
“ಏಯ್ ಸಿದ್ಲಿಂಗ ಬಾ ಇಲ್ಲಿ” ಅಲ್ಲೆಲ್ಲೋ ಹೋಗುತ್ತಿದ್ದ ಸಿದ್ಲಿಂಗನನ್ನ ನಂಜಕ್ಕ ಕೂಗಿಕೊಂಡ್ರು. ಅವನೂ ಕುಂಟಕಾಲು ಹಾಕಂಡು ಬಂದ. “ದುಡ್ಡೆಲ್ಲಿ ಮಡಗಿದ್ದೆ ಸಿದ್ಲಿಂಗೀ? ಮಗಳ ಮದ್ವೆಯ ನೀನು ಆ ಥರವಾಗ್ ಮಾಡ್ತಿದ್ದಯಿ ಅಂತ ಯಾರೂ ಅನ್ಕಂಡಿರಲಿಲ್ಲ ಬುಡು.” ಅಂದ್ರು ನಂಜಕ್ಕ. ಈ ಮಾತುಗಳಿಗಾಗಿಯೇ ಕಾದಿದ್ದಂತೆ ಸಿದ್ದೂರ ಥೇಟು ಮದುವೆಹೆಣ್ಣಿನಂತಯೆ ನಾಚಿ, ತಲೆಕೆರೆದುಕೊಂಡ. “ಏಯ್..ಇನ್ನೇನ್ ಮಾಡಿರಿ ನಾಕ್ ಜನದ್ ಸಮಕ್ ಮಾಡ್ಲೇಬೇಕಲ್ಲ” ಅಂದ. “ ಆದ್ರೂವ ಸಿದ್ದೂರ, ಯಾವ್ ಆಸ್ತಿ ಮಡಗಿರವರೂ ಏನೂ ಮಾಡಕಾಗಲ್ಲ ಬುಡು.” ಅಂದ್ರು ಪುಟ್ಟಮ್ಮ. “ ಐ ಅದ್ಯಾವ್ ಸಾಹುಕಾರನಪ್ಪ ನಮ್ಮೂರ್ಲಿ ಆಪಾಟಿ ಛತ್ರ ಮಾಡಿ, ಕುಡಿಯಕ ಬಾಟಲ್ ನೀರ್ ಕೊಟ್ಟು, ಅದೆಂತೆಂತ ಅಡುಗೆಗಳ್ನೋ ಮಾಡ್ಸಿ ಮದ್ವ ಮಾಡಿದ್ದೋರು? ಸಾರ್ಥಕ ಬುಡಯ್ಯ” ಅಂತ ಬಸುರಾಜಣ್ಣನೂ ಸಿದ್ಲಿಂಗೂನ ಬೆನ್ನು ತಟ್ಟಿಬಿಟ್ಟರು. “ಬತ್ತೀನಿ ತಡ್ರೀ..ಒಸಿ ದನ ಬುಡ್ಬೇಕು ಟೈಮಾಗ್ಬುಟ್ಟದ. ಅಂತ ಕುಂಟು ಕಾಲೆಳಕೊಂಡು ಹೋದ ಸಿದ್ಲಿಂಗು ಅಗತ್ಯಕ್ಕಿಂತ ಹೆಚ್ಚು ಎದೆಯುಬ್ಬಿಸಿದಂತೆ ಕಂಡಿತು ನನಗೆ.
ಬೇರೆಯವರ ಹಟ್ಟೀಲಿ ದನ ಮೇಯಿಸೋದು, ಹಾಲು ಕರೆದು ಡೈರಿಗೆ ಹಾಕೋದು. ಆಳುಗಳಿಗೆ ಊಟ ಹೊರೋದು. ಇವು ನಮ್ ಸಿದ್ಲಿಂಗು ಮಾಡೋ ಕ್ಯಾಮೆ. ಇವನಿಗೆ ತಾನು ಮದುವೆಯಾಗೋ ಬಗ್ಗೆಯೇ ದೊಡ್ಡ ಡೌಟಿತ್ತು. ಒಂದು ಕಾಲನ್ನ ತಿರುಗಿಸಿ ತಿರುಗಿಸಿ ಹಾಕ್ತಾ ನಡಿಯೋ ಇವನಿಗೆ ಯಾರು ಹೆಣ್ಣು ಕೊಟ್ಟಾರು? ಆದ್ರೆ ಅವನ ನಸೀಬು ಚೆನ್ನಾಗಿತ್ತು. ಲಕ್ಷಣವಾದ ಎಸ್ಎಸ್ಎಲ್ ಸಿ ಬೇರೆ ಓದಿಕೊಂಡ ಹುಡುಗಿ ಸಿಕ್ಕಳು. ಅವಳಿಗೆ ಪಾಪ ಅಪ್ಪ ಅಮ್ಮ ಇರಲಿಲ್ಲ. ಅಣ್ಣಂದಿರು ಇದ್ದ ಮೂರೆಕರೆ ಭೂಮೀಲಿ ತಾವು ಒಂದು ಎಕರೆ ತಗೊಂಡು ಇವಳಿಗೆ ಒಂದೆಕರೆ ಬಿಟ್ಟರು. “ನಾವು ಮಾಡದೂ ಕೂಲಿನೇ, ಜಮೀನ್ ಮಾರಿ ಮದ್ವೆ ಮಾಡ್ತೀವಿ, ಇಲ್ಲ ಜಮೀನ್ ಉಳಿಸ್ಕಂಡ್ರ ಮಠದಲ್ಲಿ ಸಾಮೂಹಿಕ ವಿವಾಹದಲ್ಲಿ ಮದ್ವ ಮಾಡ್ತೀವಿ” ಅಂತ ಆಯ್ಕೆ ಇಟ್ಟಿದ್ದರು. ಈ ಸಿದ್ಲಿಂಗುನೂ ಅವನ ಭಾವೀ ಹೆಂಡತೀನೂ..ಹಿರಿಯರೂ ಸೇರಿ, ಭೂಮಿ ಉಳಿಸಿಕೊಳ್ಳೋ ಬಗ್ಗೇನೇ ಒಲವು ತೋರಿದರು.
ಮದುವೆಯಾಯ್ತು ಒಂದು ಗಂಡು ಒಂದು ಹೆಣ್ಣು ಮಕ್ಕಳಾದರು. ಸಿದ್ಲಿಂಗುವಿನ ಹೆಂಡತಿ ಜಾಣೆ. ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡಲು ಶುರುಮಾಡಿದಳು. ಒಂದು ಲೆಕ್ದಲ್ಲಿ ಇಬ್ಬರದೂ ಕೂಲಿ. ಸಾಮಾನ್ಯ ಆದಾಯದ ಸಿಂಪಲ್ ಸಂಸಾರ. ಈ ಇಬ್ಬರೂ ದಂಪತಿಗಳು ಹತ್ತಾರು ವರ್ಷ ದುಡಿದೂ ದುಡಿದೂ ಕೂಡಿಟ್ಟಿದ್ದ ಹಣವನ್ನ ಮಗಳ ಮದುವೆ ಮಾಡಿ ಒಂದೇ ದಿನದಲ್ಲಿ ಉಡಾಯಿಸಿದ್ದರು. ಸಾಲದು ಅಂತ ಅದೇನೋ ರಾಷ್ಟ್ರಪ್ರಶಸ್ತಿ ಬಂದ ಖುಷಿಯಲ್ಲಿ ಊರ ತುಂಬಾ ಓಡಾಡ್ತಿದ್ದರು. ಅಯ್ಯೋ ಅನ್ನಬೇಕಾ. ಕೋಪ ಮಾಡಿಕೊಳ್ಳಬೇಕ ಅನ್ನೋ ಕನ್ಫ್ಯೂಷನ್ನು ನನಗೆ.
ತುಸು ಹಿಂದೆ ಹೀಗಿರಲೇ ಇಲ್ಲ. ಮದುವೆಗಳು ನಡೆಯುತ್ತಿದ್ದದು ಊರಲ್ಲೇ. ಮನೆಯ ಮುಂದೆಯೇ ಚಪ್ಪರ ಹಾಕ್ತಿದ್ದರು. ದೊಡ್ಡ ದೊಡ್ಡ ತೊಟ್ಟಿಮನೆಗಳು.ಅಕ್ಕಪಕ್ಕದ ಮನೆಗಳು ಮದುವೆಯ ಜನರನ್ನ ತುಂಬಿಸಿಕೊಳ್ಳುತ್ತಿದ್ದವು. ಊರಲ್ಲಿ ಒಬ್ಬರ ಮನೆಯ ಮದುವೆಯೆಂದರೆ ಇಡೀ ಊರಿಗೇ ಒಂದು ಸಡಗರ. ಮದುವೆಗೆ ಮುನ್ನ ಬಂದ ಜನರಿಗೆ ಬೇಕಾದ ಹಪ್ಪಳ ತಯಾರಿಸುವುದೂ ಒಂದು ಸಡಗರವೇ. ಮದುವೆಮನೆಯವರು “ಹಪ್ಪಳ ಇಕ್ಕೊಡಿ ಬನ್ನಿ” ಅಂತ ಮನೆಮನೆಗೂ ಬಂದು ಕರೆಯೋದು. ಮನೆಗೊಬ್ಬ ಹೆಂಗಸರಂತೆ ಎಲ್ಲರೂ ಹೋಗಿ ಹಪ್ಳ ಮಾಡೋದು. ಜೊತೇಲಿ ನಮ್ಮಂತ ಚಿಲ್ಟುಪಿಲ್ಟು ಮಕ್ಕಳುಗಳು ಸೇರಿ ಹಪ್ಪಳ ಒಣಗಿಹಾಕೋದು. ಕೋತಿ, ಕಾಗೆಗಳ ಕಾಯೋದು, ಒಣಗಿದ್ದನ್ನ ಲೆಕ್ಕಮಾಡಿ ಕೊಡೋದು. ಈ ಹಪ್ಪಳ ಮಾಡೋದರ ಜೊತೆ ಮನೆಮನೆಮಾತು, ಆ ಸುದ್ದಿ ಈ ಸುದ್ದಿ ಸೇರಿ, ಗಿಜಿ ಗಿಜಿಗುಡುತ್ತಿತ್ತು. ಹುಡುಗ ಹುಡುಗಿ ಕೂತು ಧಾರೆ ಎರೆಸಿಕೊಳ್ಳೋ ಜಾಗದ ಗೋಡೆಯನ್ನ “ಹಸೆಜಗಲಿ” ಅನ್ನೋ ಸಾಂಪ್ರದಾಯಿಕ ಚಿತ್ರ ಬರೆದು ಅಲಂಕರಿಸಲಾಗ್ತಿತ್ತು. ಈ ಚಿತ್ರ ನಮ್ಮನೇಲೂ ಇದೆ. ಬೇಕೆಂದೇ ನಾನದನ್ನ ಉಳಿಸಿಕೊಂಡಿದ್ದೇನೆ.
ಮದುವೆ ಮನೆಯವರು ಊರ ಪ್ರತಿಮನೆಗೂ ಬಂದು. “ಎಲ್ಲಾ ಬಂದ್ಬುಡಿ ಒಲೆ ಹಸ್ಸಬ್ಯಾಡಿ” ಅಂದು ಹೋಗ್ತಿದ್ದರು. ಹಿಂದಿನ ದಿನ ಸಂಜೆ ವರನ ಕಡೆಯವರು ಬಂದು ಮಠದಲ್ಲಿ ಕೂರೋದು. ಆಮೇಲೆ ವಧುವಿನ ಕಡೆಯವರು ಹೋಗಿ ವೀಳ್ಯ ಕೊಟ್ಟು ಊರತುಂಬ ಮುಖ್ಯಬೀದಿಗಳಲ್ಲಿ ನಡೆಮುಡಿ ಹಾಸಿ, ಕೈಹಿಡಿದು ನಡೆಸಿಕೊಂಡು ವಧುವಿನ ಮನೆಗೆ ಕರೆತರೋದು. (ಕೆಲ ಊರುಗಳಲ್ಲಿ ಕುದುರೆ ಮೇಲೆ ಕರೆತರೋದೂ ಇತ್ತು) ವಾದ್ಯದ ಸದ್ದಾಗುತ್ತಲೇ ಊರ ಹೆಂಗಸರು ಮಕ್ಕಳು “ಗಂಡ್ ಕರ್ಕಂಡ್ ಬತ್ತಾವರ ಬನ್ನಿ ಬನ್ನಿ” ಅನ್ಕೊಂಡು, ಮಾಡ್ತಿದ್ ಕೆಲಸಾನೂ ಕೈಬಿಟ್ಟು ಎದ್ನೋ ಬಿದ್ನೋ ಓಡಿ ಹೋಗಿ, ಅಕ್ಕಪಕ್ಕದ ಜಗಲಿ ಏರಿಕೊಂಡು ನೋಡೋದು. ಆಮೇಲೆ ಬಂದು, ಸುಂದರನೋ, ಕಪ್ಪೋ, ಕುಳ್ಳೋ, ಮತ್ತೊಂದೋ ಅಂತ ಮಾತಾಡೋದು. ಸಂಜೆಯ ಉಪಹಾರ, ರಾತ್ರಿಯ ಊಟ , ಶಾಸ್ತ್ರಗಳು, ಮರುದಿನ ಧಾರೆ.
ರಿಸೆಪ್ಷನ್ನು ಗಿಸೆಪ್ಷನ್ನು ಎಂತದೂ ಇರ್ತಿರಲಿಲ್ಲ. ಅಕ್ಷರ ಬಲ್ಲವರು ಒಂದು ಪೆನ್ನು ಪುಸ್ತಕ ಹಿಡಿದು ಮುಯ್ಯಿ ಪಟ್ಟಿ ಬರೆಯಲು ಕೂರೋರು. ಅವರ ಕೈಗೆ ಹಣ ಕೊಟ್ಟು ಬರೆಸಿ ಹೋಗುತ್ತಿದ್ದರು. ಹಿಂದೆ ಇಂತವರು ಇಷ್ಟು ಕೊಟ್ಟರು ಅಂತ ಕೂಗಿ ಹೋಳೋದೂ ಇತ್ತಂತೆ, ಅದನ್ನ ನಾನು ಕಂಡಿಲ್ಲ. ಆಮೆಲಾಮೆಲೆ ಕ್ಯಾಮರಾಗಳು ಬಂದು ಫೋಟೋದ ಸಲುವಾಗಿ ಧಾರೆಯ ನಂತರ ಸ್ವಲ್ಪ ಹೊತ್ತು ನಿಲ್ಲೋರು.
ಊರ ಎಲ್ಲರೂ ಸೇರಿ ಹಣ ಹಾಕಿ ದೊಡ್ಡ ದೊಡ್ಡ ಪಾತ್ರೆಗಳನ್ನ ತಂದಿಟ್ಟಿದ್ದರು. ಅದರ ಹೆಸರು “ಊರೊಟ್ಟಿನ ಸಾಮಾನುಗಳು” ಊರಲ್ಲಿ ಯಾರ ಮನೆಲಿ ಏನೇ ಶುಭಾಶುಭ ಕಾರ್ಯವಾದರೂ ಅದನ್ನ ಬಳಸುತ್ತಿದ್ದರು. ಸೌದೆ ಒಲೆಯಲ್ಲಿ , ಆ ದೊಡ್ಡದೊಡ್ಡ ಪಾತ್ರೆಗಳಲ್ಲಿ ಅಡುಗೆ ಬೇಯುತ್ತಿತ್ತು. ಮದುವೆಯಾದ ಮೇಲೆ ಅದನ್ನ ಮತ್ತೆ ಮಠದಲ್ಲಿ ಇಡಲಾಗುತ್ತಿತ್ತು.
ಆಗ ಹೀರೋಹೋಂಡ ಗಾಡಿಗಳ ದರಬಾರು. ಗಂಡಿಗೆ ಹೀರೋಹೋಂಡ ಕೊಡಿಸೋದು ಒಂಥರಾ ಅಲಿಖಿತ ನಿಯಮವೇ ಆಗಿಹೋಗಿತ್ತು. ಗಂಡು ಹೆಣ್ಣುಗಳು ರಿಸೆಪ್ಷನ್ನಿಗೆ ನಿಂತಾಗ, ಆ ಗಾಡಿಯನ್ನೂ ಅಲಂಕರಿಸಿ ನಿಲ್ಲಿಸಿರ್ತಿದ್ರು. ಈಗ ನೆನಸಿಕೊಂಡ್ರೆ ನಗು ಬರತ್ತೆ.
ಬೈಕಿನ ಕಥೆ ಬಿಡಿ, ನಿಧಾನಕ್ಕೆ ಯಾಕೋ ಊರ;ಲ್ಲಿ ಚಪ್ಪರ ಹಾಕಿ ಮದುವೆ ಮಾಡೋದು ನಿಲ್ಲುತ್ತಾ ಬಂತು. ಯಾಕೆ ಅವನಿವನ ಕಾಲು ಹಿಡೀಬೇಕು? ಅನಿಸಿಯೋ, ಅಥವಾ ಇನ್ಯಾವ ದೊಡ್ಡಸ್ತನಕ್ಕೋ ಒಬ್ಬೊಬ್ಬರಾಗಿ ಮದುವೆಗೆ ಸಿಟಿಯ ಛತ್ರಗಳನ್ನ ಬುಕ್ ಮಾಡಲು ಶುರುಮಾಡಿದರು. ಅಷ್ಟು ಲಕ್ಷ ಖರ್ಚಾಯಿತು. ಇಷ್ಟು ಲಕ್ಷವಾಯಿತು ಅನ್ನೋದು ಪ್ರೆಸ್ಟೀಜ್ ಇಶ್ಯು ಆಗತೊಡಗಿತು. ಯಾವ ಛತ್ರ? ಎಷ್ಟು ಸಾವಿರ ಜನರಿದ್ದರು? ಎಂತ ಅಡುಗೆಯಾಗಿತ್ತು? ಅನ್ನುವುದರಿಂದ ಹಿಡಿದು ಪ್ರತಿಯೊಂದರಲ್ಲೂ ಒಬ್ರನ್ನೊಬ್ಬರು ಮೀರಿಸುವ ತವಕ. ಒಂತರದ ಅನಾರೋಗ್ಯಕರ ಕಾಂಪಿಟೇಷನ್ನು.
ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ ಬಡವನಯ್ಯಾ. ಅಂದಿಲ್ಲವೇ ಬಸವಣ್ಣೋರು? ಆ ತತ್ವವನ್ನ ಅಪ್ಲೈ ಮಾಡಿಕೊಂಡಿದ್ದರಾಗಿತ್ತು. ಹಾಗಾಗಲಿಲ್ಲ. ನಮ್ಮೂರ , ಸುತ್ತಮುತ್ತಲ ಹಳ್ಳಿಗಳ ಅದೆಷ್ಟೋ ಜನ ಜಮೀನು ಕಳಕೊಂಡದ್ದರ ಮುಖ್ಯ ಕಾರಣ ಮದುವೆಯೇ. ಮದುವೆ ಅನ್ನುವುದಕ್ಕಿಂತ ಈ ಹಾಳು ಫಾಲ್ಸ್ ಪ್ರೆಸ್ಟೀಜ್ ಗಾಗಿಯೇ. ಭಾರತದ ಆರ್ಥಿಕತೆ ಹಿಂದುಳಿಯಲು ಕಾರಣ ಕೊಡುವ ಎಕಾನಾಮಿಸ್ಟ್ಗಳು ಇಲ್ಲಿನ ಜನರ ಅನಗತ್ಯ ದುಂದುವೆಚ್ಚಗಳನ್ನೂ ಹೆಸರಿಸುತ್ತಾರೆ.
ಒಂದೆರಡು ದಿನದ ಮದುವೆಗೆ, ವರ್ಷಗಟ್ಟಲೆ ಕೂಲಿ ಮಾಡಿ ಕೂಡಿಟ್ಟ ಹಣ, ತಲೆತಲಾಂತರದಿಂದ ಬಂದ , ಜೀವನಕ್ಕೆ ಆಧಾರವಾಗಿರೋ ಆಸ್ತಿಗಳು. ಎಲ್ಲವನ್ನೂ ಕಳೆದುಕೊಳ್ತಾರೆ, ಸಾಲದ ಶೂಲಕ್ಕೂ ಸಿಕ್ಕಿ ನರಳಿ ಸಾಯುತ್ತಾರೆ. 24 ಗಂಟೆಗಳ ದರಬಾರಿಗೆ ಜೀವಮಾನವನ್ನೇ ಬಲಿಕೊಟ್ಟುಬಿಡುತ್ತಾರೆ. ಇನ್ನು ಮದುವೆಯಾದ ಹೆಣ್ಣಿನ ಬಾಳಾಟ ಸರಿಯಾಗದಿದ್ದರಂತೂ ಆ ಪಾಡು ಇನ್ನೂ ಹೇಳತೀರದು. ಯಾವನೋ ತಲೆಕೆಟ್ಟ, ಗಂಡಸೋ ಹೆಂಗಸೋ ಕೂತು. “ಮಾಡ್ದೆ ಬುಡು,ನೀನುವೆ ಗತಿಗೆಟ್ ಮದ್ವೆಯ.” ಅಂದುಬಿಡುವ ಭಯಕ್ಕೆ, ಅಥವಾ ನಮ್ಮ ಸಿದ್ಲುಂಗುನ ಹೊಗಳಿದಂಗೆ “ಏಯ್ ಕೂಲಿ ಮಾಡುದ್ರೂ ಸೈ ಬುಡು ಮಾರಾಯ, ಎಂತಾ ಮದ್ವ ಮಾಡಾಕ್ಬುಟ್ಟೆ” ಅನ್ನುವ ಹೊಗಳಿಕೆಗೆ ಇಷ್ಟೆಲ್ಲಾ ಮಾಡಬೇಕಾ? ಆ ಹೊಗಳಿಕೆ ತೆಗಳಿಕೆ ಕೂಡ ಒಂದೋ ಎರಡೋ ದಿನದ್ದು. ಅಥವಾ ಅವರನ್ನ ಮೀರಿದ ಮದುವೆ ಇನ್ಯಾರೋ ಮಾಡೋವರೆಗೂ ಅಷ್ಟೆ. ಅದಕ್ಕಾಗಿ ನಮ್ಮ ಇಡೀ ಬದುಕನ್ನ ಯಾಕೆ ಬಲಿಕೊಡಬೇಕು? ಇಷ್ಟಕ್ಕೂ ನಾವು ಬದುಕೋದು ಯಾರಿಗಾಗಿ? ಯಾತಕ್ಕಾಗಿ.? “ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರ ಹೊನ್ನ ಕಳಶವಯ್ಯ” ಎಂದವನ ಆರಾಧಿಸುತ್ತಾ, ಅದೇ ತತ್ವದ ಶಿರಚ್ಚೇನದ ಮಾಡಲಾಗುತ್ತಿದೆ ಇಲ್ಲಿ.
ಜಗಲೀಲಿ ಕೂತು, ಇಷ್ಟೆಲ್ಲ ಬರೆದು ಮೇಲೇಳುವವಳಿದ್ದೆ. ನಾಯಕರ ಬೀದಿಯ ಹುಡುಗ ಬಂದ, “ಏನೋ ಗಂಡುಮಗು ಆಯ್ತಂತ್ಲಲ?” ಅಂದೆ. “ಹ್ಞೂ ಅಳಿ ಅದ್ಕೇ ಒಸಿ ನಿಮ್ ಅಪ್ಪಾರ್ ನೋಡಾಕ್ ಬಂದೆ” ಅಂದ “ ಯಾಕೋ. ಹಣ್ಣು ಸಕ್ಕರೆ ಹಂಚಬೇಕಾ? ಬಾಳೆಹಣ್ಣು ಬೇಕಿತ್ತಾ? “ ಅಂದೆ. “ಇಲ್ಲ ಅಳಿ, ನನ್ನದೊಂದ್ ಇಪ್ಪತ್ ಕುಂಟೆ ಜಾಗ ಇತ್ತು. ಅದ್ನ ನಿಮ್ಮಟ್ಟಿ ಗುಂಪಲಿ ಯಾರಾರು ತಕ್ಕಂಡರ ಅಂತ ಕ್ಯೋಳಬೇಕಾಗಿತ್ತು” ಅಂದ. “ನೀನು ನೆಲ್ಲಿ ಕೆಲ್ಸದಲ್ಲಿ ಚೆನ್ನಾಗೇ ಸಂಪಾದನೆ ಮಾಡ್ತೀಯಲ್ಲ. ಆ ಜಾಗಾನ್ಯಾಕ್ ಮಾರಬೇಕು ಈಗ? ಅಂದೆ. “ಐ ನಮ್ ಕೂಸ್ನ ತೊಟ್ಟಿಲ್ ಶಾಸ್ತ್ರ ಮಾಡಬೇಕು ಅಳಿ. ಛತ್ರ ಮಾಡಿ, ನಮ್ಮೂರ್ಲೇ ಯಾರೂ ಮಾಡಿರ್ಬಾರ್ದು ಹಂಗ್ ಮಾಡಾಕ್ಬುಡಬೇಕು ಅಂತ. ಜೊತಲಿ ಒಸಿ ಸಣ್ಣ ಪುಟ್ಟ ಸಾಲಾನೂ ತೀರಿಸ್ಕಳವು ಅಂತ” ಅಂದ. “ ಯಾವ್ದಳಿ ನಿಮ್ ಮೊಬೈಲು ಸ್ಯಾಮ್ಸಂಗಾ? ನಂದೂ ಅದಿಯೇ ಅಳಿ. ಎಸ್ ಫೋರು. ನಮ್ ಗಂಡು ಈಗ್ಲೆ ಇದ್ರಲ್ಲಿರಾ ಗೊಂಬ ನೋಡ್ಕೊಂಡ್ ಕೈ ಕಾಳ್ ಬಡಿತದ ಅಳಿ” ಅಂದ. ಕೋಪ ತಡೆದುಕೊಂಡೆ.
ನಮ್ ಸಿದ್ಲಿಂಗು ಮಗ ಈ ಸಲ ಪಿಯುಸಿಯಲ್ಲಿ ಒಳ್ಳೆ ಮಾರ್ಕ್ಸ್ ತೆಗೆದಿದ್ದ. ಫೀಸು ಜಾಸ್ತಿ ಅಂತ ಅವನಂದುಕೊಂಡ ಕೋರ್ಸಿಗೆ ಹೋಗಲಾಗಲಿಲ್ಲ. ಸಿದ್ಲಿಂಗು ಹೆಂಡತಿ ಪಾಲಿಗೆ ಬಂದಿದ್ದ ಒಂದೆಕರೆ ಜಮೀನು ಮಾರಿ, ಲಕ್ಷಾಂತರ ಖರ್ಚು ಮಾಡಿ ಮದುವೆ ಮಾಡಿ ಮುಗಿಸಿದ್ದಾರೆ. ಪಾಪ ಹೇಳಿಕೊಂಡು ಬೇಜಾರಾಗಿದ್ದ ಹುಡುಗ, ಕೇಳಿದರೆ ಅವರಪ್ಪಾಮ್ಮ. “ಗಂಡು ಹೈದ ಎಲ್ಲಾರ ಗೇಯ್ಕಂಡ್ ತಿನ್ನಬೋದು. ಇರಾ ಒಬ್ ಮಗಳ್ ಮದ್ವ ನ್ಯಾಯವಾಗ್ ಮಾಡದೇ ಇದ್ರ ಜನ ಆಡ್ಕಂಡ್ ನಗ್ತಿರ್ಲಿಲ್ವ?” ಅಂತಾರಂತೆ. ಈಗವನು ಡಿಗ್ರಿ ಓದುತ್ತಾ ಸಂಜೆ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಾನೆ. ಈಗ ಮೂವರೂ ಸೇರಿ ಕೂಲಿ ಕಾಸು ಹೊಂದಿಸುತ್ತಿದ್ದಾರೆ. ಮಗಳು ಬಾಣಂತನಕ್ಕೆ ಬರುತ್ತಾಳೆ. ಖರ್ಚುಗಳಿರುತ್ತವೆ.. ಮಾಡಬೇಕಲ್ಲ ನಾಕು ಜನರ ಸಮಕ್ಕೆ?
ಥತ್ ಇವರ ಹಾಳು ಫಾಲ್ಸ್ ಪ್ರೆಸ್ಟೀಜಿಗಿಷ್ಟು ಬೆಂಕಿ ಹಾಕ!



ನಿಜಕ್ಕೂ ಅರ್ಥಪೂರ್ಣ ವಿಚಾರ.ಝೂಠೀ ಶಾನ್, ಜಿಂದಗೀ ಪರೇಶಾನ್! ಸಮಾಜ ವ್ಯವಸ್ಥೆಯ ಸಿದ್ಧಾಂತಗಳ ಲೋಪಗಳಿವು. ಅವುಗಳನ್ನು ಸರಿಪಡಿಸುವ ಕೆಲಸಕ್ಕೆ ಆದ್ಯತೆ ಬೇಕಾಗಿದೆ.
ಚೆಂದಾಗದೆ
ಸಾಲ ಮಾಡಿ ಮದುವೆಯನ್ನು ಗ್ರಾಂಡ್ ಅಂದುಕೊಳ್ಳುವುದಕ್ಕಿಂತ ಮದುವೆ ನಂತರ ಗ್ರಾಂಡ್ ಆಗಿ ಬದುಕುವುದು ಹೆಚ್ಚು ಸೂಕ್ತ … ಚೆನ್ನಾಗಿದೆ ಬರಹ
ಹಂಗೇ ಇನ್ನೊಂದು ವಿಷಯ ಕಣವ್ವ… ಇತ್ತೀಚಿಗೆ ಗಂಡ ಮಕ್ಕಳ ಮದುವೆ ಖರ್ಚು ಕೂಡ ಹೆಚ್ಚಾಗದೆ…
ಸತ್ಯಂ… ಶಿವಂ… ಸುಂದರಂ…
ಈ ಪೀಡೆ ಈಗಲೇ ಮುಗಿಯುವಂತೆ ಕಾಣುವುದಿಲ್ಲ.
ಸಿಟಿಯೋ, ಹಳ್ಳಿಯೋ – ಆಡಂಬರವೇ ಮುಖ್ಯ.
ಈ ನಿಟ್ಟಿನಲ್ಲೂ ಒಂದು ಸಾಮಾಜಿಕ ಕ್ರಾಂತಿ ಆಗಬೇಕು.
ಉಳ್ಳವರು ಸ್ವಯಂ ಪ್ರೇರಣೆಯಿಂದ ಸರಳ ಸಮಾರಂಭಗಳನ್ನು ಮಾಡಬೇಕು.
“ದೌಲತ್ತು ಬರೆ ಹಣ ಖರ್ಚು ಮಾಡುವುದಲ್ಲ; ಅದನ್ನು ಸರಿಯಾಗಿ ಖರ್ಚು ಮಾಡುವುದನ್ನು ಕಲಿಯುವುದು” ಎಂಬ ಭಾವನೆ ಆಳವಾಗಿ ನೆಡಬೇಕು.
ಹಾಳು ಫಾಲ್ಸ್ ಪ್ರೆಸ್ಟೀಜ್ಗಾಗಿ ಹಾಳಾಗುವವರನ್ನು ಸಮನಾಗಿ ಖಂಡಿಸುವ ಸಾಮಾಜಿಕ ಜವಾಬ್ದಾರಿ ಬರಬೇಕು.
ಇವೆಲ್ಲ ಸಾಧ್ಯವಾ? ಇನ್ನೊಬ್ಬರ ಬುದ್ಧಿವಾದ ಕೇಳುವುದು ಅಪಥ್ಯ ಅನ್ನಿಸಿಕೊಂಡಿರುವ ಈ ಧಿಮಾಕಿನ ಕಾಲದಲ್ಲಿ?
ನಮ್ಮ ಹಳ್ಳಿಗಳಲ್ಲಿ ಮೇಲಿಂದ ಮೇಲೆ ‘ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂಬ ಗಾದೆಮಾತನ್ನು ಉಪಯೋಗಿಸುತ್ತಾದರೂ ಆ ರೀತಿ ಬದುಕುತ್ತಿಲ್ಲ ಎಂಬುದು ವಿಷಾದದ ಸಂಗತಿ. ಇದ್ದಾಗ ನೂರು ಸಂತೆ, ಇಲ್ದೇ ಇದ್ದಾಗ ಸುಮ್ನೆ ಕುಂತೆ ಅಂದುಕೊಂಡು ವಿವೇಚನೆ ಇಲ್ಲದೆ ಖರ್ಚು ಮಾಡಿದರೆ ಬದುಕು ದುಸ್ತರವಾಗುತ್ತದೆ. ಅಮರದೀಪ ಅವರು ಹೇಳಿದ ‘ಸಾಲ ಮಾಡಿ ಮದುವೆಯನ್ನು ಗ್ರಾಂಡ್ ಅಂದುಕೊಳ್ಳುವುದಕ್ಕಿಂತ ಮದುವೆ ನಂತರ ಗ್ರಾಂಡ್ ಆಗಿ ಬದುಕುವುದು ಹೆಚ್ಚು ಸೂಕ್ತ’ ಎಂಬ ಮಾತು ನೂರಕ್ಕೆ ನೂರು ಸತ್ಯ. ಇದನ್ನು ಕಥೆ ಎನ್ನಬೇಕೋ, ವಾಸ್ತವ ಅನ್ನಬೇಕೋ ಗೊತ್ತಾಗುತ್ತಿಲ್ಲ. ಆದರೆ ತುಂಬಾ ಚೆನ್ನಾಗಿದೆ. ಬರಹಗಾರರಿಗೆ ಅಭಿನಂದನೆ.
tumba chenagide. good.
ನನ್ನ ಕಸಿನ್ ಒಬ್ಬಳಿಗೆ ಮದುವೆ ನಿಶ್ಚಯವಾಗಿದೆ..
ಮಾಮೂಲಿ “ನಮ್ಮ ಶಕ್ತಿ ಮೀರಿ ಮದುವೆ ಮಾಡಿಕೊಡುವ” ತಯಾರಿಗಳು ನಡೀತಾ ಇವೆ…
ನಾನು ನನ್ನ ಗೆಳೆಯರು ಇದರ ಕುರಿತೇ ಮೊನ್ನೆಯೊಂದಿನ ಮಾತನಾಡುತ್ತಾ ಇದ್ದೆವು…
-ಯಾಕೆ ನಮಗೀ ಖಾಯಲಿ..?
ಗೊತ್ತಾಗ್ತಿಲ್ಲಾ…
ಚಂದದ ಲೇಖನ…