
“ ಈ ಪಿಚ್ಚರ್ ತಗ್ಯಾ ಬಡ್ಡೈಕಳ್ಗ ಅಳ ಎಕ್ಕಡ ತಕ್ಕಂಡ್ ಒಡಬೇಕು ಮದ್ಲು.” ದೊಡ್ಡಭಾವ ಹತಾಶನಾಗಿ ಹೇಳಿದ. “ದೇಸ್ದಲ್ ಪಿಚ್ಚರ್ ನೋಡ್ದವರೆಲ್ಲ ಇಂಗೇ ಮಾಡಿರಾ? ನಮ್ಮಟ್ಟಿ ಬೋಸುಡಿ ನ್ಯಾಯವಾಗಿರಬೇಕಾಗಿತ್ತು” ಇನ್ನೊಬ್ಬ ಭಾವ ಕೆಮ್ಮಿದ.ನೂರಾರು ಕಿಲೋಮೀಟರ್ ಸುತ್ತಿದ ಸುಸ್ತು, ಹಸಿದ ಹೊಟ್ಟೆ,ಕೈಜಾರಿ ಹೋಗ್ತಿರೋ ಮನೆಮರ್ಯಾದೆ, ಅವರ ಬಾಯಿಂದ ಇಂತಾ ಮಾತುಗಳನ್ನಾಡಿಸುತ್ತಿತ್ತು.”ನೋಡವ್ವ ಕುಸೈ ಯಾನ್ಯಾರು ವಸಿ ಬಾಯ್ಬುಡವ್ವ, ಮಾನಕ್ ಸಲವಾಗ್ ಬದುಕಿರವ್ರು ನಾವು, ಪ್ರಾಣ ಬುಟ್ಬುಡ್ತಿಂವಿ ಕವ್ವ, ಯೋಳು ಕುಸೈ” ಸೌಮ್ಯಳ ಚಿಕ್ಕಪ್ಪ ಅಂಗಲಾಚಿದ. ಗೌರಿ ಅಸಹಾಯಕಳಾಗಿ ಕಣ್ಣೀರು ಸುರಿಸುತ್ತಾ ನಿಂತಿದ್ದಳು.
ರಾಮಸಮುದ್ರದಲ್ಲೆ ಮಲ್ಲೇದೇವರದು ಪ್ರತಿಷ್ಟಿತ ಮನೆತನ, ಬಾಳಿ ಬದುಕಿದ ಮನೆ. ಮಹಾನ್ ಗುರುಭಕ್ತರು, ಹೋದ ಸಲ ಸ್ವಾಮ್ಗಳ ಜಯಂತಿ ಚಾಮರಾಜನಗರದಲ್ಲಿ ಅಷ್ಟು ಯಶಸ್ವಿಯಾಗಿ ನಡೀಬೇಕಾದರೆ, ಮಲ್ಲೇದೇವರು, ಅವರ ಅಳಿಯಂದರೇ ಕಾರಣ. ಮೂರು ಜನ ಹೆಣ್ಣುಮಕ್ಕಳು ಅವರಿಗೆ, ಮೊದಲ ಮಗಳನ್ನ ಸ್ವಂತ ತಂಗಿಯ ಮಗನಿಗೇ ಮಾಡಿದ್ದರು, ಎರಡನೆಯವರು ಮಾದಾಪುರದ ಪಟೇಲರ ಮಗ, ಇಬ್ಬರು ಬೀಗರ ಮನೆಯವರಿಗೂ ಮಠದ ಬಗ್ಗೆ ವಿಶೇಷ ಗೌರವ, ಮಠದ ಕೆಲಸಕ್ಕೆ, “ಮಹಾಸಭಾ” ದ ಸಭೆಗಳಿಗೆ, ಮಾವನಷ್ಟೇ ಶ್ರಧ್ದೆಯಿಂದ ಕೆಲಸ ಮಾಡ್ತಿದ್ದರು.ಇಂತಾ ಫ್ಯಾಮಿಲಿಯ ಕೊನೆಯ ಮಗಳು ಸೌಮ್ಯಾ ಯಾವನೊಂದಿಗೋ ಓಡಿಹೋಗಿದ್ದಳು. ಕಾಲೇಜಿನಿಂದ ರಾತ್ರಿಯಾದರೂ ಮಗಳು ಮನೆಗೆ ಬರದಿದ್ದದ್ದು ನೋಡಿ ಅನುಮಾನ ಬಂದು ಮನೆಮಂದಿಯೆಲ್ಲ ಹುಡುಕಾಟ ಶುರುಮಾಡಿದ್ದರು. ಬೆಳಗಾಗುವಷ್ಟರಲ್ಲಿ ಅವಳು ಎಲ್ಲೇ ಇದ್ರೂ ಹುಡುಕಿ, ಮನೆಸೇರಿಸಿ, ಮರ್ಯಾದೆ ಉಳಿಸಿಕೊಳ್ಳೋ ಸಲುವಾಗಿ 10-15 ಬೈಕುಗಳನ್ನ ತಗೊಂಡು ರಾತ್ರೋರಾತ್ರಿ ಕಾರ್ಯಾಚರಣೆ ಆರಂಭಿಸಿಬಿಟ್ಟಿದ್ದರು. ಎರಡೆರಡು ಟ್ಯಾಂಕ್ ಪೆಟ್ರೋಲು ಖಾಲಿಯಾದರೂ ಸೌಮ್ಯಾಳ ಹೆಜ್ಜೆ ಗುರುತು ಸಹ ಸಿಗಲಿಲ್ಲ.ಕಡೆಗೆ ಎರಡನೆ ಅಳಿಯ ಐಡಿಯಾ ಮಾಡಿದ, “ಗೊತ್ತುಗುರಿ ಇಲ್ದೆ ಸುತ್ತುದ್ರ ಎಲ್ ಸಿಕ್ಕಿರು ಅವ್ರು?ನಡರಿ ವಾಗವು, ಆ ಮಧುನಳ್ಳಿ ಪುಟ್ಸಾಮಿ ಮಗಳೂ ಇವ್ಳೂ ಬಾರೀ ಜೊತ. ಅವುಳುಗ್ ಗೊತ್ತಿರ್ಲೇಬೇಕು” ಅಂತ ನಿರ್ಧರಿಸಿಕೊಂಡರು. ಗಾಡಿಗಳು ರೊಂಯ್ ರೊಂಯ್ ಅಂತ ಪುಟ್ಸಾಮಿ ಮನೆ ಮುಂದೆ ಬಂದು ನಿಂತುಕೊಂಡಾಗ ಮಧ್ಯರಾತ್ರಿ 2 ಗಂಟೆ.
ನಿನ್ ಕೈ ಮುಗೀತೀವಿ, ಕಾಲ್ ಕಟ್ತೀವಿ ಅಂತ ಎಷ್ಟೇ ಕೇಳಿದರೂ ಗೌರಿಯದ್ದು ಒಂದೇ ಉತ್ತರ, ನಂಗೊತ್ತಿಲ್ಲ, ನಂಗೊತ್ತಿಲ್ಲ. “ಈಗ್ ಮರ್ಯಾದಿಯಿಂದ್ ಯೋಳಿಳ ಏನ ಕ್ಯೋಳು ಪುಟ್ಸಾಮಣ್ಣ, ಬಾಯಿಬುಡದೇ ಓದ್ರ ಕತ್ಯೇ ಬ್ಯಾರೆ ಆಯ್ತ.” ಪುಟ್ಸಾಮಿಯ ಕಿರೀತಮ್ಮ ರಮೇಶ ಗುಡುಗಿದ . ಪುಟ್ಸಾಮಿ ರೇವಣ್ಣ, ರಮೇಶ ಮೂವರೂ ಅಣ್ಣತಮ್ಮದೀರು ತಾಲೋಕ್ಲಿ ಹೆಸರಿರೋರೇ “ಸಭಾ”ದ ಮುಂದಾಳುಗಳೇ. ಬರ್ತಾ ಅವರಿಗೆ ಫೋನ್ ಮಾಡಿಕೊಂಡೇ ಬಂದಿದ್ರು ಸೌಮ್ಯಾ ಬಾವಂದಿರು. “ಮರ್ಯಾದಿ ಅವರದೋದ್ರೂ ಒಂದಿಯ ನಮ್ಮದೋದ್ರೂ ಒಂದಿಯೇ. ಜಾತಸ್ತನಾಗಿದ್ರ ಕರ್ಕಬಂದ್ ತಾಲೀನಾರ ಕಟ್ಸವು, ಬ್ಯಾರೆದಾದ್ರ ಯಾನ್ ಮಾಡದು? ಏನ್ ತಾಲೋಕ್ಲಿ ನಾವ್ ತಲ ಎತ್ಕಂಡ್ ತಿರಕಾಡಕಾದ್ದ?” ಪುಟ್ಸಾಮಿಯ ಎರಡನೆ ತಮ್ಮಪರಿಣಾಮದ ಲೆಕ್ಕ ಹಾಕಿದ. “ಯೋಳು ಕುಸೈ, ನಿಂಗೊತ್ತಿರದ್ ಯೋಳವ್ವ ಎದರ್ಕಬ್ಯಾಡ. ಅದ್ಯಾಕ್ ನಿನ್ನೇನ್ ಮಾಡಿವು ಕುಸೈ, ಇಂಗಿಂಗಾಯ್ತು ಅಂತ್ ಯೋಳುದ್ರ ಆ ಪಾಯ್ಗಳ್ಗೂ ನಿನ್ನಿಂದ ಒಳ್ಳೇದಾಯ್ತ” ಗೌರಿಯ ತಲೆಸವರಿದ. “ನನ್ನಾಣೆಯಾಗ್ಲೂ ಗೊತ್ತಿಲ್ಲ ಚಿಕ್ಕಪ್ಪ, ಅವಳೂ ನಾನೂ ಒಟ್ಗೆ ಬಂದು ಬಸ್ಟಾಂಡ್ಲಿ ನಿಂತಿದ್ದೋ, ನನ್ ಬಸ್ ಬಂತು ಹತ್ಕೊಂಡ್ ಬಂದೆ” ಮತ್ತೆ ಅಳುತ್ತಾ ನಿಂತಳು. “ಎಕ್ಕತ್ ಸೇರ್ಸಿ ನಾಕ್ ಬುಟ್ರ ನೀನೇ ಯೋಳ್ತಿದ್ದೈ” ರಮೇಶ ಮತ್ತೆ ಗುಡುಗಿದ. “ಇದೇನ ರಮೇಸ ನೀ ಆಡ ಮಾತು? ಅಂವ್ ಮಾಡುದ್ ಕೆಲ್ಸಕ್ಕ ಇವೇನ್ ಮಾಡಕಾದ್ದು, ಸರಿ ಬುಡು ನೀನುವೆ” ತಾಯಿ ಮಗಳ ದೈನೇಸಿ ಸ್ಥಿತಿ ನೋಡಲಾರದೇ, ಮೈದುನನ ಮಾತನ್ನೂ ಸಹಿಸಲಾಗದೇ ಆಡಿದರು. “ ಎಂಗಸ್ರು ಸುಮ್ಮನಿರಬೇಕು ಈಗ. ಇವತ್ತವರಗಾದ್ದು ನಾಳಗ್ ನಮಗ. ನೀವ್ ಸುಮ್ ನಿಂತ್ಕಳಿ” ಅತ್ತಿಗೆಗೆ ರೇಗಿದ ರಮೇಶ. “ಈಗ ನಮ್ ಸಲುವಾಗಿ ನೀವ್ಯಾಕ್ ಕಿತ್ತಾಡಿರಿ? ಅದೇನ ಗೊತ್ತಿರದ್ ಯೋಳ್ಬುಟ್ರ ಮುಗುದೇಓಯ್ತ್ತಲ್ಲ?” ಊಹ್ಞೂಂ.. ಯಾರೆಷ್ಟೇ ಕೇಳಿದರೂ, ಗೋಗರೆದರೂ, ಬೈದರೂ, ಅತ್ತುಕರೆದರೂ ಗೌರಿಯ ಉತ್ತರ ಮಾತ್ರ ಅದೊಂದೇ ಆಗಿತ್ತು.. “ನಂಗೇನೂ ಗೊತ್ತಿಲ್ಲ”
ನಿಜಕ್ಕೂ ಗೌರಿಗೆ ಏನೂ ಗೊತ್ತಿರಲಿಲ್ಲ. ಅವರೆಲ್ಲ ಹೋದಮೇಲೆ ಅಪ್ಪ,ಅಮ್ಮ ಕೇಳಿದಾಲೂ ಇದೇ ಹೇಳಿದ್ದಳು. ಬೆಳಗಿನ ಜಾವ ಐದುಗಂಟೆಗೆ ಮಲಗಿದರೂ ನಿದ್ದೆ ಹತ್ತಲಿಲ್ಲ. ಸೌಮ್ಯ ಯಾಕೆ ಹೀಗೆ ಮಾಡಿದ್ಲು? ಅಷ್ಟು ಕ್ಸೋಸ್ ಫ್ರೆಂಡ್ ಆಗಿದ್ದ ತನಗೂ ಒಂದೇ ಒಂದು ಮಾತೂ ಯಾಕೆ ಹೇಳಲಿಲ್ಲ? ಇಷ್ಟಕ್ಕೂ ಅವಳೀಗ ಹೋಗಿರೋದಾದ್ರೂ ಎಲ್ಲಿಗೆ? ಯಾರ ಜೊತೆಗೆ? ಯಾವ ಪ್ರಶ್ನೆಗೂ ಉತ್ತರವಿಲ್ಲ.

ಬೆಳಗಾಗುವ ಹೊತ್ತಿಗೆ ಮಲ್ಲೇದೇವರ ಅಟ್ಟಿ ಆಳುಗಳೇ ಗುಸು ಗುಸು ಅಂತಿದ್ದರು. ಮನೆ ಯಜಮಾನ್ತಿ ಹಾಸಿಗೆ ಹಿಡಿದಾಗಿತ್ತು. ಇಡೀ ಮನೆ ಸ್ಮಶಾನದಂತಿತ್ತು. ನಾಕು ದಿನ ಕಳೆದರೂ ಸದ್ದು ಸುದ್ದಿ ಇಲ್ಲದೇ ಹೋದಾಗ ಕಂಪ್ಲೇಂಟ್ ಕೊಡದೇ ದಾರಿ ಇಲ್ಲದಾಯ್ತು. ಇದೆಲ್ಲ ಆಗಿ ಒಂದು ತಿಂಗಳ ಹೊತ್ತಿಗೆ ಸ್ಟೇಷನ್ನಿನಿಂದ ಫೋನು ಬಂತು. “ನಿಮ್ಮ ಮಗಳು ಸಿಕ್ಕಿದಾಳೆ ಬನ್ನಿ”.
ಸೌಮ್ಯಾ , ಮಧುಸೂದನ ಅನ್ನೋ ಹುಡುಗನನ್ನ ಪ್ರೀತಿಸಿ, ಮನೇಲಿ ಹೇಳಿದರೆ ಈ ಮದುವೆ ಸಾಧ್ಯವೇ ಇಲ್ಲ ಅಂತ ಮನದಟ್ಟಾಗಿ ಓಡಿಹೋಗಿದ್ದಳು. ಇಬ್ಬರೂ ಒಂದು ದೇವಸ್ಥಾನದಲ್ಲಿ ಮದುವೆಯೂ ಆಗಿ, ತಮಿಳುನಾಡಿನ ಧರ್ಮಾಪುರಕ್ಕೆ ಹೋಗಿದ್ದರು. ಅಲ್ಲೇ ಒಂದು ಬಾಡಿಗೆ ಮನೆ ಹಿಡಿದು ಜೀವನಾನೂ ಶುರುಮಾಡಿದ್ರು. ಮನೆ ಓನರಿಗೆ ಯಾಕೋ ಅನುಮಾನವಾಗಿ, ಸೌಮ್ಯಾ, ಮಧುಸೂದನ ಇಬ್ಬರನ್ನೂ ಬೇರೆಬೇರೆಯಾಗಿ ಪ್ರಶ್ನೆ ಕೇಳಿ ವಾಸನೆ ಹಿಡಿದ. ಸ್ಟೇಷನ್ನಿಗೆ ತಿಳಿಸಿದ. ಕಾಣೆಯಾದ ಸುದ್ದಿಯ ಲಿಂಕ್ ಹಿಡಿದು, ಪೋಲೀಸರು ಇಬ್ಬರನ್ನೂ ಎಳೆದುತಂದಿದ್ದರು. ಒಂದು ತಿಂಗಳಾಗೋ ವೇಳೆಗೆ ಸುತ್ತಮುತ್ತಲ ಊರುಗಳಿಗೆಲ್ಲ ವಿಷಯ ಗೊತ್ತಾಗಿಹೋಗಿತ್ತು. ಪೋಲೀಸ್ ಸ್ಟೇಷನ್ನಿಗೆ ಅವರು ಬಂದ ವಿಷಯಕ್ಕೂ ಮಿಂಚಿನ ಪ್ರಚಾರ ಸಿಕ್ಕಿ, ಸಿಕ್ಕಿದರೆ ಸಿಗಿದುಹಾಕೋ ಕೋಪದಲ್ಲಿ ಕೆಲವರು,ಕುತೂಹಲಕ್ಕೆ ಹಲವರು ಜಮಾಯಿಸಿಬಿಟ್ಟಿದ್ದರು.
ಸ್ಟೇಷನ್ ಒಳಗೆ ಬಂದ ಸೌಮ್ಯಾ ಮನೆಯವರಿಗೆಲ್ಲಾ ಶಾಕ್ ಕಾದಿತ್ತು. ಮಗಳು ಮದುವೆಯಾಗಿದ್ದಳು. ರಸ್ತೇಬದಿಯಲ್ಲಿ ಚುರುಮುರಿ ವ್ಯಾಪಾರ ಮಾಡೋ ಉಪ್ಪಾರರ ಹುಡುಗನೊಂದಿಗೆ!! ಅವರ ರೋಧನ ಮುಗಿಲುಮುಟ್ಟಿತ್ತು. ಅವಮಾನ ಕುಗ್ಗಿಸಿಹಾಕಿತ್ತು. ಕೊಂದೇಬಿಡುವ ಕೋಪವನ್ನು ಹತ್ತಿಕ್ಕಿಕೊಂಡರು. ಮಗಳನ್ನ ಗೋಗರೆದರು. “ನೋಡವ್ವ ಕುಸೈ ಆದದಾಗೋಯ್ತು ಈಸತಿ ಇದ್ನೆಲ್ಲ ಮರ್ತ್ಬುಟ್ಟದೆ ನಡೆವ್ವ” ಸೌಮ್ಯಾ ಮಧು ಕೈಹಿಡಿದು “ ನಾ ಬರಲ್ಲ” ಅಂದಳು. “ನೀ ಬರ್ನಿಲ್ಲ ಅಂದ್ರ ನಾವ್ ವಿಸಾ ತಕಂಡ್ ಸೊತ್ತೋಯ್ತಿವಿ” ಅಂದ ತಂದೆ ತಾಯಿಗೆ “ಸಾಯಿರಿ.” ಅಂತ ಕಡ್ಡಿ ತುಂಡಾದ ಹಾಗೆ ಹೇಳಿಬಿಟ್ಟಿದ್ದಳು. ಗೌರಿಯ ಚಿಕ್ಕಪ್ಪ ರಮೇಶ ಕೆನ್ನೆಗೆ ಬಾರಿಸಿದ್ದ. ಕೈಕೈಮಿಲಾಯಿಸಿತು. ಪೋಲೀಸರು ಎಲ್ಲರನ್ನೂ ಸಮಾಧಾನಪಡಿಸಿ, “ನೋಡಮ್ಮ ನಿನಗಿನ್ನೂ 17 ವರ್ಷ ಒಂಭತ್ತು ತಿಂಗಳು, ನಿನ್ನ ಮದುವೆ ಊರ್ಜಿತ ಅಲ್ಲ.” ಅಂದರು, “ಹಾಗಾದ್ರೆ ನನಗೆ 18 ಆಗೋವರೆಗೇ ನಿಮ್ಮ ಸ್ಟೇಷನ್ನಲ್ಲೆ ಇಟ್ಕೊಳಿ. ನಂಗೆ ಜೀವ ಭಯ. ಇವರ ಮೇಲೆ ನಂಬಿಕೆ ಇಲ್ಲ “ ಅಂದಳು. ಅಪ್ಪನ ಎದೆಗೆ ಚೂರಿ ಹಾಕಿದಂತಾಗಿತ್ತು.ಅಮ್ಮ ಅಲ್ಲೇ ಕುಸಿದು ಆಸ್ಪತ್ರೆ ಸೇರಿದರು. ಮತ್ತು ಅಲ್ಲಿಂದ ಹೊರಬರಲೂ ಇಲ್ಲ.
ಗೌರಿ ಪಿಯೂಸಿಯಲ್ಲಿ ಕಾಲೇಜಿಗೇ ಟಾಪರ್ ಆಗಿದ್ದಳು. “ಮದುವೆ ಮಾಡೋಣ” ಅಂದ ತಮ್ಮಂದಿರ ಮಾತನ್ನ ಧಿಕ್ಕರಿಸಿ, ಹೆಂಡತಿ ಮಗಳ ಹಠಕ್ಕೆ ಸೋತು, ಪುಟ್ಸಾಮಿಯವರು ಮಗಳನ್ನ ಮೈಸೂರಿಗೆ ಡಿಗ್ರಿ ಓದಲು ಕಳಿಸಿದರು. ಎರಡೇ ತಿಂಗಳಲ್ಲಿ ಪ್ರತಿಭಾನ್ವಿತೆ ಗೌರಿ ಕಾಲೇಜಿನ ಕ್ವೀನ್ ಆದಳು. ಓದು, ಚರ್ಚಾಸ್ಪರ್ಧೆ, ಡಾನ್ಸು ಎಲ್ಲದಕ್ಕೂ ಸೈ. “ಇದೆಲ್ಲ ಆಗದೇ ಹೋಗಿದ್ರೆ ತಾನು ನಗರದ ಕಾಲೇಜಿಗೇ ಹೋಗಬೇಕಿತ್ತು. ಏನೋ ಆಗಿ ಇನ್ನೇನೋ ಆಯ್ತಲ್ಲ? ಆದದ್ದೆಲ್ಲ ಒಳ್ಳೆಯದಕ್ಕೇನಾ?” ಹಾಸ್ಟೆಲ್ಲಿನಲ್ಲಿ ಕೂತು ಯೋಚಿಸುತ್ತಿದ್ದಳು. ಆ ವರ್ಷದ ಕಾಲೇಜ್ ಡೇನಲ್ಲಿ ಹಳ್ಳಿಯ ಸ್ನಿಗ್ದ ಸುಂದರಿ ಗೌರಿ “ಬ್ಯೂಟಿ ಆಫ್ ದಿ ಇಯರ್” ಕಿರೀಟ ತೊಟ್ಟಿದ್ದಳು. ನಾಲ್ಕನೇ ರ್ಯಾಂಕ್ ಕೂಡ ಗಳಿಸಿದ್ದಳು.
ಎರಡನೇ ವರ್ಷದ ಕಾಲೇಜು ಅರ್ಧ ಮುಗಿದಿತ್ತು. ಅಪ್ಪ ತಕ್ಷಣ ಹೊರಟುಬಾ ಅಂತ ಫೋನ್ ಮಾಡಿದ್ದರು. ಶನಿವಾರ ಹೋದವಳಿಗೆ ಭಾನುವಾರ ವರ ಬಂದಿತ್ತು. ಬಂದ ದಿನವೇ ನಿಶ್ಚಿತಾರ್ಥವೂ ಆಗಿಹೋಯ್ತು. ಅಪ್ಪನ ಅನಾರೋಗ್ಯ, ಅಜ್ಜಿಯ ಕೊನೆಯ ಆಸೆ, ಅನ್ನೋ ಎಮೋಷನಲ್ ಬ್ಲಾಕ್ಮೇಲ್ಗಳ ನಡುವೆ, ಮುಂದಿನ ಒಂದು ತಿಂಗಳಲ್ಲಿ ಮದುವೆಯೂ ನಡೆದುಹೋಯ್ತು.
ಸೌಮ್ಯಾಳ ಕೇಸ್ ಆದ ಮೇಲೆ ತಾಲೋಕಿನಲ್ಲಿ ಒಂದೇ ವರ್ಷದಲ್ಲಿ ಇಂತಹ 11 ಪ್ರಕರಣಗಳಾದವು. ಹೊಲೆಯರು,ನಾಯಕರು, ಉಪ್ಪಾರರ ಹುಡುಗರ ಹಿಂದೆ ಮೇಲ್ಜಾತಿಯ ಹುಡುಗೀರು ಓಡಿಹೋಗಿದ್ರು. ಇದರಲ್ಲಿ ಇಬ್ಬರು ಕ್ರಿಶ್ಚಿಯನ್ಗಳೂ ಇದ್ದರು. ಮೈಸೂರಲ್ಲಿ ಇದ್ದ ಗೌರಿ ಯುವರಾಜಾ ಕಾಲೇಜಿನ ಚರ್ಚಾಪಟು ಧೀರಜ್ ಜೊತೆ ಆಗಾಗ ಚಾಟ್ಸ್ , ಐಸ್ಕ್ರೀಮು ಅಂತ ಜೊತೆಯಾಗುತ್ತಿದ್ದಳು. ಪಿಯುಸಿ ಓದುತ್ತಿದ್ದ ಧೀರಜ್ ಅಕ್ಕ ಅಕ್ಕ ಅಂತ ತುಂಬಾ ಹಚ್ಚಿಕೊಂಡಿದ್ದ. ಸೌಮ್ಯಳ ಎರಡನೆ ಭಾವ ಗೌರಿ ಧೀರಜ್ ಜೊತೆಗಿದ್ದ ಫೋಟೋ ಕ್ಲಿಕ್ಕಿಸಿ ಪುಟ್ಸಾಮಿ ಫ್ಯಾಮಿಲಿ ಮೀಟಿಂಗ್ ಕರೆದು ತೋರಿಸಿದ್ದ. ದುಡುಕಬಾರದೆಂದು, ಬೆಣ್ಣೇಲಿ ಕೂದಲು ತೆಗೆಯಲು ಎಲ್ಲರೂ ತೀರ್ಮಾನಿಸಿ, ಗಂಡು ಹುಡುಕಿ ಗೌರಿಗೆ ಫೋನ್ ಮಾಡಿದ್ದರು.
ಬಸ್ಸುಬಾರದ ಹಳ್ಳಿಯ 60 ಎಕರೆ ತೋಟದ, 13 ಸದಸ್ಯರ ತುಂಬಿದ ಮನೆಗೆ ಗೌರಿ ಸೇರಿದ್ದಳು. ಉಫ್ ಉಫ್ ಅಂತ ಒಲೆಯೂದಿ ಆಳುಗಳಿಗೆ ಅಡುಗೆ ಮಾಡುತ್ತಾ, ಓರಗಿತ್ತಿಯರೊಂದಿಗೆ ಪಾತ್ರೆ ತಿಕ್ಕುತ್ತಾ, ತನ್ನ ಭಾವನೆಗಳ ಬೆಲೆಯನ್ನೇ ಅರಿಯದ ಗಂಡನನ್ನು ನೋಡುತ್ತಾ ಅಳುತ್ತಿದ್ದಳು. ತಾನು ಮೈಸೂರಲ್ಲಿ ಹಾಗೆ ಇದ್ದ ಕಾಲೇಜಿನ ದಿನಗಳು ನಿಜಕ್ಕೂ ನನ್ನದೇನಾ? ಅಥವಾ ಕನಸಾ ಅಂದುಕೊಳ್ಳುತ್ತಿದ್ದಳು. ಒಂದು ಮಗುವಾದ ಮೇಲೆ ಅಳುವೂ ಇಂಗಿಹೋದಂತೆ ಅನಿವಾರ್ಯವಾಗಿ ಬದುಕಿಗೆ ಹೊಂದಿಕೊಳ್ಳತೊಡಗಿದ್ದಳು.
ಮಗನ ಮೂರನೇ ವರ್ಷದ ಬರ್ತ್ ಡೇ ಗೆ ಬಟ್ಟೆ ತರಲು ಕೊಳ್ಳೇಗಾಲಕ್ಕೆ ಹೋಗಿದ್ದ ಗೌರಿ ಗಂಡನೊಂದಿಗೆ ಹೋಟೆಲೊಂದಕ್ಕೆ ಹೋಗಿದ್ದಳು, ಬಿಲ್ ಕೊಟ್ಟು ಹೋಗುವಾಗ “ಏ ಗೌರೀ” ಗಲ್ಲಾದ ಮೇಲೆ ಕೂತಿದ್ದ ಹೆಣ್ಣಿನ ಕೂಗು. ತಿರುಗಿದರೆ ಕೂಗಿದವಳು ಸೌಮ್ಯಾ ಆಗಿದ್ದಳು. “ಹೇಗಿದೀಯೇ? ಮಗಾನಾ? ಏನು ಹೆಸರು? ಕುಶಲ ವಿಚಾರಿಸಿದಳು. ಸಾರಿ ಕಣೇ ಆವತ್ ನಿಂಗ್ ಹೇಳೋಕೇ ಆಗಲಿಲ್ಲ. ಫೋನ್ ಮಾಡಿದ್ರೆ ಯಾವಾಗ್ಲೂ ನಿಮ್ ಚಿಕ್ಕಪ್ಪಾನೇ ತಗೋಳೋರು. ಇದು ನಮ್ಮದೇ ಹೋಟೆಲ್” ಸಂತೋಷದಿಂದ ಹೇಳ್ತಾ ಹೋದಳು. “ನಿಮ್ಮಪ್ಪಾಮ್ಮ?” ಗೌರಿ ಕೇಳಿದಳು. “ಅಮ್ಮನ ವಿಷಯ ನಿಂಗೊತ್ತು. ಅಪ್ಪ ಆಗಾಗ ಬರ್ತಾರೆ. ಮೊಮ್ಮಗನ್ನ ನೋಡೋಕೆ. ನಮ್ ಅಕ್ಕಂದಿರು ಬರ್ತಾರೆ. ಭಾವ ಬರಲ್ಲ” ಈಗ ಇಲ್ಲೆ ಮನೆ. ಅಪ್ಪನೇ ಕೊಡಿಸಿದ್ದು.ಬಾರೇ”ಕರೆದಳು. ಗೌರಿ” ಮತ್ಯಾವಾಗ್ಲಾದ್ರೂ ಬರ್ತೀನಿ” ಅಂದು ಹೊರಟಳು.
ಮನೆಗೆ ಬಂದ ಗೌರಿ, ತಲೆನೋವಿನ ನೆಪ ಹೇಳಿ ರೂಮಿನ ಬಾಗಿಲು ಬಡಿದುಕೊಂಡಳು. ಹೊಟ್ಟೆಯೊಳಗೆಲ್ಲ ವಿಚಿತ್ರ ತಳಮಳ. ಉಕ್ಕುಕ್ಕಿ ಬರುತ್ತಿದ್ದ ದುಖಃ ತಡೆಯಲಾಗಲಿಲ್ಲ. ಒಂದೇ ಸಮ ಬಿಕ್ಕಿ ಬಿಕ್ಕಿ ಅತ್ತಳು. ಎಷ್ಟೋ ಹೊತ್ತು.
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ :’ಶಿಕ್ಷೆ ಆಯಿತು, ಆದರೆ…’
ನಿಮಗೆ ಇವೂ ಇಷ್ಟವಾಗಬಹುದು…

hrudaya tattibidthu……!
ಕಥೆಯ ನೀತಿ
ಆಯ್ಕೆ ಯಾವತ್ತೂ ನಮ್ಮದೇ ಆಗಿರಬೇಕು.
ಎಡವಟ್ಟಾದಾರೂ ಯಾರನ್ನೂ ದೂಷಿಸುವಂತಿಲ್ಲ
ಇಂಜಾನದಿಂದ ಸಂದವರ್ಗೂ ಬರಿ ಗೇಯದೇ ಆಗೋಯ್ತು ನಮ್ ಅಣ ಬರಕ್ಕ.ನಮ್ ಕುಸ್ಮನ್ ಕಾಲಂನ ಒಂದೆರಡು ಬರವಣಗ ಓದಕ್ಕಾಗ್ಲೇ ಇಲ್ಲ. ಈ ಬರವಣಗದಲ್ಲಿ ನಮ್ ಹಳ್ಳಿ ಕಡ ಜಿನವೆಲ್ಲಾ ನಡ್ಯ ಕಥನ ಚೆನ್ನಾಗ್ ಹೇಳಿದರಿ. ಈ ಕಥೆಯಲ್ಲಿ ನಿಜಕ್ಕೂ ನನ್ನೊಳಗೆ ಹುಟ್ಟಿಕೊಂೆ ನೋವಿದೆ. ನನ್ನೊಡನೆ ಓದುತ್ತಿದ್ದ ಎಷ್ಟೋ ಹುಡುಗಿಯರು ಇದೇ ರೀತಿಯಾಗಿ ಯಾರನ್ನೋ ಪ್ರೀತಿಸಿ ಮನೆಯಲ್ಲಿ ಹೇಳಿಕೊಂಡಾಗ ಹಿರಿಯರೆನುಸಿಕೊಂಡವರು ರಾತ್ರೋರಾತ್ರಿ ಮತ್ತಾರಿಗೋ ಮದುವೆ ಫಿಕ್ಸ್ ಮಾಡಿದಾಗ ಬೆಳಗ್ಗೆ ಉಆಗುವುದರೊಳಗೆ ಆಗುವುದರೊಳಗೆ ಹೆಣವಾಗಿದ್ದಾರೆ. ಒಂದಷ್ಟು ಪ್ರತಿಭಾವಂತರು ನಮ್ಮೂರಿನ ದಿಕ್ಕುಗಳಲ್ಲಿರುವ ಗುಡ್ಡಗಾಡು ಪ್ರದೇಶಗಳಿಗೆ ಮದುವೆ ಆಗಿ ಒಂದೆರಡು ಹೆತ್ತು ಸೌದೆ ಪುಳ್ಳೆಗಳನ್ನು ಆಯ್ದುಕೊಂಡು ಮುದ್ದೆ ಜಡಿದುಕೊಂಡು ಇದ್ದಾರೆ
ಸೆಂದಾಗದೆ!
….ನಮ್ಮೂರು ಪಕ್ಕದ ಮದೂನಳ್ಳಿನೆಲ್ಲ ಎಳ್ಕ ಬಂದಿದ್ದರಿ. ಸೂಪರ್