ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ’ಅನ್ನಾ ಉಣ್ಣಾದೇ ಒಂದ್ ಅಬ್ಬ ಆಗಿತ್ತು..’


ಬೆಂಗಳೂರಿಂದ ಮೈಸೂರಿಗೆ ಬರೋದು ಸುಲಭ, ಆದರೆ ಮೈಸೂರಿಂದ ನಮ್ಮೂರಿಗೆ ಹೋಗೋದಿದೆಯಲ್ಲ? ತಪ್ಪಿ ಹೋದ ಅಭ್ಯಾಸ ಕಾಯುವಿಕೆಯನ್ನು ನರಕ ಸದೃಶ ಮಾಡಿಬಿಡುತ್ತದೆ. ನಾನು ಬರೋವೇಳೆಗೆ ರೂಟ್ ನಂಬರ್ 207 ಜಸ್ಟ್ ಮಿಸ್, ಇನ್ನೊಂದು ಗಂಟೆ ಕಾಯಲೇಬೇಕು. .. ಕೂತೆ. ಮತ್ತು ಅಲ್ಲ ಕೂತವರ ಮಾತಿಗೆ ಕಿವಿಯಾದೆ.
ಹಾಫ್ವೇನ ಮಾತು..ಬೀಗರೂಟ್ದಲಿ ಜನ ಬತ್ತರ ಅನ್ಬುಟ್ಟು ಆ ಪಾಟಿ ಅಡುಗ ಮಾಡ್ದೊ, ಅವತ್ತೇ ನಮ್ಮೂರದೇ ಇನ್ನೊಂದ್ ಮದ್ವ ಬಿದ್ಬುಟ್ಟಿತ್ತು. ಜನೆಲ್ ಬಂದರು? 10 ಸೇರ್ ಅಕ್ಕಿ ಅನ್ನ ತಕಂಡೋಗಿ ತಿಪ್ಪಗ್ ಸುರ್ದೋ” ಒಬ್ಬಳು ನಡುವಯಸ್ಕ ಹೆಂಗಸು ಆಡಿದಳು. ಕೇಳುತ್ತಿದ್ದವಳು, “ಅದೇನ್ ಬಟ್ಯಾ ಬರ್ಯಾ ಯೋಳಿ ಮಡಿಕಳಕ? ಉಣ್ಣ ಪದಾರ್ಥ,ಎಂಗ್ ಮಡಿಕಳಕಾದ್ದು? ನಮ್ಮಟ್ಳೂ ಇಂಗೆ, ಮೊನ್ನ ಜಿನ ನಮ್ಮಟ್ಟಿ ಬಾಣ್ತಿ ನೋಡಕ ಬತ್ತಿವಿ ಅಂತ ಬೀಗರು ಪೋನ್ ಮಾಡುದ್ರು. ಏಡ್ ಸೇರ್ ಅಕ್ಕಿ ಆಕ್ ಬಸ್ದು, ಎಸರು, ಪಾಯಸ ಮಾಡಿದ್ದಿ. ಯಾರೂ ಸರ್ಯಾಗ್ ಉಣ್ಣಿಲ್ಲ, ನಮ್ ಬೀಗುತುಗೂ ಸುಗರ್ರಂತ ಅವರ ದೊಡ್ ಮಗನುಗೂ ಸುಗರ್ರಂತ, ನಮಗ್ ಅನ್ನ ಬ್ಯಾಡಿ ಇಟ್ ಮಾಡಿ ಅಂತ ಇಟ್ ಮಾಡಿಸ್ಕಂಡ್ ಉಂಡ್ರು, ಏಡ್ ಸೇರ್ ಅಕ್ಕಿ ಅನ್ನನೂ ತಕಂಡೋಗಿ ಸುರ್ದದಾಯ್ತು.” ಕೂತಿದ್ದ ಮತ್ತೊಬ್ಬ ಮಾತಿಗಿಳಿದ,” ಯಾನ್ ಮಾಡಿರಿ? ಇವತ್ತು ಬಡ್ಡೀಮಗನ್ ಅನ್ನ ಅನ್ನಾದು ಕಾಳ್ ಕಸವಾಗದ. ಜನಗಳಗೆಲ್ಲ ಅನ್ನನೇ ಉಣಬಾರದಂತ ಕಾಯಲ ಕೊಟ್ಟನ ದ್ಯಾವ್ರು. ನಮ್ಮೂರ್ಲಿಯೇ 50 ಜನಕ್ ಸುಗರ್ರು, 20 ಜನಕ್ ಆಲ್ಟ್ ಆಪರೇಷನ್ ಆಗದ, ಹಟ್ಟಟ್ಟಲೂ ರೋಗದವ್ರಿಯೇ ಕಣ”
ಅಲ್ಲೆಲ್ಲೋ ಕೂತಿದ್ದ ನಿಧಾನಕ್ಕೆ ಎದ್ದು ಬಂದು ಮಾತಿಗಿಳಿದ. “ ಆ ಕಾಲ್ದಲಿ ಅನ್ನ ಅನ್ನದು ಎಲ್ಲಿತ್ತು? ಬರೀ ರಾಗಿ, ಜ್ವಾಳ, ಏಡೇಡ್ ಮುದ್ದ ಇಟ್ಟುಂಡ್ಕೊಂಡ್ ಒಲಕೋಯ್ತಿದ್ದೋ. ಪುನ ಬಂದೂ ಅದೀಯೆ. ತಿರಿಕಂಡ್ ಮಗುಚ್ಕಂಡ್ ಅದೇ ಇಟ್ಟು, ಅದೇ ರೊಟ್ಟಿ, ನೀರ್ಗ ಮೆಣಸಿಅಣ್ಣು, ಉಣಸಅಣ್ಣು ಉಪ್ಪು ಕಿವುಚ್ಕಂಡ್ ತಿಂದ್ನತಿದ್ದೋ. ಮಳ ಬೆಳ ಒಂಟೋದ್ ವರ್ಷವಂತು ಅದ್ನೂ ಕ್ಯೋಳ್ಬೇಡಿ. ಆರ್ ಮಕ್ಕಳುಗುವ ಒಟ್ಟ ತುಂಬ್ಸದು ಬಾರೀ ಕಷ್ಟವಾಯ್ತಿತ್ತು. ಇಟ್ಗೇ ಇರ್ನಿಲ್ಲ ಇನ್ನು ಅನ್ನೆಲ್ಲಿಂದ್ ಬರಬೇಕು ಯೋಳು? ಅನ್ನ ಆಗ ಚಿನ್ನವಾಗಿತ್ತು. ಅಬ್ಬ ಹರ್ಜುನ ಬಂದ್ ಜಿನಕ ಅನ್ನ. ಅಬ್ಬ ಬಂದರ ಸಾಕು ಅನ್ನಕ್ ಸಲವಾಗಿ ಜೀವ ಬುಟ್ಕಂಡ್ ಕಾಯ್ಕತ್ತಿದ್ದೋ ಐಕೆಲ್ಲ.” “ಏ.. ಇನ್ನೇನ ಮಂತ? ಅನ್ನ ಉಣ್ಣದೇ ಅಬ್ಬವಾಗಿತ್ತು ಆಗ” ನಡುವಯಸ್ಕ ಅನುಮೋದಿಸಿದ. “ಆ ಕಾಲ ಅಂಗಿತ್ತುಕನ ತಾತ, ಈಗ ಕಾಲ ಬದಲಾಗದ. ನಮ್ಮೂರ್ಗ ಬಸ್ಸೇ ಇರ್ನಿಲ್ಲ. ಆಮೇಲ್ ಒಂದ್ ಬಸ್ ಬತ್ತು. ಸಿಟಿಲ್ ಏನ್ ಕೆಲ್ಸ ಜನಕ? ಬಸ್ಸು ಖಾಲಿ ಒಡಾತಿತ್ತು. ಒಂದು ಏಡಾಯ್ತು. ಈಗ ಗಂಟ್ಗೊಂದ್ ಬಸ್ ಬತ್ತವ.ಆದ್ರೂ ಸಾಲಲ್ಲ. ಈಗ್ಯಾರ ಕನ ಅನ್ನಕ್ ಕಷ್ಟ್ ಬೀಳವರು? ಎಲ್ಲರಟ್ಳೂ ಅಕ್ಕಿ ಮೂಟ ಮೂಟಲೇ ತುಂಬವ,ಜನ ಉಣ್ಣಲಾರೋ ಒರಗ್ನಾರೋ ಅಂತರ.” ಎಲ್ಲರೂ ತಲೆಯಾಡಿಸಿ ಸಹಮತ ಸೂಚಿಸುತ್ತಿದ್ದರು. “ಬಸ್ ಬತ್ತು ಕರ್ರಲಾ.” .ಯಾವನೋ ಕೂಗಿದ್ದಕ್ಕೆ ಎಲ್ಲರೂ ಎದ್ದರು.ನಿಜ, ಬಸ್ಸು ಹಿಡಿಸದಷ್ಟು ಜನವಿತ್ತು.
ಊರುಗ್ ಬಂದ್ ಇಳಿದು ನಮ್ ಬೀದಿಗ್ ಎಂಟ್ರಿ ಕೊಡ್ತೀನಿ. ಜನಾಗಿದ್ ಜನೆಲ್ಲ ಅಲ್ಲೇ ತುಂಬಿತ್ತು. ಒಂದೇ ಕೂಗಾಟ. ವಿಚಾರಿಸಿದಾಗ ಗೊತ್ತಾಗಿದ್ದು , ಅಲ್ ನಡೀತಿರೋದು ಬಿಪಿಎಲ್ ಕಾರ್ಡ್ ಗಲಾಟೆ ಅಂತ. ಬ್ಯಾಗಿಟ್ಟು ಬಂದು ಜಗಲಿ ಮೇಗಲ ಕಂಬಕ್ಕೆ ಅಂಟಿಕೊಂಡೆ. “ ಏನ್ ನಾಟಕ ಆಡಿರ್ಯಾ? ಎಂಗ್ಲಾ ಕೊಟ್ಟನು ಅಂವ ನಿಂಗ ಕಾರ್ಡಾ? ಒಂದ್ ಮನಗ ಒಂದ್ ಕಾರ್ಡು ಅಂತ ರೂಲ್ಸಿರದು. ನಿಮ್ಮಟ್ಟಿಗೆಂಗ್ ಏಡ್ ಕಾರ್ಡ್ ಕೊಟ್ಟಿದರು?” ಕೊಶ್ಚನ್ನು ಎತ್ತಿದ ಒಬ್ಬ “ತಿಳ್ಕಳ್ದೆ ಮಾತಾಡ್ತಿದ್ದಯಲ್ಲ ಬೊಡ್ಡೆತ್ತದೆ, ಏಡ್ ಕಾರ್ಡು ಅಂದ್ರ ನನಗೊಂದು ನಮ್ಮಣ್ಣಗೊಂದು ಕಲಾ” ಉತ್ತರಿಸಿದ. “ ನೀವಿಬ್ರೂ ಬ್ಯಾರೇ ಆಗಿದರ್ಯಾ ನಿಮಗ್ ಬ್ಯಾರ್ ಬ್ಯಾರೆ ಕಾರ್ಡ್ ಕೊಡಕ್ಕ? ಆಯ್ತು ಕಪ್ಪ, ನಿನ್ ಮಾತ್ಗೆ ಬತ್ತೀನಿ ಕಯ್ಯಾ ನಮ್ಮಟ್ಗೂ ಏಡ್ ಕಾರ್ಡ್ ಕೊಡ್ಸಯ್ಯ. ನಾನು ನನ್ನೆಡ್ತಿ ಮಕ್ಕಳುಗ್ ಒಂದು ಕಾರ್ಡು. ನಮ್ಮಪ್ಪನಗೂ ಅವ್ವಗೂ ಒಂದ್ ಕಾರ್ಡು. “ ಸವಾಲೆಸೆದ. ಶಂಭಪ್ಪ ಬಾಯಿ ಹಾಕಿದ. “ಅದೆಂಗಾದ್ದು? ಅಂಗಾರ ಊರ್ಲಿ ಮನಮನಗೂ ಏಡೇಡ್ ಕಾರ್ಡ್ ಕೊಟ್ಗ ಬರಬೇಕಾಯ್ತದಪ್ಪ ನೀ ಯೋಳ ಲೆಕ್ಕ ನೋಡುದ್ರ” “ ಎಲ್ಲ ಸುರುವಾದ್ದು ನಿಮ್ಮಿಂದ್ಲಿಯೇ ಕ ಗೌಡ್ರ.” ಶಂಭಪ್ಪನಿಗೆ ಎಲ್ಲರ ಬಾಣ ತಿರುಗ್ತು. “ನೀವೂ ಅಸುರ್ ಕಾರ್ಡ್ ಮಾಡುಸ್ಕಳಾ ಕುಳವಾ ಯೋಳಿ ಮತ್ತ?” “ ವಾ..ನನಗೇನಿದ್ದು? ಇದ್ದುದ್ನೆಲ್ಲ ಮಕ್ಕಳಿಗ್ ಬರ್ದಾಯ್ತು. ಖಾಲಿ ಕೈ. “ ಅಂತ ಕೈ ಅಲ್ಲಾಡಿಸಿದ್ರು.

ಗೌಡ್ರು. “ಅಂಗಾರ ಗತ್ಗೆಟ್ಟೋಗಿದ್ದರ್ಯಾನೀವು? ಆಯ್ತು ಬುಡಿ, ತಿಂಗಳಗ್ ಇಪ್ಪತ್ ಸಾವ್ರ ಬತ್ತದಲ್ಲ ಬಡ್ಡಿ ಕಾಸು ಅದ್ನೆಲ್ಲ ತತ್ತನಿ ಮಂತ? “ ಪಾಯಿಂಟು ಆಕಿದ ಒಬ್ಬ. “ ಊ.. ಬತ್ತ ಇಪ್ಪದ್ ಸಾವ್ರ.ಲೆಕ್ಕ ಆಕಿದ್ದ ಇಂವ ದೊಡ್ ಮನ್ಸ. ನನ್ನೆಸರ್ಲಿ ಏನೂ ಇಲ್ಲ ಅಂತ ತೋರ್ಸದಿ ಕೊಟ್ರು, ನೀನೂ ತೋರುಸ್ಲಾ” ಲಾ ಪಾಯಿಂಟು ಆಕಿದ್ರು. “ಇಂಗೀಯೆ ನೋಡಿ ಜನ, ಇರವ್ರೆ ತಕ್ಕಳದು, ರುಪಾಯ್ಗ್ 30 ಕೆಜಿ ಅಕ್ಕಿ ತಗಂಡು ಮಾರ್ಕಳದು. ದೊಡ್ಡವ್ರೇ ಇಂಗಾದ್ರೆಂಗ್ಯಾ? “ ಅವರದ್ ಬುಟ್ಟಾಕಿ. ಇಲ್ ಕ್ಯೋಳಿ…..ಓ.. ಅಂತ ಗಲಾಟೆ ಶುರುವಾಯ್ತು, ಒಬ್ಬರ ಮಾತು ಒಬ್ಬರಿಗೆ ಕೇಳದಷ್ಟು. “ಒಟ್ನಲ್ಲಿ ಈ ಒಂದ್ ರೂಪಾಯ್ನ್ ಅಕ್ಕಿ ಬಂದು ಬ್ಯಾಡ ಕಣ..ಈ ಕಾರ್ಡ್ಗಳ ಗಲಾಟ, “ “ ಆ ಮೂಲ ಹಟ್ಟಿ ರಾಮ ಅವನಲ್ಲ, ನಾಕ್ ಕಾರ್ಡು ಅವರಟ್ಲಿ, ಎಲ್ಲ ಒಟ್ಗೆ ಅವರ ಬ್ಯಾರೆ ಬ್ಯಾರೆ ಅಂವಿ ಅಂತ ಬರಸ್ಬುಟ್ ತಕಂಡರ, ಆ ಕೊನೆಯವನಗ ಬಿದ್ಬುಟ್ಟು ಕಾಲು ಒಂದ್ ನಿಂಕರ ಏಟಾಗಿತ್ತಪ್ಪ. ಅಷ್ಟಕ್ಕೀಯೇ. ಅಂಹವಿಕಲ ಅಂತ ಬರಸ್ಬುಟ್ಟು ತಿಂಗಳಗೊಂದ್ಸಾವ್ರ ತಕ್ಕತ್ ಕೂತನ. ಬಿಟ್ಟಿ ಅಕ್ಕಿ,ತಿಂಗಳಗ್ ಸಾವ್ರ. ಕೆಲ್ಸಕ್ ಬಂದಯಾ ಅಂದ್ರ ಮೊಖನ ಕೊಡಲ್ಲ ಕಲಾ…..ಒಬ್ಬೊಬ್ಬರೂ ತೋಚಿದ್ ಮಾತಾಡ್ಕಂಡು, ಗುಂಪಿನಿಂದ ಚದುರಿದ್ರು. ಜಗಲಿ ಮೇಲ್ ನಿಂತಿದ್ ನನಗೆ, “ಈಗ್ ಬಂದ್ಯವ್ವಾ” ಈಗ್ ಬಂದ್ಯವ್ವ” ಅಂತ 50 ಜನ ಆದ್ರೂ ಕೇಳಿಯಾಗಿತ್ತು.
“ ನಮಸ್ಕಾರ ಸಾರ್, ಊರಿಗ್ ಬಂದಿದ್ದೆ ನೆನಪಾಯ್ತು. ಹೇಗಿದೀರಿ” ಆಕಾಶವಾಣಿಯ ಕೃಷಿ ವಿಭಾಗದ ಕೇಶವಮೂರ್ತಿಗಳಿಗೆ ಫೋನಾಯಿಸಿದೆ. “ ಏನಕ್ಕೋ, ಯಾವಾಗ್ ಬಂದ್ರೀ.. ಭಾನುವಾರ ಬಾಕ್ಕೋ, ನಮ್ “ಬಾನುಲಿ ಕೃಷಿಬಳಗ” ದ್ ಕಾರ್ಯಕ್ರಮ ಈ ಸಲ ನರಸೀಪುರದ್ ಹತ್ರ ಶಂಕರ್ ಅನ್ನೋರ್ ತೋಟದಲ್ಲಿ. ವಿಶೇಷವಾದ್ ಭತ್ತದ್ ತಳಿಗಳನ್ನ ಸಂರಕ್ಷಣೆ ಮಾಡಿದಾರೆ, ಬನ್ನಿ ಚೆನಾಗಿರತ್ತೆ” ಅಂದರು.” ಸಾಧ್ಯವಾದ್ರೆ ಬರ್ತೀನಿ ಸರ್ ಅಂತ ಕುಶಲ ಮಾತಾಡ್ತಾ, ತಾನು ಕೆಂಪಕ್ಕಿ ಅನ್ನ ಉಣ್ತಿದೀನಿ ಅಂದ್ರು. ಬೆಂಗಳೂರಲ್ಲೂ ಲಾಲ್ಬಾಗ್ನಲ್ಲಿ ಸಿಗುತ್ತೆ. ಬೇರೆ ಕೆಲವು ಕಡೇಲೂ ಸಿಗುತ್ತೆ. ಉಪಯೋಗಿಸಿ, ಪಾಲಿಶಡ್ ರೈಸ್ನಲ್ಲಿ ಏನಿರತ್ತೆ? ಅಂತೆಲ್ಲ ಒಂದಷ್ಟು ವಿವರಿಸಿದರು. ಕಾರ್ಡಿನ ಗಲಾಟೆ ಪೂರ್ತಿ ನಿಂತಿರಲಿಲ್ಲ.
“ ಎಷ್ಟೊತ್ತಲಿ ಬಂದ ತಾಯೀ?” ಅನ್ಕಂಡು ನಮ್ ದಾಯಾದಿ ಅಣ್ಣ ಬಂದ. “ಏನಿಷ್ಟ್ ದಪ್ಪ ಆಗಿದೀಯಾ?” “ ಅಯ್ಯೋ ನನ್ ಕತ ಯಾತಿಕ್ಯೋಳಿಯೇ ಸುಮ್ನಿರು. ಸೊತ್ತೇ ಓಯ್ತೀನಿ ಅಂತ್ ತಿಳ್ಕಂಡಿದ್ದಿ. ತೂಕ ಜ್ಯಾಸ್ತ್ಯಾಗಿ ಬಾರಿ ಪ್ರಾಬ್ಲಂ ಆಗ್ಬುಟ್ಟಿತ್ತು. ಆಯುರ್ವೇದಿಕ್ ಆಸ್ಪಿಟಲ್ಲಿ 15 ಜಿನ ಅಡ್ಮಿಟ್ ಆಗಿದ್ದಿ. ಈಗೊಸಿ ನೋಡ್ಬೋದು. ಅನ್ನನೇ ಕಮ್ಮಿ ಆಕ್ಬುಡಿ ಅಂತ್ಯೋಳ್ಬುಟ್ಟರ ಡಾಕ್ಟರು. ನಮ್ಮಟ್ಲಿ ಬರೀ ಇಟ್ಟು , ಚಪಾತಿ.” ಇನ್ನೊಬ್ಬ ದೊಡ್ಡಪ್ಪನ ಮಗ ಬಂದು ಸೇರಿಕೊಂಡ. “ನಮಗೂ ಅದೇನ ಅನ್ನ ಇಡಿಸದೇ ಇಲ್ಲಪ.ನಮ್ ಕಂಟ್ರ್ಯಾಕ್ಟರ್ ಗಳೆಲ್ಲ ಓಟ್ಳುಗೋಯ್ತರ,ನಾನು ಅಟ್ಟಗ್ ಬಂದ್ ಇಟ್ಟು ಮಾಡಿಸ್ಕಂಡ್ ಉಂಡ್ಕ ಒಯ್ತೀನಿ.” ಅಂತ ಶುರುವಾಗಿ ಅನ್ನ, ಆರೋಗ್ಯದ ಬಗ್ಗೆ ದೊಡ್ಡ ಚರ್ಚೆಯೇ ಆಯಿತು.
ಒಂದು ರೌಂಡು ತೋಟದ ಕಡೆ ಹೋಗೋಣ ಅಂತ ಹೊರಟೆ.. ಉದ್ದಕ್ಕೂ.. “ಯಾವಾಗ್ ಬಂದ್ರೆಳಿ?” ಪ್ರಶ್ನೆಗಳು ನನ್ನ ಸೇಮ್ ಉತ್ತರ. ನಮ್ ಮಾದೇವಿ ಮನೆ ಗೋಡೆಗೆಲ್ಲ ಕಪ್ಪುಹುಳಗಳು ತುಂಬಿಕೊಂಡಿದ್ದವು. ‘ಇದೇನ ಮಾದೇವಿ” ಅಂತ ಅಮ್ಮ ಕೇಳಿದ್ದಕ್ಕೆ, “ ಅಲ್ನೋಡಿ ಅಳಿ, ಅಕ್ಕಿ ಆರಾಕಿನಿ, ನಮ್ಮಟ್ಲಿ ಮುದುಕಿ ಕಾರ್ಡ್ ಗ್ ಬಂದಿದ್ ಅಕ್ಕಿ ಮೂಟನ ಬಿಚ್ಚೇ ಇರ್ನಿಲ್ಲ ಅಳಿ, ಗದ್ದ ಕೆಲ್ಸಕ್ ಓಯ್ತಿದ್ವಲ್ಲ, ಅಲ್ಲೊಸಿ ಬತ್ತ ಬಂದಿತ್ತು ಮಿಲ್ ಮಾಡುಸ್ಕಂಡ್ ಮಡಿಕ್ಕಂಡಿದ್ದೋ, ಈ ಮೂಟ ಅದೆಲ್ಯೋ ಇಂದಕ್ ಸೇರ್ಕಂಡಿತ್ತು. ಉಳ ಬಂದ್ಬುಟ್ಟವ, ಅದಕ ಬಿಸುಲ್ಗಾಕಿನಿ.” ಅಂದ್ಲು.
ರಾತ್ರಿ ಮಲಗಿದಾಗ ಬಸ್ಟ್ಯಾಂಡಿನಲಿ ತಾತ “ಅನ್ನ ಉಣ್ಣಾದೇ ಒಂದ್ ಅಬ್ಬವಾಗಿತ್ತು” ಅಂದದ್ದು ಮತ್ತೆ ನೆನಪಾಯ್ತು. ಕೇವಲ ಒಂದು ಜನರೇಷನ್ ಗ್ಯಾಪಿನಲ್ಲಿ ಅಕ್ಕಿ ಅನ್ನೋದು ಬಂದು, ಹರಡಿ, ರೋಗವಾಗಿ, ರಾಜಕೀಯವೂ ಆಗಿ, ಈಗ ಬೇಡವೂ ಆಗುತ್ತಿರುವ ಪರಿಗೆ ಬೆರಗಾದೆ..

‍ಲೇಖಕರು G

15 April, 2014

ನಿಮಗೆ ಇವೂ ಇಷ್ಟವಾಗಬಹುದು…

6 Comments

  1. M.S,Krishna murthy

    ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರುವ ಬಾಕಿ ಹಣ ಬಾರದೆ ಇದ್ದ ಕಾರಣ ಅವರು ಇಟ್ಟ ಶಾಪದಿಂದ ಎಲ್ಲರಿಗೂ ಈ ಪಾಟಿ ಶುಗರ್ ಕಾಯಿಲೆ ಬಂದಯ್ತೋ ಏನೊ.. ಚೆಂದಾಗದೆ ಶುಗರ್ ಪುರಾಣ.. ಶುಗರ್ ಲೆಸ್ ಕಾಪಿ ಕುಡಿತಾ ಒದ್ತಾ ಇದಿನಿ

  2. sunil

    yenu chandagi badadi yavva balu chandagaiti,, ondu generation ninda ostu change antiralla namma generation nalli kevala 10 varshadalli phone mule serakondu pager illadagi cell phone dati smart phone ge bandideve idu ivattina vega .. idaralli nammatana ulisikollodu ivattina horata

  3. Swarna

    ಅಕ್ಕಿ ಎಷ್ಟೆಲ್ಲಾ ಹೇಳುತ್ತಿದೆ . ಚೆನ್ನಾಗಿದೆ

  4. Anil Talikoti

    ಬೆರಗು ಹುಟ್ಟಿಸೋ ಬಾಸ್ಯಾದಾಗ ಏನೆಲ್ಲಾ ಬಿಡಿಸಿಕೋತ ನಾವು ಯಾವದೋ ಬಸ್ಟ್ಯಾಂಡನ್ಯಾಗ ಕೇಳ್ಕೊತ ಕಳ್ದ ಹೋದಂಗ ಅನಸ್ತದ -ಹಿಂಗ ಬಡಸ್ತೀರಿ.

  5. anand salundi

    ದಿನ ಬೆಳಾಗಾಯ್ತು ಅಂದ್ರೆ ಉಪ್ಪೆಸ್ರು, ಇಟ್ಟು ಉಂಡು ಉಂಡು, ಅನ್ನ ಯಾವಾಗ ಸಿಗ್ತದೊ ಅಂತಿದ್ ಕಾಲ ಒಂದಿತ್ತು.
    ಇವಾಗ್ ತಗಳಿ, ಒತ್ತಾರೆ ನಾಷ್ಟಾ.. ಮಧ್ಯಾನಕ್ ಬ್ಯಾರೆ
    ರಾತ್ರಿಗ್ ಬ್ಯಾರೆ, ಬಗಬಗ ಮಾಡಾಕ್ ರೂಡಿ ಮಾಡ್ಕಬುಟ್ರು ನಮ್ ಹಳ್ಳಿಗಳ್ ಕಡಲೂ
    ಒಂತರಾ ಸೋಕಿ ಆಗ್ಬುಟ್ಟಾದ, ಇವಾಗ ಅನ್ನ ಉಣ್ಣೋಕೋಸ್ಕಾರನೆ ಅಬ್ಬ ಹರಿದಿನ ಕಾಯಂಗಿಲ್ಲ ಬುಡಿ.

  6. latha manjunath

    ಕನಕದಾಸರ ರಾಮಧಾನ್ಯ ಚರಿತ್ರೆ ನೆನಪಾಯಿತು…ಭಾಷೆ ಸೂಪರ್…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading