
ನಿಜವೆಂದರೆ ಈ ಮಾತು ನಾನು ಆಡಲೇಬಾರದು.ನಾನೇನೂ ನಿಮ್ಮ ಹಾಗೆ ಅಲ್ಪಾಯುಷಿಯಲ್ಲ. ಭೂಮಿತಾಯಿ ಬಂಜೆಯಾಗುವುದಿಲ್ಲ.ಅನ್ನುವುದು ನಿಮ್ಮದೇ ಮಾತು. ಆದರೂ ನಾನಿದನ್ನು ನನ್ನ ಬದುಕಿನ ಕಡೆಯ ದಿನಗಳೆಂದೇ ಕರೆಯುತ್ತೇನೆ. ತುಂಬಾ ನೊಂದಿದ್ದೇನೆ. ನಿರಂತರ ನರಳುತ್ತಿದ್ದೇನೆ. ಕೇಳಿ, ಇವತ್ತು ನನ್ನ ಸ್ಥಿತಿ ಏನಾಗಿದೆ ನಿಮಗೂ ಹೇಳುತ್ತೇನೆ.
ಇಷ್ಟರವೆಗೆ ನೀವು ಕೇಳಿದ್ದೆಲ್ಲ ಬರಿಯ ಮನುಷ್ಯರ ಕಿತ್ತಾಟದ ಕಥೆಮಾತ್ರ. ಇಷ್ಟೆಲ್ಲ ಅವರು ಕಿತ್ತಾಡಿದ್ದೂ ಬರಿಯ ಒಡೆತನಕ್ಕಷ್ಟೆ. ಬಿತ್ತಿ ಬೆಳೆವುದಕಷ್ಟೆ. ಉಂಡು ಉಡಲಿಕ್ಕಷ್ಟೆ. ಹಜಾರದ ಮೂಟೆಗಳ ಸಂಖ್ಯೆಯನೂ, ಕೊಟ್ಟಿಗೆಯ ರಾಸುಗಳನೂ ತಿಪ್ಪೆಯ ಸಗಣಿಯನೂ ಹೆಚ್ಚಿಸಿಕೊಳ್ಳಲಿಕ್ಕಷ್ಟೆ. ಹಾಗಾಗಿ ನಾನು ಯಾವನ ಕೈಗೆ ಸಿಕ್ಕರೂ ಸುಖವಾಗೇ ಇದ್ದೆ. ಹದವಾಗುತ್ತಿದ್ದೆ. ಬೀಜ ಚೆಲ್ಲಿಸಿಕೊಳ್ಳುತ್ತಿದ್ದೆ. ಮಳೆಗೆ ಕಾಯುತ್ತಿದ್ದೆ. ಬೀಜ ಮೊಳೆಸುತ್ತಿದ್ದೆ. ತೆನೆ ತೊನೆಸುತ್ತಿದ್ದೆ. ಪ್ರತಿಸಲವೂ ಪ್ರತಿಬೆಳೆಗೂ ಪ್ರಸವಾನಂದ. ಆದರೆ ಆಮೇಲೆ?
ಅತ್ತೆ ಆವತ್ತು ಕಪಿಲಾ ತೀರದಲ್ಲಿ ಆಡಿದ ಮಾತು ತಪ್ಪದೇ ಪಾಲಿಸುವ ಸಲುವಾಗಿ, ಸರೋಜಿ ಸರ್ವೆ ನಂಬರ್ 94/1 ಆದ ನನ್ನನ್ನು ಮಗ ಸಿದ್ದಲಿಂಗೇಶನಿಗೇ ಸಿಗುವ ಹಾಗೆ ಮಾಡಿದಳು. ಆದರೆ ಈ ಸಿಧ್ದಲಿಂಗ ನನ್ನನ್ನ ಉಳಿಸಿಕೊಳ್ಳಿಲ್ಲ. ಅಥವಾ ಉಳಿಸಿಕೊಳ್ಳಲು ಆಗಲಿಲ್ಲ. ಎಲ್ಲಿಂದಲೋ ಅದ್ಯಾವುದೋ ಗಾಳಿ ಬಂದು ಎಲ್ಲರನೂ ಸೋಂಕಿ ಹೋದಂತೆ. ಎಲ್ಲರೂ ಆ ಗಾಳಿಯ ರೋಗಕ್ಕೆ ಸಿಲುಕಿದವರಂತೆ ವರ್ತಿಸತೊಡಗಿದರು. ರೋಗ ಉಲ್ಬಣವಾದಂತೆ ನರಳಿದರು. ಈ ಸುಳಿಯಲ್ಲಿ ನನ್ನನ್ನೂ ಸಿಲುಕಿಸಿದರು.
ಸಿದ್ದಲಿಂಗೇಶ ನ್ಯಾಯವಾಗೇ ಇದ್ದ. ಅವನ ಹೆಂಡತಿಗೂ ಥೇಟು ಅತ್ತೆಯದೇ ಗುಣ. ಗಂಡ ಹೆಂಡತಿ ಇಬ್ಬರೂ ಕಷ್ಟ ಪಟ್ಟು ದುಡಿಯುತ್ತಿದ್ದರು. ಹುರುಳಿ, ಹುಚ್ಚೆಳ್ಳು, ರಾಗಿ, ಕಾಲು ಕಡ್ಡಿ.ಉಳಿದಂತೆ ರೇಷ್ಮೆ ಅಂತೆಲ್ಲ ಬೆಳೆಯುತ್ತಿದ್ದರು.ನಾನೂ ಶಕ್ತಿಮೀರಿ ಅವರಿಗೆ ಚೆಲ್ಲಿದ ಕಾಳು ಜೊಳ್ಳಾಗದಂತೆ ನೋಡಿಕೊಳ್ಳುತ್ತಿದ್ದೆ. ಆದರೇನು? ಬೆಳೆದದ್ದಕ್ಕೆ ಬೆಲೆ ಸಿಗುತ್ತಿರಲಿಲ್ಲ ಬೆಲೆ ಸಿಕ್ಕರೂ ಅದು ಬದುಕಿಗೆ ಸಾಲುತ್ತಿರಲಿಲ್ಲ. ಮಳೆ ಆಗಾಗ ಕೈ ಕೊಡುತ್ತಿತ್ತು. ಹಾಗೇನಾದರೂ ಆದರೆ ಒಂದಿಡೀ ವರ್ಷ ಸಾಲದಲ್ಲೇ ಬದುಕು ನಡೆಸಬೇಕಿತ್ತು. ಮನೆ ಖರ್ಚು ಮದುವೆ ಮುಂಜಿ ಎಲ್ಲದಕ್ಕೂ ಸಾಲ. ಅವರೊಟ್ಟಿಗೆ ನಾನೂ ನರಳುತ್ತಿದ್ದೆ. ನೆಟ್ಟಗೆ ಸಗಣಿ ತಿಂದುಂಟು ಫಲವಾಗಿದ್ದ ನನಗೆ, ಎಲ್ಲಿಂದಲೋ ರಸಾಯನಿಕ ತಂದು ಸುರಿಯುತ್ತಿದ್ದ ಸಿದ್ದಲಿಂಗೇಶ. ನನ್ನ ಮೈ ಕೈ ಯೆಲ್ಲ ಉರಿ ಬಂದಂತಾಗುತ್ತಿತ್ತು. ನನ್ನ ಮಾತು ಬಿಡಿ. ನಾನು ಒಡಲಲ್ಲಿಟ್ಟುಕೊಂಡಿದ್ದ ಅಸಂಖ್ಯ ಸೂಕ್ಷ್ಮಜೀವಿಗಳು ಆ ಸಿದ್ದಲಿಂಗೇಶ ಹಾಕಿದ ರಸಾಯನಿಕದಿಂದಾಗಿ. ಸುಟ್ಟು ಭಸ್ಮವಾಗಿಹೋದವು. 20. 30 ಅಂತೆಲ್ಲ ಹೆಸರಿಟ್ಟುಕೊಂಡು ಊರಿಗೂರೇ ಹೊಸಥರದ ಗೊಬ್ಬರ ತಂದು ಸುರಿದರು. ಮಳೆ ಕೈ ಕೊಟ್ಟು ವರ್ಷವಿಡೀ ಸಾಲದಲ್ಲಿ ಬದುಕು ಸಾಗಿಸಿದ್ದ ಸಿದ್ದಲಿಂಗೇಶ, ಈ ಬಾರಿ ಬೆಂಗಳೂರಿಗೇ ಹೋಗಿ ಬೀಜ ತಂದ ಉತ್ತಿದ, ಬಿತ್ತಿದ ನಾನೂ ನನ್ನಲ್ಲಿದ್ದ ಶಕ್ತಿಯನ್ನೆಲ್ಲ ಧಾರೆಯೆರೆದು ಮೊಳಕೆಗೆ ಜೀವತುಂಬಲು ನೋಡಿದೆ. ಆದರೆ ಆ ಬಿತ್ತನೆ ಬೀಜದಲ್ಲಿ ಮೊಳೆವ ಶಕ್ತಿ, ಗುಣ ಯಾವುದೂ ಇರಲಿಲ್ಲ. ಹಸುರು ಹಸುರು ಎಲೆ ಬೆಳೆದುನಿಂತಿತಷ್ಟೆ. ಕಾಯಿ ಕಚ್ಚಲೇ ಇಲ್ಲ. ಸಿದ್ದಲಿಂಗೇಶ ಇನ್ನಿತರರೊಡನೆ ಸೇರಿ ಪ್ರತಿಭಟನೆ ಮಾಡಿದ್ದಕ್ಕೆ. ಪುಡಿಗಾಸಿನ ಪರಿಹಾರ ಕೊಟ್ಟು ಬೀಜ ಕೊಟ್ಟವರು ಕೈ ತೊಳೆದುಕೊಂಡರು. ಅಲ್ಲಿಗೆ ಎರಡನೇ ವರ್ಷವೂ “ಭುಮಿತಾಯಿ ಬದುಕಿಗೆ ಆಸರೆ ಆಗಲಿಲ್ಲ.

ಬರೇ ಉಂಡುಕೊಂಡು ಇದ್ದರೆ ಆಗುತ್ತಿತ್ತೇನೋ , ಕರೆದವರ ಮದುವೆಗಳು. ಅದಕೆ ಬಸ್ಚಾರ್ಚು, ಮುಯ್ಯಿ. ಸತ್ತವರ ಮನೆಯ ಓಡಾಟ. ಮತ್ತು ಆಗಾಗ ಆಸ್ಪತ್ರೆ. ಹೀಗೇ.. ಇವಕ್ಕೆ ಅಂತಲೇ ಅರ್ಧ ಸಾಲವಾಗಿತ್ತು. ಅಷ್ಟರಲಿ ಪಕ್ಕದಲೇ ಒಂದು ಸಕ್ಕರೆ ಫ್ಯಾಕ್ಟರಿ ಶುರುವಾಯ್ತು. ಎಲ್ಲರೂ ಕಬ್ಬು ಬೆಳೆಯೋಕೆ ಶುರು ಮಾಡಿದ್ರು. ಒಳ್ಳೆ ಲಾಬದ ಬೆಳೆ. ಒಮ್ಮೆ ಬೋರು ಕೊರೆಸಿ ಕಬ್ಬು ಕೂರಿಸಿಬಿಟ್ಟರೆ, ಹೇಗೋ ಫ್ಯಾಕ್ಟರಿಗೆ ಮಾರಿ ಸಾಲಮುಕ್ತರಾಗಿ, ಸುಖದ ಬದುಕನ್ನೂ ಕಂಡುಕೋಬಹುದು ಅಂತ ಹಲುಬಿದ. ಮತ್ತೆ ಸಾಲ ಮಾಡಿದ. ಬೋರು ಕೊರೆಸಿದ. 1,2,3 ಬೋರೆಸಿದರೂ ಬರೀ ಧೂಳೇ ಹೊರತು ಗಂಗಮ್ಮ ಮಾತಾಡಲಿಲ್ಲ. ಸಾಲ ಹನುಮಂತನ ಬಾಲವಾಯ್ತು. ಈ ನಡುವೆ ಗಂಡ ಹೆಂಡಿರಿಗೆ ಇದೇ ವಿಷಯವಾಗಿ ನಿತ್ಯ ಜಗಳ. ಸಿದ್ದು ಕುಡಿಯುವುದನ್ನೂ ಕಲಿತ. ಕಡೆಗೆ ಆರೆಕರೆ ಜಮೀನು ಮಾರಿದ. ನನ್ನನ್ನ ಅಂದರೆ ಸರ್ವೆ ನಂಬರ್ 94/1 ಅನ್ನು ಮಾರಲೇಕೂಡದು ಅಂತ ಹಠಮಾಡಿ ಮತ್ತೆ ಉಳಿಸಿಕೊಂಡಳು ಸರೋಜ.
ಆದರೆ ಪರಿಸ್ಥಿತೀಲಿಯಾವ ಬದಲಾವಣೆಯೂ ಆಗಲೇ ಇಲ್ಲ. ಆದಾಯ ಮೂರು ಖರ್ಚು ಆರು ಅನ್ನುವಂತಾಯಿತು. ಬಸ್ಚಾರ್ಜು ಏರಿತು. ಟಿವಿಯ ಆಸೆ ಚಿಗುರಿತು.. ಊರ ಮದುವೆಗಳು ಸಿಟಿಯ ಛತ್ರ ಸೇರತೊಡಗಿದವು,ಆದರೆ ಸಿದ್ದಲಿಂಗೇಶನ ದುಡಿಮೆಗೂ ಆದಾಯಕ್ಕೂ ಸಂಬಂಧವಿರಲಿಲ್ಲ. “ನಮಗೆ ನಾಕೆಕರೆ ಜಮೀನು ಬೇಕು.ಎಕರೆಗೆ ಒಂದು ಲಕ್ಷದ ಇಪ್ಪತ್ತು ಸಾವಿರ ಕೊಡ್ತೇವೆ. ಅಂತ ಯಾರೋ ಅಂದ ಕೂಡಲೆ ಸಿದ್ದಲಿಂಗೇಶನಿಗೆ ಕಣ್ಣರಳಿತು. ಮೊನ್ನೆಯಿನ್ನೂ ಮೂವತ್ತೈದು ಸಾವಿರಕ್ಕೂ ಕೇಳೋರಿಲ್ಲದ ಜಮೀನಿಗೆ ಲಕ್ಷ ಬೆಲೆಯಾ? ಲಕ್ಷ!! ಒಂದೇ ಸಲಕ್ಕೆ ಯಾವತ್ತೂ ನೋಡಿರದ ಗಂಟು. ಒಂದೆಕರೆಗೆ ಒಂದು ಲಕ್ಷ , ಅಂದರೆ ನಾಕೆಕರೆಗೆ ನಾಕು ಲಕ್ಷ . ತಾಣು ಅಷ್ಟೊಂದು ಶ್ರೀಮಂತ ಅನ್ನುವ ಕನಸೇ ಸಿದ್ದಲಿಂಗೇಶನನ್ನ ಪುಳಕಗೊಳಿಸಿತು.
ಚಾಮುಂಡೇಶ್ವರಿ ಬಾರ್ ಅಂಡ್ ರೆಸ್ಟುರೆಂಟು ಅಷ್ಟರಲಿ ಅವನಿಗೆ ಪರಿಚಿತ ದಾರಿಯಾಗಿತ್ತು. ತುಂಬಾ ಯೋಚಿಸಿ ಒಂದು ಪ್ಲಾನ್ ಸಿಧ್ದಪಡಿಸಿ, ಅದನ್ನ ಸ್ನೇಹಿತರ ಮುಂದೆ ಹೇಳಿದ. ಅವರೂ ಅವನ ಐಡಿಯಾ ಕೇಳಿ, ವಾಹ್ ವಾಹ್ ಅಂದರು. ಸಿದ್ದಲಿಂಗೇಶ ಯೋಜನೆ ಜಾರಿಗೊಳಿಸಲು ಸಿಧ್ದನಾದ, ಐದೂವರೆ ಲಕ್ಷಕ್ಕೆ ಜಮೀನು ಮಾರುವುದು ಮತ್ತು ಸಾಲ ತೀರಿಸಿ, ಉಳಿದ ಹಣದಲ್ಲಿ ನಂಜನಗೂಡಲ್ಲೋ, ಮೈಸೂರಲ್ಲೋ ಸ್ವಂತಕ್ಕೆ ಮನೆ ಕೊಂಡುಕೊಂಡು ಏನಾದರೂ ವ್ಯಾಪಾರ ಆರಂಭಿಸೋದು.
ಸರೋಜ ಹಠಕ್ಕೆ ನಿಂತಳು. ಊಟಬಿಟ್ಟಳು. ಜಗಳವಾಡಿದಳು. ಏನೇ ಮಾಡಿದರೂ ಸಿದ್ದಲಿಂಗೇಶನ ಸಾಲ, ಈ ಜಮೀನನ್ನ ನಂಬಿ ಬದುಕಲಾಗದ ಸ್ಥಿತಿ , ಈ ವಾಸ್ತವಗಳ ಹೇಳಿದಾಗ ಅವಳ ಬಳಿಯೂ ಉತ್ತರವಿರುತ್ತಿರಲಿಲ್ಲ. ಆದರೂ ಸರೋಜ ಕುರಿ ಸಾಕೋಣ. ಹಸ ಸಾಕಣ. ಮಾರೋದು ಬೇಡ ಅಂತಲೇ ಹೇಳುತ್ತಿದ್ದಳು.”ಯಾರೋ ತಲ್ಕೆಟ್ ಬಡ್ಡೈಕಳು ಒಂದೆಕರ್‍ಗ ಲಕ್ಷದ ಇಪ್ಪತ್ ಸಾವ್ರ ಕೊಡ್ತೀವಿ ಅಂತರ. ಈಗ ನಾಕೆಕರ ಒಟ್ಗೆ ಕೊಟ್ರ ಐದೂವರ ಕೊಡ್ತೀವಿ ಅಂತ ಒಪ್ಕಂಡರ.ಸಾಲ ಎಲ್ಲ ಕಳೆದು ನಾಕ್ ಲಕ್ಷವೇ ಉಳಕಬುಡು, ನಾಕ್ ಲಕ್ಷಕ್ಕ ಕನಿಷ್ಟ ಏಡ್ ರೂಪಾಯಿನ್ ಬಡ್ಡೀಲಿ ದುಡ್ಡೆಷ್ಟಾಯ್ತು? “ ಕೇಳಿದ ಅವಳು ಮಾತಾಡಲಿಲ್ಲ.” ಎಷ್ಟಾಯ್ತು ಕಪಿಬಡ್ಡೆತ್ತದೆ? 8 ಸಾವ್ರ ಆಯ್ತು. ಜಮೀನ್ಲಿ ತಿಂಗಳುಗ್ ಎಂಟ್ ಸಾವ್ರ ಬಂದುದಾ? ಎಂಗಸ್ಗಳ್ ಮಾತ್ ಕ್ಯೋಳ್ಕಂಡ್ ಓದ್ರ ಅಷ್ಟೆ. ಬ್ಯಾಡ ಬೇಕು ಅನ್ನಕ ನೀ ಏನ್ ನಿಮ್ಮಪ್ಪನ್ ಮನಯಿಂದ ತಂದಿರಾ ಆಸ್ತಿ ಅಲ್ವಲ್ಲ ಇದು.” ಅಂತ ಕಡೆ ಸಾಲು ಹೇಳಿ ಎದ್ದು ಹೋದ.
ಸರೋಜಿಯೇ ಹೋಗಿ ಕರೆತರಲಾಗಿ ಸಿದ್ದಲಿಂಗೇಶನ ಅಕ್ಕ ಮಂಜುಳೆ ಅವಳ ಗಂಡ ಬಂದರು. 20 ವರ್ಷಗಳ ಹಿಂದೆಯೇ ಲಕ್ಷಗಳ ಲೆಕ್ಕದಲಿ ದುಡ್ಡಿಟ್ಟಿದ್ದ ಸಿದ್ದಲಿಂಗೇಶನ ಬಾವ, ಬೇರೆ ಯಾರಿಗೂ ಕೊಡೋದ್ ಬ್ಯಾಡ ಅಪ್ಪನ ಮನ ಆಸ್ತಿ ಕೊಡಲೇಬೇಕು ಅನ್ನದ್ ನಿನ್ ತೀರ್ಮಾನ ಆದ್ರ ನಮಗೇ ಕೊಡು ಅಂದರು. ಅದೆಷ್ಟೆಷ್ಟೋ ಮಾತುಕತೆಗಳ ನಂತರ. ಸ್ವಂತ ಭಾವನಿಗೆ ಸಿದ್ದಲಿಂಗೇಶ ಜಮೀನು ಮಾರಿದ. ಅಲ್ಲಿಗೆ ಸರ್ವೆ ನಂಬರ್ 94/1 ಅನಿಸಿಕೊಂಡಿರುವ ನಾನು ಈ ವಂಶದ ಹೆಣ್ಣು ಸಂತಾನದ ಒಡೆತನಕೆ ಸೇರಿಕೊಂಡೆ. ಸಿದ್ದಲಿಂಗೇಶ ಮನೆ ಕೊಂಡುಕೊಂಡ , ಆದರೆ ಆರೇ ತಿಂಗಳಲಿ ಸರೋಜ ನವೆದು ನಾರಾಗಿ ಹೋದಳು. ಚಿಂತೆ ಅವಳ ಹೊಟ್ಟೆ ಬೆನ್ನುಗಳ ಅಂಟಿಸಿತ್ತು. ಒಂದು ಸಂಜೆ ಇದ್ದಕ್ಕಿದ್ದ ಹಾಗೇ ಮಠದ ಹಿಂದೆ ಕಪಿಲೆಯ ದಡದಲಿ ಅತ್ತೆ ಮಾತಾಡಿದ ಜಾಗ ಅರಿಸಿಕೊಂಡು ಹೋದಳು. ತುಂಬ ಹೊತ್ತು ಕೂತಿದ್ದವಳು. ಸುಳಿಯಿರುವ ಜಾಗದ ಕಡೆ ಹೆಜ್ಜೆ ಹಾಕುತ್ತಾ.. ಮಠದ ಹುಡುಗರು ನೋಡುನೋಡುತ್ತಿದ್ದಂತೆಯೇ ಮುಳುಗೇ ಬಿಟ್ಟಳು. ಅವತ್ತು ಯಾರಾದರೂ ಎಲ್ಲಾದರೂ ಬೋರು ಕೊರೆಸಿದ್ದರೆ ನೀರುಕ್ಕುತ್ತಿತ್ತೇನೋ. ಯಾಕಂದರೆ ಸರೋಜಿ ಸಾವಿಗೆ ನಾನೂ ಒಳಗೇ ಅಳುತ್ತಿದ್ದೆ.
ನನ್ನ ಕೊಂಡು ಕೊಂಡ ಧೀರ, ಸಿದ್ದಲಿಂಗೆಶನ ಭಾವ ಮಹದೇವಪ್ಪನಿಗೆ ತನ್ನ ಊರಿಂದ ಬಂದು ಕೇವಲ ನಾಕೆಕೆರೆ ಉಳುಮೆ ಮಾಡೋ ದರ್ದೇನೂ ಇರಲಿಲ್ಲ . ಹಾಗಾಗಿ ಯಾರೋ ತಮಿಳನಿಗೆ ಗುತ್ತಿಗೆ ಕೊಟ್ಟ. ಅವನು ಶುಂಠೀ, ಅರಿಶಿನ ಹಾಕಿ ನನ್ನ ಜೀವ ಹೀರಿದ. ಅವನಿಗೆ ಇಬ್ಬರು ಗಂಡುಮಕ್ಕಳು ಇಬ್ಬರೂ ಎಂಜಿನಿಯರಿಂಗು ಸೇರಿದಾಗಲೇ ಮಹದೇವಪ್ಪ ನನ್ನನ್ನ ಮೈಸೂರಿನ ಸಂತೇಪೇಟೆ ಸಾಹುಕಾರರಿಗೆ ಮಾರಿದ. ಎಕರೆಗೆ ಇಪ್ಪತ್ತು ಲಕ್ಷ, ಕೊಂಡ ಸಾಹುಕಾರ ಕಬ್ಬು, ಬಾಳೆ ಹಾಕುತ್ತಿದ್ದ. ರೈತನಷ್ಟೇ ಶ್ರಧ್ದೆ ಅವನಿಗೆ. ಸರ್ವೆ ನಂಬರ್ 94/1 ಆದ ನಾನು ನೂರಾರು ವರ್ಷಗಳ ಕಾಲ ಜತೆಗಿದ್ದ ಕುಟುಂಬದ ನಂಟು ಬಿಟ್ಟು ಹೋದ ಬೇಸರವೇನೋ ಇತ್ತು,. ಆದರೆ ಈ ಸಾಹುಕಾರನೂ ಶ್ರಧ್ದೆಗೆ ಖುಷಿಯಾಗುತ್ತಿತ್ತು. ಅವನು ಬೆಳೆದ ಕಬ್ಬಿನ ಜಲ್ಲೆಯ ಗಾತ್ರ ನೋಡಬೇಕಿತ್ತು ನೀವು. ಆದರೆ ನನ್ನ ದುರಾದೃಷ್ಟ ಅವನೂ ತೀರಿಹೋದ.
ಈ ಸಾಹುಕಾರನ ಮಗ ಈಚೆಗೆ ಅಂದರೆ ಹೋದ ವರ್ಷವಷ್ಟೆ ಮತ್ತೊಬ್ಬ ಬೆಂಗಳೂರು ಮೂಲದ ಆಸಾಮಿಗೆ ನನ್ನನ್ನ ಮಾರಿಹಾಕಿದ. ನಾನೀಗ ಸಿಟಿ ಸಮೀಪಿಸಿದ್ದೇನಂತೆ.. ಅಲ್ಲಲ್ಲ, ಸಿಟಿ ನನ್ನನ್ನ ಸಮೀಪಿಸಿದೆಯಂತೆ. ಹಾಗಾಗಿ ನನ್ನ ರೇಟು ಈಗ ಬರೋಬ್ಬರಿ 75 ಲಕ್ಷ ಎಕರೆಗೆ.. ದೇವರಾಜ ಮಾರ್ಕೆಟ್ಟಿನ ಮುಂದೆ ಬಾಳೆಹಣ್ಣು ಅಂಗಡಿ ಹಾಕಿಕೊಂಡಿರೋ ಸಿದ್ದಲಿಂಗೇಶ, 25 ವರ್ಷದ ಹಿಂದೆ ಎಕರೆಗೆ ಒಂದು ಲಕ್ಷಕ್ಕೆ ಮಾರಿಬಿಟ್ಟ ಕಥೆಯನ್ನ ಎಲ್ಲರೊಂದಿಗೂ ಹೇಳಿಕೊಂಡು ಓಡಾಡುತ್ತಾನೆ. ಹ್ಞಾ ಈಗ ಕೊಂಡ ಸಾಕುಕಾರ, ನನ್ನನ್ನ ಕುಯ್ದು ಕುಯ್ದು ತುಂಡು ಮಾಡಿ , ಸೈಟು ಹಂಚುತ್ತಾನಂತೆ.ಸದ್ಯ ನಾನು ಅಂದರೆ ಸರ್ವೆ ನಂಬರ್ 94/1 ಆ ಸಾಹುಕಾರನಿಗೆ ಸೇರಿದ್ದೇನೆ. ಆಗಾಗ ಅವನ ಮಗ ತನ್ನ ಪೋಲಿಸ್ನೇಹಿತರೊಡನೆ ಬಂದು ರಾತ್ರೋರಾತ್ರಿ ಬೀಡುಬಿಡುತ್ತಾನೆ. ಕುಡಿಯುತ್ತಾರೆ ಕುಣಿಯುತ್ತಾರೆ. ಮೋಜು ಮಾಡುತ್ತಾರೆ. ಬಿತ್ತಿ ಬೆಳೆಯುತ್ತಿದ್ದ ನನ್ನ ಮೈ ಮೇಲೆ ಹೆಂಡ ಸುರಿಯುತ್ತಾರೆ. ಹಿಂಸೆಯಾಗುತ್ತದೆ. ಇನ್ನು ನಾಳೆಯಾದರೆ ನನ್ನ ಮೈಮೆಲೆ ಎಷ್ಟು ದೇವರಕೋಣೆಗಳೋ ಅಷ್ಟೇ ಕಕ್ಕಸುಗಳು. ಗೊಬ್ಬರವಾಗದವು.
ಸಿದ್ದಲಿಂಗೇಶನ ಮಗ ಈಗ ಬ್ರೋಕರು.ತನ್ನ ಅತ್ತೆಯ ಮಕ್ಕಳಿಗೆ ನಮ್ಮ ತಾತನದೇ ಜಮೀನು ಕಣ್ರಯ್ಯಾ.. ಒಂದೊಂದ್ ಸೈಟ್ ಆದ್ರೂ ತಗಳಿ. ನನಗ್ ಗೊತ್ತಿರೋರೇ ಲೇ ಔಟ್ ಮಾಡ್ತಿರದು ಅನ್ನುತ್ತಾನೆ. ರಾತ್ರಿ ಕಂಪ್ಯೂಟರ ಮುಂದೆ ಕೂರುವ ಮಂಜುಳೆಯ ಎರಡನೆ ಮಗನಿಗೆ ಯಾಕೋ ಸಾಫ್ಟ್ವೇರ್ ಕೆಲಸ ಬೇಸರ ಹುಟ್ಟಿಸಿದೆ. ಜಮೀನು ಕೊಳ್ಳಬೇಕು ಕೃಷಿ ಮಾಡಬೇಕು ಅಂತ ಆಸೆ ಹುಟ್ಟಿದೆ.
ಏ ಹುಡುಗಾ.. ಬಾರೋ.. ನಾನು ಕಣೋ ಸರ್ವೆ ನಂಬರ್ 94/1 . ನಿನ್ನ ವಂಶದವರು ಉತ್ತು ಉಂಡ ಭೂಮಿ. ಮುಂದಲ ನಿಮಗೇ ನಾನು ಸೇರಲೆಂದು ನಿನ್ನ ಮುತ್ತಜ್ಜಿ, ಅಜ್ಜಿ ತಾತಂದರು ಏನೆಲ್ಲ ತ್ಯಾಗ ಮಾಡಿದ್ದಾರೆ/ ನನಗೂ ನಿನಗೂ ಪರಂಪರೆಯ ಒಂದು ನಂಟಿದೆ. ಬಾರೋ ಹುಡುಗ, ಹ್ಞಾ ನಿನ್ನ ಯೋಚನೆ ಸರಿಯಿದೆ. ಕಂಪ್ಯೂಟರ್ ತಿನ್ನಲಾಗುವುದಿಲ್ಲ, ಅನ್ನವೇ ಪ್ರಾಣ. ನನ್ನ ಎದೆ ಮೇಲೆ ಕಲ್ಲು ಹೇರಿ ಅಂತಸ್ತುಗಳ ಕಟ್ಟುವ ಮುನ್ನ ಕಾಪಾಡೋ .. ಪ್ರೋಗ್ರಾಮು ತುಂಬಿಸಿದ್ದು ಸಾಕು. ನೀನು ಬಿತ್ತು ಬಾರೋ ಹುಡುಗಾ.. ನಾನು ಬೆಳೆಯುತ್ತೇನೆ. ಹಸಿದ ಹೊಟ್ಟೆಗಳಿಗೆ ಪ್ರಾಣ ತುಂಬೋಣ…
ನನ್ನ ಕೂಗು ಆ ಹುಡುಗನಿಗೆ ಕೇಳುತ್ತದೆಯಾ? ಹೋಗಲಿ , ನಿಮಗೆ ಕೇಳುತ್ತಿದೆಯಾ????
ಕುಸುಮಬಾಲೆ ಕಾಲಂ : ನನ್ನ ಕೂಗು ಆ ಹುಡುಗನಿಗೆ ಕೇಳುತ್ತದೆಯಾ?
ನಿಮಗೆ ಇವೂ ಇಷ್ಟವಾಗಬಹುದು…

ಕೂಗು-ಗೋ, ಹೋಗು-ನಗರದ ಭೂಮಿಯ ಪುಣ್ಯವೋ ಪುಣ್ಯ-ದುಡ್ಡಿನ ಬೆಳೆ ಬಿತ್ತಬಹುದಾದರೆ ‘ಭುಮಿತಾಯಿ ಬದುಕಿಗೆ ಆಸರೆ ಆಗಲಿಲ್ಲ’ ಅನ್ನುವದೇಕೋ? ಕೃಷಿಯಲ್ಲಿ ಖುಷಿ ಪಡಬೇಕೆಂದರೆ ಎಲ್ಲಾ ಬಿಟ್ಟ ಋಷಿಗೆ ಮಾತ್ರ ಸಾಧ್ಯವೇನೋ…ನಳನಳಿಸುವ ಲೇಖನ.
-Anil
ಇಷ್ಟವಾಯಿತು….
“ಯಾರಾದರೂ ಎಲ್ಲಾದರೂ ಬೋರು ಕೊರೆಸಿದ್ದರೆ ನೀರುಕ್ಕುತ್ತಿತ್ತೇನೋ. ಯಾಕಂದರೆ ಸರೋಜಿ ಸಾವಿಗೆ ನಾನೂ ಒಳಗೇ ಅಳುತ್ತಿದ್ದೆ…..!!”
ತುಂಬ ಇಷ್ಟವಾದ ಸಾಲುಗಳು.
ಇದು ಒಂದು ಜಮೀನಿನ ಆತ್ಮಕಥೆ ಎಂದೇ ಹೇಳಬಹುದು… ಈಗ ಎಲ್ಲಾ ಊರುಗಳ ಕಥೆ ಹೀಗೇ ಆಗಿದೆ, ಜಮೀನಿಗೆ ಬೆಲೆ ಹೆಚ್ಚಾಗಿದೆ ಹಣ ಬರುತ್ತದೆ ಎಂಬ ಆಸೆಗೆ ಮಾರುವ ಹುಚ್ಚು ಹೆಚ್ಚಾಗಿದೆ. ಏನೋ ಒಂದು ರೀತಿ ಸಂಕಟ ಆ ಭೂಮಿತಾಯಿಯೂ ಹೀಗೆ ನೊಂದುಕೊಂಡಿರಬಹುದಲ್ಲಾ ಎಂದೆನಿಸುತ್ತೆ
ಇಂಥಹ ಇಕ್ಕಟ್ಟುಗಳಲ್ಲೇ ಸಿಲುಕಿ ನರಳುತ್ತಿರುವ ನನಗೆ ನಿಮ್ಮ ಲೇಖನ ಓದಿ ಕಣ್ಣೀರು ಬಂದಿತು.ದಾಯಾದಿ ಕಲಹಗಳೇ ಇವಕ್ಕೆಲ್ಲಾ ಮೂಲ ಕಾರಣ. ಮುತ್ತಾತ ,ತಾತ, ಅಪ್ಪ, ನಾವು ,ಮಕ್ಕಳು,ಮೊಮ್ಮಕ್ಕಳು… ಹೀಗೆ ಸರ್ವೆ ನಂ.ಹೆಸರಿಟ್ಟುಕೊಂಡು ಸದಾ ಭೂಮಿಯನ್ನು ಶೋಷಣೆ ಮಾಡುತ್ತಲೇ ಇರುತ್ತೇವೆ.ಬದಲಾಗುವುದು ನಾವೇ ವಿನಃ ಭೂಮಿಯಲ್ಲ. ಉತ್ತಮ ಲೇಖನ ನೀಡಿದ್ದಕ್ಕೆ ಅಭಿನಂದನೆಗಳು.
Tumba chenaagide Kusum,
ಈಗಿನ ಕೋಟಿವೆಚ್ಚದ ಭೂಮಿ ಕೊಳ್ಳಲಾಗದೆ ಹತಾಶೆಗೆ ಸಿಲುಕಬೇಕಾದ ಅವನಿಗೆ ಅದು ಯಾಕೆ ಕೇಳಬೇಕು ಅಂತ ಅನ್ನಿಸ್ತಾ ಇದ್ದರೂ ಅದು ಅವನಿಗೆ ಕೇಳಬೇಕು ಅದೇ ಸರಿ ಅನ್ನಿಸ್ತದೆ ನಂಗೂ…
ಅರಿವು ಹುಟ್ಟಿಸುವ,ನಿಮ್ಮ ಬರಹ ತುಂಬಾ ಪರಿಪೂರ್ಣ.
aadashtu bega bhoomiya koogu saakashtu computer kivigaLige keLisali..bennu beeLuva munna..bhoomi baraDaaguva munna.
ಅವತ್ತು ಯಾರಾದರೂ ಎಲ್ಲಾದರೂ ಬೋರು ಕೊರೆಸಿದ್ದರೆ ನೀರುಕ್ಕುತ್ತಿತ್ತೇನೋ. ಯಾಕಂದರೆ ಸರೋಜಿ ಸಾವಿಗೆ ನಾನೂ ಒಳಗೇ ಅಳುತ್ತಿದ್ದೆ.
ನಮ್ ಕಿವಿಗಂತೂ ಗಂಟೆ ಹೊಡೆದಂಗೆ ಕೇಳಿಸ್ತು ಸರ್ವೇ ನಂಬರ್…94/1
ತುಂಬ ಧನ್ಯವಾದ ಓದಿದ ಪ್ರತಿಕ್ರಿಯಿಸಿದ ಎಲ್ಲರಿಗೂ.