ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ : ಅದಿರಲಿ, ನಿಮ್ಮ ಆದರ್ಶ ವ್ಯಕ್ತಿ ಯಾರು?

ನಿಮ್ಮ ಆದರ್ಶ ವ್ಯಕ್ತಿ ಯಾರು? ಮಿಡ್ಲ್ಲ್ ಸ್ಕೂಲಿನ, ಅದರಲ್ಲೂ ಗೌರ್ಮೆಂಟ್ ಮಿಡ್ಲ್ ಸ್ಕೂಲಿನ ಮಕ್ಕಳನ್ನ ಕೇಳಿ ನೋಡಿ, ಅವರು ಫೋಟೋದಲ್ಲೋ, ಪ್ರತಿಮೆಯಲ್ಲೋ, ಪುಸ್ತಕದಲ್ಲೋ, ಮಾತ್ರ ನೋಡಬಹುದಾದ ವ್ಯಕ್ತಿಗಳ ಹೆಸರನ್ನೇ ಹೇಳುತ್ತಾರೆ. ಶಾಲೆಯಲ್ಲಿ ಪರವಾಗಿಲ್ಲ, ಲಾ ಕಾಲೇಜಿನ ಮೊದಲ ದಿನದ ಮೊದಲ ಕ್ಲಾಸಿನಲ್ಲಿ, “ನಿಮ್ಮ ಆದರ್ಶ ವ್ಯಕ್ತಿ ಯಾರು?” ಅಂತ ಪ್ರೊಫೆಸರರು ಕೇಳಿದ ಪ್ರಶ್ನೆಗೆ ಎಲ್ಲರೂ ಫೋಟೊ,ಪ್ರತಿಮೆ, ಮತ್ತು ಇತಿಹಾಸದ ಪುಟದೊಳಗೆ ಕೂತ ವ್ಯಕ್ತಿಗಳ ಹೆಸರು ಹೇಳಿದ್ದೇ ಹೆಚ್ಚು.
ಆದರ್ಶ, ಆದರ್ಶ ವ್ಯಕ್ತಿ ಈ ಪದಗಳೇ ಕ್ಲೀಷೆಯಾಗಿರುವ ಹೊತ್ತಲ್ಲೂ , ಆ ಬಗ್ಗೆ ಮಾತಾಡುವ ಉಮೇದು ಬಂದಿದೆ.ಮತ್ತು ಮಾತಾಡಬೇಕಾದುದು ದರ್ದಾಗಿದೆ. ಆದರ್ಶವ್ಯಕ್ತಿಗಳೆಂದರೆ, ಸಾಮಾನ್ಯವಾಗಿ ಅವರು ನಮ್ಮ ಕಣ್ಣಿಗೆ ಸಿಗದವರೇ ಆಗಿರುತ್ತಾರೆ. ಅವರ ಮೇಲೆ ಕೆಲವು ಪವಾಡಗಳನ್ನೂ, ವೈಭವೀಕರಣ ಲೇಪಿತ ಕತೆಗಳನ್ನೂ ಹೇರಲಾಗಿರುತ್ತದೆ. ಅವರು ಸಾಮಾನ್ಯವಾಗಿ ತಪ್ಪನ್ನೇ ಮಾಡುವುದಿಲ್ಲ. ಮತ್ತು ಅವರು ಅದಾಗಲೇ ಫೋಟೋ ಫ್ರೇಂ ಸೇರಿಯಾಗಿರುತ್ತದೆ. ಹೋಗಲಿ ಬಿಡಿ, ನಾವು ಮಾಮೂಲಿನ ಹಾಗೆ, ನಮ್ಮನಿಮ್ಮಂತ ಸಾಮಾನ್ಯರ ಬಗ್ಗೆ, ಅವರ ಕತೆಗಳ ಬಗ್ಗೆ ಮಾತಾಡೋಣ.
“ಇಲ್ಯಾಕೆ ಮನೆ ಮಾಡಿದೀರಾ? ಬುದ್ದಿ ಇಲ್ವ ನಿಮಗೆ? ಪಕ್ಕದಲ್ಲೆ ಜೆ ಎಸ್ ಎಸ್ ಆಸ್ಪತ್ರೆ. ಅಲ್ಲಿಗ್ ಬರೋರೆಲ್ಲ ಸಾಮಾನ್ಯವಾಗ್ ನಿಮ್ಮೂರವರು ಅಕ್ಕಪಕ್ಕದ ರವರು. ಬಂದೋರೆಲ್ಲ ಬಿಸಿನೀರು, ಕಾಫಿ, ಊಟ ತಿಂಡಿ, ಸ್ನಾನ ಅನ್ಕೊಂಡ್ ಬಂದ್ರೆ, ಖರ್ಚೆಷ್ಟಾಗತ್ತೆ ಗೊತ್ತಾ? ಆಮೇಲ್ ನೀವೇನ್ ಉಳಿಸ್ತೀರಾ? ಹೋಗ್ಲಿ ಕೈ ತುಂಬ ಸಂಬಳ ಬರತ್ತಾ?ಮೊದ್ಲು ಮನೆ ಬದಲಾಯಿಸಿ” ನನ್ನದೇ ಭಾಷಣ ಇದು. ಮಗಳು ಪಿಯುಸಿಗೆ ಬಂದಿದ್ದಾಳೆ ದಿನವೂ ಹಳ್ಳಿಯಿಂದ ಕಾಲೇಜಿಗೆ ಓಡಾಡೋದು ಕಷ್ಟವಾಗುತ್ತದೆ ಅಂತ ನನ್ನ ಸೋದರಮಾವನ ಕುಟುಂಬ ಮೈಸೂರಿಗೆ ಶಿಫ್ಟ್ ಆಯಿತು.ಸಣ್ಣ ಸಂಬಳ ಅವರಿಗೆ. ಮೇಲೆ ಶೀಟು ಹೊದೆಸಿದ ಒಂದು ಮನೆ ಹಿಡಿದಿದ್ದರು. ಈ ಮನೆ ಮಗಳ ಕಾಲೇಜು ನಿಮ್ಮ ಆಫೀಸಿಗೆ ಹತ್ತಿರ ಸರಿ. ಆದ್ರೆ ಈ ಆಸ್ಪತ್ರೆ ಜನರ ಕಾಟಕ್ಕೇನ್ ಮಾಡ್ತೀರ? ಕೇಳಿದೆ. “ದಿನಾ ಯಾರ್ ಬತ್ತಿದ್ರು ಬುಡು ಕುಸ್ಮ.” ಅಂದಳು ಅತ್ತೆ.
ಈ ನನ್ನ ಅತ್ತೆ ಶಾಲೆಗೆ ಹೋಗೇ ಇಲ್ಲ. ಮಾದಯ್ಯನಹುಂಡಿ ಅನ್ನುವ ತೀರಾ ಸಣ್ಣ ಹಳ್ಳಿಯವಳು. ಅವರೂರು, ಆಸ್ಪತ್ರೆಗೆ ಪಕ್ಕದೂರು, ಜಾತ್ರೆ ದಿನ ನಂಜನಗೂಡು. ಇದು ಬಿಟ್ಟು, ಮದುವೆಯವರೆಗಿನ ಎರಡು ದಶಕಗಳ ಕಾಲ ಬೇರೆ ಊರೇ ನೋಡದವಳವಳು. ಅವರ ಹಳ್ಳಿಯಾಚೆಗಿನ ಜಗತ್ತು ತಿಳಿಯದವಳು. ಒಂದೇ ಒಂದು ಸಿನೆಮಾ ಹೆಸರೂ ಗೊತ್ತಿಲ್ಲದವಳು. ಗಂಡ ಎಷ್ಟು ದುಡಿಯುತ್ತಾನೆ? ಅದರಲ್ಲಿ ಎಷ್ಟು ಉಳಿಸಬೇಕು? ಮುಂದೆ ಇಬ್ಬರು ಹೆಣ್ಣುಮಕ್ಕಳ ಭವಿಷ್ಯವೇನು? ಯೋಚಿಸಬೇಕು. ಆದರಿವಳು ಮಹಾ ಉದಾರಿ. ಆಸ್ಪತ್ರೆಗೆ ಪಕ್ಕದಲಿ ಮನೆ. ದೇವ್ರೇ ಗತಿ ಅಂತ ಗೊಣಗಿಯೇ ಗೊಣಗಿದ್ದೆ.
ಇದಾಗಿ ಒಂದು ತಿಂಗಳು ತುಂಬಿತ್ತೋ ಇಲ್ಲವೋ. ಬಿಚ್ಚಿ ನೋಡಲಾಗದ ಬದುಕ ಬುತ್ತಿ ತನ್ನ ಮುಂದಿನ ಅಧ್ಯಾಯದ ಅಚ್ಚರಿ ತೆರೆಯಿತು. ಅಪ್ಪ ಆಸ್ಪತ್ರೆ ಸೇರಿದರು. ಹೃದ್ರೋಗ, ಕರುಳ ಸಮಸ್ಯೆ ಎರಡೂ .. ಇಲ್ಲಿ ರಿಪೇರಿಗೆ ನಿಂತರೆ ಅಲ್ಲಿ ಕೆಡತ್ತೆ ,ಅಲ್ಲಿರಿಪೇರಿಗೆ ನಿಂತರೆ ಇಲ್ಲಿ ಕೆಡತ್ತೆ. ಪ್ರತಿ ಗಂಟೆಗೂ ಡಾಕ್ಟರುಗಳಿಂದ ಹೊಸ ಹೊಸ ಬ್ರೇಕಿಂಗ್ ನ್ಯೂಸು. ಸುಮಾರು 15 ದಿನ. ನಮ್ಮ ಕುಟುಂಬ, ನೋಡಲು ಬರೋರು ಹೋಗೋರು ಎಲ್ಲರಿಗೂ ಆ ಮನೆಯೇ ಬೇಕಾಯ್ತು. ಅತ್ತೆ ಒಂದಿಷ್ಟೂ ಬೇಸರಿಸಿಕೊಳ್ಳಲಿಲ್ಲ.ಹಗಲೆಲ್ಲ ಬಂದವರ ಊಟ, ಉಪಚಾರ ನೋಡಿ, ನಡುರಾತ್ರಿವರೆಗೂ ಆಸ್ಪತ್ರೆಯಲ್ಲೇ ಇರುತ್ತಿದ್ದಳು. ಈ ಮಧ್ಯೆ ನಮ್ಮ ದೊಡ್ಡಪ್ಪ ಹೋಗಿಬಿಟ್ರು. ಡಿಸ್ಚಾರ್ಜ್ ಮಾಡಿಸಿಕೊಂಡು ಊರಿಗೆ ಕರ್ಕೊಂಡು ಹೋಗೋಕಾಗಲ್ಲ ಅಂತ ಅಪ್ಪ ಮೈಸೂರಲ್ಲೆ ಅತ್ತೆ ಮನೆಲೇ ಉಳಿದರು. ನಾವು ರಜೆಗಳ ಗಡಿಮೀರಿ ಡಿಸ್ಚಾರ್ಜಿಗೂ ಮುಂಚೆಯೇ ಬೆಂಗಳೂರಿಗೆ ಮರಳಿದ್ದೆವು. ಅತ್ತೆ ಅಪ್ಪನನ್ನು ನೋಡಿಕೊಂಡಳು. ಸ್ವಲ್ಪವೂ ಬೇಜಾರಿಲ್ಲದೇ. ಆಸ್ಪತ್ರೆಗೆ ಬರೋ ಜನರ ಕಾಟದ ಲಿಸ್ಟಿನಲಿ, ನಮ್ಮದೇ ಮೊದಲ ಸಹಿಬಿದ್ದಿತ್ತು!!
ಯುನಿವರ್ಸಿಟಿಯಲ್ಲಿ ಕಲಿತ, ಮೂರು ಮೂರು ಡಿಗ್ರಿ ಸರ್ಟಿಫಿಕೇಟುಳ್ಳ ನಾನು, ಗಣಿತ ಯೋಚಿಸಿದ್ದೆ, ಭವಿಷ್ಯ ಯೋಜಿಸಿದ್ದೆ. ಅನಕ್ಷರಸ್ಥೆ ಅವಳು, ಕ್ಯಾಲುಕುಲೇಟರು ನೋಡದವಳು ನನಗೆ ಸಮಾಜ ವಿಜ್ಞಾನದ ಪಾಠ ಕಲಿಸಿದ್ದಳು. ಅವಳ ಆಸ್ಪತ್ರೆ ಜನಸೇವೆ ಈಗಲೂ ಮುಂದುವರೆದಿದೆ.
ನನ್ನ ಸಂಬಂಧೀ ಅಣ್ಣನೊಬ್ಬನಿದ್ದಾನೆ. ಹಳ್ಳಿಯ ಸಾಮಾನ್ಯ ರೈತ. ಬೇಕಷ್ಟು ಜಮೀನಿದೆ. ಅವನು ನಯಾಪೈಸೆ ವರದಕ್ಷಿಣೆ ಇಲ್ಲದೇ ಮದುವೆಯಾದ. ಮಾವನ ಮನೆಯವರು ಕೊಟ್ಟ ಒಂದು ಶರ್ಟ್ ಪೀಸ್ ಅನ್ನೂ ಇಟ್ಟುಕೊಳ್ಳದೇ , ಅವರಿಗೇ ಹಿಂದಿರುಗಿಸಿದ.ಬದಲಾಗಿ, ಹೆಣ್ಣು ಕೊಟ್ಟ ಮಾವನ ಕೈಗೇ ಉಂಗುರ ತೊಡಿಸಿದ. ಇದೇನೋ ಭಾರೀ ಘನಂಧಾರೀ ಕೆಲಸ ಅನ್ನುವಂತೆ ಅವನು ಢಂಗುರ ಹೊಡೆಯಲಿಲ್ಲ. ಊರವರೊಂದಿಗೆ, ನೆಂಟರೊಂದಿಗೆ ಯಾರೊಂದಿಗೂ ಒಂದು ಮಾತೂ ಹೇಳಿಕೊಳ್ಳಲಿಲ್ಲ.ಎಂದಿನಂತೆ ತನ್ನ ಪಾಡಿಗೆ ತಾನಿದ್ದುಬಿಟ್ಟ. ನಮ್ಮ ಪಕ್ಕದೂರಿನ ಹುಡುಗನೊಬ್ಬ, ಆಸ್ಪತ್ರೆ ಸೇರಿದ ಗೆಳೆಯನನ್ನ ನೋಡಲು ನರ್ಸಿಂಗ್ ಹೋಂ ಒಂದಕ್ಕೆ ಹೋದಾಗ, ಡಾಕ್ಟರರ ಸಹಾಯಕಿಯಾಗಿದ್ದ ಹುಡುಗಿಯ ಪರಿಚಯವಾಯ್ತು. ಅವಳು ಈ ಆಸ್ಪತ್ರೆಯ ಕಡಿಮೆ ಸಂಬಳದಲ್ಲೆ ಉಳಿಸಿ, ಕೂಡಿಸಿ, ಒಬ್ಬಳು ಅಕ್ಕ, ಒಬ್ಳು ತಂಗಿ ಇಬ್ಬರಿಗೂ ಮದುವೆ ಮಾಡಿ, ತಮ್ಮನನ್ನೂ ಓದಿಸುತ್ತಿದ್ದಳು. ಅಂತಾ ಮುಖಸುಂದರಿಯೇನಲ್ಲ, ಹೃದಯಸುಂದರಿ. ಅವನೂ ಒಬ್ಬನೇ ಮಗ. ಜಮೀನ್ದಾರನೇ , ಕೋಟಿಕುಳ ಅನ್ನಲಡ್ಡಿಯಿಲ್ಲ. ಇವಳ ನೋಡಿ ಮೆಚ್ಚಿದ. ಅಕ್ಕತಂಗಿಯರ ಮದುವೆಗೆ ಆ ಹುಡುಗಿ ಮಾಡಿದ್ದ ಸಾಲ ತೀರಲು ಅವಳು ಆರು ವರ್ಷ ದುಡಿಯಬೇಕಿತ್ತು. ಅದನ್ನೆಲ್ಲ ನಾನೇ ತೀರಿಸುತ್ತೇನೆಂದ. ಸ್ವಾಭಿಮಾನದ ಹುಡುಗಿ, ನಿನ್ನ ಖರ್ಚಿನಲ್ಲಿ ನಾನು ಮದುವೆಯಾಗುತ್ತೇನೆ. ನನ್ನ ಅಕ್ಕತಂಗಿಯರ ಹೊಣೆ ನನ್ನದೆಂದಳು. ಆರು ವರುಷ ದುಡಿದಳು. ಅವನೂ ಕಾದ, ಈಗವಳು ದೊಡ್ಡ ಮನೆ ಸೊಸೆ. ಅವರಿಬ್ಬರನ್ನೂ ನೋಡಿದಾಗೆಲ್ಲ ಛಲ,ಮತ್ತು ಹೃದಯವಂತಿಕೆಗಳೆರಡನ್ನೂ ಒಟ್ಟಿಗೇ ನೋಡಿದಂತಾಗುತ್ತದೆ.

ಮೊನ್ನೆ ಬಸ್ಸಲ್ಲಿ ಒಬ್ಬರು ಸಿಕ್ಕಿದ್ದರು, ಕೊಡಗಿನ ಕಡೆಯ ಹೆಂಗಸು. ಕೊಡಗಿನ ಕಿತ್ತಳೆಯಂತದೇ ಬಣ್ಣ. ಗಂಡನಿಲ್ಲ. ಮಗಳು ಮದುವೆ ಮಾಡಿಕೊಂಡು ಅಮೆರಿಕೆಯಲ್ಲಿದ್ದಾಳೆ. ಅವರು ಮಾತ್ರ ಒಂದು ದಿನವೂ ಮನೆ ಬಿಟ್ಟು ಹೋಗುವಂತಿಲ್ಲ. ಕಾರಣ ಅವರ 32 ವರ್ಷದ ಮಗ. ಐದನೇ ವಯಸಿನ ವರೆಗೆ ಚೆನ್ನಾಗಿದ್ದವನು , ಮುಂದೆ ಬೆಳೆಯಲಿಲ್ಲ. ವಯಸು 32 ಆದರೂ ಬುದ್ದಿ ಆರೇಳು ವರುಷದ ಹುಡುಗನದು. ಇಷ್ಟು ವರುಷವೂ ಆಕೆ ಪ್ರತಿದಿನ ನಿತ್ಯಕರ್ಮ, ಸ್ನಾನದಿಂದ ಹಿಡಿದು, ಮಗನ ಪ್ರತಿಯೊಂದು ಕೆಲಸವನ್ನೂ ಮಾಡುತ್ತಾ ಬಂದಿದ್ದಾರೆ. ಸ್ವಲ್ಪವೂ ಬೇಸರವಿಲ್ಲದೇ. ನಿನ್ನಿಂದ ನನಗೆ ಸುಖವಿಲ್ಲ, ಸಾಧನೆಯಿಲ್ಲ ಎಂದು ದೂರದೇ, ಆ ಅದೇ ಪ್ರೀತಿಯಿಂದ. “ಮಾಡಲೇಬೇಕಲ್ಲಮ್ಮ, ಅವನಿರೋಷ್ಟು ದಿನ, ಅಥವಾ ನಾನಿರೋಷ್ಟು ದಿನ” ಅಂದದ್ದು ಯಾವತ್ತಿಗೂ ಮರೆತುಹೋಗದ, ಮರೆಯಬಾರದ ಮಾತಾಗಿ ಉಳಿದುಬಿಟ್ಟಿತು. ಯಾವ ಲೌಕಿಕ ಪ್ರಯೋಜನಕ್ಕೂ ಬಾರದ ಮಗನ ಸೇವೆಗೆ ಇಡೀ ಬದುಕನ್ನೇ ಕೊಟ್ಟುಬಿಟ್ಟಿದ್ದಾರೆ, ಈ ಅಮ್ಮನನ್ನು ನೋಡಿ ಕಣ್ಣು ತುಂಬಿ ಬಂತು. ಇವರದು ನಿಸ್ವಾರ್ಥದ, ಸಾರ್ಥಕ ಬದುಕು.
ಇನ್ನೊಂದು ಪುಟ್ಟ ಘಟನೆ ಹೇಳುತ್ತೇನೆ. ಸುಮಾರು 8 ವರ್ಷಗಳ ಹಿಂದೆ ಮೈಸೂರಿನಲ್ಲಿ ಮಕ್ಕಳಿಗಾಗಿ ಒಂದು ಶಿಬಿರ ನಡೆಸಿದ್ದೆವು. ಸಂಘಟಕರೊಬ್ಬರು, ತನ್ನ ಕಾರ್ಖಾನೆ ಕೆಲಸಕ್ಕೆ ಸಂಬಳ ರಹಿತ ರಜೆಗಳನೂ ಹಾಕಿ ಓಡಾಡಿದ್ದರು. ಶಿಬಿರ ಮುಗಿದ ಮರುದಿನ, ಅವರೊಂದು ಅಂಗಡಿಯ ಬಳಿ ನಿಂತಿದ್ದರು. ಮಾತಾಡಿಸಲು ಹೋದಾಗ, ತಮ್ಮ ಬ್ಯಾಗಿನಿಂದ ಎರಡು ತೆಂಗಿನಕಾಯಿ, ಒಂದು ಪ್ಯಾಕೆಟ್ ಅಡುಗೆ ಎಣ್ಣೆ, ಉಪ್ಪು ಇತ್ಯಾದಿಗಳನ್ನು ಕೊಡುತ್ತಿದ್ದರು. ಅಂಗಡಿಯವನು ಅದನ್ನು ತೆಗೆದುಕೊಂಡು ದುಡ್ಡು ಕೊಟ್ಟ. ವಿಚಾರಿಸಿದಾಗ, ಅವೆಲ್ಲ ಶಿಬಿರಕ್ಕೆಂದು ಕೊಂಡಿದ್ದ ಸಾಮಾನಿನಲ್ಲಿ ಮಿಕ್ಕಿದ್ದು, “ಮನೆಗೇ ತಗೊಂಡುಹೋಗಬಾರದಿತ್ತಾ? ಹೋಗಲಿ, ಅದೇನು ಮೂಟೆಗಟ್ಟಲೆ ಸಾಮಾನೇನಲ್ಲ. ನೀವೆಷ್ಟು ಸಮಯ, ಹಣ ಎಲ್ಲ ಹಾಕಿದ್ದೀರಲ್ಲ. ತಪ್ಪೇನಿದೆ?” ಅಂದರೆ, ಅವರು ಒಪ್ಪಲಿಲ್ಲ. ನಾಕು ಜನರ ಕಾಸು , ಲೆಕ್ಕಾ ಪಕ್ಕಾ ಇರಬೇಕು ಅಂದರು.
ಎಲ್ಲ ಸಾಮಾನ್ಯನೊಳಗೂ ಒಬ್ಬ ಅಸಾಮಾನ್ಯನಿದ್ದಾನೆ. ಮತ್ತು ಎಲ್ಲ ಅಸಾಮಾನ್ಯನೊಳಗೂ ಒಬ್ಬ ಸಾಮಾನ್ಯನಿದ್ದಾನೆ. ನಿಸ್ವಾರ್ಥ, ಪ್ರೀತಿ, ಸ್ವಾಭಿಮಾನ, ಪ್ರಾಮಾಣಿಕತೆ ಎಷ್ಟೆಲ್ಲ ಪಾಠಗಳು, ಎಂತೆಲ್ಲ ನಡೆಯ ಜನಗಳಿದ್ದಾರೆ ಸುತ್ತ. ಹ್ಞಾ, ಇದ್ದಾರೆ ನಮ್ಮೆಲ್ಲರ ಸುತ್ತಲೂ, ಕಣ್ಣು ತೆರೆದು ನೋಡಬೇಕಷ್ಟೆ.
ಇವತ್ತು ಜೀವಂತವಿದ್ದವರೇ ನಾಳೆ ಫೋಟೋ ಪ್ರೇಮೋಳಗೆ ತೂರುವುದು, ಪ್ರತಿಮೆಯಾಗಿ ನಿಲ್ಲುವುದು. ನಾವು ಯಾರನ್ನು ಉನ್ನತ ಸ್ಥಾನದಲ್ಲಿಟ್ಟು ಆದರ್ಶವೆಂದು ಆರಾಧಿಸುತ್ತಿದ್ದೇವೋ, ಅವರ ವ್ಯಕ್ತಿತ್ವದ ಔನ್ನತ್ಯ, ಚಿಂತನೆಗಳು, ಆಲೋಚನಾಕ್ರಮ ಭಿನ್ನವಿದೆ. ಎತ್ತರವಿದೆ. ಅವರು ಎಲ್ಲರಂತಲ್ಲ, ನಿಜ . ಆದರೆ, ನಮ್ಮ ಹಾಗೆ ಅವರೂ ನಿತ್ಯತಕರ್ಮ ಮಾಡುತ್ತಿದ್ದರು ಅನ್ನುವುದೂ ಅನುಮಾನವಾಗುವ ಹಾಗೆ, ಪುರಾಣದ ದೇವರೇ ಮನುಷ್ಯರೂಪದಲ್ಲಿ ಬಂದು ಆದರ್ಶವ್ಯಕ್ತಿಗಳಾಗಿದ್ದಾರೆ ಅನ್ನುವಂತೆ, ವಿಪರೀತದ ಬಿಲ್ಡ್ಪಪ್ಪುಗಳನ್ನು ಕೊಟ್ಟು, ನಾವೂ ಆದರ್ಶವ್ಯಕ್ತಿಗಳನ್ನು ನೋಡಬಹುದು, ಅಥವಾ ನಾವೇ ಆದರ್ಶಗಳಾಗಬಹುದು ಅನ್ನುವ ಕಲ್ಪನೆಯನ್ನೂ ನಾಟ್ ರೀಚಬಲ್ ಮಾಡಿಟ್ಟುಬಿಟ್ಟಿದ್ದು ಯಾರ ತಪ್ಪು? ಬೆಟ್ಟದ ಘನತೆ ಬೆಟ್ಟಕ್ಕೆ ಇರುತ್ತದೆ ಸರಿ, ಆದರೆ, ದೂರದ ನುಣ್ಣಗಿನ ಬೆಟ್ಟ ತೋರಿಸಿ, ಹೋಗುವ ಕಲ್ಪನೆಯನ್ನೂ, ಬೆಟ್ಟದ ಮೆಟ್ಟಿಲನ್ನೂ ಮುಚ್ಚಬಹುದೇ?
ಇದ್ಯಾವುದರ ಹಂಗು, ಅರಿವು, ಭ್ರಮೆ ಯಾವುದೂ ಇರದ ಜನದ ಸಂಖ್ಯೆ ಕೋಟಿಯಿದೆ ಈ ದೇಶದಲ್ಲಿ. ಜೊತೆಗೊಂದು ಅಜ್ಞಾನವೂ. ಮುಂದಿನ ತಿಂಗಳ ಹೊತ್ತಿಗೆ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಗ್ರಾಮದೇವತೆ ಹಬ್ಬಗಳನ್ನು ಮಾಡುವ ಸಮಯ. ಅವಕಾಶ ಸಿಕ್ಕರೆ, ಸುಮ್ಮನೆ ಕಣ್ಣಾಡಿಸಿ, ಒಂದೊಂದು ಕೇರಿಯಲೂ ಬೋರ್ಡು ಬ್ಯಾನರುಗಳು. ಆ ಕೇರಿಯ ಬೋರ್ಡಿನಲಿ ಕಾಣುವ ಮಹಾಪುರುಷನಿಗೆ ಈ ಕೇರಿಯ ಬ್ಯಾನರಿನಲಿ ನೋ ಎಂಟ್ರಿ. ಮತ್ತು ಇವರಿಗೆ ಅಲ್ಲಿ. ಫ್ರೇಮ್‍ನಲ್ಲಿರುವವರಿಗೆ ಮತ್ತೊಂದು ಫ್ರೇಮ್. ಪ್ರತಿಮೆಗಳ ಸುತ್ತ ಕಟ್ಟೆ,ಮತ್ತು ಗೇಟು. ಸರಳವೆಂದು ಹಿಡಿದು ಹೊರಟ ಆದರ್ಶದ ಹಗ್ಗ, ಯಾಕೋ ಗಂಟಾಗಿ, ಸಂಕೀರ್ಣವಾಗಿಹೋಯಿತು. ಬಿಡಿಸಿಕೊಳ್ಳಬೇಕಿದೆ. ಕತ್ತರಿಸದಂತೆ. ಕುತ್ತಿಗೆಯ ಉರುಳಾಗದಂತೆ.
ಇವತ್ತಿನ ಮೀಡಿಯಾ, ಸೋಶಿಯಲ್ ಮೀಡಿಯಾ ಜಾತ್ರೆಯ ನಡುವೆ, ಆದರ್ಶವ್ಯಕ್ತಿಗಳ ಸ್ಥಿತಿ ತಪ್ಪಿಸಿಕೊಂಡ ಮಗುವಿನಂತದು. ಒಂದು ಹೆಸರು ಟೈಪಿಸಿದರೆ ಪಾಸಿಟಿವ್, ನೆಗೆಟಿವ್ ಎರಡೂ ಕಥೆಗಳ ಪುಟಗಳು. ಸತ್ಯ ಯಾವುದು ಸುಳ್ಳು ಯಾವುದು? ಭಟ್ಟರ ಹಾಡಿನ “ಯಾವನಿಗ್ ಗೊತ್ತು?” ಇನ್ನು ಮೂರ್ನಾಕು ತಲೆಮಾರುಗಳ ನಂತರ, ಮಕ್ಕಳಿಗೆ “ಖ್ಯಾತ” ಮಹಾವ್ಯಕ್ತಿಗಳ ಬಗ್ಗೆ ಪ್ರಬಂಧ ಬರೆಯಿರಿ ಅಂತ ಹೇಳಿ, ಅವರು ಗೂಗಲ್ಲಿನಲ್ಲಿ ಹುಡುಕಿ,ಅಡ್ಡಪ್ರಶ್ನೆ ಕೇಳಿದರೆ, ಮೇಷ್ಟರು, ಮೇಡಮ್‍ಗಳು ತಂದೆ ತಾಯಿಗಳು ಏನು ಹೇಳಬೇಕೋ. ಅದಕ್ಕೇ ಆದರ್ಶಗಳನು ಆಕಾಶದಲಿ ಹುಡುಕುತ್ತಾ ಕಣ್ಣುನೋಯಿಸಿಕೊಳ್ಳದೇ, ಆಕಾಶಕ್ಕೆ ಕೈಮುಗಿದು, ನಕ್ಷತ್ರಗಳ ಹೊಳಪು ಹಿಡಿದು, ಅಕ್ಕಪಕ್ಕದಲಿ ಬೆಳಕ ಹುಡುಕಿದರೆ, 500 ಕ್ಯಾಂಡಲ್ ಬಲ್ಬ್ ಅಲ್ಲದಿದ್ದರೂ ಪುಟ್ಟ ಹಣತೆಯಾದರೂ ಸಿಗಬಹುದು. ಸಿಕ್ಕೇಸಿಗುತ್ತವೆ.
ಮುಂದಿನ ಸಲ ಹೋದಾಗ ನಿಮ್ಮ ನಿಮ್ಮ ಊರುಗಳ, ಸ್ಕೂಲುಗಳ (ಆದರ್ಶಗಳ) ಸರ್ವೆ ಮಾಡೋದನ್ನ ಮರೆಯಬೇಡಿ.
 

‍ಲೇಖಕರು G

24 February, 2015

ನಿಮಗೆ ಇವೂ ಇಷ್ಟವಾಗಬಹುದು…

8 Comments

  1. Prabhakar M. Nimbargi

    Role models are amongst, besides, & nearby us. We fail to recognise them. Most commonly, the good deeds of ‘small’ persons & the ill deeds of so called ‘big’ persons are forgotten easily. Thanks.

  2. ಲಕ್ಷ್ಮೀಕಾಂತ ಇಟ್ನಾಳ

    ಕುಸುಮಾ ಜಿ ಪ್ರತಿ ವಾರವೂ ಅಚ್ಚರಿಯ ಬರಹವೊಂದರಿಂದ ಚುಚ್ಚುತ್ತಾರೆ, ಚಚ್ಚುತ್ತಾರೆ, ಸಮಾಜದ ಪದರುಗಳನ್ನು ಬಿಚ್ಚಿ ತೋರುತ್ತಾರೆ, ನಿಜಕ್ಕೂ ಸಮಾಜಚಿಂತನ, ಸಮಾಜದ ಒಳಮನಸನ್ನು ಇವರಷ್ಟು ಅರ್ಥಮಾಡಿಕೊಳ್ಳುವವರು ಬಹಳ ಕಡಿಮೆ. ಬಹಳ ವಿಚಾರಪೂರ್ಣ ಬರಹ. ನಮ್ಮಗಳ ಸುತ್ತಲೇ ಇರುವವರಲ್ಲೆ ಹಲವಾರು ಹೆಸರುಗಳು ಕಣ್ಣುಮುಂದೆ ಚಲಿಸಿದವು, ಹೌದಲ್ಲ ಅನಿಸಿದವು!

  3. ಡಾ.ಶಿವಾನಂದ ಕುಬಸದ

    ಮತ್ತೊಂದು ಚೆಂದದ ಬರಹ…!!
    ನಮ್ಮ ಸುತ್ತಲಿನ ಪುಟ್ಟ ಘಟನೆಗಳನ್ನು ಆದರ್ಶಗಳ ಚೌಕಟ್ಟಿನಲ್ಲಿ ಜೋಡಿಸಿ ಮೆರುಗು ನೀಡಿದ್ದೀರಿ..
    ನಿಮ್ಮ ಬರವಣಿಗೆಯಲ್ಲಿ ಲಾಲಿತ್ಯವಿದೆ, ಮುದನೀಡುವ ವಿವರಗಳಿವೆ…
    ಓದಿದೊಡನೆ , ಅರೆ ಹೌದಲ್ಲ ..ಎಂದು ಮೆಚ್ಚುಗೆಯ ಅಚ್ಚರಿ ಮೂಡುತ್ತದೆ…
    ಅಭಿನಂದನೆ, ಕುಸುಮಾರವರೆ.

  4. sindhu

    ಕುಸುಂ
    ಈ ವಾರದ ಚುಚ್ಮದ್ದು ಭೋ ಪಸಂದಾಗದೆ. ಇದು ಅವಾಗವಾಗ ಹಾಕಿಸ್ಕೊಳ್ಳಲೇಬೇಕಾದ ವ್ಯಾಕ್ಸಿನೇಷನ್ ಅನ್ಸುತ್ತೆ.
    ನನಗಂತೂ ನಮ್ ಮುಂದಿನ ಪೀಳಿಗೆಗೆ “ಆದರ್ಶ” ಎನ್ನುವುದರ ವ್ಯಾಖ್ಯಾನ ಮತ್ತು ವ್ಯಾಕರಣ ಎರಡೂ ಗೊತ್ತೇ ಇರೋಲ್ಲ ಅನ್ಸುತ್ತೆ. ಅವ್ರೆಲ್ಲ ಏನಿದ್ರೂ ಆಗಿಂದಾಗ ಅಪ್ಡೇಟ್ ಆಗುತ್ತಾ ಇರೋ ವರ್ಶನ್ನುಗಳು. ನನ್ನ ಸುತ್ತಲಿನ ಜನಕ್ಕೆ ಸ್ಪಂದಿಸಬೇಕು ಎನ್ನುವಷ್ಟು ಸೌಜನ್ಯದಲ್ಲಿ ಸಭ್ಯತೆಯಲ್ಲಿ ಅವರು ಬೆಳೆದರೆ ಅಷ್ಟು ಸಾಕು.
    ಹಾಗಂತ ನಾವು ಅಮ್ಮಂದ್ರು ಸುಮ್ನೆ ಬಿಡಕ್ಕೂ ಆಗಲ್ಲ. ನಂಗೆ ಇಷ್ಟ ಆಗೋಗಿದ್ದ ಎಲ್ಲರನ್ನೂ ಎಲ್ಲವನ್ನೂ ಕತೆ ಕಟ್ಟಿ ಕಟ್ಟಿ ಹೇಳಿ ಸುಸ್ತು ಮಾಡ್ತಾ ಇರ್ತೀನಿ ನನ್ ಮಗಳನ್ನ. 🙂 ಒಂದ್ ಸಮಾಧಾನ ಅಂದ್ರೆ ಅವ್ರಲ್ಲಿ ಎಷ್ಟೋ ಜನ ಯಾವ ಫ್ರೇಮಲ್ಲೂ ಇಲ್ಲ. ಇಲ್ಲಿ ಒಳಗೆ ನಾನು ನಡೆದು ಬಂದ ದಾರಿಯ ತುಂಬ ಇದ್ದ ಹಣತೆಗಳು, ಆ ಹಣತೆಗಳು ಆರದಂತೆ ಮರೆಯಾದ ಕೈಗಳು… ದೀಪ ಹಚ್ಚಿರದ ಬಯಲಲ್ಲಿ ದೂರಕ್ಕೆ ಮಿನುಗಿದ ಚುಕ್ಕಿಗಳು.
    ಥ್ಯಾಂಕ್ಸ್ ಕುಸುಂ.. ನಂಗಿಷ್ಟ ಆದ ಒಂದಷ್ಟೂ ಜನ ಎಲ್ಲ (ಬಾಂಬೆ ಸಿನ್ಮಾ ಡಬ್ಬಿ ಥರ) ಕೆಲಿಡೋಸ್ಕೋಪಿಕ್ ಆಗಿ ಒಂದ್ ನಾಕ್ ನಿಮ್ಷ ಕಣ್ಮುಂದೆ ಬಂದು ಹೋದ್ರು.
    ನನ್ನ ದೊಂಬರಾಟದ ಬದುಕಿನ ದಿನದಲ್ಲಿ ಇದು ಒಂದು ಆತ್ಮೀಯ ಘಳಿಗೆ.
    ಪ್ರೀತಿಯಿಂದ,
    ಸಿಂಧು

  5. ಮಮತ

    ಬಿಚ್ಚಿ ನೋಡಲಾಗದ ಬದುಕ ಬುತ್ತಿ ” ಹಾಗೆ ನಿಮ್ಮ ಲೇಖನಿಲಿ ಇನ್ನೂ ಅದೆಷ್ಟು ಸೊಗಸಾದ ಭಾವ ಲಹರಿಗಳಿವೆಯೋ. ಮತ್ತೊಮ್ಮೆ ಮೆಚ್ಚುಗೆಯ ಬರಹ. ನಮ್ಮ ನಡುವಿದ್ದೂ ನಮ್ಮೊಳಗೆ ಹೊಕ್ಕದೇ ಇರುವ ಹಲವಾರು ಅಂಶಗಳಿಗೆ ಹೊಸ ರೂಪ ಕೊಡ್ತಿದೀರಿ. ಸೊ ನೈಸ್.

  6. vidyashankar

    Kusuma, neeve namage adarsha 🙂

  7. ಸುಗುಣ ಮಹೇಶ್

    ಎಂದಿನಂತೆ ಅದ್ಭುತ ಬರಹ.

  8. Anil Talikoti

    ಜೀವನದ ಅತೀ ದೊಡ್ಡ ಪಾಠವಿದು, ವಿದ್ಯೆ ಹಣವಂತರನ್ನಾಗಿಸುತ್ತಿದೆ, ಹೃದಯವಂತರನ್ನಲ್ಲ -“ಯುನಿವರ್ಸಿಟಿಯಲ್ಲಿ ಕಲಿತ, ಮೂರು ಮೂರು ಡಿಗ್ರಿ ಸರ್ಟಿಫಿಕೇಟುಳ್ಳ ನಾನು, ಗಣಿತ ಯೋಚಿಸಿದ್ದೆ, ಭವಿಷ್ಯ ಯೋಜಿಸಿದ್ದೆ. ಅನಕ್ಷರಸ್ಥೆ ಅವಳು, ಕ್ಯಾಲುಕುಲೇಟರು ನೋಡದವಳು ನನಗೆ ಸಮಾಜ ವಿಜ್ಞಾನದ ಪಾಠ ಕಲಿಸಿದ್ದಳು.” ಬರಹ ತುಂಬಾ ಇಷ್ಟವಾಯಿತು ಕುಸುಮಾ ಅವರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading