ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ’ರಾಮಾಚಾರಿ’ ನೋಡ್ಬೇಕಂತೆ ಚೆಲುವಾಚಾರಿ


ಚೆಲುವಾಚಾರಿ ಬಂದಿದ್ದನಾ ನಿಮ್ಮಟ್ಟಿಗ? ಮರಣ್ಣ ಕೇಳಿದ್ರು, “ ಐ.. ನಾನೂ ಬೆಳಗ್ಗೆಯಿಂದ ಆಚೆಬೀದಿಯಿಂದ ಈಚೆಬೀದಿಗಂಟ ತಡಿಕಂಡ್ ಬಂದ್ನಪ್ಪ. ಎಲ್ಲೂ ಪತ್ತವಿಲ್ಲ. ನೆನ್ನಿಯೇ ಮರ ಕೂಯ್ಸಕಂಡ್ ಬಂದ್ನ ದೊಡ್ ಮನ್ಸ, ಒಂದ್ನಿಂಕ್ರ ಜೋಡುಸ್ಕೊಡಪ್ಪ ಅಂದ್ರ ಬಂದಿ ಅಳಿ ಅಂತ ಹೋದಂವ ಇವತ್ಗಂಟ ಕಣ್ಗೇ ಸಿಕ್ಕಿಲ್ಲ.” ಅಪ್ಪನ ಕಂಪ್ಲೇಂಟು. “ಐ ಬುಟ್ಟಾಕ್ಬುಡಬೇಕು.. ಕಷ್ಟವದ ಅವನ ಕೈಲಿ ಕೆಲ್ಸ ಮಾಡ್ಸದು” ಗೊಣಕಿಕೊಂಡೇ ಮತ್ತೆ ಚೆಲುವಾಚಾರೀನ ಹುಡುಕ್ಕೊಂಡ್ ಹೋದ್ರು. ನಾನು ಸೆಕೆಂಡ್ ಪಿಯುಸಿಗೆ ಬಂದಾಗ ನಮ್ಮೆಣ್ಣು ಓದಕ್ ಒಂದ್ ಟೇಬಲ್ ಮಾಡ್ಕೊಡಪ್ಪ ಅಂತ ಕೊಟ್ರೆ ಅವನು ಟೇಬಲ್ ತಂದುಕೊಟ್ಟಾಗ ರಿಸಲ್ಟ್ ಬಂದಾಗಿತ್ತು.
ಈ ಆಚಾರಿ ಸ್ವಭಾವವೇ ಹಾಗೆ, “ನಾಳ್ಗೇ ಕೊಟ್ಬುಡ್ತೀನಿ ಬುಡಿ” ಅಂತಾನೇ ಹೇಳೋದು ,ಆಮೇಲಿನ್ನೆಷ್ಟು ದಿನವೋ ತಿಂಗಳೋ ವರ್ಷವೋ.. ಯಾರಾದ್ರೂ ಮರಗೆಲಸ ಕೊಟ್ಟೋರು ಅವನನ್ನ ಕೇಳೋಕೆ ಶುರು ಮಾಡಿದ್ರೆ ಆ ಬೀದಿನೇ ಬಿಟ್ಟುಬಿಡ್ತಾನೆ. ಕೆಲಸ ಮುಗಿಸಿ ಮರದ ಐಟಮ್ಮು ಅವರ ಮನೆ ಸೇರಿದ ಮೇಲೆಯೇ ಮತ್ತೆ ಆಬೀದಿಯ ತಿರುಗಾಟ. ಹಾಗಾಗಿ ಅವನಿಗೆ ಕೆಲಸ ಕೊಟ್ಟೋರು “ಕಂಡಿರಾ ನಮ್ಮ ಚೆಲುವಾಚಾರಿಯ?” ಅಂತ ಅಟ್ಟಟ್ಟಿ ತಿರುಗೋದು ಸಾಮಾನ್ಯ. ಇಷ್ಟೆಲ್ಲ ಟಾರ್ಚರು ಕೊಟ್ರೂ ಜನ ಅವನತ್ರವೇ ಕೆಲಸ ಮಾಡಿಸೋದು, ಒಂದು ಗ್ರಾಮಸ್ಥ ಅನ್ನೋ ಕಾರಣ, ಮತ್ತೊಂದು ಹೃತಿಕ್ ರೋಷನ್ ಡಾನ್ಸಿನಂತ ಅವನ ನೀಟ್ ಫಿನಿಶಿಂಗು.
ಹೀಗೆ ಕೆಲ್ಸ ಡಿಲೇ ಮಾಡ್ತಾನೆ ಅಂದರೆ ಆಚಾರಿ ಸಖತ್ ಬ್ಯುಸಿ ಅಂತೇನೂ ಅಲ್ಲ. ಅವನಿಗೊಂಚೂರು ಮಾತಿನ ಖಯಾಲಿ. ಬೆಳಗ್ಗೆ ಡೈರೀಲಿ ಹಾಲು ತಾ ಅಂತ ಹೆಂಡ್ತಿ ಕಳಿಸಿದ್ರೆ ಯಾರ ಜೊತೆಗಾದ್ರೂ ಮಾತಾಡ್ತಾ ಮದ್ಯಾಹ್ನದವರೆಗೂ ನಿಂತ್ರೂ ನಿಂತನೇ. ಕೆಲಸದ ವಿಚಾರ ಕೇಳಿದ್ರೋ. “ತಾಡಿ ಬತ್ತೀನಿ” ಅನ್ಕಂಡ್ ಓಯ್ತಾ ಇರಾದೇ. ಎಂಗೋ ಒಟ್ನಲ್ಲಿ ಕುಲಕಸುಬು ಮಾಡ್ಕಂಡು, ಊರಗ್ ಒಕ್ಕಲಾಗಿ ಬಾಳ್ವೆ ಮಾಡ್ಕಂಡ್ ಓಯ್ತಿದ್ದ ಚೆಲುವಾಚಾರಿಗೆ ಒಂದು ಪೇಚಿನ ಪ್ರಸಂಗವೂ ನಡೀತು.
ಡೈರಿಯಿಂದ ಹಾಲು ತಗಂಡು ನೆಟ್ಟಗ್ ಹಟ್ಟಿಗೋಗದೇ ಆಚಾರಿ ನಮ್ಮಟ್ಟಿ ಪ್ರವೇಶಿಸಿದ್ದ. ಮೋಟು ಗೋಡೆ ಮೇಲೆ ಹಾಲು ಮಡಗ್ಬುಟ್ಟು ಕೂತ್ಕಂಡ. “ ಏನ್ಬಂದ ಚೆಲುವಾಚಾರಿ?” ಅಪ್ಪ ಕೇಳಿದರು. “ಐ ಸುಮ್ಮಗ್ ಬಂದಿ” ಅಮ್ಮ ಟೀನೂ ಕೊಟ್ಟು, ಅವನು ಮಾಡಿಕೊಡದ ಒಂದಷ್ಟು ಮರಗೆಲಸಗಳ ಲಿಸ್ಟು ಹೇಳ್ತಿದ್ದರೆ. ಆಚಾರಿಯ ಗ್ಯಾನ ಬೇರೆತ್ತಲೋ ಇತ್ತು. “ಒಂದ್ ಮಾತ್ ಕ್ಯೋಳಬೇಕಾಗಿತ್ತು ಅಳಿ , ಅದಕ್ ಬಂದಿ” ಅಂತ ತಲೆಕೆರೆದ. “ಕಾಸ್ ಗೀಸ್ ಕ್ಯೋಳುದ್ರ ಇಲ್ಲ. ಐಕಳಗ್ ಪೀಜ್ ಕಟ್ಟಕೇ ಪರದಾಡ್ತಾ ಕುಂತಿವಿ” ಅಪ್ಪ ಹೇಳಿದರು. “ಐ ಕಾಸಲ್ಲ ಅಳಿ, ಬ್ಯಾರೆ ಮಾತು. ಅವ್ವಾರು ಒಸಿ ಓದರ, ಗೊತ್ತಾಯ್ತದ ಅನ್ಕಂಡ್ ಬಂದಿ. ಅಂದ. ಮತ್ತೆ ತಲೆಕೆರಕಂಡು “ಈ ರಾಮಾಚಾರಿ ಅಂದ್ರ ಯಾರಳಿ? ಅಂತ ಕೇಳಿದ . “ಯಾವ್ ರಾಮಾಚಾರಿಯಾ? ನಿಮ್ ಜಾತಿಯವ್ರು ಅವಳಿಗೇನ್ ಗೊತ್ತು? ಅವರೂರ್ಲಿ ಆಚಾರ್ಗಳೇ ಇಲ್ಲ. ಓಗಿ ಓಗಿ ಅವಳ್ ಕ್ಯೋಳ್ತಿದ್ದಯಲ್ಲ. ಚೆಂದಾಗದ ಬುಡು” ಅಪ್ಪ ಹೇಳಿದರೂ..ಚೆಲುವನಿಗೆ ಮಾತ್ರ ಅಮ್ಮನಿಗೆ ರಾಮಾಚಾರಿಯ ವಿಷಯ ಗೊತ್ತು ಅನ್ನೋ ನಂಬಿಕೆ ಹೋಗಿರಲಿಲ್ಲ.

ಅಮ್ಮನಿಗೂ ಅದೇನೋ ಸೂಕ್ಷ್ಮ ಹೊಳೆದಿತ್ತು. ಅಷ್ಟರಲ್ಲಿ ನಮ್ಮ ದೊಡ್ಡಪ್ಪನ ಮಗನೂ ನನ್ನ ತಮ್ಮನೂ ಬಂದರು. “ಒಸಿ ಸಕ್ಕರ ಮಡುಗಿದ್ದರ್ಯಾ ಚಿಕ್ಕಿ? “ ಅನ್ಕಂಡು ಅಕ್ಕನೂ ಬಂದಳು (ದೊಡ್ಡಪ್ಪನ ಮಗಳು) “ಏನ್ಲಾ ಚೆಲುವಾಚಾರಿ?” ಅಣ್ನ ಕೇಳಿದ. “ಏನೂ ಇಲ್ಲ , ಬತ್ತಿನಿ ಅಳಿ ಆಮೇಲ” ಅಂತ ಹೊರಟಿದ್ದ. ಪಾಪ ನಿಧಾನಕ್ಕೆ ಒಬ್ನೇ ಬಂದು ಅಮ್ಮನನ್ನ ಕೇಳ್ಕೋಬೇಕು ಅಂತಿದ್ನೇನೋ. ಬುಡಬೇಕಲ್ಲ ನಮ್ಮಪ್ಪ. “ಇದ್ಯಾಕ ಚೆಲುವಾಚಾರಿ.? ಅಪೈ..ಅದ್ಯಾರ ರಾಮಾಚಾರಿ ಅಂದ್ಯಲ್ಲ?” ಕೇಳಿದರು. “ನಮ್ಮೂರ್ಲ್ಯಾರಿದ್ದರ್ಲಾ ರಾಮಾಚಾರಿ ಅನ್ನಾವ್ರು?” ಇನ್ನೊಬ್ಬ ಅಣ್ಣ ಬಂದ. ಬೇರೆ ದಾರಿ ಇಲ್ಲದೇ ಚೆಲುವ ಮಾತಾಡಿದ” “ಅದಿಯೇ ಅಳಿ ಐಕೆಲ್ಲ ರಾಮಾಚಾರಿ ನೋಡಕೋಬೇಕು , ರಾಮಾಚಾರಿ ನೋಡಕೋಬೇಕು ಅಂತ್ ಮಾತಾಡ್ತಿದ್ದೋ. ಆಚ ಬೀದಿ ಎಂಗಸ್ಗಳೂ ಮಾತಾಡ್ಕತಿದ್ರು. ಬೆಳಿಗ್ಗೆ ಟೀ ಕುಡಿತ್ ನಿಂತಿದ್ದಾಗ ಓಟ್ಲ್ ತಾವ್ ಪೇಪರ್ ನೋಡ್ಕಂಡು ಎಲ್ಲ ನೋಡಕೋಬೇಕು ಅಂತ್ ಮಾತಾಡ್ತಿದ್ರು. ಅದಕ ಯಾರ ರಾಮಾಚಾರಿ ಅಂದ್ರ? ನಮ್ ಜಾತಿಯವನ? ಎಲ್ಲ ನೋಡಕೋಬೇಕು ಅಂತರಲ್ಲ ಅವನಿಗೇನಾಗಿದ್ದು ಅಂತ ಒಸಿ ಕ್ಯೋಳವು ಅಂತ್ ಬಂದಿ ಅಳಿ” ಅಂದ.
ಆಚಾರಿ ಕೇಳ್ತಿರೋದು ರಿಲೀಜಾಗಿರೋ ರವಿಚಂದ್ರನ್ ಪಿಚ್ಚರಿನ ಬಗ್ಗೆ ಅಂತ ಅಷ್ಟರಲ್ಲಿ ಎಲ್ಲರಿಗೂ ಗೊತ್ತಾಗೋಗಿತ್ತು. ಅಪ್ಪ ಸ್ನಾನಕ್ ಹೋಗಾದೇ ಕಾಯ್ಕಂಡಿದ್ದು ಎಲ್ರೂ ಶುರುಮಾಡಿದ್ರು. “ ಹ್ಞೂ ಕಲ ಆಚಾರಿ ನಿಮ್ ಜನದವನೇ ಅಂವ.. ನಿಂಗೇ ಗೊತ್ತಿಲ್ಲ ಅಂದ್ರ ಎಂಗ್ಯ ಕತ? ಸರಿ ಬುಡು. ಅಲ್ಲ, ನಮಗ್ ನೀ ಯೋಳಬೇಕು . ನೀನೇ ನಮ್ ಕ್ಯೋಳ್ತಿದ್ದಯಲ್ಲ ಯೋಳು ಮಂತ” ಆಚಾರೀನ ಪೇಚಿಗೆ ಸಿಲುಕಿಸಿ ಎಲ್ರೂ ಮುಸಿ ಮುಸಿ ನಗ್ತಿದ್ರು. “ ಯಾನಾಗಿದ್ದು ಅಳಿ ಸ್ಯಾನೆ ಉಸಾರಿಲ್ವ? ಎಲ್ ಅಡ್ಮಿಟ್ ಆಗಿದ್ದರು ಅಳಿ? ಕೇಳಿದ “ ಈಗ ಮೈಸೂರಗ್ ಬಂದನ , ಇಡೀ ಊರ್ಗೂರೇ ಓಗ್ ನೋಡ್ತಾ ಅದ. ನೀ ಓಗ್ನಿಲ್ಲ ಅಂದ್ರ ಎಂಗ್ಯ ಯೋಳು ಮಂತ.. ಎಂಗಸರೂ ಮಕ್ಕಳು ಎಲ್ಲ ಓಯ್ತಾ ಅವ್ರ ಅಂತದ್ರಲ್ಲಿ ನೀ ನೋಡ್ದೇರ್ ಆದ್ದಾ? ಓಗು ಅಟ್ಗೋಗಿ ಬಟ್ಟ ಗಿಟ್ಟ ಇಕ್ಕಂಡು ಓಗ್ ನೋಡ್ಕ ಬಾ ಓಗು. ಎಡ್ತೀನೂ ಕರ್ಕ ಓಗು, ಎಲ್ಲರೂ ಸೇರಿ ಹುರಿದುಂಬಿಸಿದರು. ಹೊರಡೋ ನಿರ್ಧಾರ ಮಾಡ್ಕಂಡ್ ಆಚಾರಿ ಕೇಳಿದ “ ಎಲ್ಯ ಅಳಿ ಇರದು ಆ ಆಸ್ಪತ್ರೆ. ಯಾತಂವ ಅಂತ ಒಸಿ ಬರ್ಕೊಡಿ ಮತ್ತ.” ಅಡ್ರಸ್ ಕೇಳಿದ .ಯಾಕೋ ಅತಿಯಾಯ್ತು ಅನಿಸಿ, “ನಾವ್ ಓಗಾವತ್ತಗ್ ಕರ್ಕಂಡ್ ಓಯ್ತೀವಿ ಬುಡು ನಿಂಗೊತ್ತಾಗಲ್ಲ” ಅಂದ್ರು ಅಮ್ಮ.
ಅಷ್ಟರಲ್ಲಿ ಅಪ್ಪ ಬಂದು ಎಲ್ಲರಿಗೂ ಉಗಿದು ಉಪ್ಪಿನಕಾಯಿ ಹಾಕಿ “ರಾಮಾಚಾರಿ ಅಂದ್ರ ಪಿಚ್ಚರ್ರು ಕ ಪೆದ್ ಬಡ್ಡೆತ್ತದೆ. ಈ ಕೋತ್ಗಳ್ ಮಾತ್ ಕ್ಯೋಲ್ಕಂಡ್ ಓಗಿ ಸುತ್ಕಂಡ್ ಬಂದೈ..ಅಟ್ಟಗ್ ಆಲ್ ತಕ್ಕಂಡೋಗ್ ಕೊಡು ಓಗು, ಟೀ ಮಡುಗ್ಲಿ. ತಡಿಕಂಡ್ ಬಂದಳು ನಿನ್ ಎಡ್ತಿ” ಅಂತ ಕಳಿಸಿದರು. ಇದಾಗಿ ಸುಮಾರು ದಿನಗಳವರೆಗೂ ಚೆಲುವಾಚಾರೀನ ಕಂಡರೆ “ರಾಮಾಚಾರಿ ನೋಡಾಕೋಗ್ನಿಲ್ವ?” ಅಂತ ರೇಗಿಸೋರೇ ಊರ್ ತುಂಬ.
ಹೊಲ ಉಳೋ ನೇಗಿಲು ಮಾಡೋದರಲ್ಲೂ ಚೆಲುವಾಚಾರಿ ಪರಿಣಿತ. ಇಡೀ ಊರಿನಲ್ಲಿ ಯಾರ್ಯಾರ ಜಮೀನುಗಳಿಗೆ ಎಂತೆಂತ ನೇಗಿಲು ಸೂಕ್ತ ಅನ್ನೋದು ಅವನಿಗೆ ಗೊತ್ತಿತ್ತು. ಊರ ಮುಂದಲ ಹೊಲಗಳದೇ ಒಂದು ಗುಣ, ಗೋಮಾಳದ ಪಕ್ಕದವು ಇನ್ನೊಂಥರದವು. “ಒಸಿ ಚೂಪಾಗೋಯ್ತಲ್ಲ ಆಚಾರಿ” ಅಂದ್ರೆ “ ಇಲ್ಲ ಕಣೋಗಿ. ಮಳ್ಳು ಮಣ್ಣು ನಿಮ್ಮದು ಎಳಿತ್ತ ಕಣೋಗಿ” ಅನ್ನುತ್ತಿದ್ದ. ಅಪ್ಪ ಬಿರುಬಿಸಿಲಿನಲ್ಲೂ ದಿನಕ್ಕೆ ನಾಕು ಪಾತಿ ಸಲೀಸಾಗಿ ಉಳುತ್ತಿದ್ದರು. ಮಧ್ಯಾಹ್ನ ಊಟ ತಗೊಂಡು ಹೋದಾಗ “ ಒಸಿ ಬಿರುಸು ಮಣ್ಣು, ಒಂದ್ ಹದ ಮಳ ಬಂದ್ರ ಇನ್ನೂ ಸಲೀಸಾಯ್ತದ. ಚೆನಾಗ್ ಮಾಡನ ನೇಗಿಲ” ಅನ್ನುತ್ತಿದ್ದರು.
ನಮ್ಮ ಸೋದರಮಾವನ ಟ್ರ್ಯಾಕ್ಟರು ನಮ್ಮೂರಿಗೂ ಬಂತು. ಡ್ರೈವರ್ ಸಮೇತ. ನಮಗಂತು ಮನೆ ಮುಂದೆ ದುಬೈ ರಾಜನ ಕಾರೇ ನಿಂತಷ್ಟು ಸಂಭ್ರಮ. ನಮ್ಮ ಹೊಲನೂ ಉಳಿಸಿಕೊಂಡು, ಗಂಟೆಗಿಷ್ಟು ಅಂತ ನಿಗಧಿ ಮಾಡಿ ಬೇರೆಯವರ ಹೊಲಾನೂ ಉಳಿಸಿಕೊಡುತ್ತಿದ್ದರು. ಯಾವಾಗ ಟ್ರ್ಯಾಕ್ಟರಿಗೆ ಸಿಕ್ಕಾಪಟ್ಟೆ ಡಿಮಾಂಡ್ ಶುರುವಾಯ್ತೋ… ಊರಿಗೆ ಇನ್ನೂ ಎರಡು ಟ್ರ್ಯಾಕ್ಟರು ಬಂದು ನಿಂತುಕೊಂಡವು. ಒಬ್ಬರಾದ ಮೇಲೆ ಒಬ್ಬರು ನೇಗಿಲು ಬಿಟ್ಟು ಟ್ರ್ಯಾಕ್ಟರಿಗೆ ಒಗ್ಗಿಕೊಂಡರು. ಟ್ರೇಲರೂ ಬಂತು. ಇನ್ನೂ ಏನೇನೋ ಬಂದು. ಚೆಲುವಾಚಾರಿಗೆ ನೇಗಿಲು ಮಾಡೋ ಕೆಲಸವೂ ಪೂರ್ತಿಯಾಗಿ ನಿಂತುಹೋಯ್ತು.
ಈಗ ಚೆಲುವಾಚಾರಿ ಮಂಚ, ಕುರ್ಚಿ ಬೆಂಚು, ಟೇಬಲ್ಲುಗಳನ್ನು ಮಾತ್ರ ಮಾಡುತ್ತಾನೆ. ಅದೂ ಕೆಲವು ಹೆಂಚಿನ ಮನೆಗಳವರಿಗೆ ಮಾತ್ರ. ಮತ್ತು ಅಪ್ಪನಂತ ಅವನ “ಫಿನಿಶಿಂಗ್” ಬಗ್ಗೆ , ಮರದ ಬಾಳಿಕೆ ಬಗ್ಗೆ ಯೋಚಿಸುವವರು ಮಾತ್ರ. ಉಳಿದ ಮನೆಗಳವರು ಅವನನ್ನು ಕರೆಯುವುದಿಲ್ಲ. ಅವರ ಹೊಸ ತಾರಸಿ ಮನೆಗಳಿಗೆ ಸಿಟಿಯ ಬಜಾ಼ರುಗಳಿಂದ ಬಣ್ಣದ , ಥರ ಥರದ ಸೋಫಾ, ಟೇಬಲ್ಲುಗಳು ಬರುತ್ತವೆ. ಅದನ್ನು ಚೆಲುವಾಚಾರಿಯ ಮಗನಿಂದಲೇ ತರಿಸುತ್ತಾರೆ. ಅವನು ಸಿಟಿಯ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ಊರಲ್ಲಾಗೋ ಸಂಪಾದನೆ ಊಟಕ್ಕೆ ಸಾಲಬೇಕಲ್ಲ ? ಬರೀ 15-20 ವರ್ಷಗಳಲ್ಲಿ ಇಷ್ಟೆಲ್ಲ ಬದಲಾಗಿಹೋಯ್ತಾ? ನಿಜಕ್ಕೂ ಅಚ್ಚರಿಯಾಗುತ್ತದೆ.
ನಮ್ಮಪ್ಪ ಉಳುತ್ತಿದ್ದ ನೇಗಿಲು ಈಗಲೂ ನಮ್ಮ ದನಗಳ ಹಟ್ಟಿಯಲ್ಲಿದೆ. ಹೋದಾಗೆಲ್ಲ ನೋಡುತ್ತೇನೆ. ಸುಡುಬಿಸಿಲಲ್ಲಿ ಅಪ್ಪ ಉಳೋದು ತಪ್ಪಿತು ಅಂತ ಸಂತೋಷವಾದರೂ, ಮೂಲೆ ಸೇರಿದ ಆ ನೇಗಿಲು ನನ್ನೊಳಗೆ ಯಾಕೋ ವಿಚಿತ್ರ ಸಂಕಟವನ್ನು ಹುಟ್ಟುಹಾಕುತ್ತದೆ.
 

‍ಲೇಖಕರು avadhi

29 April, 2014

ನಿಮಗೆ ಇವೂ ಇಷ್ಟವಾಗಬಹುದು…

6 Comments

  1. Anonymous

    ಸಂದಗದೆಕನವ್ವ…

  2. kiran

    ಸಂದಗದೆಕನವ್ವ

  3. ಜಿ.ಎನ್ ನಾಗರಾಜ್

    ಬದಲಾಗುತ್ತಿರುವ ಹಳ್ಳಿಯ ಜೀವನದ ಒಂದು ಝಲಕ್ ಚೆನ್ನಾಗಿದೆ . ಬೆಂಕಿ ಕಡ್ಡಿಯ ಉಪಯೋಗದಿಂದ ಬಹಳ ಪ್ರಯೋಜನ ಪಡೆದವರಿಗೆ ಬೆಣಚು ಕಲ್ಲುಗಳನ್ನು ನೋಡಿ ಸಂಕಟವಾಗುತ್ತದೆಯೇ ? ಅದೇ ಬಹಳ ಹಿಂದೆ ಬೆಂಕಿ ಹೊತ್ತಿಸಲು ಉಪಯೋಗಿಸುತ್ತಿದ್ದರಲ್ಲಾ ಅದು . ಅಥವಾ ಊರಿಗೊಬ್ಬ ಬ್ರಾಹ್ಮಣ ಮನೆತನಕ್ಕೆ ಅಗ್ನಿ ಯಾವಾಗಲೂ ಉರಿಯುವಂತೆ ನೋಡಿಕೊಳ್ಳುವುದೇ ಕೆಲಸವಾಗಿತ್ತಲ್ಲಾ ಅವರಿಗೆ ಈಗ ಕೆಲಸವೇ ಇಲ್ಲವಾಗಿದೆಯಲ್ಲಾ ಅದರಿಂದ ? ಮಿಕ್ಸ್ಇ ಬಂದು ಮೂಲೆ ಸೇರಿದ ಒಳಕಲ್ಲು, ಒನಕೆಗಳು ? ಇತ್ಯಾದಿ ಇತ್ಯಾದಿ.ಹೊಸ ಹೊಸತು ಬಂದೇ ಬರುತ್ತದೆ ಹಳತು ಮೂಲೆ ಸೇರಲೆಬೇಕು. ನಿಮ್ಮ ತಂದೆಯವರ ಬಿರುಬಿಸಿಲ ದುಡಿಮೆ ಸ್ವಲ್ಪ ಸರಳಗೊಂಡ ಬಗ್ಗೆ ನಿಮ್ಮ ಸಂತೋಷ ಿದೆಯಲ್ಲಾ ಅದು ಮುಖ್ಯ. ೆಷ್ಟೋ ಜನ ಪುರುಷರು ಮಿಕ್ಸಿ ಬಗ್ಗೆ ಮನುವಿನ ಮೊಮ್ಮಕ್ಕಳಂತೆ ಮಾತನಾಡುವುದು ಕೇಳಿಲ್ಲವೇ ? ಆದರೆ ಮುಖ್ಯ ಪ್ರಶ್ನೆ ಇರುವುದು ಚೆಲುವಾಚಾರಿಗಳ ಬದುಕಿನ ಪ್ರಶ್ನೆ.ಮತ್ತು ಟ್ರಾಕ್ಟರ್ ಬಳಸುವ ಡೀಸೆಲ್, ಅದರ ಬೆಲೆ, ಹೊರಬಿಡುವ ಹೊಗೆ . ಕೊಳ್ಳಬೇಕಾದ ರಸಗೊಬ್ಬರ ಮತ್ತು ನೇಗಿಲು ಎಳೆಯುತ್ತಿದ್ದ ಎತ್ತು ಮೇಯುತ್ತಿದ್ದ ಹುಲ್ಲಿನ , ಸಿಗುತ್ತಿದ್ದ ಸಗಣಿಯ ಪ್ರಶ್ನೆ.

  4. ಶಾ.

    ಮಾಸ್ತಿ, ತೇಜಸ್ವಿ,ಗೂರೂರು.ಆಲನಳ್ಳಿ ಕೃಷ್ಣ ರವರ ಕಥೆಗಳನ್ನು ಓದಿದ ನಂತರದಲ್ಲಿ ಇಂಥ ಕಥೆಗಳು ವಿರಳವಾಗಿತ್ತು. ಅವರ ದಾರಿಯನ್ನು ವಿಸ್ತರಿಸುತ್ತಿದ್ದಿಯ. ತಾಥಾಸ್ತು. ಈಗ ನಿನ್ನ ಬರೆವ ದಾಹ ತಣಿಯುತ್ತಿರಬಹದಲ್ಲವೇ ಬಾಲೆ..ಕುಸುಮ…?

  5. ಕುಸುಮಬಾಲೆ

    ನಿಮ್ಮೀ ಕಮೆಂಟೊಳಗೆ ಅದೆಷ್ಟು ವಿಚಾರಗಳನ್ನ ಎಳೆದು ತಂದಿರಿ ನಾಗರಾಜ್ ಸರ್.ಥ್ಯಾಂಕ್ಯು.ನಿಜಕ್ಕೂ ಗಂಭೀರ ವಿಚಾರಗಳವು.

  6. Anil Talikoti

    ತುಂಬಾ ಚೆನ್ನಾಗೈತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading