“ನೋಡಿ ಕಲರ್ ಚೆನ್ನಾಗಿದ್ದುದಾ? ಅಣ್ಣಯ್ಯ ತಂದಿರದು ಮೈಸೂರಿಂದ” ಚಿನ್ನಕ್ಕ ಗಂಡನ ಮುಂದೆ ಹಿಡಿದಳು. ಗಂಡ ನೋಡಿ, “ಚೆನ್ನಾಗದ ಕಣ್ ಮಡಗು” ಅಂದರು. ಅವಳು ಬಟ್ಟೆ ತೋರಿಸಿದಳೋ.. ಬೇಕಂತ ಅದರಲಿ ಅಂಟಿಸಿದ್ದ ಬಿಲ್ನ ಮುಂದೆ ಮಾಡಿದಳೋ, ಒಟ್ಟಿನಲಿ. ಅವಳ ಅಣ್ಣ ರಜೆಗೆ ಬಂದ ತನಗೆ ಮತ್ತು, ತನ್ನ ಮಗನಿಗೆ ಚೆಂದದ ಸೀರೆ, ಬಟ್ಟೆ ತಂದನೆಂದು ಗಂಡನಿಗೆ ಹೇಳುವುದು ಮುಖ್ಯ ಅಷ್ಟೆ. ಕವರಿಗೆ ಹಾಕುವಾಗ “ಮಡಿಕಂಡ್ ಏನ್ಮಾಡಿಯೇ, ಇಕ್ಕು” ಅಂದರೂ ಕೇಳುವುದಿಲ್ಲ. ಬಿಲ್ ಸಮೇತ ಅವಳದನ್ನ ಅತ್ತೆ, ಓರಗಿತ್ತಿಯರಿಗೂ ತೋರಿಸಬೇಕಿದೆ. “ಕೊಳ ಮೆತ್ಗತನ ಸುಮ್ನಿರಿ ಅಬ್ಬಕ್ ಇಕ್ಕಿದರಾಯ್ತು “ ಅಂತ ಒಳಗಿಟ್ಟುಕೊಳ್ತಾಳೆ.
ಮತ್ತೆ ಈ ತವರಿನ ಫ್ಯಾಮಿಲಿ ಅಲ್ಲಿಗೆ ಹೋದಾಗಲೂ ಗಂಡ ತಂದನೆಂದು ಸೀರೆಯನೂ. ಮಕ್ಕಳಿಗೆ ಬಟ್ಟೆಯನೂ ತೊಡಿಸಿ ಕಳಿಸ್ತಾಳೆ.ಆದರೆಅಸಲಿ ವಿಷಯ ಏನಪ್ಪ ಅಂದರೆ, ಇಲ್ಲಿ ತವರವರಾಗಲೀ, ಅಲ್ಲಿ ಗಂಡನಾಗಲೀ ಕಾಸು ಕೊಟ್ಟು ಬಟ್ಟೆ ತಂದಿರುವುದೇ ಇಲ್ಲ.ಇಲ್ಲೂ ಕಷ್ಟ. ಅಲ್ಲೂ ಕಷ್ಟ. ಎಲ್ಲರಿಗೂ ಅವರವರ ಸಂಸಾರದ್ದೇ ದೊಡ್ಡ ಗೋಳು, ಇನ್ನು ಹೀಗೆ ಬಟ್ಟೆ ಬರೆ ಕೊಡಿಸೋ ಸ್ಥಿತಿ ಯಾರ್ಯಾರಿಗೂ ಇರಲಿಲ್ಲ. ಆದರೆ ಚಿನ್ನಕ್ಕನ ಕಷ್ಟವೇ ಬೇರೆ ಥರದ್ದು. ಇವಳನ್ನೂ ಸೇರಿ ಗಂಡನ ಮನೇಲಿ ನಾಕು ಜನ ಸೊಸೇರು. ಅವರೆಲ್ಲ ಮಕ್ಕಳನ್ನ ತವರಿಗೆ ರಜೆಗೆ ಕಳಿಸಿ, ಬರ್ತಾ ಅಣ್ಣ ತೆಗೆಸಿಕೊಟ್ಟ, ಅಪ್ಪ ತೆಗೆಸಿಕೊಟ್ಟಅಂತ ಹೇಳಿಕೊಂಡು ಬಟ್ಟೆ ತಗೊಂಡು ಬರೋವಾಗ. ಇವಳು ತವರಿನ ಮಾನ ಉಳಿಸಬೇಕಲ್ಲ? ಅದಕ್ಕೇ ಈ ಟ್ರಿಕ್ಕು, ಗಂಡನ ಹತ್ತಿರ ಬಿಂದಿ, ಹೇರ್ ಪಿನ್ನು ರಿಬ್ಬನ್ನು ಅಂತಲೋ, ಸೀರೆಯ ಪೆಟಿಕೋಟು ತಗೋಬೇಕು ಅಂತಲೋ, ಇನ್ನೆಲ್ಲಿಗೋ ಹೋಗುವಾಗ ಬಸ್ಚಾರ್ಜ್ ಅಂತಲೋ ಇಸಕೊಂಡ ದುಡ್ಡಲ್ಲೆ ಉಳಿಸುತ್ತಾಳೆ. ಎರಡೂ ಕಡೆ ತಾನು ಕಾಸಿಗೆ ಕಾಸು ಸೇರಿಸಿ ಕೂಡಿಸಿದ ಹಣದಲೇ ಎರಡೂ ಕಡೆಯ ಬಟ್ಟೆ ಕೊಂಡು, ಎರಡೂ ಮನೆಯವರ ದೃಷ್ಟಿಯಲಿ ಪರಸ್ಪರರ ಗೌರವ ಹೆಚ್ಚಿಸಲು ಹೆಣಗಾಡುತ್ತಾಳೆ.
ಬಟ್ಟೆಬರೆ ವಿಷಯಕ್ಕೆ ಮಾತ್ರವಲ್ಲ, ಇನ್ನೂ ಅದೆಷ್ಟೋ ವಿಷಯಗಳಲ್ಲಿಹೀಗೇ.. ಇಲ್ಲಿ ಮುರಕೊಂಡು ಬಿದ್ದಿರೋ ತವರಿನ ಆರ್ಥಿಕ ಸ್ಥಿತೀನ ಅಲ್ಲಿ ಹೊಗಳ್ತಾಳೆ. ಬಡ್ಡಿಗೆ ಸಾಲ ಮಾಡಿರೊ ಅಣ್ಣನಿಗೆ ತಿಂಗಳಾ ಬಡ್ಡಿ ಬರತ್ತೆ ಅಂತ ಕಥೆ ಕಟ್ಟಿ ಅತ್ತೆ, ಓರಗಿತ್ತಿಯರೆದುರು ಬೀಗುತ್ತಾಳೆ. ಇಲ್ಲಿ ಬಂದಾಗ “ನನ್ ಮೈದುನ ನಿಮ್ ಮಗಳ ಮದ್ವೆ ನಾನೇ ಮಾಡ್ತೀನಿ ಅಂತಾನೆ”. ಅಂತಲೋ.. “ನಮ್ಮತ್ತೆ ಒಂದ್ ಮಾತಾಡಲ್ಲ ಪಾಪ, ಹಿರಿ ಸೊಸೆ ಅಂತ ಒಸಿ ನನ್ ಕಂಡ್ರೇ ಇಷ್ಟ” ಅಂತಲೋ , “ಬರಕೇಳು ಕುಸು, ನಿಮ್ಮಣ್ಣನ ಮಕ್ಕಳ, ಇದ್ದೋಗ್ಲಿ ಒಸಿ ಜಿನ” ಅಂದ್ರು ಅಂತಲೋ ಸುಳ್ಳು ಹೇಳುತ್ತಾ, ತವರ ಜಗಲಿ ಹೆಂಗಸರ ತಲೆಆಡಿಸುವಂತೆ ಪುಂಗಿಯೂದಿ, “ ಏನೋ ಬುಡು ತಾಯಿ, ಒಳ್ಳಿ ಗಂಡನ ಮನೆ ಸೇರ್ಕೊಂಡೆ” ಅಂತನ್ನಿಸಿಕೊಂಡು, ಭುಜ ಹಾರಿಸುತ್ತಾಳೆ. ಅವಳ ಮದುವೆಯಾದಾಗಿಂದ, (ಸುಮಾರು ಇಪ್ಪತ್ತು ವರ್ಷಗಳ ಮೇಲಾಗಿರಬೇಕು,) ನೋಡುತ್ತಲೇ ಇದ್ದೇನೆ. ಇಲ್ಲಿ ಅಲ್ಲಿ, ಎಲ್ಲ ಸೇರಿ, ತೂಕಕ್ಕೆ ಹಾಕಿದರೆ ಕ್ವಿಂಟಾಲುಗಟ್ಟಲೆ ತೂಗಬಹುದಾದಷ್ಟು ಬರೀ ಸುಳ್ಳುಗಳು!!
ಆ ಹುಡುಗಿಯೋಕಪ್ಪಾತಿಕಪ್ಪು. ಕಣ್ಣು ಮೂಗೇನೋ ನೇರ. ಆದರೆ ಬಣ್ಣ ಮಾತ್ರ ಇದ್ದಿಲ ಮಸಿ. ಗಂಡುಗಳು ಬರೋವೆಷ್ಟೋ, ಹೋಗವೆಷ್ಟೋ, ಹೆಣ್ನೋಡೋ ಸೀಜನ್ಸುರುವಾದ್ರಂತೂ, ದೇವನೂರ್ಮಠದ್ ಒಲೆ ಉರಿದಂಗೆ ಹುಡುಗಿ ಮನೇಲೂ ನಿರಂತರ ಟೀಸೊಪ್ಪು ಬೇಯುತ್ತಿತ್ತು. ಗಂಡು ಬಂದು ಹೋಗ್ತಿದ್ದಂಗೇ “ಯಾವೂರವರ ಬಂದ್ದಿದ್ದವರೂ” ಅಂತರಾಗ ಆಡ್ಕಂಡ್ಬಂದು ಸೇರ್ಕತ್ತಿದ್ರು ಅಕ್ಕ ಪಕ್ಕದ ಎಂಗಸರು. ಮನೆಯ ಚಾಲಾಕಿ ಅಜ್ಜಿ “ಅಯ್ಯೋ ಆರೆಕರಗದ್ದ ಇದ್ದದಂತ. ಏಡ್ಜೊತ ಎತ್ತಗಳಿದ್ದವಂತ. ಇಬ್ಬರೇ ಗಂಡ ಮಕ್ಕಳಂತ. ನೀವ್ಮದ್ವ ಮಾಡ್ಕೊಡ್ಳೇಬೇಕು ಅಂತಗ್ವಾಗರಿತರ.” ಅನ್ನೋರು. ಮತ್ತೆ ಒಂದು ವಾರವೋ ಹದಿನೈದು ದಿನವೋ ಬಿಟ್ಟು ಕೇಳಿದರೆ. “ಅಯ್ಯೋ ನನ್ಮಗ ಓಗ್ನೋಡ ಕಂಡ್ಬಂದ. ಗದ್ದ ಏನೋ ಇದ್ದದಂತ ಆದ್ರ ಅದು, ಹುಡುಗನ ಸ್ವಾದರ ಮಾವನ ಎಸರಲ್ಲಿದ್ದದಂತ, ಎಂಗ್ ನಂಬದು? ನಾಳ ಜಿನ ಅವರ್ ಸ್ವಾದರ ಮಾವ, ನಾ ಏನ್ ನಿನ್ ಉಟ್ಸಿದ್ನಾ? ಆಸ್ತಿಯಾಕ್ಬರ್ಕೊಡ್ಲಿ ಅಂದ್ಬಿಟ್ರೆ?ಅದ್ಕೇ ಬ್ಯಾಡನಾವ್ ಎಣ್ಕೊಡಲ್ಲ ಅಂದ್ಬುಟ್ಟೋ”. ಅಂತ ಹೇಳಿದರೆಂಬಲ್ಲಿಗೆ, ಒಂದು ಗಂಡು ಪುರಾಣ ಮುಗಿಯುತ್ತಿತ್ತು.. ನನಗೆ ನೆನಪಿರುವ ಹಾಗೇ ಐವತ್ತಕ್ಕೂ ಮೀರಿರಬೇಕು ಗಂಡುಗಳ ಸಂಖ್ಯೆ. ಅಷ್ಟೂ ಗಂಡುಗಳು ಬಂದಾಗಲೂ ಬಾಯಿ ಮೇಲ್ಬೆಳ್ಮಡಿಕೊಳೋವಂತೆ ಬಂದವನ ಮನೆತನದ ಕಥೆ ಹೇಳಿ ಬಿಲ್ಡಪ್ಪು ಕೊಡೋದು. ಆಮೇಲೆ ನೋಡಿಕೊಂಡು ಹೋದ ಗಂಡುಗಳು ಮತ್ತೆ ಉತ್ತರ ಹೇಳದಿದ್ದಾಗ, ಅಜ್ಜಿ ತಾನೆ ಹೇಳಿದ ಕಥೆಗೆ ಹೊಸ ಟ್ವಿಸ್ಟು ಕೊಟ್ಟು, ಗಂಡಿನ ಮನೆಯ ಯಾವುದೇ ತೂತು ತೊಳ್ಳೆಗಳ ಹೇಳಿ, ಇಂತಿಂತಾ ಕಾರಣದಿಂದಾಗಿ ನಾವೇ ಹೆಣ್ಣು ಕೊಡಲ್ಲ ಅಂದೆವು ಅನ್ನುತ್ತಿತ್ತು.!! ಈಗ ಆ ಅಜ್ಜಿ ಇಲ್ಲ ಬಿಡಿ. ಇದ್ದಿದ್ದರೆ ಗ್ಯಾರಂಟಿ ಟಿವಿ ಸೀರಿಯಲ್ ಒನ್ಲೈನ್ಮಾಡಲು ಆಫರ್ಕೊಡುತ್ತಿದ್ದೆ. ಖಂಡಿತ ಸಾವಿರ ಎಪಿಸೋಡುಗಳ ಸರದಾರಿಣಿಯಾಗಿರುತ್ತಿದ್ದಳು.

“ಅತ್ತೆ ಏನೋ ಸರಿ. ಗಂಡಅನ್ನಿಸ್ಕಂಡವಾನ್ರೂ ಓಯ್ತಾ ಬತ್ತಾ ಇರಬಾರ್ದಾ?” ಗಂಡ ಬಿಟ್ಟ ಹುಡುಗಿಯ ಬಗ್ಗೆ ಕೇಳಿ. ಬಿಟ್ಟವನನ್ನ ಹೀನಾಮಾನ ಬೈಯೋಕೆ ಶುರುಮಾಡಿದರೆ, ಹುಡುಗಿಯ ಅಮ್ಮ ಬಾಯಿಹಾಕ್ತಾಳೆ. “ಅಯ್ಯೋ ಅಂವ ಬರೋಂಥವನೇ ಅಂತೆ. ಹೆಂಡತಿ ಕಂಡ್ರೆ ಆಸೆಯೂ ಇದ್ದುದಂತೆ. ಆಧ್ರೆ ಇವರತ್ತೆ ಮುಂಡೆ ಅವಳಲ್ಲಾ… ಮಗನಿಗೇ ಮಾಟ ಮಾಡಿಸಿಬುಟ್ಬುಟ್ಟಿದಳಂತೆ. “ಇತ್ತಲ ಗ್ಯಾನವೇ ಆಗಂದಂಗೆ ಹಂದಿ ಕ್ಯುಯ್ಸಿ ಮಾಟನ ಮಾಡ್ಸಳಕನಮ್ಮ ಅಂತ ಬುದ್ದಿಯವರೇಯೊಳುದ್ರಲ್ಲ. ಮೂರ್ಸತಿಕ ವಡಬುಟ್ಟಾಗ್ಲೂ ಅದೇ ಬಂತು. ಇಂತವರಿಗೇನ್ಮಾಡಿರಿಯೋಳಿ ಮತ್ತ?” ಅಂತ ಪ್ರಶ್ನೆ ಎಸೆಯುತ್ತಾರೆ. ಒಂದು ಭರ್ಜರಿ ಸುಳ್ಳು ಅಳಿಮಯ್ಯನನ್ನ ರಕ್ಷಿಸಿಬಿಡುತ್ತದೆ. ಅವನು ಶ್ರೀರಾಮಚಂದ್ರನಿಗಿಂತ್ಲೂ ಒಂದು ಕೈಮೇಲೆಯೇ ಆದ್ರೇನ್ಮಾಡದು? “ಹಾಳು ಮಾಟದ ಏಟು, ಅವನಾಬರಾಕ್ಬುಡೊಲ್ದು” ಅಂದುಬಿಡುತ್ತಾರೆ. ಹುಡುಗಿಯ ಪಾಲಿಗೂ , ಊರವರ ಪಾಲಿಗೂ ಅವನು ಅಮಾಯಕ.
ಇನ್ನೊಂದು ಕತೆಯಿದೆ. ಇನ್ನೆಂತಾ ಹಸಿಸುಳ್ಳು ಅಂತೀರಿ, ಅವಳು ಕಾಲಿಲ್ಲದ ಹುಡುಗಿ, ಕಾಲಿಲ್ಲವೆಂದ ಮಾತ್ರಕ್ಕೇ ಹೃದಯವಿರಬಾರದೆಂದಿಲ್ಲ, ಭಾವನೆಗಳಿರಬಾರದೆಂದಿಲ್ಲ. ಆಶೆಗಳಿರಬಾರದೆಂದಿಲ್ಲ. ಆದರೇನು ಮಾಡೋದು? ಅವಳನ್ನ ನೋಡಲು ಬಂದ ಗಂಡುಗಳಿಗೂ ಸಮಾಜಕ್ಕೂ ಹಾಗೇ ಅನ್ನಿಸಿರಬೇಕು. ಹೆಣ್ಣುನೋಡೋರಿಗೆ “ಮುಸುಡಿಯೇ ಮಾನದಂಡ” ಕಣ್ಣಿಗೆ ಪ್ರೈಮಾಫೇಸೀ ಕಾಣತಕ್ಕ ಐಬುಗಳಿದ್ದರೆ ಹೈಲೀ ರಿಜೆಕ್ಟೂ.. ಒಟ್ಟಿನಲಿ ಹುಡುಗಿಗೆ ಮದುವೆಯಾಗಲಿಲ್ಲ. ಮೂರು ತಮ್ಮಂದಿರು ಮದುವೆಯಾದರು. ಅವಳು ಹಾಗೇ ಉಳಿದು ಹೋದಳು. ತಾಯಿ ಮಗಳು ಬೇರೆ ಮನೆ ಮಾಡಿಕೊಂಡರು. ಮೂವತ್ತೈದು ದಾಟುತ್ತಿದ್ದಂತೆಯೇ ಯಾಕೋ ಅವಳು ತುಸು ದಪ್ಪಗಾಗತೊಡಗಿದಳು. ಆಗಾಗ ಜ್ವರ ಬರುತ್ತಿತ್ತು.
ಊರೊಳಗೆ ಒಬ್ಬ ಮಲಿಯಾಳೀ ಡಾಕ್ಟರು ಬಂದು ಸೇರಿಕೊಂಡಿದ್ದ. ಖಾಲಿಯಿದ್ದ ಮನೆಯೊಂದರಲಿ ಬಾಡಿಗೆಗಿದ್ದ. ಅದು ಅವನ ಮನೆ ಕಂ ಕ್ಲಿನಿಕ್ಕು. ಯಾಕೋ ಸುಸ್ತು ಸಂಕಟ ಅನ್ನುತ್ತಾ ಬಂದ ಕಾಲಿಲ್ಲದ ಹುಡುಗಿಯ ಪರೀಕ್ಷಿಸಿ ಕಳಿಸಿದ. ಅವಳ ನಂತರ ಬಂದವರು ‘ಏನಾಗಿದ್ದು ಡಾಕ್ಟರೆ” ಅಂತ ಕೇಳಿದಾರೆ, ಡಾಕ್ಟರಿಗೆ ಪಾಪ ಹಿಂದೆ ಗೊತ್ತಿಲ್ಲ ಮುಂದೆ ಗೊತ್ತಿಲ್ಲ. “ಎಂತ ಇಲ್ಲೆ, ಗೂಡ್ನ್ಯೂಸ.. ಪ್ರೆಗ್ನೆಂಟ್ ಆಯೂ…. ಏಜ್ ಆದ ಮೇಲೆ ಆಯ್ತಲ್ಲವಾ..ಸುಸ್ತುಜಾಸ್ತೀ.” ಅಂತ ಮಲಿಯಾಳೀ ಆಕ್ಸೆಂಟಿನಲಿ ಹೇಳಿಬಿಟ್ಟ. ಸುದ್ದಿ ಹರಡತೊಡಗಿತು.
“ಅದೇನೋ ಒಸಿಕರ್ಕೊಂಡ್ ಓಗ್ಮೈಸೂರ್ಲಿತೋರ್ಸದಲ್ವ?” ಜಿನ ಜಿನಕೂ ಒಟ್ಟ ಬಸಿರಿ ಒಟ್ಟ ಅಂಗ್ ಊದ್ತಾ ಕೂತದಲ್ಲ? ಅಂತ ಡಾಕ್ಟರ್ಹೇಳಿದ ನಿಜ ಬಲ್ಲವರು ಬಾಣ ಬಿಡುತ್ತಿದ್ದರೆ, ಅವಳಿನ್ನೂ ಅನ್ಮ್ಯಾರೀಡು ಅಂತ ಗೊತ್ತಾಗಿ, ತಾನು ಮಾಡಿದ ಪ್ರಮಾದದ ಅರಿವಾಗಿ, ಡಾಕ್ಟರಿಗೆ ಒಳಗೇ ಅಳುಕ-ಕುಳಕ ಆಗುತ್ತಿತ್ತು. ಒಂದಿನ ಬಸ್ಸತ್ತಿ ಹೊರಟ ತಾಯೀ ಮಗಳು ಹದಿನೈದು ದಿನಬಿಟ್ಟು ಬಂದರು.“ಏನಾಗಿತ್ತು” ಅಂತ ಕೇಳಿದವರಿಗೆ “ಐ ಒಟ್ಟಲಿ ನೀರ್ತುಂಬ್ಕಂಡಿತ್ತಂತ. ಅಡ್ಮಿಟ್ಮಾಡಿ ವಾಸಿ ಮಾಡ್ತೀವಿ ಅಂದ್ರು. ಎಷ್ಟ್ಯೋಳುದ್ರೂ ಕ್ಯೋಳಲ್ಲ. ಮಡಿ ಮಡಿ ಅನ್ಕಂಡು ಮೂರೊತ್ತು ನೀರಗ್ಕೈಆಕಂಡ್ಕೆಲ್ಸ ಮಾಡ್ತಳ. ಅದಕ ಸೀತ ಸೇರ್ಕಂಡಿತ್ತಂತ. ಒಸಿ ಜಿನ ನೀರ್ನೇ ಮುಟ್ಟಿಸ್ಬೇಡಿ ಅಂತ ಯೋಳರ ಡಾಕ್ಟರು” ಅನ್ನುವ ಒಂದು ಮಹಾ ಸುಳ್ಳು ಡೈಲಾಗನ್ನ ಎಷ್ಟು ಜನ ಬಂದು ಕೇಳಿದರೂ ಹೇಳಿದಳು. ಮಲಿಯಾಳೀ ಡಾಕ್ಟರು ಮಾತಾಡಲಿಲ್ಲ.
ಎದುರಿಗಿದ್ದವರು ಇದನ್ನೆಲ್ಲ ನಂಬುತ್ತಿದ್ದರಾ?ಅನ್ನುವ ಅನುಮಾನ ಇರಲೇ ಕೂಡದು. ನಾನು ನಂಬಿಸುತ್ತಿದ್ದೇನೆ ಅವರು ನಂಬುತ್ತಿದ್ದಾರೆ. ಅನ್ನುವ ಇನ್ನಿಲ್ಲದ ಆತ್ಮ ವಿಶ್ವಾಸದಿಂದಲೇ ಸುಳ್ಳಾಡಬೇಕು. ಅವರು ನಂಬದಿದ್ದರೆ? ನಾನಿಲ್ಲದಾಗ ಇವೆಲ್ಲ ಸುಳ್ಳು ಅಂತ ನಿಜದ ಕಥೆ ಹೇಳಿಕೊಂಡು ಮಾತಾಡಿಕೊಂಡರೆ? ಅಂತ ಯೋಚಿಸೋಕೆ ಹೋದರೆ ಊರಲ್ಲಿ ಬಾಳಲಾಗಲ್ಲ. ಯಾರು ಯಾರನ್ನೂ ಫೇಸ್ಮಾಡಲಾಗಲ್ಲ. ಹಾಗಾಗಿಯೇ ಎಲ್ಲರೂ ಎಲ್ಲರಿಗೂ ಸುಳ್ಳು ಹೇಳುತ್ತಾ, ಎಲ್ಲರೂ ಎಲ್ಲರೆದುರಿಗೂ ಅದನ್ನು “ಖಂಡಿತಾ ನಂಬಿದ್ದೇವೆ” ಅಂತ ನಟಿಸುತ್ತಲೇ ಇರುತ್ತಾರೆ. ಆಕ್ಷನ್, ಕಟ್ ಇಲ್ಲದೇ…
ಇವೆಲ್ಲ ಹಳ್ಪಳ್ಳಿ ಬದುಕಿನ ಸುಳ್ಳುಗಳು.“ ನಾನ್ಯಾಕೆ ಫೇಕ್ ಆಗಿ ಬದುಕಲಿ? ಯಾರನ್ನೋ ಮೆಚ್ಚಿಸಲು ಯಾಕೆ ಸುಳ್ಳು ಹೇಳ್ಳಿ? ನಾನಿರೋದೇ ಹೀಗೆ. ಬೇಕಾದ್ರೆ ಒಪ್ಕೊಳಿ ಬೇಡಂದ್ರೆ ಬಿಡಿ.” ಅನ್ನುವ ಮೈನ್ಸ್ಟ್ರೀಮಿನ “ಸೊಫೆಸ್ಟಿಕೇಟೆಡ್ಸುಳ್ಳು” ಇವರಾಡುವುದಿಲ್ಲ. “ನನ್ನ ಅಸ್ತಿತ್ವ ಈ ಸುಳ್ಳುಗಳ ಮೇಲೆ ನಿಂತಿದೆ. ನಿಜವಾಗಿ ನನ್ನ ಒಳಗಿರುವ ನಾನು ಯಾರು? ಅಲ್ಲಿಯ ನಿಜವೇನು?” ಅಂತೆಲ್ಲ ತರ್ಕ ಮಾಡುವಷ್ಟು ವಿಧ್ಯೆಯೂ ಅವರಿಗಿಲ್ಲ. ಆ ತರ್ಕವಿದ್ದರೆ ಸುಳ್ಳು ಸಂತೋಷ ಕೊಡುತ್ತಿರಲಿಲ್ಲ.
ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗಾ.. ಅಂತ ನಮ್ಮೂರ ಗೌರ್ರ್ಮೆಂಟ್ಸ್ಕೂಲಿನಲೂ ಹಾಡುತ್ತಾರೆ ಮಕ್ಕಳು. ಸಿಲಬಸ್ನಲ್ಲಿದೆ ಹಾಡುತ್ತಾರೆ. ಆದರೆ ಬದುಕು ಸಿಲಬಸ್ನಷ್ಟು ಸುಲಭವೂ ಅಲ್ಲ. ಬರುವುದು ವರ್ಷಕ್ಕೊಂದು ಪರೀಕ್ಷೆಯೂ ಅಲ್ಲ.
ಇಷ್ಟಕ್ಕೂ ಇವೆಲ್ಲ ಯಾರಿಗೂ ಅಪಾಯ ಮಾಡದ ಸುಳ್ಳುಗಳು. ಆತ್ಮವಿಶ್ವಾಸ ತುಂಬುವ ಸುಳ್ಳುಗಳು, ತರ್ಕ ಮೀರಿದ ಸುಳ್ಳುಗಳು. ಪ್ರತಿ ದಿನವೂ ಅದೇ ಬೀದಿ ಅದೇ ಮುಖಗಳನು ಮತ್ತೆ ಮತ್ತೆ ಫೇಸ್ಮಾಡಲು ಅತ್ಯಂತ ಅಗತ್ಯವಾದ ಸುಳ್ಳುಗಳು. ಪ್ರತಿ ದಿನದ ಸೂರ್ಯ ನನ್ನ ಫ್ರೆಶ್ ಆಗಿ ಬರಮಾಡಿಕೊಳ್ಳಲು ಬೇಕೇ ಬೇಕಾದ ಸುಳ್ಳುಗಳು. ನಾಕು ಜನರೆದುರು ಕುಗ್ಗಿಹೋಗದೇ ಬದುಕಲು ಬೇಕಾದ, ಅನಿವಾರ್ಯ ಸುಳ್ಳುಗಳು.
ಹ್ಞಾ…ಚಿನ್ನಕ್ಕನ ಮಗಳು ಮದುವೆಯಾಗಿದಾಳೆ ಈಗ. ಅಮ್ಮನನೂ ಮೀರಿಸುವಂತಾ ಸುಳ್ಳಾಡುತ್ತಾಳೆ!!
ಯಾಕೆ ನಗುತ್ತೀರಿ ಗಾಂಧಿ ತಾತ? ನಿಮಗೊಂದು “ಸತ್ಯ” ಹೇಳಲೇನು? ಪಾಪ ಇವರಲ್ಲಿ ಎಷ್ಟೋ ಹಿರಿಜೀವಗಳಿಗೆ ನಿಮ್ಮ ಹೆಸರೂ. ಭಾರತವೆಂಬ ಈ ದೇಶದ ಹೆಸರೂ ಗೊತ್ತಿಲ್ಲ. ಇಂದಿರಾ ಗಾಂಧಿ ಹೆಸರು ಗೊತ್ತು ನೋಡಿ. ಈಚೆಗೆ, ಮಕ್ಕಳಿಗೆ ನಿಮ್ಮ ಜಯಂತಿ ಮಾಡಿ ರಜೆ ಕೊಡುವುದರಿಂದ, ಮತ್ತು ನೋಟಿನ ಮೇಲೆ ನಿಮ್ಮ ಬೊಚ್ಚು ಬಾಯಿ ನೋಡಿ, ನಿಮ್ಮ ಹೆಸರಷ್ಟೇ ಗೊತ್ತು ಕೆಲವರಿಗೆ, ಅದರಾಚೆಗೆ ನಿಮ್ಮ “ಸತ್ಯಾಗ್ರಹ” ವೂ.“ನನ್ನ ಸತ್ಯಾನ್ವೇಷಣೆ” ಪುಸ್ತಕವೂ. ಇವರಿಗೆ ತಿಳಿದೇ ಇಲ್ಲ. ಇವರ ಸುಳ್ಳುಗಳಿಗೆ ಹಾಗೆಲ್ಲ ನಗಬಾರದು ನೀವು. ನಿಮ್ಮ ಹೆಸರೇಳಿಕೊಂಡು, ಬೋರ್ಡು, ಬ್ಯಾನರು ಬರಕೊಂಡು, ನಿರಂತರ ಸುಳ್ಳು ಹೇಳುತ್ತಲೇ ಇರುವವರ ಕನಸಲ್ಲಿ ಬಂದು ಕಪಾಲಕ್ಕೆ ಹೊಡೀರಿ, ಕೋಲ್ತಗಂಡ್ಬಾರ್ಸಿ.
ಪಾಪ, ಇವರೆಲ್ಲ ಸುಳ್ಳು ಹೇಳಿಕೊಂಡು ಸುಖವಾಗಿರಲಿಬಿಡಿ!
ಕುಸುಮಬಾಲೆ ಕಾಲಂ : ಅಜ್ಜಿ ಹೇಳಿದ ನೂರೆಂಟು ಸುಳ್ಳುಗಳು!
ನಿಮಗೆ ಇವೂ ಇಷ್ಟವಾಗಬಹುದು…

Good one….
“satyave namma taayi tande satyave namma bandu balaga” kkintalu…”sullu nammallillavayya sulle nammane devaru” salisaagi haadkobodu……good one….hange i sofisticated sullugaligu kapaalakke baarisbekittu!!
🙂
ಚೆನ್ನಾಗಿದೆ… ಮೇಡಂ…ಬರಹ…
ಚೆಂದದ ಬರೆಹ….ಸುಳ್ಳಲ್ಲ..!!
Amazing insights into life in small villages/communities.
Those are comfort & harmless lies & are absolutely essential and OK.
But lying selfish gain is unpardonable and those are the scums of the society.
Sakattaagide kane