ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆಯ ಶೈಲಿಯಲ್ಲಿ ಎದ್ದುಕಾಣುವುದು ಅವರ ನೋಟ..

jogi

 ಜೋಗಿ

ಬಾಲ್ಯದಲ್ಲಿ ನನ್ನ ಮುಂದೆ ಎರಡು ಜಗತ್ತಿತ್ತು.

ಒಂದು ಹಸಿವಿಲ್ಲದ, ಮುಪ್ಪಿಲ್ಲದ, ಯಾರೂ ಹುಟ್ಟದ, ಯಾರೂ ಸಾಯದ ಅಮರತ್ವ ಒಂದು ವರವೆಂದು ನಂಬಿರುವ ದೇವತೆಗಳ ಜಗತ್ತು. ಅಲ್ಲಿಯ ಮಂದಿ ದುಡಿಯಬೇಕಾಗಿರಲಿಲ್ಲ. ತಿನ್ನಬೇಕಾಗಿರಲೂ ಇಲ್ಲ. ಅವರಿಗೆ ಮಕ್ಕಳಾಗುತ್ತಿರಲಿಲ್ಲ. ಹೀಗಾಗಿ ಕೂಡುವ ಅಗತ್ಯ ಕೂಡ ಇರಲಿಲ್ಲ. ನಾಳೆಯ ಚಿಂತೆಯಿರಲಿಲ್ಲ, ಹೀಗಾಗಿ ಕೂಡಿಡಬೇಕಾಗಿಯೂ ಇರಲಿಲ್ಲ. ಅವರೆಲ್ಲ ಕಣ್ಣುಮಿಟುಕಿಸದೇ ಹಾಗೇ ಇದ್ದುಬಿಡುತ್ತಿದ್ದರು. ಅವರ ಒಡೆಯನೊಬ್ಬ ಆಗೀಗ ಹಾದರ ಮಾಡಿ ಸಿಕ್ಕಿಹಾಕಿಕೊಂಡು ಅಧಿಕಾರ ಕಳಕೊಳ್ಳುವ ಹಂತಕ್ಕೂ ಹೋಗಿ, ಅದ್ಯಾರದೋ ಕೈ ಕಾಲು ಹಿಡಿದು ಮತ್ತೆ ಪಟ್ಟ ಸಂಪಾದಿಸಿಕೊಳ್ಳುತ್ತಿದ್ದ. ಅವನಿಗೆ ಭೂಲೋಕದಲ್ಲಿ ಮಕ್ಕಳಾಗುತ್ತಿದ್ದವು. ಆ ಮಕ್ಕಳೇನೂ ಸ್ವರ್ಗದ ಮಕ್ಕಳೆಂಬ ಹೆಮ್ಮೆಗೆ ಪಾತ್ರವಾಗುತ್ತಿರಲಿಲ್ಲ. ಅವು ತಮ್ಮ ತಮ್ಮ ಹೋರಾಟದಲ್ಲಿ ತೊಡಗಿಕೊಂಡು, ತಮ್ಮದೇ ಆದ ಸುಖ, ದುಃಖ, ಸಂಕಟ, ಸುಮ್ಮಾನಗಳನ್ನು ಹೊಂದಿ ಕಾಲವಶವಾಗುತ್ತಿದ್ದವು.

kusumabaleಈ ಲೋಕವೇ ನಮಗೆ ಬಾಲ್ಯದಲ್ಲಿ ಆಪ್ಯಾಯಮಾನ ಆಗುತ್ತಿತ್ತು. ಸ್ವರ್ಗವೇ ಶ್ರೇಷ್ಠ ಎಂದು ನಮ್ಮನ್ನೆಲ್ಲ ನಂಬಿಸಿಬಿಟ್ಟಿದ್ದರು. ಮಕ್ಕಳೇ ಹುಟ್ಟದ ದೇವತೆಗಳಿಗೆ ಕಾಮವಾಂಛೆ ಯಾಕೆ? ಬಾಲ್ಯವೇ ಇಲ್ಲದ ಅವರಿಗೆ ಅಮರತ್ವ ಯಾಕೆ? ಈ ಪ್ರಶ್ನೆಗಳೆಲ್ಲ ನಮಗೆ ಹೊಳೆದದ್ದು ತಡವಾಗಿ. ಈಗ ದೇವತೆಗಳೆಂದರೆ ಪಿಳಿಪಿಳಿ ಕಣ್ಣುಬಿಡುವುದಕ್ಕೂ ಆಗದ ಬೆಪ್ಪುತಕ್ಕಡಿಗಳೆಂಬಂತೆ ಭಾಸವಾಗುತ್ತದೆ.

ಇದಕ್ಕೆ ಸಂವಾದಿಯಲ್ಲದ ಆದರೆ, ಸಮಕಾಲೀನವಾದ ಮತ್ತೊಂದು ಜಗತ್ತು ರಾಕ್ಷಸರದ್ದು. ಅಲ್ಲಿ ರಾಕ್ಷಸರು ಹುಟ್ಟುತ್ತಿದ್ದರು, ಸಾಯುತ್ತಿದ್ದರು. ಪ್ರೇಮಿಸುತ್ತಿದ್ದರು, ಮದುವೆಯಾಗುತ್ತಿದ್ದರು, ರಾಜಕುಮಾರಿಗಾಗಿ ಹಂಬಲಿಸುತ್ತಿದ್ದರು. ತಪಸ್ಸಿಗೆ ಕೂತು ವರ ಪಡೆಯುತ್ತಿದ್ದರು. ಯುದ್ಧ ಹೂಡುತ್ತಿದ್ದರು. ಕೀಟಲೆ,ದಾಂಧಲೆ ಮತ್ತು ತರಲೆ ಮಾಡಿಕೊಂಡು ಓಡಾಡಿಕೊಂಡಿರುತ್ತಿದ್ದರು. ಅದೊಂದು ಕರಾಳವಾದ ಜಗತ್ತು ಎಂದೂ ರಾಕ್ಷಸರನ್ನು ನಾಶ ಮಾಡುವುದೇ ಎಲ್ಲರ ಏಕೈಕ ಉದ್ದೇಶವಾಗಬೇಕೆಂದೂ ನಮಗೆ ಬೋಧಿಸಲಾಗುತ್ತಿತ್ತು.

ಕ್ರಮೇಣ, ಆ ಭಾವನೆಯೂ ಮರೆಯಾಯಿತು. ರಾಕ್ಷಸರೆಂದು ಕರೆಸಿಕೊಳ್ಳುವವರು ಅಮಾಯಕರಂತೆ ಕಾಣತೊಡಗಿದರು. ರಾಜ್ಯದಾಹ ಇರುವುದು ರಾಜ್ಯ ಹೊಂದಿರುವ ದೇವತೆಗಳಿಗೇ ವಿನಃ, ರಾಕ್ಷಸರಿಗೆ ಅಲ್ಲ ಅನ್ನುವುದು ಕ್ರಮೇಣ ಗೊತ್ತಾಗುತ್ತಾ ಹೋಯಿತು. ನಮ್ಮೆದುರಿನ ಜಗತ್ತು ಇದ್ದಕ್ಕಿದ್ದಂತೆ ತಲೆಕೆಳಗಾಯಿತು.
***

ತನ್ನೆದುರಿನ ಜಗತ್ತನ್ನು ಹಾಗೆ ತಲೆಕೆಳಗು ಮಾಡುವ ಬರಹಗಳು ಈ ಸಂಕಲನದಲ್ಲಿವೆ. ಕುಸುಮಬಾಲೆ ಮೊದಲು ಬರೆಯಲು ಶುರುಮಾಡಿದಾಗಲೇ, ನಾನವರ ಬರಹಗಳನ್ನು ಓದುತ್ತಿದ್ದೆ. ಅವು ಅವಧಿಯಲ್ಲಿ, ಪತ್ರಿಕೆಗಳಲ್ಲಿ ಆಗೀಗ ಕಾಣಿಸಿಕೊಳ್ಳುತ್ತಿದ್ದವು. ಅವರು ಅಂಕಣ ಬರೆಯಲು ಆರಂಭಿಸಿದ ನಂತರ ಅದು ನಿಯಮಿತವಾಗಿ ಓದಲು ಸಿಗುತ್ತಿತ್ತು. ಅದನ್ನು ಓದುತ್ತಿದ್ದಾಗೆಲ್ಲ ನನಗೆ, ನಾನು ನೋಡಿದ ಜಗತ್ತಿನ ಮತ್ತೊಂದು ಮಗ್ಗಲು ಕಾಣಿಸುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಅವರ ಯೋಚನೆಗಳು ನನ್ನ ಯೋಚನೆಗೆ ಹತ್ತಿರವಿವೆ ಎಂದು ಎಷ್ಟೋ ಸಲ ಭಾಸವಾಗುತ್ತಿತ್ತು. ನನ್ನ ಹಾಗೆಯೇ ಅವರ ಮುಂದೆಯೂ ಎರಡು ಲೋಕಗಳಿವೆ. ಅವರು ಆ ಎರಡು ಲೋಕಗಳನ್ನೂ ಹತ್ತಿರದಿಂದ ಕಂಡು, ತಾನಿರಬೇಕಾದದ್ದು ಎಲ್ಲಿ ಎಂದು ನಿರ್ಧರಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಎಷ್ಟೋ ಸಲ ನನಗೆ ಅನ್ನಿಸುತ್ತಿತ್ತು.

ಇಲ್ಲಿಯ ಬರಹಗಳನ್ನು ಓದಿದರೆ ನಿಮಗೂ ಹಾಗೆಯೇ ಅನ್ನಿಸಬಹುದೇನೋ? ತನ್ನ ಜಗತ್ತನ್ನು ಪರಿಭಾವಿಸುವ ಹೊತ್ತಲ್ಲಿಯೇ, ನಾವು ನಮ್ಮ ಜಗತ್ತನ್ನು ಕೂಡ ಪರಿಭಾವಿಸುವಂತೆ ಮಾಡುವ ಅಪೂರ್ವವಾದ ಗುಣವೊಂದನ್ನು ನಾನು ಈ ಬರಹಗಳಲ್ಲಿ ಕಂಡಿದ್ದೇನೆ. ಕುಸುಮಬಾಲೆ ತನಗಾದ ಅನುಭವವನ್ನು ಹೇಳುತ್ತಾ ಹೋಗುತ್ತಾರೆ. ಹಾಗೆ ಹೇಳುತ್ತಲೇ, ಅಲ್ಲಲ್ಲಿ ನಿಂತು ನಮ್ಮನ್ನು ಒಪ್ಪಿಸುವುದಕ್ಕೆ ಮುಂದಾಗುತ್ತಾರೆ. ನಾವು ಒಪ್ಪುತ್ತಿಲ್ಲ ಎಂದು ಗೊತ್ತಾದರೆ ಕೊಂಚ ಜಗಳವಾಡುತ್ತಾರೆ, ನಂತರ ನೀವಂದಿದ್ದೇ ಸರಿ ಎಂದು ನಮ್ಮ ದಾರಿಗೇ ಬರುವವರಂತೆ ನಟಿಸಿ, ಮತ್ತೆ ತಾನು ತೋರಬೇಕಾದ್ದನ್ನು ಮುಂದಿಟ್ಟು ಮುಗುಳ್ನಗುತ್ತಾ ನಿಂತುಬಿಡುತ್ತಾರೆ.

kusumabale inviteಅದು ಅಂಕಣ ಬರೆಯುವವರಿಗೆ ಬೇಕಿರುವ ಜಾಣ್ಮೆ ಮತ್ತು ಜ್ಞಾನ. ಲಕ್ಷ್ಮೀಶ ತೋಳ್ಪಾಡಿ ಅವರ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ ಕೆವಿ ಅಕ್ಷರ ಅವರು ಸುಂದರ ಸಾರುಕ್ಕೈ ಹೇಳಿದ ಒಂದು ಮಾತನ್ನು ನೆನಪಿಸಿಕೊಳ್ಳುತ್ತಾರೆ: ಅತ್ಯುತ್ತಮ ಫಿಲಾಸಫಿ ಯಾವುದು ಅಂದರೆ, ಅದನ್ನು ಕೇಳಿದವನಿಗೆ ಆ ಕ್ಷಣಕ್ಕೆ ತಾನೂ ಫಿಲಾಸಫರ್ ಆದೆ ಎಂದು ಅನ್ನಿಸಬೇಕಂತೆ. ಅಂಕಣಕಾರ ಕೂಡ ಹಾಗೆಯೇ. ಒಂದು ಅಂಕಣವನ್ನು ಓದಿದ ತಕ್ಷಣ, ತಾನೂ ಇದನ್ನೇ ಹೇಳಬೇಕಾಗಿತ್ತು. ಅದು ತನ್ನೊಳಗೇ ಇದ್ದ ಸಂದಿಗ್ಧವೋ ಸಂದೇಹವೋ ಸಂತೋಷವೋ ಆಗಿತ್ತು ಎಂದು ಥಟ್ಟನೆ ಅನ್ನಿಸಿಬಿಡಬೇಕು. ಮುಂದಿನದು ದೇವರ ಚಿತ್ತ.

ಚಾಮರಾಜನಗರ ಸೀಮೆಯ ಹದವುಳ್ಳ ಭಾಷೆಯನ್ನು ಎಷ್ಟು ಬೇಕೋ ಅಷ್ಟು ಬಳಸುತ್ತಾ, ತಾನು ಹೇಳಬೇಕಾದ್ದನ್ನು ಗಟ್ಟಿಯಾಗಿ ಹೇಳುತ್ತಾ, ವಿರೋಧಾಭಾಸಗಳನ್ನು ನಮ್ಮ ಮುಂದಿಡುವ ಕುಸುಮಬಾಲೆಯ ಶೈಲಿಯಲ್ಲಿ ಥಟ್ಟನೆ ಎದ್ದುಕಾಣುವುದು ಅವರ ಚುರುಕಾದ ನೋಟ ಮತ್ತು ಸ್ಪಷ್ಟ ಗ್ರಹಿಕೆ. ಒಂದೆರಡು ಉದಾಹರಣೆಗಳನ್ನು ಕೊಡುವುದಿದ್ದರೆ, ಭಾಷೆ ಹೇಗೆ ಆಧುನಿಕತೆಗೆ ಸಂಕೇತವಾಗುತ್ತದೆ. ಹಳ್ಳಿ ಭಾಷೆಯನ್ನು ನಾವು ಹೇಗೆ ಮರೆಯಲು ಯತ್ನಿಸುತ್ತೇವೆ. ಮಕ್ಕಳು ನಮ್ಮ ಮನೆಭಾಷೆಯನ್ನು ಮರೆತು ಶಿಷ್ಟ ಮಾತನ್ನು ಆಡಲಿ ಎಂದು ಹೇಗೆ ಆಸೆಪಡುತ್ತೇವೆ, ಆ ಆಸೆ ಕನ್ನಡ ಮತ್ತು ಇಂಗ್ಲಿಷ್ ವಿಚಾರದಲ್ಲೂ ನಿಜವಲ್ಲವೇ? ಅಪರಿಚಿತವಾದ ಭಾಷೆಯೊಂದನ್ನು ಕಲಿಯುವುದೇ ಒಂದು ಸಾಧನೆಯೆಂದು ನಮಗೇಕೆ ಅನ್ನಿಸುತ್ತದೆ ಎಂಬ ಪ್ರಶ್ನೆಗಳನ್ನು ಅವರು ನಮ್ಮಲ್ಲಿ ಹುಟ್ಟುಹಾಕುತ್ತಾರೆ. ಹಳ್ಳಿಯ ಪಟಾಪಟಿ ಚಡ್ಡಿಯಿಂದ ಹೊರಟು ಬರ್ಮುಡಾ ತಲುಪು ಹೊತ್ತಿಗೆ ಅವರು ಒಂದು ತಲೆಮಾರಿನ ಮನಸ್ಥಿತಿಯನ್ನು ಬಿಚ್ಚಿಡುತ್ತಾರೆ. ಪೂರ್ವಜನ್ಮದ ವಾಸನೆಯನ್ನು ಯಾವ ಪರಿಮಳದ್ರವ್ಯವೂ ಹೇಗೆ ತೊಡೆಯಲಾರದು ಅನ್ನುವುದನ್ನು ಹಳ್ಳಿಯ ಸಂದರ್ಭದಲ್ಲಿ ಹೇಳುತ್ತಾ, ನಮ್ಮ ಹಿನ್ನೆಲೆಯೇ ಗೊತ್ತಿಲ್ಲದ ಒಂದು ಅಪರಿಚಿತ ಊರಲ್ಲಿ ಬೇರುಬಿಡುವುದು ಹೇಗೆ ಸುಲಭ. ಹಾಗೆ ಬೇರು ಬಿಟ್ಟವರು ಹೇಗೆ ತಮ್ಮ ಕಾಲಕ್ಕೆ, ಅಂತಸ್ತಿಗೆ ತಕ್ಕಂಥ ಭೂತಕಾಲವನ್ನು ಸೃಷ್ಟಿಸುತ್ತಾ ಹೋಗುತ್ತಾರೆ ಎಂಬುದನ್ನು ಸೂಚಿಸುತ್ತಾರೆ.

ಅದು ಎಂಥ ನಿಜ ಎನ್ನುವುದನ್ನು ಗಮನಿಸಿ. ಬಾಲ್ಯದಲ್ಲಿ ಯಾರದೋ ಮನೆಯಲ್ಲಿ ಹಟ್ಟಿ ತೊಳೆಯುತ್ತಿದ್ದವನು, ಅದರಿಂದ ಬಿಡುಗಡೆ ಹೊಂದಲಿಕ್ಕೆಂದೇ, ದಿನಗಟ್ಟಲೆ ಕೈ ತೊಳೆದುಕೊಂಡು, ಶುಚಿಯಾದ ಉಡುಪು ತೊಟ್ಟು, ತನ್ನ ಮೂಲ ಗೊತ್ತಿಲ್ಲದ ಪ್ರದೇಶದಲ್ಲಿ ತಳವೂರುತ್ತಾನೆ. ಆತ ಎಲ್ಲರಿಂದಲೂ ಸ್ವೀಕೃತನಾದ ನಂತರ, ತನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲೆಂದೇ, ತಾನು ಬಾಲ್ಯದಲ್ಲಿ ಹಟ್ಟಿ ತೊಳೆಯುತ್ತಿದ್ದೆ, ಗೊಬ್ಬರ ಎತ್ತುತ್ತಿದ್ದೆ ಎಂದು ಹೇಳಿಕೊಳ್ಳಲು ಆರಂಭಿಸುತ್ತಾನೆ. ಏರುವ ಹಾದಿಯಲ್ಲಿ ತೊಡರಾಗಿ ಕಂಡ ಭೂತ, ಏರಿದ ನಂತರ ಗರಿಯಾಗಿ ಕಾಣುವುದು ಹೇಗೆ ಎಂಬುದನ್ನು ಹೇಳುವುದಕ್ಕೂ ಕುಸುಮಬಾಲೆ ಹೊರಡುತ್ತಾರೆ.

ಕುಸುಮಬಾಲೆಯ ಓದು, ಅನುಭವ, ಸಾಂಗತ್ಯ ಮತ್ತು ವರ್ತಮಾನ ಸೇರಿ ರೂಪುಗೊಂಡಿರುವ ಲೇಖನಗಳಂತೆಯೇ ಅವರು ಕೂಡ ರೂಪುಗೊಂಡಿದ್ದಾರೆಂದು ಭಾವಿಸಬಹುದೇನೋ? ಇಲ್ಲಿ ಅವರು ಅತಿರೇಕಕ್ಕೆ ಹೋಗುವುದಿಲ್ಲ. ತನಗೆ ಕಂಡದ್ದನ್ನು ಮಾತ್ರ ದಾಖಲಿಸುತ್ತಾರೆ. ಅದನ್ನು ಸಮರ್ಥಿಸಲಿಕ್ಕೆ ಸಿದ್ಧಾಂತಗಳಲ್ಲೋ ವಾದಗಳನ್ನೋ ಬಳಸುವುದಿಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ವಕಾಲತ್ತು ಮಾಡುವುದಕ್ಕೆ ಹೋಗುವುದಿಲ್ಲ. ಅಫಿಡವಿಟ್ಟು ಸಲ್ಲಿಸುವುದಿಲ್ಲ.

ಆ ಕಾರಣಕ್ಕೇ ಇವು ಏಕಕಾಲಕ್ಕೆ ಪ್ರಬಂಧಗಳೂ ಸಮಾಜಶಾಸ್ತ್ರೀಯ ಗುಣವುಳ್ಳ ಬರಹಗಳೂ ನಿರ್ವಚನಗಳೂ ಆಗುತ್ತವೆ. ರೈತರಿಗೆ ಹೆಣ್ಣು ಸಿಗುವುದಿಲ್ಲ ಎಂಬ ಸಂಕಷ್ಟ ರೈತನನ್ನು ಮಾತ್ರ ಬಾಧಿಸದೇ, ಆ ವೃತ್ತಿಯನ್ನೇ ದ್ವೇಷಿಸುವಂತೆ ಮಾಡುವ ಸಾಧ್ಯತೆಯನ್ನು ಗ್ರಹಿಸಬಲ್ಲ ಸೂಕ್ಷ್ಮತೆ ಅವರಿಗಿದೆ.
ಭಾಷೆಯನ್ನು ಕುಸುಮಬಾಲೆ ಅವರಷ್ಟು ಸಮರ್ಥವಾಗಿ ಸಶಕ್ತವಾಗಿ ಬಳಸಬಲ್ಲವರನ್ನು ಇತ್ತೀಚಿನ ದಿನಗಳಲ್ಲಿ ನಾನು ಹೆಚ್ಚಾಗಿ ಕಂಡಿಲ್ಲ. ಅವರ ವಿಚಾರಗಳ ಸ್ಪಷ್ಟತೆ ಕೂಡ ಗಮನಾರ್ಹ. ಕೆಲವೊಮ್ಮೆ ಅವರು ತಮ್ಮನ್ನು ತಾವೇ ವಿರೋಧಿಸಿಕೊಂಡಂತೆ ಅನ್ನಿಸಿದರೂ, ಅವೆರಡನ್ನೂ ಬೇರೆ ಬೇರೆಯಾಗಿಯೇ ನೋಡಿದಾಗ ಅಷ್ಟೇನೂ ಬಿರುಕು ಬಿಟ್ಟಿದೆ ಅನ್ನಿಸುವುದಿಲ್ಲ.
****

ನಮ್ಮ ಮುಂದಿರುವ ಎರಡು ಜಗತ್ತು ಒಂದಾಗುತ್ತಿದೆ. ಹಳ್ಳಿ ಮತ್ತು ಪಟ್ಟಣದ ನಡುವಿನ ವ್ಯತ್ಯಾಸ ಅಳಿಸುತ್ತಿದೆ. ಮುಂದಿನ ತಲೆಮಾರು ಕಣ್ಣುಬಿಡುವ ಹೊತ್ತಿಗೆ, ಸಮೀಕರಣ ಮತ್ತು ನಿರಾಕರಣ- ಎರಡಕ್ಕೂ ನಾವು ಒಗ್ಗಿಕೊಂಡಿರುತ್ತೇವೆ. ಮಲ್ಟಿ- ಎಂಬ ಪದ ನಮ್ಮನ್ನು ಆಳತೊಡಗಿರುತ್ತದೆ. ಆಸ್ಪತ್ರೆಯಲ್ಲಿ ಮಲ್ಟಿ ಸ್ಪೆಷಾಲಿಟಿ, ಕಂಪೆನಿಗಳಲ್ಲಿ ಮಲ್ಟಿ ನ್ಯಾಷನಲ್ಲು, ಆಹಾರದಲ್ಲಿ ಮಲ್ಟಿ ಗ್ರೈನು, ವಿಚಾರದಲ್ಲಿ ಮಲ್ಟಿ ಕಲ್ಚರ್, ಕಾರ್ಯದಲ್ಲಿ ಮಲ್ಟಿಟಾಸ್ಕಿಂಗು- ನಮಗೆ ಕರತಲಾಮಲಕ ಆಗಿರುತ್ತದೆ. ಆಧುನಿಕತೆ ಕೊಲ್ಲುವುದು ಭಾಷೆಯನ್ನು. ಭಾಷೆ ಸಾಯುತ್ತಿದ್ದಂತೆ ಆತ್ಮವಿಶ್ವಾಸವೂ ಸಾಯುತ್ತದೆ. ಅದರೊಂದಿಗೆ ಕಲೆ, ಸೃಜನಶೀಲತೆ ನಾಶವಾಗುತ್ತದೆ. ಹೀಗೆ ಮಾತಾಡುತ್ತಾ ಕೂರುವುದು ಕೂಡ ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗುತ್ತದೆ.

ಅವನ್ನೆಲ್ಲ ಮುಂಗಾಣುವಂತೆ ಕುಸುಮಬಾಲೆ ಇದನ್ನು ಬರೆದಿದ್ದಾರೆ. ಒಬ್ಬ ಲೇಖಕ ಮಾಡಬೇಕಾದದ್ದು ಅದನ್ನೇ. ತನ್ನ ಅನುಭವ ಲೋಕವನ್ನು ಲೇಖನವನ್ನಾಗಿಯೋ ಅಂಕಣವನ್ನಾಗಿಯೋ ಮಾಡುವ ಬದಲು, ಕಾದಂಬರಿಯಲ್ಲಿ ಕಟ್ಟಿಕೊಡುವುದನ್ನು ಕುಸುಮಬಾಲೆ ಮಾಡಲಿ ಎಂದು ಹಾರೈಸುತ್ತಾ, ಮುಂದಿನ ಪುಟಗಳ ದಟ್ಟವಾದ ಓದಿಗೆ ನಿಮ್ಮನ್ನು ಬೀಳ್ಕೊಡುತ್ತಿದ್ದೇನೆ.

 

‍ಲೇಖಕರು admin

10 March, 2016

4 Comments

  1. Anonymous

    ಮುಂದಿನ ಪುಟಗಳ ದಟ್ಟವಾದ ಓದಿಗೆ ನಿಮ್ಮನ್ನು ಬೀಳ್ಕೊಡುತ್ತಿದ್ದೇನೆ.

    ನೀವು ಹೀಗೆ ಬರೆಯೋದು ಭಾರೀ ಇಷ್ಟವಾಗುತ್ತೆ

  2. lakshmikanth itnal

    ಕನ್ನಡದ ಉತ್ಕೃಷ್ಟ ಕೃತಿಯಾಗಿ ನಿಲ್ಲುವ ಅಂತಸತ್ವ ಇರುವ ಚಿಂತನಗಳ ಬರಹಗಳ ಗುಚ್ಛ ಇದು. ಈ ನಾಡಿನ ಮಣ್ಣಿನ, ಜೀವಗಳ ಬದುಕಿನ ಕ್ಷಕಿರಣದ ಚಿತ್ರಣಗಳು ಅತ್ಯುತ್ಕೃಷ್ಟ. ಲೇಖನಗಳಲ್ಲಿ, ಬರಹಗಳಲ್ಲಿ ಚಿಂತನೆಯೊಂದಿಗ ಕುಸುಮಾ ಜಿ ತಮ್ಮನ್ನು ತೆರೆದುಕೊಳ್ಳುವ ಪರಿಗೆ ಮೂಕನಾಗಿದ್ದೇನೆ. ಜಗದ ನೋವನ್ನು ತನ್ನದೇ ನೋವೆಂದು ಅನುಭವಿಸಿ ಬರೆಯುವ ಅಪರೂಪದ ಲೇಖಕರು. ಒಂದು ಸಂದರ್ಭದಲ್ಲಿ ಇವರು ಅಂಕಣಗಳ ಸರಮಾಲೆಗೆ ವಿರಾಮ ಹೇಳಿದಾಗ ಮನಸ್ಸಿಗೆ ತುಂಬ ಹಳಹಳಿಯಾಗಿತ್ತು. ಕುಸುಮಾ ಜಿ ಇನ್ನೂ ಹೆಚ್ಚು ಹೆಚ್ಚು ಆಯಾಮಗಳಲ್ಲಿ ಜನಕ್ಕೆ ಓದಲು ಸಿಗಲಿ, ಹೆಚ್ಚು ಹೆಚ್ಚು ಬೆಳೆಯಲೆಂಬ ಹಾರೈಕೆಯೊಂದಿಗೆ….ಹೃದಯಪೂರ್ವಕ ಅಭಿನಂದನೆಗಳು ಕುಸುಮಾ ಜಿ ಗೆ. …forewords are simply excellent.

    • Anonymous

      ತುಂಬ ತುಂಬ ಧನ್ಯವಾದಗಳು ಸರ್.

  3. ಚಲಂ

    ಕುಸುಮಾರವರ ರೈತಪರ ಕಾಳಜಿಯಲ್ಲಿ ಪ್ರಾಮಾಣಿಕ ಪ್ರಯತ್ನವಿದೆ.
    ಅಂತಹ ವಸ್ತುಗಳನ್ನುಆಯ್ಕೆ ಮಾಡಿಕೊಂಡು ಈಗಿನ ಸಮಾಜಕ್ಕೆ ಹೇಳುತ್ತಿರುವುದಕ್ಕೆಅಭಿನಂದಿಸುತ್ತೇನೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading