ಆ ಇದಾನ ಸೌಧದಾಗೂ ಬ್ಯಾರೆ ಮಾತಾ ಇಲ್ಲ, ಯಪ್ಪಾ..

ಅದೆಂತಾದಾ ಟಿಟ್ ವಾರ್ ಅಂತ ಮಾಡಾಕತ್ಯಾರಂತ

ಅದಾಗ್ಲೇ ಮುಂಜಾಲೆ ಹತ್ತುವರಿಯಷ್ಟೊತ್ತಾಗಿತ್ತು. ಓಣ್ಯಾಗಿನ ಕುರಿಗಳೆಲ್ಲ ಹಟ್ಟಿ ಬಿಟ್ಟು ಮೇಯಾಕ ಹೋಗ್ಯಾವು ಅನ್ನಾದಕ್ಕ ಹಾದಿಗುಂಟ ಬಿದ್ದಿದ್ದ ಹಿಕ್ಕಿ ಸಾಲುಗಳಾ ಹೇಳತಿದ್ವು. ಎರಿ ಹೊಲದ ಕಡಿಗೆ, ಇಟಿಗಿ ಹಾದಿ ಕಡಿಗೆ, ಉತ್ತಂಗಿ ಹಾದಿ ಕಡಿಗೆ, ಸೊನ್ನದ ಹಾದಿ, ಗದ್ದಿಕೇರಿ ಹಾದಿ, ಹೊಳಗುಂದಿ ಹಾದಿ ಕಡಿಗೆಲ್ಲಾ ದನಗಳ ಹಿಂಡು ಮೇಯಾಕ ಹೊಂಟಿದ್ವು. ಜೌಳದ ಕಡಿಗೂ ಒಂದಿಷ್ಟು ದನಗಳೂ ಮೇಯಾಕ ಹೊಂಟಿದ್ವು.

shivu poster cut low1ಅಂತಾ ಹೇಳ್ಕಳ್ಳಂತ ಮಳಿ ಆಗಿಲ್ಲಾಂದ್ರೂನೂ ಇದ್ದಿದ್ರಾಗಾ ಬಿತ್ತಾದು ಬೆಳಿಯಾದು ಇದ್ದಾ ಇರತೈತಲ್ರೀ, ಹಂಗಾಗಿ ವರ್ಸಾ ಹೋದಂಗನಾ ಈ ವರ್ಸಾನೂ ಕಳೆ ತೆಗಿಯಾಕ, ಎಡೆ ವಡಿಯಾಕ, ಮುರುದು ಬಿತ್ತಾಕ ಅಂತೇಳಿ ನೂರೆಂಟು ಕಮ್ತದ ಕೆಲ್ಸಕ್ಕ ಬೆಳಗಾ ಮುಂಜಾಲೆ ಎದ್ದು ಹೊಲಕ್ಕ ಹೋದವರಿಗೆ ಹಿಂದಿಲಿಂದ ಬುತ್ತಿ ಹೊತ್ಕಂಡು ಔರೋರು ಮನ್ಯಾರು ಯಾರಾರ ಒಬ್ರು ದೌಡು ದೌಡು ಹೊಲಗಳ ಕಡಿಗೆ ಹೆಜ್ಜಿ ಹಾಕತಿದ್ರು. ಓಣ್ಯಾಗಿನ ಭಾಳ ಮನಿಗಳ ಕದಗಳು ಮುಚ್ಚಿಗಂಡಿದ್ವು. ಅಂತಾ ಅಪರಾಳ ಹೊತ್ನಾಗ ಮನಿಲಿಂದ ಕರಿಯವ್ನ ಗುಡಿ ಕಡಿಗೆ ಹೆಜ್ಜಿ ಹಾಕಿದ್ನ ನಮ್ಮ ರಾಮಣ್ಣ.

ಹಂಗ ಗುಡಿ ನಡೆ ನಡದಿದ್ದ ನಮ್ಮ ರಾಮಣ್ಣನ ಏನೋ ನೋಡಿಕಂತ ಸಗಣಿ ತುಳುದುಬುಟ್ಟ. ಆಮ್ಯಾಕ ತನ್ನ ಕಾಲ ತಾನಾ ನೋಡಿಕಂಡು ‘ಥೂ ಇವನೌನು, ತಿಪ್ಪಿ ಸೇರಿ ಹೊಲಕ್ಕ ಗೊಬ್ಬರ ಆಗಿ ಒಂದು ಗಿಡಕ್ಕ ತಾಕತ್ತು ನೀಡಬೇಕಿದ್ದ ಒಂದೀಟು ಸಗಣಿ ಸುಮ್ಮನಾ ನನ್ನ ಕೆರದ ತಳ ಸೇರಿತಲ್ಲೋ ಸಿವನಾ’ ಅಂತೇಳಿ ಅಲ್ಲೇ ಹಾದಿ ಮೊಗ್ಗಲ ಇದ್ದ ಕಲ್ಲಿಗೆ ಚಪ್ಪಿಗೆ ಅತ್ತಿದ್ದ ಸೆಗಣಿನ ಒರಿಸ್ಕೋತ ‘ಕೆಲವುಗಳ ಋಣನಾ ಇಷ್ಟ ಇರತೈತೇನೋ, ನಡೋ ಹಾದಿಯೊಳಗಾ ಅಳದು ಬಿಡೋದು. ಏನು ಮಾಯೆ ತಾಯಿ ಕರಿಯವ್ವಾ ನಿಂದು ?’ ಅಂತೇಳ್ಕಂಡು ಅಲ್ಲಿಂದಾ ಸೀದಾ ಕರಿಯವ್ನ ಗುಡಿ ಮುಂದ್ಲ ಕಟ್ಟಿಗಿ ಬಂದು ಕುಂತ.

‘ಯಾಕ್ ಇನ್ನೂ ಯಾರೂ ಬಂದಿಲ್ಲಲ್ಲಾ ?’ ಅಂದ್ಕೋತ ತಿರುಗಿ ನೋಡಿದ್ರ ಆಲ್ ರೆಡಿ ನಮ್ಮ ಬುಡೇನಜ್ಜ ಬಂದು ಕಟ್ಟಿಗೆ ಕುಂತಾ ಬಿಟ್ಟಿದ್ದ. ಬುಡೇನಜ್ಜನ ನೋಡಿದ ರಾಮಣ್ಣ ‘ಅಯ್ಯ ನಿನ್ನ ನಮಾಜ್ ಮಾಡಕರ ಮಸೀದಿ ಮೈಮ್ಯಾಲ ಬೀಳ್ಲೀ,.. ನನಿಗೆ ಗೊತ್ತಾ ಇಲ್ದಂಗ ಸಪ್ಳ ಮಾಡ್ದಂಗ ಬಂದು ಕುಂತಿಯಲ್ಲೋ ಮಾರಾಯಾ’ ಅಂತಿದ್ದಂಗನಾ ನಮ್ಮ ಬುಡೇನಜ್ಜ ನಕ್ಕೋತ ‘ಅದಿರ್ಲಿ ಒಂದು ಚುಟ್ಟ ತತ್ತಾ’ ಅಂದಿದ್ದಕ್ಕ ರಾಮಣ್ಣ ಒಂದು ಚುಟ್ಟ ಬುಡೇನಜ್ಜಗ ಕೊಟ್ಟು ಇನ್ನೊಂದನ್ನ ತಾನೂ ಹಚ್ಗೊಂಡು ಇಬ್ರೂ ಕಣ್ ಮುಚ್ಕೋಂಡು ಬೀಡಿ ಸೇದ್ಕೋತ ಕುಂತ್ರು.

ಹಂಗಾ ಬೀಡಿ ಸೇದ್ಕೋತ ನಮ್ಮ ಬುಡೇನಜ್ಜನ್ನ ನೋಡಿದ ರಾಮಣ್ಣ  ‘ಹ್ಞೂಂ, ಮತ್ತೇನಪಾ ಸಾಬಣ್ಣಾ? ಎಲ್ಲಿ ನಮ್ ಚಾಮುಂಡಿ ? ಯಾಕ ಇನ್ನೂ ಈ ಕಡಿಗೆ ಸುದ್ದಿನಾ ಇಲ್ಲ ? ಹೊರಗಾಗ್ಯಾಳಂತೇನು ?’ ಅಂತಂದು ಜೋರು ನಗಾಕತ್ತಿದ್ದ.

Shivu Morigere-1 (1)

ರಾಮಣ್ಣನ ಮಾತು ಕೇಳಿ ತಾನೂ ನಗಾಕತ್ತಿದ್ದ ಬುಡೇನಜ್ಜ, ‘ಸುಮ್ಮನಾ ಕತ್ತಿ ಗಳಿಸಿದಂಗ ವಯಸ್ಸು ಗಳಿಸಿವೇನೋ ನಾವೆಲ್ಲಾ ಅನ್ನಿಸ್ತೈತಿ ನೊಡೋ ರಾಮಣ್ಣಾ, ಆಕಿ ಗಂಗಾಳದ ತುಂಬಾ ಮಂದನ್ನ ಮಜ್ಗಿ ಸುರಕೊಂಡು ಬಿಸ್ ಬಿಸೇ ರೊಟ್ಟಿ ಕಿವಿಚಿಕೊಂಡು ಚೂರುಪ್ಪು, ಎಲ್ಡು ಹಸೇಕಾಯಿ ಸುಟಗಂಡು ಅವನ್ನೂ ಕಿವಿಚಿಗಂಡು ಬೇಸಿ ಸರ್ಸಾಕತ್ತಿದ್ದು. ಉಣ್ಣಾನು ಬಾರೋ ಸಾಬಣ್ಣಾ, ಅಂತ ನನಿಗೂ ಕೂಗಿದ್ಲು. ಚೊಲೋತ್ನಂಗ ಗಾಬು ಇರದು ಬಾರಬೇ ಅಂತೇಳಿ ನಾನಿಕಡೆ ಬಂದೆ. ನಿನ್ನಿಂದಲೇ ಬಂದ್ನೆಡಿ ಅಂತಿದ್ಲಪ್ಪಾ, ಅಗೋ ಬಂದಾಬಿಟ್ಲು ನೋಡು.’ ಅಂತಿದ್ದಂಗನಾ ಮೈಲವ್ವ ಕಟ್ಟಿ ಕಡಿಗೆ ಎಂಟ್ರಿ ಆದ್ಲು.

‘ಏನಾ ಬೊಗಳಾಕತ್ಯಾನಲ್ಲಾ ಸಾಬಣ್ಣಾ ಮನ್ತೆನಕ್ಕ ಬಂದೋನು ?’ ಅಂತ ಬರ್ತಿದ್ದಂಗನಾ ರಾಮಣ್ಣನ ಕೆಣಕಂತನಾ ಕಟ್ಟಿಗೆ ಕುಂತ ಮೈಲವ್ವನ ನೋಡಿದ ರಾಮಣ್ಣ, ‘ನೀನೆಂತಾ ಬಾಯಿಬಡಿಕಿ ಅಂತ ಗೊತ್ತಾದ ಕೂಡ್ಲೆ ನಿನ ಗಂಡ ಹರಹರ ಅಂದ್ನಂತಲ್ಲಬೇ ?’ ಅಂತ ನಕ್ಕ. ‘ಅಯ್ಯಾ ಮೂಳಾ ನಾಡ್ ಮೂಳಾ. ಅಲ್ರಲೋ ಅವತ್ತು ಸ್ವಲ್ಪತ್ತು ಅಡ್ಡಾಗನು ಅಂತಂದು ಮಕ್ಕಂಡಿಂದೆ ಎಲ್ಲರೂ ನನ್ನ ಬಿಟ್ಟು ಹೋಗ್ಯಾ ಬಿಟ್ಟೀರಲ್ರಲೋ ನಿಮ್ ಬಾಯಿಗೆ ಮಣ್ಣಾಕ್ಲಿ. ನಾನು ಎದ್ದು ನೋಡ್ತಿನಿ ಅಲೆ ಇಳಿಹೊತ್ತಾಗಿತ್ತು ನೋಡಿದ್ರ ನೀವಿಬ್ರೂ ಇದ್ದಿಲ್ಲ. ಸಿಗ್ತಾರ ಬಾ ಎಲ್ಲೋಕ್ಕಾರ ಮಕ್ಳು ಅಂದ್ಕಂಡು ಮನಿಗೋಗಿದ್ದೆ.’ ಅಂತೇಳಿ ಸ್ವಲ್ಪ ಸರದು ಕುಂತ್ಲು.

‘ಇದನ್ನಾ ಮಾತಾಡ್ಕಂತ ಕುಂತ್ರ ನಮ್ ನಿವಾಳಿ ಎತ್ತುತಾಳೀಕಿ’ ಅಂತ ಅಂದ್ಕೊಂಡ ಬುಡೇನಜ್ಜ, ‘ಅದಿರ್ಲಬೇ ಮೈಲವ್ವ, ಮತ್ತೇನ್ ಹೊಸಾ ಸುದ್ದಿ ?’ ಅಂತ ಕೇಳಿದ. ಬುಡೇನಜ್ಜನ ಮಾತು ಕೇಳಿದ ಮೈಲವ್ವ. ‘ಯಾ ಹೊಸಾ ಸುದ್ದಿ ತರ್ತೀಯೋ ನಿಮೌನು. ಯಾವ ಪೇಪರ್ನರಾ ನೋಡು, ಯಾವ ಟಿಬಿನರಾ ನೊಡು, ಬರೇ ಅದಾ ಗದ್ಲಾನಾ ನಡದೈತಿ. ಆ ಇದಾನ ಸೌಧದಾಗೂ ಬ್ಯಾರೆ ಮಾತಾ ಇಲ್ಲ. ಯಪ್ಪಾ, ಯಾರ್ಯಾರು ಯಾವ್ಯಾವ ಪಾರ್ಟ್ ಮಾಡಕತ್ಯಾರ ಅಂತ ನಮಿಗೆ ಗೊತ್ತಾಗಲ್ಲ ಅಂದ್ಕಂಬಿಟ್ಟಾರೋ ಏನೋ ನಾಚಿಕಿ ಇಲ್ಲದ್ವು’. ಅಂತ ತನ್ನ ಸೆರಗಿಲೆ ಬಾಯಿ ಒರಿಸ್ಕಂಡ್ಳು.

ಮೈಲವ್ವನ ಮಾತು ಕೇಳಿದ ಬುಡೇನಜ್ಜ  ‘ಕುರಿ ಹಳ್ಳಕ್ಕ ಬಿದ್ರ ಆಳಿಗೊಂದು ಕಲ್ಲು ಅನ್ನಾದು ಸುಳ್ಳಲ್ಲ ಬಿಡಬೇ. ಅದ್ಕಾ ಹಿರಿಯಾರು ಮದ್ಲಾ ಈ ಗಾದಿ ಮಾಡಿ ಹೋಗ್ಯಾರ. ಈಗ ಇಮಾಮ್ ಸಾಬ್ ಗೂ ಗೋಕ್ಲಾಷ್ಟಮಿಗೂ ಏನ್ ಸಂಬಂಧ ಅನ್ನದಾ ನನಗ ತಿಳಿವಲ್ದು ಬುಡಬೇ ನನಿಗೆ.’ಅಂತ ತನ್ನ ಅನುಮಾನ ತೋರಿಸ್ಕಂಡ.

redಬುಡೇನಜ್ಜನ ಮಾತು ಕೇಳಿದ ಮೈಲವ್ವ ‘ಲೋ ಸಾಬಣ್ಣಾ, ಈಗ ನಡೀತಿರಾ ಗದ್ಲಕ್ಕಾ ಬರಾನು. ಈಗ ನಡದಿರಾದು ಭಾಳ ಅನ್ಯಾಯ ಅಂತ ಅರಳಿದ ಕಮಲದೋರು ಕೆರಳಿ ನಿಂತಾರ. ತೆನಿ ಹೊತ್ತ ಸೌಕಾರ್ತಿನೂ ಹೌದೌದು ಅನ್ನಾಕತ್ಯಾಳ. ಹಂಗಾರ ಇದಕ್ಕಿಂತ್ಲೂ ಮದ್ಲು ಯಾವತ್ತೂ ಇಂಥಾದ್ದು ನಡದಾ ಇಲ್ಲೇನ್ರಪ್ಪಾ ಸೂರಗಳಾ ? ಅಂತ ಕೈ ನೋರು ಕೇಳಕತ್ಯಾರ. ಇನ್ನೂ, ಅನ್ಯಾಯ ಅಂತ ಆಗಿದ್ರ, ಅದು ಗಣಪತಿ ಆದ್ರೇನು, ಕಲ್ಲಪ್ಪ ಆದ್ರೇನು ? ಯಾಕ್ ನೀವು ಒಂದು ಕಣ್ಣಿಗೆ ಬೆಣ್ಣಿ ಇನ್ನೊಂದು ಕಣ್ಣಿಗೆ ಸುಣ್ಣ ಮಾಡ್ತೀರಿ ? ಅಂತ ಕಲ್ಲಪ್ಪನೋರ ಅಪ್ಪನಾ ಕೇಳ್ಯಾನ. ಜನ ಎಲ್ಲದನ್ನೂ ನೋಡಕತ್ಯಾರ. ಮತ್ಯ ಇವ್ರೆಲ್ಲಾ ಯಾಕಿಂಗ ಮಾಡಕತ್ಯಾರ ಅನ್ನೋದು ಖೂನಾಗೈತಿ ಇದು ಮಾತ್ರ ಖರೆ ಐತಿ ನೋಡ್ಪಾ.’ ಅಂತೇಳಿದ್ಲು.

‘ಈ ಗಣಪತಿ ಅಷ್ಟಕಂದು ನೋವು ಹೇಳ್ಕಂಬೇಕರಾ ಕ್ಯಾಮರಾ ಹಿಡ್ಕಂಡು ಕುಂತೋರಿಗೆ ಚೂರೂ ತಲಿ ಓಡ್ಲಿಲ್ಲ ಅನ್ನಾದಾ ದೊಡ್ಡ ದುರಂತ ಬುಡಬೇ ಮೈಲವ್ವ’ ಅಂತಂದ ಬುಡೇನಜ್ಜ.

ಬುಡೇನಜ್ಜನ ಮಾತಿಗೆ ಮೈಲವ್ವ ‘ಅದೇನೋ ಅಂತಾರಲ್ಲ ಹಂಗಾತು ನೋಡಿದು ಸುದ್ದಿ. ತಮ್ಮಾ, ಅಂಥಾ ಕಾಲಾನಾ ಹೋತು. ಈಗೇನಿದ್ರೂ ಬರೀ ಲಾಭ, ನಷ್ಟ ಅಷ್ಟ. ಯಾರಿಗೇನಾದ್ರ ನಮಿಗೇನು ಅನ್ನೋರ ಮಧ್ಯ ಒಳ್ಳೇವರ್ನ ಚಿಮಣಿ ಹಚ್ಚಿ ಹುಡಕಬೇಕಾದ ಕೆಟ್ಟ ಪರಿಸ್ಥಿತಿಯೊಳಗ ಅದೀವಿ’ ಅಂದ್ಲು.

ಮೈಲವ್ವನ ಮಾತು ಕೇಳಿದ ರಾಮಣ್ಣ ಹೌದಬೇ ಮೈಲವ್ವಾ, ‘ಜುಜುಬಿ ಸಾಲಕ್ಕ, ಸಾಲಕ್ಕಿಂತ ಮಾನಕ್ಕ ಅಂಜಿ ರಾಶಿಗಟ್ಲೆ ರೈತ್ರು ಸತ್ತಾಗ ಎಲ್ಲಿಗೋಗಿದ್ರು ಇವ್ರೆಲ್ಲಾ?, ವರ್ಸಾಂಗಟ್ಲೆ ನಮ್ ಹುಬ್ಳಿ ಧಾರವಾಡದ ಮಂದಿ ಕಳಸಾ ಬಂಡೂರಿಗಾಗೆನ ಹೋರಾಡಕತ್ಯಾರಲ್ಲ ಅವಾಗ್ಯಾಕ ಇವರ್ಯಾರೂ ಕೆಮ್ಮಲಿಲ್ಲ ? ಗಾಡಿ ತಗಾಣಕ ಸುಲಭ ಸಾಲ, ಪೆಟ್ರೊಲ್ ಡಿಸೇಲ್ ರೇಟು ಕೇಳಬ್ಯಾಡ ಅನ್ನಂಗ ನಡಕಂಡೋರಿಗೆ ಒಂದನ್ನಾ ಮನವಿ ಸಲ್ಲಿಸ್ಯಾರೇನು ?’ ಅಂತೇಳಿ ತನ್ನ ಡೌಟ್ ಗಳನ್ನ ಕೇಳಿದ.

ರಾಮಣ್ಣನ ಪ್ರಶ್ನಿಗೆ ಬುಡೇನಜ್ಜ ‘ಹೇ ರಾಮಣ್ಣಾ, ಮನ್ನೆ ಬುದುವಾರದಿಂದ ಅದೆಂತಾದಾ ಟಿಟ್ ವಾರ್ ಅಂತ ಮಾಡಾಕತ್ಯಾರಂತ ಅದ್ರಾಗ ಈ ಕಳಸಾ ವಿಚಾರಾನೂ ಬಂದೈತಿ ನಮ್ ಎಲ್ಲಾ ಎಂಪಿಗಳೂ ರಾಜಿನಾಮಿ ಬಿಸಾಕಿ ಹೋರಾಟಕ್ಕಿಳಿರಿ. ಅಂತ ಏನೋ ನಡದೈತಂತಪಾ’ ಅಂದ. ಅದಕ್ಕಿದ್ದು ರಾಮಣ್ಣ ‘ಮಗೂನ ಚುಟೋರಾ ತೊಟ್ಲ ತೂಗಾಕ ಕುಂತ್ರ ಹಿಂಗಾ ಆಗಾದೇಳು. ನೋಡಾನು ಬುಡೋ ಇರ್ಲಿ.’ ಅಂತೇಳಿದ.

ನಡುವೆ ಬಾಯಿ ಹಾಕಿದ ಮೈಲವ್ವ ‘ಗುಜರಾತಿನಾಗ ಅದ್ಯಾರ ಪಟೇಲ ಅನ್ನಾ ಹುಡ್ಗನ್ನ ಬಿಟ್ಟಾರಂತಲ್ಲಲೋ ರಾಮಾ, ಆದ್ರ ‘ನೋಡ್ಪಾ ಮಗ್ನಾ ನೀ ಆರ್ ತಿಂಗ್ಳು ಗುಜರಾತದಾಗ ಇರಬ್ಯಾಡ’ ಅಂತ ಕಂಡೀಷನ್ ಆಕ್ಯಾರಂತೇಳು’ ಅಂದ್ಳು. ಅದಕ್ಕ ರಾಮಣ್ಣ ಅದೇನೋ ಹೇಳಾಕ ಹೊಂಟಿದ್ದ ಸಣ್ಣಗೆ ಹನಿ ಉದ್ರಾಕ ಸುರುವಾತು. ಅದಕ್ಕಿದ್ದು ನಮ್ ರಾಮಣ್ಣ ‘ಇದ್ಯಾಕಾ ಜುಬುರು ಹಿಂಡ್ಕಂತು ನಡ್ರಬೇ ಮನೀಗೋಗಾನು ಅಂತೇಳಿ ತಲಿಮ್ಯಾಲ ಟವಲ್ ಹಾಕ್ಕೊಂಡು ರಾಮಣ್ಣ, ಬುಡೇನಜ್ಜನೂ, ತಲಿಮ್ಯಾಲ ಸೆರಗು ಹಾಕ್ಕೊಂಡು ನಮ್ ಮೈಲವ್ವನೂ ಅವರವರ ಮನಿಗಳಿಗೆ ಹೊಂಟೋದ್ರು.

‍ಲೇಖಕರು admin

July 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: