“ತಗಳಯ್ಯ, ಇನ್ನೆರಡ್ ನೇಯ್ಕಂಡ್ ಬಂದ್ಬುಡು” ಅಪ್ಪ ಮಂದಲಿಗೆ (ಚಾಪೆ) ಆರ್ಡರ್ ಮಾಡುತ್ತಿದ್ದರು. “ಅಣ್ಣ, ನಮ್ಮನೆ ಇಡೀ ಹಾಸಿದರೂ ಇನ್ನೂ ಮಿಕ್ಕುವಷ್ಟು ತುಂಬ್ಕೊಂಡಿದೀರ, ಇನ್ನೂ ಎರಡ್ ನೇಯಿಸಿ ಎಲ್ಲಿಟ್ಕೋತೀರ?” ಕೇಳಿದೆ. “ಅಯ್ಯೋ ಯಾಕ್ಯೋಳಿಯೇ ಸುಮ್ನಿರು. ಇವರೇನೋ ತುಂಬ್ತರೆ, ಗೌರಿ ಶಿವರಾತ್ರಿಗೆ ಮನೆ ಅಚ್ಕಟ್ ಮಾಡಬೇಕಾರೆ ನನಗಿರದು ಕಷ್ಟ.” ಅಮ್ಮ ಹೇಳಿದರು. “ಈಗೇನ್ ಅಂದ್ಕೊಂದ್ ಚಂದ್ಕೊಂದ್ ಪ್ಲಾಸ್ಟಿಕ್ ಬಂದವಲ್ಲ. ದುಡ್ಡೂ ಕಮ್ಮಿ, ಇವೇನ್ಮಾಡಕೆ ಇಷ್ಟು?” ಟೀ ಕುಡೀತಾ ಕೂತಿದ್ ಚಿಕ್ಕತಾಯಮ್ಮನೂ ದನಿಗೂಡಿಸಿದರು.
“ನಿಮಗೆಲ್ಲ ಏನ್ ಗೊತ್ತು? ಇಂವ ಒಬ್ಬನೇ ಉಳ್ಕಂಡಿರವ ಈಗ. ಇವನೂ ಸತ್ತೋದ್ರ ಈ ಮಂದಲಿಗ್ ಗಳು ನೀವ್ ಬೇಕು ಅಂದ್ರೂ ಸಿಗಲ್ಲ. ಗೊತ್ ಗೊತ್ತಿಲ್ದೆ ಮಾತಾಡಬೇಡಿ. ಏಡ್ ಮಂದಲಿಗ ಮಡಿಕಳಕ್ ಜಾಗಿಲ್ವ ಈ ಪಾಟಿ ಹಟ್ಟೀಲಿ? ಬಿದ್ದಿರ್ತವ ಬುಡು.” ಅಂದರು ಅಪ್ಪ. “ಏನ್ಮಾಡಕ್ಯಾ? ನಿನ್ ಮಕ್ಕಳು ಸಿಟಿ ಸೇರ್ಕಂಡು ಸೋಪಾ ಕುರ್ಚಿ ಮಡಿಕಂಡರ. ಅವರಿಗ್ಯಾತಕ್ ಈ ಮಂದಲಿಗ? ಚಿಕ್ಕತಾಯಮ್ಮ ಕೇಳಿದರು. “ಸಾಯಾಗಂಟ ಸಿಟೀಲೇ ಇದ್ದರ? ಊರುಕೇರಿ ಅಂತ ಬರದೇ ಇಲ್ವ?” ಅಪ್ಪ ಉತ್ತರಿಸಿದರು. “ಬಂದ್ರೂ ಕುರ್ಚಿ ಬೆಂಚೂ ಮಡಿಕತ್ತರ, ಕಾಲ್ದಲಿ ಮಂದಲಗ ಯಾರ ಹಾಸವರೂ?” ಚಿಕ್ಕತಾಯಮ್ಮ ನ ಪ್ರಶ್ನೆ, ಅಮ್ಮನದೂ ಆಗಿತ್ತು. “ ಅವರೇನಾದ್ರೂ ಮಾಡ್ಕಳ್ಳಿ, ನಾನು ತಗದ್ ಮಡುಗ್ಬೇಕು ಮಡುಗ್ತೀನಿ ಅಷ್ಟೆ. ಆಮೇಲ್ ಬೇಕು ಅಂದ್ರೂ ಸಿಕ್ಕಲ್ಲ” ಅಪ್ಪನ ಉತ್ತರ ಸ್ಪಷ್ಟವಾಗಿತ್ತು.
ಒಂದು ದೊಡ್ಡ ಮೊಸರು ಕಡಯೋ ಮಂತು ನೆನಪಿಸಿಕೊಳ್ಳಿ, ಅಥವಾ ಗಾರೆ ಕೆಲಸದವರು ಬಳಸುವ ತೂಗುಗುಂಡು ಇದೆಯಲ್ಲ ಆ ಆಕೃತಿ. ಅಂತದೊಂದು ನಾಕೈದು ಅಡಿ ಉದ್ದದ ಮರದ ವಸ್ತುವನ್ನ ಕೈಲಿ ಹಿಡಿದು ಹೆಗಲಿಗೆ ನಾರು ಕಟ್ಟಿಕೊಂಡು ಆ ವಸ್ತುವಿನ ಚಕ್ರದಂತ ಕೆಳಭಾಗವನ್ನ ಕಾಲಿನಿಂದ ಒದೆಯುತ್ತಾ, ತಿರುಗಿಸಿಕೊಳ್ಳುತ್ತ ಕೈಯಲ್ಲಿ ಚಕಚಕನೆ ಇನ್ನೇನನ್ನೋ ಹೆಣೆದುಕೊಳ್ಳುತ್ತಾ, ಕೈಕಾಲುಗಳೆರಡನ್ನೂ ಒಟ್ಟೊಟ್ಟಿಗೇ ಆಡಿಸುತ್ತಾ, ಕಾಕನ ಅಂಗಡಿಯ ಮುಂದೆಯೋ, ಬಸುನ್ ಗುಡಿಯ ಮುಂದೆಯೋ ಒಂದಷ್ಟು ಯುವಕರು ಮಾತಾಡುತ್ತಾ ನಿಲ್ಲಿತ್ತಿದ್ದರು. ಹರಟೆ, ಕೆಲಸ ಒಟ್ಟೊಟ್ಟಿಗೇ ಸಾಗುತ್ತಿತ್ತು. ಕೆಳಗಿನ ಭಾಗದಲ್ಲಿ ದಾರ ಸಂಗ್ರಹವಾಗುತ್ತಿತ್ತು. ನಮ್ಮೂರ ನಾಯಕರ ಕೇರಿಯ ಪ್ರಾಯದ ಹುಡುಗರೆಲ್ಲ ದಿನ ಬೆಳಗಾದರೆ ಈ ಗೆಟ್ಟಪ್ಪಿನಲ್ಲೇ ಕಾಣುತ್ತಿದ್ದರು. ಭೂತಾಳೆಯಿಂದ ನಾರು ತೆಗೆಯುತ್ತಿದ್ದರು.
ನಮ್ಮೂರ ನಾಯಕರ ಕೇರಿಯ ಪ್ರತಿ ಮನೆಯ ಮುಂದೆಯೂ ಮಂದಲಿಗೆ ನೇಯ್ಗೆ ನಡೆಯುತ್ತಿತ್ತು. ಸೀರೆ ನೇಯುವಂತೆಯೇ ಆದರೆ ಕುರ್ಚಿ ಮೇಲೆ ಕೂರುವ ಭಂಗಿಯಲ್ಲಿ ನಾನು ಯಾವತ್ತೂ ನೋಡಿಲ್ಲ. ಅದೇನಿದ್ದರೂ ನೆಲದ ಮೇಲೆ ಆ ಮರದ ಚೌಕಟ್ಟನ್ನಿಟ್ಟು, ನೇಕಾರ ಕೂತು ಟಕ್ಕಾ ಟಕ್ಕಾ ಟಕ್ಕಾ ಅಂತ ಸೌಂಡು ಮಾಡುತ್ತಾ ನೇಯುತ್ತಿದ್ದ. ಊರ ಮುಂದಲ ನಮ್ಮ ಜಮೀನಿಗೆ ಆ ಬೀದಿ ಹಾದುಕೊಂಡೇ ಹೋಗುವಾಗ , ಪ್ರತಿ ಮನೆಯ ಮುಂದಲಿಂದಲೂ ಶೃತಿಬದ್ದವಾಗಿ ಹೊರಡುತ್ತಿದ್ದ ಟಕ್ಕಾಟಕ್ಕಾ ಟಕ್ಕಾ ಸವಂಡುಗಳೆಲ್ಲವೂ ಒಂಥರಾ ಸಂಗೀತದ ಹಾಗೇ ಇತ್ತು. ನಾರು ತೆಗೆವ ಹುಡುಗರ ಕಾಲಿನ ಒದೆತ, ಕೈಚಳಕ ಕೂಡ ಒಂಥರ ರಿದಮಿಕ್ ಅನಿಸುತ್ತಿತ್ತು.

ಸ್ಥಳೀಯ ಭೂತಾಳೆ ಅಥವಾ ಕತ್ತಾಳೆಯಿಂದ ನಾರು ಮಾಡಿ, ತಮಿಳುನಾಡಿನ ಈರೋಡಿನಲ್ಲಿ ಬೆಳೆಯುತ್ತಿದ್ದ ಚಾಪೆಯ ಕಡ್ಡಿ ತಂದು, ಅದರಿಂದ ಚಾಪೆ ಹೆಣೆಯುತ್ತಿದ್ದರು. ಮನೆಯಲ್ಲಿ ಅಪ್ಪ ಮಗ , ಅಣ್ಣ –ತಮ್ಮ, ಇದ್ದರೆ, ಒಬ್ಬ ನಾರು ಮಾಡೋನು. ಮತ್ತೊಬ್ಬ ನೇಯುವವನು. ಇನ್ನೊಬ್ಬ ಮಾರುವವನು. ಒಬ್ಬನೇ ಆದರೆ ಎಲ್ಲವನ್ನೂ ತಾನೇ ಮಾಡಿಕೊಳ್ತಿದ್ದ. ಒಟ್ಟಿನಲಿ ಆಯರಹಳ್ಳಿಯ ಮಂದಲಿಗೆ ತುಂಬಾ ಫೇಮಸ್ ಆಗಿದ್ದ ಕಾಲವದು. ನಮ್ಮೂರಲ್ಲದೇ ನಗರ್ಲೆ, ಕಡಕೊಳ, ಸೋಮೆಶ್ವರಪುರದಲ್ಲೂ ಈ ಮಂದಲಿಗೆ ನೇಕಾರರು ಇದ್ದರೂ ಆಯರಳ್ಳಿಯ ಮಂದಲಗೆಗೆ ವಿಶೇಷ ಡಿಮಾಂಡು ಇತ್ತು.
ಊರಿಂದ ಬರೋ ನೆಂಟರಿಷ್ಟರೆಲ್ಲ ಬರೋದು ಬಂದಿದ್ದೇವೆ ಅಂತ ನಮ್ಮೂರ ಮಂದಲಿಗೆ ತಗೊಂಡೇ ಹೋಗೋರು. ಮತ್ತೆ ಕೆಲವರು ಅದಕ್ಕಾಗಿಯೇ ಬರೋರು. ಒಂಟಾಣಿ ಬೇಕಾ. ಎರಡಾಣಿ ಬೇಕಾ? (ಸಿಂಗಲ್ಲು ಡಬ್ಬಲ್ಲು ಪದ ಬಳಕೆ ಇರಲಿಲ್ಲ) ಅನ್ನುವುದರ ಮೇಲೆ ಬೆಲೆ ನಿರ್ಧರಿತವಾಗುತ್ತಿತ್ತು. ಒಂಟಾಣಿ ಅಂದರೆ ಒಂದು ಲೇಯರ್.. ಒಂದು ಕಡ್ಡಿಗಳು ಹೆಣಿಕೆ. ಎರಡಾಣಿ ಅಂದರೆ ಎರಡೆರಡು ಕಡ್ಡಿಗಳ ಹೆಣಿಕೆ. ಇನ್ನು ಮನೆಗಳು ಅದರ ಮೇಲಿನ ಚಿತ್ತಾಗಳು. ಇವುಗಳ ಮೇಲೂ ಬೆಲೆ ನಿಗಧಿಯಾಗುತ್ತಿತ್ತು. ನಮ್ಮಪ್ಪ ಹೇಳುವ ಪ್ರಕಾರ ಅವರ ಮದುವೆ ಸಮಯದಲ್ಲಿ ಅಂದರೆ 1979 ರಲ್ಲಿ ಆವರೇಜ್ ಒಂದು ಮಂದಲಿಗೆ ಬೆಲೆ 8-10 ರೂಪಾಯಿ ಇತ್ತು. ಇಪ್ಪತ್ತು ವರ್ಷಗಳ ಹಿಂದೆ ಅಂದರೆ 90ನೇ ಇಸವಿಯ ಆಚೀಚೆ ಅದು 25 ರೂಪಾಯಿ ದಾಟುತ್ತಿತ್ತು. ಎರಡು ಸಾವಿರನೇ ಇಸವಿಯ ವೇಳೆಗೆ ಐವತ್ತನ್ನು ದಾಟುವತ್ತ ದಾಪುಗಾಲಿಡುತ್ತಿದ್ದದು ನನಗೂ ನೆನಪಿದೆ. ಈಗ ಒಂದು ಮಂದಲಿಗೆಯ ಬೆಲೆ ಮುನ್ನೂರರಿಂದ ನೂರು ರೂಪಾಯಿ. ಮತ್ತು ನೇಯುತ್ತಿರುವವನು ಕೂಡ ಒಬ್ಬನೇ ಮುದುಕ. ಆ ಒಂದೇ ಒಂದು ಗುಟುಕು ಜೀವದ ಟಕ್ಕಾ ಟಕ್ಕಾ ಟಕ್ಕಾ ಕೂಡ ಯಾವತ್ತು ನಿಂತೇ ಹೋಗುತ್ತದೋ ಗೊತ್ತಿಲ್ಲ. ಅಪ್ಪ ಆರ್ಡರು ಕೊಟ್ಟ ಈ ಎರಡು ಮಂದಲಿಗೆ ಬಂದ ಮೇಲೆಯೇ ಗ್ಯಾರಂಟಿ.
ತೇಜಸ್ವಿಯವರ ಮೇದರಹಳ್ಳಿಯ ಅವಸಾನದ ಕತೆ ನೆನಪಿಸಿಕೊಳ್ಳಿ, ಮೇದರಹಳ್ಳಿಯಲ್ಲಿ ಬಿದಿರುಬುಟ್ಟಿ ನೇಯ್ದು ಕೊಡುತ್ತಿದ್ದ ಜನರಿದ್ದರು. ಕಾಫಿ ಪ್ಲಾಂಟರುಗಳು ಗಿಡ ಬೆಳೆಸಲು ಅವನ್ನು ಕೊಳ್ಳುತ್ತಿದ್ದರು. ಅಲ್ಲಿಗೆ ಪ್ಲಾಸ್ಟಿಕ್ ಕವರುಗಳ ಚಲಾವಣೆ ಬಂತು. ಹುಳ ತಿಂದು ಹಾಳಾಗದ , ಒಂದೇ ಬಾರಿಗೆ ಸಾವಿರಾರನ್ನು ಸುಲಭ ಸಾಗಿಸಬಹುದಾದ ಪ್ಲಾಸ್ಟಿಕ್ ಕವರುಗಳ ಧಾಳಿಗೆ ಮೇದರಹಳ್ಳಿ ಹೇಳಹೆಸರಿಲ್ಲವಾಯ್ತು. ಇಲ್ಲಿ ನಮ್ಮ ಆಯರಹಳ್ಳಿಯಲ್ಲಿ ಆದದ್ದೂ ಇದೇ ಡಿಟ್ಟೋ ಡಿಟ್ಟೋ ಕಥೆ.
ನನಗೆ ನೆನಪಿದ್ದ ಹಾಗೆ 90ರ ಆಚೀಚೆ ಪ್ಲಾಸ್ಟಿಕ್ ಚಾಪೆಗಳು ಬಂದವು. ಆಗ ಮಾಲ್ ಗೀಲ್ ಗಳ ಕಲ್ಪನೆ ಕೂಡ ಇರದವರು ನಾವು,. ಹಳೆ ಮೈಸೂರು ಭಾಗದ ಹಳ್ಳಿಯ ಮಂದಿಗೆ ದಸರಾ ಟೇಮಿನ ಮೈಸೂರು ಎಕ್ಸಿಭಿಷನ್ನೇ ವಿಶೇಷ ವಸ್ತುಗಳನ್ನು ನೋಡಲು, ಕೊಳ್ಳಲು ಇರುತ್ತಿದ್ದ ಏಕೈಕ ತಾವು (ಜಾಗ). ಬಂತು ನೋಡಿ ಪ್ಲಾಸ್ಟಿಕ್ ಚಾಪೆಗಳು. ಬಣ್ಣಗಳೇನು ಚಿತ್ರಗಳೇನು, ಗಕ್ಕನೆ ಸೆಳೆದುಬಿಟ್ಟವು. ಅಂಗಡಿಗಳಿಗೂ ಬಂದವು. ಕಡೆಗೆ ಹಳ್ಳಿ ಹಳ್ಳಿಗಳಿಗೂ ಬಂದವು. ಅವು ಬಂದ 2ರಿಂದ 5 ವರ್ಷದಲ್ಲಿ ನಮ್ಮ ನೇಕಾರರು ಪೂರ್ತಿ ನೆಲಕಚ್ಚಿಹೋದರು.
ಅಷ್ಟು ವೇಗಾತಿವೇಗವಾಗಿ ಈ ಪ್ಲಾಸ್ಟಿಕ್ ಚಾಪೆಯನ್ನ ಜನ ನೆಚ್ಚಿಕೊಂಡದ್ದಕ್ಕೆ ಕಾರಣಗಳೂ ಉಂಟು . ಅದೂ ಮೇದರಹಳ್ಳಿ ಬುಟ್ಟಿಗೆ ಕೊಟ್ಟ ಕಾರಣಗಳೇ.
1, ಪ್ಲಾಸ್ಟಿಕ್ ಚಾಪೆ ಹೆಂಗಾರೂ ಮಡಚಿಡಬಹುದು. ನಮ್ಮ ನೇಕಾರರ ಮಂದಲಿಗೆ ಸುರುಳಿ ಸುತ್ತಬೇಕೇ ಹೊರತು ಮಡಚಲಾಗದು.
2. ತೊಳೆದು ಒಳಗಿಸುವುದು ಸುಲಭ.
3.ಎಲ್ಲಕಿಂತ ಮುಖ್ಯ ಬೆಲೆ- ಮುನ್ನೂರರಿಂದ ಐನೂರು ಕೊಟ್ಟು , ನೇಕಾರರ ಹುಲ್ಲಿನ ಮಂದಲಿಗೆ ಕೊಳ್ಳುವ ಬದಲು ಅದೇ ಐನೂರು ಕೊಟ್ಟರೆ ನಾಕೋ ಐದೋ ಪ್ಲಾಸ್ಟಿಕ್ಕು ಬರ್ತವೆ.
4. ಮತ್ತೊಂದು ಕಾರಣ.. ಹೊಸದರೆಡೆಗಿನ ಆಕರ್ಷಣೆ. ಮತ್ತು ಹಿತ್ತಲ ಗಿಡದ ನೀತಿ.
ಬೇರೆಲ್ಲವನ್ನೂ ಹೇಗೋ ನಿಭಾಯಿಸಿದರೂ ಆ ಬೆಲೆಯೊಂದಿಗೆ ಇವರಿಗೆ ಫೈಟ್ ಕೊಡುವುದು ದುಸ್ಸಾಹಸವೇ ಆಗಿತ್ತು. ಈರೋಡಿನ ರೈತರೂ ಈ ಚಾಪೆ ಕಡ್ಡಿ ಬೆಳೆಯುವುದ್ನನ ನಿಲ್ಲಿಸಿದರು. ಅಲ್ಲೂ ಪ್ಲಾಸ್ಟಿಕ್ ಬಂದಿದ್ದವು. ಎಲ್ಲಿ ಸಿಗುತ್ತದೋ ಅಲ್ಲಿ ಹೋಗಿ ಇಲ್ಲಿಗೆ ತಂದು, ದಿನಗಟ್ಟಲೆ ನೇಯ್ದು. ಮಂದಲಿಗೆ ರೆಡಿಮಾಡಿದರೆ. ಕಡೇ ಪಕ್ಷ ಪೆಟ್ರೋಲು ಚಾರ್ಜು. ದಿನಗೂಲಿಯಾದರೂ ಗಿಟ್ಟಬೇಕು ತಾನೆ. ಅಷ್ಟೂ ಇಲ್ಲವಾದರೆ ಈ ಕೆಲಸದ ಬದಲು ಕೂಲಿಯೇ ಮಾಡಬಹುದಪ್ಪ. ಆದರೆ ಈ ಕಷ್ಟ, ಕಂಪ್ಯಾರಿಸನ್ಗಳು ಯಾವನಿಗೆ ಬೇಕಾಗಿತ್ತು.? ಹೋಗಲಿ ಇದರ ಪರಿಣಾಮಗಳ ಬಗ್ಗೆ ಯೋಚನೆಗೆ ಹಚ್ಚೋರ್ಯಾರು? ಯೋಚನೆ ಮಾಡೋರ್ಯಾರು?
ಬೇರೆಯವರ್ ಸುದ್ದಿ ಹಾಳಾಗೋಗ್ಲಿ ನಮ್ಮೂರ ಜನವಾದ್ರೂ ನಮ್ಮ ಮಂದಲಿಗೆ ಕೊಂಡುಕೋಬೇಡ್ವೇ? ಊಹ್ಞೂಂ.. ಈ ಅವಸಾನ ಜಾರಿಯಲ್ಲಿರುವಾಗ , ಅಂದರೆ 10 -12ವರ್ಷಗಳ ಹಿಂದೆ ನಮ್ಮ ಮನೆಯ ಮುಂದೆಯೇ ಅಮ್ಮ ಪ್ಲಾಸ್ಟಿಕ್ ಚಾಪೆ ಕೊಳ್ಳುವಾಗ , ಕಾಲೇಜು ಕಲಿಯುತ್ತಿದ್ದ ಕತ್ತೆ ನಾನು ಚಾಪೆಯ ಡಿಸೈನು ಸೆಲೆಕ್ಟ್ ಮಾಡಿದೆನೇ ಹೊರತು. “ನನ್ನೂರ ಗುಡಿಕೈಗಾರಿಕೆಯನ್ನ ನುಂಗಲು ಬಂದ ಭೂತವೇ ತೊಲಗು” ಅಂತ ಓಡಿಸಲಿಲ್ಲ. “ ನಮ್ಮೂರ ಹಣ ನಮ್ಮೂರೊಳಗೇ ಉಳಿಯುವುದೇ ಒಳ್ಳೆಯ ಆರ್ಥೀಕತೆಯ ಲಕ್ಷಣ” ಅಂತಲೂ ಹೇಳಲಿಲ್ಲ. ಕಾರಣ ನನ್ನ ಕಾಲೇಜಿನ ಎಕನಾಮಿಕ್ಸ್ ಸಿಲಬಸ್ ನಲ್ಲಿ ಅದು ಇರಲಿಲ್ಲ. ಉಪನ್ಯಾಸಕರು ವಲ್ಡ್ ಬ್ಯಾಂಕಿನ ಬಗ್ಗೆ ಹೇಳಿಕೊಟ್ಟರು, ಭಾರತದ ಆರ್ಥಿಕತೆ ಹಿಂದುಳಿಯುವ ಕಾರಣಗಳ ಉದ್ದ ಪಟ್ಟಿಯನ್ನ ಪುಸ್ತಕದಿಂದ ಓದಿಸಿ ಉರುಹೊಡೆಸಿದರು. ಆದರೆ ಮಂದಲಿಗೆಯನ್ನು ನುಂಗುತ್ತಿರುವ ಪ್ಲಾಸ್ಟಿಕ್ ಚಾಪೆಗಳ ಬಗ್ಗೆ ಪಾಪ ಅವರಿಗೆ ಅರಿವಿರಲಿಲ್ಲ. ಹಾಗಾಗಿ ನನಗೂ.
ಹೋಗಲಿ ಬಿಡಿ. ಈಗ ಮಂದಲಿಗೆ ವಿಚಾರಕ್ಕೆ ಬರೋಣ. ಅವರೂ ಶಕ್ತಿಮೀರಿ ಗುದ್ದಾಡಿದರು. ಈರೋಡಿಗೆ ಹೋಗೋದು ತಪ್ಪಿಸಿ ಇಲ್ಲೇ ಕಡ್ಡಿ ಬೆಳೆದು ನೋಡಿದರು. ಹೊತ್ತುಕೊಂಡು ಹೋಗಿ ಸಂತೆಗಳಲ್ಲಿ ಕಾಲು ಸವೆಸಿದರೂ.. ಬೆವರು ಹರಿಸಿದರೂ.. ಹೋಗಿ ಬರುವ ಬಸ್ ಚಾರ್ಜಿನಷ್ಟು ದುಡ್ಡು ಸಿಗುತ್ತಿತ್ತೋ ಇಲ್ಲವೋ. ಹೋದ ಮಾಲೆಲ್ಲ ಹಾಗೇ ವಾಪಾಸು ಬರುತ್ತಿತ್ತು. ಎಷ್ಟೋ ಸಲ ಪಡಸಾಲೇಲಿ ಕೂತು ನಾನು ಓದುತ್ತಾ ಈ ದೃಶ್ಯ ಕಣ್ಣಾರೆ ನೋಡಿದ್ದೇನೆ. ಅಪ್ಪ ಜೊತೇಲಿ ಕೂತಿದ್ದು “ ಏನಯ್ಯಾ ಆಯ್ತಾ ಯಾಪಾರ” ಅಂದರೆ ಸಾಕು. ಅವರ ಕೋಪ, ಹತಾಶೆಗಳು, ಮೈಕೈ ನೋವುಗಳೆಲ್ಲ ಸೇರಿ ಕೆಟ್ಟ ಭಾಷೆಯಾಗಿ ರೂಪಾಂತರವಾಗುತ್ತಿತ್ತು. ಏನೆಲ್ಲ ಸರ್ಕಸ್ ಮಾಡಿದರೂ ಉಳಿಯುವುದಂತೂ ಅಸಾಧ್ಯವಾಯ್ತು.
ಒಟ್ನಲ್ಲಿ ಆಯರಳ್ಳಿಯ ಮಂದಲಿಗೆಗಳ ಸ್ಮಾಲ್ ಸ್ಕೇಲು ಇಂಡಸ್ಟರಿಯ ಬಾಗಿಲು ಸಂಪೂರ್ಣ ಮುಚ್ಚಿಯೇ ಹೋಯ್ತು.
ಇದು ಫಸ್ಟ್ ಹಾಫ್ ಆಫ್ ಮೇದರಹಳ್ಳಿಯ ಹೋಲುವ ಆಯಹಳ್ಳಿಯ ಕತೆ. ಆದರೆ ಸೆಕೆಂಡ್ ಹಾಫ್ನಲ್ಲಿ ಬದಲಾವಣೆ ಇದೆ. ಇರಲೇಬೇಕು. ಯಾಕೆಂದರೆ ಮೇದರಹಳ್ಳಿಯ ಕತೆಯ ಕಾಲ 1994. ಆ ನಂತರ ಈ ದೇಶಕ್ಕೆ ಗ್ಯಾಟ್ ಬಂತು. ಜಾಗತೀಕರಣ, ಮಾಲ್. ನರ್ಮ್ ಯೋಜನೆಗಳು. ಇವೆಲ್ಲ ಬಂದವು. ಅದೆಲ್ಲದರ ಹಿನ್ನೆಲೆಯಲ್ಲಿ ಆಯರಹಳ್ಳಿಯ ನೇಕಾರರು ಏನಾದರು.? ಹೊಟ್ಟೆಪಾಡಿಗೇನು ಮಾಡಿದರು? ಈಗ ಅವರು ಊರಲ್ಲಿ ಒಕ್ಕಲಾಗಿದ್ದಾರಾ ಅಥವಾ ಊರು ಬಿಟ್ಟೇ ಹೋದರಾ? ಎಲ್ಲಿಗೆ ಬಂದು ನಿಂತಿತವರ ಕಥೆ? ಅಂತ ಮುಂದಿನವಾರ ಹೇಳ್ತೀನಿ.
ಕುಸುಮಬಾಲೆ ಕಾಲಂ : ಇದು ಆಯರಹಳ್ಳಿಯ ಅವಸಾನದ ಕಥೆ
ನಿಮಗೆ ಇವೂ ಇಷ್ಟವಾಗಬಹುದು…
7 Comments
Trackbacks/Pingbacks
- ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಆಯರಳ್ಳಿಗೂ ಬಂತು ಸುನಾಮಿ ಕಾಸು « ಅವಧಿ / Avadhi - [...] ಚಾಪೆಗಳು ಬಂದು ಹೇಗೆ ಧೂಳೀಪಟವಾದರೆಂದು ಕಳೆದವಾರ ಹೇಳಿದ್ದೆ. ಅದರ ಮುಂದುವರೆದ ಭಾಗವಿದು. ಈ [...]

Ho ega heege halligalalli hale sampradaya ooliyudo kasta aagide baraha channagirtave titlallu channagaite
ಊ… ಕಣವ್ವಾ. ನೀನ್ ಇಂಗೇ ಯೋಳ್ತಾ ಇದ್ರೆ… ನಾವ್ ಕ್ಯೋಳ್ತಾ ಇರ್ತೀವಿ. ನಾನು ನಿಮ್ಮಾಯರಳ್ಳಿ ನೋಡಿರಾದ್ರಿಂದ ನೀನೇಳಿದ್ದೆಲ್ಲ ಕಣ್ ಮುಂದೆ ಕಟ್ತದೆ.
ಈ ಲೇಖನ ತುಂಬಾ ಚೆನ್ನಾಗಿದೆ ಅಂತ ಹೇಳುವುದಾ ? ಆ ಆಯರಹಳ್ಳಿಯ ಮಂದಲಿಗೆ ಬಂದಿರುವ ಗತಿ ನೋಡಿ ವ್ಯರ್ಥ ವ್ಯಥೆ ಪಡುವುದಾ ?
ನಾಟಕಕಾರ ಪ್ರಸನ್ನರವರು ಹೇಳುವಂತೆ
೧) ಈ ಪ್ಲಾಸ್ಟಿಕ್ ತಯಾರಿಸುವಾಗ ಆಗುವ ಪರಿಸರದ ನಷ್ಟದ ಬಾಬ್ತು
೨) ಈ ಪ್ಲಾಸ್ಟಿಕ್ ನಮ್ಮ ಮನೆ ತಲುಪವರೆಗೆ ಆಗಿರುವ ಪರಿಸರದ ನಷ್ಟದ ಬಾಬ್ತು
೩) ಈ ಪ್ಲಾಸ್ಟಿಕ್ ಬಳಕೆ ನಂತರ ಮಾಡುವ ಪರಿಸರದ ನಷ್ಟದ ಬಾಬ್ತು
೪) ಇದರಿಂದ ಜೀವನ ಕಳ್ಕೊಂಡು ಬೇರೆ ಜೀವನ ನಡೆಸಲು ಸರ್ಕಾರಕ್ಕೆ ಆಗುವ ನಷ್ಟದ ಬಾಬ್ತು
೫) ಈ ಹಳ್ಳಿ ಜನಗಳೆಲ್ಲ ಪೇಟೆಗೆ ಬಂದು ಅದಕ್ಕೆ ಸರ್ಕಾರಕ್ಕೆ ಆಗುವ ನಷ್ಟದ ಬಾಬ್ತು
೬) ಈ ಪೇಟೆಗಳಿಂದ ಇದ್ದ ಜನರ ವಲಸೆ ನಷ್ಟದ ಬಾಬ್ತು
ಇದೆಲ್ಲ ಲೆಕ್ಕ ಹಾಕಿ ಪ್ಲಾಸ್ತಿಕ ಚಾಪೆ ಬೆಲೆ ಹಾಕಿದರೆ ನಮ್ಮ ಹಳ್ಳಿ ಬೆಲೆಗಿಂತ ತುಂಬಾ ಮೇಲೆ ಇರಬಹುದು
ಈ ಮೇಲಿನ ಅರ್ಥಿಕ ಪ್ರಮೇಯ ಮೂರು ಕಾಸಿಗೂ ಬೆಲೆ ಇಲ್ಲವೇನೋ
ಮುಂದಿನ ವಾರದ ಲೇಖನಕ್ಕೆ ಕಾಯುತ್ತಿದ್ದೇನೆ……
ಚಿಂತನಾರ್ಹ ಬರಹ.ಮೊದಲು ತಾನು,ನಂತರ ಬೀದಿ,ತದನಂತರ ಹೋಬಳಿ,ಗ್ರಾಮ,ತಾಲ್ಲೂಕ್ಕು,ಜಿಲ್ಲೆ.ಹೀಗೆ
ಬುಡದಿಂದ ಆಗುವ ಪರಿಣಾಮಗಳ ಬಗ್ಗೆ. ನಮ್ಮ ಶಾಲಾ ಪಠ್ಯದಲ್ಲಾಗಲಿ,ಕಾಲೇಜು ಪಠ್ಯಗಳಲ್ಲಾಗಲಿ,ನನ್ನ ಆಗಿನ ಓದಿನ ಮಿತಿಗೆ ಸಿಗಲಿಲ್ಲವೋ.?ಅಥವ ಪಠ್ಯದ ರೀತಿಯೆ ಆಗಿತ್ತೋ.?ಎನ್ನುವ ಅನೇಕ ಪ್ರಶ್ನೆಗಳು ನನ್ನನ್ನು ಈಗಲೂ ಕಾಡುತಿರುತ್ತವೆ.ಕೇವಲ ರಾಷ್ಟ್ರೀಯ ನೀತಿ. ಬಹುರಾಷ್ಟ್ರೀಯ ಕಂಪನಿಗಳ ಉಪಯೋಗ, ದುರುಪಯೋಗ. ಹಕ್ಕುಗಳು.ಯಾವೊಂದು ಅರ್ಥವಾಗದೆ,ತಲೆಕೆರೆದು ಕೊಂಡು ಊಹ್..ಗುಡುತಿದ್ದದ್ದು ನೆನಪಾಗುತ್ತದೆ.ತೇಜಸ್ವಿಯವರ
ಜುಕಾರಿಕ್ರಾಸ್ ಕೃತಿಯ,ಮೇದರ ಹಳ್ಳಿ. ಅಲ್ಲಿನ ಬಿದಿರು. ಬಿದಿರಕ್ಕಿ ಬಿಡುವ ಹಂತಕ್ಕೆಬಂದಾಗ,ತನ್ನಅವಸಾನವನ್ನು ತಾನೆ ಹೇಗೆ ತಂದುಕೊಳ್ಳುತ್ತದೆ.ಪ್ಲಾಸ್ಟಿಕ್ ಬ್ಯಾಗುಗಳು,ಬಿದಿರ ಚೀಲಗಳನ್ನು, ಹೇಗೆ ತನ್ನ ಅಗಾಧ ಬಾಯಿಯ (ಜಾಗತೀಕರಣ)ಚೀಲದಲ್ಲಿ ಆಪೋಷಿಸಿಕೊಳ್ಳುತ್ತದೆ. ಎಂಬುದು ನಿಮ್ಮ ಆಯರಹಳ್ಳಿಯ ಮಂದಲಿಗೆಗಳಿಗೂ ಪೂರಕವಾಗಿದೆ.ಭೂತಾಳೆ,ಕತ್ತಾಳೆ ಕಡ್ಡಿಗಳನ್ನು,ತಮಿಳುನಾಡಿನ
ಇರೋಡಿನಿಂದ,ಆಮದು ಮಾಡಿಕೊಂಡು,ಮಂದಲಿಗೆ ತಯಾರಿಸುತಿದ್ದದ್ದು. ತದ ನಂತರ ತಾವೇ ಬೆಳೆಯಲು ಹೈರಾಣಾಗಿದ್ದು.ಈ ಎಲ್ಲ ಘಟನೆಗಳು ನೆನೆದಾಗ ನನ್ನ ಅನುಭವಕ್ಕೆ ದಕ್ಕಿದ್ದೇನೆಂದರೆ.ಈ ಸ್ಪರ್ಧಾ ಜಗತ್ತಿನಲ್ಲಿ ಉಳಿಯುವವರಾರು?ಉಳಿಯಬೇಕಾದವನ ಅರ್ಹತೆಗಳೇನು?ಡಿಸ್ಕವರೀ ಚಾನೇಲ್ಸ್ ನೀತಿಯೇ!ಎಂಬ ಪ್ರಶ್ನೆ ಮೂಡಿ ಮರೆಯಾಗುತ್ತದೆ.ಮತ್ತಲವು ಪ್ರಶ್ನೆಗಳು ಹಾಗೆ ಉಳಿದುಬಿಡುತ್ತವೆ.ಅವೆಂದರೆ,ಬೀದಿ,ಏರಿಯಾ,ಹೋಬಳಿ,ಗ್ರಾಮ; ಬಿಟ್ಟು.ನಮಗೆ ಹೇಳಿಕೊಟ್ಟ.ದೇಶಿ,ವಿದೇಶಿ ಮಟ್ಟದ ಪಾಠಗಳು.ಬಹುರಾಷ್ಟ್ರೀಯ ಕಂಪನಿಗಳ ಉಪಯೋಗಗಳು ಮತ್ತು ದುರುಪಯೋಗಗಳು! ಬೇಕಿತ್ತಾ?ಅನಿಸಿಬಿಡುತ್ತವೆ.
ತುಂಬ ಒಳ್ಳೆಯ ವಿಷಯ..ನಮ್ಮ ಮನೆಯಲ್ಲೂ ಪ್ಲಾಸ್ಟಿಕ್ ಚಾಪೆ ಇದೆ..ಅದೂ ಮಡಚಿ
ತಿಜೋರಿ ಮೇಲೆ ಇಟ್ಟಿದೆ..ಹಲವು ಸಂಗತಿಗಳ ಒಳಗು ನಿಮ್ಮ ಲೇಖನ ತೆರೆದುಬಿಡುತ್ತದೆ..
ಅಭಿನಂದನೆಗಳು..!
thumba sogasagide