ಮೊದಲು ಕುದುರೆಯದೋ ಎತ್ತಿನದೋ ಕಾಲಿನ ಶಾಟ್.ಬಂಡಿಯ ಚಕ್ರದ ಶಾಟ್. ಆಮೇಲೆ ಕೊಲ್ಲಾಪುರಿ ಚಪ್ಪಲಿ ಹಾಕಿದ, ಪಂಚೆಯ ಬಾರ್ಡರು ಕಾಣುವ, ಮನುಷ್ಯರ ಕಾಲಿನ ಶಾಟ್, ಆಮೆಲೆ ಕುದುರೆ ಅರ್ಧ ಮುಖ,ಅಥವ ಎತ್ತಿನ ಕತ್ತಿನ ಗಂಟೆಯ ಶಬ್ದ,ನಂತರ ಮನುಷ್ಯರ ಅರ್ಧ ಮುಖ. ಆಮೇಲೆ ಕಾಲು ಎತ್ತಿ ಗಾಡಿಗೆ ಹಾಕಿ ಎರಡು ಕೈ ಜೋಡಿಸಿ ಕೈಮುಗಿವ ಶಾಟ್, ಜನವೆಲ್ಲ ಕೈ ಮುಗಿಯುತ್ತಾರೆ.. ಆಮೆಲೆ ಹೀರೋ ಕಂ ಗೌಡರ ಮುಖಾವರಣ. ಅದೆಷ್ಟೋ ಹಳ್ಳಿ ಕಥೆಯಾಧಾರಿತ ಸಿನೆಮಾಗಳ ಆರಂಭದ ದೃಶ್ಯಗಳಿವು. ಊರಗೌಡರನ್ನ ರಿವೀಲ್ ಮಾಡೋ ಸಲುವಾಗಿ ಇಷ್ಟೆಲ್ಲಾ ಬಿಲ್ಡಪ್ಪು. ಎಸ್ ನಾರಾಯಣ್ ಸಿನೆಮಾವಾದರಂತು ಹುಲಿ, ಸಿಂಹಗಳೆಲ್ಲ ಎಡಿಟಿಂಗ್ ರೂಮಿನಲಿ ಆಕ್ಷನ್ ಕಟ್ ಹೇಳಿಸಿಕೊಳ್ತವೆ.
ಇನ್ನು ತಮಿಳು ತೆಲುಗು ಕೇಳಲೇಬೇಡಿ. ಆದರೆ ನಿಜವಾಗಿ ಅಂತ ಸೀನ್ಗಳೆಲ್ಲ ಎಂತದೂ ಇಲ್ಲ. ಎಂಟ್ರಿ ಸೀನ್ ಅನ್ನೋ ಹೆಸರಲ್ಲಿ ಅವೆಲ್ಲ ಕ್ಯಾಮರಾ ದರ್ಬಾರು. ಸಿನೆಮಾಟಿಕ್ ಲಿಬರ್ಟಿ ಅನ್ನೋ ಹೆಸರಲ್ಲಿ ಬಹುತೇಕ ಸಿನೆಮಾಗಳಲ್ಲಿ ಕೋರ್ಟುನ್ನೂ, ಹಳ್ಳಿಯನ್ನೂ, ಅದರ ಭಾಷೆಯನ್ನೂ, ಊರ ಗೌಡರನ್ನೂ ಬೇಜಾನ್ ಬಿಲ್ಡಪ್ ಕೊಟ್ಟು ತೋರಿಸ್ತಾರೆ ಅಷ್ಟೆ. ಹಾಗಂತ ಊರಲ್ಲಿ ಅಂತ ಗೌಡ್ರುಗಳೇ ಇರಲಿಲ್ವ? (ಗೌಡ ಅಂದರೆ ಜಾತಿಯಲ್ಲ ಮತ್ತೆ, ಊರ ಮುಖಂಡ ಅಂತಷ್ಟೇ ಅರ್ಥ) ಇದ್ರು. ಗೌಡ, ಪಟೇಲ, ಶಾನುಭೋಗ, ಅರ್ಚಕ ಹೀಗೆ ಮುಖ್ಯಸ್ಥರಿದ್ರು. ಪಂಚಾಯಿತಿಯೂ ಇತ್ತು.. ಜೊತೆಗೆ ನ್ಯಾಯ, ದಬ್ಬಾಳಿಕೆ ಎಲ್ಲವೂ ಇತ್ತು.
ಊರ ಗೌಡಿಕೆ ಅವರ ವಂಶಪರಂಪರೆಯಿಂದ ಬಂದಿತ್ತು. ಅವರು ಹೇಳಿದ್ದೇ ನ್ಯಾಯ. ಜನಕ್ಕಾಗ ಊಟಕ್ಕೇ ಕಷ್ಟ. ಒಂದು ರೂಪಾಯಿ ಅಕ್ಕಿ ಕೊಡ್ತಿರೋ ಮುಖ್ಯಮಂತ್ರಿ ಸಿಧ್ದರಾಮಯ್ಯ ಆಗಿನ್ನೂ ಮುದ್ದೆ ಜಡಿಯುತ್ತಿದ್ದ ಸಮಯ. ದುಡ್ಡು, ಜಮೀನು, ಧಾನ್ಯ ಎಲ್ಲವೂ ಉಳಿದವರ ಮನೆಗಿಂತ ಇವರ ಮನೇಲಿ ಜಾಸ್ತಿ. ಸಿನೆಮಾದಲ್ಲಿ ನೋಡಿರ್ತೀರಲ್ಲ. ಸ್ವಲ್ಪ ಮಟ್ಟಿಗೆ ಹಾಗೇ.. ಜನರ ಬಡತನವನ್ನು ಬಳಸಿಕೊಂಡು ಕೂಲಿ ಕೊಡದೆಯೇ ಮನೆ ಕಟ್ಟಿದ ಮಹಾನುಭಾವರಿದ್ದಾರೆ. ಜಮೀನುಗಳಲ್ಲಿ ಬಿಟ್ಟಿ ಗೇಯಿಸಿಕೊಂಡವರಿದ್ದಾರೆ. ಅಷ್ಟೆಲ್ಲ ಆಗಿ, ಕಷ್ಟಕ್ಕೆ ಸಾಲ ಕೊಟ್ಟು ಬಡ್ಡಿಗೆ ಬಡ್ಡಿ ಬೆಳೆಸಿ ಅವರ ಜಮೀನು ಕಿತ್ತುಕೊಂಡವರಿದ್ದಾರೆ. ಬಡ್ಡಿ ಕಾಸಿಗೆ ಜೀವಮಾನವೆಲ್ಲ ಜೀತ ಮಾಡಿಸಿದವರಿದ್ದಾರೆ. ಲೈಂಗಿಕ ಶೋಷಣೆಗಳೂ ನಡೆದಿವೆ. ನೋಡಿ, ನೋಡಿ ಸಾಕಾದ ಜನ, ಒಂದೊಮ್ಮೆ ಒಗ್ಗಟ್ಟಾಗಿ ಅವರ ಮನೆಗೆ ನುಗ್ಗಿ, ಚೆನ್ನಾಗಿ ಥಳಿಸಿ,ಬಹಿಷ್ಕಾರವನ್ನೂ ಹಾಕಿಬಿಡುತ್ತಾರೆ. ಅವರ ದುರಹಂಕಾರ, ದರ್ಪಗಳನ್ನ ಮಟ್ಟ ಹಾಕಿಬಿಡುತ್ತಾರೆ.ಹಲವು ಊರುಗಳಲ್ಲಿ ನಡೆದ ರೋಚಕ ಕಥೆ ಇವು.
ಹಾಗೆಂದು ಎಲ್ಲ ಗೌಡರೂ ಕೆಟ್ಟವರಾಗೇ ಇರಲಿಲ್ಲ. ಊರ ಹಿತ ಬಯಸಿದವರು, ಮುಗ್ದ ಜನರಿಗೆ ತಿಳುವಳಿಕೆ ಹೇಳಿದವರು. ಊರ ಸೇವೆಯನ್ನ ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ಮಾಡಿದವರೂ ಇದ್ದರು. ಒಂದೂರಲ್ಲ, ಸುತ್ತಲ ಹತ್ತಾರು ಊರುಗಳ ಬಗೆಹರಿಯದ ಸಮಸ್ಯೆಗಳಿಗೆ. “ಇದಪ್ಪ ನ್ಯಾಯ” ಅನಿಸುವಂತ ತೀರ್ಪು ಕೊಡುತ್ತಿದ್ದವರು. ಎರಡೂ ಕೆಟಗರಿಯವರಿದ್ದರು ಆದರೆ ಅವರೂ ಉಳಿಯಲಿಲ್ಲ , ಇವರೂ ಉಳಿಯಲಿಲ್ಲ. ಜನಕ್ಕೂ ಜಾಗೃತಿ ಬಂದಿತ್ತು. ಸರಕಾರವೂ ಕೈ ಹಾಕಿತ್ತು. ಒಟ್ಟಿನಲಿ ಈಗೇನಿದ್ದರೂ ಸರಕಾರೀ ಆಡಳಿತ. ಪ್ರಜಾರಾಜ್ಯ. ಈಗ್ಯಾರೂ ಯಾರ ಮಾತನ್ನೂ ಕೇಳುವುದಿಲ್ಲ. ತಮ್ಮ ತಮ್ಮ ಮನೆಗೆ ತಾವೇ ಯಜಮಾನರು . ಆಗಬಾರದೇಕೆ? ಆಗಬೇಕಾದ್ದು ಹೀಗೇ..
ಆಚೆ ಬೀದಿಯ ಸತೀಶ ಈಚೆಗಷ್ಟೆ 50 ಲಕ್ಷ ಖರ್ಚು ಮಾಡಿ ಮನೆ ಕಟ್ಟಿದಾನೆ. 60 ಎಕರೆ ಜಮೀನಿನ ಒಡೆಯ. ಕಾರಿದೆ. ಹೆಂಡತಿಯೂ ಕೋಟಿ ಆಸ್ತಿವಂತೆ. ಮುದ್ದಾದ ಮಗುವಾಗಿದೆ ಈಗ. “ಇದೇನೋ ಸತೀಶ, ಆ ಮಗುಗೊಂದ್ ಚೆನಾಗಿರೋ ಆಟದ್ ಸಾಮಾನ್ ತಂದ್ಕೊಡಬಾರದ? ನೋಡು ನನ್ ಮಗನ ಟ್ರೈನ್ ಗೋಸ್ಕರ ಲ್ಲಿಗ್ ಓಡ್ಕೊಂಡ್ ಬರತ್ತೆ” ಅಂದೆ. “ಇದಕ್ಕೆಷ್ಟು? ಐನೂರಾ? ನಾನು ನನ್ ಮಗನಿಗೆ ಸಾವಿರ ರೂಪಾಯ್ದೆ ತಂದ್ಕೊಡ್ತೀನಿ. ಒಂದಿನಕ್ ಡಮಾರ್” ಅಂದ. “ಮುರೀತಾನಾ?” ಕೇಳಿದೆ. “ಅವನಲ್ಲ, ಅಕ್ಕ ಪಕ್ಕದ ಮನೇವು. ಒಂದ್ 20- 25 ಐಕ್ಳು ಸೇರ್ಕತ್ತವೆ. ಹಟ್ಟಿ ದೊಡ್ಡದಾಗದೆ ಅಂತ. ಬರಬೇಡಿ ಅನ್ನಕಾದ್ದಾ? ಆಡಬೇಡಿ ಅನ್ನಕಾದ್ದ? ಅಂದು ಈ ಊರ್ಲಿ ಬದುಕಕಾದ್ದ? ಒಂದ್ ಆಟದ್ ಸಮಾನ್ಗ ಎಷ್ಟ ಮಾತಾಡ್ತನೆ. ಇವನ್ ಕೂಸೇನ್ ಚಿನ್ನದ್ದ? ಅದಾ, ಇದಾ ಅಂತ ನೋರೆಂಟ್ ಮಾತಾಡ್ತರೆ. ಅದ್ ಅನ್ನಿಸ್ಕಳದೂ ಬ್ಯಾಡ. ತರದೂ ಬ್ಯಾಡ. ಖಾಲಿ ಡಬ್ಗಳ್ ತಕಂಡ್ ಕುಟ್ಕಳ್ಳಿ, ಎಂಗಾದ್ರೂ ಆಡ್ಕಳ್ಳಿ” ಅಂದ. ಇಂಟರೆಸ್ಟಿಂಗ್…ನಮ್ಮ ಕಾಸು, ನಮ್ಮ ಮನೆ, ನಮ್ಮ ಮಗು , ನಮ್ಮ ದರ್ಬಾರು ಅಂತೆಲ್ಲ ಅನ್ನುವಂಗಿಲ್ಲ ಇಲ್ಲಿ. ಬಡವನಾಗ್ಲೀ ಸಾಹುಕಾರನಾಗ್ಲೀ ಎಲ್ಲಾ ಒಂದೇ. ಹೆಚ್ಚು ಕಮ್ಮಿ ನಡ್ಕೊಂಡ್ರೆ ಊರ “ನಾಲಗಮ್ಮನಿಗೆ” ಬಲಿ. ಮನೆ ಮನೆ ಮಾತು.
ಇಲ್ಲಿ ಎಲ್ಲರೂ ಅದೇ ಎಚ್ಚರಿಕೆಯಲೇ ನಡೆದುಕೊಳ್ಳಬೇಕು. ಈ ಊರಿನಿಂದ ಓದಿ ದೊಡ್ಡ ಸಾಫ್ಟ್ವೇರ್ ಕಂಪನಿ ಸಿಇಓ ಆಗಿರಲಿ, ಡಿಸಿಯೇ ಆಗಿರಲಿ, ಎಂತದೇ ಆಗಿರಲಿ, ಊರಿನ ಕೂಲಿಗೆ ಹೋಗೋ ಹಿರಿಯನನ್ನೂ ಅಣ್ಣ, ಅಪ್ಪ ಅಂತ್ಲೇ ಮಾತಾಡಿಸಬೇಕು. ಇಲ್ಲದಿದ್ರೆ ಅಷ್ಟೆ. “ ಚೆಡ್ಡಿ ಸಿಕಾಕಂಡು, ಗೊಣ್ಣೆ ಸುರಿಸ್ಕಂಡು ನಮ್ ಮುಂದ್ ತಿರಗಾಡ್ತಿತ್ತು ಆ ಗಂಡು, ಈಗ್ ನೋಡು ಮಾರಾಯ ಇವನ ಜಂಬವಾ..” ಅಂದುಬಿಡ್ತಾರೆ. ಮರ್ಯಾದೆ ಪ್ರಶ್ನೆ. ಹೇ.. ಎಷ್ಟು ಚೆಂದದ ಆಟಿಟ್ಯೂಡು.ಈ ಊರಲಿ.ಒಳ್ಳೇದಪ್ಪ.” ಅಂದುಕೊಂಡಿರಾ? ಒಳ್ಳೆಯದೇ ಹೌದು. ಈ ಒಳ್ಳೆಯದು ಕೂಡ ಮಿತಿಯಲಿದ್ದರೆ ಅದೆಷ್ಟು ಚೆಂದವಿರ್ತಿತ್ತು!!
ನಿನ್ನೆ ಸಂಜೆ ನಾನೂ ಮಗನೂ ಜಗಲೀಲಿ ಕೂತಿದ್ದೆವು. ಆಚೆಹಟ್ಟಿ ಜಗಲೀಲಿ ಕುಂತು ಒಬ್ಬ ಬೀಡಿ ಹಚ್ಚಿದ್ದ. “ಬೀಡಿ ಸೇದಬೇಡಪ್ಪ, ನೋಡು ನನ್ ಮಗ ನೋಡ್ತಾ ಇದಾನೆ. ಅವನ ಮುಂದೆ ಅಂತಲ್ಲ, ನಿಮ್ಮನೆ ಮಕ್ಕಳ ಮುಂದೇನೂ ಹಚ್ಕೋಬೇಡ. ನೀವ್ ಕಲ್ತಿದ್ದನ್ನೇ ಮುಂದ್ಲವರೂ ಕಲೀಬೇಕಾ?” ಅಂದೆ. ಅವನು “ಆಯ್ತು ಬುಡಿ, ಆಯ್ತು ಬುಡಿ” ಅಂತ ಬೀಡಿ ಬೀದಿಗೆಸೆದ. ನಮ್ಮಪ್ಪಾಮ್ಮ ಕೂಗಿಕೊಂಡ್ರು ಒಳಗೆ ಬಂದವಳಿಗೆ ಸಹಸ್ರನಾಮ. “ಅವನಿಷ್ಟ ಅವನೇನಾದ್ರೂ ಮಾಡ್ಕೊಳ್ಳಿ ನೀನದೆಲ್ಲ ಹೇಳಬೇಡ. ನಿನಗ್ ಆಗಲಿಲ್ವ? ಒಳಗ್ ಎದ್ ಬಾ.” ಅಂದ್ರು ಅಮ್ಮ. “ಅಯ್ಯೋ..ಸಿವನೆ. ನಾನೆನು ಆಡಬಾರದ ಮಾತಾಡಿದೆ?” ಕೇಳಿದೆ. “ಯಾವನೋ ಒಳ್ಳೆ ಮನ್ಷ,ಆಯ್ತು ಅಂತ ಸುಮ್ಮನಾದ. ಇನ್ಯಾವನೋ ತಲ್ಕೆಟ್ಟೋನಾಗಿದ್ರೆ? ನಿನಗೇನ್ ಓಗಮ್ಮ. ನಿಮ್ಮಟ್ಟಿ ಜಗಲಿ ಮೇಲ್ ಸೇದಕ್ ಬಂದಿದ್ನಾ ಅಂದಿದ್ರೆ? ನಿನ್ ಬೆಂಗಳೂರ್ ಬುದ್ದಿ ಇಲ್ ತೋರಿಸಬೇಡ. ಇಲ್ಲೆಂಗಿರ್ಬೇಕೋ ಅಂಗಿರು” ಅಂದ್ರು. ಇದ್ಯಾಕೋ ಸ್ವಲ್ಪ ಜಾಸ್ತಿಯಾಗ್ಲಿಲ್ವ? ಅಂತ ಮನಸಲ್ಲಿ ಬೈಕೊಂಡ್ ಸುಮ್ಮನ್ ಕೂತೆ. ಕೊನೆಗೂ ನಾನು ಮಾಡಿದ ಮಹಾಪರಾಧ ನನಗರ್ಥವಾಗಲೇ ಇಲ್ಲ.
“ಎಂಗಾರೂ ಮಾಡಿ ಒಂದ್ ಗಂಟೆ ಮಟ್ಟಗ್ ಕಳಿಸಿಕೊಡಿ.” ಆಕೆ ಡಾಕ್ಟರ ಮುಂದೆ ಹೆ ಅಂಗಲಾಚುತ್ತಿದ್ದಳು. “ನೋಡಮ್ಮ, ಆಪರೇಷನ್ ನಾಳೆ ಇದೆ. ಕಷ್ಟವಾಗತ್ತೆ” ಅಂದರವರು. “ಈಗ್ ಓಗದೇ ಹೋದ್ರ ನಾವ್ ಇದ್ದೂ ಸತ್ತಂಗ್ ಆಗೋಯ್ತದ. ಏನಾರ ಮಾಡಿ, ಕಾರ್ ಮಾಡ್ಕಂಡ್ ಓಗಿದ್ ಬೇಗ ಬಂದ್ಬುಡ್ತೀವಿ” ಅಂತ ಅಕ್ಷರಶಃ ಡಾಕ್ಟರ ಕಾಲು ಹಿಡಿದಳು. ಅವರು “ಆಯ್ತಮ್ಮ , ಹುಷಾರಾಗ್ ಹೋಗ್ ಬನ್ನಿ. ಜೋಪಾನ.ಬೇಗ ಬನ್ನಿ” ಅಂದು ಹೋದರು. “ಯಾಕ್ ಹೋಗ್ಬೇಕು. ಅಂತ ಅರ್ಜೆಂಟ್ ಕೆಲಸವೇನು?” ಕೇಳಿದಳು ನರ್ಸ್ “ ಅಯ್ಯೋ ಇವರ ತಮ್ಮ ಸತ್ತೋಗನ. ಅವರ ಮೊಖ ನೋಡಕ್ಕೋಗಬೇಕು. ಎಣ ಮಡಿಕಂಡ್ ಫೋನ್ ಮೇಲ್ ಫೋನ್ ಮಾಡ್ತಾ ಅವರ” ಅಂದಳು. “ಹೋಗದಿದ್ರೇನಾಗತ್ತಮ್ಮ, ಇವರೇ ಪೇಷೆಂಟ್ ಅಲ್ಲವಾ? ಬರದಿಕ್ಕೆ ಆಗದಿಲ್ಲ ಅಂತ ಹೇಳಿ” ಕೇರಳದ ನರ್ಸು ಹೇಳಿದಳು. “ಅಯ್ಯೋ ಅಂಗು ಉಂಟವ್ವ? ಬೇಕು ಅಂತ್ಲೇ ಬರ್ನಿಲ್ಲ. ಸತ್ತವರ ಮುಖ ಪುನಃ ಸಿಕ್ತಿತ್ತ” ಅಂತ ಸಾಯೋಗಂಟ ಆಡ್ಕತ್ತರ, ನಮ್ಮೂರು ನಂಜನಗೂಡಿಂದ ಆಚೆ. ಹೊಳೆ ದಾಟ್ಕಂಡ್ ಕರ್ಕಂಡ್ ಹೋಗ್ಬೇಕು. ಏನ್ಮಾಡಕಾದ್ದು” ಅಂತ ಗಂಡನ್ನೂ ಕರ್ಕಂಡ್ ಹೊಂಟೇ ಬಿಟ್ಟಳು. ದಾರೀಲೆ ಅವನ ಜೀವ ಗೊಟಕ್ ಅಂದ್ರೂ ಪರ್ವಾಗಿಲ್ಲ. ಒಟ್ಟಿನಲಿ ಹೋಗಬೇಕು. ಪ್ರೀತಿಗಲ್ಲ ಭಯಕ್ಕೆ, ಆಡಿಕೊಳ್ಳುವ “ನಾಲಗಮ್ಮ”ನ ಭಯಕ್ಕೆ. ಆ ಊರಲ್ ತಲೆ ಇರೋ ಒಬ್ರೂ ಇಲ್ವ? ಇರಲಿಕ್ಕಿಲ್ಲ. ಇದ್ದರೂ ತಲೆಹಾಕುವಂತಿಲ್ಲ.
ಶಿಕ್ಷಣ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದ ಅವರು ಗೃಹಪ್ರವೇಶಕ್ಕೆ ಊರವರನ್ನೆಲ್ಲ ಕರೆದರೆ, ನಮಗೆ ಇಸ್ಪೀಟು ಆಡಲು ಜಾಗ ಕೊಡಲಿಲ್ಲ , ಅವಮಾನವಾಯಿತು ಅಂತ ಊರಿಗೂರೇ ಊಟ ಮಾಡದೇ ಎದ್ದು ಬಂದು ಬಿಡ್ತಾರೆ. ತಿಥಿ ಮನೇಲಿ. “ಆ ಗೊನೆ ಇನ್ನೂ ಕಾಯಿ ಹಣ್ಣಾಗಿಲ್ಲ. ಅಲ್ಲಿ ಬೇರೆದಿದೆ ನೋಡಿ” ಅಂದದ್ದೇ ದೊಡ್ಡದಾಗಿ “ಓಹೋ, ನಾವೇನು ಬಾಳೆಹಣ್ಣು ಕಾಣದೇ ಬಂದಿದ್ವಾ?” ಅಂತ ತಿಥಿ ಕಾರ್ಯಕ್ಕೆ ಒಬ್ಬರೂ ಬರಲ್ಲ. ಮಾಡಿದ ಅಡುಗೆ ತಿಪ್ಪೆ ಪಾಲು ಮಾಡುತ್ತಾರೆ.
ಬಿಸಿಲಲಿ ದಣಿದು ರಸ್ತೇಲಿ ಬಿದ್ದುಬಿಟ್ಟಿದಾರೆ, ವಯಸು 50 ಮೀರಿದೆ. ಒಬ್ಬಂಟಿ ಹೆಂಗಸು. “ನಿಮ್ಮ ಮಕ್ಕಳು ಬಾಂಬೆ, ಇಂಗ್ಲೇಂಡ್ ಅಂತ ಇದಾರೆ ನೀವ್ಯಾಕೆ ಈ ತೋಟಕ್ಕಾಗಿ ಜೀವ ಬಿಡ್ತೀರಿ?” “ ಅಯ್ಯೋ ಆಡ್ಕತರೆ ಕಣವ್ವ , ಈ ತ್ವಾಟ ಮಾಡಕೆ ಮೇಷ್ಟರು ಎಷ್ಟ್ ಕಷ್ಟಪಟ್ರು ಮಕ್ಕಳು ಈ ಗತಿ ಮಾಡಿದ್ರು ಅಂತಾರೆ. ಅದಕ್ ಸಲುವಾಗ್ ಹೊಡೆದಾಡ್ತಿನಿ. ನಾನಿರೋಗಂಟ , ಆಮೇಲ್ ಮಕ್ಕಳು ಏನಾರೂ ಮಾಡ್ಲಿ” ಅಂದರು, ಒಟ್ಟಿನಲಿ ಊರವರ ಮೆಚ್ಚಿಸುವ ಸಲುವಾಗೇ ಇಲ್ಲಿ ಎಲ್ಲ. ನಮಗಾಗಿ ಏನೇನೂ ಇಲ್ಲ. ಸಿಟಿಯ ಬದುಕಲಿ ಏನಿದೆ? ಎಲ್ಲರಿಗೂ ಅದೇ ಕರೆಂಟ್ ಬಿಲ್ಲು, ಲೈಟ್ ಬಿಲ್ಲು ಹೋಟೆಲು ರಸ್ತೆ. ಇಲ್ಲಿ ಹಾಗಲ್ಲ. ಹಳ್ಳಿ ಬದುಕು ಸಿನೆಮಾದಷ್ಟು ಸುಲಭವಲ್ಲ.
ಈ ಇದೇ ಜನ, ಕೂಲಿನಾಲಿ ಮಾಡೋನೊಬ್ಬ, ಇದ್ದ ಜಮೀನು ಮಾರಿ ಗ್ರ್ಯಾಂಡ್ ಆಗಿ ಮದುವೆ ಮಾಡಿದರೆ, ಹೋಗಿ ಭರ್ಜರಿಯಾಗಿ ಉಂಡು ಬರುತ್ತಾರೆಯೇ ಹೊರತು. “ಇದ್ದಷ್ಟಕ್ಕೆ ಸರಳವಾಗಿ ಮಾಡು , ಜಮೀನು ಕಳಕೊಂಡರೆ ನಾವು ಮದುವೆಗೇ ಬರಲ್ಲ” ಅನ್ನುವುದಿಲ್ಲ. ಬರುವ ಒಂದೇ ಒಂದು ಬಸ್ಸಿನಲಿ ಒದ್ದಾಡಿಕೊಂಡು, ನೇತಾಡಿಕೊಂಡು ತಲೆಯ ಮಲ್ಲಿಗೆ ಹೂವು ಹರಿದು ಚಪ್ಪಲಿಯಡಿ ಬೀಳುವಷ್ಟು ರಶ್ಶಿನಲಿ ಊರ ಹೆಣ್ಣುಮಕ್ಕಳು ಓಡಾಡುತ್ತಿದ್ದರೆ, ಸುಮ್ಮನೆ ಕಟ್ಟೆಗಳಲಿ ನೋಡುತ್ತಾ ಕೂರುವ ಮಂದಿ ಎಂದೂ ಒಂದಾಗುವುದಿಲ್ಲ. ಸ್ಕೂಲಿನ ಕಾಂಪೌಂಡು ಹಾರಿ ಕುಡಿದು ಇಸ್ಪೀಟು ಆಡುವವರ ಹಿಡಿಯಲು, ಹಾಲಿನ ಡೈರಿ ಮುಂದೆ ಉಚ್ಚೆ ಹುಯ್ಯುವವರ ತಡೆಯಲು ಯಾರೂ ಕೈ ಕೈ ಜೋಡಿಸುವುದಿಲ್ಲ. ಊರವರೆಲ್ಲ ಸೇರಿ ಮಾಡುವ “ಗ್ರಾಮದೇವತೆ ಹಬ್ಬ” ಪ್ರತಿವರ್ಷ ನಡೆಯುವುದಿಲ್ಲ. ಎಲ್ಲ ಸೇರಿ ಮಾತಾಡಿದರೆ ಜಗಳದಲಿ ಕೊನೆಯಾಗುತ್ತದೆ. ಕಡೆಗೆ ಮೂರೋ ನಾಕೋ ವರ್ಷಕ್ಕೊಮ್ಮೆ ಆಗುತ್ತದೆ. “ಒಗ್ಗಟ್ಟು” ಒಂದಕ್ಕೆ ಉಂಟು, ಮತ್ತೊಂದಕ್ಕೆ ಇಲ್ಲ.
ಇವರಿಗೆಲ್ಲ, ಯಾವುದು ಸರಿ ಯಾವುದು ತಪ್ಪು? ಯಾವುದು ನ್ಯಾಯ, ಯಾವುದು ಅನ್ಯಾಯ? ಯಾವುದಕ್ಕೆ ಒಂದಾಗಬೇಕು ಯಾವುದಕ್ಕಾಗಬಾರದು ಅಂತೆಲ್ಲ ಹೇಳುವವರು ಯಾರು? ಯಾರಿಗೆ ಯಾರೂ ಕಡಿಮೆ ಇಲ್ಲ ಇಲ್ಲಿ. ಎಲ್ಲರೂ ಒಬ್ಬರ ತಲೆಗೊಬ್ಬರು ಬೂದಿ ಸುರಿವವರೇ, ಒಬ್ಬರ ಜುಟ್ಟಿಗೊಬ್ಬರು ಬೇಲದಕಾಯಿ ಕಟ್ಟುವವರೇ. ಈ ಬೆಕ್ಕುಗಳ ಹಿಡಿದು ಗಂಟೆ ಕಟ್ಟುವವರು ಯಾರು? ಇರಬೇಕಿತ್ತು.!! ಯಾರಾದರೊಬ್ಬ ಯಜಮಾನ, ಗೌಡ, ಮುಖ್ಯಸ್ಥ ಇರಬೇಕಿತ್ತು.! ಸೌಮ್ಯದಲೋ, ಘರ್ಜಿಸಿಯೋ, ಕುಂಡೆ ಮೇಲೆ ಒದ್ದೋ ಬುದ್ದಿ ಹೇಳುವವನೊಬ್ಬ ಬೇಕಿತ್ತು. “ಯಜಮಾನನಿಲ್ಲದ ಮನೆ ಗಿಜಿ ಗಿಜಿ” ಅಂತೊಂದು ಗಾದೆ. ಯಜಮಾನನಿಲ್ಲದ ಊರು, ಜಿಲ್ಲೆ, ರಾಜ್ಯ, ದೇಶ ಎಲ್ಲವೂ ಹಾಗೆಯೇ ತಾನೆ?
ಊರು , ದೇಶ, ಮಾತ್ರವಲ್ಲ, ಅದರೊಳಗಿನ ಬೇರೆ ಬೇರೆ ಕ್ಷೇತ್ರದ ವ್ಯಾಪ್ತಿಯಲೂ ಗೌಡಿಕೆ ಗುದ್ದಾಟ ನಿರಂತರವಾಗಿ ನಡಕೊಂಡು ಬರುತ್ತಿದೆ. ಸಾಹಿತ್ಯ , ಸಂಗೀತ, ರಾಜಕೀಯ, ಸಿದ್ದಾಂತ, ಪತ್ರಿಕೋದ್ಯಮ.ಎಲ್ಲ ಕಡೆ “ಗೌಡಿಕೆ”ಯದೇ ಗದ್ದಲ. ಶ್ರೀಮಂತ ರಾಷ್ಟ್ರಗಳು ವಿಶ್ವದ “ಗೌಡಿಕೆ”ಗಾಗಿ ಗುದ್ದಾಡುತ್ತವೆ. ನಾ ಕೊಡೆ, ನೀ ಬಿಡೆ ಜಗಳ ವಿಶ್ವ ಇತಿಹಾಸದಲಿ ಅನೂಚಾನ.
ಮೊದಲೆಲ್ಲ ಒಂದೆರಡು ನ್ಯೂಸ್ ಚಾನಲ್ಗಳಿತ್ತು ಈಗ ಸಂಖ್ಯೆಯೇ ಭಯ ಹುಟ್ಟಿಸುತ್ತದೆ. ಹೊಸ ಚಾನೆಲ್ ಒಂದರ ಉದ್ಘಾಟನೆಗೆ ಬಂದ, ಅದಾಗಲೇ ಇದ್ದ ಚಾನೆಲಿನ ಮುಖ್ಯಸ್ಥರೊಬ್ಬರು ಹೇಳಿದ್ದರು “ಚಾನೆಲ್ಗಳ ಸಂಖ್ಯೆ ಹೆಚ್ಚಿದಂತೆ ಹೆಚ್ಚು ಹೆಚ್ಚು ಸತ್ಯಗಳು ಹೊರಬರುತ್ತವೆ” ಕರೆಕ್ಟ್. ಆದರೆ ಯಾವುದು ಸತ್ಯ ಅನ್ನುವ ಗೊಂದಲವನ್ನೂ ಹುಟ್ಟಿಸುತ್ತವೆ. ಯಾರೋ ಒಬ್ಬರು ಹೇಳುವ ಸತ್ಯ ನಂಬುವುದಕ್ಕಿಂತ ಗೊಂದಲವೇ ವಾಸಿಯಾ? ಒಬ್ಬ ಯಜಮಾನನಿಗಿಂತ ಊರೆಲ್ಲ ಯಜಮಾನರಾಗುವುದೇ ಒಳ್ಳೆಯದಾ? ಯಜಮಾನರುಗಳ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಿಬಿಟ್ಟರೆ ಅದು ರಾಜ್ಯಶಾಸ್ರ್ತದ ಭಾಷೇಲಿ “ಅರಾಜಕತೆ” ತಾನೇ?
ಹೋಗ್ಲಿ ಬಿಡಿ, ಸ್ಥಳೀಯ ಸುದ್ದಿಗೆ ಬನ್ನಿ, ಹಳೆಯ ಪದ್ದತಿಯೇ ಸರಿ, ಯಾರಿಗಾದರೂ ಗೌಡಿಕೆ ಕೊಡೋಣ ಅಂದರೆ ಯಾರಿಗೆ? ಸಿನೆಮಾದಲ್ಲಾದರೆ ಒಳ್ಳೆಯ ಗೌಡನ ಮಕ್ಕಳು ಒಳ್ಳೆಯವರೇ ಆಗಿರ್ತಾರೆ. ನಿಜದಲ್ಲಿ ಹಾಗಾಗಬೇಕಲ್ಲ? ಆದರೂ ಉಳಿದವರು ಒಪ್ಪಬೇಕಲ್ಲ. ಹಳೆಯ ದಬ್ಬಾಳಿಕೆ ಈಗ ನಡೆಯಲ್ಲ. ತುಂಬ ದೂರ ಕ್ರಮಿಸಿದ ಸ್ವಾತಂತ್ರ್ಯದ ದಾರಿಯಲಿ ಮತ್ತೆ ಹಿಂದೆ ಹೋಗುವುದು ಕಷ್ಟ. ಅದಕ್ಕೇ ಅಲ್ವ ರಾಜತ್ವ ಹೋಗಿ ಪ್ರಜಾಪ್ರಭುತ್ವ ಬಂದದ್ದು? ನಮಗೂ ಎಲೆಕ್ಷನ್ ಇದೆಯಲ್ಲ? ಗ್ರಾಮಪಂಚಾಯಿತಿಗೆ. ಓಟು ಹಾಕಿ, ನಿಮ್ಮ ನಿಮ್ಮ ಗೌಡರ ನೀವೇ ಆರಿಸಿಕೊಳ್ಳಿ. ಆರಿಸಿಕೊಂಡೆವು ನಿಜ. ಆದರಿವರು ಊರ ಗೌಡರಲ್ಲ. ರಾಜಕೀಯ ಮುಖಂಡರು. ಪಕ್ಷದ ಕಾರ್ಯಕರ್ತರು, ಮುಂದಲ ದೊಡ್ಡ ಕುರ್ಚಿಯ ಆಕಾಂಕ್ಷಿಗಳು. ಅಷ್ಟೆ. ಅವರೆಲ್ಲ ಇರೋದು , ಲೈಟ್ ಕಂಬಕ್ಕೆ, ರಸ್ತೆಗೆ ನೀರಿಗೆ. ಊರಿನ “ಸತ್ಯ ಮತ್ತು ನ್ಯಾಯ”ಕ್ಕೆ ಅಲ್ಲ. ಅವರ ಸತ್ಯ ಲೈಟ್ ಕಂಬ ಹತ್ತಿದರೆ ನಮ್ಮ ಪುಣ್ಯ.
ಉದಾರಿಯಾದ, ಭ್ರಷ್ಟನಲ್ಲದ, ಪ್ರಾಮಾಣಿಕನಾದ ಗೌಡ (ಯಜಮಾನ) ಇರಬಹುದೇ? ಬರಬಹುದೇ? ಬಂದರೂ ಅವರ ಮಾತು ಕೇಳ್ತಾರೆಯೇ?. ಗಾಂಧೀಜಿಯೇ ಬಂದು “ನಿಮ್ಮೂರ “ಗೌಡಿಕೆ” ನಾನು ತಗೋತೀನ್ರಯ್ಯ ಆಗಬಹುದಾ?”ಅಂದರೂ ಇವರು ಕೊಡೋದು ಡೌಟೇ. “ಯಾರ್ ಸೋಮಿ ನೀವು ಮುದುಕಪ್ಪನೋರೆ?” ಅಂತ ಕೇಳದಿದ್ರೆ ಸಾಕು ಸಧ್ಯ.
ಊರೂರ ಮೇಲೆ ಕೇಸುಗಳು ಹೆಚ್ಚುತಿವೆ. ಫೈಲುಗಳ ಮೇಲೆ ಫೈಲುಗಳು ಬೀಳುತಿವೆ. 10 20, 30 ವರುಷಗಳ ಹಳೆ ಫೈಲುಗಳು ಧೂಳು ಹಿಡಿಯುತ್ತಲೇ ಇವೆ. ಕೋರ್ಟಿನ ಬಿಲ್ಡಿಂಗು ಸಾಲದು,ದೊಡ್ಡದು ಮಾಡಿ. ಜಡ್ಜುಗಳು ಸಾಲರು. ಅಪಾಯಿಂಟ್ ಮಾಡಿ. ಕೇಸುಗಳು ರಾಶಿ ಬಿದ್ದಿವೆ ,ಫಾಸ್ಟ್ ಟ್ರ್ಯಾಕ್ ಕೋರ್ಟುಗಳ ಸಂಖ್ಯೆ ಹೆಚ್ಚಿಸಿ, ಕೂಗುಗಳು ಕೇಳುತ್ತಲೇ ಇವೆ. “ಅಂತರ್ರಾಷ್ಟ್ರೀಯ ನ್ಯಾಯಾಲಯ”ವೂ ಉಂಟು. ಸಾದ್ಯವಾದಷ್ಟೂ ನಿಮ್ಮ ನಿಮ್ಮ ತನುವ ನೀವೇ ಸಂತೈಸಿಕೊಳ್ಳಿ, ಅಲೆದು ಚಪ್ಪಲಿ ಸವೆಸಬೇಡಿ.ನ್ಯಾಯತೀರ್ಮಾನಗಳ ವಿಕೇಂದ್ರೀಕರಣವಾಗಬೇಕು. ಎಂಬ ಕೂಗು ಕೂಡ ಹಳೆಯದೇ.
ಸರಕಾರೀ ನ್ಯಾಯಾಲಯಕ್ಕೆ ಸಾಕ್ಷಿ, ಆಧಾರ,ಪುಸ್ತಕದ ನಿಯಮ ಮುಖ್ಯ.ಅವರ ಕಾನ್ಷಿಯಸ್ ಅದು. ಪಂಚಾಯಿತಿ ಆಫಿಸಿಗೆ ಕೊಟ್ಟರೆ, ಅಂವ ಜಾತಿ, ಪಂಗಡ, ಅಥವ ಮುಂದಿನ “ಎಲೆಕ್ಷನ್ ಕಾನ್ಷಿಯಸ್” ಆಗಿರ್ತಾನೆ. ಕಣ್ಣು ಮುಚ್ಚಿ ಒಳಗಿನ ಕಾನ್ಷಿಯಸ್ ಏನು ಹೇಳತ್ತೆ ಕೇಳಿ ಅದರಂತೆ ನ್ಯಾಯದ ತಕ್ಕಡಿ ತೂಗುವವರು ಯಾರು? ಎಲ್ಲಿದ್ದಾರೆ? ಎಷ್ಟಿದ್ದಾರೆ? ಬಾವುಟ ಹಿಡಿಯದೆಯೇ ತೂಕ ಸರಿ ಇದೆ ಎನ್ನುವವರು ಯಾರಿದ್ದಾರೆ. ?
ಎಷ್ಟೋ ವರ್ಷಗಳಿಂದ “ನಾಲಗಮ್ಮ”ನ ಭಯದಲೇ ನಮ್ಮಪ್ಪ ಅಮ್ಮ ಬದುಕಿದ್ದಾರೆ. ಈಗಲೂ ಬದುಕಿತ್ತಿದ್ದಾರೆ. ನನ್ನನ್ನೂ ಆಗಾಗ ಹೆದರಿಸುತ್ತಲೇ ಬಂದಿದ್ದಾರೆ. ಹೇಳಿ, ಹೇಳಿ, ಈ ಭಯವು ನ್ಯಾಯವೇ?



ಕುಸುಮ, ಬಹಳ ಚೆನ್ನಾಗಿ ಬರೆದಿದ್ದೇರಿ. “ನಾಲ್ಕು ಜನ” ಸರಿ ಎನ್ನಿಸುವಂತೆ ಬಾಳಬೇಕು ಎಂಬ ಹೆದರಿಕೆ ಇಂದ ಅದೆಷ್ಟು ಹೆಣ್ಣು ಮಕ್ಕಳು (ಅಥವ ಕುಟುಂಬ) ಸಹಿಸ ಬಾರದ್ದನ್ನೆಲ್ಲ ಸಹಿಸಿದೆ ಅಲ್ವ? ಈ “ನಾಲ್ಕು ಜನ” ಯಾರು ಅಂತ ಮಾತ್ರ ನನಗೆ ಇನ್ನು ಗೊತ್ತಾಗಿಲ್ಲ.
ಇದು ಹಳ್ಳಿಯ ಪರಿಸ್ಥಿತಿ ಅಂದರೆ ನನಗೇನೋ ಒಪ್ಪಿಗೆ ಆಗ್ತಿಲ್ಲ. ಸಿಟಿಯಲ್ಲು ಸಹ, ಮದುವೆ , ಹಬ್ಬ ಅಂತೆಲ್ಲ ಜನ ಸಂದಣಿ ಇರುವ ಕಡೆ ಆಡಿಕೊಳ್ಳುವ ಭಯ ಇದ್ದೆ ಇರುತ್ತದೆ…
ಅದರ ಜೊತೆ, ಮನೆಗೆ ಬಂದ ಜನ ಇದ್ದದ್ದರ ಜೊತೆಗೆ ಇನ್ನಷ್ಟು ಸೇರಿಸಿ ಈ ಆಡಿಕೊಲ್ಲುವುವವರ ಬಾಯಿಗೆ ಒಂದಷ್ಟು ಆಹಾರ ಕೊಡುವುದು ಸತ್ಯ ಅಲ್ಲವೇ? ಎಲ್ಲಿಗೆ ಹೋದರು ಸಹ ಈ ನಾಲಿಗಮ್ಮನ ಭಯ ವಂತೂ ಕಾಡುವುದು ಸತ್ಯ 🙂
ನಾಲಗೆಮ್ಮ” ದೇವತೆಗಂಜಿಯೇ ಜನ ತಮ್ಮನ್ನು ತಾವು ತಮಗೋಸ್ಕರವಲ್ಲ, ಮಂದಿ ಮಾತಿಗೋಸ್ಕರ ಬದುಕೋದೇ ಆಗಿದೆ. ಈಗಂತೂ ಗೌಡಿಕೆ ಕಾಲ ಮುಗೀತು. ಇನ್ನೆನಿದ್ರು ಕೂಡಿಕೆ ಕಾಲ …. ಇಲ್ಲಾಂದ್ರೆ ಕಡಿದಾಕೋ ಕಾಲ …. ಅಷ್ಟೇ . good write up….madam
ಚಿಂತನೆಗೆ ಹಚ್ಚಿದೆ.
ಅತ್ಯಂತ ನೈಜವಾದ ಬರಹ. ವಸ್ತುಸ್ಥಿತಿಯನ್ನು ಇದ್ದಂತೆ ಹೇಳುವ ಅಪರೂಪದ ಬರಹವಿದು. ಎಲ್ಲರಿಗೂ ಹೆಚ್ಚು ಹೆಚ್ಚು ROI ಬೇಕು , ನನ್ನ ಆರು (‘R’) ಏರುತ್ತಿರಬೇಕು , ನನ್ನ ಕೆಲೆಸ (‘I’) ಕಮ್ಮಿಯಾಗುತ್ತಿರಬೇಕು ಎಂಬುವದೇ ಮೂಲ ಮಂತ್ರ -ಹಳ್ಳಿ ಯಾಗಲಿ ದಿಲ್ಲಿ ಯಾಗಲಿ ಜಗವೆಲ್ಲಾ ಒಂದೇ ಶಿವ.
satyasya satya…
ತುಂಬ ದೂರ ಕ್ರಮಿಸಿದ ಸ್ವಾತಂತ್ರ್ಯದ ದಾರಿಯಲಿ ಮತ್ತೆ ಹಿಂದೆ ಹೋಗುವುದು ಕಷ್ಟ. naanu modala baarige chikkavaliddaga hallige hogiddaga aa hudugiyannu kelidde … nimmuralli “GOWDA” idanna? panchayiti nadeyo arali mara thorsu endu ! adake avalu ” aa thara arali mara yavudu illa andidlu… aadare avala mane mundina bus bildanada arali mara mathra nanna igalu kadutte 🙂