ಕಳನ್ನೂ ರೆಡಿಮಾಡಿ, ಡಬ್ಬಿ ಕಟ್ಟಿ, ಮಧ್ಯಾಹ್ನಕ್ಕೂ ಒಂದಷ್ಟು ರೆಡಿಮಾಡಿ. ಆಮೇಲೆ ಕೋಟು ಹಾಕಿ ಕೋರ್ಟಿಗೆ ಹೋಗಬೇಕು. ಸಂಜೆ ಐದರ ಮೇಲೆ ಆಫೀಸಲ್ಲಿದ್ದು ಕ್ಲೈಂಟ್ಗಳೊಂದಿಗೆ ಮಾತಾಡಲು ಆಗುವುದಿಲ್ಲ. ಮನೆ ಕಾಯುತ್ತಿರುತ್ತದೆ. ಈಗಂತು ಮಕ್ಕಳು ದೊಡ್ವರಾಗ್ತಾ, ಅವರ ಹೋಮ್ವರ್ಕ್,ಸ್ಪೋರ್ಟ್ಸ್, ಡಾನ್ಸ್. ಮತ್ತು ಅಡುಗೆ ಮನೆ. ಜವಾಬ್ದಾರಿಗಳು ಹೆಚ್ಚುತ್ತಲೇ ಇವೆ.

ಮದುವೆಯಾಗಿ 14 ವರ್ಷ. ಪ್ರಾಕ್ಟೀಸಿಗೂ ಹದಿನಾಲ್ಕು ಆದರೆ ಇನ್ನೂ ಇಂಡಿಪೆಂಡೆಂಟ್ ಕೇಸ್ಗಳನ್ನು ತೆಗೆದುಕೊಳ್ಳಲಾಗಿಲ್ಲ. ಸೀನಿಯರ್ ಕೈಕೆಳಗೇ ಇದ್ದೇನೆ. ಮಧ್ಯ ಮಧ್ಯ ನಾಲ್ಕು ನಾಲ್ಕು ತಿಂಗಳು ಅತ್ತೆ ಮಾವ ಫಾರಿನ್ ಹೋದಾಗಂತು ಇನ್ನೂ ಕಷ್ಟ. ಅದೇ ಮನೇಲಿ ನನಗೆ ಸಪೋರ್ಟ್ ಜೊತೆ ಕೋ ಆಪರೇಷನ್ ಇದ್ದಿದ್ದರೆ?ಕೆಲಸ ಹಂಚಿಕೊಂಡಿದ್ದರೆ? ಅಂತ ಕೇಳಿದಳು. “ಬೆಳಗ್ಗೇನೇ ಎಲ್ಲ ಮಾಡಿಟ್ಟು ಹೋಗ್ತಾಳಪ್ಪ ಅಂತ ಜನ ಮಾತಾಡ್ತಾರೆ. ನನ್ನ ಹೊಗಳಲು ಅಲ್ಲ ,ಅವರ ಸೊಸೆಯರ ಕಿವಿಗೆ ಬೀಳಲಿ ಅಂತ” ಅಂತ ನಕ್ಕಳು. ಮನೆ, ಮಕ್ಕಳು ಅಂತ ನಿಭಾಯಿಸಿಕೊಂಡು ಮತ್ತೇನೋ ಸಾಧಿಸುವ ಹೆಣ್ಣುಮಕ್ಕಳದು ಡಬಲ್ ಸಾಧನೆಯ ಲೆಕ್ಕ. ಇಬ್ಬರೂ ಆಫೀಸಿಂದ ಬರೋದಂತೆ. ಅವನು ಫ್ರೆಶ್ ಆಗಿ ಕೂತು ಕಾಫಿ ಹೀರ್ತಾ, ರಿಮೋಟ್ ಹಿಡ್ಕೊಳೋದು, ಇವಳು ಮತ್ತೆ ಒಲೆ ಮುಂದೆ ಬೇಯೋದು. ಇದ್ಯಾವ ನ್ಯಾಯ? ಅಂತ ನನ್ನ ದುಃಖಾನೂ ಹಂಚಿಕೊಂಡೆ. ಅಷ್ಟರಲಿ ಅವಳ ಸ್ಟಾಪು ಬಂತು. ಇಳಿದು ಎರಡೆರಡು ಬಾರಿ ಕೇ ಬೀಸಿ ಹೋದಳು. ಕೈಯಲ್ಲಿ ಚಿನ್ನದ ದಪ್ಪ ಕೊಡಗಿನ ಕಡಗ ಮಿರ ಮಿರ ಮಿಂಚುತ್ತಿತ್ತು. ಆದರೆ ಅವಳಿಗೆ ಆ ಬಂಗಾರಕ್ಕೂ ಮಿಗಿಲಾದ ಮತ್ತೇನೋ ಬೇಕಿತ್ತು.
ಮೈಸೂರಲ್ಲಿ ಇಳಿದು, ನಮ್ಮೂರ ಬಸ್ಸೇರಿ ಉಸ್ಸಪ್ಪ ಅಂತ ಕೂತದ್ದಾಯ್ತು. ದೇವಲಾಪುದಲ್ಲಿ ಪಚ್ಚೆತಾಯಕ್ಕ ಹತ್ತಿದಳು.( ಕೂಸವ್ವ ಅಂತ ಹಿಂದೆ ಬರೆದಿದ್ನಲ್ಲ ಅವಳ ಅಕ್ಕ ಇವಳು) ”ಯಾವತ್ ಬಂದ್ಯವ್ವ ಬೆಂಗಳೂರಿಂದ?” ಅನ್ನುತ್ತಾ ಪಕ್ಕದಲ್ಲೆ ಕೂತಳು. “ ಇದೇನಕ್ಕ ದ್ಯಾವಲಾಪುರಕ್ ಯಾಥಕ್ ಬಂದಿದ್ರಿ?” ಕೇಳಿದೆ. “ಐ ಸಂಘದ್ ಸಾಲ ತಕಂಡಿನೆಲ್ಯವ್ವ, ಅದ್ ಕಟ್ಟಕ್ ಬಂದಿದ್ದಿ” ಅಂದಳು. “ಎಷ್ಟಕ್ಕ ಸಾಲ ತಗೋತೀಯ?” ಅಂದೆ. “ಸಾಲದ್ ಮಾತಿರಲಿ ಬಡ್ಡಿ ಕತ್ಯಾ ಕ್ಯೋಳು ತಾಯೀ” ಅಂತ ಸುರು ಮಾಡಿದಳು. “ ಭಾರತದ ಕೃಷಿ ಮಾನಾಸೂನದ ಜೊತೆಗಿನ ಜೂಜಾಟ” ಅಂತ ಹೈಸ್ಕೂಲಿನಲ್ಲಿ ಓದಿದ್ದ ಬರಿಯ ಥಿಯರಿಗೆ ಅವಳದು ಪ್ರಾಕ್ಟಿಕಲ್ ರೂಪ. ಹಸರುಕಾಳು, ಉದ್ದು, ಬಿತ್ತಿದಾಳೆ. ದರಿದ್ರ ಮಳೆ ಸರಿಯಾದ ಟೇಮಿಗೆ ಆಗದೇ ಹದಿನಾಕು ಸೇರು ಹೆಸರು, ಹದಿನಾರು ಸೇರು ಉದ್ದು ಬೆಳೆದಿದೆ. ಹೊಲ ಉತ್ತ ಟ್ರಾಕ್ಟರ ನವನಿಗೂ ಕೈಯಿಂದ ಕಾಸು ಕೊಡಬೇಕು.
ಗಂಡನಿಗೆ 2 ವರ್ಷದ ಹಿಂದೆ ಬಿದ್ದು ಗಾಯವಾಗಿ ಬೇರೆ ಕೂಲಿಗೂ ಹೋಗೋಕಾಗ್ತಿಲ್ಲ. ಜಮೀನಲ್ಲಿ ನೀರು ಕಂಡ್ರೆ ಏನಾದ್ರೂ ಬೆಳೀತೀನಿ ಅನ್ನೊ ಉತ್ಸಾಹ ಅವಳಿಗಿದೆ. ಮನೆಮಂದಿಯೆಲ್ಲ ದುಡೀತಾರೆ. ಅವಳ ನಸೀಬು ಪಾಪ. ಮೂರು ಸಲ ಬೋರು ಕೊರೆಸಿದಾಗಲೂ ಗಂಗಮ್ಮ ಹ್ಞಾ ಅನ್ನಲಿಲ್ಲ ಹ್ಞೂ ಅನ್ನಲಿಲ್ಲ. ಭೂಮಿಯೊಳಗಿಂದ ಬಂದಿದ್ದು ಬರೀ ಧೂಳು. ನಷ್ಟವಾಗಿದ್ದು 70-80 ಸಾವಿರದ ಬಡ್ಡಿಸಾಲ. ಸ್ಕೂಲಿಗೆ ಹೋಗೋ ಎರಡು ಮಕ್ಕಳು.ಗಂಡನಿಲ್ಲದ ತಂಗಿ, ಕರೆವ ಎರಡು ಹಸು ಬಿಟ್ರೆ ಬೇರೆ ಆಧಾರವಿಲ್ಲ. ಅವೆರಡು ಹಸು ನಂಬಿ ಇವರೆಲ್ಲರ ಹೊಟ್ಟೆಗಳು ತುಂಬಬೇಕು, ಊರವರ, ನೆಂಟರ. ಮದುವೆ , ಮುಯ್ಯಿ. ತಿಥಿಗಳ ಅಟೆಂಟ್ ಮಾಡಬೇಕು. ಸಾಲದ ಬಡ್ಡಿಗಳ ಮುಲಾಜಿಲ್ಲದೇ ಎಣಿಸಬೇಕು. ಎಲ್ಲದಕ್ಕೂ ಎಲ್ಲಿಂದ ಬರಬೇಕು ಹೇಳು? ಅಂತ ಕಣ್ಣೀರಾದಳು. “ಮಗಳಿಗೆ 11 ತುಂಬೋಯ್ತು. ನಾಕ್ ಜನದ್ ಸಮಕ್ಕ ಮಾಡಬ್ಯಾಡ್ವ? ನೀರೊಂದ್ ಬಂದ್ರ ಇನ್ನಷ್ಟ್ ಸಾಲ ಬಂದ್ರೂ ಹೆದರಲ್ಲ. ಆದ್ದಾಗ್ಲೀ ಮಾದಯ್ಯನ್ ಜಾತ್ರೆ ಅಂತ ಇನ್ನೊಂದ್ ಬೋರ್ ತಗಿಸೇ ಬುಡ್ತೀನಿ” ಅಂದಳು. “ಅಯ್ಯೋ ಭಂಡ ಧೈರ್ಯವೇ” ಅಂದುಕೊಂಡೆ. ಈ ಸಲವಾದ್ರೂ ನೀರು ಬರಲಪ್ಪ ಅಂತ ಒಳಮನಸು ತಂತಾನೇ ಹರಸಿತ್ತು.
ಊರ ಚಿಲ್ಟುಪಿಲ್ಟುಗಳನ್ನೆಲ್ಲ ಸೇರಿಸಿಕೊಂಡು ಮಗ ಜಗಲೀಲಿ ಆಟ ಆಡ್ತಾ ಕೂತುಕೊಂಡಿದ್ದ. ನಾನೂ ನೋಡುತ್ತಿದ್ದೆ. ಪುಟ್ಟ ಸುಂದರಿ ಬಂದಳು. ಜವನಪ್ಪನವರ ಮೊಮ್ಮಗಳು. ”ನಿಮ್ಮಣ್ಣ ಎಲ್ಲೆ?” ಅಂದೆ. “ಅಣ್ಣ ಹೊಲಕ್ಕೋಗನ” ಅಂತ ಜಡೆ ಎಸ್ಕೊಂಡ್ಳು. ಸ್ಕೂಲಿಂದ ಬಂದ್ ಓದ್ಕೊಳೋದ್ ಬಿಟ್ ಹೊಲಕ್ಕೋಗ್ತಾನಾ? ಅಂದೆ. “ಏ ನಮ್ಮಮ್ಮ ಹಂಗೇ. ಬಂದ್ ತಕ್ಷಣ ಚಿಕ್ಕಪ್ಪನ್ ಜೊತಲಿರು ಹೋಗು ಅಂತ ಕಳಿಸತ್ತೆ. ಸಂದನಾಗ್ ಬಂದ್ ಓದ್ತನ” ಅಂದಳು.
ಅವಳು ಒಬ್ಬರು ಮೇಷ್ಟ್ರ ಮಗಳಂತೆ. ಅಕ್ಷರಸ್ಥಳು. ಮನೆಯ ಹಿರಿಸೊಸೆ. ಭಾಗ ಕೇಳಿ ಬೇರೆಯಾಗಿ ಆರಾಮಾಗಿರುವ ಚಾನ್ಸ್ ಅವಳು ತೆಗೆದುಕೊಳ್ಳಲಿಲ್ಲ. ಮೈದುನಂದಿರು. ಗಂಡ, ಅತ್ತೆ ಮಾವ, ಮಕ್ಕಳು , ಆಳುಗಳ ಅಡುಗೆ, ಬಟ್ಟೆ ಒಗೆ, ನೀರು ತುಂಬು. ಹಬ್ಬ ಮಾಡು. ಯಪ್ಪೋ.. ಸಣ್ಣ ದೇಹದಲ್ಲೆ ದಿನವೆಲ್ಲ ಯಂತ್ರದ ಹಾಗೆ ಕೆಲಸ ಮಾಡ್ತಾಳೆ. ಅಕ್ಕಪಕ್ಕದವರೊಂದಿಗೆ ಮಾತು ತೀರಾ ಕಡಿಮೆ. ಮಾತಿಗೆ ಪುರುಸೊತ್ತೂ ಇಲ್ಲ ಬಿಡಿ. “ದಯ್ಯ ಹಿಡ್ಕೊಂಡ್ ಹಂಗ್ ಕೆಲಸ ಮಾಡ್ತಾಳೆ. “ ಅನ್ನೋದು ಅತ್ತೆ ಮಾವ ಪ್ರೀತಿಯಿಂದ ಆಡೋ ಮಾತು. ಮೈದುನಂದರಿಗೆ ಅವರ ಹೆಂಡತಿಯರಿಗೆ “ಮಾದರಿ” ಅನ್ನಿಸಿಕೊಂಡವಳು.ಸೊಸೆ ಮನೆ “ಬೆಳಗುವುದು” ಅನ್ನುವ ಮಾತಿಗವಳು ಅನ್ವರ್ಥ. ಜವನ್ಪಪ್ಪನವರದಂತು ಸೊಸೆಯ ಕಂಡು ಧನ್ಯತಾಭಾವ. ಇದ್ದರೆ ಅಂತಾ ಸೊಸೆ ಇರಬೇಕು ಬಿಡಿ. ಅಂತ ಊರ್ ತುಂಬ ಅವಳನ್ನ ಹಾಡಿ ಹೊಗಳೋರೇ. ಜನ ಕೊಡೋ ಈ ಜುಜುಬಿ ಸರ್ಟಿಫಿಕೇಟಿಗಾಗಿ ನಾನೇಕೆ ಹೀಗೆ ದೇಹ ದಂಡಿಸಬೇಕು? ಅಂತ ಅವಳು ಯೋಚಿಸಿದ ಮರುದಿನೇ ಮನೆಯಲ್ಲಿ ಉರಿಯುತ್ತಿರುವ ಒಂದು ಒಲೆ ಮೂರಾಗುತ್ತದೆ.
ವೈಯಕ್ತಿಕವಾಗಿ ಚುಚ್ಚುವ ಮುಳ್ಳು, ಕುಟುಂಬದೊಳಗೆ ಓಡಾಡುವ ಬಣ್ಣವಿಲ್ಲದ ಹೊಗೆ, ಸಾಮಾಜಿಕವಾಗಿ ಯಾವತ್ತೂ ಕಾಣುವುದಿಲ್ಲ. ಮತ್ತು ಸಾಮಾಜಿಕ ನೆಲೆಗಟ್ಟಲ್ಲಿ ಹೇಳುವ ನ್ಯಾಯ, ಅನ್ಯಾಯ, ದೌರ್ಜನ್ಯ, ಸ್ವಾತಂತ್ರ್ಯ ಅಂತೆಲ್ಲ ಹೇಳುವ ದೊಡ್ಡದೊಡ್ಡ ಮಾತುಗಳು, ಕುಟುಂಬದ ಮಟ್ಟದಲ್ಲಿ ಹೊಂದಿಸಲು ಫ್ರೇಮು ಸಿಗದೇ ಒದ್ದಾಡುತ್ತವೆ. ಕೌಟುಂಬಿಕ ನ್ಯಾಯ ಅನ್ನುವುದಂತು ನೀರಿನ ಹಾಗೆ. ಪ್ರತಿಮನೆಯ ಪಾತ್ರೆಯದೂ ಬೇರೆ ಬೇರೆ ಆಕಾರ.
ಸ್ಕೂಲಲ್ಲಿ “ಮಾನ್ಸೂನ್ ಮಳೆ ಮತ್ತು ಕೃಷಿಯ ಮೇಲೆ ಅದರ ಪರಿಣಾಮ” ಅಂತ ಪಾಠ ಮಾಡುವ ಮೇಷ್ಟ್ರಿಗೆ, ಒಣಭೂಮಿಯಲ್ಲಿ ಬೀಜ ಬಿತ್ತಿ ಆಕಾಶ ನೋಡುತ್ತಾ ಕೂರುವ ಪಚ್ಚೆತಾಯಕ್ಕನ ಕಷ್ಟ ಗೊತ್ತಿರಬೇಕೆಂದೇನೂ ಇಲ್ಲ.
 

‍ಲೇಖಕರು G

5 August, 2014

ನಿಮಗೆ ಇವೂ ಇಷ್ಟವಾಗಬಹುದು…

9 Comments

  1. M.S.Krishna murthy

    ಹಳ್ಳಿಯಲ್ಲಾದರೂ ಸರಿ ಪಟ್ಟಣದಲ್ಲಾದರೂ ಸರಿ ಹೆಣ್ಣಿನ ಜವಾಬ್ದಾರಿ ವ್ಯತ್ಯಾಸವಾಗುವುದಿಲ್ಲ. ಸಪೋರ್ಟ್ ಮತ್ತು ಕೊ ಅಪರೇಶನ್ ಬಗ್ಗೆ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಿಯಾ ಕುಸುಮ. ಒಳ್ಳೆ ಲೇಖನ

  2. ಸಂತೋಷ್.ಎಲ್

    Call no man happy till he dies -english proverb

  3. hema

    superr likes…. hennumakkaladu mugiyada golu…gandasaru cooperate maadbekappa 😛

  4. vidyashankar

    ಸಪೋರ್ಟ್ ಮಾಡೋದು ಬಸ್ಸ್ಟ್ಯಾಂಡ್-ನಲ್ಲಿ ರಾಜಕೀಯ ಮಾತಾಡಿದ ಹಾಗೆ… ಕೋಆಪರೇಶನ್ ಅನ್ನೋದು ಶ್ರದ್ಧೆಯಿಂದ ವೋಟು ಹಾಕಿದ ಹಾಗೆ… ಎರಡು ಬೇರೆಯಾ…

  5. ಮಂಜುನಾಥ ಕೊಳ್ಳೇಗಾಲ

    ಹೌದು, ಥಿಯರಿಗೂ ಪ್ರಾಕ್ಟಿಕಲ್ಲಿಗೂ ಯಾವಾಗಲೂ ಪೂರ್ವ ಪಶ್ಚಿಮವೇ. “ವೈಯಕ್ತಿಕವಾಗಿ ಚುಚ್ಚುವ ಮುಳ್ಳು, ಕುಟುಂಬದೊಳಗೆ ಓಡಾಡುವ ಬಣ್ಣವಿಲ್ಲದ ಹೊಗೆ, ಸಾಮಾಜಿಕವಾಗಿ ಯಾವತ್ತೂ ಕಾಣುವುದಿಲ್ಲ. ಮತ್ತು ಸಾಮಾಜಿಕ ನೆಲೆಗಟ್ಟಲ್ಲಿ ಹೇಳುವ ನ್ಯಾಯ, ಅನ್ಯಾಯ, ದೌರ್ಜನ್ಯ, ಸ್ವಾತಂತ್ರ್ಯ ಅಂತೆಲ್ಲ ಹೇಳುವ ದೊಡ್ಡದೊಡ್ಡ ಮಾತುಗಳು, ಕುಟುಂಬದ ಮಟ್ಟದಲ್ಲಿ ಹೊಂದಿಸಲು ಫ್ರೇಮು ಸಿಗದೇ ಒದ್ದಾಡುತ್ತವೆ. ಕೌಟುಂಬಿಕ ನ್ಯಾಯ ಅನ್ನುವುದಂತು ನೀರಿನ ಹಾಗೆ. ಪ್ರತಿಮನೆಯ ಪಾತ್ರೆಯದೂ ಬೇರೆ ಬೇರೆ ಆಕಾರ” ಈ ಮಾತುಗಳು ಸಮಸ್ಯೆಗೆ ಹಿಡಿದ ಕನ್ನಡಿ. ಇವತ್ತು ಬಹಳಷ್ಟು ಕುಟುಂಬಗಳಿಗೆ ಬೇಕಾದ್ದು “ಹೋರಾಟ”ವಲ್ಲ, ಬದಲಿಗೆ ಆಪ್ತ ಸಮಾಲೋಚನೆ. ಎಲ್ಲವನ್ನೂ ಒಂದೇ ಅಚ್ಚಿನಲ್ಲಿ ಎರಕಹೊಯ್ಯಬೇಕೆನ್ನುವ ಹೋರಾಟಗಾರರು, ಕಾನೂನು ಖೋರರು ಇದನ್ನು ಅರ್ಥಮಾಡಿಕೊಂಡರೆ ಎಷ್ಟು ಚಂದ
    ಚೆಂದದ ಲೇಖನ.

  6. Anil Talikoti

    ಹಳ್ಳಿಯಾದರೇನು ಶಿವಾ, ದಿಲ್ಲಿಯಾದರೇನು ಶಿವಾ ಹೆಣ್ಣಿಗೆ ಕೆಲಸ ಖಾಯಂ ಶಿವಾ…

  7. Vaishali

    ತುಂಬಾ ಸಶಕ್ತ ಬರಹ. ನೈಜ ಚಿತ್ರಣ. ಇಂದಿನ ಹಿಂದಿದ್ದ ಹಾಗೂ ಮುಂದೆಯೂ ಇರುವ ಹೆಣ್ಣಿನ ಕತೆಯಿದು. ನಿಜ .. ಎಲ್ಲರೂ ಸಪೋರ್ಟ್ ಮಾಡೋರೆ.. ಕೊ-ಅಪರೆತ್ ಮಾಡವ್ರಿದ್ದಿದ್ರೆ..

  8. bharathi b v

    Tumba yochanege hachchuvantha baraha ….

  9. Sushma Moodbidri

    ದುಡಿವ ಹೆಂಗಸಿನ ವಿವಿಧ ಸ್ತರಗಳ ಚಿತ್ರಣ..
    ಸುಂದರವಾಗಿದೆ..
    ಅದಕ್ಕಿಂತಲೂ ಹೆಚ್ಚಾಗಿ ಲೇಖನದ ವಸ್ತುನಿಷ್ಠೆ ತುಂಬಾ ಇಷ್ಟಾಯಿತು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading