ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಮುದ್ದಯ್ಯನೆಂಬ ಕಾಲಜ್ಞಾನಿಯ ಕಥೆ

“ಹ್ಞಾ ಗುರೂಜಿ, ಹೇಳಿ ಗುರೂಜಿ.. ಇಲ್ಲ ಗುರೂಜಿ, ಈಗಾಗ್ಲೇ ಒಬ್ಬರಿದಾರೆ. ಬೇರೆ ಸ್ಲಾಟ್ ಇದ್ದ ಹಾಗಿಲ್ಲ. ಕೇಳಿನೋಡ್ತೀನಿ ಗುರೂಜಿ….” ನನ್ನ ತಂಗಿ ಮಾತಾಡಿ ಫೋನಿಟ್ಟ ಮೇಲೆ ಕೇಳಿದೆ. ಯಾರದು ಗುರೂಜಿ? ಅಂದೆ. “ಅದೇ ನನ್ನ ಹಿಂದಿನ ಚಾನೆಲಲ್ಲಿ ಜ್ಯೋತಿಷ್ಯದ ಪ್ರೋಗ್ರಾಂ ಮಾಡ್ತಿದ್ರಲ್ಲ ಅವರು” ಅಂದಳು. “ಈಗ್ ನಿನಗ್ಯಾಕ್ ಫೋನ್ ಮಾಡಿದ್ರು” ಕೇಳಿದೆ. “ ಆ ಚಾನಲ್ನವರು ಇವರನ್ ಬೇಡ ಅಂದ್ರಂತೆ . ಈಗ ಅಲ್ಲಿ ಬೇರೆ ಜ್ಯೋತಿಷಿಗಳು ಬಂದಿದಾರೆ . ಅದಕ್ಕೆ ನಿಮ್ ಚಾನಲ್ಲಿನಲ್ಲಿ ಏನಾದ್ರೂ ಅವಕಾಶ ಇದೆಯಾ ಕೇಳಿ ನೋಡಿ ಅಂತ ಫೋನ್ ಮಾಡಿದ್ರು” ಅಂದಳು.
“ಅಲ್ವೇ ನಿರುದ್ಯೋಗಿಗಳು ಈ ಮಂತ್ರ ಜಪಿಸಿ ಈ ಪೂಜೆ ಮಾಡಿ , ನೂರಕ್ಕೆ ಇನ್ನೂರು ಗ್ಯಾಂರಂಟಿ ಉದ್ಯೋಗ ಪ್ರಾಪ್ತಿಯಾಗತ್ತೆ ಅಂತ ಅವತ್ತು ಒಂದ್ ಗಂಟೆ ಪ್ರೋಗ್ರಾಂ ಮಾಡಿದ್ರಲ್ಲ. ಈಗ ಅದೇ ಮಂತ್ರ , ಪೂಜೆ ಅವರು ಮಾಡಿದ್ರೆ ಆಯ್ತಲ್ವ? “ ಅಂದೆ. “ ಅದೇನೋಪ..ನನಗ್ ಶೂಟ್ ಇದೆ ಬೈ” ಅಂದು ಹೋದಳು. ಬಾಗಿಲು ಮುಚ್ಚಿ ಒಳಬರುವಾಗ ಇದ್ದಕ್ಕಿದ್ದಂತೆ ಮುದ್ದಯ್ಯನ ನೆನಪಾಯಿತು.
ಅವ್ವಾ.. ಅವ್ವಾ.. ಬೆಳಗ್ಗೇನೇ ಇಂತದೊಂದು ಧನಿ ಬಂತು ಅಂದರೆ ಅದು ಮುದ್ದಯ್ಯನೇ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ದಾಸವಾಳ ಕೈಲಿ ಹಿಡಿದು, ತಾನೂ ಥೇಟು ಮೈಕಿನ ಹಾಗೆಯೇ ಕಿವಿಗೊಂದು ಸಿಕ್ಕಿಸಿಕೊಂಡು ಮನೆಯ ಮುಂದೆ ನಿಂತಿರುತ್ತಿದ್ದ. ಅಂತಾ ಕೆಂಪಾನೇ ಕೆಂಪಿನ ದಾಸವಾಳವನ್ನ ಅವನು ಅದೆಲ್ಲಿಂದ ತರುತ್ತಿದ್ದನೋ.,ಎರಡು ಹೂ ತಂದು ದಿನಾ ನನ್ನ ತಂಗಿಗೆ ತಪ್ಪದೇ ಕೊಡುತ್ತಿದ್ದ. ನಂಗೊಂದು ಅವಳಿಗೊಂದು. ಅದೇನೋ ರಿಜಿಸ್ಟರ್ ಪೋಸ್ಟ್ ಅನ್ನೋ ಹಾಗೆ ಅವಳನ್ನೇ ಕೂಗುತ್ತಿದ್ದ. ಅವಳಿಲ್ಲ ಅಂದರೆ ಮಾತ್ರ ನನ್ನ ಕೈಗೆ, ನಾನೂ ಇಲ್ಲದಿದ್ದರೆ ಅಮ್ಮನ ಕೈಗೆ. ಯಾರೂ ಇಲ್ಲದಿದ್ದರೆ ಮನೆ ಹೊಸಿಲ ಮೇಲಿಟ್ಟ ಹೋಗಿರುತ್ತಿದ್ದ..
ಪಾಪ ಮುದುಕ ಅಷ್ಟು ಶ್ರಧ್ದೆಯಿಂದ ಕೊಡ್ತಾನಲ್ಲ ಅಂತ ಒಂದು ದಿನವೂ ಅದನ್ನು ನಾವು ಮುಡಿಯಲಿಲ್ಲ. ದಾಸವಾಳ ಮುಡಿಯದಷ್ಟು ಫಾರ್ವರ್ಡ್ ಆಗಿದ್ದೆವು!. ಅವನು ಕೊಟ್ಟದ್ದನ್ನ ಕೈಗೆ ತಗೊಂಡು ಮೋಟು ಗೋಡೆ ಮೇಲೋ, ಜಗಲಿ ಮೇಲೋ.. ಇನ್ನೆಲ್ಲೋ ಇಟ್ಟು ಹೋಗ್ತಿದ್ದಳು. ಅದು ತಿಪ್ಪೆ ಸೇರುತ್ತಿತ್ತು. ಇದು ಮುದ್ದಯ್ಯನಿಗೂ ಗೊತ್ತಿತ್ತು. ಆದರೂ ಅವನು ಹೂ ತಂದುಕೊಂಡೋದನ್ನ ಮಾತ್ರ ನಿಲ್ಲಿಸಲಿಲ್ಲ. ಪ್ರತಿ ದಿನ ಅದೆಷ್ಟೋ ವರ್ಷ. ಶ್ರಧ್ದೆಯಿಂದ ಹೂ ಕೊಡುತ್ತಿದ್ದ. ಅಲ್ಲಿಂದ ಮಠದ ಕಡೆ ಹೋಗ್ತಿದ್ದ.
ಮುದ್ದಯ್ಯ ನಾಯಕ ಜನಾಂಗದಲ್ಲಿ ಹುಟ್ಟಿದವನು. ಆದರೆ ವಿಭೂತಿ ಹಾಕಿ, ಕುಂಕುಮ ಇಟ್ಟುಕೊಂಡು, ಕಿವಿಗೊಂದು ದಾಸವಾಳ ಸಿಕ್ಕಿಸಿಕೊಂಡು ಮನೆಯಿಂದ ಹೊರಟು. ನಮ್ಮನೆಗೆ ಎರಡು ಹೂ ತಲುಪಿಸಿ, ಮಠಕ್ಕೆ ಹೋಗೋದು ಅವನ ನಿತ್ಯ ಕಾಯಕ. “ಏನಯ್ಯಾ ಮಠಕ್ ಹೊಂಟ್ಬುಟ್ಯಾ?” ಭಾರದ ಹೊಟ್ಟೆ ಹೊತ್ತು ಜಗಲಿ ಮೇಲೆ ಕೂತ ಪಟೇಲರು ಕೇಳಿದರೆ, “ಹ್ಞೂ ಬುದ್ದಿ” ಅಂದು ನಡೆಯುತ್ತಿದ್ದ. “ಇಭೂತಿ ನೋಡು ಎಂಗಿಕ್ಕಂಡನ..ಯಾವ್ ಲಿಂಗಾಯತರೂ ನಾಚ್ಕಬೇಕು.” ಮುದುಕಿ ಶಿವಮ್ಮ ಆಡುತ್ತಿದ್ದಳು. “ಬ್ಯಾರೆ ಕೆಲ್ಸವೇನಿದ್ದು ತಕ್ಕಳಿ ಅವನಗ. ಮಕ್ಕಳಾಯ್ತು ಮರಿಯಾಯ್ತು. ಉಂಡ್ಕಂಡ್ ಕುಂತನ.” ಅಂತ ಕೊಂಕಾಡುತ್ತಿದ್ದರು ಜಗಲಿ ಜನ.
ಹೀಗೆ ಮಕ್ಕಳು ಮರಿ ಆಗಿ ಉಂಡ್ಕಂಡ್ ಕುಂತಿರೋರೆಲ್ಲ ಮಠದಲ್ಲಿ ಸೇರ್ತಿದ್ರು. ಮಠದ ಮುಂದಿನ ಜಗಲೀಲಿ ಬುದ್ದಿಯವರ ಹಳೇ ಮರದ ಕುರ್ಚಿ . ಕೂತು ಕೂತು ಕೂತು ಅದರ ಬಣ್ಣವೇ ಬದಲಾಗಿಹೋಗಿತ್ತು. ಬೆಳಗಿನ ಕಂತೆ ಬಿಕ್ಷೆ ಮುಗಿಸಿ, ಪರ ಊರಿನ ಪ್ರಯಾಣ ಇಲ್ಲಾಂದ್ರೆ ಕುರ್ಚೀಲಿ ಆಸೀನರಾಗ್ತಿದ್ರು. ಉಳಿದವರು ಜಗಲಿಯ ಮೇಲೆ ಚಾಪೆ ಹಾಸಿಕೊಂಡು ಕೂರ್ತಿದ್ದರು. ಬೇಕಾದ್ದು, ಬೇಡವಾದ್ದು ಎಲ್ಲ ಮಾತಾಡಿ, ಆಗಾಗ ಮಠದ ಪುಟ್ಸಾಮಣ್ನ ಕುಂಟುಕೊಂಡು ನಡೀತಾ ಟೀ ಮಾಡಿ ಕೊಟ್ಟರೆ ಕುಡಿದು, ಬೀಡಿ ಸೇದಿ, ಅಲ್ಲೇ ಮಲಗಿ ಒಂದು ನಿದ್ದೆ ತೆಗೀತಿದ್ದರು. (ಸಣ್ಣಗೆ ಉದ್ದಗೆ ಇದ್ದ ಪುಟ್ಸಾಮಣ್ಣನ್ನ ನಮ್ಮೂರ ಹುಡುಗರು ಇಂದ್ರಜಿತ್ ಅಂತ ಕರೀತಿದ್ರು. ಸುಮಾರ್ ದಿನ ಆದ ಮೇಲೆ ಗೊತ್ತಾಗಿದ್ದು ಅಂಬರೀಷ್ ಇಂದ್ರಜಿತ್ ಸಿನೆಮಾದಲ್ಲಿ ಕುಂಟ್ತಾನಲ್ಲ. ಆ ಹೆಸರನ್ನ ಪಾಪ ಪುಟ್ಸಾಮಣ್ಣಂಗಿಟ್ಟಿದಾರೆ ಅಂತ)

ಮಠಕ್ಕೆ ಯಾರು ಬರಲಿ, ಬಿಡಲಿ, ಏನು ಮಾತಾಡಲಿ ಬಿಡಲಿ.ಮುದ್ದಯ್ಯ ಮಾತ್ರ ಮಠದ ಒಂದು ಮೂಲೆ ಹಿಡಿದು ಕೂತಿರುತ್ತಿದ್ದ. ಕೈಯಲ್ಲಿ ಸಪ್ತಸ್ವರಗಳನ್ನು ಎಣಿಸೋ ಹಾಗೆ ಅದೇನೋ ಗುಣಾಕಾರ ಭಾಗಾಕಾರ ಮಾಡುತ್ತಲೇ ಇರುತ್ತಿದ್ದ. ಊರ ಹೆಣ್ಣುಮಕ್ಕಳು ಮಠದ ಆರ್ಚಿನ ಒಳಗೇ ನಿಂತು ಬಸ್ಸಿಗೆ ಕಾಯ್ತಿದ್ದಾಗ ಮಠದ ಜಗಲಿ ದೃಶ್ಯ ದಿನಾ ಸಿಗುತ್ತಿತ್ತು. ಈಗಲೂ ಸಿಗುತ್ತದೆ.!
“ಮಕ್ಕಳು ಮನೆವಾರ್ತೆ ನೋಡ್ತಿದ್ರೆ ಅಪ್ಪನಿಗ್ಯಾಕ್ ಇಬ್ಬರೆಡ್ತೀರು ಅಂತ ಗಾದೆ. ದಿನಾ ಸ್ಕೂಲು ಕಾಲೇಜು. ಭಾನುವಾರ ಬಂದ್ರೆ ಮೇಲಕ್ಕೇ ಏಳಲ್ಲ. ಅಂತ ಅಮ್ಮನ ಸಹಸ್ರನಾಮ . ಎದ್ದು ನಾನು ಪೇಪರು, ಅವಳು ಉದಯ ಮ್ಯೂಸಿಕ್ಕು. ಇನ್ನಷ್ಟು ಬೈಗುಳ. “ಪೇಪರ್ ಎಲ್ಲಿಗ್ ಓಡೋದ್ದು? ಹಾಡ್ಗಳು ಇಪ್ಪತ್ತನಾಕ್ ಗಂಟ ಬತ್ತವ. ಎದ್ದು ಕೆಲ್ಸ ಮಾಡಿ.” ಅಂತ ಬೈಸಿಕೊಂಡು ಕೆಲಸ ಶುರುಮಾಡ್ತಿದ್ದೆವು. ಕೊಟ್ಟಿಗೆಯಿಂದ ಹಸುಗಳ ಗಂಜಳ ಬೇರೆ ಕಡೆ ಹರೀಬಾರದು ಅಂತ ಒಂದು ಮೂಲೇಲಿ ಮಡಿಕೆ ಹೂತಿಟ್ಟಿದ್ದೆವು ರಾತ್ರಿಯೆಲ್ಲ ಹಸುಗಳ ಗಂಜಲ ಆ ಮಡಿಕೇಲಿ ಶೇಖರವಾಗ್ತಿತ್ತು. ಬೆಳಗಾಗೆದ್ದು ಒಂದು ಪ್ಲಾಸ್ಟಿಕ್ ಬಿಂದಿಗೆಗೆ ಅದನ್ನು ತುಂಬಿ ತಿಪ್ಪೆಗೆ ಸುರೀಬೇಕಾಗ್ತಿತ್ತು. ಹಸುಗಳನ್ನ ಆಚೆ ಕಟ್ಟಿ, ಸಗಣಿ ಎತ್ತಿ ಹಾಕಿ, ಕೊಟ್ಟಿಗೆ ತೊಳೀಬೇಕಿತ್ತು. ಇದನ್ನೆಲ್ಲ ಮಾಡುತ್ತಿದ್ದ ಉತ್ತಂಬಳ್ಳಿಯ ಸೋಮ , ಕೊಳ್ಳೆಗಾಲದ ಶೆಟ್ಟಿ ಹೋಟೆಲು ಸೇರಿಕೊಂಡುಬಿಟ್ಟಿದ್ದ. ಹೊಸಬ ಬರೋವರೆಗೂ ಈ ಕೆಲಸ ನಮ್ಮ ತಲೆಗೆ ಬಿದ್ದಿತ್ತು. ನನ್ಮಗ ಸೋಮ ಮಸಾಲೆ ದೋಸೆ ತಿಂತಿರಬೇಕು ಅಂತ ಬೈಕೊಂಡೇ ನಾವು ಸಗಣಿ ಗಂಜಲದ ಘಮ ಆಘ್ರಾಣಿಸುತ್ತಿದ್ದೆವು.
ಈ ಸೀನು ಜಾರೀಲಿರೋವಾಗೊಮ್ಮೆ ಮುದ್ದಯ್ಯ ಬಂದ .”ಎಲ್ಲಾದ್ರೂ ಉಂಟ ಪುಟ್ಟಪ್ಪ, ಈ ಹೆಣ್ಮಕ್ಕಳ ಕೈಲಿ ಈ ಕೆಲಸ ಮಾಡ್ಸೋದಾ? ಬ್ಯಾಡಿ ಬ್ಯಾಡಿ” ಅಂದ “ನಮ್ಮಟ್ಟಿ ಕೆಲ್ಸ ನಾವ್ ಮಾಡುದ್ರ ತಪ್ಪೇನಿದ್ದದಯ್ಯ? ಕಂಡವರಟ್ಟಿಗ್ ಜೀತಕ್ ಕಳಿಸಿದ್ದನ? ನೀ ಯೋಳದ್ ಸರಿ ಬುಡು” ಅಂದರು. “ಕೂತ್ಕ ಮುದ್ದಯ್ಯ ಟೀ ಕುಡಿ “ ಅಂತ ಟೀ ಕೊಟ್ಟ ಅಮ್ಮ. “ಅಯ್ಯೋ ನಮ್ಮಟ್ಟಿಲಿದ್ ಸೋಮ ಈಗಿಲ್ಲ ಇನ್ನೊಬ್ಬ ಬರಾಗಂಟ ನಾವೇ ಮಾಡ್ಕಬೇಕು, ನನಗ್ ನೋಡು ಆಳುಗಳುಗ್ ಅಡುಗ ಮಾಡ್ಬೇಕು. ಇದ್ನ್ಯಾರ್ ಮಾಡಿರು ಯೋಳು ಮತ್ತ?” ಅಂದ್ರು. “ಆದ್ರೂ ಅವ್ವ ಮಕ್ಕಳು ಈ ಕೆಲ್ಸ ಮಾಡಬಾರದು. ನನ್ ಮನಸು ಒಪ್ಪಲ್ಲ.” ಅಂದ. “ಬೇಕಾರ್ ನಾಮಾಡ್ಕೊಡಲ್ಯಾ ಅಳಿ” ಅಂದ. “ ವಯಸಾಗದ ನಿನಗ ಆಮೇಲ್ ಹಸ ಗುದ್ಬುಟ್ಟು ನಿನ್ ಮಕ್ಕಳು ನನ್ ತಡೀಕಂಡ್ ಬರಬೇಕಲ್ಲ. ಇದ್ಯಾವ್ ಮಹಾ ಕೆಲ್ಸವಯ್ಯ ?” ಅಂದ್ರು ಅಪ್ಪ. “ನಮ್ಮೂರ್ ಜ್ಯೋತ್ಗಳು..ಮುಂದಲವರಗ್ ಬೆಳಕ್ ತೋರಾವರು. ಇಲ್ಲಿ ನಿಲ್ಲವರಲ್ಲ. ಇರಾಗಂಟ್ ಸುಖವಾಗ್ ನೋಡ್ಕಳಿ” ಅಂದ. “ಇಲ್ಲಿರ್ದೆ ಇನ್ನೆಲ್ಲಿಗೋದರು ಮುದ್ದಯ್ಯ? ನಮ್ಮನ ಮಠ, ಆಸ್ತಿಪಾಸ್ತಿ ಯಾರ ನೋಡವರು? ದೊಡ್ಡವಳೇನೋ ಬುಡು, ಸೋಮಾರಿ. ಅವಳ್ನ ಮದ್ವ ಮಾಡಿ ಬ್ಯಾರೆ ಊರುಗ್ ಸಾಗಾಕ್ತೀವಿ. ಈ ಚಿಕ್ಕವಳಗ ಗಟ್ಮುಟ್ಟಾಗ್ ಗೈಯೋ ಒಬ್ಬನ ತಂದು ಇಲ್ಲೆ ಇರಿಸ್ತಿವಿ.” ಅಂದರು ಅಮ್ಮ. “ತ್ಯಪ್ಪು ತ್ಯಪ್ಪು…ಎಲ್ಲಾದ್ರೂ ಉಂಟಾ? ಭಗವಂತನ ಇಚ್ಚ ಅಂಗಿಲ್ಲ ಅಳಿ. ದೊಡ್ಡವರಗ ಕುರ್ಚಿ ಟೇಬಲ್ಲು ಗಟ್ಟಿ ಅಳಿ. ಪರ್ಪಂಚವೇ ಕಾಣತದ ಅಲ್ಲಿ. ಚಿಕ್ಕವರು ಗಿಣಿ ಅಳಿ, ಮಾತಾಡುದ್ರ ದೇಸವೆಲ್ಲ ಕ್ಯೋಳ್ತದ” ಅಂದ “ ಇನ್ಯಾಕ ಬುಡು. ನೀ ಯೋಳದ್ ಕ್ಯೋಳ್ಕಂಡ್ ಕುಂತ್ಕಂಡ್ರ ಕೆಲಸ ಚೆನ್ನಾಗ್ ನಡಿತವ” ಅಂತ ಅಪ್ಪ ಎದ್ದು ಹೋದರು. “ಅವ್ವಾ ಇಲ್ ಬನ್ನಿ” ಅಂದು ನಮ್ಮಿಬ್ಬರ ಕೈ ನೊಡಿ ಅದೇನೇನೋ ಹೇಳಿದ. ಒಟ್ಟು ಅವನ ಭವಿಷ್ಯದ ಪ್ರಕಾರ ನಾವಿಬ್ಬರೂ ಟೀಚರ್ಗಳಾಗಬಹುದು ಅಂತ ಅವನ ಒಗಟು ಮಾತಿನ ತಾತ್ಪರ್ಯ ಹುಡುಕಿಕೊಂಡೆವು.
“ಈಗ ಸುಖ. ಮುಂದಕ್ ದುಖಃ. ಈಗ ರಾಣಿ ಮುಂದಕ್ ಗೋಳು . ಅಕ್ಸರ ಕಲಿಸಿ, ಲಗ್ನ ನಿಧಾನ ಮಾಡಿ, ಕೋರ್ಟು ಮನೆಯಾಯ್ತದ. ಮನೆ ಕೋರ್ಟಾಯ್ತದ. ಚಕ್ರ ತಿರುಗದಂಗ ಬದುಕ ತಿರುಗಾಮುರಗ ಆಗ್ಬುಡ್ತದ. ಕಣ್ಣೀರು ಕೋಡಿಯಾಯ್ತದ. ಭಗವಂತನ ಇಚ್ಚ ಯಾರ್ ತಪ್ಸಾಕಾದ್ದು ಯೋಳಿ?” ಮಗಳನ್ನು ಮಹಾರಾಣಿಯಂತೆ ಸಾಕುತ್ತಿದ್ದವರಿಗೆ ಮುದ್ದಯ್ಯ ಅವಳ ಹಸ್ತರೇಖೆ ನೋಡಿ ಹೇಳಿದ್ದ. ಆ ಹುಡುಗಿ ಅಳೋಕೆ ಶುರುಮಾಡಿತ್ತು. ಅಪ್ಪಅಮ್ಮ ಮುದ್ದಯ್ಯನೊಂದಿಗೆ ಜಗಳಕ್ಕೆ ನಿಂತರು. “ಯಾವ್ ಜ್ಯೋತಿಷ್ಯ ಓದ್ಕಂಡ್ ಬಂದಿದ್ದಯಯ್ಯ ನೀನು? ಆಡಂಗಿದ್ರ ನ್ಯಾಯವಾಗ್ ಮಾತಾಡು, ಏನೋ ವಯಸಾಧ್ ಮುದುಕ ಅಂತ ಬುಟ್ಟಿನಿ ನಿನ್ನ. ಇನ್ನೊಂಜಿನ ನಮ್ಮಟ್ಟಿ ದಿಕ್ಕುಗ್ ಕಾಲ್ಗೀಲಾಕಿಯೆ ಹುಷಾರು.” ಗಂಡನೆಂದ. ಏನಾಯ್ತೂ ತಾಯೀ? ಅಂತ ನಂಜಮ್ಮ ಬಂದ್ರು. “ಐ ಅದೇನ ಸಾಸ್ತ್ರ ಪಾಸ್ತ್ರ ಯೋಳ್ತನ ಅಂತರಲ್ಲ ಅಂತ ನಮ್ಮೆಣ್ಣುನ್ ಕೈ ತೋರುಸುದ್ರ ಅದೇನೇನೋ ಅಂದ್ಬುಡುದಾ ನಂಜಕ್ಕಾ? ಆ ಎಣ್ಣು ಓಗಿ ಅಳ್ತಾ ಮನುಗದ” ಅಂದಳು ಹೆಂಡತಿ. “ಅದ್ಯಾಕ ಮುದ್ದ..ನ್ಯಾಯವಾಗ್ ಮಾತಾಡಕಿಲ್ವ?” ಅಂದರು ನಂಜಮ್ಮ. “ಅವನಿಚ್ಚ ನಾವ್ ಬದಲಾಯಿಸಕಾದ್ದ ಯೋಳಿ ಮತ್ತ?” ಅಂದ ಮುದ್ದಯ್ಯ. “ಓಹೋಹೋಹೋ..ಬಾರೀ ಶರಣ ಇಂವ ಇವನಗ್ ಯೋಳಕ್ ಬಂದಿದ್ದ ದೇವ್ರು. ಓಗ ಮಾಳಾದ್ದೇ..ಹಟ್ಟಿ ದಿಕ್ಕೋಗು, ನಿಂತ್ಕಂಡ್ರ ಏಟ್ ತಿನ್ಕತಿದ್ದೈ” ಅಂದ ಗಂಡ. ಮುದ್ದಯ್ಯ ಮಾತಾಡದೇ ಹೋದ.. “ಐ ಅವನಗ ಒಂಥರ ಚಪಲ. ಕೈ ನೋಡು ಮುದ್ದಯ್ಯ ಅಂದ್ರ ಕೈ ಇಡ್ಕಂಡ್ ಅಂಗೈಯ ಸುಮ್ಮನ್ ತೀಡ್ತನ. ಆಮೇಲದೇನೋನೋ ಯೋಳ್ತನ ಒಂದ್ ಅರ್ಥವಾದ್ರ ಒಂದ್ ಅರ್ಥವಾಗಲ್ಲ. ಅಂವ ಯಾವ್ ಸಾಸ್ತ್ರಗಾರ ಅಂತ ಅವನ್ ಕ್ಯೋಳಕೋಗಿದ್ರಿ? ಮಠದ ಐನೋರ್ನೋ, ಹೊಸಕೋಟೆ ಮಠದವರನ್ನೋ ಕ್ಯೋಳುದ್ರ ಯೋಳಲ್ಲ ಅಂತಿದ್ರ? ನಿಮಗೂ ಬುದ್ದಿ ಇಲ್ಲ” ಅಂದ್ರು ನಂಜಮ್ಮ.
ಕರಿಮಲ್ಲಯ್ಯನಟ್ಟಿ ಮಾದೇವಣ್ಣನಿಗೆ ಮುದ್ದಯ್ಯ ಯಾವಾಗಲೋ “ನಿನ್ ಮಕ್ಕಳು ಯೋಗವಂತರು, ಕಾರ್ ತಕಂಡ್ ತಿರುಗಾಡ್ತರ. ನಿನ್ನು ತಿರುಗಾಡುಸ್ತರ” ಅಂದಿದ್ದನಂತೆ. ಮಾದೇವಣ್ಣನ್ನ ಎಲ್ರೂ ರೇಗಿಸ್ತಿದ್ದರು. “ ಐ ಮುದ್ದಯ್ಯನ ಮಾತೂ ಒಂದ್ ಮಾತಾ ತಕ್ಕಳಿ” ಅಂತಿದ್ದ ಮಾದೇವಣ್ಣ. ಆದರೆ ಇದ್ದಕ್ಕಿದ್ದ ಹಾಗೆ ಹೆಂಡತಿನೂ ಚಿಕ್ಕಮಕ್ಕಳನ್ನೂ ಬಿಟ್ಟು ತೀರಿಕೊಂಡೂಬಿಟ್ರು. ಅದಾದ ಮೇಲೆ ಊರವರು. “ ಏನ ಮುದ್ದಯ್ಯ? ಓದ್ನಲ್ಲ ಮಾದೇವ ಕಾರ್ ಮೇಲ” ಅಂತ ಆಡಿಕೊಂಡು ನಗ್ತಿದ್ದರು. ಮುದ್ದಯ್ಯ ಮರುಮಾತಾಡದೇ ಹೋಗುತ್ತಿದ್ದ.
ವರ್ಷಗಳು ಉರುಳಿಹೋದವು. ಮುದ್ದಯ್ಯನೂ ಸತ್ತುಹೋದ. ಆದರೆ ಅವನು ಹೇಳಿದ ಭವಿಷ್ಯ? ಹೌದು ಅಕ್ಷರಶಃ ನಿಜವಾಗಿದೆ . ಕಾರಿದೆ ಸ್ವಂತ ಮನೆ ಇದೆ ಅಂತ ಸುಳ್ಳು ಹೇಳಿ, ಆ ಹುಡುಗಿಯನ್ನ ಮದುವೆಯಾದವನು, ಎರಡೇ ತಿಂಗಳಲ್ಲಿ ಮಾಂಗಲ್ಯವನ್ನೂ ಬಿಡದೆ ಎಲ್ಲ ಚಿನ್ನವನ್ನೂ ಕಿತ್ತುಕೊಂಡು ವಾಪಾಸು ಕಳಿಸಿದ್ದಾನೆ. ಅವನಿಗಾಗಲೇ ಒಂದು ಅಕ್ರಮ ಸಂಬಂಧವೂ ಇತ್ತಂತೆ. ಒಂದು ಮಾಡುವ ನ್ಯಾಯ ಪಂಚಾಯತಿಗಳು ಫಲಕಾಣಲಿಲ್ಲ. ಈಗ ಡಿವೋರ್ಸ್ .. ಮೇಂಟೆನೆನ್ಸ್ ಅಂತ ಕೇಸು ದಾಖಲಾಗಿದೆ. ಮನೆ ಕೋರ್ಟಾಗಿದೆ. ಕೋರ್ಟೇ ಮನೆಯಾಗಿದೆ.ಒಂಚೂರು ಓದಿದ್ದರೆ ಜೀವನಕ್ಕೆ ಅಂತ ದು ಕೆಲಸ ಕೊಡಿಸಬಹುದಿತ್ತು ಅಂತ ಕೊರಗುತ್ತಿದ್ದಾರೆ.
ಮಾದೇವಣ್ಣನ ಇಬ್ಬರು ಚಿಕ್ಕ ಗಂಡುಮಕ್ಕಳು, ದೊಡ್ಡವರಾಗಿದ್ದಾರೆ. ಜಮೀನಲ್ಲಿ ಕಷ್ಟಪಟ್ಟು ದುಡಿದಿದ್ದಾರೆ. ಹಸುಗಳು ಅವರ ಪಾಲಿನ ಕಾಮಧೇನುಗಳಾಗಿವೆ. ಕಾರುಕೊಂಡಿದ್ದಾರೆ. ಮೊನ್ನೆ ಮೊನ್ನೆ ಒಂದೂವರೆ ಲಕ್ಷದ ಬೈಕು ಕೊಂಡಿದ್ದಾರೆ.
ಇನ್ನು ನಾನು ಹಗಲು ರಾತ್ರಿಗಳ ಪರಿವೆಯೂಇರದೆ ಈ ಕಂಪ್ಯೂಟರಿನ ಮುಂದೆ ಕುಳಿತು ಕುಟ್ಟಾ ಕುಟ್ಟಾ ಅಂತ ಕಥೆ, ಚಿತ್ರಕಥೆ, ಸಂಭಾಷಣೆ ಕುಟ್ಟುತ್ತಲೇ ಇರುತ್ತೇನೆ. ಗೌರ್ಮೆಂಟ್ ಸ್ಕೂಲಿನಲ್ಲಿ ಓದಿದ ನನ್ನ ತಂಗಿ ಈಗ ಬ್ಲೇಸರು ಏರಿಸಿ, ಮೇಕಪ್ಪು ಬಳಿದು ಪ್ರೈಮ್ ನ್ಯೂಸು ಓದುತ್ತಾಳೆ. ಅಫ್ಕೋರ್ಸ್ ಇವತ್ತು ನಾವು ಊರಿನ ಹೆಮ್ಮೆ. ಕಾಲೆಜು ದಿನಗಳಲ್ಲಿ “ಏನಾರೀ ಓದ್ಸಿರಿ? ಮದ್ವ ಗಿದ್ವ ಮಾಡಲ್ವಾ ? ಅಂತ ಚುಚ್ಚುತ್ತಿದ್ದವರೂ ಈಗ “ನಿಮ್ಮೈಕ್ಳು ಸರಿ ಬುಡಿ” ಅಂತಾರೆ.
ಕರ್ನಾಟಕದಲ್ಲಿ ನ್ಯೂಸು, ಎಂಟರ್ಟೇನ್ಮೆಂಟ್ ಚಾನಲುಗಳು ಈ ಪರಿ ಬರೋ ಬಗ್ಗೆ ಮುದ್ದಯ್ಯನಿಗೆ ಯಾರು ಹೇಳಿದ್ದರು? ಗೊಣ್ಣೆ ಸುರಿಕೊಂಡು ನಿಂತಿದ್ದ ಮಾದೇವಣ್ಣನ ಮಕ್ಕಳ ಭವಿಷ್ಯ. ರಾಣಿಯ ಕೋರ್ಟು ಕೇಸು ಅವನಿಗೆ ಹೇಗೆ ಗೊತ್ತಿತ್ತು? ಅವತ್ತು ಮಾಮೂಲಿ ಮನಸನಂಗಿದ್ದವನು. ಈಗ ಕಾಲಜ್ಞಾನಿಯಂತೆ ಅನಿಸುತ್ತಿದ್ದಾನೆ. ಇದೆಲ್ಲ ನಿಂಗೆ ಹೆಂಗೆ ಗೊತ್ತಾಗ್ತಿತ್ತು ಮುದ್ದಯ್ಯ? ಅಂತ ಕೇಳೋಣವೆಂದರೆ ಅವನೀಗಿಲ್ಲ.
ದಿನಬೆಳಗಾದರೆ ಟಿವೀಲಿ ಬರೋ ಜ್ಯೋತಿಷಿಗಳು ಸಂಸ್ಕೃತ ಮಂತ್ರ ಹೇಳುವಾಗ, ಮುದ್ದಯ್ಯನ ಒಗಟುಮಾತುಗಳ ನೆನಪಾಗುತ್ತದೆ. ಮಗನನ್ನು ಸ್ಕೂಲು ವ್ಯಾನು ಹತ್ತಿಸಲು ಹೋದಾಗ ಅಲ್ಲೊಂದು ಮನೆಯ ಕಾಂಪೌಂಡಿನಲ್ಲಿ ನಗುವ ದಾಸವಾಳದೊಳಗೆಲ್ಲೋ ಮುದ್ದಯ್ಯನನ್ನ ಕಂಡಂತಾಗುತ್ತದೆ.

‍ಲೇಖಕರು G

24 June, 2014

ನಿಮಗೆ ಇವೂ ಇಷ್ಟವಾಗಬಹುದು…

8 Comments

  1. Anitha

    eshtu chenda bariteera madam neevu…tumbaane ishta agatte… 🙂

  2. suguna dv

    Chanagidhe.namdhe baduku odhikonda aghe ansuthe.bashe anthu awesome.

  3. amardeep.p.s.

    ಒಮ್ಮೊಮ್ಮೆ ನಿರುಪದ್ರವಿ ಮುದ್ದಯ್ಯನಂಥವರೇ ವಾಸಿ ಅನ್ನಿಸಿಬಿಡುತ್ತೆ.. ಹಾಳಾದವ್ರು ಆ ಪೂಜೆ, ಈ ಊರು, ಇಷ್ಟು ದಕ್ಷಿಣೆ.. ಆಮೇಲೆ ಪ್ರದಕ್ಷಿಣೆ ಅಂತೆಲ್ಲಾ ಜೀವ ತಿಂದು ತಿರುಗಾಡಿಸಿಬಿಡ್ತಾರೆ.

  4. vidyashankar

    ಓದಿ ಬೋ ಕುಸಿಯಾತು ಕಣವ್ವ… ಆ ಮುದ್ದಯ್ಯನ್ ತವ ನನ್ನ ಕೈ ತೋರ್ಸ್ಬೇಕು ಅಂತ ಅನಸ್ತದೆ…

  5. ಮಂಜಿನ ಹನಿ

    ನಿಮ್ ಭಾಷಾ ಶೈಲಿ ಸೂಪರ್ ಇದೆ. ಮುದ್ದಯ್ಯನಂಥವರು ನಿಜಕ್ಕೂ ಈ ಕಾಲಕ್ಕೆ ಅಚ್ಚರಿ, ಆದರೆ ಅವರಿಗವರು ಸಹಜವೂ, ಸಾಮಾನ್ಯರಾಗೂ ಬದುಕಿರುತ್ತಾರೆ. ಇಷ್ಟ ಆಯ್ತು 🙂
    – ಪ್ರಸಾದ್.ಡಿ.ವಿ.

  6. raju

    ಮುದ್ದಯ್ಯನ ಬಗ್ಗೆ ಇನ್ನಸ್ಟು ಬರೆಯಿರಿ, ಈ ಲೇಖನ ಓದುತ್ತಿದ್ದರೆ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಏಗ್ದಾಗೆಲ್ಲ ಐತೆ ಕೃತಿಯ ಮುಕಂದೂರು ಸ್ವಾಮಿಗಳ ನೆನಪಾಗುತ್ತೆ

  7. MANJUNATHA S R SUTTUR

    sakaththagide maaraaythi story…………..estondu khushi aythu Goththenavva…..really….happy to read this…..Chandada baravanige…..Go ahead…

  8. raghu

    shabdagalilla nannali nimmi bharahake matthu bashege

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading