ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಆ ’ಖುಷ್ಬೂ’ ನೆನಪಾದಳು ನನಗೆ…

ಅಜ್ಜಿ ಮನೆಯಲ್ಲಿ ಬೆಳೆದ ನಾನು, ಆಗ ಐದೋ ಆರೋ ಕ್ಲಾಸಿನಲ್ಲಿದ್ದೆ. ಹೆಸರು ನೆನಪಿಲ್ಲ. ಬೇಬಿ ಶ್ಯಾಮಿಲಿಯ ಯಾವುದೋ ಸಿನೆಮಾ, ನೋಡಿ, ಆಗ ತಾನೇ ಮಲಗಿದ್ದೆವು. ರಾತ್ರಿ ಸುಮಾರು ಹನ್ನೊಂದು ಗಂಟೆಯಾಗಿದ್ದಿರಬೇಕು. ಯಾರೋ ಬಾಗಿಲು ತಟ್ಟಿದ ಶಬ್ದ. “ಯಾರಪ್ಪ ಇಷ್ಟೊತ್ಲಿ? ಅನ್ನುತ್ತಲೇ ಚಿಕ್ಕಪ್ಪ ಬಾಗಿಲು ತೆರೆದರೆ ಮಿಠಾಯಿ ನಂಜಪ್ಪನೂ ಅವನ ಹೆಂಡತಿ ಮಗಳೂ ನಿಂತಿದ್ದಾರೆ. (ನಂಜಪ್ಪ ಮಿಠಾಯಿ ಅಂಗಡಿ ಇಟ್ಟುಕೊಂಡು ಅದರಿಂದಲೇ ಜೀವನ ನಡೆಸ್ತಿದ್ದರು.) ಚಿಕ್ಕಪ್ಪ, “ ಅಪೈ ಇದೇನ ನಂಜಪ್ಪ ಇಷ್ಟೊತ್ಲಿ? ಅಂದರೆ, ನಂಜಪ್ಪನ ಹೆಂಡತಿ ಒಳಬಂದು ಅಳೋಕೇ ಶುರುಮಾಡಿದಳು. “ ಇದ್ಯಾಕವ್ವ? ಏನಾಯ್ತು? ಈ ಹೆಣ್ ಬೇರೆ ಜೊತಲ್ ಕರ್ಕಂಡ್ ಬಂದಿದ್ದರಿ,” ಚಿಕ್ಕಮ್ಮ ಕೇಳಿದರೂ ಉತ್ತರ ಬರೀ ಅಳುವೇ. ನಿಧಾನಕ್ಕೆ ನಂಜಪ್ಪ ಬಾಯಿತೆರೆದ.
“ಯಾನ್ನಾರು ಮಾಡಿ ನಮ್ ಮಾನ ಉಳಿಸಪ್ಪ, ಮಾನೋದ್ರ ನಾ ಬದುಕಲ್ಲ” ತಾನೂ ಅಳುತ್ತಾ ನಿಂತ. ಆಗಿದ್ದಿಷ್ಟು, ಹೈಸ್ಕೂಲಿನ ಆ ಹುಡುಗಿ, ಬಸುರಾಗಿದ್ದಳು. ಅದೂ ಅವಳ ಸ್ಕೂಲಿನ ಮೇಸ್ಟರಿಂದ. ಬಸುರು ಬಚ್ಚಿಡುವಂತದೇನು? ಅವಳ ಅಮ್ಮನಿಗೆ ಗೊತ್ತಾಗಿದೆ. ಅವಳು ಅಪ್ಪನಿಗೂ ಹೇಳಿದ್ದಾಳೆ ಕೂರಿಸಿ ಕೇಳಿದರೆ “ನಾವಿಬ್ಬರೂ ಲವ್ ಮಾಡುತ್ತಿದ್ದೇವೆ” ಅನ್ನುವುದವಳ ಉತ್ತರವಾಗಿತ್ತಂತೆ. ತಕ್ಷಣ ದಾರಿ ಕಾಣದೇ ಓಡಿಬಂದಿದ್ದಾರೆ.
“ಯಾರೊಂದಗ್ಯಾರೂ ಬಾಯಿ ಗೀಯಿ ಬುಟ್ಟರಿ ಉಷಾರು..” ಅಂತ ಮೊದಲ ಎಚ್ಚರಿಕೆ ಕೊಟ್ಟರು ಚಿಕ್ಕಪ್ಪ. “ಅದಕ್ ಸಲುವಾಗೇ ಅಲ್ವಪ್ಪ ಇಲ್ಲಿಗ್ ಕರ್ಕಂಡ್ ಬಂದದದ್ದು? ಈಗ್ಯಾನ್ ಮಾಡದು ನೀನೇ ಯೋಳಪ್ಪ” ಅಂದರು. “ ಯಾರ್ಗೂ ಬ್ಯಾಡಿ ಇಂತ ಮಕ್ಕಳು, ನೀವ್ ಹ್ಞೂ ಅನ್ನಿ ಬೇಕಾರ್ ಸುತ್ತೂರ್ ಹೊಳೆಗ್ ತಳ್ಳುಬುಡಂವು” ಅಂತ ಆಕ್ರೋಶಗೊಂಡರು. ಎಲ್ಲರನೂ ಸುಧಾರಿಸಿ, ಸಮಾಧಾನಿಸಿ, ಆ ಹುಡುಗಿಯನ್ನು ಕೇಳಲು ನಿಂತರು. “ಯಾರವ್ವ ನಿಮ್ಮ ಮೇಷ್ಟರು?” ಅವಳು ತಲೆತಗ್ಗಿಸಿದಳು, : ಗೊತ್ತು ಬುಡು ಆ ಗುಂಗರು ಕೂದಲದಲ್ಲ ಅಂವ ತಾನೇ?” “ನೋಡು ಕೂಸೆ, ನಿಮ್ಮಪ್ಪ ಅವ್ವನ್ ಮೊಖ ನೋಡು, ಇಂತಾ ಕೆಲ್ಸ ಮಾಡಿದ್ದಯಲ್ಲ ಸರ್ಯಾ ಯೋಳು ಮತ್ತ?” ಅಂದರು ಚಿಕ್ಕಪ್ಪ. ಅವಳು ಮೌನಿ.. “ಸರಿ ಬುಡಿ ಅವನಿಗೇ ಮದ್ವ ಮಾಡದು. ಇನ್ನೇನ್ ಮಾಡಕಾದ್ದು ಯೋಳಿ ಮತ್ತ?” ಅಂದರು ಚಿಕ್ಕಮ್ಮ. “ಯಾವ್ ಮದ್ವನ ಮಾಡದು? ಅವನಗ್ ಮದ್ಯಾಗಿ ಒಂದ್ ಕೂಸೂ ಅದ ಆಗ್ಲೇ, ಜಾತಿ ಯಾವುದ ಅಂತ್ ತಿಳ್ಕಂಡಿದ್ದಯೀ? ಎಲ್ಲಿಗ್ ಮದ್ವ ಮಾಡಕಾದ್ದು?” ಅಂದರು ಚಿಕ್ಕಪ್ಪ. ಚಿಕ್ಕಮ್ಮ ಫೈಡ್ ಅಂತ ಅವಳ ಕಪಾಳಕ್ಕೆ ಬಾರಿಸಿದರು. “ಸಾಯಿಸ್ಬುಡವ್ವ, ಸಾಯ್ಸು ತಾಯೀ, ಇಂತ ಮಕ್ಕಳು ಇದ್ದೇನ, ಸತ್ತೇನ?” ಅಂದರು ಅವಳಮ್ಮ.
ಯಾರು ಕೇಳಲಿ, ಎಷ್ಟು ಕೇಳಲಿ, “ಅವ್ರು ನನ್ನ ಲವ್ ಮಾಡ್ತಾವ್ರ, ಮದ್ವೆ ಆಯ್ತೀನಿ ಅಂತ ಯೋಳರ,” ಅಂತ ಸಿನೆಮಾ ಹೀರೋಯಿನ್ ಥರದ ಧೈರ್ಯದ ಉತ್ತರವನ್ನೇ ಕೊಡುತ್ತಿದ್ದಳು. ಅವಳ ಮುಖದಲ್ಲಿ ಪಶ್ಚಾತ್ತಾಪವಾಗಲೀ ಭಯವಾಗಲೀ ಇರಲಿಲ್ಲ. “ಈಗ ಅವಳ ಮಾತ್ ಬುಟ್ಟಾಕಿ, ಅವನ್ನ ಕರ್ದು ನ್ಯಾಯ ಪಂಚಾಯ್ತಿ ಮಾಡುದ್ರ ಮಾನ ಓಗದು ನಿಮ್ದೇ. ಮಾಡಿ ಅಂದ್ರ ಮಾಡಂವು, ಏನ ಯೋಳಿ” ಅಂದರು ಚಿಕ್ಕಪ್ಪ. “ನಿನಗೆಂಗ್ ಅನಿಸ್ತುದ ಅಂಗ್ ಮಾಡಪ್ಪ. ಮಾನ ಉಳ್ಕಂಡರ ಸಾಕಾಗದ.” ನಂಜಪ್ಪ ಅಂಗಲಾಚಿದರು. “ ತೀರಾ ಆಪ್ತರಾದವರು ಊರ್ ಮುಖಂಡರು ಅನ್ನುಸ್ಕಂಡವರಗ ನಾಕು ಜನಕ್ ಯೋಳಬೇಕಾಗ್ತದ, ನಾಳ ಜಿನ ಹೆಚ್ಚು ಕಮ್ಮಿ ಆದ್ರ ಯಾರ್ ತಲೆಗೂ ಬರಬಾರ್ದು. ಬಿಇಓ ತಾವು ಮಾತಾಡುದ್ರ ಸಸ್ಪೆಂಡ್ ಆಯ್ತನ. ಈಗ ಅವನ ಕರ್ದು ಪಂಚಾಯಿತಿ ಮಾಡಾ ಬದ್ಲು ಕಲ್ಸ ತಂವು ಬುದ್ದಿ ಕಲುಸ್ಕಳಂವು ಬುಡಿ” ಅಂತ ತೀರ್ಮಾನಿಸಿದರು.
“ಹೊಟ್ಟಲಿರದೇನ್ ಮಾಡಂವು ತಾಯೀ? ಬ್ಯಾರೆದಾ? ಮುಚ್ಕಳಕೂ ಆಗಲ್ವಲ್ಲವ್ವ?” ಸುಸ್ತು ಬೆರೆತ ಧನೀಲಿ ಅವ್ವ ಅತ್ತಳು. ಯಳಂದೂರಗ್ ಕರ್ಕಂಡೋಗ್ ತಗಿಸಾಕುದ್ರಾಯ್ತು ಬುಡಿ, ಅದ್ ಮಡಿಕಂಡ್ ಏನ್ಮಾಡಿರಿ? ಅಂದರು. ಅಳು, ಕೋಪ, ಸಮಾಧಾನ , ಮುಂದೇನೆಂಬ ಚರ್ಚೆ ಬೆಳಗಿನ ಜಾವದವರೆಗೆ ನಡೆದರೂ ಆ ಹುಡುಗಿ ಮಾತ್ರ ಕಣ್ಣೀರು ಹಾಕಲಿಲ್ಲ. ಹೊಡೆದರೂ ಕಮಕ್ ಕಿಮಕ್ ಅನ್ನಲಿಲ್ಲ. ಕಡೆಗೆ, “ನಮ್ಮಟ್ಟಿಗ್ ಮಾತ್ರ ಬ್ಯಾಡಿ, ನಿಮ್ಮಟ್ಟಿ ಒಂಚೂರ್ ಊರಾಚೆಗದ, ಇದೆಲ್ಲ ಕಳಿಯಗಂಟ ಇವಂಳ ನೀವೇ ಮಡಿಕಳಿ, ನಾವಂತು ಇಂವಳ ಸತ್ತಕೂಟ ಅಂತ ತಿಳ್ಕತ್ತಿವಿ” ಅಂದು ದುಖಃ, ಅವಮಾನ,ಭಯ ಮತ್ತು ಹೇಳಲಾಗದ ಇನ್ನೇನೋ ಭಾವಗಳ ಭಾರ ಹೊತ್ತು ಅವರು ಹೋದರು.

ಆ ಹುಡುಗಿ ಅವತ್ತಿಂದ ಸುಮಾರು ಒಂದು ವಾರ ನಮ್ಮನೇಲೇ ಇದ್ದಳು. ನನ್ನ ಕೋಣೇಲೆ ಮಲಗ್ತಿದ್ದಳು. ರಾತ್ರಿ ಹನ್ನೊಂದರ ನಂತರ ಯಾರ್ಯಾರೋ ಬರುವುದು, ಏನೇನೋ ಮಾತಾಡುವುದು, ಅವಳನ್ನ ಕೋಣೆಯಿಂದ ಹೊರಗೆ ಕರೆಯುವುದು, ಮತ್ತೆ ವಾಪಾಸು ಕಳಿಸುವುದು. ಹೀಗೇ ಪ್ರತಿ ದಿನ ಒಂದೊಂದು ಡೆವೆಲಪ್ಮೆಂಟ್ ನಡೆಯುತ್ತಲೇ ಇತ್ತು, ನನಗೆ ಪೂರ್ತಿಯಾಗಿ ಯಾವುದೂ ಗೊತ್ತಾಗುತ್ತಿರಲಿಲ್ಲ. ಅವಳಮ್ಮನೂ ಚಿಕ್ಕಮ್ಮನೂ ಅದೂ ನಾನು ಮನೆಯಲ್ಲಿದ್ದ ಟೈಮಲ್ಲಿ ಮಾತಾಡಿದ್ದು ಮಾತ್ರ ಗೊತ್ತಾಗುತ್ತಿತ್ತು. ಅಥವಾ ಚಿಕ್ಕಪ್ಪ, ಚಿಕ್ಕಮ್ಮ ಮಾತಾಡುವಾಗ ಗೊತ್ತಾಗುತ್ತಿತ್ತು. ನಾನು ಏನೋ ಓದಿ ದಬಾಕ್ತಿರೋ ಹಾಗೆ ನಟಿಸ್ತಾ ಕಿವಿ ತೆರೆದಿಟ್ಟುಕೊಂಡಿರುತ್ತಿದ್ದೆ.
ಅಲ್ಲಿ ಎರಡು ಸ್ಕೂಲುಗಳಿದ್ದವು. ಒಂದು ಪ್ರೈವೇಟು ಇನ್ನೊಂದು ಗೌರ್ಮೆಂಟು. ನಾನು ಪ್ರೈವೇಟು ಮಿಡ್ಲ್ ಸ್ಕೂಲಿಗೆ ಹೋಗ್ತಿದ್ದೆ, ಅವ ಳು ಗೌರ್ಮೆಂಟ್ ಹೈಸ್ಕೂಲು. ಹಾಗಾಗಿ ಆಮೇಷ್ಟರೇನೂ ನನ್ನ ಕಣ್ಣಿಗೆ ಕಾಣ್ತಿರಲಿಲ್ಲ. ಆದರೂ ಕೆಟ್ಟ ಕುತೂಹಲ,ಎರಡೂ ಸ್ಕೂಲುಗಳೂ ಹೆಚ್ಚುಕಡಿಮೆ ಅಕ್ಕಪಕ್ಕವೇ ಇದ್ದದ್ದರಿಂದ ಆ ಸ್ಕೂಲಿನ ಹುಡುಗೀರ್ನ ಕೇಳಿಕೊಂಡು ಪ್ರೇಯರಿಗೆ ನಿಂತಾಗ ನೋಡಿದ್ದೆ. ಚಿಕ್ಕಪ್ಪ ಹೇಳಿದಂತೆ ಗುಂಗುರು ಕೂದಲಿನ ಕಪ್ಪು ಬಣ್ಣದ ಮನುಷ್ಯ, ಲಕ್ಷಣವಾಗಿದ್ದ. ಇಸ್ತ್ರಿ ಮಾಸದ ಹಾಗೆ ಇನ್ ಶರ್ಟು. ಆದರೆ ಈ ಹುಡುಗಿಯ ಚಿಕ್ಕಪ್ಪನಂತ ವಯಸು.
ಒಂದಿನ ಚಿಕ್ಕಮ್ಮ ಉಪಾಯದಲ್ಲಿ ಅವಳನ್ನ ಕೇಳಿದರು. “ಕುಸು,ನಾನು ನಿಮ್ಮಕ್ಕನಂಗೆ ಅನ್ಕೋ, ಈಗ ಏನ್ ನಡೀತು ಯೋಳು, ಇನ್ನೇನ್ ಮಾಡಕಾದ್ದು ? ನೀನು ಅವರೂ ಇಬ್ಬರೂ ಒಪ್ಕಂಡ್ರ ಮದ್ವನೇ ಮಾಡಂವು, ಆದ್ರ ನೀ ವಸಿ ಏನಾಯ್ತು ಅನ್ನದ ಬುಡುಸ್ ಯೋಳು” ಅಂದ್ರು ಅವಳು ಹೇಳಿದಳು. ರವಿಚಂದ್ರನ್ ಅಂದರೆ ಇವಳಿಗೆ ತುಂಬಾ ಇಷ್ಟವಂತೆ, ಇವಳ ಸೋಶಿಯಲ್ ಬುಕ್ಕಿಗೆ ರವಿಚಂದ್ರನ್ ಇರೋ ಪೇಪರಿನ ರ್ಯಾಪರು ಹಾಕಿದ್ದು ನೋಡಿ, ಮೇಷ್ಟರು ಬೈಯೋಕೆ ಅತ ಕರೆದರು. ಆದರೆ ಬೈಲಿಲ್ಲವಂತೆ. ನಿನಗೆ ರವಿಚಂದ್ರನೇ ಯಾಕಿಷ್ಟ ಅಂತೆಲ್ಲ ಕೇಳಿದ್ರಂತೆ. “ನನ್ ಕೂದಲೂ ರವಿಚಂದ್ರನ್ ಥರವಾಗೇ ಇಲ್ವ? ಆದ್ರೂ ನಾನು ನಿಂಗಿಷ್ಟ ಇಲ್ಲ. ಯಾವರ್ ಸೀಮೆ ಮೇಷ್ಟ್ರ ಇಂವ? ಅಂತ ಬೈಕತೀಯ ಅಲ್ವ?” ಅಂದಾಗ ಇವಳು, ಇಲ್ಲ ನೀವೂ ಇಷ್ಟ ಅಂದಳಂತೆ, ಅದಾದ ಮೇಲೆ ಅವಳಿಗೊಂಥರ ಸಲುಗೆ ಬೆಳೀತಂತೆ. ದೂರದ ಯಾವುದೋ ಊರಲ್ಲಿ ಹೆಂಡತೀನ ಬಿಟ್ಟು ಬಂದ ಆ ಮನುಷ್ಯ ಇಲ್ಲಿ ಒಂದು ಪುಟಾಣಿ ರೂಮು ಮಾಡಿಕೊಂಡಿದ್ದನಲ್ಲ? ಅಲ್ಲಿಗೆ ಏನೇ ಸಹಾಯ ಬೇಕಾದರೂ ಇವಳನ್ನೆ ಕೇಳೋಕೆ ಶುರು ಮಾಡಿದ. ಇವಳೂ ಗೋಪಾಲನನ್ನ ಅಭಿನವ ರವಿಚಂದ್ರನ್ ಅಂದುಕೊಳ್ಳತೊಡಗಿದಳು. ಹಳ್ಳಿಮೇಷ್ಟ್ರು ಸಿನೆಮಾ ಆಗಷ್ಟೇ ಬಂದಿತ್ತಲ್ಲ, ಅದರ ಹಾಡುಗಳನ್ನ ಇವಳಿಗೆ ಕೇಳಿಸಿದ, ಸಿನೆಮಾದ ಕಥೇನೂ ಹೇಳಿದ.
“ಅಕ್ಕನ್ ಮಗಳ್ನೆ ಮದ್ವ ಮಾಡ್ಕಂಡಿರದು, ಅವರವ್ವ ಮಾಡಿಸಿದ್ದಂತ ಅಕ್ಕ,ಅವರಿಗಿಷ್ಟವಿರ್ನಿಲ್ವಂತ,” ಅಂದು ಕಥೆ ಮುಗಿಸಿದಳು. “ಹೆಣ್ ಕೇಳ್ತೀನಿ ಮದ್ವ ಮಾಡ್ಕತ್ತೀನಿ ಅಂದ್ನಾ?” ಅಂದರೆ ಹ್ಞೂ ಅಂದಳು. “ಅಲ್ಲ ಕಣ್ ಲೌಡಿ , ಅಂವ ಮುದುಕ ಅನ್ನದ್ ಗೊತ್ತಾಗಬಾರದಮ್ಮಿ ನಿನಗ? ಹದುಮೂರ್ ವರ್ಷದ್ ಮಗಳೇ ಇದ್ದಳಂತಲ್ಲ ಅವನಗ, ನಿನ್ನಂಗಮ್ಮಿ ಮದ್ವೆ ಆದನು? ನಾಕೈದ್ ಜಿನದಿಂದ ನೀನು ಸ್ಕೂಲ್ಗೋಗಿಲ್ವಲ್ಲ. ಘನಂದಾರ ನಿನ್ ತಡಿಕಂಡ್ ಬರ್ನೇ ಇಲ್ಲ ಮತ್ತ?” ಈ ಯಾವುದಕ್ಕೂ ಅಭಿನವ ಖುಷ್ಬುವಿನ ಬಳಿ ಉತ್ತರವಿರಲಿಲ್ಲ.
ನನ್ನ ರೂಮಲ್ಲೆ ಮಲಗ್ತಿದ್ದಳಲ್ಲ? ಒಂದು ಮಧ್ಯರಾತ್ರಿ ಎಬ್ಬಿಸಿದಳು, ನನ್ನ ನೋಟ್ಸು ಹಾಳೆ ಹರಿದು, ನನ್ನ ಪೆನ್ನು ತಗಂಡು ಅದೇನೋ ಬರೆದಿದ್ದಳು. ಚೀಟಿ ಮಡಚಿ, ಅವ್ವ ನಿನ್ ಕೈ ಮುಗಿತೀನಿ ಇದ್ನ ಗೋಪಾಲ್ ಮಾಸ್ಟರು ಕೈಲ್ ಕೊಡ್ತೀಯ? ಅಂದಳು. ಹ್ಞೂ ಅಂದೆ . ಆದರೆ ಧೈರ್ಯ ಸಾಲದೇ ಬೆಳಗ್ಗೆ ಅದನ್ನ ಚಿಕ್ಕಮ್ಮನಿಗೇ ಕೊಟ್ಟುಬಿಟ್ಟಿದ್ದೆ. ಅವತ್ತು ರಾತ್ರಿ ಅದನ್ನ ಎಲ್ಲರೂ ಕೂತು ಓದಿದರು, ‘ನನ್ನ ಪ್ರೀತಿಯ ಗಂಡನಿಗೆ,” ಅಂತ ಶುರುಮಾಡಿ, “ನಿಮ್ಮ ಫ್ರೀತಿಯ ಹೆಂಡತಿ “ ಅಂತ ಮುಗಿಸಿದ್ದಳು. ಅವತ್ತಂತು ಸೇರಿದ್ದ ಮುಖಂಡರು, ಅವಳ ಮನೆಯವರು ಸಿಟ್ಟಿಗೆದ್ದರು. ಅವಳನ್ನ ಜುಟ್ಟು ಹಿಡಿದು ಗೋಡೆಗೆ ಚಚ್ಚಿ ಚಚ್ಚಿ ಇಟ್ಟರು. ನನಗೆ ಪಾಪಪ್ರಜ್ಞೆ ಕಾಡಿತು. ಆಮೇಲೆ ನನ್ನನ್ನೂ ಅವಳನ್ನೂ ಬೇರೆ ಮಾಡಲಾಯ್ತು.
ಎಷ್ಟೇ ಮುಚ್ಚಿಟ್ಟರೂ ಆಪ್ತರು, ಮುಖಂಡರು ಅಂತ ಬಂದವರಿಂದ ಅವರ ಹೆಂಡತಿಯರ ಬಾಯಿ ಸೇರಿ, ಅಲ್ಲಿಂದ ಹಾಗೇ ಹರಡಿ ಅಲ್ಲಲ್ಲಿ ಹೊಗೆಯಾಡತೊಡಗಿತು ಸುದ್ದಿ. ಓಪನ್ ಸೀಕ್ರೆಟ್ ಅಂತೀವಲ್ಲ ಹಾಗೆ, ಅಲ್ಲೊಬ್ಬ ಪತ್ರಕರ್ತನಿದ್ದ, ಮೈಸೂರಿನಿಂದ ಹೊರಡುತ್ತಿದ್ದ ಪ್ರಮುಖ ಸ್ಥಳೀಯ ಪತ್ರಿಕೆಯಲ್ಲಿ ಅವನ ಕೆಲಸ. ಬಸ್ಸಿನಲ್ಲಿ ಬರೋ ಪೇಪರ್ ಬಂಡಲನ್ನೂ ಇಳಿಸಿಕೊಂಡು ಹಂಚುವ, ಮತ್ತು ಸುದ್ದಿ ಮಾಡುವ ಟೂ ಇನ್ ಒನ್ ಕೆಲಸ ಮಾಡುತ್ತಿದ್ದ. ಬಸ್ಸಿಲ್ಲದ ಅವನ ಊರಿಂದ ಸೈಕಲ್ ತುಳಿದು ಈ ಊರಿಗೆ ಬರುತ್ತಿದ್ದ. “ಪತ್ರಕರ್ತ” ಅನ್ನುವ ಶಬ್ದ ನನಗೆ ಅದೇನೋ ವಿಶೇಷ ಗೌರವ. “ಎಲ್ಲರಂತಲ್ಲ” ಅನ್ನುವ ಗೌರವಭಾವ. ಒಂದು ರಾತ್ರಿ ಸಭೆಗೆ ಆ ಪತ್ರಕರ್ತನೇ ಬಂದ. ಅವರೆಲ್ಲ ಏನೇನೋ ಮಾತಾಡಿದರು ಅವನು ಹೋದ. ಅದಾದ ಮೇಲೆ ಈ ವಿಚಾರ ಪೇಪರಲ್ಲಿ ಬರುತ್ತದೆ ಅಂತ ಅದೆಂತದೋ ಕುತೂಹಲ ನನಗೆ. ಆದರೆ ಈ ವಿಷಯ ಪೇಪರಲ್ಲಿ ಬರಲೇ ಇಲ್ಲ. ಇದಾದ ಮೇಲೆ ಯಾಕೋ ಅವನ ಬಗ್ಗೆ ಒಂದು ಸಾತ್ವಿಕ ಸಿಟ್ಟು ಉಳಿದೇ ಬಿಟ್ಟಿತು . ನಾನು ಆ ಊರು ಬಿಡೋವರೆಗೂ.
ಯಾವತ್ತೋ ಒಂದು ಡೇಟು ನೆನಪಿಲ್ಲದ ದಿನ ನಾನು ಸ್ಕೂಲಿಂದ ಬಂದಾಗ ಅವಳಿರಲಿಲ್ಲ. ನಾನಾಗಿ ಕೆದಕಿ ಏನನ್ನೂ ಕೇಳುವಂತಿರಲಿಲ್ಲ. ಆದರೆ ಹಾಸಿಗೆ ಕೆಳಗೆ, ಕಿಟಕಿಯಾಚೆ, ಅವಳು ಅದೇನೇನೋ ಬರೆದು ಬರೆದು ಎಸೆದ ಹಾಳೆಗಳು ಸಿಕ್ಕವು, ನಾನದನ್ನ ಈ ಸಲ ಯಾರಿಗೂ ಕೊಡಲಿಲ್ಲ. ಆ ಮೇಸ್ಟ್ರು, ಒಂದಷ್ಟು ದಿನ ಕಾಣಲಿಲ್ಲ. ಮತ್ತೆ ಸ್ಕೂಲಿಗೆ ಬಂದರು, ಮತ್ತೆ ನಾಪತ್ತೆ. ಟ್ರಾನ್ಸ್ಫರ್ ಅಂತ ಹುಡುಗರು ಮಾತಾಡಿಕೊಳ್ತಿದ್ದರು.
ಇದಾಗಿ ಆರೇಳು ವರ್ಷಗಳ ಮೇಲೆ ಅಂದರೆ ನಾನು ಪಿಯುಸಿ ಓದೋವಾಗ, ನಂಜನಗೂಡು ಬಸ್ಟಾಂಡಿನ ಎದುರು ಅವಳು ಸಿಕ್ಕಳು, ಒಂದು ಪೆಟ್ಟಿ ಹೋಟೆಲಿನಲ್ಲಿ ಬೊರ್ ಅಂತ ಸದ್ದು ಮಾಡೋ ಸ್ಟವ್ ಇಟ್ಟುಕೊಂಡು ಬೋಂಡ ಕರಿಯುತ್ತಿದ್ದಳು. ಕುತ್ತಿಗೇಲಿ ಮಾಂಗಲ್ಯ. ಆದರೆ ಮುಖದಲ್ಲಿ ಹಳೆಯ ಚಾರ್ಮ್ ಇರಲಿಲ್ಲ. ಅಮ್ಮನನ್ನೂ ಚಿಕ್ಕಮ್ಮನ್ನೂ ಅವಳೇ ಮಾತಾಡಿಸಿದಳು.ಟೀ ಕುಡೀರಿ, ಬೋಂಡ ತಿನ್ನಿ ಇತ್ಯಾದಿ. “ನಿನ್ ಗಂಡ?” ಅಂದದ್ದಕ್ಕೆ, ಸೀಮೆಎಣ್ಣೆ ತರಕೋಗಿದಾರೆ ಅಂದಳು. ಬಸ್ಸಲ್ಲಿ ಚಿಕ್ಕಮ್ಮ ಅಮ್ಮನಿಗೆ ಹೇಳಿದ ಪ್ರಕಾರ. ಆ ಘಟನೆಯಾಧ ಮೇಲೆ ತಕ್ಷಣ ಅವಳಿಗೆ ಮದುವೆ ಮಾಡಲಾಯ್ತು.
ಈಗ ಈ ಅತ್ಯಾಚಾರಗಳ ಪ್ರಕರಣಗಳಾಯ್ತಲ್ಲ,? ಆಗ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಈ ಇಷ್ಟೂ ಕಥೆ, ಧುತ್ತಂತ ಅದೆಲ್ಲಿಂದಲೋ ಎದ್ದು ಕೂತ್ಕೋತು. ತಕ್ಷಣ ಫೋನು ಮಾಡಿದೆ, ಅವಳೆಲ್ಲಿದಾಳೆ? ಹೇಗಿದಾಳೆ? ಅವಳ ಮನೆಯವರು? ಸಿಕ್ಕ ಉತ್ತರವಿಷ್ಟು. ಅವಳೊಂಥರ ಹುಚ್ಚಿ ಹಂಗಾಡ್ತಿದ್ಲು ಅಂತ ಅವಳ ಗಂಡ ಅವಳನ್ನ ಬಿಟ್ಟುಬಿಟ್ನಂತೆ. ಒಂದ್ ಕೂಸಿತ್ತು, ಅದೆಲ್ಲೋದ್ಲೋ ನಮಗ್ ಗೊತ್ತಿಲ್ಲ. ಅವರವ್ವ ಆಗ್ಲೇ ಸತ್ತೋದ್ಲು. ಹೆಂಡ್ತಿ ಸತ್ ಮೇಲೆ ಮನೇಲಿ ಮಾಡೋರಿಲ್ಲದೆ ಮಿಠಾಯಿ ಅಂಗಡೀನೂ ನಿಂತೋಯ್ತು. ನಂಜಪ್ಪ ಸುತ್ತೂರ್ ಜಾತ್ರೆಗೆ ಅಂತ ಹೋದೋನು ತಿರುಗಿ ಬರ್ಲೇ ಇಲ್ಲ. ನೋಡಾಗಂಟ ನೋಡಿ, ಹೊಳೆಗೆ ಮುಳುಗಿರಬೇಕು ಅಂತ ಮಗ ಅಪ್ಪನ ತಿಥಿ ಮಾಡಿದ. ಆಮೇಲವನೂ ಈ ಊರೇ ಬಿಟ್ಟು ಬೆಂಗಳೂರ್ಲಿ ಯಾವ್ದೋ ಫ್ಯಾಕ್ಟರಿ ಸೇರಿಕೊಂಡ.
ಅವಳೆಲ್ಲಿರಬಹುದು ಖುಷ್ಬೂ?? ಇರಬಹುದೇ??

‍ಲೇಖಕರು G

22 July, 2014

ನಿಮಗೆ ಇವೂ ಇಷ್ಟವಾಗಬಹುದು…

6 Comments

  1. ಲಕ್ಷ್ಮೀಪತಿ.ಎನ್.

    ಕಥೆಯೊಳಗಿನ ವ್ಯಥೆ ಕಾಡುವಂತೆ ಬರೆದಿರುವಿರಿ.

  2. amardeep.p.s.

    ಹಳ್ಳಿಮೇಷ್ಟ್ರು, ಖುಷ್ಬೂ …. ಕಥೆ… ಈಗಿನ ಮಟ್ಟಿಗೆ ಕಥೆ ಅನ್ನಿಸಿದರೂ ಒಂದು ಕುಟುಂಬದ ಅಳಿವಿನ ಎಳೆ ನಮ್ಮನ್ನು ತಬ್ಬದಿರಲಾರದು …. ಲೇಖನ ಚೆನ್ನಾಗಿದೆ..

  3. chaithra

    Abba kaaduva katu vaasthava.

  4. umesh desai

    narrative is good so also the content. well done madamji

  5. Suman Desai

    Kusuma,, hrudaya heppugattide odi…

  6. Sushma Moodbidri

    ಟೈಟಲ್ ಲ್ಲೇ ಹಿಡಿದು ನಿಲ್ಲಿಸಿ ಓದಿಸುವ ಥರಾ ಇದೆ…
    ಖುಷ್ಬೂ ನಮ್ಮೆದೆಯೋಳಗೂ ಕಾಡುತ್ತಿದ್ದಾಳೆ…
    -ಮೌನವಾಗಿದ್ದ ನೆನಪಿನಂಗಳ ಇಂತಹ ಕಥೆಗಳು ಮತ್ತೆ ಎದ್ದು ಮಾತನಾಡುತ್ತಿವೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading