ಊರೆಲ್ಲ ತಡಿಕಂಡ್ಬಂದ್ರೂ ನನ್ನನ್ನೂ ಸೇರಿ ಇಲ್ಲಿವತ್ತಿರೋದು ಮೂರ್ನಾಲಕ್ಸಲ ಬೆರಳೆಣಿಸೋಷ್ಟ್ ಜನ ಮಾತ್ರ. ಬೆಳಿಗ್ಗೆ 7-8 ಗಂಟೆ ಹೊತ್ತಿಗೆ ಎಲ್ರೂ ಖಾಲಿ. 9 ಗಂಟೆ ಹೊತ್ಗೆ ಕಾಲೇಜ್ಹುಡುಗ, ಹುಡುಗೀರೂ ಖಾಲಿ. 11 ಗಂಟೆ ದನಗಳು ಮೇಯೋಕೋಗೋ ಟೈಮು. ಆಗೊಂಚೂರು ಹೈ ತ್ಚೆ ತ್ಚೆ ಹೈ ಹೈ ಅಂತ ಸದ್ದಾಗಿದ್ದು ಬಿಟ್ರೆ ಇಡೀ ಊರಲ್ಲಿ ಒಂದು ಸದ್ದಿಲ್ಲ ಸ್ವರವಿಲ್ಲ. ಕಾರಣ ಇವತ್ತು ಜನವರಿ ಒಂದು.
ಡಿಸೆಂಬರ್ ಮೂವತ್ತೊಂದರ ಬೆಳಗ್ಗೆ ಬೆಳಗ್ಗೆ ರೇಣುಕ ಸೊರ್ರ ಸೊರ್ರ ಅಂತ ಮೂಗು ಸೀಟುತ್ತಿದ್ದಳು. ಬೇಕಂತಲೇ ಅವಳ ಸೊರ್ರ್ಗೆ ಸೌಂಡು ಜಾಸ್ತಿ ಕೊಟ್ಟಿದ್ದಳು. ಎಲ್ರೂ ಕಾರಣ ಕೇಳ್ಳಿ ಅಂತ ಆಸೆ ಅವಳಿಗೆ. ಸುಮ್ನಿದ್ರೇನೇ ಬಿಡಲ್ಲ. ಇನ್ನು ಅವಕಾಶ ಕೊಟ್ರೆ ಬಿಡೋರಾ ಬೀದಿ ಜನ? ರೇಣುಕಾಳ ಮೂಗು ಸೋರಿಕೆಯ ಕಾರಣ ಕೇಳಿದ್ದೇ ತಡ ಶುರು ಹಚ್ಚಿಕೊಂಡ್ಳು. “ನಮ್ಮದೂ ಒಂದ್ಬಾಳು ಅಂತ. ಊರೆಲ್ಲ ಹೊಸಜಿನ ಅಂತ ಸೀರ ಬಟ್ಟ ತಕಂಡರ ನಮ್ಮಟ್ಟೀಲಿ? ನನಗ್ಬ್ಯಾಡಬುಡಿ, ಐಕಳಗಾದ್ರೂ ಒಂದ್ಜೊತ ಬಟ್ಟ ತಂದಿಲ್ಲ. ಊರ್ಜನವೆಲ್ಲ ಹೊಸ ಬಟ್ಟ ಇಕ್ಕಂಡು ಹಬ್ಬ ಮಾಡುದ್ರ, ನಮ್ಮೈಕ್ಳು ನೋಡತ ನಿಂತ್ಕಳದು” ಅಂತ ಹೇಳಿ ಮತ್ತೆ ಸೊರ್ಅಂತ ಸೊರೆದು, ಅಳುವಿಗೆ ಡಿಟಿಎಸ್ಸೌಂಡ್ ಎಫೆಕ್ಟ್ಕೊಟ್ಟ ಮೇಲೆ ಗಂಡನ ಕಿವಿ ತಾಕಿತು. “ಆಯ್ತು ಬಮ್ಮೀ.. ಚೀಟಿ ಕಟ್ಟಕ ಅಂತ ಕಾಸ್ಮಡಿಕಂಡಿನಿ. ಆವತ್ತಿಗೆಂಗೋ ಆಯ್ತದ ಬಾಇಪಟು. ಎದ್ರೆಡಿಯಾಗು, ಬಟ್ಯೋ ಬರ್ಯೋ ತಕಂಡ್ಬರಾವು” ಅಂದ ರೋಸಿ ಹೋದ ಗಂಡ. “ಬ್ಯಾಡಿ ಬುಡಿ. ಚೀಟಿ ಕಟ್ಟವತ್ತಲ್ಖರ್ಚ್ಮಾಡುಸ್ಬುಟ್ಟೆ ಬಡ್ಡೀ ನೀನು ಅಂತ ನಾ ಬೈಯಿಸ್ಕಳ್ಯಾ ,??” ಅಂತ ಒಂದು ಸೇಫ್ಟೀ ಡೈಲಾಗ್ಹೊಡೆದಳು. ಕಡೆಗೆ, ಗಂಡನೂ ಜನವೂ, ಸಮಧಾನಿಸಿ ಬಟ್ಟೆ ತರಲಿಕ್ಕೆ ಹೊರಟಳು.
ಮೂವತ್ತೊಂದರಂದು ಥೇಟು ಗೌರಿ – ಶಿವರಾತ್ರಿ ಹಾಗೆಯೇ ಮನೆಯನ್ನೆಲ್ಲ ಸ್ವಚ್ಚಮಾಡಿ, ಮಡಿಮಾಡಿ, ತಡರಾತ್ರಿ ಮನೆ ಮುಂದಕ್ಕೆ ಸಗಣಿ ಸಾರಿಸಿ, ರಂಗೋಲಿ ಹಾಕಿ ಬಣ್ಣ ಹರಡಿ. “HAPPY NEW YEAR” ಅಂತ ಬರೆದದ್ದಾಯ್ತು. ಬೆಳಿಗ್ಗೆ 7 ಗಂಟೆಗೆ ಎಲ್ಲರೂ ರೆಡಿಯಾಗಬೇಕಲ್ಲ, ಹಾಗಾಗಿ ಈಗಲೇ ನೀರೊಲೆಗೆ ದೊಡ್ಡ ಕೊಂಟು ಸೌದೆ ಹಾಕಿ ಬೆಂಕಿ ತಗುಲಿಸಿದ್ದೂ ಆಯ್ತು. ಬೆಳಗ್ಗೆ ಹೊಸ ಬಟ್ಟೆ ತೊಟ್ಟು, ಪೂಜೆ ಮಾಡಿ, ಬಂದ ಬಸ್ಸಿಗೂ ಪೂಜೆ ಮಾಡಿದರು. ನನ್ಮಗನೂ “ಅಮ್ಮನಾವೆಲ್ಲಟಿಪ್ಹೋಗ್ತಾಇದೀವಿಟಿಪ್ಪು”.ಅಂತಕುಣಿದ. “ಮಾದೇಶ್ವರನ್ಬೆಟ್ಟಕ್ಹೋಗವು ಅಂತ ಮಾಡಿದ್ದೋ. ಇವತ್ತು ಅಲ್ಲಿ ಭಾರೀ ಜನವಂತೆ. ಹುಲಿ ವಾಹನ ಎತ್ತಿಸೊಕೆ ಸಾವ್ರಾರ್ಜನ ಹೆಸರ್ಬರ್ಸಿದಾರಂತ, ಹೊಸ ಜಿನ. ಬೆಟ್ಟದಲ್ಲಿ ಕಾಲ್ಮಡುಗಕಾಗಲ್ಲ. ಅದ್ಕೆ ನಾವು ಬೆಟ್ಟಕ್ಯಾನ್ಸಲ್ಮಾಡಿ ನಂಜನ ಗೂಡು, ಬೀಮನ ಕೊಲ್ಲಿಗ್ಪ್ಲಾನ್ಮಾಡ್ದೋ.” ಅಂತ ನನಗೆ ಹೇಳಿ, “ಎಲ್ರೂ ಹತ್ಕಳಿ ಹತ್ಕಳಿ” ಅಂದ ಅಣ್ಣ. ಎಲ್ಲರೂ “ಮಾದೇಶ್ವರನಿಗೆ ಉಘೇ” ಅನ್ನುತ್ತಾ, ಬಸ್ಸತ್ತಿ ಹೊರಟ ಮೇಲೆ, ಜಗಲೀಲಿ ನಾನು ಒಂಟಿ.
ಎಲ್ಲ ಮನೆಗಳ ಮುಂದಣ ರಂಗೋಲಿಗಳೂ, ಅದರ ಮೇಲೆ ಬರೆದ “ಹ್ಯಾಪಿ ನ್ಯೂ ಇಯರ್” ನನ್ನೊಂದಿಗೆ ಮಾತಿಗಿಳಿದವು. ಸುಮಾರು 80 ವರ್ಷದ ನನ್ನನ್ ಅಜ್ಜಿಗೆ ಈ ಜನವರಿ 1 ರ ಆಚರಣೆ ಗೊತ್ತೇ ಇಲ್ಲ. ಇದು ತುಂಬ ಹಿಂದಿನ ವಿಚಾರವಾಯ್ತು ಬಿಡಿ. ನಮ್ಮಮ್ಮನಿಗೆ ಇದು ಯಾವತ್ತೂ ಹಬ್ಬವಾಗಿರಲಿಲ್ಲ. ನಾನೂ ನನ್ನ ತಂಗಿ ಅದೂ ಕಾಲೇಜು ಸೇರಿದ ಮೇಲೆ, ಫ್ರೆಂಡ್ಸ್ಜೊತೆ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದೆವು. ಆದರೆ ಊರಲ್ಲಿ ಇದರ ಆಚರಣೆ ಇರಲಿಲ್ಲ. ಈಗ ಜನವರಿ ಒಂದು ಎಲ್ಲ ಹಬ್ಬಗಳಂತೆ ಒಂದು ಹಬ್ಬ.!
ಜನವರಿ ಒಂದು ನಮ್ಮ ಹೊಸ ದಿನವಲ್ಲ. ನಮ್ಮದೇನಿದ್ದರೂ ಯುಗಾದಿಗೆ ಅನ್ನುವ ಸಿನಿಕತನವಲ್ಲ ಇದು. ಅಸಲು ವಿಷಯ ಬೇರೆಯೇ ಇದೆ. ಜನವರಿ ಒಂದು ಮಾತ್ರವಲ್ಲ, ವರ ಮಹಾಲಕ್ಷ್ಮಿ, ಸತ್ಯ ನಾರಾಯಣ ಪೂಜೆ, ಷಷ್ಠಿ ಪೂರ್ತಿ ಇವೂ ಯಾವುವೂ ಹಿಂದೆ ಇವರಲ್ಲಿ ಇಲ್ಲದ್ದು. ಮತ್ತು ಈಗ ಹೊಸದಾಗಿ ಸೇರಿಕೊಂಡಿರುವುದು. ಇವೆಲ್ಲ ಯಾಕೆ ಸೇರಿ ಹೋದವೆಂದರೆ ಒಂದು ಯಾರೋ “ಮಾಡಿ, ಒಳ್ಳೆಯದಾಗುತ್ತೆ” ಅಂದಾಗ, ಒಳ್ಳೆದಾದರೆ ಹೇಗಾದರೂ ಆಗಲಿ ಅನ್ನುವ ಕಾರಣ. ಮತ್ತೊಂದು, ಆಚರಣೆಗಳೀಗ ಒಂತರದ ಫ್ಯಾಷನ್ನಿನ ರೂಪ ಪಡೆದಿರುವುದು. ಮತ್ತು ಇನ್ನೊಂದು ಮುಖ್ಯ ಕಾರಣ “ದೂರದಕೈ”.
ಇಷ್ಟಕ್ಕೂ ಈಗ ಹಳ್ಳಿಗರು ಇದನ್ನೆಲ್ಲ ಆಚರಿಸೋದ್ರಿಂದ ಯಾರಿಗೇನು ನಷ್ಟ? ಅವರಿಗೆ ಸಂಭ್ರಮಗಳಿಗೆಂದು ಇರುವುದು ಕೇವಲ ಹಬ್ಬಗಳು ಮಾತ್ರ. (ಅದರಲ್ಲೂ ಹಳ್ಳಿಯ ಕೆಲ ಹೆಣ್ಣುಮಕ್ಕಳಿಗೆ) ಜನವರಿ ಒಂದೋ, ಮತ್ತೊಂದೋ, ಮಸಿಪಾತ್ರೆ ತಿಕ್ಕುವ ಕೈಗಳಿಗೆ, ಬಣ್ಣದ ರಂಗೋಲಿಯಿಟ್ಟು ಸಂಭ್ರಮಿಸಲು ಒಂದು ಅವಕಾಶ, ಮತ್ತು ಎಲ್ಲರೂ ಹೀಗೆ ಬಸ್ಸು ಮಾಡಿಕೊಂಡು ಒಟ್ಟಾಗಿ ಊರು ಸುತ್ತಿಕೊಂಡು ಬಂದರೆ ಬರಲಿ, ಈ ನೆಪದಲ್ಲಿ ಅವರ ಒಗ್ಗಟ್ಟು ಬೆಳೆದಿದೆ. ನಾನು ನನ್ನ ಹಳ್ಳಿಗರನ್ನು ಎಂದೂ ದೂರುವುದಿಲ್ಲ. ಅವರೀಗ ನಶೆಯಲ್ಲಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಎಂಟನೇ ಕ್ರಾಸಿನಲಿ ಸಣ್ಣ ಪಿಜ್ಜಾ ಅಂಗಡಿಯಿದೆ. ಕಿವಿ ಪಕ್ಕದಲಿ, ಅರಿಶಿನ ಹಣೆಗೆ ನಾಮದ ಕುಂಕುಮ, ಕಚ್ಚೆ ಸೀರೆ ಉಟ್ಟು ಆಗ ತಾನೇ ಪೂಜೆ ಮುಗಿಸಿದರೇನೋ ಎಂಬಂತೆ ಬಂದ, ಸುಮಾರು 60ರ ಆಸುಪಾಸಿನ ಅಜ್ಜಿ ಪಿಜ್ಜಾ ಕೇಳಿದರು. ಮೊಮ್ಮಕ್ಕಳಿಗಿರಬೇಕು ಅಂದುಕೊಂಡೆ. ಅಂಗಡಿಯವನಿಗೂ ಹಾಗೇ ಅನಿಸಿ ಪಾರ್ಸಲ್ಕಟ್ಟಿದ್ದ. “ಇಲ್ಲೆಕೊಡಪ್ಪ” ಅಂತ ಆಕೆ ಪಿಜ್ಜಾ ತಿಂದದ್ದು ಈಗ್ಗೆ ಐದಾರು ವರ್ಷಗಳ ಹಿಂದೆ ನಾನು ಕಣ್ಣಾರೆ ಕಂಡ ದೃಶ್ಯ.
ಜಾಗತಿಕ ಮಾರುಕಟ್ಟೆಯಲೀಗ ಸಂಸ್ಕೃತಿಯೂ ಒಂದು ಸರಕು. ಜಗತ್ತಿನ ಎಲ್ಲ ಜನರ ಕೈಲೂ ಎಲ್ಲ ಸಂಗತಿಗಳೂ ಬೆರೆತ ಕಾಕ್ ಟೈಲು. ಅದರೊಳಗೆ ನಮ್ಮ ಬೇವಿತ ಬಿತ್ತವೂ, ಇಂಬಿ ರಸವೂ ಮಿಕ್ಸು. ಮಾಧ್ಯಮಗಳು ಅದರಲ್ಲೂ electronic media ಗಳ ಕೆಲಸ ಕಾಕ್ಟೈಲ್ಬಾಟಲನ್ನ ಕುಲುಕಿ ಕುಲುಕಿನೊರೆಬರಿಸಿ, “ಯಾವುದೋ ಲಾಭ” ದ ದೃಷ್ಟಿಯಿಂದ ತಮ್ಮದೂ ಚೂರು ಫ್ಲೇವರ್ಸೇರಿಸಿಕೊಡುವುದು. ಈ ಕುರಿತ Jojnpilger ನ ಲೇಖನವನ್ನು ಹಿರಿಯ ಪತ್ರಕರ್ತಡಿ. ಉಮಾಪತಿ ಕನ್ನಡೀಕರಿಸಿದ್ದರು. ಅವರ ಪ್ರಕಾರ “ನಾವಿರುವುದು ಅತಿ ಅಪಾಯಕಾರೀ ಮತ್ತು ವಿಕೃತ ಕಾಲಮಾನದಲ್ಲಿ. ಅಸಲಿಗೆ ಮಾಹಿತಿಯುಗವೆಂಬುದು ಮೀಡಿಯಾ ಯುಗ. ಜರ್ನಲಿಸ್ಟ್ಗಳು ಯಾರದೋ ಏಜೆಂಟ್ಗಳು. ಹಾಗಾಗಿ ಮೀಡಿಯಾದಿಂದಲೇ ಹುನ್ನಾರ, ಮೀಡಿಯಾದಿಂದಲೇ ಪ್ರತೀಕಾರ ಮತ್ತು ಮೀಡಿಯಾದಿಂದಲೇ ಯುದ್ದ! ”ಮತ್ತು ಡಿ.ಉಮಾಪತಿ ಸರ್ ಕೇಳುತ್ತಾರೆ “ಯಾವ ತಪ್ಪೂ ಇರದೇ ದೇಶದ ಸಂಪನ್ಮೂಲದಲಿ ಪಾಲು ಸಿಗದೇ ನರಳುತ್ತಿರುವ ಬಡವರಿಗೆ ಉಳ್ಳವರು “ಹ್ಯಾಪಿ ನ್ಯೂ ಇಯರ್ ಅನ್ನಲು ಅದು ಹೇಗೆ ಧೈರ್ಯ ಬರುತ್ತದೆ?
“ ನಮ್ಮ ಹೊಸ ವರುಷ ಯುಗಾದಿಗೆ. ನಮ್ಮ ಪಂಚಾಂಗ ಹುಟ್ಟುವುದು ಚೈತ್ರದಲ್ಲಿ” ಅನ್ನುವ ಮಂದಿ ಡಿಸೆಂಬರ್ 31 ರ ರಾತ್ರಿಯೇ ಟಿವಿಯಲ್ಲಿ ಕೂತು ಹೊಸ ವರ್ಷದ ಭವಿಷ್ಯ ಹೇಳುತ್ತಿರುತ್ತಾರೆ. ನಿರೂಪಕಿ ಕಣ್ಣಲ್ಲೂ , ತೊಟ್ಟ ಆಭರಣದಲ್ಲೂ ಮಿಂಚು ಮೂಡಿಸುತ್ತಾ ನಿಮ್ಮ ಬದುಕಲ್ಲೂ ಹೊಸ ಮಿಂಚು ಮೂಡುತ್ತದೆ ಅನ್ನುವ ಭ್ರಮೆ ಹುಟ್ಟಿಸುತ್ತಾಳೆ. ನೋಡುತ್ತಾ ನೋಡುತ್ತಾ ಜನವರಿ ಒಂದು ಹಬ್ಬವಾಗುತ್ತದೆ! ಯುವಕರ ಗುಂಪು ಮಾತಾಡಿಕೊಳ್ಳುತ್ತದೆ. “ಅವರು ಏನು ಹೇಳುತ್ತಾರೋ ಅದು ಪುರೋಹಿತಶಾಹಿ. ಅವರಿಗೆ ಪ್ರತಿಯಾಡಲೇಬೇಕು. ವಿರೋಧಿಸಬೇಕು ಅದಕ್ಕಾಗಿ ನಾವು ಪಾರ್ಟಿ ಮಾಡಬೇಕು. ಅವರ ಕಣ್ಣು ಕುಕ್ಕುವಂತೆ ಸಲೆಬ್ರೇಟ್ಮಾಡಬೇಕು. ”ಇಲ್ಲಿ ಜನವರಿ ಒಂದು ಹಬ್ಬವಾಗುತ್ತದೆ!. ಮತ್ತು ಯುಗಾದಿಯ ನವ ಸಂವತ್ಸರದ ಮಂದಿ, ಜನವರಿ ಒಂದರಂತು ದೇವಳಗಳಲಿ ವಿಶೇಷ ಅಲಂಕಾರ ಪೂಜೆಗಳನ್ನೂ ಮಾಡುತ್ತಾರೆ. ಮಂಗಳಾರತಿ ತಟ್ಟೆಯೂ, ಹುಂಡಿಯ ಕಾಸೂ ಬದುಕಿನ ವಾಸ್ತವ. ಇಂಗ್ಲೀಷ್ಕ್ಯಾಲೆಂಡರು ಬದಲಾಗುತ್ತದೆ. ದೇವಸ್ಥಾನಗಳ ಗಂಟೆ ಮೊಳಗುತ್ತದೆ. ಮಲೆ ಮಾದೇಶ್ವರನ ಬೆಟ್ಟದಲಿ ಜನವರಿ ಜಾತ್ರೆ. ಉಘೇ ಉಘೇ ಮಾದಪ್ಪ.. ಹ್ಯಾಪಿ ನ್ಯೂ ಇಯರ್. ಉಘೇ.. ಹ ಹ್ಹ..ಫ್ಯೂಷನ್ನು ಈಗೀಗ ಎಲ್ಲರಿಗೂ ಇಷ್ಟದ ಪ್ರಕಾರ. ಅಂತೂ ಊರುಕೇರಿಗಳ ಭೇದವಿರದೇ ಜನವರಿ ಒಂದು ಹಬ್ಬವಾಗುತ್ತದೆ.!
ಬೌದ್ದಿಕ ಜಗತ್ತಿನ ಅಲ್ಪ ಸಂಖ್ಯಾತ ಮಂದಿ ನಡೆಸಿದಂತೆ ದೇಶದ ಮತ್ತು ಜಗತ್ತಿನ ಬಹು ಸಂಖ್ಯಾತರ ನಡೆ. ಮತ್ತು ಬಹುಸಂಖ್ಯಾತರದು ಆ ಅದೇ ನಿಸಾರರ ಕುರಿಗಳ ಕಥೆ. ಕತ್ತಿಯಿಂದ್ಯಾರು ಯುಧ್ದ ಮಾಡುತ್ತಾರೆ ಈಗ? ಇನ್ನು ನಡೆಯುವುದೆಲ್ಲ ರಕ್ತಪಾತವಿಲ್ಲದ ಬುದ್ದಿಯುಧ್ದ.! ಆದರೆ ಈ ಯುಧ್ದದಲ್ಲಿ ಬಹುತೇಕರು “ರಣಹೇಡಿಗಳು”.ಸೈದ್ದಾಂತಿಕ ನಿಲುವುಗಳೇ ಇಲ್ಲದೆ ಕಪ್ಪೆಯಂತೆ ತಕ್ಕಡಿಯಿಂದ ತಕ್ಕಡಿಗೆ ಹಾರುತ್ತಾ, ಜನರನ್ನ ಬೆಪ್ಪು ತಕ್ಕಡಿಗಳನ್ನಾಗಿಸುತ್ತಿದ್ದಾರೆ. ಯುದ್ದವೆಂದು ಹೇಳುತ್ತಾ ಪಕ್ಕದ ಟೆಂಟಿನಲಿ ಎದುರಾಳಿಯ ಕರೆದು ಕೈ ಕುಲುಕುತ್ತಾರೆ. ಕೈ ಕೈ ಮಿಲಾಯಿಸಿದ ಫೊಟೋ ನಮಗೆಲ್ಲ! ಪ್ರಾಪಗ್ಯಾಂಡಾ!! ಮೆದುಳಿನ ನರಗಳನ್ನೆಲ್ಲ ಹುರಿಗಿಳಿಸಿ, ಯಾವುದೋ ಸ್ವಾರ್ಥ ಯೋಚಿಸಿ, ಯೋಜಿಸಿ, ಮೇಲ್ನೋಟಕ್ಕೆ ಗೊತ್ತಾಗದ ಹಾಗೆ ತಮಗೆ ಬೇಕಾದ್ದನ್ನ, ಬೇಕಾದಂತೆ ನಗುತ್ತಲೇ ಹರಿಯ ಬಿಡುತ್ತಾರೆ.!
“ ಹರಿಯೋ ನೀರಿಗೆ ಮಡಿಮೈಲಿಗೆ ಇಲ್ಲ. ಕುಡೀರಿ ಕುಡೀರಿ ಏನೂ ಆಗಲ್ಲ” ಅಂತ ಯಾರೋ ಅನ್ನುವುದು ಫೋನಿನಲಿ ಕೇಳುತ್ತಿತ್ತು. ಬೆಳಿಗ್ಗೆ ಟ್ರಿಪ್ಪಿಗೆ ಹೊರಟವರು ನಂಜನಗೂಡು ಮುಗಿಸಿ ಈಗ ಭೀಮನ ಕೊಲ್ಲಿಯಲ್ಲಿದ್ದಾರಂತೆ. ಹೊಳೆ ದಂಡೆಯಲ್ಲಿ. ಭಕ್ತಿ ಭಾವದಲ್ಲಿ.
ಈ ಹರಿವ ನೀರಲ್ಲಿ ಬಂದದ್ದು ಯಾವ್ಯಾವ ಬೇರಿನ ಔಷಧಿಯ ಗುಣವೋ, ಯಾವ್ಯಾವ ಸೋಪು ತೊಳೆದ ಯಾವ್ಯಾವ ಮೈಯ ಕೊಳೆಯೋ. ಯಾರ ತಲೆಯ ಹೂವೋ, ಯಾರು ಕೊಂದ ಹಾವೋ. ಯಾವ್ಯಾವ ಗರ್ಭ ಗುಡಿಯ ವಿಗ್ರಹ ತೊಳೆದ ನೀರೋ, ಯಾರ ಉಚ್ಚೆಯೋ. ಯಾವ ಹೋಮದ ಶೇಷವೋ, ಯಾರ ಅಸ್ತಿಯ ಬೂದಿಯೋ.ಯಾವ ದೇವಳದ ತೀರ್ಥವೋ, ಯಾವ ಪ್ಯಾಕೆಟ್ಟಿನ ಹೆಂಡವೋ .ಒಟ್ಟಿನಲಿ ಹರಿವ ನೀರಲಿ ಕೈಕಾಲು ತೊಳೆದು ತಲೆಗೂ ಚಿಮುಕಿಸಿಕೊಂಡಿದ್ದಾಯ್ತು.!
ರಾತ್ರಿ ಊರ ಮಠದ ರಥದ ಮೆರವಣಿಗೆ. ಪುಟ್ಟ ಮಗನೂ ಅವನೊಂದಿಗೆ ಊರ ಚಿಲ್ಟುಪಿಲ್ಟುಗಳೂ ತೇರಿನೊಟ್ಟಿಗೆ ಹ್ಯಾಪಿನ್ಯೂಇಯರ್ಎಂದು ಕುಣಿದಾಡಿದವು. ನಮ್ಮೂರಲ್ಲೂ ಈಗ ಫ್ಯೂಷನ್ನು.!! ಹರಿವ ನೀರು ಕುಡಿದವರೀಗ ಕಾಕ್ಟೈಲಿನ ನಶೆಯಲ್ಲಿ, ಡಂಕಣ ಕಣಕ್ಕಣ ಕಡಂಕಣ ಕಣಕ್ಕಣಕ!!



ಆಗೊಂಚೂರು ಹೈ ತ್ಚೆ ತ್ಚೆ ಹೈ ಹೈ ಅಂತ ಸದ್ದಾಗಿದ್ದು ಬಿಟ್ರೆ ಇಡೀ ಊರಲ್ಲಿ ಒಂದು ಸದ್ದಿಲ್ಲ ಸ್ವರವಿಲ್ಲ. …..ಬೇಕಂತಲೇ ಅವಳ ಸೊರ್ರ್ಗೆ ಸೌಂಡು ಜಾಸ್ತಿ ಕೊಟ್ಟಿದ್ದಳು……ಸುಮ್ನಿದ್ರೇನೇ ಬಿಡಲ್ಲ. ಇನ್ನು ಅವಕಾಶ ಕೊಟ್ರೆ ಬಿಡೋರಾ ಬೀದಿ ಜನ? ….ನನಗ್ಬ್ಯಾಡಬುಡಿ, ಐಕಳಗಾದ್ರೂ ಒಂದ್ಜೊತ ಬಟ್ಟ ತಂದಿಲ್ಲ. ಊರ್ಜನವೆಲ್ಲ ಹೊಸ ಬಟ್ಟ ಇಕ್ಕಂಡು ಹಬ್ಬ ಮಾಡುದ್ರ, ನಮ್ಮೈಕ್ಳು ನೋಡತ ನಿಂತ್ಕಳದು”….ಅಳುವಿಗೆ ಡಿಟಿಎಸ್ಸೌಂಡ್ ಎಫೆಕ್ಟ್ಕೊಟ್ಟ ಮೇಲೆ…ಒಂದು ಸೇಫ್ಟೀ ಡೈಲಾಗ್ಹೊಡೆದಳು…ಮಸಿಪಾತ್ರೆ ತಿಕ್ಕುವ ಕೈಗಳಿಗೆ, ಬಣ್ಣದ ರಂಗೋಲಿಯಿಟ್ಟು ಸಂಭ್ರಮಿಸಲು ಒಂದು ಅವಕಾಶ…ಈ ನೆಪದಲ್ಲಿ ಅವರ ಒಗ್ಗಟ್ಟು ಬೆಳೆದಿದೆ. ನಾನು ನನ್ನ ಹಳ್ಳಿಗರನ್ನು ಎಂದೂ ದೂರುವುದಿಲ್ಲ. ಅವರೀಗ ನಶೆಯಲ್ಲಿದ್ದಾರೆ… ಕಿವಿ ಪಕ್ಕದಲಿ, ಅರಿಶಿನ ಹಣೆಗೆ ನಾಮದ ಕುಂಕುಮ,…ಜಾಗತಿಕ ಮಾರುಕಟ್ಟೆಯಲೀಗ ಸಂಸ್ಕೃತಿಯೂ ಒಂದು ಸರಕು….ಮಂಗಳಾರತಿ ತಟ್ಟೆಯೂ, ಹುಂಡಿಯ ಕಾಸೂ ಬದುಕಿನ ವಾಸ್ತವ. … ಉಘೇ ಉಘೇ ಮಾದಪ್ಪ.. ಹ್ಯಾಪಿ ನ್ಯೂ ಇಯರ್. ಉಘೇ.. ಹ ಹ್ಹ..ಫ್ಯೂಷನ್ನು …ಮೇಲ್ನೋಟಕ್ಕೆ ಗೊತ್ತಾಗದ ಹಾಗೆ ತಮಗೆ ಬೇಕಾದ್ದನ್ನ, ಬೇಕಾದಂತೆ ನಗುತ್ತಲೇ ಹರಿಯ ಬಿಡುತ್ತಾರೆ.!…ನಮ್ಮೂರಲ್ಲೂ ಈಗ ಫ್ಯೂಷನ್ನು.!! ಹರಿವ ನೀರು ಕುಡಿದವರೀಗ ಕಾಕ್ಟೈಲಿನ ನಶೆಯಲ್ಲಿ,…adbhuta saalugalu, sandaakive kanavva, kusuma..heng bariti idella, arthaane aagolla. mechchuge aatu anta bere helbeka !
ಜಾಗತಿಕ ಮಾರುಕಟ್ಟೆಯಲೀಗ ಸಂಸ್ಕೃತಿಯೂ ಒಂದು ಸರಕು. ಜಗತ್ತಿನ ಎಲ್ಲ ಜನರ ಕೈಲೂ ಎಲ್ಲ ಸಂಗತಿಗಳೂ ಬೆರೆತ ಕಾಕ್ ಟೈಲು. ಅದರೊಳಗೆ ನಮ್ಮ ಬೇವಿತ ಬಿತ್ತವೂ, ಇಂಬಿ ರಸವೂ ಮಿಕ್ಸು. ಮಾಧ್ಯಮಗಳು ಅದರಲ್ಲೂ electronic media ಗಳ ಕೆಲಸ ಕಾಕ್ಟೈಲ್ಬಾಟಲನ್ನ ಕುಲುಕಿ ಕುಲುಕಿನೊರೆಬರಿಸಿ, “ಯಾವುದೋ ಲಾಭ” ದ ದೃಷ್ಟಿಯಿಂದ ತಮ್ಮದೂ ಚೂರು ಫ್ಲೇವರ್ಸೇರಿಸಿಕೊಡುವುದು. ಈ ಸಾಲುಗಳು ನನಗಿಷ್ಟ ಆದವು. ನಾನೂ ಹಳ್ಳಿಯಿಂದ ಬಂದವನೇ ಆಗಿರುವುದರಿಂದ ನನ್ನ ಚಿಂತನೆಗಳಿಗೆ ಕುಸುಮಾ ಅವರ ಚಿಂತನೆಗಳು ತಾಳೆಯಾಗಿವೆ. ನಮ್ಮಂಥ ಕೃಷಿಕರ ಹಬ್ಬಗಳು ಮೊದಲು ಮನೆಯಂಗಳ, ತುಳಸಿಕಟ್ಟೆ ಮತ್ತು ಹೊಲಗಳಿಗಷ್ಟೇ ಸೀಮಿತವಾಗಿದ್ದವು, ಆಮೇಲಾಮೇಲೆ ಅದು ದೇವಸ್ಥಾನದ ಪ್ರಾಂಗಣದೊಳಗೆ ಕಾಲಿಟ್ಟಿತು, ಈಗ ಹೊಸವರ್ಷದ ನೆಪದಲ್ಲಿ ಊರಾಚೆಗೆ ದಾಟಿದೆ. ಸಾಂಪ್ರದಾಯಿಕ ಹಬ್ಬಗಳನ್ನು ದ್ವೇಷಿಸುವುದನ್ನೇ ಕ್ರಾಂತಿ ಅಂದುಕೊಂಡಿದ್ದ ಯುವಪೀಳಿಗೆ ಹೊಸವರ್ಷದ ಹಬ್ಬಕ್ಕೆ ಅಡಿಕ್ಟ್ ಆಗಿರುವುದು ಒಂದು ಕ್ರೂರ ವ್ಯಂಗ್ಯ. ಇದನ್ನು ವಿರೋಧಿಸಿದರೆ ಬಲಪಂಥೀಯರು ಎಂಬ ಹಣೆಪಟ್ಟಿ ಕಟ್ಟುತ್ತಾರೋ ಅನ್ನುವ ಭಯ. ಪೊಲಿಟಿಕಲಿ ಕರೆಕ್ಟ್ ಆಗಿರಬೇಕಾದರೆ ಎಲ್ಲದಕ್ಕೂ ಚಿಯರ್ಸ್ ಹೇಳಬೇಕು. ಥಾಂಕ್ಯೂ ಕುಸುಮಾ, ಹೇಳಬೇಕಾದದ್ದನ್ನೆಲ್ಲಾ ಕತೆ-ಉಪಕತೆ ಮತ್ತು ಪ್ರಸಂಗಗಳ ಮೂಲಕ ಹೇಳಿದ್ದಕ್ಕೆ.
ಇರ್ಲಿ ಬಿಡಿ ಹತ್ತರಲ್ಲಿ ಇನ್ನೊಂದು – ಯಾವದಕ್ಕೂ ಇಲ್ಲಾ ಎನ್ನುವವರಲ್ಲ ನಾವು – ಒಳ್ಳೆಯದಾಗುವದಾದರೆ ಇದು ಒಂದು ಮಡಕೊಳ್ಳೊಣ ಎನ್ನುವವರು !
ಈ ಹರಿವ ನೀರಲ್ಲಿ ಬಂದದ್ದು ಯಾವ್ಯಾವ ಬೇರಿನ ಔಷಧಿಯ ಗುಣವೋ, ಯಾವ್ಯಾವ ಸೋಪು ತೊಳೆದ ಯಾವ್ಯಾವ ಮೈಯ ಕೊಳೆಯೋ. ಯಾರ ತಲೆಯ ಹೂವೋ, ಯಾರು ಕೊಂದ ಹಾವೋ. ಯಾವ್ಯಾವ ಗರ್ಭ ಗುಡಿಯ ವಿಗ್ರಹ ತೊಳೆದ ನೀರೋ, ಯಾರ ಉಚ್ಚೆಯೋ. ಯಾವ ಹೋಮದ ಶೇಷವೋ, ಯಾರ ಅಸ್ತಿಯ ಬೂದಿಯೋ.ಯಾವ ದೇವಳದ ತೀರ್ಥವೋ, ಯಾವ ಪ್ಯಾಕೆಟ್ಟಿನ ಹೆಂಡವೋ .ಒಟ್ಟಿನಲಿ ಹರಿವ ನೀರಲಿ ಕೈಕಾಲು ತೊಳೆದು ತಲೆಗೂ ಚಿಮುಕಿಸಿಕೊಂಡಿದ್ದಾಯ್ತು
ಹ್ಹ ಹ್ಹ ಹ್ಹ
ಉಫ್… ಕುಸುಮ್…ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನು… ಮಬ್ಬು ಹರಿಯುವುದೇನ?! ಬೆಳಕು ಮೂಡುವುದೇನ?!
I wanted to scribble all these things. Meanwhile you narrated in very apt way. Nicely written.
ಲೇಖನ ತುಂಬಾ ಚೆನ್ನಾಗಿದೆ. ಕುಸುಮಾ ರವರಿಗೆ ಅಭಿನಂದನೆಗಳು.
ಚೆನ್ನಾಗಿದೆ..
ಸ್ವಂತ ಬುದ್ಧಿ ನಾಶವೇ ಕುರಿ ಮಂದೆಯ ವಿಕಾಸ… ಹೀಗೆ ಸಂತೋಷಿಸಬೇಕು… ಹೀಗೆ ದುಃಖಿಸಬೇಕು ಅಂತ ಬೇರೆಯವರು ಹೇಳಿಕೊಡುವ ಮಟ್ಟಿಗೆ ನಾವು ಮುಂದುವರಿದಿದ್ದೇವೆ… Lal Salaam!
ಓದಿದ, ಪ್ರತಿಕ್ರಿಯಿಸಿದ,ಪ್ರತಿಯೊಬ್ಬರಿಗೂ ಧನ್ಯವಾದಗಳು.:)