ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ : ಚಕ್ರವ್ಯೂಹದ ಹೊರಗೆ ಹೋಗುವಂತಿಲ್ಲ, ಯುದ್ಧ ನಿಲ್ಲಿಸುವಂತೆಯೂ ಇಲ್ಲ

ಅವರು ಫೋನ್ ಮಾಡಿದಾಗ ರಾತ್ರಿ ಹನ್ನೊಂದು. ಅಷ್ಟು ಹೊತ್ತಿಗೆ ಮಲಗುವ ಅಬ್ಯಾಸ ಇಲ್ಲವಾದರೂ ಯಾರದಪ್ಪ ಅನೌನ್ ನಂಬರಿನ ಫೋನು ಅನ್ನುವ ಪ್ರಶ್ನೆಯೊಂದಿಗೇ ಫೋನಿನ ಹಸಿರು ಬಣ್ಣ ಮುಟ್ಟಿದರೆ ಅತ್ತಲಿಂದ “ಅಲೌ ಅಲೌ” ಅಂದಾಗಲೇ ಇದ್ಯಾವ್ದೋ ನಮ್ಮೂರ್ ಕಡೆ ಜನದ್ ಕರೆ ಅಂತ ಗೊತ್ತಾಗೋಯ್ತು. “ಕೂಸು, ನಾನು ಕವ್ವ ಪಾಪಣ್ಣ . ನಿಮ್ಮಪ್ಪಜಿ ನಂಬರ್ ಕೊಟ್ರು. .. ಅಂತ ಶುರುಮಾಡಿ ಅವರು ಹೇಳಿದ್ದು ಇಷ್ಟು. ಈಗ ನಾನು ಜಯದೇವ ಆಸ್ಪತ್ರೆಲಿದೀವಿ, ಒಳಗೆ ಮಲಗೋಕೆ ಅವಕಾಶವಿಲ್ಲ. ಚಳಿ. ನಿಮ್ಮನೆಗೆ ಬರಬಹುದಾ? ಅಂತ ಕೇಳಿದ್ದರು. ಮಧ್ಯರಾತ್ರಿ ವೇಳೆಗೆ ಬಂದರು ಕೂಡ.
ಯಾವ್ಯಾವುದೋ ದೂರದೂರುಗಳಿಂದ ಬಂದು, ಬೆಂಗಳೂರಿನ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಬಿದ್ದವರ ಕಥೆ ಒಂದೆರಡಲ್ಲ. ಒಳಗೆ ಎಲ್ಲರಿಗೂ ಮಲಗಲು ಅವಕಾಶವಿಲ್ಲ. ಪೇಷೆಂಟ್ ಜೊತೆ ಒಬ್ಬರನ್ನು ಬಿಟ್ಟು ಉಳಿದವರನ್ನ ಮುಲಾಜಿಲ್ಲದೇ ಆಚೆ ಕಳಿಸ್ತಾರೆ. ಅಂತವರು ಆಸ್ಪತ್ರೆ ಹೊರ ಅಂಗಳದಲ್ಲಿ, ಹೊದೆಯಲು ಒಂದು ಸಣ್ಣ ಶಾಲು ಕೂಡ ಇರದೇ ಮೈ ಕೊರೆವಚಳಿಯಲ್ಲಿ ಬಿದ್ದುಕೊಂಡಿರುತ್ತಾರೆ. ಸೆಕ್ಯುರಿಟಿಯವನ ಬೈಗುಳೇ ಬೆಚ್ಚಗಾಗಿಸಬೇಕಷ್ಟೆ. ಎರಡು ಸೌಟು ಸಂಪಣ ಹಾಕಿ ಮಾಡಿದ ಇಡ್ಲಿಗೆ ಮೂವತ್ತೈದು ರೂಪಾಯಿ ಕೇಳೋ ಹೋಟೆಲುಗಳು. ಎಷ್ಟೋ ಜನ ಈ ಖರ್ಚು ಭರಿಸಲಾರದೇ ಊಟವೇ ಮಾಡುವುದಿಲ್ಲ. ಅಥವಾ ಪೇಷೆಂಟ್ ಊಟದಲ್ಲೆ ಅರ್ಧ ಹಂಚಿ ತಿನ್ನುತ್ತಾರೆ.
ಪಾಪಣ್ಣನವರಿಗೆ ಒಬ್ಬನೇ ಮಗ. ಸುಂದರವಾದ ಹುಡುಗ. ಯಾವ ಚಟವೂ ಇಲ್ಲ. ಅವನಿಗೀಗ ಹೃದಯ ಸಂಬಂಧೀ ಸಮಸ್ಯೆ. “ ನಮ್ಮೂರ್ ಗೌರ್ಮೆಂಟ್ ಹಾಸ್ಪಿಟ್ಲಲ್ಲಿ ಕಾಲ್ ಮಡುಗಕ್ ಜಾಗ ಸಿಕ್ಕಲ್ಲ. ಏಡ್ ಪ್ರೈವೀಟ್ ಡಾಕ್ಟರ್ಗಳ್ ಬತ್ತರ. ಅವರ ತಾವು ಪುಲ್ ಜನ. ಇಲ್ಲಾಗ್ನಿಲ್ಲ ಅಂದ್ರ ಮೈಸೂರಗ್ ಕಳಿಸ್ತರ. ಅಲ್ಲೂ ಬರೀ ನಮ್ ಸುತ್ ಮುತ್ತಲ ಹಳ್ಳಿ ಜನವೇ ಅರ್ಧ ತುಂಬೋಗದ. ಜನ ಸಂಪಾದನ ಮಾಡುದ್ನೆಲ್ಲ ತಕ್ಕಂಡೋಗ್ ಆಸ್ಪತ್ರಗೇ ಸುರಿಯಂಗಾಗೋಗದ ಕಣ್ ಕೂಸೆ” ಅಂದರು. ಮಗನ ಖಾಯಿಲೆ ಚಿಂತೆ ಒಂದು ಕಡೆ. ಇನ್ನಿವನಿಗೆ ಹೆಣ್ಯಾರ್ ಕೊಡ್ತಾರೆ ಅನ್ನೋ ಚಿಂತೆಯೂ ಜೊತೆ ಜೊತೆಗೇ. “ ಎಲ್ಲ ಸರಿ ಹೋಗತ್ತೆ ಊಟಕ್ಕೇಳಿ” ಅಂದರೆ. “ಕುಸು ಇಟ್ ಮಾಡಕ್ ಬಂದದವ್ವ? ನನಗ ಶುಗರ್ರು. ಅನ್ನ ಉಣ್ಣಲ್ಲ” ಅಂದರು.
“ಅಯ್ಯೋ ಹಳ್ಳೀ ಜನಕ್ಕೆ ಖಾಯಿಲೆಗಳಿರಲ್ಲ. ಫ್ರೆಶ್ ಗಾಳಿ, ಮೈಮುರಿದು ದುಡೀತಾರೆ. ಬೆವರು ಸುರಿಸ್ತಾರೆ. ರೋಗಗಳೇನಿದ್ರೂ ನಮಗೇ” ಅಂತ ನಗರಿಗರು ಮುಂಚೆ ಮಾತಾಡ್ಕೋತಿದ್ರು. ಈಗ ಹಾಗಿಲ್ಲ. ಬಿಪಿ, ಶುಗರ್ರು, ಎಂಬ ನಗರದ ಬೇಸಿಕ್ ರೋಗಗಳಿಂದ ಹಿಡಿದು, ಯಾವ್ಯಾವ್ ಥರದ ಖಾಯಿಲೆಗಳು ನಗರದಲುಂಟೋ ಅವೆಲ್ಲ ಹಳ್ಳಿ ಜನಕ್ಕೂ ಬಂದಾಯ್ತು. ನಿಮ್ಮ ಲೈಫ್ ಸ್ಟೈಲೂ ನಮ್ಮ ಲೈಫ್ ಸ್ಟೈಲೂ ಒಂದೇ ಆದ ಮೇಲೆ ಖಾಯಿಲೆಗಳು ಬೇರೆ ಬೇರೆ ಯಾಗಲು ಹೇಗೆ ಸಾಧ್ಯ? ಮೊದಲೇ ರೈತನ ಜೀವನ ಕಷ್ಟ. ಇನ್ನು ಈ ಖಾಯಿಲೆಗಳು ಬೇರೆ ಅಡಗಾಯಿಸಿಕೊಂಡ್ರೆ ಎಲ್ಲಿಂದ ತರೋದು ದುಡ್ಡು? ಇದನ್ನರಿತೇ ನಮ್ಮ ಉದಾರ ಸರಕಾರಗಳು ಯಶಸ್ವಿನಿ. ವಾಜಪೇಯಿ ಆರೋಗ್ಯಶ್ರೀ. ತಾಯೀ ಭಾಗ್ಯ ಅದೂ ಇದೂ ಅಂತ ಯೋಜನೆ ರೂಪಿಸಿವೆ. ಆದರೆ ಅವರ ಲಿಸ್ಟಿನಲಿ ಒಂದಷ್ಟು ಖಾಯಿಲೆಗಳಿವೆ ಅವಕ್ಕಷ್ಟೇ ಅವರು ದುಡ್ಡು ಕೊಡುತ್ತಾರೆ., ಅದೂ ಇಂತಿಷ್ಟು ಮೊತ್ತ ಅಂತ. ಅದರಾಚೆಗೆ ರೋಗಿಗೂ ಸರಕಾರಕ್ಕೂ ಸಂಬಂಧವಿಲ್ಲ. ಈ ಯೋಜನೆಗಳು ಬಂದ ಮೇಲೇ ಖಾಯಿಲೆಗಳು ವಿಪರೀತ ಜಾಸ್ತಿಯಾಗಿಹೋದವಾ ಅನ್ನುವ ಗುಮಾನಿ ಕೂಡ ಇದೆ.
“ಎಂಡೋಕ್ರೈನಾಲಜಿಸ್ಟ್” ಕೇಳಿದೀರಾ? ಥೈರಾಯ್ಡ್ ಮತ್ತು ಇತರೆ ಹಾರ್ಮೋನ್ ಸಂಬಂಧೀ ವ್ಯತ್ಯಾಸಗಳನ್ನು ನೋಡುವ ಡಾಕ್ಟರು. ಒಬ್ಬ ಎಂಡೋಕ್ರೈನಾಲಜಿಸ್ಟ್ ನ ಭೇಟಿಯಾದಾಗ ಕೇಳಿದ್ದೆ. “ಅಲ್ಲ ಸರ್, ನಮಗೆ ಕಣ್ಣಿನ ಡಾಕ್ಟರ್ ಗೊತ್ತು. ಹಲ್ಲಿನ ಡಾಕ್ಟರ್ ಗೊತ್ತು. ಚರ್ಮದ ಡಾಕ್ಟರ್ ಗೊತ್ತು. ಹೃದಯದ ಡಾಕ್ಟರೂ ಗೊತ್ತು. ಹಾರ್ಮೋನ್ ಡಾಕ್ಟರಾ? ಇದ್ಯಾವುದು ಹೊಸ ವಿಭಾಗ? ಏನು ಓದುತ್ತೀರಿ ಇದಕ್ಕಾಗಿ ನೀವು? ಮುಂಚೆ ಈ ಖಾಯಿಲೆ ಇರಲಿಲ್ಲ. ಈಗ್ಯಾಕೆ ಬಂತು? ಅದೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ? ಪ್ರಶ್ನೆಗಳ ಸುರಿದೆ. ಡಾಕ್ಟರ್ ಪುಣ್ಯಾತ್ಮ ತಾಳ್ಮೆಯಿಂದಲೇ ಉತ್ತರಿಸಿದರು.ಅಥವಾ ಉತ್ತರ ರೂಪದಲಿ ಪ್ರಶ್ನೆಗಳ ಎಸೆದರು. ಮುಂಚೆ ಹೃದಯದ ಡಾಕ್ಟರೂ ಇರಲಿಲ್ಲ. ಇಷ್ಟೊಂದು ಹಾರ್ಟ್ ಹಾಸ್ಪಿಟಲ್ ಗಳೂ ಇರಲಿಲ್ಲ ಅಲ್ವ? ನಮ್ಮಜ್ಜಿ ಮಾಡ್ತಿದ್ದ ಕೆಲಸ ನಮ್ಮ್ಮಮ ಮಾಡಲಿಲ್ಲ. ನಮ್ಮಮ್ಮ ಮಾಡ್ತಿದ್ ಕೆಲಸ ನನ್ ಹೆಂಡತಿ ಮಾಡಲ್ಲ. ನನ್ ಹೆಂಡತಿ ಮಾಡ್ತಿದ್ ಕೆಲಸ ನನ್ ಮಗಳು ಮಾಡಲ್ಲ. ತಿಂಗಳು ತಿಂಗಳು ಮುಟ್ಟಾಗುವ ಹೆಂಗಸರಲಿ ಹಾರ್ಮೋನಲ್ ವ್ಯತ್ಯಾಸಗಳು ಆಗ್ತಿರತ್ವೆ. ಆದರೆ ಅದು ಖಾಯಿಲೆಯಾಗಲು ಕಾರಣ ನಿಮ್ಮ ಲೈಫ್ ಸ್ಟೈಲು. ಮತ್ತು ಆಹಾರ ಪದ್ದತಿ ಬದಲಾಗಿದೆಯಾ ಇಲ್ವಾ? ಕೇಳಿದರು. ರಪಕ್ ಅಂತ ಅಜ್ಜಿ, ಅಮ್ಮ ನಾನು ಅಂತ ಲೈಫ್ ಸ್ಟೈಲ್ ಸ್ಕ್ಯಾನ್ ಮಾಡಿದೆ.” ಹೌದು ಹೌದು ಬದಲಾಗಿದೆ” ಅನ್ನದೇ ಬೇರೆ ಉತ್ತರವಿರಲಿಲ್ಲ. ಡಾಕ್ಟರು ತಾತ್ಕಾಲಿಕ ಲಾಯರ್ ಆಗಿ , ತಮ್ಮ ಪ್ರತಿವಾಧ ಮುಗಿಸಿ, “ದಟ್ಸ್ ಆಲ್”. ಅಂದುಬಿಟ್ರು.

ಯುಗಾದಿ ಹಬ್ಬಕ್ಕೆ ಅಕ್ಕಿ, ರಾಗಿ, ಜೋಳ ಹೀಗೆ ಮೂರ್ನಾಕು ಥರದ ದೋಸೆ ಮಾಡ್ತಿದ್ದಳು ಅಜ್ಜಿ. ಆಗೆಲ್ಲ “ದ್ವಾಸ ಕೊಡಿ” ಅಂತ ಹಬ್ಬದ ದಿನ ಜನ ಕೇಳಿಕೊಂಡು ಬರ್ತಿದ್ದರು. ಮನೆ ಕೊಡೋರಿಗೆ ಅಂತ ಸೇರುಗಟ್ಟಲೆ ಹಿಟ್ಟು ರುಬ್ಬುತ್ತಿದ್ದಳು ಅಜ್ಜಿ. (ಈಗ್ಯಾರೂ ಹಾಗೆ ಕೇಳಿಕೊಂಡು ಬರಲ್ಲ ಮತ್ತು ಅವರೇ ದೋಸೆ ಮಾಡುತ್ತಾರೆ ಅನ್ನುವುದು ನಾವೆಲ್ಲ ಸಂತೋಷಪಡಬೇಕಾದ ವಿಚಾರ.) ಆಮೇಲೆ ಗ್ರೇಂಡರ್ ಬಂತು. ಮಿಕ್ಸಿ ಬಂತು. ಕರೆಂಟಿಲ್ಲದಿದ್ದರೆ ಚಟ್ಣಿಪುಡಿಯಲಿ ತಿಂದೇನು.ಹೋಟೆಲಿಂದ ಪಾರ್ಸೆಲ್ ತರಿಸಿಯೇನು ಆದರೆ ರುಬ್ಬುವುದಿಲ್ಲ. ರುಬ್ಬಲಾಗುವುದಿಲ್ಲ.. ರಾಗಿ ಬೀಸುವ ಕಲ್ಲು ಸುಮ್ಮನೇ “ಹಿಂದೆ ನಮ್ಮನೇಲೂ ಇದೆಲ್ಲ ಬಳಸ್ತಿದ್ವಿ” ಅನ್ನೋ ಷೋಕಿಗಿದೆ. ಮೂಲೆಯಲ್ಲಿ ಕೂತಿದೆ. ಇಟಾಲಿಯನ್ ಕಿಚನ್ನೊಂದ್ ಬಾಕಿ ನೋಡಿ, ಉಳಿದಂತೆ ನಗರದ ಅಡುಗೆ ಮನೆಗೂ, ಹಳ್ಳಿಗೂ ಯಾವ ವ್ಯತ್ಯಾಸವಿಲ್ಲ. ಖಾಯಿಲೆಗಳಲ್ಯಾಕೆ ವ್ಯತ್ಯಾಸವಿರಬೇಕು?
ಪಕ್ಕದ ಬೀದಿಯ ಅಂಗಡಿಗೆ ಹೋಗಿ, ಉಪ್ಪೋ ಸಕ್ಕರೆಯೋ ತಾರಪ್ಪ ಅಂದರೆ ಬೈಕ್ ಸ್ಟಾರ್ಟ್ ಆಗುತ್ತದೆ. ಊರ ಮುಂದಣ ಜಮೀನುಗಳಿಗೂ ಯಾರೂ ನಡೆದು ಹೋಗುವುದಿಲ್ಲ, ಆದರೂ ರೈತಾಪಿ ಜನ ಅಂದ್ರೆ ಒಂದಷ್ಟು ಫಿಸಿಕಲ್ ಕೆಲಸಗಳು ಇದ್ದೇ ಇರ್ತವೆ. ಅಷ್ಟು ಮಾಡಿದರೂ ಖಾಯಿಲೆಗಳು ತಪ್ಪುವುದಿಲ್ಲ. ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಹಳ್ಳಿ ಜನರ ಪಾಡೇ ಹೀಗೆ ಅಂದ ಮೇಲೆ, ಸಿಟಿ ಮಂದಿ ಕತೆ ಕೇಳೋದೇ ಬೇಡ. ಸಾವಿಲ್ಲದ ಮನೆಯ ಸಾಸಿವೆ ಕೇಳಿದ ಬುದ್ದ, ಈಗ ಅವನು ಇದ್ದಿದ್ದರೆ, ಖಾಯಿಲೆಯಿಲ್ಲದ ಮನೆಯ ಸಾಸಿವೆ ಕೇಳುತ್ತಿದ್ದನೋ ಏನೋ. ಕಿಸಾಗೋತಮಿ ಮತ್ತೆ ಖಂಡಿತಾ ಬರಿಗೈ ಆಗುತ್ತಿದ್ದಳು ಪಾಪ. ವಯಸಾದವರಿಗೆ ಮಾತ್ರ ಖಾಯಿಲೆ ಬರತ್ತೆ ಅನ್ನೋದಂತು ತೀರಾ ಹಳೆಕಾಲದ ಗ್ರಹಿಕೆ.ಖಾಯಿಲೆಗೀಗ ವಯಸಿನ ಹಂಗಿಲ್ಲ. ಊರುಕೇರಿಗಳ ಭೇದವಿಲ್ಲ.
ಇಷ್ಟೆಲ್ಲ ಖಾಯಿಲೆಗಳು ಬರಲು, ಗಲ್ಲಿಗೊಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಹುಟ್ಟಿಕೊಳ್ಳಲು ಮೂಲ ಕಾರಣ ರೈತ.! ಯಾವತ್ತೂ ತರಕಾರಿ, ಸೊಪ್ಪು, ಹಣ್ಣು ಇದನ್ನೆಲ್ಲ ಬೆಳೆಯೋದೇ ನೋಡಿಲ್ಲ ಅಂದ್ರೆ ಒಂದೇ ಒಂದು ಸಲ ನೋಡಿಬಿಡಿ. ಇನ್ನು ನೀವು ತಿನ್ನುವಾಗೆಲ್ಲಾ ನೆನಪಿಸಿಕೊಳ್ಳಬೇಕು. ಅಷ್ಟು ರಸಾಯನಿಕ ಹಾಕಿರುತ್ತೇವೆ. ಬಾಳೆಹಣ್ಣು ಹಣ್ಣಾಗಲಿ, ಹಳದಿ ಬಣ್ಣ ಬರಲಿ ಅಂತ ರಸಾಯನಿಕ. ಮಾವು ಕೆಂಪಗೆ ಮಿಂಚಲಿ ಅಂತ ರಸಾಯನಿಕ. ಕೋಸು, ಹೂಕೋಸುಗಳಿಗಂತು ಅದರ ಪದರು ಪದರಕೂ ರಸಾಯನಿಕ. ಭತ್ತಕೆ, ರಾಗಿಗೆ. ಇಂತದಕ್ಕೆ ಬಿಟ್ಟಿದ್ದೇವೆ ಅಂತಿಲ್ಲ. ಎಲ್ಲದಕ್ಕೂ ರಸಾಯನಿಕ. ಬೆನ್ನಿಗೆ ಕ್ಯಾನ್ ಕಟ್ಟಿಕೊಂಡು ಕೈಯಲ್ಲಿ ಸ್ಪ್ರೇಯರ್ ಹಿಡಕೊಂಡು, ಮೂಗಿಗೆ ಬಟ್ಟೆ ಕಟ್ಟಿಕೊಂಡು ಹೊಡೀತಾ ಇರೋದೇ. ಔಷಧಿ ಅಪಾಯ ಅದು ಹೊಟ್ಟೆಗಿಳಿಬಾರದು ಅಂತ ಮೂಗಿಗೆ ಬಟ್ಟೆ ಕಟ್ಟಿಕೊಳ್ಳಿ ಅಂತ ಬರೆದಿರ್ತಾರೆ ಡಬ್ಬದ ಮೇಲೆ. ಬೆಳೆಗೆ ಹುಳ ಹುಪ್ಪಟೆ ಬರಬಾರದು, ಬೆಳೆ ಹಾಳಾಗಿ ರೈತನಿಗೆ ನಷ್ಟವಾಗಬಾರದು ಅಂತ ಪಾಪ ಕಂಪನಿಗಳವರಿಗೆ ಕಾಳಜಿ.! ಆದರೆ ಹುಳ ಹುಪ್ಟೆಗಳ ಕೊಲ್ಲುವ ಭರದಲಿ…
ಇದು ವಿಷಚಕ್ರ!! ವಿದೇಶೀ ಕಂಪನಿಗಳು ಬೀಜ ಕೊಡುತ್ತವೆ. ಬಿತ್ತುತ್ತೇವೆ. ರಸಾಯನಿಕ ಕೊಡುತ್ತವೆ ಸಿಂಪಡಿಸುತ್ತೇವೆ. ಅದೇ ವಿಷಬೆರೆತ ಆಹಾರ ತಿನ್ನುತ್ತೇವೆ. ಖಾಯಿಲೆ ತಪ್ಪದೇ ಬರುತ್ತದೆ. ಆಸ್ಪತ್ರೆ ಸೇರುತ್ತೇವೆ. ಮತ್ತೆ ವಿದೇಶೀ ಕಂಪನಿಗಳು ಔಷಧಿ ಕೊಡುತ್ತವೆ. ನುಂಗುತ್ತೇವೆ. ಹಳ್ಳಿಯಾದರೆ ಸರಕಾರಗಳ ಯೋಜನೆಯಡಿ, ನಗರಿಗರಾದರೆ ಇನ್ಸಶುರೆನ್ಸ್ ಅಡಿ ಆಸ್ಪತ್ರೆಗಳಿಗೂ, ಔಷಧಿ ಕಂಪಗಿಗಳಿಗೂ ಬೇಕಾದಷ್ಟು ದುಡ್ಡು ಕೊಡುತ್ತೇವೆ. ಎಲ್ಲ ಅವರಾಡಿಸಿದಂತೆ. ನಮ್ಮದೇನಿಲ್ಲ. ಚಿವುಟಿದ್ದೂ ಅವರೇ, ತೊಟ್ಟಿಲ ತೂಗುವರೂ ಅವರೇ. ನಾವು ವಿಷವುಂಡ ಕಂದಮ್ಮಗಳು. ತೇಗುತ್ತೇವೆ. ಎಂತಾ ಮೂರ್ಖತನ ನಮ್ಮದು!
ಒಂದು ಸಿಂಹಾವಲೋಕನ ಮಾಡಿ ನೋಡಿ, 50 ವರ್ಷಗಳಿಂದೀಚೆಗೆ ಆಗುತ್ತಿರುವ ಹಳವಂಡಗಳು ಇವೆಲ್ಲ. ಒಂದು ಕಡೆ ಭೂಮಿಗೆ ರಸಾಯನಿಕ ಸುರಿದು ಆಹಾರದ ಸತ್ವ ಕೆಡಿಸಿ, ದೇಹದ ಸಾರ ಕಡಿಮೆಯಾಯ್ತು. ಮತ್ತೊಂದು ಕಡೆ ಎಲ್ಲದಕ್ಕೂ ಯಂತ್ರ ತಂದಿಟ್ಟು ದೇಹದ ಚಲನೆಯನ್ನೂ ನಿಂತಿತು. ಅದರ ಮೇಲೆ ಹೋಟೆಲುಗಳು. ಅದಾಗಲೇ ಅರ್ಧ ಸತ್ವ ಹೀನವಾದ ಆಹಾರಕ್ಕೆ ಮತ್ತೂ ವಿಷ ಬೆರೆಸೋ ಫಾಸ್ಟ್ ಪುಡ್ಗಳು. ಈ ಎಲ್ಲದರ ಪರಿಣಾಮ ಈಗ ಶುರುವಾಗಿದೆ. 50 ವರ್ಷದ ಹಿಂದೆ ಇದ್ದ ಆಸ್ಪತ್ರೆಗಳಿಗೂ ಈಗ ಇರೋ ಆಸ್ಪತ್ರೆಗಳಿಗೂ ಅಂಕಿ ಸಂಖ್ಯೆ ತಾಳೆ ಹಾಕಿದರೆ. ಅಬ್ಬಾ! ಎದೆ ದಸಕ್ಕೆನ್ನುತ್ತದೆ. ಆಸ್ಪತ್ರೆ ಬಹುದೊಡ್ಡ ಉಧ್ಯಮವಾಗಿಹೋಗಿದೆ.
ಹೋಟೇಲುಗಳು, ಆಸ್ಪತ್ರೆಗಳು ಹೆಚ್ಚಾಗಿರುವುದು ಉತ್ತಮ ನಾಗರಿಕತೆಯ ಲಕ್ಷಣವಲ್ಲ ಅಂತ ಗಾಂಧೀಜಿ ತಮ್ಮ “ಹಿಂದ್ ಸ್ವರಾಜ್” ಪುಸ್ತಕದಲ್ಲಿ ಹೇಳಿದ್ದು ಇದಕ್ಕೇನಾ?
ಈಗ ಆದದ್ದೆಲ್ಲ ಆಗಿಹೋಯ್ತು. ಬರಿಯ ಸಮಸ್ಯೆ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ. ಪರಿಹಾರವೇನು? ನಾವೀಗ ಹಿಂದಕ್ಕೆ ಹೋಗಬೇಕಾ? ಇಲ್ಲ , ಅಷ್ಟು ಸುಲಭವಲ್ಲ. ಕೈಯಲ್ಲಿ ಫೋನಿದೆ. ಒಂದು ಬೆರಳಲ್ಲಿ ಜಗತ್ತಿದೆ. ಟೆಲಿಗ್ರಾಮು ಅಂಗಡಿ ಮುಚ್ಚಿದೆ. ಕೊಂಡು ಕೊಂಡ ಹೊಸ ಮೊಬೈಲು ವರ್ಷಕಳೆವುದರಲಿ ಹಳೆ ಮಾಡೆಲ್ ಆಗುತಿದೆ. ಮಿಕ್ಸಿಯಲೇ ತರಕಾರಿ ಕಟ್ ಮಾಡುವ ಸೌಲಭ್ಯವೂ ಉಂಟು. ಚಪಾತಿ ಹಿಟ್ಟು ಕಲಸಲಿಕ್ಕೂ ಮಷೀನುಂಟು. ಅದು ಹಾಳಾಗಲಿ ನೀರಿನ ನಲ್ಲಿ ಮುಂದೆ ಹೋಗಿ ನಿಂತು, ಕೈ ತೋರಿಸಿದರೆ ಸಾಕು ಸುರ್ ಅಂತ ನೀರು ಸುರಿಯುತ್ತದೆ. ಬಾಗಿಲು ದೂಡುವ ಕಷ್ಟವೂ ಇಲ್ಲ ಹೋಗಿ ನಿಂತು ಕೊಂಡರೆ ಸಾಕು. ಗಾಜು ಅತ್ತಿತ್ತ ಸರಿದು ದಾರಿಮಾಡಿಕೊಡುತ್ತದೆ. ಬೆನ್ನು ನೋಡಿ, ತಾನೇ ಮುಚ್ಚಿಕೊಳ್ಳುತ್ತದೆ. ಸುಲಭ, ಇನ್ನಷ್ಟು ಸುಲಭ, ಮತ್ತಷ್ಟು ಸುಲಭ. ಮನುಷ್ಯನ್ನನ್ನ ನಿಷ್ಕ್ರಿಯಗೊಳಿಸಲಿಕ್ಕೆಂದೇ ಜಗತ್ತಿನಲಿ ಎಷ್ಟೊಂದು ಸಂಶೋಧನೆಗಳು ನಡೆಯುತ್ತಿವೆಯಾ?
ಮಿಕ್ಸಿ ನನಗೆ ಅನಿವಾರ್ಯ.ಬೆಳಗಿನ ಗಡಿಬಿಡಿಯಲಿ ರುಬ್ಬತ್ತಾ ಕೂರುವ ತಾಳ್ಮೆ ಖಂಡಿತಾ ಇಲ್ಲ. ಮೊಬೈಲಂತು ಉಸಿರಿನಷ್ಟೇ ಮುಖ್ಯ.ಊರುಬಿಟ್ಟು ಕೆಲಸಕ್ಕೆ ಬಂದಿದ್ದಾನೆ ಹುಡುಗ. ನಾಗರಿಕತೆಯ ಲಕ್ಷಣವಲ್ಲ, ಆರೋಗ್ಯ ಹಾಳು ಅಂತ ಹೋಟೆಲು ಬಂದ್ ಮಾಡಿದರೆ ಅವನಂತ ಕೋಟಿ ಕೋಟಿ ಜನ ಹಸಿವೆಯಲಿ ಸತ್ತಾರು.!. ಕಾರು ಬಸ್ಸು ಬಂದ ಮೇಲೆ ಎತ್ತಿನ ಗಾಡೀ ನೆಚ್ಚಿಕೊಂಡು ಕೂರಲಾಗುವುದೇನು?
ಮಾತಾಡಬಹುದು ಗಂಟೆಗಟ್ಟಲೆ. ಬರೆಯಬಹುದು ಪುಟಗಟ್ಟಲೆ. ಆದರೆ ಮುಂದಿಟ್ಟ ಹೆಜ್ಜೆಗಳನೆತ್ತಿ ಹಿಂದಕ್ಕಿಡುವುದು ಸುಲಭದ ಮಾತಲ್ಲ. ವಿಷಚಕ್ರಗಳ ಚಕ್ರವ್ಯೂಹವಿದು. ಹೊರಹೋಗುವಂತಿಲ್ಲ. ಯುಧ್ದ ನಿಲ್ಲಿಸುವಂತೆಯೂ ಇಲ್ಲ.!
 

‍ಲೇಖಕರು G

30 December, 2014

ನಿಮಗೆ ಇವೂ ಇಷ್ಟವಾಗಬಹುದು…

15 Comments

  1. ಅಪರ್ಣ ರಾವ್

    ಲೇಖನ ದಿನಕ್ಕೊಂದು ಸಾರಿ ಓದಿಕೊಳ್ಳೋಹಾಗಿದೆ..

  2. Soory Hardalli

    This is really true. We are consuming poisons from air, milk, water, vegetables and all around. It is told that 41.5% of Indians are diabetic. Good earning for doctors and druggists. Very sad. It needs to be controlled.
    But who will? bekkige gante kattoru yaaru?

  3. Geetha b u

    Conclusion is heart touching..very true. We cannot go back easily or may be going back is impossible..but we can walk slowly…hejje nidhaanavaagi yethiduva…naashadhede nadevaaga aaturaveke??

  4. lakshmikanth itnal

    ಸಮಸ್ಯೆಗಳು, ಅದರ ಮೂಲ, ಆಳ ಅಗಲ, ಅದರ ಸಾಂತ್ವಣ, ಸಲಹೆ ಮೇಳೈಸಿದ ಅತ್ಯುತ್ತಮ ಬರಹ. ವಿಷವನ್ನೆ ಉಸುರಿ, ವಿಷವನ್ನೆ ಬಸುರಿ ಬೆಳೆಸುತ್ತ ಜಗವೆಲ್ಲ ವಿಷಮಯವಾಗಿದ್ದು, ಆಧುನಿಕತೆಯೆ ಸಂಶೋಧನೆಗಳೇ ಒಳಿತಿಗೆ ಮುಳ್ಳಾಗಿದ್ದು ವಿಪರ್ಯಾಸ.

  5. Basavaraj

    ಎಲ್ಲಾ ಅದರಲ್ಲಿ ಬರದಿದ್ದಿರಾ ಎನು ಮಾತಾಡಂಗಿಲ್ಲ………

  6. Raghuram Bhat

    Very sensible. Organic farming is picking up, why you missed it? Once again organic farm food is expensive as of now only higher middle class and above is able to buy…

  7. ಡಾ.ಶಿವಾನಂದ ಕುಬಸದ

    ಬರೆದದ್ದೆಲ್ಲವೂ ಸತ್ಯವೇ..
    ಸುಂದರ ಲೇಖನ
    ಕವನ ಓದಿದ ಹಾಗಾಯಿತು..

  8. shyam

    ಹೌದು. ಅಭಿಮನ್ಯುಗಳಾಗಿ ಬಿಟ್ಟಿದ್ದೇವೆ. ಚಕ್ರವ್ಯೂಹ… ಹೊರ ಹೋಗುವ ದಾರಿ ಗೊತ್ತಿಲ್ಲ. ಹೋರಾಡುತ್ತಾ ಸಾಯುವುದೊಂದೇ ದಾರಿ…

  9. ಕಿರಣ್

    “ಅಮೇರಿಕಾದಲ್ಲಿ ಮೂವತ್ತು ವರ್ಷ ಹಿಂದೆ ಆದದ್ದು ನಮ್ಮಲ್ಲಿ ಈಗ ಆಗುತ್ತೆ” ಅಂತ ವಿಲಾಯತು ನೋಡಿದವರು ಹೇಳುತ್ತಾ ಇದ್ದರು.
    ಇದೆ ಪರಿಭ್ರಮಣದಲ್ಲಿ ಅಮೇರಿಕಾ ಇತ್ತು – ೧೯೯೦ ಇಸವಿ ಸುಮಾರಿಗೆ.
    ಈಗಲೂ ಇದೆ; ಪೂರ್ತಿ ನಿರ್ನಾಮ ಮಾಡಲು ಸಾಧ್ಯವಿಲ್ಲ. Chemistry ನಲ್ಲಿ half-life ಅಂತಾರೆ ನೋಡಿ – ಹಾಗೆ. ಎಲ್ಲಾ ಸವೆಯುತ್ತೆ; ಆದರೆ ಅಳಿಯಲ್ಲ!
    ಈಗ ಅಮೇರಿಕಾದವರು ಬೇರೆ ರಾಗ ಹಾಡ್ತಿದ್ದಾರೆ – ನಮ್ಮ ಹಳೆ ಕಾಲದ ಅಜ್ಜಿಯರು ಮಾಡುತ್ತಿದ್ದ ಪದ್ಧತಿಗಳ ನೆನಪು ಬರುವಂತೆ.
    ಯೋಗ ಮಾಡುತ್ತಾರೆ; ನಡೆಯುತ್ತಾರೆ; ‘ಕ್ರಿಮಿನಾಶಕ ಇಲ್ಲದ ಬೆಳೆ ತಿನ್ನಬೇಕು’ ಎನ್ನುತ್ತಾರೆ; ‘ಆಸ್ಪತ್ರೆಗಳಿಗೆ ಕಡಿಮೆ ದುಡ್ಡು ಹಾಕಿ – ಜೀವನ ಶೈಲಿ ಬದಲಾಯಿಸಿ’ ಎಂದು ಸಲಹೆ ಕೊಡುತ್ತಾರೆ; ಮನೆ-ಮದ್ದು ಬಳಸುತ್ತಾರೆ.
    ನಾವು ಅವರಾಗುತ್ತಿದ್ದೇವೆ; ಅವರು ನಾವೇನು ಆಗಿದ್ದೆವೋ, ಅದಾಗುತ್ತಿದ್ದಾರೆ!
    ಕಾಲಚಕ್ರ – ನಮಗೆ ಇದರ ಅರಿವು ಈಗಲೇ ಬಂದರೆ ಒಳಿತು.
    ‘ಸತ್ತೆಮ್ಮೆ ಎಬ್ಬಿಸಿದನ್ತಾಯ್ತು’ ಅಂತ ನಕ್ಕರು ನಮ್ಮಪ್ಪ- ನನ್ ಮಾತ್ ಕೇಳಿ!

  10. Anil Talikoti

    ಕಾಲ ಇರುವದೇ ವ್ಯವಸ್ಥೆ ಕೆಡಸಲೋ ಏನೋ , ಚಕ್ರವ್ಯೂಹದಿಂದ ತಪ್ಪಿಸಿಕೊಳ್ಳುವ ಒಂದೆ ಹಾದಿ ಎಂದರೆ ‘ಮೇಲಕ್ಕೆ’ ಹಾರುವದು!
    ~ಅನಿಲ

  11. ಕುಸುಮಬಾಲೆ

    ಡಾಕ್ಟರೇ ಎಲ್ಲ ಸತ್ಯವೆಂದು ಒಪ್ಪಿಕೊಂಡುಬಿಟ್ಟರು. ಮತ್ತು ಇದರ ಪರಿಹಾರ ಸಾವಕೃಷಿ ಅಂದರೆ ಅದೂ ಒಂದು ರಮ್ಯ ಕಲ್ಪನೆ ಅಷ್ಟೆ. ಅದರ ಹಳವಂಡಗಳನ್ನೂ ಹೇಳುತ್ತೇನೆ ಮುಂದೆ. ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. 🙂

  12. ಗುಡ್ಡ

    ಚಕ್ರವ್ಯೂಹದಿಂದ ಪಾರಾಗಲು “ಯಂತ್ರಗಳನ್ನು ಕಳಚೋಣ*”..
    ——————
    * ‘ಯಂತ್ರಗಳನ್ನು ಕಳಚೋಣ’ ಎಂಬುದು ಪ್ರಸನ್ನ ಅವರ ಇಂತಹದೇ ವಿಷಯದ ಮೇಲಿನ ವೈಚಾರಿಕ ಪುಸ್ತಕ.

  13. Talikatte L Santosh

    ವಾಸ್ತವ ವಿಚಾರವನ್ನ ಸರಳವಾಗಿ ಸುಂದರವಾಗಿ ಬರೆದಿದ್ದಿರಿ

  14. ಅಂಗಡಿ ಇಂದುಶೇಖರ

    ಇಷ್ಟೆಲ್ಲಾ ಆವಾಂತರಗಳ ನಡುವೆಯೂ ನಮ್ಮ ದೇಶದ ಸರಾಸರಿ ಜೀವಿಸುವ ಅವಧಿ(Life expectancy) ಹೆಚ್ಚಾಗಿದೆ. ಈಗ ನಮ್ಮ ದೇಶದಲ್ಲಿ ಎವರೇಜ್ ಮನುಷ್ಯ 68 ವರ್ಷ ಬದುಕುತ್ತಾನೆ.(1980 ರಲ್ಲಿ ಇದು 48 ವರ್ಷವಾಗಿತ್ತು). ವೈದ್ಯಕೀಯ ರಂಗದಲ್ಲಿ ಸಾಧಿಸಿರುವ ಯಶಸ್ವೀ ಪ್ರಯೋಗಗಳೆಲ್ಲಾ ಉಳ್ಳವರ ಪಾಲಾಗುತ್ತಿವೆ. ಬೈಪಾಸ್ ಸರ್ಜರಿ, ಕೆಮೊಥೆರಪಿ ಮುಂತಾದ ಸುಧಾರಿತ ಪ್ರಯೋಗಗಳ ಕೃಪೆಯಿಂದ, ಹೃದಯಾಘಾತ ಹಾಗೂ ಕ್ಯಾನ್ಸರ್ ನಿಂದ ಸಂಭವಿಸುತ್ತಿದ್ದ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಸಾರ್ವಜನಿಕ (ಸರಕಾರೀ) ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗಬೇಕು. ಆರೋಗ್ಯ ಭಾಗ್ಯ ಎಲ್ಲರಿಗೂ ಸಮನಾಗಿ ಸಿಗಬೇಕು. ಒಂದು-ಎರಡು ಮಕ್ಕಳನ್ನು ಮಾತ್ರ ಹೆರುವದರಿಂದ ತಾಯಿ-ಮಗು ಇಬ್ಬರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಹಳ್ಳಿಗಳಲ್ಲಿ ದೈಹಿಕ ಶ್ರಮದ ಚಟುವಟಿಕೆಗಳು ಕಡಿಮೆಯಾಗಿವೆ. ಒಣ ಹರಟೆ, ಟೀವಿ ವೀಕ್ಷಣೆ ಜಾಸ್ತಿಯಾಗಿದೆ. ಎಲ್ಲರೂ ಮಟೀರಿಯಲಿಸ್ಟಿಕ್ ಆಗತೊಡಗಿದ್ದಾರೆ. ಯಂತ್ರಗಳು ಮನುಷ್ಯನ ಸಮಯವನ್ನು ಉಳಿಸಿವೆ. ಆದರೆ, ಆ ಉಳಿದ ಸಮಯ ಸರಿಯಾದ ಕ್ರಮದಲ್ಲಿ ಉಪಯೋಗವಾಗುತ್ತಿಲ್ಲ.

  15. kiran

    ವಿಷಚಕ್ರದೊಳ ಸಿಲುಕಿದ್ದರೂ ಅರಿವಿರದ ಅನಿವಾರ್ಯದ ಬದುಕು…ನಿರೂಪಣೆ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading