ನಿಲ್ಸಿ ನಿಲ್ಸಿ ನಿಲ್ಸಿ..ಕೂಗಿದೆ. ಇಳಿಬೇಕಾದ ಜಾಗದಿಂದ ಹೆಚ್ಚು ಕಡಿಮೆ ಒಂದು ಕಿಲೋಮೀಟರ್ ಮುಂದಕ್ಕೆ ಹೋಗಿಯಾಗಿತ್ತು. “ಹೇಳಬಾರದಾ ಮೆಡಂ, ಹೋಗ್ಲಿ ಬನ್ನಿ” ಅಂತ ಯೂಟರ್ನ್ ಮಾಡಿದ.ಆಟೋದವ. ರಸ್ತೆ ಕಡೆ ಗಮನವಿದ್ದರೆ ತಾನೇ? ಮಾತಾಡ್ತಾ ಮಾತಾಡ್ತಾ ಕಥೆಯೊಳಗೆ, ಕಥೆಯೊಳಗಿನ ವ್ಯಥೆಯೊಳಗಿ ಮುಳುಗಿಹೋಗಿದ್ದೆ.
ಮೋಟಾರು ವಾಹನ ಜಗತ್ತಿನ ಅತ್ಯುತ್ತಮ ಕೊಡುಗೆ ಅದರೆ, ಅದು ನನ್ನ ಪ್ರಕಾರ ಆಟೋನೇ. ಅದರಲ್ಲೂ ನಗರದ ಮಧ್ಯಮವರ್ಗದವರಿಗೆ. ನಾನು ಬೆಂಗಳೂರಿಗೆ ಬಂದ ಇಷ್ಟು ವರ್ಷಗಳಲ್ಲಿ ಬೇಜಾನ್ ಜಗಳ ಆಡಿರೋದು ಆಟೋದವರ ಜೊತೆಗೇ. ಮತ್ತು ಅದು ಈಗಲೂ ಜಾರಿಯಲ್ಲಿದೆ. ಜಗಳದ ಜೊತೆ ಎಷ್ಟೊಂದು ಕಥೆಗಳು ಸಿಕ್ಕಿವೆ.ಅವುಗಳಲಿ ಕೆಲವನ್ನು ಹೇಳುತ್ತೇನೆ. ಬೆಂಗಳೂರಿಗೆ ಬಂದು ಸೇರಿಕೊಂಡಿರೋ ನ್ಮಮ ಹಳ್ಳಿಗಾಡಿನ ಜನ, ನಾಕು ಸಾಲು ಮಾತಾಡಿದರೆ ಸಾಕು , ಅವರು ಯಾವ ಸೀಮೆಯವರು? ಅಂತ ನನಗೆ ಗೊತ್ತಾಗಿಬಿಡುತ್ತದೆ. (ಕೆಲವೇ ಕೆಲವರು ಅಪವಾದವಿರಬಹುದು) ಅದರಲ್ಲೂ ನಮ್ಮ ಹಳೆ ಮೈಸೂರು ಭಾಗದವರಾದರಂತು ಬಾಯಿಬಿಟ್ರೆ ಬಣ್ಣಗೇಡು. ಹಾಗೆ ಅನಿಸಿದ ತಕ್ಷಣ ಕೇಳುವ ಮೊದಲ ಪ್ರಶ್ನೆ ಯಾವೂರು? ಆಮೇಲಿನದು ಕತೆ.
ಹಾಗೆ ಸಿಕ್ಕಿದವರಲ್ಲಿ ಶಿವು ಕೂಡ ಒಬ್ಬರು ಮಹದೇಶ್ವರ ಬೆಟ್ಟದ ಹತ್ತಿರದ “ಹುಲಿಧಾಮ”ದ ಬಳಿ ಇವರ ಊರು. ಜಮೀನೇನೋ ಬೇಕಾದಷ್ಟಿದೆ. ಶಿವುಗೆ ಬಿತ್ತೋ ಬೆಳೆಯೋ ಆಸೆ. ಊರಲ್ಲಿ ಮನೆಕಟ್ಟೋ ಆಸೆ. ಅದಕ್ಕಾಗಿ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಮಳೆ ಆಶ್ರಯದಲ್ಲಿ ಬೆಳೆದು ಉಧ್ದಾರ ಆಗೋಕಾಗಲ್ಲ ಅಂತ ಅವರು ಒಂದಲ್ಲ ಎಂಟು ಬೋರ ತೆಗೆಸಿದರಂತೆ. ಒಂದು ಬೋರ್ ಫೇಲಾದರೇನೇ ಸುಧಾರಿಸಿಕೊಳ್ಳೋದು ಕಷ್ಟ ಇನ್ನು, ಒಂದರ ಮೇಲೊಂದರಂತೆ ಎಂಟು ಬೋರ್ಗಳು. ಕೊರೆದವನು ಎಂಟೆದೆ ಬಂಟ. ಎಂಟೆಂಟು ಬೋರ್ ಪೇಲಾದರೆ ತಡೆದುಕೊಳ್ಳೋದು ಮಹಾಕಷ್ಟ. ಅಂತ ಮಹಾಕಷ್ಟವೇ ಬಂದದ್ದು ಶಿವುಗೆ.ಒಂದೇ ಒಂದಿಂಚು ನೀರು ಕಂಡರೆ ಸಾಕು ಅತ ಕಾದು, ನೋಡೇ ಬಿಡೋಣ ಅಂತ ಭಂಡ ಧೈರ್ಯದಲಿ ಸಾಲ ಮಾಡಿ, ಶೂಲ ಕುತ್ತಿಗೆಗೆ ತಂದುಕೊಂಡಿದ್ದರು.
ಹೆಂಡತಿ ಮಕ್ಕಳನ್ನು ಅಪ್ಪ, ಅಮ್ಮನ ಹತ್ತಿರ ಬಿಟ್ಟು ಶಿವು ಎಲ್ಲಿ ಹೋಗುತ್ತಿದ್ದೇನ, ಯಾಕೆ ಹೋಗುತ್ತಿದ್ದೇನೆ ಅನ್ನುವ ಅರಿವೇ ಇಲ್ಲದೆ, ಬೆಂಗಳೂರಿಗೆ ಬಂದಿಳಿದಿದ್ದರು. ಹೆಚ್ಚು ಕಮ್ಮಿ ಜೋಗಿ ಸಿನೆಮಾದ ಜೋಗಿ ಹಾಗೆ. ಎಲ್ಲೋ ರಾತ್ರಿ ಕಳೆದು , ಹೇಗೋ ಇದ್ದು, ಕಡೆಗೆ ಯಾರದೋ ಸಹಾಯದಿಂದ ಡ್ರೈವರ್ ಆದರು. ಹೆಂಡತಿ ಮಕ್ಕಳನೂ ಕರೆಸಿಕೊಂಡರು. ಈಗ ಮಕ್ಕಳು ಇಲ್ಲೆ ಸ್ಕೂಲಿಗೆ ಸೇರಿವೆ. “ಏನಾಗಬೇಕಿದ್ದವನು , ಏನಾಗಿಹೋಗಿದ್ದೇನೆ ಗೊತ್ತಾ?” ಅನ್ನುವ ಭಾವ ಅವರ ಮಾತಿನಲ್ಲಿ ಪದೇ ಪದೇ ಇಣುಕುತ್ತದೆ.
ಹೆಸರು ಮರೆತೆ. ನರಸೀಪುರ ಪಕ್ಕದ ಗೆಜ್ಜಗಳ್ಳಿ ಊರಿನವರು. ಬೆಂಗಳೂರಿಗೆ ಬಂದು ಆಟೋ ಓಡಿಸಲು ಶುರು ಮಾಡಿ ಇಪ್ಪತ್ತು ವರ್ಷಗಳೇ ಆಗಿವೆ. ಊರಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದರಂತೆ. ರೇಷ್ಮೆ ಬೆಳೆ ಆಗ ಈಗಿನಷ್ಟು ವೈಜ್ಞಾನಿಕವಾಗಿರಲಿಲ್ಲ. ಅವರ ಭಾವ ಒಬ್ಬರು ಇಲ್ಲಿದ್ದರಂತೆ ರೈಲ್ವೆ ಇಲಾಖೆಯಲ್ಲಿ. ಬಾಮೈದುನನನ್ನ ಕರಕೊಂಡು ಬಂದರು. ಆಟೋ ಹತ್ತಿಸದರು. ಮದುವೆಯಾಯಿತು. ಮಕ್ಕಳಾಯಿತು. ಊರಿಗೆ ಹೋದರೆ, ಜಮೀನಿನಲ್ಲಿ ದಿನಕ್ಕೆ, ತಿಂಗಳಿಗೆ ಈ ಆಟೋದಷ್ಟು ಸಂಪಾದನೆ ಸಿಕ್ಕೀತೇ? ಯೋಚಿಸಿದರು. ಈಗ ಇವರ ಇಬ್ಬರು ಹೆಣ್ಣುಮಕ್ಕಳು ಬೆಂಗಳೂರಲ್ಲಿ ಡಿಗ್ರಿ ಓದ್ತಿದಾರಂತೆ. ಇಷ್ಟಕ್ಕೆ ಮುಗಿಯಲಿಲ್ಲ, ಇವರ ಬಾವ ಇವರನ್ನು ಕರೆತಂದಂತೆ, ಇವರು ಇನ್ಯಾರನ್ನೋ ಕರೆತಂದು, ಆಶ್ರಯ ಕೊಟ್ಟು, ಅವರು ಇನ್ಯಾರನ್ನೋ, ಹೀಗೇ ಚೈನ್ ಲಿಂಕ್ ಬೆಳೆದು ಒಟ್ಟು 22 ಕುಟುಂಬಗಳು ಇವೆಯಂತೆ. ಮತ್ತು ಬಹುತೇಕರು ಆಟೋ ವೃತ್ತಿಯವರು. “ಆಟೋ ಸಂಘದ ಎಲೆಕ್ಷನ್ ನಡೆದ್ರೆ, ನಿಮ್ಮನೆ ಓಟು ಬಿದ್ದೋರೇ ಗೆಲ್ತಾರೆ ಹಾಗಾದ್ರೆ” ಅತ ರೇಗಿಸಿದೆ. ಈ 22 ಕುಟುಂಬಗಳು ಇನ್ನು ಬೆಂಗಳೂರಿಗರು.
ಜಿ, ಎನ್, ನಾಗರಾಜ್ ಸರ್ ಮನೆ ಆ ತುದಿ. ನಮ್ಮನೆ ಈ ತುದಿ. ಎರಡೆರಡು ಬಸ್ಸತ್ತಿ ಇಳಿದು ಹೋಗಬೇಕಲ್ಲಪ್ಪಾ , ಅಂದುಕೊಳ್ಳುವಾಗ ಟಾಟಾ ಸುಮೋ ಒಂದು ಬಂತು. ಮಲ್ಲೇಶ್ವರಂವರೆಗೂ ಹೋಗ್ತೀನಿ ಅಂದ ಹುಡುಗ, ಹತ್ತಿ ಕೂತೆ. ಮತ್ತೆ ಕೇಳಿದೆ. ಯಾವೂರು? ಹೆಸರು ರಾಜು. ತುಮಕೂರಿನ ಪಕ್ಕದ ಹಳ್ಳಿಯವನು. ತುಮಕೂರು ಪಕ್ಕದಲ್ಲಿ ತೀರಾ ಇತ್ತೀಚೆಗೆ ಪ್ರಧಾನಿ ಮೋದಿ ಅವರು ಉದ್ಘಾಟಿಸಿದ ಆಹಾರ ಸಂಸ್ಕರಣಾ ಘಟಕವೂ ಸೇರಿದಂತೆ ಹಲವು ದೊಡ್ಡ ಯೋಜನೆಗಳು ಜಾರಿಯಾಗಿವೆ. ಮತ್ತು ಅವು ನೂರಾರು ಎಕರೆ ಜಮೀನುಗಳ ಮೇಲೆ ನಿರ್ಮಿತವಾಗಿವೆ. ಆ ಯೋಜನೆಗಾಗಿ ಜಮೀನು ಕಳಕೊಂಡವರಲಿ ರಾಜು ಕುಟುಂಬದ ಜಮೀನೂ ಇದೆ. “ ಜಮೀನು ಕೊಡಿ ಉಧ್ದಾರ ಮಾಡ್ತೀವಿ” ಅಂತ ಯಾರೋ ಕೇಳಿದಾಕ್ಷಣ ಇವರೇನೂ ಕೊಟ್ಟಿಲ್ಲ. ಹಠ ಮಾಡಿದ್ದಾರೆ. ನಿರಾಕರಿಸಿದ್ದಾರೆ. ಆದರೆ “ದೊಡ್ಡವರು” ಬಿಟ್ಟಿಲ್ಲ. ಧಾರ್ಮಿಕ ಮುಖಂಡರಿಂದ ಹೇಳಿಸಿದ್ದಾರೆ. ರಾಜಕೀಯ ಆಶ್ವಾಸನೆಗಳ ಕೊಟ್ಟಿದ್ದಾರೆ. ಎಕರೆಗಿಷ್ಟು ದುಡ್ಡು. ಮತ್ತು ನಮ್ಮ ಘಟಕಗಳಲ್ಲಿ ಉದ್ಯೋಗ ಅಂತ ಭರವಸೆ ಕೊಟ್ಟಿದ್ದಾರೆ.

ಜಮೀನು ಅವರ ಕೈ ಸೇರಿದ್ದಾಯಿತು. ಆಡಿದ ಮಾತಿನಂತೆ ಕೆಲಸ ಕೂಡ ಕೊಟ್ಟರು. ಆದರೆ ಹುಡುಗರ್ಯಾರೂ ಕೆಲ್ಸ ಮಾಡದೆ ಬಿಟ್ಟು ಬರೋಕೆ ಶುರು ಮಾಡಿದರು. ಟೈಲ್ಸ್ ಎತ್ತಿ ಹಾಕುವುದು, ಮತ್ತೇನೋ ಮಾಡುವುದು. ಇಂತಹ ಕೆಲಸ. ಸಂಬಳ ಐದರಿಂದ ಆರು ಸಾವಿರ. ಕೇಳಿದರೆ, ಇಲ್ಲಿ ನಿಮಗೆ ಕೊಡಲಿಕ್ಕಾಗುವುದು ಇಂತ ಕೆಲಸ ಮಾತ್ರವೇ ಅನ್ನುತ್ತಾರೆ. ಸಂಬಳ? ಈ ಕೆಲಸಕ್ಕೆ ಇಷ್ಟೇ ಕೊಡಲಿಕ್ಕಾಗುವುದು. ಜೋರು ಮಾಡುವಂತಿಲ್ಲ ಜಮೀನು ಕಾಲಡಿಯಲ್ಲಿ ಸಿಮೆಂಟು ಹೊದ್ದು ಮಲಗಿ ಆಗಿದೆ. ಒತ್ತಡ ಹೇರಿದವರ ಬೆನ್ನ ಹಿಂದೆ ಅಲೆದರೆ, ಒಂದು ಸಾವಿರ ಸಂಬಳ ಏರಿಸಿಯಾರು. “ಆ ಒಂದು ಸಾವಿರ ಹೆಚ್ಚಾದರೇನು ಬಿಟ್ಟರೇನು ಅಲ್ವಾ?:” ರಾಜು ಕೇಳಿದ. “ ಅದ್ಕೇ ಹುಡುಗ್ರೆಲ್ಲ ಆ ಕೆಲ್ಸ ಬಿಟ್ಟು, ಒಂದೊಂದ್ ಗಾಡಿ ಆಕಂಡಿದೀವಿ, ಸಾಫ್ಟ್ ವೇರ್ ಕಂಪನಿಗಳಿಗೆ ಪಿಕ್ ಅಪ್ ಡ್ರಾಪ್ ಮಾಡ್ತೀವಿ.. ಆ ಕೆಲ್ಸದ್ ತ್ರಿಬ್ಬಲ್ ಬತ್ತದೆ” ಅಂದ.
ನೂರ ಹದಿನೈದು ವರ್ಷದ ತಾತ ಒಬ್ಬರಿದ್ದಾರೆ ನ್ಮಮೂರಲ್ಲಿ. ಅವರು ಹೇಳುತ್ತಾರೆ ಮೈಸೂರಲ್ಲಿ ಕೆಆರ್ ಎಸ್ ಡ್ಯಾಮ್ ಕಟ್ಟುವಾಗ “ಚಿಕ್ಕ ಹುಡುಗರನ್ನೆಲ್ಲ ಹಿಡ್ಕಂಡ್ ಓಯ್ತಾರೆ. ಡ್ಯಾಮ್ಗೆ ಬಲಿಕೊಡಬೇಕು” ಅಂತ ಹೆದರಿಸ್ತಿದ್ರಂತೆ. ಯಾಕೋ ರಾಜು ಹೇಳಿದ ಕತೆ ತಕ್ಷಣ ತಾತನ ಮಾತು ನೆನಪಿಸಿತು. ಅಭಿವೃಧ್ದಿಗೆ ಏನಾದರೂ ಬಲಿ ಬೇಕೇ ಬೇಕು. ಹಾಗೆಂದು ಅಭಿವೃಧ್ದಿಯಾಗಲೇಬಾರದೇನು? ಲೋಕಲ್ ಟ್ರೇನುಗಳೂ, ಫ್ಲೈಓವರ್ ಗಳೂ ಇಲ್ಲದಿದ್ದರೆ ದೊಡ್ಡ ನಗರಗಳ ಸಂಚಾರ ಕಲ್ಪಿಸಿಕೊಳ್ಳಲೂ ಆಗದಷ್ಟು ಭಯಾನಕವಾಗುತ್ತಿತ್ತು. ಕಿರಿದಾದ ರಸ್ತೆಯಲಿ ಆಕ್ಸಿಡೆಂಟಿಗೆ ಜನ ಬಲಿಯಾಗದಿರಲೆಂದು ರಸ್ತೆ ಅಗಲೀಕರಿಸುವಾಗ ಪೆಟ್ಟಿ ಅಂಗಡಿಯೊಂದು ಬಲಿಯಾಗಲೇಬೇಕು.ಒಂದು ಬೇಕೆಂದರೆ ಮತ್ತೊಂದು ಕಳೆದುಕೊಳ್ಳುವುದು ಅನಿವಾರ್ಯ ಒಪ್ಪೋಣ. ಆದರೆ ಕಳೆದುಕೊಂಡವರ ನೋವು ದೊಡ್ಡದು. ಮತ್ತು ಅದು ಕೇವಲ ವ್ಯಾಪಾರವಲ್ಲ ವ್ಯವಹಾರವಲ್ಲ, ಕಳೆದುಕೊಂಡದ್ದು ಬದುಕು. ಅದಕ್ಕೆ ಸರಿಯಾದ ಬೆಲೆಯನ್ನೇ ತೆರಬೇಕು. ಹೀಗೆ ಜಮೀನು ಕಿತ್ತುಕೊಂಡು ಅವರ ಬದುಕನ್ನು ಬೀದಿಗೆ ನೂಕಿಬಿಟ್ಟರೆ ಅದು “ಬಲಿ” . ಹೀಗೆ ಬಲಿಯಾದ ತುಮಕೂರಿನ ರೈತಾಪಿ ಹುಡುಗರು. ಬೆಂಗಳೂರಿನ ಸಾಫ್ಟ್ವೇರ್ ಜನರ ಡ್ರೈವರ್ ಗಳಾಗಿಹೋಗಿದ್ದಾರೆ. ಗಾಡಿ ಹೊಡೆಯಬೇಕಿದ್ದ ಕೈಗಳು ಯೂನಿಫಾಮ್ ಹಾಕಿ ಸ್ಟೇರಿಂಗ್ ತಿರುಗಿಸುತ್ತಿವೆ. ಬದುಕ ಚಕ್ರಕ್ಕಾಗಿ , ಆ ಚಕ್ರ ಬಿಟ್ಟು ಈ ಚಕ್ರದೊಂದಿಗೆ .
ಜೆ.ಪಿ ನಗರದ ಆಟೋ ಸ್ಟಾಂಡಿನಲಿ ಸುಮಾರು ಇಪ್ಪತ್ತು ಆಟೋಗಳಿವೆ. ಎಲ್ಲ ತಗಡೂರು, ದೇವನೂರು ಸುತ್ತಮುತ್ತಲ ಹುಡುಗರೇ. ಆಟೋದಲ್ಲೆ ವಾರಕ್ಕೋ ಹದಿನೈದು ದಿನಕ್ಕೋ ಒಟ್ಟಿಗೇ ಊರಿಗೂ ಹೋಗುತ್ತಾರಂತೆ. “ಇಷ್ಟೋಂದ್ ಜನ ಯಾಕ್ ಬಂದಿದೀರಿ ಇಲ್ ಆಟೋ ಓಡಿಸೋಕೆ? ಊರಲ್ಲಿ ಜಮೀನು ಗಿಮೀನು ಇಲ್ವಾ? “ ಅಂತ ಕೇಳಿದರೆ. “ಏನಿದೆ ಅಲ್ಲಿ? ಬರಗಾಡು. ಏನೂ ಬೆಳಿಯೋಕಾಗಲ್ಲ.” ಅನ್ನುತ್ತಾರೆ. ಮತ್ತು ಇವತ್ತಿನ ದಿನಕ್ಕೆ ಬೆಂಗಳೂರಲ್ಲಿ ಆಟೋ ಓಡಿಸಿದರೆ ಸಿಗುವ ಹಣಕ್ಕೂ ಅಲ್ಲಿ ಜಮೀನಲ್ಲಿ ಸಿಗಬಹುದಾದ ಸಂಪಾದನೆಗೂ ಹೋಲಿಕೆ ಮಾಡಿಕೊಂಡರೆ. ಇದೇ ಸರಿ ಅನಿಸುತ್ತದೆ. ಈ ಇಪ್ಪತ್ತು ನಲವತ್ತಾಗಿ, ನಲವತ್ತು ಎಂಬತ್ತಾಗಿ. ಕುಟುಂಬಳಾಗಿ, ಮಕ್ಕಳಾಗಿ. ಅಲ್ಲಿಗೆ…
ಡ್ರೈವರುಗಳು ಮಾತ್ರವಲ್ಲ, ಸೆಕ್ಯೂರಿಟಿಗಳು. ಬಂಕ್ ಹುಡುಗರು. ಶೂಟಿಂಗ್ ಸೆಟ್ನ ಹುಡುಗರು. ದೊಡ್ಡ ಮಾಲ್ಗಳಲಿ ಕೆಲಸ ಮಾಡೋರು ಎಷ್ಟೊಂದು ಜನ. ರೈತರ ಮಕ್ಕಳೇ ರೈತರಾಗಬೇಕಿಲ್ಲ. ಯಾರ್ಯಾರಿಗೆ ಯಾವುದಿಷ್ಟವೋ ಅದಾಗುತ್ತಾರೆ. ಆಗಲಿ. ರೈತನ ಮಗ ಸಿನೆಮಾ ಹೀರೋ ಆಗಲಿ, ವಿಜ್ಞಾನಿಯಾಗಲಿ, ಯಾವುದಾರೂ ದೊಡ್ಡ ಕೆಲಸ ಮಾಡಲಿ ಹೆಮ್ಮೆಯಾಗುತ್ತದೆ. ಅದು ಬಿಟ್ಟು, ಕ್ವಿಂಟಾಲುಗಟ್ಟಲೆ ಬೆಳೆದು ಮೂಟೆ ಉರುಳಿಸಬೇಕಾದ ಹುಡುಗ, ಯಾವುದೋ ಮಾಲ್ನಲ್ಲಿ ಪೊಟ್ಟಣ ಕಟ್ಟುತ್ತಿದ್ದರೆ ಕರುಳು ಹಿಂಡಿದಂತಾಗುತ್ತದೆ.
ಯಾವ ಕೆಲಸವಾದರೇನು ಎಲ್ಲ ಕೆಲಸಕ್ಕೂ ಅದರದೇ ಆದ ಗೌರವವಿದೆ” ಅನ್ನೋ ಮಾತೆಲ್ಲ ಪಕ್ಕಕ್ಕಿರಲಿ. ಇದೆಲ್ಲ ಹೇಳೋಕೆ ಕೆಳೋಕಷ್ಟ ಚೆಂದ. ಯಾರೋ ಪುಣ್ಯಾತ್ನರೊಂದಷ್ಟು ಜನ ಪಾಲಿಸಿಯಾರು. ಉಳಿದಂತೆ, “ತಲೆಮೇಲಿನ ಹೆಡಿಗೆ ನೋಡಿ ಕಾಲಿಗೆ ನೀರು ಕೊಡೋ ಜನವೇ ತುಂಬಿಕೊಂಡಿದೆ ಇಲ್ಲಿ. ಅಷ್ಟಕ್ಕೂ ಇದು ಬಯಸಿಯೇನೂ ಬಂದ ಕೆಲಸವಲ್ಲವಲ್ಲ? ಅನಿವಾರ್ಯತೆಯಿಂದ ಮಾಡುತ್ತಿರುವುದು. ಹಾಗಾಗಿ ಇಲ್ಲಿ “ನನ್ನ ಕೆಲಸ ನನ್ನ ಇಷ್ಟ. ನನ್ನ ಹೆಮ್ಮೆ”ಅನ್ನುವ ಸ್ಲೋಗನ್ನಿಗೆ ಜಾಗವೇ ಇಲ್ಲ.
ಇದನ್ನು ಬರೆಯುತ್ತಾ ಶಿವುಗೆ ಫೋನು ಮಾಡಿದೆ. ಜಮೀನು ಮಾರಿಬಿಡೋಣ ಅಂತಿದೀನಿ ಮೇಡಂ, ಮಕ್ಕಳಿಗಿಲ್ಲಿ ಸ್ಕೂಲು ಅಡ್ಜಸ್ಟ್ ಆಗಿದೆ.ಅಲ್ಲಿ ಒಳ್ಳೆ ಸ್ಕೂಲು ಬೇಕಂದ್ರೆ ಕೊಳ್ಳೆಗಾಲಕ್ಕೇ ಬರಬೇಕು. ಕಷ್ಟ ಮೆಡಂ” ಅಂದರು. ಎಂಟೆಂಟು ಬೋರುಕೊರೆಸಿದ ಎಂಟೆದೆಗೀಗ ಬೆಂಗಳೂರ ನಂಟು. “ಯಾಕೆ ಮಾರುತ್ತೀರಿ,? ಹಳ್ಳಿಯವರು ಹೋಗಿ ಹಳ್ಳಿ ಉಧ್ದಾರ ಮಾಡಬೆಕು” ಅಂತ ನಮ್ಮಪ್ಪರಾಣೆ ಹೇಳ್ಳಿಲ್ಲ ನಾನು.
ಮೇಲಿನ ಮೂರೂ ಕತೆಗಳಲ್ಲಿ ಗಮನಿಸಿ, ಒಮ್ಮೆ ಇಲ್ಲಿ ಬಂದವರು ವಾಪಾಸು ಹೋಗಲು ಒಲ್ಲದ ಮುಖ್ಯಕಾರಣಗಳೆಂದರೆ, ಒಂದು ಆದಾಯವಿಲ್ಲ. ಎರಡು ಒಳ್ಳೆಯ ವಿಧ್ಯಾಭ್ಯಾಸದ ಸೌಲಭ್ಯವಿಲ್ಲ. ಇವರೆಡೂ ಇದ್ದರೆ ಯಾರೂ ಊರುಬಿಟ್ಟು ಬರೊಲ್ಲ. ಇವರೆಡು ಸಮಸ್ಯೆ ಬಗೆಹರಿಸಿ ಅಂತ ಯಾರತ್ರ ಹೇಳೊಣ? ಎಲ್ಲಿ ಅರ್ಜಿ ಹಾಕೋಣ? ಯಾವ ಮುಖ್ಯ ರಸ್ತೆಯಲಿ ಉರುಳುಸೇವೆ ಮಾಡೋಣ?
ಒಂದಂತು ಸುಸ್ಪಷ್ಟ. ಇದು ಮನ್ವಂತದ ಕಾಲಘಟ್ಟ. ಇಲ್ಲಿ ಏನೂ ಆಗಬಹುದು. ನಮ್ಮ ಬೋಟಿನಲಿ ಹಗ್ಗವಿಲ್ಲ, ಬಲೆಯಿಲ್ಲ, ಬದುಕಬೇಕಿದೆ, ನಿಮ್ಮ ಹಡಗು ಹತ್ತುತ್ತಿತ್ತೇವೆ. ಹಡಗಿಗೂ ಮಿತಿಯುಂಟು, ಬದುಕಿದರೂ ಒಟ್ಟಿಗೇ, ಮುಳುಗಿದರೂ ಒಟ್ಟಿಗೇ. ನಿಮಗಾದ್ದೇ ನಮಗೂ ಆಗತ್ತೆ, ಆಗ್ಲಿ ಬಿಡಿ ಅತ್ಲಾಗೆ.
ರೈತರು, ಹಳ್ಳಿ, ಸಮಸ್ಯೆ ಅಂತ ಬರ್ದಿದ್ದೇ ಬರಿಯತ್ತಪ್ಪ ಈಯಮ್ಮ, ಮೊನೋಟನಿ . ಅನಿಸ್ತಿರಬಹುದೇನೋ ನಿಮಗೆ. ಏನು ಮಾಡಲಿ? ಎಷ್ಟು ಹೇಳಿದರೂ ತೀರದು. ಸರಕಾರಗಳಿಗೂ ಇದು ಮೊನೋಟನಿ ಅನಿಸಿರಬೇಕೇನೋ!! ಅದಕ್ಕೆ ಯಾರಿಗೂ ಆಸಕ್ತಿ ಇಲ್ಲ. ಈ ನಿರಾಸಕ್ತಿಯ, ನಿರಾಶಾದಾಯಕವಾದ ವಿಚಾರದ ಬಗ್ಗೆ ಆಸಕ್ತಿಯಿಂದ ಸಿನೆಮಾ ಮಾಡಿದರೆ ಅವಾರ್ಡು ಬರುತ್ತೆ. ಹೀಗೆ ಬರೆದರೆ, ಲೈಕು ಕಮೆಂಟು ಬರುತ್ತದೆ. ಬರಬೇಕಾದ್ದು ಬರೋದು ಯಾವಾಗ? ಈಗಂತು, ಹೇಳೋರೂ ಇಲ್ಲ ಕೇಳೋರೂ ಇಲ್ಲ. ಸದ್ದೂ, ಸ್ವರ ಒಂದೂ ಇಲ್ಲ. ರೈತರೂ, ರೈತಮುಖಂಡರೂ ರಾಜಕೀಯಕ್ಕಿಳಿದು, ಯಾರನ್ನೂ ನಂಬೋ ಸ್ಥಿತಿಯೇ ಇಲ್ಲ.
ಸಾರ್, ನಂಜುಂಡಸ್ವಾಮಿಯವರೆ, ಇಲ್ ಕೇಳಿ, ಅಷ್ಟೇನು ಅರ್ಜೆಂಟಿತ್ತು ಅಂತ ಹೋಗಿಬಿಟ್ಟಿರಿ ನೀವು?
ಕುಸುಮಬಾಲೆ ಕಾಲಂ : ನಂಜುಂಡಸ್ವಾಮಿಯವರೆ ಅಷ್ಟೇನು ಅರ್ಜೆಂಟಿತ್ತು ಅಂತ ಹೋಗಿಬಿಟ್ಟಿರಿ ನೀವು?
ನಿಮಗೆ ಇವೂ ಇಷ್ಟವಾಗಬಹುದು…

ಮನುಷ್ಯಕುಲದ ಅತ್ಯಂತ ದಾರುಣ ಸಮಸ್ಯೆ ನೋವು ಅಂದ್ರೆ ರೈತರದು. ಅದು ಬದುಕಿಡೀ ಈ ಮನ್ವಂತರದಿಂದ ಆ ಮನ್ವಂತರದವರೆಗೆ ಹರಿಯೋ ಸಮಸ್ಯೇ ನದಿ. ಯಾರ್ಗೆ ಹೇಳೋಣ. Fedup. ಸೋ ಬರಿತಿರ್ಬೇಕಷ್ಟೆ. ಭಯವಂತೂ ಆಗುತ್ತೆ. ಒಳ್ಳೆ ಬರಹ
ಎಲ್ಲಾ ಸರಿಗೆ ಇದ್ದಿದ್ದರೆ ನಾನೆಕೆ ತಂಗಿ ಮದುವೆಗೆ ಹೋಗಕ ಆಗಲಿಲ್ಲ ಅನ್ನೊ ನೋವು ಇನ್ನೂ ಜೀವನಪರ್ಯಂತಾ ಕಾಡತಿರಲಿಲ್ಲವೇನೊ.ಹುಂ ಬೆಂಗಳೂರಾಯಿತು ಇಗಾ ಖತಾರನಲ್ಲಿನ ಸ್ನೇಹಿತರು ಕೇಳತಾರೆ ಉತ್ತರಕರ್ನಾಟಕದ ಜನ ಗಲ್ಪಗೆ ಬರೊದ ಕಡಿಮೆ ಎಲ್ಲರು ದೊಡ್ಡ ಜಮೀನ್ದಾರು ಜಮೀನನಲ್ಲಿ ಕೆಲಸಾ ಮಾಡೊರು ಅಂತಾ ಕೇಳತಾರೆ.ಜಮೀನನಲ್ಲಿ ಕೂಲಿ ಕೆಲಸಾ ಮಾಡೋರು ಇರಲಿ ಸ್ವಾಮಿ ಎಲ್ಲೊ ಗಾರೆ ಕೆಲಸಾನೊ,ಮೇಡಂನವರು ಕಾಲಂನಲ್ಲಿ ಹೇಳಿರೊ ಹಾಗೆ ಆಟೋ ,ಟ್ರಾನ್ಸಪೊರ್ಟ,ಅದು ಇದು ಅಂತಾ ಇದಾರೆ.ಬಿಳಿ ಪಂಚೆ ಶರ್ಟ ಹಾಕೊಂಡು ಆಳು ಕೆಲಸಕ್ಕೆ ಬಂದಾರ ಇಲ್ಲ ಅಂತ ನೋಡೊ ಜಮಿನ್ದಾರರು ಬೆಳಿಗ್ಗೆ ಸಗಣಿ ತೆಗಿಯೋಕ ಆಗದೆ ಇರೊ ಎತ್ತು,ದನ ಕರು ಕಟುಕರಿಗೆ ಮಾರಿ ಬಿಡತಾಯಿದಾರೆ.ಅದೊಂದ ಕಡೆಯಾದರೆ ಅಪ್ಪ ಹಂತಾ ಜಮೀನ್ದಾರ ಮನೇಲಿ ಜೀತದಾಳಾಗಿ ದುಡಿದು ಗಳಿಸಿದ ಎರಡೆತ್ತಿನ ಕಮತಾ (ನಮ್ಮಮನೆಕೃಷಿ)ಉಳಿಸೋಕೆ ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಇವುಗಳ ಜೊತೆಲಿ ಬೆಳೆದು ನಿಂತಿರೊ ತಂಗಿರ ಮದುವೆನಾ ಸಾಲ ಮಾಡದೆ ಮಾಡೊ ಸಲುವಾಗಿ, ನಮ್ಮ ಮನೆ ಕಮತಾ ಉಳಿಸೊದಕ್ಕಾಗಿ ಬೆಂಗಳೂರಲ್ಲಿ ದುಡಿಯೋ ದುಡ್ಡು ಸಾಲದೆ ಗಲ್ಪಗೆ ಬಂದೆ.ಇಲ್ಲಾಂದರೆ ಇರೊ ಅಪ್ಪನ ತುಂಡ ಜಮೀನು ಮಾರಿ ಅಪ್ಪನಿಗೆ ಇಗೀರೊಎರಡೆತ್ತಗಳನು ಮಾರಿ ಯಾವದಾದರು ಕಂಪನಿ ಸೆಕುರ್ಟಿ ಗಾರ್ಡ ಅಗಿಬಿಡತಿದ್ದರೆನೊ ನಮ ಅಪ್ಪ.ಎನೇ ಆದರು ನಾನು ರೆಪ್ರಿಜ್ರೆಶನ್ ಆಂಡ ಎರಕಂಡಿಶನ್ ಒದಿಸಿರೊ ಚಿಕ್ಕಪ್ಪನಿಗು.ಕೆಲಸಾ ಕೊಡಿಸಿರೊ ಮಾವನಿಗು ಪಾರಿನ್ ಬರೊಕೆ ಸಹಾಯ ಮಾಡಿರೊ ಸ್ನೆಹಿತರಿಗೂ ಚಿರ ಋಣಿ ನಾ.
ಕುಸುಂ
ತುಂಬ ಅಳಿಸ್ತೀರಿ. ಕೆಲವೊಂದು ಸಾಲುಗಳಂತೂ ಹಾಗೇ ಮೊಣಕೈಗೆ ಚಿಲುಕ ಬಡಿದ ಹಾಗೆ ನೋವೂಡುತ್ತವೆ.
“ನಮ್ಮ ಬೋಟಿನಲಿ ಹಗ್ಗವಿಲ್ಲ, ಬಲೆಯಿಲ್ಲ, ಬದುಕಬೇಕಿದೆ, ನಿಮ್ಮ ಹಡಗು ಹತ್ತುತ್ತಿತ್ತೇವೆ. ಹಡಗಿಗೂ ಮಿತಿಯುಂಟು, ಬದುಕಿದರೂ ಒಟ್ಟಿಗೇ, ಮುಳುಗಿದರೂ ಒಟ್ಟಿಗೇ. ನಿಮಗಾದ್ದೇ ನಮಗೂ ಆಗತ್ತೆ, ಆಗ್ಲಿ ಬಿಡಿ ಅತ್ಲಾಗೆ.”
ನಿಮ್ ಪೋಸ್ಟ್ ಓದಿ ಆದ ನೋವು, ಇದಕ್ಕೆ ಶ್ರೀ ಬಸವರಾಜ ಅವರು ಬರೆದ ಕಮೆಂಟು ನೋಡಿ ಇಮ್ಮಡಿಯಾಗಿಬಿಟ್ಟಿದೆ.
ಚಕ್ರ ತಿರುಗಲೇಬೇಕು. ತಿರುಗಿಸುವವರ ಕೈ ಅದರ ಕೀಲಿಗೆ(ಗಡಾಣಿಗೆ) ಸಿಗದೆ ಇರಲಿ. ನೋಯದಿರಲಿ ಅಂತಷ್ಟೆ ಹಾರೈಸಬಲ್ಲೆ
wow….kusuma….
wow….kusuma….
mahesh devashetty
ಮತ್ತೊಂದು ಮನ ಕಲುಕುವ ಬರಹ.ಈಗೀಗ ಮೊದಲಿನ ಹಾಗೆ 50-60 ಎಕರೆಯಷ್ಟು ಹೊಲಗಳ ಒಡೆಯರು ಇಲ್ಲ. ಹಳ್ಳಿಗಳಲ್ಲಿ ಗೌಡಿಕೆಯ ದರ್ಪ ಈಗ ಕಾಣುತ್ತಿಲ್ಲ. ಹೊಲಗಳು ಭಾಗವಾಗುತ್ತಾ ಒಬ್ಬಬ್ಬರಿಗೆ ಹೆಚ್ಚೆಂದರೆ ಐದಾರು ಎಕರೆ ಮಾತ್ರ ಹೊಲವಿರುತ್ತದೆ. ಬೋರುಗಳ ಸಂಖ್ಯೆ ಹೆಚ್ಚಾಗಿ ಅಂತರ್ಜಲ ಕೆಳಗೆ ಹೋಗಿದೆ/ಕಡಿಮೆಯಾಗಿದೆ.(ಸಾಮಾನ್ಯವಾಗಿ ಅಕ್ಕ-ಪಕ್ಕದ ಹೊಲಗಳೂ ಅಣ್ಣ-ತಮ್ಮರಿಗೆ ಸೇರಿದ್ದು, ದಾಯಾದಿ ಕಲಹದಿಂದ ಒಬ್ಬರ ಬೋರಿನ ನೀರನ್ನು, ಹೊಲದ ಹತ್ತಿರವಿದ್ದರೂ ಇನ್ನೊಬ್ಬರು ಬಳಸುವದಿಲ್ಲ) ಮೀಸಲಾತಿಯ ಫಲಪಡೆದವರು ನೌಕರಿ ಪಡೆದು ಹಳ್ಳಿಯನ್ನು ಬಿಟ್ಟಿದ್ದಾರೆ. ಅಷ್ಟಿಷ್ಟು ಕಲಿತವರಿಗೂ ತಾಳ್ಮೆಯಿಲ್ಲ. ಶಹರದ ಥಳಕು-ಬಳಕು ಕಣ್ಣು ಕುಕ್ಕಿಸಿ, ಅದರತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಪುಷ್ಟಿ ಕೊಡುವಂತೆ ನಮ್ಮ ಘನ ಸರ್ಕಾರವೂ ಕರ್ನಾಟಕವೆಂದರೆ ಬರೀ ಬೆಂಗಳೂರು ಅಂತಾ ತಿಳಿದಿದೆ. ಎಲ್ಲಾ ಕೈಗಾರಿಕೆ-ಅಭಿವೃದ್ಧಿ ಬರೀ ಬೆಂಗಳೂರು ಸುತ್ತು-ಮುತ್ತಲಿಗೆ ಮೀಸಲಿರಿಸಿದೆ.(ಡಾವಣಗೆರೆ,ಹುಬ್ಬಳ್ಳಿ, ಹರಿಹರದಂಥ ಊರುಗಳಲ್ಲಿ ಮದ್ಯಮ ವರ್ಗದ ಜನರಿಗೆ ಕೆಲಸ ಕೊಡುತ್ತಿದ್ದ ಕೈಗಾರಿಕೆಗಳು ಮುಚ್ಚಿಹೋಗಿವೆ). ಕಳೆದ ಹತ್ತು-ಹನ್ನೆರೆಡು ವರ್ಷದಲ್ಲಿ ಬೆಂಗಳೂರು-ಮೈಸೂರು ಬಿಟ್ಟು ಎಲ್ಲಿಯೂ ಜನರಿಗೆ ಕೆಲಸ ನೀಡುವ ದೊಡ್ಡ ಕೈಗಾರಿಕೆಗಳು ತಲೆ ಎತ್ತಿಲ್ಲ. ಹೆಣ್ಣು ಹೆತ್ತವರೂ ತಮ್ಮ ಮಕ್ಕಳನ್ನು ಬೆಂಗಳೂರಿನಲ್ಲಿ ಕೆಲಸದಲ್ಲಿರುವ ವರನಿಗೇ ತಮ್ಮ ಮಗಳನ್ನು ಮದುವೆ ಮಾಡಿಕೊಡುತ್ತಾರೆ. ಹಳ್ಳಿಯಲ್ಲಿರುವ ರೈತ ಹುಡುಗನಿಗೆ ತಮ್ಮ ಮಗಳನ್ನು ತೋರಿಸುವದೂ ಇಲ್ಲ.(ಕನ್ಯಾಮಣೀಗಳೂ ಹಳ್ಳೀ ರೈತ ಹುಡುಗನನ್ನು ಕನಸಿನಲ್ಲಿಯೂ ಬಯಸುವದಿಲ್ಲ). ಘನ ಸರ್ಕಾರವು ಆ ಭಾಗ್ಯ ಈ ಭಾಗ್ಯ ಕೊಡುವದನ್ನು ಬಿಟ್ಟು ಬೆಂಗಳೂರು-ಮೈಸೂರು ಬಿಟ್ಟು ಉಳಿದ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಕ್ರಮ ಕೈಗೊಳ್ಳಬೇಕು…
ಮನಸ್ಸನ್ನು ಕಲಕುವಂತಹ ಬರಹ.ಮಣ್ಣಿನಲ್ಲಿ ಕೈಯಿಟ್ಟು ಕೆಸರು ಮಾಡಿಕೊಂಡು ತುತ್ತು ಬಾಯಿಗಿಟ್ಟರೆ ಅದು ಅನ್ನವಾಗುವ ಬದಲು ಮಣ್ಣೇ ಆಗುವಂತಹ ಈ ಕಾಲದಲ್ಲಿ ಯಾರಿಗೆ ತಾನೇ ಹಳ್ಳಿಗಳಲ್ಲಿ ಬದುಕಲಿಕ್ಕೆ ಆಸೆಯಾದೀತು.ಓದುತ್ತ ಓದುತ್ತ ನನ್ನ ಬದುಕನ್ನು ನನ್ನ ಓರಗೆಯವರ ಬದುಕನ್ನು ನೆನೆಸಿಕೊಂಡು ಕಣ್ಣೀರಾದೆ.
ಜಮೀನು ಕಾಲಡಿಯಲ್ಲಿ ಸಿಮೆಂಟು ಹೊದ್ದು ಮಲಗಿ ಆಗಿದೆ. touching… and ending questioning the farmer legend… Nanjundaswamy….simply..piercing…. ಸಾರ್, ನಂಜುಂಡಸ್ವಾಮಿಯವರೆ, ಇಲ್ ಕೇಳಿ, ಅಷ್ಟೇನು ಅರ್ಜೆಂಟಿತ್ತು ಅಂತ ಹೋಗಿಬಿಟ್ಟಿರಿ ನೀವು? WoW…
ನಗರ ಸೇರುವದೆ ಏಕೈಕ ದಾರಿ ಎನ್ನುವದರ ನೋವ ನುಂಗುವದಲ್ಲದೆ ಬೇರೆ ದಾರಿ ನಮಗೇಕೆ ಗೊತ್ತಾಗುತ್ತಿಲ್ಲ?
-Anil
hmmmm….
ನಮ್ಮೂರನ್ನ ಕಣ್ಣಿನ ಮುಂದೆ ತಂದಲ್ಲವ್ವ… ಊರ್ ಹೆಣ್ಣು ಮಕ್ಕಳು ಗಾರ್ಮೆಂಟ್ ಕೆಲಸಕ್ಕೆ ನಿಂತವ್ರೆ, ಗಂಡಸರು ಅದ್ಯಾವ್ದೋ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದಾರೆ… ಜಮೀನುಗಳು ಬಣಗುಡುತ್ತಿವೆ. ಹಿರಿ ತಲೆಗಳು ಇವತ್ತೋ ನಾಳೆನೋ ನಮ್ಮ ಜಮೀನು ರೇಟಾಗುತ್ತೆ ಕೈತುಂಬಾ ಕಾಸು ಸಿಗುತ್ತೆ ಅಂತಾ ಕಾಯ್ತಾ ಇದಾರೆ.
ನಿಮ್ಮ ಈ ಲೇಖನ ನನ್ನ ಮನ ಕಲಕಿತು. ಹೌದು ನಂಜು0ಡಸ್ವಾಮಿ ಅವರು ಇರಬೇಕಿತ್ತು.