ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಭಾಷೆಯೆಂಬುದು ನದಿಯ ಹಾಗೆ ಅನ್ನುವುದು ಸುಳ್ಳಲ್ಲ!

ಭಾಷೆ ಎಂಬುದು ನದಿಯ ಹಾಗೆ, ಅದು ತಲೆಮಾರುಗಳ ಜೊತೆ ತಂತಾನೇ ಒಂದು ಸಹಜ ಹರಿವು ಕಂಡುಕೊಳ್ಳುವಂತದು. ನದಿಗೆ ಅಣೆಕಟ್ಟು ಕಟ್ಟುವ ಹಾಗೆ, ಭಾಷೆಗೂ ಕಟ್ಟೆ ಕಟ್ಟುವ, ಇದು ಮಾತ್ರವೇ ಸರಿ ಅಂತ ಚೌಕಟ್ಟು ಹಾಕುವ, ಸಿಧ್ದಮಾದರಿ ಸೃಷ್ಟಿಸುವ ಕೆಲಸ ಒಪ್ಪುವಂತದಲ್ಲ. ಫೇಸ್ ಬುಕ್ಕಿನಲ್ಲಿ, ಅಲ್ಲಿ ಇಲ್ಲಿ ಈ ಬಗ್ಗೆ ಚರ್ಚೆಗಳನ್ನು ಓದುತ್ತಿದ್ದೆ. ಮೊನ್ನೆ ಅವಧಿಯಲ್ಲಿ ಸಂಧ್ಯಾರಾಣಿಯವರ “ಭಿನ್ನವೆಂದ ಮಾತ್ರಕ್ಕೇ ಕೀಳಲ್ಲ” ಅನ್ನುವ ಬಂಜಗೆರೆ ಜಯಪ್ರಕಾಶ್ ಮಾತನ್ನ ಆಧರಿಸಿದ ಲೇಖನ ಭಾಷೆಯ ಕುರಿತ ಈ ಚರ್ಚೆಗಳಿಗೆಲ್ಲ ಸ್ಪಷ್ಟಾತಿಸ್ಪಷ್ಟ ಉತ್ತರವಾಗಿ ಕಂಡಿತು. ಚಿಂತನೆಗೆ ಹಚ್ಚಿತು.
ಮಂಡ್ಯ, ಮೈಸೂರು, ಉತ್ತರ ಕರ್ನಾಟಕ, ಮಂಗಳೂರು, ಧಾರವಾಡ, ಚಾಮರಾಜನಗರ. ಅಷ್ಟೇ ಅಲ್ಲ, ಪ್ರತಿ 20 ಕಿಲೋಮೀಟರಿಗೆ ಆಡುವಿಕೆಯಲ್ಲಿ ಸಣ್ಣ ವ್ಯತ್ಯಾಸ ಗುರುತಿಸಬಹುದಾದ ಶ್ರೀಮಂತ ಕನ್ನಡನಾಡಿನಲ್ಲಿ ಯಾವುದು ಮೇಲು? ಯಾವುದು ಕೀಳು? ಅನ್ನುವ ಹೃದಯದಾಳದ ಅಭಿಮಾನ ಭಾಷೆಯನ್ನು ಪ್ರೀತಿಸುವ ಯಾರಾದರೂ ಒಪ್ಪತಕ್ಕದ್ದೇ. ನಾನೂ ಒಪ್ಪಿದೆ. ಆದರಿಲ್ಲಿ ಹಾರ ಹಾಕಲು ಕೈಗಳಿದ್ದರೆ ಸಾಕೇ ? ಹಾಕಿಸಿಕೊಳ್ಳಲು ಕುತ್ತಿಗೆಯೂ ಸಿಧ್ದವಿರಬೇಕಲ್ಲ? ನಿಮಗೆ ಅರ್ಥವಾಗಿರಲಿಕ್ಕಿಲ್ಲ ವಿವರವಾಗಿ ಹೇಳ್ತೇನೆ ಕೇಳಿ.
ಯಾವುದೇ ಭಾಷೆಯ ಉಳಿಯುವಿಕೆ ಇರುವುದು ಆ ಭಾಷೆಯಾಡುವ ಜನರ ಮೇಲೆ, ಅವರ ಪ್ರೀತಿ ಅಭಿಮಾನದ ಮೇಲೆ. ಆದರಿಲ್ಲಿ ಅಭಿಮಾನದ್ದೇ ಕೊರತೆ, ಇಂಗ್ಲೀಷಿನ ಮುಂದೆ ಕನ್ನಡಕ್ಕಾಗಿರುವ ಗತಿಯೇ, ನಗರಗಳ ಶಿಷ್ಟಕನ್ನಡದ (ಟಿವಿಯಲ್ಲಿ, ಬೆಂಗಳೂರಲ್ಲಿ, ಸಿನೆಮಾದಲ್ಲಿ ಬಳಕೆಯಾಗುವ ಕನ್ನಡ) ಮುಂದೆ ಗ್ರಾಮ್ಯ ಕನ್ನಡಕ್ಕಾಗಿದೆ. ಅಸಲು ಉದಾಹರಣೆಗಳ ಕಥೆ ಹೇಳುತ್ತೇನೆ ನಿಮಗೆ.
ನನ್ನ ಮಗ ಸುತ್ತಲೂ ನಮ್ಮೂರ ಹೈಕಳನ್ನ ಕೂರಿಸಿಕೊಂಡು ಕಾಗೆ ಹೂಜಿಗೆ ಕಲ್ಲು ಹಾಕಿ ನೀರು ಮೇಲೆ ಬರಿಸಿಕೊಂಡು ಕುಡಿದ ಕಥೆಯನ್ನು ಹೇಳುತ್ತಿದ್ದ. ಅದಾದ ಮೇಲೆ ರಜೆಗೆಂದು ನಮ್ಮೂರಿಗೆ ಬಂದಿದ್ದ ನರಸೀಪುರದ ಕಡೆಯ ಪುಟ್ಟ ಹುಡುಗಿ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿದಳು. ಇವನು ಹೇಳಿದ್ದು ಬೆಂಗಳೂರಿನ ಪದ್ಮನಾಭನಗರದ ಕನ್ನಡದಲ್ಲಿ, ಅವಳು ಹೇಳಿದ್ದು ನರಸೀಪುರದ ಗೆಜ್ಜಗಳ್ಳಿ ಕನ್ನಡದಲ್ಲಿ. ಪಡಸಾಲೇಲಿ ಕೇಳುತ್ತಾ ಕೂತಿದ್ದವರ ಮಧ್ಯದಿಂದ ಪಾರ್ವತಕ್ಕ ಹೇಳಿದಳು. “ ನಮ್ಮಟ್ಟಿ ಮುದುಕಿ ಯೋಳ್ದಂಗ್ ಯೋಳ್ತಿದ್ದಯಲ್ಲಮ್ಮೀ..ಯಾವ್ ಇಸ್ಕೂಲ್ಗ್ಯಾ ನೀ ವೋಗದು? ಅವನ್ ನೋಡು ಏನ್ ಚೊಚ್ಚವಾಗ್ ಯೋಳ್ದ? ಹಳ್ಳಿ ಮೂದೇವ್ಗಳು ಅನ್ನದಕ್ ಸರ್ಯಾಗಿದ್ದರಿ ಓಗಿ.” ಅಂದಳು. “ಸರಿ ಬುಡಕ್ಕ ನೀ ಯೋಳ ಮಾತು, ಅಂವಿರದು ಬೆಂಗಳೂರ್ಲಿ. ಸೀಟಿ ವಾತಾವರಣದಲಿ ಅಂವ ಆಡ ಅಂಗ ಈ ಐಕ್ಳು ಆಡಕಾದ್ದ?” ಅಂದಳು ಯಶೋಧ. “ಐ ನನ್ ತಮ್ಮನ ಎಡ್ತಿ ಐಕಳಗ್ ಸಲವಾಗೇ ನಂಜಲಗೂಡ್ಲಿ ಮನ ಮಾಡ್ದ. ಇಲ್ಲಿದ್ರ ಮಾತು ಕತ ಸರಿಬರಲ್ಲ, ಅಟ್ಟಿಲಿ ಆಡ ಮಾತ್ನೇ ಐಕಳೂ ಕಲ್ತ್ಕತ್ತವ ಅಂತ ಊರ್ನೇ ಬುಟ್ಬುಟ್ಟು ಒಂದ್ ಬಾಡಿಗೆ ಮನ ಮಾಡ್ಕಂಡು ಐಕಳ ಓದುಸ್ತಳ” ಅಂದರು ಪಾರತಕ್ಕ. “ಏನವ್ವ? ನಂಜಲಗೂಡ್ಲಿದ್ದರಾ? ಆ ಪಾಟಿ ಹನ್ನೆರಡ್ ಕಂಬದ ಅಟ್ಟಿ ಬುಟ್ಬುಟ್ಟೂ?” ಗಂಗಮ್ಮ ಆಶ್ಚರ್ಯ ವ್ಯಕ್ತಪಡಿಸಿದರು. “ಐ ಅಟ್ಟಿ ನೋಡ್ಕ ಕುಂತ್ಕಂಡ್ರ ಆದ್ದ ದೊಡ್ಡವ್ವ? ಅದೇ ಈಗಾಡುದ್ಲಲ್ಲ ಇಂವ ? ಆ ಥರವಾದ್ ಆಡ್ತವ ಅಷ್ಟಿಯೇ. ಮಕ್ಕ ಸಿಟಿ ವಾತಾವರಣದಲ್ಲಿ ಬೆಳೆದ್ರೇ ಸರಿ ಕಣ್ ಸುಮ್ನಿರಿ” ಅಂದಳು. ಹೆಚ್ಚೂ ಕಡಿಮೆ ಎಲ್ಲರೂ ಇದನ್ನು ಸಮರ್ಥಿಸುವ ಮಾತುಗಳನ್ನೇ ಆಡಿದರು. ಇದು ನಾನು ಕಟ್ಟಿ ಹೇಳ್ತಿರೋ ಕಥೆಯಲ್ಲ. ವಾಸ್ತವ. ಮೈಸೂರಿನ ಜೆಪಿ ನಗರದಲ್ಲೂ, ನಂಜನಗೂಡಿನಲ್ಲೂ ಒಮ್ಮೆ ಸರ್ವೆ ಮಾಡಿ ಬನ್ನಿ. ನಮ್ಮೂರು ಸುತ್ತಲ ಹಳ್ಳಿಗಳ ಎಷ್ಟೊಂದು ಕುಟುಂಬಗಳ ವಾಸ ಅಲ್ಲಿ. ಗಂಡನೆಂಬುವನು ಊರಿಗೆ ಬಂದು ಜಮೀನು ನೋಡಿಕೊಂಡು ಸಿಟಿಗೆ ಹೋಗಿ ಬಂದು ಮಾಡುವುದು. ಹೆಂಡತಿಯಾದವಳು ಮಕ್ಕಳನ್ನ ಓದಿಸಿಕೊಂಡು ಸಿಟಿಲಿರೋದು. “ಐ ಓದ್ಸಕ್ ಸಲವಾಗೇ ಮನ ಮಾಡ್ಕಂಡರ” ಅನ್ನೋದು ಎಷ್ಟೊಂದು ಮನೆಗಳ ಹಳೆತಲೆಗಳು ಹೇಳೋ ಮಾಮೂಲಿ ಮಾತು.

ಈ ಬೆಳವಣಿಗೆಯನ್ನ ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುವ ಸತ್ಯವಿಷ್ಟು. ನನ್ನ ತಲೆಮಾರಿನ ಹೊಸ ಸೊಸೆಯರಿಗೆ ಹಳ್ಳಿಯ ಬದುಕೇ ಬೇಡವಾಗಿದೆ. ಮಕ್ಕಳು ಇಂಗ್ಲೀಷು ಆಡಬೇಕನ್ನವುದು. ನಮ್ಮ ಜಮೀನಿಗೆ ಬರೋ ರತ್ನಿಯ ಆಸೆಯೂ, ಗಾರೆ ಕೆಲಸದ ಶಂಕರನ ಆಸೆಯೂ ಆಗಿರೋವಾಗ, ಗದ್ದೆ ಗರಜಿನ ಇದ್ದವರ ಮನೆಯ ಸೊಸೆಯರಿಗೆ ಈ ಆಸೆ ಇರಬಾರದೇನು?ಅವರು ಊರು ಬಿಟ್ಟು ಹೋದದ್ದು “ಒಳ್ಳೆಯ ಎಜುಕೇಷನ್ನು” ಅರಸಿ. “ಇಂಗ್ಲೀಷ್ ಕಾನ್ವೆಂಟ್” ಅರಸಿ, ಈ ಹಳ್ಳಿ ಜನ ಜಗುಲೀಲಿ ಕುಂತಾಡುವ ಕನ್ನಡ ಮಕ್ಕಳ ಬಾಯಲ್ಲಿ ಬರಲೇಬಾರದು ಅಂತ ತೀರ್ಮಾನಿಸಿ! ನಡೆದುಬಿಟ್ಟಿದ್ದಾರೆ. ವಲಸೆ ನಿರಂತರತೆ ಕಾಯ್ದುಕೊಳ್ಳುತ್ತಿದೆ, ಪ್ರತಿವರ್ಷವೂ.
ಮೊನ್ನೆ ಮೊನ್ನೆ ಊರಿಗೆ ಹೋದಾಗ ಹಿಂಗೇ ನಮ್ಮ ಕೂಸವ್ವನ ಹಟ್ಟಿ ಜಗಲೀಲಿ ನನ್ನ ಮಗ ಇನ್ನೊಂದು ಮಗು ಜೊತೆ ಆಡ್ತಿದ್ದ. ಆ ಮಗುವಿನ ಅವ್ವನೂ ನನ್ನೊಂದಿಗಿದ್ದಳು. ಆ ಮಗು “ಮಮ್ಮಯೌ..,ಮಮ್ಯೋ” ಅಟ್ಟಿಗೋಗಂವು ನಡಿ” ಅನ್ನುತ್ತಿತ್ತು. ಆ ಮಗುವಿನ ಅವ್ವ ಅದರ ಕುಂಡೆಗೆ ಚೆನ್ನಾಗಿ ಬಾರಿಸಿದಳು. ಅದು ಕಿರ್ರೋಮರ್ರೋ ಅಂತಾ ಹೋಯ್ತು. ಅವಳ ಕೋಪಕ್ಕೆ ಕಾರಣ, ಆ ಮಗು ಮಮ್ಯೂ ಅಂದದ್ದು. ಎಷ್ಟೇ ಹೇಳಿಕೊಟ್ರೂ ಆ ಮಗ ಅದರಪ್ಪ, ಚಿಕ್ಕಪ್ಪಗಳು ಅವರ ಅಮ್ಮನನ್ನ “ಅವೌ..ಅವೌ.” ಅನ್ನುವುದನ್ನ ಅನುಕರಿಸಿ, ಮಮ್ಮಿ ಅನ್ನೋದನ್ನ “ಮಮ್ಮ್ಯೋ” ಮಾಡಿ ಕರೆದದ್ದು. ಮತ್ತೊಂದು . ಮತ್ತು ಮನೆ ಅನ್ನು ಅಂತ ಅವಳು ಹೇಳಿಕೊಟ್ಟ ಪಾಠ ಮರೆತು ಹಟ್ಟಿ ಹಟ್ಟಿ ಅಂದದ್ದು. “ಹೋಗ್ಲಿ ಬಿಡು. ನಿಮ್ಮನೆಲಿ ನಿಮ್ಮತ್ತೆ, ನಿನ್ ಗಂಡ ಎಲ್ರೂ ಆಡೋದ್ನೇ ಅಲ್ವಾ ಆ ಮಗು ಕಲಿಯೋದು? ಪಾಪ. ಅದಕ್ ಹೊಡದೇನ್ ಬಂತು?” ಅಂದೆ. “ಅಯ್ಯೋ ಬ್ಯಾಡ ಕಣಕ್ಕೋ, ಮೂರೊತ್ತೂ ನಮ್ಮಟ್ಟಿ ಮುದುಕಿ ಜೊತಲೇ ಸೇರ್ಕತ್ತನ. ಬರೀ ಅವರಾಡಾ ಮಾತ್ನೆಲ್ಲ ಕಲತ್ಕಂಡ್ ಕುಂತನ. ಎಷ್ಟ್ ಯೋಳುದ್ರೂ ಕ್ಯೋಳಲ್ಲ. ನಂಗಂತು ಸಾಕಾಗೋಗದ” ಅಂದ್ಲು. “ಆ ಜ್ಯೋತಿ, ರೂಪ, ಆಚೆಬೀದಿ ಸಿದ್ಲಿಂಗಣ್ಣನ್ ಸೊಸ ಎಲ್ಲ ಐಕಳ್ ಸಲವಾಗಿ ಮನ ಮಾಡ್ಕಂಡರ” ಅಂದ್ಲು ಕೂಸವ್ವ “ಮಾಡರ ಕಣ್ ತಾಯಿ , ಎಲ್ಲ ಹದವಾಗಿರವರು, ನಮ್ಮಂತವರು ಏನ್ನ ಮಾಡದು? ಇಲ್ಲೆ ಸಾಯಬೇಕಲ್ಲ ಇವರಿಗೆಲ್ಲ ಬೇಯಿಸಾಕಂಡು” ಅಸಹಾಯಕತೆ ಹೇಳಿಕೊಂಡಳು. “ ಚೋರ್ನಳ್ಳೀಲಿ ಈಗ ಕಾರ್ಮೆಂಟ್ ಆಗದ. 35 ಸಾವ್ರವಂತ ಸಾಲ ಆದ್ರಾಗ್ಲಿ ಅಲ್ಗೇ ಸೇರ್ಸಂವು ಅಂತ” ಅಂದ್ಲು. ಅವಳಿಗೆ ಬುದ್ದಿ ಹೇಳುವ, ಭಾಷೆಯ ಸೊಗಡಿನ ಬಗ್ಗೆ ಪಾಠ ಮಾಡುವ “ಧೈರ್ಯ” ನನಗಾಗಲಿಲ್ಲ.
“ಮುತ್ತಜ್ಜಿ ಉಶ್ ಮಾಡಬೇಕು” ಅಂತ ನನ್ನ ಮಗನೆಂದ “ಚಡ್ಡಿ ಕಳೆದಾಕು ಓಗು” ಅಂದಳು ನನ್ನಜ್ಜಿ. “ಅವನು “ಅಜ್ಜಿ ಚಡ್ಡಿ ಕಳಿ” ಅನ್ನುತ್ತಾ ಅಮ್ಮನ ಬಳಿ ಬಂದ. “ಏ ಕಂದಾ.. ಏನದು ಚಡ್ಡಿ ಕಳಿ ಪಳಿ ಅಂತೆಲ್ಲ ಮಾತಾಡದು?” ಅಮ್ಮ ರೇಗಿದರು. ಮಗು ಪೆಚ್ಚಾಯ್ತು ಪಾಪ. ನಾನು ಹೇಳಿಕೊಟ್ಟ “ಚಡ್ಡಿ” ಪದವನ್ನ ನಮ್ಮೂರಿನ ಹೊಸ ಅಜ್ಜಿಯರೂ, ಹೊಸ ತಾಯಂದರೂ ಬಳಸುವುದಿಲ್ಲ. ಬದುಕಿಡೀ ತಮ್ಮ ಭಾಷೇಲಿ ಬದುಕಿನ ಮುದಿಜೀವಗಳು ಈ ಮೊಮ್ಮಕ್ಕಳ ಸಲುವಾಗಿ ಹೊಸಭಾಷೆಯಾಡಬೇಕಾಗಿದೆ, ಇಲ್ಲವೇ ಮೌನವಾಗಬೇಕಿದೆ.
ಆಲತ್ತೂರಿಗೆ ಒಬ್ಬರು ನೆಂಟರ ಮನೆಗೆ ಹೋಗಿದ್ದೆ. “ಬಚ್ಚಲು ಮನೆ ಎಲ್ಲಿದೆ?” ನನ್ನ ಮಗ ಕೇಳಿದ. ತೋರಿಸಿದರೇನೋ ಸರಿ. ಆದರೆ “ಏನೋ ಬೆಂಗಳೂರಲ್ಲಿದೀನಿ ಅಂತೀಯ ಬಚ್ಚಲುಮನೆ ಅಂತೀಯ? ಆಯರಳ್ಳೀಗ್ ಬಂದ್ ಹಳ್ಳಿ ಪೆದ್ ಮಾತ್ ಕಲ್ತ್ಕಂಡ್ಯಾ?” ಅಂದರು. “ಇಲ್ಲ ನಾವು ಬೆಂಗಳೂರಲ್ಲಿ ಕೂಡ ಬಾತ್ರೂಮು ಅನ್ನುವುದಿಲ್ಲ” ಅಂತ ನಾನು ವಿವರಣೆ ಕೊಡಬೇಕನಿಸಲಿಲ್ಲ. ನಾನು ಬೆಂಗಳೂರಲ್ಲಿರುವ ಕಾರಣಕ್ಕೆ, ಟಿವೀಲಿ ಕೆಲಸ ಮಾಡೋ ಕಾರಣಕ್ಕೆ, ಅವರು ಬಲವಂತಕ್ಕೆ ಬಿದ್ದಂತೆ ಶಿಷ್ಟ ಭಾಷೆಯಾಡಲು ಇನ್ನಿಲ್ಲದ ಪ್ರಯತ್ನ ಮಾಡಿದರೆ ನನಗೆ ಕರುಣಾಜನಕವೆನಿಸುತ್ತದೆ.
ಊರಲ್ಲಿ 15-20 ದಿನ ಇದ್ದರೆ ಮಗು ಒಂದಷ್ಟು ಅಲ್ಲಿಯ ಪದಗಳನ್ನ ಅಭ್ಯಾಸ ಮಾಡಿಕೊಳ್ಳುತ್ತದೆ. ಇಲ್ಲಿ ಬೆಂಗಳೂರಿನ ಸ್ಕೂಲಲ್ಲಿ ಬಂದು ಆಡುತ್ತದೆ. ಅವನ “ಮ್ಯಾಮ್” ಫೋನು ಮಾಡುತ್ತಾರೆ. “ನಿಮ್ ಹುಡುಗನ್ನ ಊರಲ್ಲಿ ಜಾಸ್ತಿ ದಿನ ಬಿಡಬೇಡಿ ಮೇಡಂ,ಇಲ್ಲಿ ಬೇರೆ ಮಕ್ಕಳ ಜೊತೆನೂ ಏನೇನೋ ಮಾತಾಡ್ತಾನೆ. ಡಿಸಿಪ್ಲಿನ್ ಹಾಳಾಗತ್ತೆ” ಅಂತಾರೆ. ಇನ್ನು ಆಗಾಗ ತಮಿಳಿನಲ್ಲಿ “ಪೋಲ ಪೈಯ” ಅನ್ನುತ್ತಾನೆ. ತಮಿಳು ಅವರ “ಮ್ಯಾಮ್” ಮಾತೃಭಾಷೆ.
ನಾನು ಸಣ್ಣ ಹುಡುಗಿಯಾಗಿದ್ದಾಗ “ಗಂಟೆ ಎಷ್ಟು?” ಅಂತ ಕೇಳಿದ್ದಕ್ಕೆ ಸಂಬಂಧಿಯೊಬ್ಬರು ನಕ್ಕರು. “ಎಷ್ಟನೇ ಕ್ಲಾಸಾ ನೀನು? ಐದಾ? ಗಂಟೆಷ್ಟ ಅಂತಿದ್ದಯಲ್ಲ ಪೆದ್ದರಂಗೆ, ಟೇಮೆಷ್ಟ ಅಂತ್ ಕ್ಯೋಳಬೇಕು” ಅಂದಿದ್ದರು. ಈ ಸಣ್ಣ ಘಟನೆ 20 ವರ್ಷಗಳಾದರೂ ನೆನಪಿದೆ ನನಗೆ.
ಓದುವ ಮಕ್ಕಳು, ಹಳ್ಳಿ ಭಾಷೆ ಮಾತಾಡಬಾರದು.
ಹಳ್ಳಿ ಭಾಷೆ ಮಾತಾಡುವ ಮಕ್ಕಳು ಪೆದ್ದರು. ಶಿಷ್ಟ ಕನ್ನಡ ಮಾತಾಡುವವರು ಜಾಣರು.
ಇಂಗ್ಲೀಷು ಆಡಿದರೆ ಮಹಾ ಜಾಣರು…
ಮತ್ತು ಹೊಸದಾಗಿ,
ಹಳ್ಳಿ ಭಾಷೆಯಾಡುವುದು ಅವಮಾನದ ವಿಷಯ.
ಇದಿಷ್ಟೂ ಹಳ್ಳಿಯವರಲ್ಲದವರ ಅಭಿಪ್ರಾಯ ಮಾತ್ರ ಆದರೆ, ಪ್ರತಿಭಟಿಸುವಲ್ಲಿ ಅರ್ಥವಿದೆ. ಆದರಿದು ಆ ಭಾಷೆಯಾಡುವ ಜನರದ್ದೇ ಅಭಿಪ್ರಾಯವಾದರೆ? ಪ್ಲಾಸ್ಟಿಕ್ಕಿನ ತಳುಕಿನ ಮುಂದೆ, “ಮಲ್ಲಿಗೆಯ ಘಮ” ಅವರಿಗೆ ಹಿಡಿಸುತ್ತಿಲ್ಲ. ನಿಜದ ಎಲೆಗಳ ಮಾವಿನ ತೋರಣದ ಸಹಜತೆಗಿಂತ. ಪ್ರಿಂಟೆಂಟ್ ಕೃತಕ ತೋರಣದ ಕಡೆಗಿನ ಆಕರ್ಷಣೆ ಹೆಚ್ಚಿದೆ. ಯಾಕಂದರೆ ಮಾವಿನ ಗಿಡ ಹಿತ್ತಲಲ್ಲೇ ಇದೆ.
ಮತ್ತೂ ಒಂದು ಹೋದವಾರದ ತಾಜಾ ಉದಾಹರಣೆ ಕೊಡುತ್ತೇನೆ. ಮೈಸೂರಿನ ಜೆಎಸ್ ಎಸ್ ಆಸ್ಪತ್ರೇಲಿ ಅಪ್ಪನ ಅನಾರೋಗ್ಯದ ಕಾರಣ 15 ದಿನದಿಂದ ಇದ್ದೇನೆ. ನಂದೀಶ್ ಅಂತಲೋ ಏನೋ ಹೆಸರು ಮರೆತೆ. ಚಾಮರಾಜನಗರದ ಕಡೆ ಹಳ್ಳಿಯಿಂದ ಎಂಬಿಬಿಎಸ್ ಓದಿ ಬಂದವರು. ವಾರ್ಡಿನ ಹಳ್ಳಿಯ ಪೇಷೆಂಟ್ಗಳ ಜೊತೆ ಯಾವ ಕೃತಕತೆಯೂ ಇಲ್ಲದೆ, ಸರಾಗವಾಗಿ ಅವರದ್ದೇ ಭಾಷೆಯಲ್ಲಿ ಮಾತಾಡಿಸುತ್ತಿದ್ದರು. ಯಾಕೋ ಅದು ಪೇಷೆಂಟ್ಗಳಿಗೇ ಹಿಡಿಸ್ತಿರಲಿಲ್ಲ. “ಐ ನಮ್ಮಂಗೇ ಬರೀ ಅಳ್ಳಿ ಮಾತ್ನೇ ಆಡ್ತರಲ್ಲ. ಅವರ್ಯಾವ್ ಥರದ್ ಡಾಕುಟ್ರಾ?”ಅಂತವರ ಪ್ರಶ್ನೆ. ಉದ್ದೂದ್ದದ ಸರ್ನೇಮುಗಳ ಜೊತೆ ಇಂಗ್ಲೀಷಲ್ಲು..ಶಿಷ್ಟಭಾಷೇಲೂ ಮಾತಾಡುವ ಡಾಕ್ಟರಾದರೆ “ಹ್ಞೂಸಾ.. ಹ್ಞೂ ಸಾ..ಹ್ಞೂಸಾ” ಅಂತ ತಲೆಯಾಡಿಸಿ. “ಇವರು ಒಳ್ಳಿ ಡಾಕ್ಟರು” ಅಂತ ಸರ್ಟಿಫಿಕೇಟು ಕೊಡ್ತಾರೆ. ನಮ್ಮ ಲಾ ಕಾಲೇಜಿನ ನಾಗೇಂದ್ರಪ್ರಸಾದ್ ..ಪ್ರೊಫೆಸರು. ಭಾಷೆ ಮಾತ್ರ ಶಿಷ್ಟ ಕನ್ನಡವಲ್ಲ. “ಅವರ ಲ್ಯಾಗ್ವೇಂಜ್ ಎಷ್ಟು ರಾ ಆಗಿದೆ” ಅಂತಿದ್ದರು ಸ್ಟುಡೆಂಡ್ಸು.
ನಾನೂ ಊರಲ್ಲಿ ಊರ ಭಾಷೆಯಾಡಿದರೆ, “ಇದೇನ ಕುಸ್ಮ? ಅಪೈ ಅದೆಂತದ ಸೂಟಿಂಗ್ ಮಾಡ್ತಿನಿ ಅಂತಿದ್ದಯಿ. ಇಂಗ್ ಮಾತಾಡ್ತಿದ್ದಯಲ್ಲ. ಅಲ್ಲೂ ಇಂಗೇ ಮಾತಾಡಿಯಾ?” ಅಂತಾರೆ. ನಾನು ಅವರಂತೆ ಮಾತಾಡುವುದು ಅವರಿಗಿಷ್ಟವಿಲ್ಲ. ಟಿವಿ ದಾರಾವಾಹಿ ಬರೆವ ನಾನು ದಾರಾವಾಹಿಯ ಹಾಗೇ ಮಾತಾಡಬೇಕನ್ನುವುದು ಅವರ ನಿರೀಕ್ಷೆ. “ಭಿನ್ನವೆಂದರೆ ಕೀಳಲ್ಲ ಎಂಬುದು ನಿಮ್ಮ ವಾದವಾದರೆ ಭಿನ್ನವಾಗದೇ ನೀವು ಮೇಲೂ ಅಲ್ಲ ಎನ್ನುತ್ತಾರವರು” ಇದಕ್ಕೇನು ಹೇಳ್ತೀರಿ?
ನಾನು ಚಾಮರಾಜನಗರದ ಸಂತೇಮರಳ್ಳೀಲಿ ಹೈಸ್ಕೂಲು ಓದುವಾಗ ಸುಮಾ ಅಂತೊಬ್ಬರು ಟೀಚರ್. ಕನ್ನಡ ಎಂಎ ಮಾಡಿದ ಬ್ರಾಹ್ಮಣರ ಮನೆಯ ಹುಡುಗಿ. ಊರು ರಾಮಸಮುದ್ರ, ಸಾಹಿತ್ಯಾಸಕ್ತಿ ಇದ್ದವರು. ಅವರ ಚೆಂದದ ಕನ್ನಡಕ್ಕೆ ನಾನು ಕಣ್ಣರಳಿಸುತ್ತಿದ್ದೆ. ಈಗಲೂ ಅದೇ ಸ್ಕೂಲಲ್ಲಿದ್ದಾರೆ. ಮೊನ್ನೆ ಅಜ್ಜಿ ಮನೆಗೆ ಹೋದಾಗ ಮಾತಾಡಿಸಲು ಹೋದರೆ ನನಗೆ ದೊಡ್ಡ ಆಶ್ಚರ್ಯ ಕಾದಿತ್ತು. ಸುಮಾ ಮೇಡಂ ಪಕ್ಕಾ ಚಾಮರಾಜನಗರದ ಹಳ್ಳಿ ಭಾಷೆ ಆಡುತ್ತಿದ್ದಾರೆ. ನನಗೆ ನಂಬಲಿಕ್ಕೇ ಆಗಲಿಲ್ಲ. 15 ವರ್ಷಗಳಿಂದ ಆ ಊರು, ಆ ಜನ , ಹಳ್ಳಿ ಮಕ್ಕಳ ಜೊತೆ ಆಡಿ ಆಡಿ. ಅವರೂ ಬದಲಾಗಿಬಿಟ್ಟಿದ್ದಾರೆ.
ಮತ್ತೆ ಜೆ ಎಸ್ ಎಸ್ ಆಸ್ಪತ್ರೆಗೆ ಬಂದರೆ “ಮಹೇಶ್ ಶೆಟ್ಟಿ ಅಂತ ಅಪ್ಪನನ್ನ ನೋಡಿದ ಡಾಕ್ಟರು. ಮಂಗಳೂರು ಕಡೆಯವರು. ಮುಖದಲ್ಲಿ ಕೇರಳದವರಂತ ಕಳೆ ಎದ್ದು ಕಾಣ್ತಿದೆ. ಬಾಯಿಬಿಟ್ಟರೆ ಆಡ್ತಿರೋದು ನಮ್ಮ ಲೋಕಲ್ ಹಳ್ಳಿ ಆಕ್ಸೆಂಟು. ತುಂಬಾ ತಲೆಕೆಡಿಸಿಕೊಂಡು ವಿಚಾರಿಸಿದರೆ ಗೊತ್ತಾಗಿದ್ದು. ಅವರು 5 ವರ್ಷಗಳ ಎಂಬಿಬಿಎಸ್ ನಂತರದ ಪ್ರಾಕ್ಟೀಸ್ ..ಈ ಹತ್ತಾರು ವರ್ಷಗಳ ರೋಗಿಗಳ ಒಡನಾಟ .ಹಳ್ಳಿ ಕರೆಗಳಿಗೆ ಹೋಗಿ ಹಕ್ಕಿಗಳ ಫೋಟೋ ತೆಗೆಯೋ ಅವರ ಹವ್ಯಾಸ , ಇದೆಲ್ಲ ಅವರ ಭಾಷೆಯನ್ನೇ ತಿದ್ದಿಬಿಟ್ಟಿದೆ.ಕೇರಳದ ನರ್ಸುಗಳ ಕನ್ನಡವೂ ಇಲ್ಲಿ ಅದೇ ಆಗಿಹೋಗಿದೆ.
ಇಷ್ಟೆಲ್ಲ ಆಗಿ ಇನ್ನೊಂದೆರಡು ತಲೆಮಾರಿನ ನಂತರವೂ ಈ ಭಿನ್ನ ಸೊಗಡಿನ ಭಾಷೆಗಳು ನಿಲ್ಲುವವೇನು? ಗೊತ್ತಿಲ್ಲ. ಆದರೆ ಭಾಷೆಯೆಂಬುದು ನದಿಯ ಹಾಗೆ ಅನ್ನುವುದು ಸುಳ್ಳಲ್ಲ!!
 
 
 

‍ಲೇಖಕರು G

15 July, 2014

ನಿಮಗೆ ಇವೂ ಇಷ್ಟವಾಗಬಹುದು…

11 Comments

  1. Somashekhar

    ವಾವ್!, ಅದ್ಭುತವಾದ ಲೇಖನ !. ನಮ್ಮೂರ ಕಡೆ ಹುಡುಗಿ ಈಗ ಅವಧಿಯ star !

  2. M S Krishna murthy

    ಸಿಟಿಯಲ್ಲೇ ಹುಟ್ಟಿ ಬೆಳದ ನನಗೆ ಈ ವಿಷಯದ ಬಗ್ಗೆ ಮಾತಾಡಲೂ ನೈತಿಕ ಹಕ್ಕಿ ಲ್ಲ. ಆದರೂ ಪಟ್ಟಣದಲ್ಲಿದ್ದರೂ ಕನ್ನಡ ಮಾತನಡುವುದು ಕೀಳರಿಮೆ ಎಂದು ಬಾವಿಸಿಲ್ದ..ಎಲ್ಲರನ್ನು ಎಚ್ಚರಿಸುವ ಲೇಖನ.. ತುಂಬಾ ಇಷ್ಟ ವಾಯಿತು…

  3. jogi

    ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ. ಓದುತ್ತಾ ಹೋದ ಹಾಗೆ ನಮ್ಮೂರಿನ ಕನ್ನಡಗಳು, ಅವುಗಳನ್ನು ಅರೆಭಾಷೆ ಅಂತ ಕರೀತಿದ್ದದ್ದು ನೆನಪಾಯಿತು. ಮೋಡಿ ಕನ್ನಡ ಅಂತೇನೋ ಒಂದು ಪದ ಬಳಸುತ್ತಿದ್ದರು. ತುಂಬ ಒಳನೋಟ ಮತ್ತು ಅಧ್ಯಯನ ಇರೋ ಲೇಖನ

  4. Anil Talikoti

    ತುಂಬಾ ಒಳ್ಳೆಯ ಲೇಖನ – ನದಿಯಂತೆ ಭಾಷೆಗಳು ದಿಕ್ಕು ಬದಲಿಸಬಹುದು ಇಲ್ಲಾ ಬತ್ತಿಯೂ ಹೋಗಬಹುದು!
    -ಅನಿಲ

  5. Dr.subramanya swamy

    ನಿಮ್ಮ ಈ ನಿಲುವು ಕನ್ನಡ ನಾಡುನುಡಿಗೆ ಸಂಬಂದಿಸಿದಂತೆ ಬಹಳ ಪ್ರಮುಖವಾದುದು.ಪ್ರಮಾಣಿಕರಣ ಭಾಷೆಯ ಅಧಿಕಾರಕೇಂದ್ರ ನೆಲೆಯ ಪರಿಸ್ತಿತಿಗಳು ಮತ್ತು ಅದನ್ನೇ ಸತ್ಯ ಎಂದು ನಂಬಿರುವ ನಾವು ಬದಲಾದರೆ ಭಾಷಾ ಅನನ್ಯತೆಯ ಜಿವಿತತೆ ಸಾಧ್ಯ ಹಾಗೂ ಕಿಳರಿಮೆಗಳು ಕಾಣೆಯಾಗಬಹುದು. ಭಾಷಾ ವಿಜ್ಞಾನದ ಅಜ್ಞಾನ ತೂಲಗಬೇಕಾದ ದಾರಿಯ ಮೂಲ ಇಲ್ಲಿದೆ.

  6. Kiran

    ಕನ್ನಡ ಭಾಷೆಗೆ ಅಳಿವಿಲ್ಲಾ ಎನ್ನುವವರೆಲ್ಲಾ ೧೦೦ ಬಾರಿ ಓದಬೇಕಾದ ಲೇಖನವಿದು, latest supreme ಕೋರ್ಟ್ ನ ತೀರ್ಪು, ಮತ್ತು ನಮ್ಮವರ ಭಯಂಕರ ಇಂಗ್ಲಿಷ್ ವ್ಯಾಮೋಹ ಮತ್ತು ಅದೇ ಉಸಿರಿನಲ್ಲೇ ಕನ್ನಡದ ಬಗೆಗಿರುವ ಅತಿ ಭಯಂಕರ ಕೇಳರಿಮೆಗಳು ಕನ್ನಡವನ್ನು ನಿಧಾನವಾಗಿ ಕ್ಯಾನ್ಸರ್ ನಂತೆ ತಿನ್ನುತ್ತಿದೆ, ಇದನ್ನು “ಆ ಥರ ಏನೂ ಆಗಲ್ಲ” ಎಂದು ಅಲಕ್ಷಿಸುವುದು ಪರಮ ಬೇಜವಾಬ್ದಾರಿ ಮತ್ತೂ ವಿನಾಶಕಾರಿ.
    This is by-far the best analysis I have seen regarding the present status of our language and our narrow mindset towards it.

  7. ವಿಕಾಸ ನೇಗಿಲೋಣಿ

    ತುಂಬ ಚೆನ್ನಾಗಿದೆ ಮೇಡಮ್ ಲೇಖನ. ಶಿವಮೊಗ್ಗ ಕಡೆಯ ನಾನು ನಮ್ಮೂರಿಗೆ ಹೋದಾಗ ನಾಲ್ಕಾರು ಶೈಲಿಯ ಕನ್ನಡವನ್ನಾದರೂ ಮಾತಾಡುತ್ತೇನೆ, ಉಜಿರೆ, ಉಡುಪಿ ಕಡೆ ಓದಿದ ಕಾರಣ ಅಲ್ಲಿಯ ತುಳು, ಮಂಗಳೂರ್ಗನ್ನಡಗಳೂ ಬರುತ್ತವೆ. ಆಯಾ ಜಾಗದಲ್ಲಿ ಆಯಾ ಭಾಷೆ, ಶೈಲಿ ಬಳಸಿ ಮಾತಾಡಿದರೆ ಸಿಗುವ ಸಂತೋಷ ಬೇರೆ. ಆದರೆ ಈಗ ಆ ಭಾಷಾ ವೈವಿಧ್ಯವೇ ಆಧುನಿಕವಿರೋಧಿ ಅಂತ ಆಗಿ, ಭಾಷೆ ತನ್ನ ಸೊಗಡನ್ನು ಕ್ರಮೇಣ ಕಳೆದುಕೊಳ್ಳುತ್ತದಾ ಅನ್ನುವ ಆತಂಕವನ್ನು ನೀವು ತುಂಬ ಅದ್ಭುತವಾಗಿ ಬಿಚ್ಚಿಟ್ಟಿದ್ದೀರಿ.
    ನಿಮ್ಮ ಆತಂಕ ನಮ್ಮ ಆತಂಕವೂ. ಹಾಗಂತ ಅದು ಇನ್ನೊಂದು ಇಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಸತ್ಯವಾಗದೇ ಇದ್ದರೆ ಸಾಕು.

  8. anand salundi

    ಬಾಳ ಚೆಂದಾಗ್ ಬರೆದಿದ್ದೀರಿ (y)

  9. vidyashankar

    Very well balanced article. Nothing to fear. Everything will be taken by care by time. Liked positive hope at end of the article.

  10. amardeep.p.s.

    ನಾವ್ ಸಿಟಿಯಲ್ಲಿದ್ದ ಕಾರಣಕ್ಕೆ ಸಿಟಿಯವರ ತರಾನೇ ಮಾತಾಡ್ಬೇಕು.. ಹಳ್ಳಿ ಭಾಷೆ ಬಲವಂತವಾಗಿ ಮರೀಬೇಕು ಅನ್ನುವಂತೆ ಈಗಿನ ಕೆಲವರು ನಡೆದುಕೊಳ್ಳುತ್ತಾರೆ. ಆದರೆ ನನಗೆ ವೈಯುಕ್ತಿಕವಾಗಿ ನಮ್ ಗ್ರಾಮ್ಯ ಭಾಷೆ ಸೊಗಡಿನಲ್ಲಿ ಚೆಂದ ಮಾತು ಬಂದಂತೆ ನಾವು ಕಲಿತ ಪೇಟೆ ಶೈಲಿಯಲ್ಲಿ ನಮಗೇ ಹಿಡಿಸದಷ್ಟು ಕೃತಕತೆ ಎದ್ದು ಕಾಣುವ ಮಾತುಗಳನ್ನು ಗ್ರಾಮ್ಯ ಭಾಷಿಗರು ಬಹಳಷ್ಟು ಸಂಧರ್ಭದಲ್ಲಿ ಗಮನಿಸುವುದಿಲ್ಲ. ಚೆನ್ನಾಗಿ ನಿರುಪಿಸಿದ್ದೀರಾ. ಅಭಿನಂದನೆಗಳು.

  11. chaithra

    Bahala chennagide.:)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading