ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯೋಳ್ತೀನ್ ಕೇಳಿ’ : ಮಾರವ್ವ ಯಾವನ್ನೋ ಲವ್ ಮಾಡ್ಕ ಒಂಟೋಗಳ..


ಹಬ್ಬಕ್ ಬರಲ್ವಾ? ಅಮ್ಮನ ಫೋನು. “ಇಲ್ಲ. ಮಗೂಗೆ ಸ್ಕೂಲಿದೆ . ನನಗೂ ಕೆಲಸ. ಇಷ್ಟಕ್ಕೂ ಹಬ್ಬಕ್ ಬಂದೇನ್ ಮಾಡೋದು? ಬರಬೇಕಾದ್ ದೇವರೇ ಬರಲ್ವಲ್ಲ? ಕಿಚಾಯಿಸಿದೆ. “ನೋಡೂ ನೀನ್ ಬಂದರೆ ಬಾ ಇಲ್ಲದಿದ್ರೆ ಇಲ್ಲ. ಗ್ರಾಮದೇವತೆ ಬಗ್ಗೆ ಅಂಗೆಲ್ಲ ಮಾತಾಡಬೇಡ. ಮುಂದೆ ಊರಲ್ಲಿ ಬಾಳಿ ಬದುಕಬೇಕಾದವರು ನೀವು, ಭಯಭಕ್ತಿ ಇರ್ಲಿ” ಟಕ್ ಅಂತ ಪೋನ್ ಕಟ್ ಮಾಡಿಬಿಟ್ರು. ನಾಕು ವರ್ಷವಾಯ್ತು ನಮ್ಮೂರಲ್ಲಿ ಮಾರಮ್ಮನೋರು ಮೈಮೇಲ್ ಬಂದು.ಅದಕ್ ಮುಂಚೆಯಾದ್ರೂ ಬರ್ತಿದ್ದಿದ್ ಹೌದಾ? ಪೂರ್ತಿ ಓದಿದ ಮೇಲೆ ನೀವೇ ಹೇಳಿ.
ಚಾಮರಾಜನರದ ಸಂತೆಮರಳ್ಳಿಯ ಕುದೇರು ರಸ್ತೇಲಿ ಒಂದು ಪುಟ್ಟ ದೇವಸ್ಥಾನ, (ಯಾವ ದೇವರೋ ಮರೆತುಹೋಗಿದೆ).ದೇವಸ್ಥಾನದ ಮುಂದಲ ದೊಡ್ಡ ಅಂಗಳದಲ್ಲಿ ದೇಶವಳ್ಳಿ, ಹೆಗ್ಗವಾಡಿಪುರ, ಕುದೇರು, ಮರಳ್ಳಿ ಊರುಗಳಿಂದ ಜನ ಸೇರ್ತಿದ್ದರು.ಸುಡು ಸುಡು ಬೇಸಗೆ, ಡಂಕಣಕಣಡಂಕಣಕಣ…ತಮಟೆ ಬಾರಿಸ್ತಿದ್ದಂತೆ ಆವೇಶದಿಂದ ಕುಣ್ಕೊಂಡು ಕೆಂಪುವಸ್ತ್ರಧಾರಿ ಅಂಗಳಕ್ಕೆ ಬರುತ್ತಿದ್ದ. ನೆತ್ತಿ ಮೇಲೆ ರವ ರವಗುಟ್ಟುತ್ತಿರೋ ಸೂರ್ಯ. ಕೆಳಗೆ ದೊಡ್ಡ ಹಂಡೆಯಲ್ಲಿ ಕೊತ ಕೊತ ಕುದಿವ ಅನ್ನ, ತನ್ನ ಕೈಯನ್ನ ಅದರ ಒಳಗೆ ಹಾಕಿ, ಹಾಕಿ ಅನ್ನವನ್ನ ಸುತ್ತ ಚಿಮ್ಮಿಸುತ್ತಿದ್ದ. ಜನ ಉಧೋ ಉಧೋ ಎನ್ನುತ್ತಿದ್ದರು. ಸಣ್ಣವಳಿದ್ದಾಗ ನೋಡಿದ ಈದೃಶ್ಯ ನನ್ನ ಕಣ್ಣಲ್ಲಿ ಹಾಗೇ ಇದೆ.
ಎಲ್ಲ ಮುಗಿದಮೇಲೆ ಅಜ್ಜಿ ನನ್ನನ್ನೂ ಎಳಕೊಂಡು ಗುಂಪಿನೊಂದಿಗೆ ನಡೆಯುತ್ತಿದ್ದಳು. ”ಯಾನ ಉಡುಗಾಟವಾ? ನರಮನಸ ಅಂಗ್ ಮಾಡಕಾದ್ದ? . ಆ ಅಂಡೆ ದಂಡಕ್ಕೋಗ್ ನಿಂತ್ಕಳಕೆ ಆಗಲ್ಲ. ನಮ್ಮ ಕೈಲಿ, ದೇವತಿ ಇಲ್ದೆ ಇದೆಲ್ಲ ಎಂಗಾದ್ದು ಯೋಳಿ ಮತ್ತ? ಯಾನೋ ಒಟ್ನಲ್ಲಿ ನನ್ ತಾಯಿ ಮಳಬೆಳ ಕೊಟ್ ಕಾಪಾಡುದರ್ ಸರಿ. ಅಂತೆಲ್ಲ ಮಾತಾಡ್ಕಂಡು ಜನ ತಮ್ಮ ತಮ್ಮ ಹಟ್ಟಿ ಸೇರ್ಕೋತಿದ್ರು.
ಚಾಮರಾಜನಗರ, ಮೈಸೂರು, ನರಸೀಪುರ, ಸುತ್ತಮುತ್ತಲ ಎಲ್ಲ ಹಳ್ಳಿಗಳಲ್ಲೂ ವರ್ಷಕ್ಕೊಂದ್ಸಲ ಮಾರ್ಚ್ ವೇಳೆಗೆ ಊರಹಬ್ಬ ನಡೆಯುತ್ತೆ. ಮೂಗೂರು, ಕೆಸ್ತೂರು, ಹದಿನಾರು ಬಂಡಿಜಾತ್ರೆಗಳಂತೂ ಸಿಕ್ಕಾಪಟ್ಟೆ ಫೇಮಸ್ಸು. ಹಂಗೇ ನಮ್ಮೂರಲ್ಲೂ ಎರಡು ದಿನ ಗ್ರಾಮದೇವತೆ ಹಬ್ಬ. ಎಲ್ಲ ಜಾತಿಯೋರೂ ಸೇರಿ ಮಾಡೋ ಹಬ್ಬ. ಈ ಹಬ್ಬದ್ದೊಂದ್ ಪ್ರೋಸೆಸ್ ಇದೆ. ಅದೇನಪಾ ಅಂದ್ರೆ ಒಂದನೇ ದಿನ ತಂಪು. ಎರಡನೇ ದಿನ ಕೊಂಡ(ಕೆಂಡ). ಊರ ಪ್ರತಿಮನೇಲೂ ತಂಬಿಟ್ಟಿನ ದಪ್ಪನೆಯ ಉಂಡೆ ಮಾಡಿ, ಅದನ್ನ ಒಂದು ತಟ್ಟೆಗ್ ಹಾಕಿ ಅಲಂಕಾರ ಮಾಡಿ, ಮನೆಗೊಬ್ಬರು ಅದನ್ನಿಡ್ಕೊಂಡು ನಂದಿಕಂಬದ ಜೊತೆ ಮೆರವಣಿಗೇಲಿ ಬರ್ತಾರೆ. ಎಲ್ಲಾನೂ ತಗೊಂಡ್ ಹೋಗಿ ಊರಮುಂದಲ ಗುಡೀಲಿ ಗುಡ್ಡೆಹಾಕಿ ಪೂಜೆ ಮಾಡ್ತಾರೆ. ಆಮೇಲೆ ವಾಪಸ್ ಕೊಡೋವಾಗ ಯಾರ್ ಮನೆ ತಂಬಿಟ್ಟು ಇನ್ಯಾರ್ದೋ ಮನೆಗ್ ಹೋಗಿರತ್ತೆ. ಇದಾದ್ ಮರುದಿನ ಸಂಜೆಯೇ ಕೆಂಡಹಾಯುವ ಪ್ರಕ್ರಿಯೆ, ನಮ್ಮೂರ ಮೈನೆರೆದ ಹೆಣ್ಮಕ್ಕಳು ಬೀದಿಗ್ ಮುಖ ತೋರ್ಸದ್ ಎರಡೇ ಸಲ. ಒಂದು ಗೌರಿಹಬ್ಬದಲ್ಲಿ ಮಠಕ್ಕೆ ಪೂಜೆಗ್ ಬಂದಾಗ. ಇನ್ನೊಂದು , ಮಾರಮ್ಮನ್ ಜಾತ್ರೇಲಿ ದೇವರು ಕೊಂಡಕ್ ಬೀಳೋದ್ ನೋಡೋಕೆ ಅಂತ ಬಸುನ್ಗುಡಿ ಜಗುಲೀಗ್ ಬಂದಾಗ. (ಈ ಪರಿಸ್ಥಿತಿ ಈಗ ಸ್ವಲ್ಪ ಸುಧಾರಿಸಿದೆ )

ಹೆಣ್ಮಕ್ಕಳ ವಿಚಾರ ಬಿಡಿ. ಹಬ್ಬದ ವಿಚಾರ ಕೇಳಿ, ಹಿಂಗೇ 3 ವರ್ಷದ್ ಹಿಂದೆ ಮಾರಮ್ಮನ್ ಗುಡಿ ಮುಂದೆ ಕೊಂಡ ರೆಡಿಮಾಡಿಯಾಗಿತ್ತು. ಊರ ಜನ ಅವರ ಮನೆಗಳಿಗೆ ಬಂದ ನೆಂಟರಿಷ್ಟರು, ಎಲ್ಲರೂ ಸೇರಿದ್ರು. ಮೆರವಣಿಗೆ ಶುರುವಾಯ್ತು. ಊರ್ನೆಲ್ಲ ಮೂರ್ ಸುತ್ ಸುತ್ಕಂಡು ಛತ್ರಿ ಛಾಮರದ್ ಜೊತೇಲಿ ಕಳಶ ಹಿಡಿದ ವ್ಯಕ್ತಿ ಬಂದಾಯ್ತು. ಮೈ ಮೇಲ್ ದೇವರು ಬಂದು(!) ವಾಲಾಟಾನೂ ಶುರುವಾಯ್ತ. ಮಾರಮ್ಮಂಗ್ ಪೂಜೆ ಸಲ್ಲಿಸಿ, ಕೊಂಡದ್ ಗುಳಿ ಸುತ್ತಲೂ ಮೂರ್ ಸುತ್ ಹಾಕಿ ಕೊಂಡ ಹಾಯ್ದದ್ದೂ ಆಯ್ತು. ಎಲ್ಲರೂ ಉಧೋ ಉಧೋ ಅಂದರು. ವಾಪಾಸು ಹೋಗುವ ಮುನ್ನ ಕೊಂಡದ ಗುಳಿಯ ಬೂದಿಯನ್ನ ಭಯಭಕ್ತಿಯಿಂದ ಹಚ್ಚಿಕೊಂಡು, ಇನ್ನೊಂದಿಷ್ಟನ್ನ ಸಿಕ್ಕ ಕಾಗದದ ಚೂರಿಗೂ ಕಟ್ಟಿ ಸುತ್ತಿಕೊಂಡು,ಕೈಮುಗಿದು ಹೊರಟರು ಜನ.
ಹಬ್ಬವಾಗಿ, ಬಂದ ನೆಂಟರುಗಳೆಲ್ಲ ಅವರವರ ಊರು ಸೇರಿ ಆಗಿತ್ತು. ಜನಗಳ ಹೊಟ್ಟೇಲಿ ಹಬ್ಬದೂಟ ಜೀರ್ಣವಾಗಿತ್ತೋ ಇಲ್ಲವೋ, ಮೈಮೇಲೆ ದೇವರು ಬಂದಿದ್ದ ವಯಸ್ಸಾಗಿದ್ದ ಆ ವ್ಯಕ್ತಿಯ ಕಾಲ ಕೆಳಗಿನ ಚರ್ಮ ಪೂರ್ತಿ ಸುಟ್ಟು, ಸುಲಿದು ಹೋಗಿತ್ತು. ಆ ನೋವಿಗೆ ಜ್ವರ ಬೇರೆ, ಇದ್ಯಾಕೆ ಹೀಗಾಯ್ತು? “ಕುಡ್ಕಂಡ್ ದೇವರೊತ್ಕಂಡಿದ್ದೇನೋ ಕಣ್ ತಕ್ಕೋ. ಅಪಚಾರ ಮಾಡುದ್ರ ಬುಟ್ಟಳ ಮಾರಮ್ಮ?” ಜನ ಮಾತಾಡೋಕೆ ಶುರುಮಾಡಿದರು. ತಡೆದಷ್ಟೂ ತಡೆದು ಆತ ನಿಜ ಬಾಯಿಬಿಟ್ಟಿದ್ದ.”ನನ್ ಮೈಮ್ಯಾಲ ದೇವ್ರೇ ಬಂದಿರ್ನಿಲ್ಲ. ಕೊಂಡದ್ ಗುಳಿ ಮುಂದಕ್ ಬಂದಾಗ ನಾಯೋಳ್ದಿ, ದೇವರ್ ಬಂದಿಲ್ ಬುಟ್ ಬುಡಿ ಬುಟ್ಬುಡಿ ಅಂತ. ತಮಟ ಸದ್ದಗ ಕ್ಯೋಳ್ನೇ ಇಲ್ಲ. ತುಂಡೈಕ ಕೂಗ್ಕಂಡು ತಳ್ಬುಟ್ಟೋ” ಹ್ವಾದ ವರ್ಷವೂ ಬಂದಿರ್ನಿಲ್ಲ. ಒಸಿ ಜೋರಾಗ್ ಓಡಿದ್ದಿ ಇಷ್ಟ್ ಗಾಯ ಆಗಿರ್ನಿಲ್ಲ. ಈ ಸತಿ ಸ್ಯಾನೆ ನೋವ್ ಕೊಟ್ಬುಡ್ತು.
ಶುರುವಾಯ್ತು ಚರ್ಚೆ. ಬಸುನ್ಗುಡಿ, ಓಟ್ಳು, ಮಠ, ಮನೆ ಮನೆ ಜಗಲೀಲೂ ಇಧೇ ಮಾತು. “ದೇವ್ರೇ ಬಂದಿಲ್ಲ ಅಂತ ಗುಡ್ಡಪ್ಪ ಯೋಳುದ್ ಮ್ಯಾಲುವ ಐಕ ಯಾಕದ್ ತಳ್ಳುದ್ವಪ್ಪ?” ಕೇಳಿದ ಒಬ್ಬ. “ ಸದ್ದಗ ಯಾನ್ ತಾನೇ ಕ್ಯೋಳಿದು?” ಇನ್ನೊಬ್ಬ “ಓದೊರ್ಷೂ ಬಂದಿಲ್ಲ ಈ ವರ್ಷೂ ಬಂದಿಲ್ಲ ಅಂದ್ಮೇಲ ಈ ಊರ್ಲಿ ಮಾರವ್ವನೇ ಇಲ್ಲ ಅಂತ್ಲಪ್ಪ” ಅಂತ ಮತ್ತೊಬ್ಬ. ಇದು ಒಂದು ಗುಂಪಿನ ಚರ್ಚೆಯಾದರೆ . ತುಂಡೈಕಳ ಗುಂಪಲ್ಲಿ ಇನ್ನೊಂಥರದ ಮಾತುಕತೆ. “ಐ..ಮಾರವ್ವ ಇಲ್ಲ ಕಣ್ ಬುಡಿ, ಯಾವನ್ನೋ ಲವ್ ಮಾಡ್ಕ ಒಂಟೋಗಳ. ದೇವರುಗಳ್ ಮಾಡದ್ನೇ ಅಲ್ವ ಬಡ್ಡೆತ್ತವೆ ಮನ್ಸರ್ ಮಾಡಾದು? ದೇವರುಗಳು ಇಬ್ರೆಡ್ತೀರ್ ಮಾಡ್ಕೊಂಡಿಲ್ವ? ಅಂಗಿಯೆ ಇದುವೆ, ಮಾರವ್ವ ಎಲ್ಲಿಗ್ಯೋ ಓಡೋಗಳ ಕಣ್ ಬುಡಿ” ಜಗಲಿ ಮೇಲ್ ಕುಂತ್ಕಂಡು ಆಡ್ತಿದ್ದ ಮಾತ್ ಕ್ಯೋಳಿ ನಂಜಕ್ಕ ಒಳಗಿಂದ ಓಡ್ಬಂದ್ರು. “ಉಂಡ್ಬುಟ್ಟು ನ್ಯಾಯವಾಗ್ ಅರಗಿಸಿ ಮೂದೇವ್ಗಳೆ, ನಿಮ್ ಕಿತ್ತೋದ್ ನಾಲಗ್ಗ ನನ್ ಅಳ ಎಕ್ಕಡ ಮಡುಗ, ಊರ್ಲಿ ನಿಮ್ಮಂತೆವೆಲ್ಲ ಉಟ್ಕಂಡ್ ಮೇಲ ದೇವ್ರೆಲ್ ಬಂದದು? ಓಗ್ರುಡ ಅತ್ತಗ” ಓಡಿಸಿದರು. ತುಂಡೈಕ್ಳು, “ಮುಂದಲ ವರ್ಷಕ ಇವಳ ಕೈಗೇ ಕಳಸ ಕೊಟ್ರ ವಾಸಿ ಅನ್ನಂಗದ” ಅಂತ ಗೊಣಗಿಕೊಂಡು ಜಾಗ ಖಾಲಿ ಮಾಡಿದ್ವು.
ಹಿರಿತಲೆಗಳು ಮಾತಾಡೋಕ್ ಸುರು ಮಾಡಿದೋ, “ನಮ್ ಕಾಲ್ದಲಿ ಇಂಗಿತ್ತ? ಮುಟ್ಟಾದ ಎಣ್ಣೈಕಳ ತಕಂಡೋಗಿ ಊರಾಚ ತ್ವಾಟ್ದಲ್ ಇರುಸ್ತಿದ್ರು. ಅಬ್ಬ ಕಳೆಯೋಗಂಟ ಊರೊಳಕ್ ಕಾಲ್ ಮಡಗತಿರ್ನಿಲ್ಲ. ಮೂರ್ ಜಿನ ಎಕ್ಕಡ ಮೆಟ್ಕಂಡ್ ಯಾರೂ ತಿರಗಾಡ್ತಿರ್ನಿಲ್ಲ. ಕುಡತ ಇರ್ನಿಲ್ಲ.ಈಗ ಅಂಗಿದ್ದದ್ದಾ? ಮುಟ್ಟು ಮುನಿ ಕಟ್ ಮಾಡಲ್ಲ, ದೇವರ ಮೆರಣಗ ಆಗಾ ದಾರೀಲಿ ಎಕ್ಕಡ ಮೆಟ್ಕಂಡ್ ಕುಂತ್ಕತಿದ್ದರಿ. ದೇವರ್ ಬತ್ತಿದ್ರುವೆ ಜಗಲಿ ಮೇಲ್ ಕುಂತ್ಕಂಡ್ ಕಾಲ್ ಅಳ್ಳಾಡಿಸ್ತಿದ್ದರಿ, ಬಾ ಅಂದ್ರ ಎಲ್ಲಿಗ್ ಬಂದದ್ದು ದೇವ್ರು?
ಅಕ್ಕಪಕ್ಕದೂರಿನವರಿಗೂ ಸುದ್ದಿ ಗೊತ್ತಾಗಿ ಆಡ್ಕೋಳೋಕೆ ಶುರು ಮಾಡಿದ್ರು, ಅವರೂರಲ್ಲಿ ಎರಡು ಬೇರೆ ಬೇರೆ ಜಾತಿಯವರು ಕಿತ್ತಾಡಿಕೊಂಡು ಸಪರೇಟಾಗಿ ಹಬ್ಬ ಮಾಡಿದ್ರಂತೆ ಇಬ್ಬರ ಮೈಮೇಲೂ ದೇವರು ಬಂತಂತೆ.ಇಲ್ಲಿ ಒಬ್ಬರ ಮೇಲೂ ಇಲ್ಲ. ಹೀಗೆ,ಬೇರೆ ಊರವರು ಯಾವಾಗ ನಮ್ಮೂರ್ ಕಡೆ ತೋರುಬೆರಳು ಮಾಡಿದ್ರೋ, ಊರವರೆಲ್ಲರ ರೋಷ ಉಕ್ಕಿ ಮಠದಲ್ಲಿ ಸೇರಿದ್ರು, ಪಕ್ಕದೂರಿನ ಪ್ರಸಿಧ್ದ ಜ್ಯೋತಿಷಿಗಳನ್ನ ಕರೆದು ಊರಿಗೇನು ಕೇಡು ಕಾದಿದೆ? ಅಂತ ಪ್ರಶ್ನೆ ಮಾಡುವ ತೀರ್ಮಾನವಾಯ್ತು. ಅವರು ಬಂದು ಊರ ವಾಸ್ತು ಪರಿಶೀಲಿಸಿ, ಹೋಮ, ಶಾಂತಿ ಇತ್ಯಾದಿಗಳನ್ನ ಮಾಡಲು ಹೇಳಿದರು. ಊರ ಉಳಿಗಾಲದ ಪ್ರಶ್ನೆಯಾದ್ದರಿಂದ ಯಾರೂ ಚಕಾರವೆತ್ತದೆ ಎಲ್ಲ ಪೂಜೆ ಹೋಮಗಳನ್ನೂ ಮಾಡಿದ್ದಾಯ್ತು. ಇಷ್ಟೆಲ್ಲ ದ ಮೇಲೆ ಮುಂದಿನ ವರ್ಷ ಕಳಶ ಕೊಡೋದು ಯಾರ ಕೈಗೆ? ದೇವರು ಯಾರ ಮೈ ಮೇಲೆ ಬರಬೇಕು? ಅನ್ನೋದು ತೀರ್ಮಾನವಾಗಬೇಕಲ್ಲ? ಬುದ್ದಿಯವರ ಅಣತಿಯಂತೆ 12ರ ಆಸುಪಾಸಿನ ಪ್ರಾಯದ ನಾಕೈದು ಗಂಡುಹುಡುಗರನ್ನ ಹೊಳೆ ದಂಡೆಗ್ ಕರ್ಕಂಡ್ ಓಗಿ ಚಡ್ಡೀಲಿ ನಿಲಿಸಿ, ಅಷ್ಟೂ ಜನರ ಮೈಮೇಲೆ ತಣ್ಣೀರು ಸುರುವಲಾಯ್ತು ಆಮೇಲೆ ಬುದ್ದಿಯವರು ಒಬ್ಬನನ್ನ ಸೆಕೆಕ್ಟ್ ಮಾಡಿದರು.

ಮರುವರ್ಷ ಊರು ಮತ್ತೆ ಸಿಂಗಾರಗೊಂಡಿತು. 12ರ ಚಿಕ್ಕ ಪ್ರಾಯದ , ಹೊಸ ಹುರುಪಿನ ಹುಡುಗ ಕಳಶ ಹೊತ್ತದ್ದಾಯ್ತು. ಮೆರವಣಿಗೆ ಶುರುವಾಯ್ತು. ಮೆರವಣಿಕೆ ಅರ್ಧದಾರಿ ಕ್ರಮಿಸುವಾಗ ಕಳಶ ಹೊತ್ತವನ ಸುತ್ತ ಡಂಕಣಕ ಣಕ್ಕಣಕ ಡಂಕಣಕ ಣಕ್ಕಣಕ ಮ್ಯೂಸಿಕ್ಕು. ಎಂತವರ ಎದೆಯಲ್ಲೂ ಸ್ಟೆಪ್ಪು ಹಾಕಿಸಬಲ್ಲ ಆ ಮ್ಯೂಸಿಕ್ಕಿಗೆ ಕಳಶ ಹೊತ್ತವನ ಸುತ್ತ ಹೋ.. ಹೋ.. ಅಂತ ತುಂಡೈಕಳು ಕುಣಿಯುತ್ತಿದ್ದರು. ಆ ನಿನಾದಕ್ಕೆ, ಲಾಲಿತ್ಯಕ್ಕೆ ಕಳಶದ ಹುಡುಗನ ಕಣ್ಣು ತೇಲತೊಡಗಿದವು,, ಹುಡುಗನ ಮೈಮೇಲೆ ದೇವರು ವಾಲಾಡತೊಡಗಿತು. ನಾಕು ಜನ ಹಿಡಿದರೂ ಹುಡುಗ ದಕ್ಕುತ್ತಿಲ್ಲ.ವಾಲಾಟ ನಿಲ್ಲಲಿಲ್ಲ. ಖುಷಿ ಖುಸಿಯಾಗಿ ದೇವರು(!) ಕೊಂಡಕ್ಕೆ ಬಿತ್ತು.
ಊರಿಗೆ ಕಳಕೊಂಡಿದ್ದನ್ನೆಲ್ಲ ಪಡಕೊಂಡ ಸಂಭ್ರಮ. “ ಚಿಕ್ಕ ಗಂಡು, ನಾಕಾಳು ಹಿಡುದ್ರೂವ ಹಿಡಿಯಕಾತಿರ್ನಿಲ್ಲ. ನರಮನುಷನ್ಗ ಆ ಸಕ್ತಿ ಎಲ್ ಬರಬೇಕು ಯೋಳಿ ಮಂತ?” “ ಅಯ್ಯೋ ನಮ್ಮಟ್ಟಿ ತಾವಕ್ ಬಂದಾಗ್ ನೋಡಬೇಕಾಗಿತ್ತು. ಕಣ್ಣು ಸುಮ್ಮಗ ಇಷ್ಟಿಷ್ಟಗಲ ತೇಲಿಸಿ ತೇಲಿಸಿ ಬುಡ್ತಿತ್ತು.ಮೊಖ ಕೆಂಪಗ್ ರವ ರವ ಅಂತಿತ್ತು” ಹಿರೀಕರಿಗೆ ಸಮಾಧಾನವಾಯ್ತು.
ಈ ವರ್ಷ ಮತ್ತೆ ಹಬ್ಬದ ಸಂಭ್ರಮ ಸುರುವಾಯ್ತು, ನಾನು ಹೋಗಲಿಲ್ಲ. ಹುಡುಗನ ಮೈಮೇಲೆ ಯಾಕೋ ದೇವರು ಬರಲಿಲ್ಲವಂತೆ. (ಹೋದ ವರ್ಷವಾದರೂ ಬಂದಿತ್ತಾ? )ನೆಂಟರು ಬಂದು ಉಂಡದ್ದಷ್ಟೇ ಲಾಭ. ಇನ್ನು ಮುಂದಿನ ವರ್ಷದ ಹಬ್ಬದ ಕಥೆಯೇನು? ಅದಕ್ಕಿನ್ನೂ ಉತ್ತರವಿಲ್ಲ.
ಹಳ್ಳಿ ಜನಕ್ಕೆ, ಜಾತಿನೆಪವಿಲ್ಲದೆ ಒಂದಾಗಿ ಸಂಭ್ರಮಿಸಲು ವರ್ಷಕ್ಕೊಂದು ಗ್ರಾಮದೇವತೆ ಹಬ್ಬ ಬೇಕು ಒಪ್ಪುತ್ತೇನೆ. ಆದರೆ, ದೇವರಂತಾ ದೇವರು ಮನುಷ್ಯನಂತಾ ಮನುಷ್ಯನ ಮೈಮೇಲೆ ಬಂದು ವಾಲಾಡುತ್ತಾನೆಂದರೆ, ಯಾಕೋ ನಂಬಲಾಗುವುದಿಲ್ಲ..

‍ಲೇಖಕರು G

22 April, 2014

ನಿಮಗೆ ಇವೂ ಇಷ್ಟವಾಗಬಹುದು…

5 Comments

  1. chaithra.

    nimma ee lekhana galanna ondu pusthaka maadi, nijakku daaklarha aneka amshagalu illive. mundina talemaarige adhara grntavagatte 🙂

  2. ನಾಗೇಂದ್ರ ಶಾ

    ಓ… ಮಾರಮ್ಮ,ಮಾದೇವಿ.
    ನನ್ನ ಉಟ್ಸಿದ್ದು ನೀನಾದ್ರೂ ನಿನ್ನ ಮಾಡುದ್ದು ನಾನು ತಾಯಿ.
    ನೀನಿಲ್ಲದೆ ನಾನಿಲ್ಲ ಅನ್ನೋ ಠೆೇಂಕಾರ ನಿಂದು.
    ನಾನೆ ಇಲ್ಲದಿದ್ರೆ ನೀನೆಲ್ಲಿ ಅನ್ನೋ ಅಹಂಕಾರ ನಂದು…
    ಒಟ್ಟಾ ಇಂಗೇ ಸಾಗೋಣ ರೃಲು ಕಂಬಿಯ ಮೇಲೆ.
    ಆ ಕಡೆ ಗಾಲಿ ನಾನು. ಈ ಕಡೆ ಗಾಲಿ ನೀನು.
    ಎಲ್ಲವನ್ನೂ… ಎಲ್ಲರನ್ನೂ ಹೊತ್ತೋಯ್ಯೊಣ.

  3. ಕೆ ಎನ್ ಪಾರ್ಥಸಾರಥಿ, ಯೂನಿಯನ್ ಸಿಟಿ, ಕ್ಯಾಲಿಫೋರ್ನಿಯ

    ಓದಿದೆ.. ಚೆನ್ನಾಗಿದೆ.ನಮ್ಮೂರ ಭಾಷೆ ಇಷ್ಟವಾಯ್ತು. ನಾನೂ ನನ್ನೂರು ಚಿಕ್ಕಾಟಿ ಗ್ರಾಮದಲ್ಲಿ ದೇವರು ಬರುವುದನ್ನು ಎಳೆಯನಾಗಿದ್ದಾಗ ನೋಡಿದ್ದೇನೆ.ಬ್ರಾಹ್ಮಣರ ಮನೇಲಿ ಇದನ್ನು ನಂಬ್ತಿರಲಿಲ್ಲ. ದರೂ ಊರ ಹಬ್ಬ ಅಂತ ಗೌರವಿಸುತ್ತಿದ್ದರು. ನಮ್ಮಪ್ಪ ವಿಷ್ಣು ದೇವರ ಪೂಜಾರಿ ಮತ್ತು ಸ್ಕೂಲು ಮೇಷ್ಟ್ರು.ಈ ಕುರಿತ, ಅನೇಕ ಸಾಮಾಜಿಕ, ರಾಜಕೀಯ ವಿಚಾರಗಳು ಕಿವಿಗೆ ಬಿದ್ದಿದೆ.ನನಗೂ ಈ ಹಬ್ಬಗಳ ನೆನಪುಗಳು ಹಲವು ಬಾರಿ ಕಾಡಿವೆ.ಗ್ರಾಮದ ಕತ್ತಲು, ನೇಮ ನಿಯಮಗಳು, ಮುರಿದು ಬಿದ್ದದ್ದು ಮೊದಲನೆ ಸ್ವಾತಂತ್ರೋತ್ಸವದ ಆರಂಭಕ್ಕೆ.ಆಗಲೇ ಅಪ್ಪ ಊರು ಬಿಡಲು ತೀರ್ಮಾನಿಸಿ, ತಲಕಾಡಿಗೆ ವರ್ಗ ಮಾಡಿಸಿಕೊಂಡು, ಮಕ್ಕಳಿಗೆ ಆಧುನಿಕ ಶಿಕ್ಷಣ ಕೊಡಿಸಿದರು.

  4. anand salundi

    ದೇವರಂತಾ ದೇವರು ಮನುಷ್ಯನಂತಾ ಮನುಷ್ಯನ ಮೈಮೇಲೆ ಬಂದು ವಾಲಾಡುತ್ತಾನೆಂದರೆ, ಯಾಕೋ ನಂಬಲಾಗುವುದಿಲ್ಲ.. (y)

  5. madhu kumar

    ಚೆನ್ನಾಗಿದೆ, ಭಾಷೆಯ ಲಾಲಿತ್ಯ & ನಿನಾದ ಇಷ್ಟವಾಯ್ತು. ಉಧೋ ಉಧೋ………………………..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading