ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ : ಬದುಕು ಕಂಬನಿ, ಕಲೆ ಕರವಸ್ತ್ರ

“ದಕ್ಷಯಜ್ಞ” ಈ ಫೋಸ್ಟರು ಕಿಟಕಿಯಿಂದ ಕಂಡಿದ್ದೇ, ಮೂರು ಮೂರು ಸಲ ಇಣುಕಿ ಇಣುಕಿ ನೋಡುವಂತಾಯಿತು. ಆಮೇಲೆ ಮುಂದಕ್ಕೂ ಒಂದಷ್ಟು ಅದೇ ಥರದ ಪೋಸ್ಟರ್ ಗಳು ಸಿಕ್ಕಿದರೂ ಬಸ್ಸು ಓಡುತ್ತಿದ್ದರಿಂದ ನಾಟಕದ ಹೆಸರು ಮಾತ್ರ ಸ್ಪಷ್ಟವಾಯ್ತು. ಉಳಿದಂತೆ ಯಾವ ಊರಲ್ಲಿ ನಾಟಕ? ಪಾತ್ರಧಾರಿಗಳಾರು ಎಂಬುದೇನೂ ಗೊತ್ತಾಗುತ್ತಿರಲಿಲ್ಲ. ಅದು ಮುಖ್ಯವೇನೂ ಅಲ್ಲ, ಮುಖ್ಯ, ಈಗಲೂ ಅಪರೂಪಕ್ಕೆಲ್ಲೋ ಪೌರಾಣಿಕ ನಾಟಕ ನಡೀತಿದೆಯಲ್ಲ ಅನ್ನೋದು.
ಮುಂಚೆ ಕನಿಷ್ಟ ವರ್ಷಕ್ಕೊಂದು ನಾಟಕ ನಡೆಯುತ್ತಿತ್ತು. ನಾಟಕದ ಹುಚ್ಚು ತುಂಬಾ ಇರುವ ತುಂಬ ಜನ ಇದ್ದರಂತೂ ಮೇಲಿಂದ ಮೇಲೆ ನಾಟಕಗಳು ನಡೆಯುತ್ತಿದ್ದವು. ಒಬ್ಬ ನಾಟಕದ ಮೇಷ್ಟರನ್ನ ಕರೆಸಿ, ಅವನನ್ನ ಊರಲ್ಲೆ 2-3 ತಿಂಗಳು ಇರಿಸಿಕೊಳ್ತಿದ್ದರು. ಧನುರ್ಮಾಸಕ್ಕೆ ಮುಂಚೆ ಪೂಜೆ ಮಾಡಿಕೊಂಡು, ಬೇಸಿಗೆ ಹೊತ್ತಿಗೆ ತಯಾರಿನಡೆಸುತ್ತಿದ್ದರು. ಬೇಸಿಗೆಯ ಬಿಡುವಲ್ಲಿ ನಾಟಕ ರಂಗೇರುತ್ತಿತ್ತು. ಅನಕ್ಷರಸ್ಥರಾದ, ಉಚ್ಚಾರಣೆ ಬಾರದ ಜನರಿಗೆ ಪೌರಾಣಿಕ ನಾಟಕ ಕಲಿಸಬೇಕೆಂದರೆ 2,3 ತಿಂಗಳು ಖಂಡಿತಾ ಬೇಕೇಬೇಕಾಗಿತ್ತು. ಮತ್ತು ಈ ನಾಟಕದ ತಯಾರಿ, ಮತ್ತು ಪ್ರದರ್ಶನ ಸಂದರ್ಭಗಳಲ್ಲಿ ಅನೇಕ ರೋಚಕ ಘಟನೆಗಳು ನಡೆಯುತ್ತಿದ್ದವು. ಒಂದೊಂದು ಊರಲ್ಲೂ ಇಂತ ಕತೆಗಳಿವೆ.
ಮೇಷ್ಟ್ರುಗೆ ಪಾತ್ರಧಾರಿಗಳಾದವರು ಒಬ್ಬೊಬ್ಬರ ಮನೇಲಿ ಒಂದೊಂದು ದಿನ ಊಟ, ವಾರಕ್ಕೊಂದಿನ ವೀಕ್ಲೀ ಆಫು. ಅವರ ಊರಿಗೆ ಹೋಗಿ ಬಟ್ಟೆ ಬರೆ ಒಗೆಸಿಕೊಂಡು ಬರಲಿ ಅಂತ.ಆದರೆ ಕೆಲ ಪಾತ್ರಧಾರಿಗಳು ತನಗೆ ಚೆನ್ನಾಗಿ ನಾಟಕ ಕಲಿಸಲಿ ಅಂತ, ಮೇಷ್ಟ್ರ ಬಟ್ಟೆ ಒಗೆಯೋ ಕೆಲಸಾನೂ ಮಾಡಿ, ಸೇವೆ ಸಲ್ಲಿಸುತ್ತಿದ್ದರು. ಮೇಷ್ಟ್ರೇನೋ ಕಾಯಗಳನ್ನ ನೋಡಿ, ಪಾತ್ರ ಹಂಚುತ್ತಿದ್ದರು. ಆದರೆ, ತನಗೆ ಬಂದ ಪಾತ್ರ ಯಾಕೋ ಸರಿಹೋಗುತ್ತಿಲ್ಲ ಅನಿಸಿದವರು ಮೇಷ್ಟರಿಗೆ ಲಂಚ ಕೊಟ್ಟೋ, ಮತ್ತೇನೋ ಪುಸಲಾಯಿಸಿಯೋ ಬದಲಾಯಿಸಿಕೊಳ್ಳೋಕೆ ನೋಡ್ತಿದ್ದರು. ಊರಲ್ಲಿ ಡಾಮಿನೇಟ್ ಆಧವನಿಗೆ, ನಾಟಕದಲ್ಲೂ ಅಂತದೇ ಪಾತ್ರ ಮಾಡಬೇಕೆಂಬ ಆಸೆ. ಒಂದಷ್ಟು ದಿನ ಪ್ರಾಕ್ಟೀಸಾದ ಮೇಲೆ ಮತ್ತೆ ಪಾತ್ರಗಳು ಅದಲುಬದಲಾಗುತ್ತಿದ್ದವು.
ಜಮೀನಲ್ಲಿ ದುಡಿದು ಬಂದು, ದಣಿವಾರಿಸಿಕೊಂಡು, ಊಟ ಮಾಡಿ, ದನಕರುಗಳಿಗೆ ಮೆವು ಹಾಕಿ, ರಾತ್ರಿ ಒಂಭತ್ತಕ್ಕೆ ಪ್ರಾಕ್ಟೀಸಿಗೆ ಹಾಜರು.ಎರಡು ಮೂರು ಗಂಟೆ ಪ್ರಾಕ್ಟೀಸು. ಲೇಟಾಗಿ ಬಂದವರಿಗೆ ಫೈನ್ ಬೀಳುತ್ತಿತ್ತು. ಬೇರೆ ಊರಿಗೆ ಹೋಗಿದ್ದರೆ ಮಾಫಿ, ಊರಲ್ಲಿದ್ದೂ ಪ್ರಾಕ್ಟೀಸಿಗೆ ಬರದಿದ್ದರೆ ಡಬಲ್ ಫೈನು. ತನ್ನ ಪಾತ್ರದ ಡೈಲಾಗು ಹೆಚ್ಚಿಸಿಕೊಳ್ಳೋಕೆ, ಯಾವ ಧಾಟಿಯಲ್ಲಿ ಹೇಳಬೇಕು ಅನ್ನೋದನ್ನ ಇನ್ನೂ ಚೆನ್ನಾಗಿ ಹೇಳಿಸಿಕೊಳ್ಳೋಕೆ ಎಲ್ಲರೂ ಮೇಷ್ಟ್ರ ಹಿಂದೆ, ಮುಂದೆ.
ಇವರೆಲ್ಲರ ಬೇಡಿಕೆಗಳಲ್ಲಿ ಇರುತ್ತಿದ್ದದು ಎರಡೇ ವಿಚಾರ. ಒಂದು ಹೆಚ್ಚುಡೈಲಾಗಿರುವ ಮುಖ್ಯಪಾತ್ರ. ಎರಡು, ಮತ್ತು ಮೊದಲನೆಯದಕ್ಕಿಂತ ಮುಖ್ಯವಾದ್ದು ನಾಟಕಕ್ಕೆ ಬರುವ ನೃತ್ಯಗಾತಿಯರೊಂದಿಗೆ ಕೈ ಹಿಡಿದು ನರ್ತಿಸುವುದು. ಒಂದು ಸಲವಂತೂ ಡೈಲಾಗು ಬರೊಲ್ಲವೆಂದು ಸೂತ್ರಧಾರಿ ಪಾತ್ರ ಕೊಟ್ಟಿದ್ದರಂತೆ ಒಬ್ಬನಿಗೆ. ಅವನಿಗೂ ಡಾನ್ಸು ಬೇಕಿತ್ತು ಪಾಪ. ಕುಡಿಸಿ, ಲಂಚಕೊಟ್ಟು.ಸೂತ್ರಧಾರಿ ಒಂದು ಡಾನ್ಸು ನಾಕು ಡೈಲಾಗು ಹಾಕಿಸಿಕೊಂಡಿದ್ದ!ಎಲ್ಲರಿಗೂ ಒಂದೇ ಆಸೆ. “ಯಾರಲ್ಲಿ? ಆ ನರ್ತಕಿಯರನ್ನು ಬರಹೇಳಿ” ಅನ್ನಬೇಕು. ಪರದೆ ಹಿಂದಿನಿಂದ ಅತ್ತಿಂದೊಬ್ಬಳು, ಇತ್ತಿಂದೊಬ್ಬಳು ಬರಬೇಕು. ಇವನು ಕೈ ಹಿಡಿದು ಸ್ಟೇಜಲ್ಲಿ ಮೆರೀಬೇಕು. ಈ ಬಗ್ಗೆ ಇನ್ನೊಂದು ಇಂಟರೆಸ್ಟಿಂಗ್ ಕಥೆ ಇದೆ ಕೇಳಿ.
“ಕೃಷ್ಣ ಸಂಧಾನ ನಾಟಕ” ಕೃಷ್ಣನ ಪಾತ್ರ ಮಾಡ್ತಿದ್ದ ಶಿವಣ್ಣನವರಿಗೂ, ದುರ್ಯೋಧನನ ಪಾತ್ರ ಮಾಡ್ತಿದ್ದ ಉಮ್ಮತ್ತೂರು ಲಿಂಗಪ್ಪನೋರಿಗೂ ಡಾನ್ಸು ಇತ್ತು. ಆದರೆ ಭೀಷ್ಮನ ಪಾತ್ರ ಮಾಡ್ತಿದ್ದ ಬಸಪ್ಪನಿಗೆ ಲಲನೆಯರೊಂದಿಗೆ ಕುಣಿವ ಅವಕಾಶವಿಲ್ಲ. ಪ್ರಾಕ್ಟೀಸೆಲ್ಲ ಮಾಡುವಾಗ ಸರಿಯಾಗೇ ಇದ್ದ ಬಸಪ್ಪ. ನಾಟಕ ಪ್ರದರ್ಶನವಾಗುವಾಗ ಯಾಕೋ ರಾಂಗಾಗಿ ಹೋದರು. ಅಲ್ಲಿ ಸೀನ್ ಮುಗಿದಿದೆ ಭೀಷ್ಮ ಎಂಟ್ರಿ ಕೊಡಬೇಕು. ಆಸಾಮಿ ಅಲ್ಲಾಡುತ್ತಿಲ್ಲ. ಏನಪ್ಪ ಬಸಪ್ಪ ಭೀಷ್ಮರೇ , ಅಂದರೆ “ನಂಗೂ ಡಾನ್ಸುಬೇಕು “ ಅಂದರು. “ಅಯ್ಯಾ ಪುಣ್ಯಾತ್ಮ , ನೀನು ಭೀಷ್ಮ ಕಣಯ್ಯ, ಬ್ರಹ್ಮಚಾರಿ. ಡಾನ್ಸು ಮಾಡುವಂತಿಲ್ಲ” ಅಂದರೆ, ಅವನಿಗದು ಅರ್ಥವಾಗುತ್ತಿಲ್ಲ. “ಶಿವಣ್ಣಂಗೂ , ಲಿಂಗಣ್ಣಂಗೂ ಕೊಟ್ಟಿಲ್ವ? ನಂಗೂ ಡಾನ್ಸ್ ಕೊಡಿ” ಅಂತ ಕೂತೇ ಕೂತ. ಅಲ್ಲಿ ಹಾರ್ಮೋನಿಯಮ್ಮಿನವನು ಶೃತಿ ಬದಲಿಸಿ, ಏರಿಸಿ, ಏರಿಸಿ, ಪ್ರೇಕ್ಷಕರನ್ನ ಮ್ಯಾನೇಜು ಮಾಡುತ್ತಿದ್ದಾನೆ. ಯಾರು ಏನು ಹೇಳಿದರೂ ಪರದೆ ಹಿಂದೆ. ಬಸಪ್ಪ ಮಾತ್ರ “ನಾನು ಡಾನ್ಸ್ ಮಾಡಿಯೇ ತೀರುತ್ತೇನೆ ಅಂತ ಭೀಷ್ಮಪ್ರತಿಜ್ಙೆಯನ್ನೇ ಮಾಡಿಬಿಟ್ಟ. ಹೊರಗೆ ಜನ ಗುಜು ಗುಜು ಅನ್ನತೊಡಗಿದರು. ಕಡೆಗೆ, ಪಿಟೀಲು ಮೆಷ್ಟ್ರು ತಮ್ಮ ಕಮಾನಿನೊಂದಿಗೆ ಬಂದು , ಅದೇ ಕಮಾನಿನಿಂದ ನಾಕು ಬಾರಿಸಿ ಸ್ಟೇಜಿಗೆ ನೂಕಿದರು. ! ಹೇಗೋ ಸಧ್ಯ, “ಭೀಷ್ಮನರ್ತನ” ತಪ್ಪಿತು!

ಹಿರಿಯರನ್ನ ಮಾತಾಡಿಸಿ, ಅವರ ಕಾಲದ ಕಥೆಗಳನ್ನ ಕೇಳುತ್ತಾ ಕೂರೋದು ನಂಗಿಷ್ಟ. ಹಾಗೆ ಈ ನಾಟಕದ ಕತೆಗಳನ್ನ ಕೇಳಿದಾಗೆಲ್ಲ, ಹೆಚ್ಚಾಗಿ ಈ ನೃತ್ಯ ಮತ್ತು ನೃತ್ಯಗಾತಿಯರ ಕುರಿತೇ ಒಂದಷ್ಟು ಕತೆಗಳು. ಈ ನೃತ್ಯಗಾತಿಯರು ಮೈಸೂರಿನಲ್ಲಿರುತ್ತಿದ್ದರು. ಮರಾಠಿ ಇವರ ಭಾಷೆ. ನಾಟಕದ ಸೀಸನ್ನು ಶುರುವಾದರೆ ಇವರಿಗೆ ಕೈ ತುಂಬ ಕೆಲಸ . ಕ್ಯಾಲೆಂಡರಿನ ತುಂಬ ದಿನಕ್ಕೊಂದು ಊರ ಹೆಸರುಗಳ ಗುರುತು. ಈ ಮರಾಠಿಗರು ಹಿಂದೆ ಎಲ್ಲಿದ್ದರು. ಇಲ್ಲಿ ಬಂದು ಯಾಕೆ ನೃತ್ಯ ಕಲಿತರು ? ಏನಿವರ ಕಥೆ ಅನ್ನೋದು ನನ್ನ ಪಾಲಿಗೂ ಕುತೂಹಲವಾಗೇ ಉಳಿದಿದೆ. ನನಗೆ ಅಸ್ಪಷ್ಟವಾಗಿ ನೆನಪಿದೆ. ಈ ಮರಾಠಿ ನೃತ್ಯಗಾತಿಯರು ಸಾಧಾರಣವಾಗಿ ಡುಮ್ಮಿಯರಾಗಿದ್ದರು. ಹಾಗೆಂದು ನೃತ್ಯಕ್ಕೇನೂ ಕಷ್ಟಪಡುತ್ತಿರಲಿಲ್ಲ. ನೋಡಲು (ತೆಳ್ಳಗಿರದಿದ್ದರೂ) ಬೆಳ್ಳಗಂತೂ ಇದ್ದರು. ನಾಟಕದಲ್ಲಿ ಎರಡು ನಿಮಿಷ ಕೈ ತಾಕಿಸಿಕೊಂಡು ಕುಣಿದ ಕೆಲ ಪಾತ್ರಧಾರಿಗಳು, ಅವರನ್ನ ಹುಡುಕಿಕೊಂಡೂ ಹೋಗಿಬಿಡುತ್ತಿದ್ದರು. ಆ ಮರಾಠಿ ಹೆಣ್ಣುಮಕ್ಕಳು ಎಂಟರ್‍ಟೈನ್ ಮಾಡದೇ ಮರಳಿದವರೇ ಹೆಚ್ಚು.ಅವರು ಹಳ್ಳಿಗಳ ಮುಖ್ಯಸ್ಥ. ಅತವಾ ಅನುಕೂಲಸ್ಥನೊಂದಿಗೆ ಮದುವೆ ಮಾಡಿಕೊಳ್ಳುತ್ತಿದ್ದರು. ಮದುಮಗನ ಮನೆಯವರೂ ಇದನ್ನು ವಿರೋಧಿಸುತ್ತಿರಲಿಲ್ಲ. ಹಾಗೆಂದು ಮನೆಗೂ ಕರೆಯುತ್ತಿರಲಿಲ್ಲ. ಈಗ ಯೋಚಿಸಿದರೆ, ಈ ಹೆಂಗಸರು, ಅಪಾಪೋಲಿಗಳಿಂದ ಪಾರಾಗಲು, ಗಟ್ಟಿಗನನ್ನ ಮದುವೆಯಾಗಿಬಿಡುತ್ತಿದ್ದರಾ? ಅನ್ನುವ ಅನುಮಾನವಾಗುತ್ತದೆ.
ಹೀಗೆ, “ಪ್ರಭುಲಿಂಗಲೀಲೆ” “ರಾಜಸೂಯಯಾಗ” “ಸತ್ಯಮೂರ್ತಿವಿಜಯ” “ತ್ರಿಪುರ ಸಂಹಾರ” “ತಾರಕಾಸುರ ವಧೆ” ಹೀಗೆ ಎಷ್ಟೊಂದು ನಾಟಕಗಳು. ನಾಟಕ ಕಲೀತಿದಾರಂತೆ. ಇಂತಿತವರು ಇಂತಿಂತ ಪಾತ್ರ ಮಾಡ್ತಾರಂತೆ ಅನ್ನುವಲ್ಲಿಂದ ಶುರುವಾಗಿ, ಇಂತ ದಿನವಂತೆ ಅಂತ ನಿಗಧಿಯಾಗಿ, ಶಾಮಿಯಾನ ಹಾಕಿ, ನೆಂಟರಿಷ್ಟರನ್ನ ಕರೆದು, ಇಡೀ ರಾತ್ರಿ ನಾಟಕ ನೋಡಿ ಮುಗಿದ ಮೆಲೆಯೇ ಕಡೆಯ ಮುಕ್ತಾಯ. ಅಲ್ಲಿಗೆ ಒಂದು ಸಂಭ್ರಮ ಮುಗಿಯುತ್ತಿತ್ತು.
ಇದೆಲ್ಲ ಈಗ ಹೆಚ್ಚು ಕಮ್ಮಿ ಇತಿಹಾಸ. ಈಗ್ಯಾರೂ ಊರಲ್ಲಿ ನಾಟಕ ಆಡುವುದಿಲ್ಲ. ಮೇಷ್ಟ್ರ ಬಟ್ಟೆ ಒಗೆವುದು ದೂರದ ಮಾತೇ.ಮೇಷ್ಟ್ರೆಲ್ಲಿದ್ದಾರೋ ಪಾಪ. ಕಾರಣಗಳು ಹಲವಿಲ್ಲಿ. ಒಂದು, ಅಲ್ಲೆಲ್ಲೋ ಇದ್ದ ರಾಜಕೀಯ ಮನೆಯೊಳಕ್ಕೆ ಬಂದು. ನಾಟಕದ ಭುಜದ ಮೇಲೂ ಕೈ ಇಟ್ಟಿತ್ತು. ನಾಟಕದ ವೇದಿಕೆ ರಾಜಕಾರಣದ ವೇದಿಕೆಯಾಗಿ ಬದಲಾಯ್ತು. ಪೋಸ್ಟರು, ಪಾಂಪ್ಲೆಟ್ಟಿನಲ್ಲಿ ಯಾವ ಪಕ್ಷದವರ ಹೆಸರು ಹಾಕಿಸಬೇಕು ಅನ್ನುವಲ್ಲಿಂದ ಭಿನ್ನಾಬಿಪ್ರಾಯ. ಎಷ್ಟೋ ಸಲ ಪ್ರಾಕ್ಟೀಸು ಮಾಡಿದ್ದ ನಾಟಕಗಳೇ ನಿಂತುಹೋಗಿವೆ. ಮತ್ತು ದಿನೇ ದಿನೇ ಖರ್ಚು ಹೆಚ್ಚಾಗಿತ್ತು. ಅದಕಿಂತ ಮುಖ್ಯವಾಗಿ, ಪ್ರೇಕ್ಷಕರ ಆಸಕ್ತಿ, ಪ್ರೋತ್ಸಾಹ ಎರಡೂ ಕಡಿಮೆಯಾದದ್ದು. ಹೊಸ ತಲೆಮಾರಿನವರು ಯಾರೂ ಕೃಷ್ಣನೂ, ದುರ್ಯೋದನನೂ ಆಗಿ ಬಣ್ಣ ಹಚ್ಚಲು ಬಯಸದಿದ್ದುದು. ಜೊತೆಗೆ, ಈಗ ಮುಂಚಿನಂತೆ ಕೇವಲ ಕೃಷಿ ಕೆಲಸವಲ್ಲದೆ ಬೇರೆ ಬೇರೆ ವ್ಯವಹಾರಗಳೂ ಇವೆ. ವ್ಯವಹಾರಕ್ಕೆ ಮಳೆ ಬೇಸಿಗೆಗಳ ಭೇದವಿಲ್ಲ ಹಾಗಾಗಿ, ತಿಂಗಳುಗಟ್ಟಲೆ ಕಲಿವ , ತಾಳ್ಮೆ ಪುರುಸೊತ್ತು ಎರಡೂ ಯಾರಿಗೂ ಇಲ್ಲ. ಎಲ್ಲಕ್ಕಿಂತ ಮುಖ್ಯ ಕಾರಣ ಟಿವಿ ಮತ್ತು ಸಿನೆಮಾ. ಮನರಂಜನೆಗಾಗಿ ವರ್ಷಗಟ್ಟಲೇ ಕಾಯಬೇಕಿಲ್ಲ. ನಿದ್ದೆಕೆಡಬೇಕಿಲ್ಲ. ಈಗಂತು ಟಿವಿಯಲ್ಲಿ ಕಣ್ತುಂಬ ಸಿನೆಮಾ, ಸೀರಿಯಲ್ಲುಗಳು ಬರುತ್ತವೆ. ಆ ಮರಾಠಿ ಹೆಂಗಸರ ಅರ್ಧದಷ್ಟು ಗಾತ್ರದ ಹುಡುಗಿ, ಅವರ ಬಟ್ಟೆಯ ಅರ್ಧದಷ್ಟನ್ನೇ ಹಾಕಿ, ಬೆರಳಲ್ಲಿ (ಬಟನ್ನು ಒತ್ತಿದರೆ) ಕುಣಿಯುತ್ತಾಳೆ. ಪೌರಾಣಿಕ ನಾಟಕ ಯಾರಿಗೆ ಬೇಕು?
ಇಷ್ಟೆಲ್ಲದರ ನಡುವೆಯೂ ಮೊನ್ನೆ ನಾನು ಒಂದು ಪಕ್ಕಾ ಪೌರಾಣಿಕ ನಾಟಕವೊಂದರ ಪೋಸ್ಟರ್ ನೋಡಿದೆ.ಕಲಾಕ್ಷೇತ್ರದ ಮುಂದೆಯೂ ಇಂತಹ ಪೋಸ್ಟರುಗಳು ಈಗಲೂ ಸಿಗುತ್ತವೆ ಖುಷಿಕೊಡುತ್ತವೆ. ಬೆಂಗಳೂರ ರಂಗಮಂದಿರಗಳಲಿ ಕೆಲವೊಮ್ಮೆ ಟಿಕೆಟ್ಟು ಸಿಗದಷ್ಟು ಜನವಿರುತ್ತಾರೆ. 40-50 ಸೀರಿಯಲ್ಲುಗಳಿದ್ದರೂ, “ನಾನು ನಾಟಕ ಮಾತ್ರ ಮಾಡ್ತೇನೆ” ಅನ್ನುವವರಿದ್ದಾರೆ. ನನ್ನ ನಂಬಿಕೆ ಇಷ್ಟೆ. ಒಂದು ಮಾಧ್ಯಮ ಮತ್ತೊಂದರ ಪ್ರಭಾವ, ತೀವ್ರತೆಗಳನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಬಹುದೇ ಹೊರತು, ಸಂಪೂರ್ಣ ನಾಶ ಪಡಿಸಲಾಗದು. ಈ ಮಾತಿಗೆ ಇನ್ನೂ ಒಂದು ಪುರಾವೆ ಕೊಡುತ್ತೇನೆ. 2005 ರ ಆಚೀಚೆ ಎಫ್ ಎಂ ರೇಡಿಯೋಗಳು ಅಬ್ಬರದ ಸಂಖ್ಯೆಯಲ್ಲಿ ಬಂದವು. ಟಿಪಿಕಲ್ ಆಕಾಶವಾಣಿಯ ಕಾರ್ಯಕ್ರಮಗಳು ನಿಂತಾವೇ? ಅನಿಸಿತ್ತು. ಬ್ಯಾಕ್ ಟು ಬ್ಯಾಕ್ ಹೊಸ ಹಾಡುಗಳನ್ನು 24 ಗಂಟೆ ಹಾಕುವಾಗ “ನಿಮ್ಮ ಮೆಚ್ಚಿ ಚಿತ್ರಗೀತೆಗಳು ‘ ಕಾರ್ಯಕ್ರಮಕ್ಕೆ ಯಾರಾದ್ರೂ ಲೆಟರ್ ಬರೀತಾರಾ? “ಈ ಹಾಡಿಗಾಗಿ ಮೆಚ್ಚಿ ಪತ್ರ ಬರೆದವರು……….” ಅಂತ ಆಕಾಶವಾಣಿಯಲ್ಲಿ ಹೆಸರುಗಳನ್ನು ಹೇಳುತ್ತಿದ್ದರೆ. ನಾನು, “ಎಲ್ಲ ಡ್ರಾಮಾ. ಅವರೇ ಸಿಕ್ಕಿದ್ ಹೆಸರ್ ಹೇಳ್ತಾರಷ್ಟೆ” ಅಂತ ನನ್ನ ಬುದ್ದಿವಂತಿಕೆಗೆ ನಾನೇ ಬೆನ್ನುತಟ್ಟಿಕೊಂಡಿದ್ದೆ. ಮೈಸೂರಿಂದ ಬೆಂಗಳೂರಿಗೆ ಬಂದಿದ್ದರೂ, ಆಕಾಶವಾಣಿಯ ಮೇಲಿನ ಮೋಹ ಬಿಟ್ಟಿರಲಿಲ್ಲ. ಬೆಂಗಳೂರು ಆಕಾಶವಾಣಿ ಬಾಗಿಲು ಬಡಿದೆ. ಅಲ್ಲಿ ಮೆಚ್ಚಿನ ಚಿತ್ರಗೀತೆಗಾಗಿ ದಿನವೂ ಬರುತ್ತಿದ್ದ ಪತ್ರಗಳೆಲ್ಲ ಹೊಸ ಪಾಠ ಹೇಳಿದವು. ಬಹುಶಃ ನನ್ನ .ಬೆನ್ನ ಹಿಂದೆ ನಗುತ್ತಿದ್ದವು.
ಅನೌನ್ ನಂಬರಿನ ಫೋನು. “ನಾನು ಕಣೇ ಪುಟ್ಟಿ, ಮರೆತುಬಿಟ್ಯಾ?” ಅಂತು ಹೆಣ್ಣು ಧನಿ. ವಿಚಾರಿಸಿದರೆ ಆಕೆ ಆ ಅದೇ ಮರಾಠಿ ಹೆಂಗಸು. “ನಿಮ್ಮೂರಿಗೆಲ್ಲ ಬರ್ತಾ ಇದ್ವಿ ನಾವು, ನೀನ್ ತುಂಬ ಚಿಕ್ಕೋಳು.” ಅಂತ ಸಂಬಂಧವೇರ್ಪಡಿಸಿದರು. “ನಿಮ್ ತಂದೆಯೋರು ಅಕಸ್ಮಾತಾಗಿ ಸಿಕ್ಕಿ ಹೇಳಿದರು ಸೀರಿಯಲ್ ನಲ್ಲಿ ಕೆಲಸ ಮಾಡ್ತೀಯಂತಲ್ಲ. ನಮಗೂ ಏನಾದ್ರೂ ಇದ್ರೆ ನೋಡಮ್ಮ” ಅಂದರು. ನಾಟಕಗಳು ಕಡಿಮೆಯಾದವು. ಕಡೆಗೆ ಇಲ್ಲವೇ ಆದವು. “ಡೇಟು” ಕೊಡುತ್ತಿದ್ದ ಕ್ಯಾಲೆಂಡರೀಗ ಎಲ್ಲ ಕಾಲಗಳಲ್ಲೂ ಖಾಲಿ. ಖಾಲಿ. ಯಾರ ಹೆಸರಲಿ ತಾಳಿಕಟ್ಟಿಕೊಂಡಿದ್ದರೋ ಅವರು ಭೂಮಿಯಿಂದಲೇ ಖಾಲಿ. ಯಾವುದು ಖಾಲಿಯಾದರೂ ಹೊಟ್ಟೆ ಮಾತ್ರ ತುಂಬಲೇಬೇಕಲ್ಲ? ನಾಟಕದಲ್ಲಿ ನೃತ್ಯ ಮಾಡುತ್ತಿದ್ದವರಿಗೆ ಸೀರಿಯಲ್ಲಿನ ಗ್ರಾಮರ್ ಗೊತ್ತಿಲ್ಲ. ಕಷ್ಟವಾಗುತ್ತಿದೆ.
ಕಷ್ಟವಾದರೂ, ಸುಖವಾದರೂ ಅವರಿಗೆ “ಬದುಕು ಕಂಬನಿ. ಕಲೆ ಕರವಸ್ತ್ರ”.
 
 

‍ಲೇಖಕರು G

27 January, 2015

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. Anil Talikoti

    ಕಣ್ಣೊರಿಸುವ ಪ್ರೇಕ್ಷಕನಿಲ್ಲದೆ, ಕಾಸು ಕೊಡದ ಧಣಿಗಳಿಲ್ಲದೆ ಈ ‘ಊರಿ’ನ ನಾಟಕಗಳು ಕೊನೆ ಕಂಡಿವೆ -ಬಯಲಾಟ, ದೊಡ್ಡಾಟಗಳಿಗಾದಂತೆ

  2. sindhu

    ಕುಸುಂ..
    ತನ್ನ ಪಾಡಿಗೆ ತಾನು ಲೋಕದುರುಳು. (ಕೆ.ಎಸ್.ನ)
    ಎಫ್.ಎಂ ಅಬ್ಬರಗಳಲ್ಲೂ ಆಕಾಶವಾಣಿಯನ್ನೇ ಕೇಳುವವರುಂಟು. ಸೀರಿಯಲ್ ಸಂತೆಗಳ ಮಧ್ಯೆ ಎದ್ದು ಬಂದು ನಾಟಕ ನೋಡುತ್ತ ಇರುವವರುಂಟು. ಸಿನಿಮಾ ನೋಡುವವರು ಯಕ್ಷಗಾನವನ್ನ ತಪ್ಪಿಸದೆ ನೋಡುವವರೂ ಉಂಟು.
    ಗಾಯಕೀ, ನಾಟಕ, ನರ್ತನ, ಯಕ್ಷಗಾನ, ಗಮಕ, ತಾಳ ಮದ್ದಲೆ, ಅಷ್ಟಾವಧಾನ, ವಾಚನ, ಭಜನೆ ಗಳ ಸುವರ್ಣಯುಗ ಮುಗಿದಿರಬಹುದು… ಆದರೆ ಕಾಲ ಮುಗಿದಿಲ್ಲ. ಮುಗಿಯುವುದಿಲ್ಲ.
    ಸಂಸ್ಕೃತಿ ಎಂಬವಳು ಹೊಸ ಹೊಸ ಹರಿವಲ್ಲಿ ಹರಿವ ಹೊಸ ಪಾತ್ರಗಳಲ್ಲೇ ನುಗ್ಗುವ “ಸ್ಥವಿರ ಗಿರಿಯ ಚಲನದಾಸೆ”ಯಂತಹ ನದೀ… ಚಲನಶೀಲೆ. ಅದೇ ಭರವಸೆ.
    ಬರಹ ತುಂಬ ಇಷ್ಟವಾಯಿತು. ಆಲೋಚನೆಯ ಕಿರಿಬೆರಳು ಕೊಡುತ್ತೀರಿ. ಹಿಡಿದು ಎಲ್ಲೆಲ್ಲಿಗೋ ಹೋಗಿಬಿಡುವೆ ನಾನು.
    ಪ್ರೀತಿಯಿಂದ,
    ಸಿಂಧು

  3. ಮಮತ

    ಯಾವ ತರಹದ ಪ್ರತಿಕ್ರಿಯೆ ನೀಡಬೇಕು ತಿಳಿತಿಲ್ಲ. ಎಲ್ಲದಕ್ಕೂ ಮಿಶ್ರ ಪ್ರತಿಕ್ರಿಯೆ ಈಗಿನ ಜಮಾನದಲ್ಲಿ. ಒಂದು ಕ್ಷೇತ್ರದಲ್ಲಿ ಈಗಿದ್ದ ವಾತಾವರಣ ಇನ್ನೊಮ್ಮೆ ನೋಡಲು ಸಿಗೋಲ್ಲ. ಒಂದು ಕಾಲಕ್ಕೆ ಸಂಗೀತ ಮೆರೆದರೆ ಮತ್ತೊಮ್ಮೆ ರಂಗಭೂಮಿ ಇನ್ನೊಮ್ಮೆ ಇನ್ನೊಂದು. ಆದ್ರೂ ರಂಗಭೂಮಿ ಯಾವ್ಯಾವ್ದೋ ಆಯಾಮ ಪಡೆದುಕೊಂಡು ಎವರ್ ಗ್ರೀನ್ ಆಗಲು ಪ್ರಯತ್ನ ಪಡುತ್ತೆ. ಆದರೂ ತಲ್ಲಣ, ಪಲ್ಲಟಗಳು ಕಾಲದಿಂದ ಕಾಲಕ್ಕೆ ದಾಖಲಾಗುತ್ತಲೇ ಹೋಗುತ್ತೆ. ಹೊಸತನಕ್ಕೆ ಹಾತೊರೆಯುತ್ತೆ. ಕಲಾವಿದರ ಕತೆ ಮಾತ್ರ ಕೆಲವೊಂದನ್ನ ಹೊರತುಪಡಿಸಿ ಎಲ್ಲವೂ ಎಲ್ಲರೂ ಒಂದೇನೇ..
    ಪೌರಾಣಿಕ ರಂಗಭೂಮಿ ಅದರ ಕತೆಗಳು , ಹಿನ್ನೆಲೆ ಮಾತ್ರ ರೋಚಕವೇ.. ಒಳ್ಳೆ ಬರಹ

  4. Rukmini Nagannavar

    ಕಾಲ ಹೀಗೆ ಇರುತ್ತದೆ ಅಂತ ಹೇಳಕ್ಕಾಗಲ್ಲ. ಆದರೂ ಅವರ ಪಾಡು… 🙁
    ಹೃದಯ ತಟ್ಟಿತು ಅಕ್ಕ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading