
ರಾಜೀವ ನಾರಾಯಣ ನಾಯಕ
ಚಿತ್ತಾಲರ “ಕುಮಟೆಗೆ ಬಂದಾ ಕಿನ್ನರ ಜೋಗಿ” ಮತ್ತು ಬಾಡ ಎಮ್ ಎಚ್ ನಾಯಕರ ಹಲವಾರು ಕತೆಗಳಲ್ಲಿ ನಾವು ಓದಿದ ಕುಮಟೆ ಮತ್ತು ಸುತ್ತಮುತ್ತಲಿನ ದೀವಗಿತಾರಿ, ಅಘನಾಶಿನಿ, ಚಂದಾವಾರ, ಮಿರ್ಜಾನುಗಳೆಲ್ಲ ನಮ್ಮ ಭಾವಕೋಶದ ಭಾಗಗಳೇ ಆಗಿದ್ದರಿಂದ ಇಲ್ಲಿಗೆ ಉಳಿಯಲು ಬಂದಾಗ ಒಡನಾಡಿದ ಊರಿಗೇ ಬಂದಂತೆ ಅನಿಸಿತ್ತು. ಇಪ್ಪತ್ತೆರಡು ವರ್ಷಗಳಿಂದ ನಾವೀಗ ಕುಮಟೆಯ ನಿವಾಸಿಗಳೇ ಆಗಿದ್ದೇವೆ. ಕುಮಟೆಯಲ್ಲಿ ಈವರೆಗೂ ನಾವು ಸ್ವಂತ ಮನೆ ಮಾಡಲಿಲ್ಲವಾದರೂ ಯಾವುದೇ ರೀತಿಯಲ್ಲೂ ಅದೀಗ ಸ್ವಂತ ಊರಿಗಿಂತ ಕಡಿಮೆಯೇನಲ್ಲ.
ಕುಮಟೆಯ ಸುಶಿಕ್ಷಿತ ಮತ್ತು ವಿನಯಶೀಲ ಜನರು, ಇಲ್ಲಿಯ ಸುಂದರ ನೈಸರ್ಗಿಕ ತಾಣಗಳು, ಚಂದದ ದೇವಸ್ಥಾನಗಳು, ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು- ಈ ಊರಿಗೆ ಮೆರುಗನ್ನು ನೀಡಿವೆ. ಪ್ರಾಮಾಣಿಕ ವ್ಯಾಪಾರಸ್ಥರು, ಸೇವಾ ಮನೋಭಾವದ ವೈದ್ಯರು, ಹೆಚ್ಚು ವಸೂಲಿಗಿಳಿಯದ ರಿಕ್ಷಾ ಚಾಲಕರು-ಇವರೆಲ್ಲ ಕುಮಟೆಯನ್ನು ಆದರ್ಶ ಊರನ್ನಾಗಿಸಿದ್ದಾರೆ. ನಿಷ್ಕಲ್ಮಶ ಮನಸ್ಸಿನ ಹಾಲಕ್ಕಿಗಳು ಮಾರುವ ತಾಜಾ ತರಕಾರಿ, ಮೀನುಪೇಟೆ ಪಕ್ಕದಲ್ಲೆ ಧಕ್ಕೆಗೆ ತಾಟುವ ದೋಣಿಗಳಲ್ಲಿ ಸಿಗುವ ತಾಜಾತಾಜಾ ಮೀನು- ಈ ಊರನ್ನು ಹೊರಗಿನವರೂ ಇಷ್ಟಪಡುವಂತೆ ಮಾಡುತ್ತವೆ.

ಚಿತ್ರ: ರೇಣುಕಾ ರಮಾನಂದ
ಪಕ್ಕದ ಬಾಡಾ ತೇರು, ಹೆಗಡೆ ಜಾತ್ರೆ, ಚಂದಾವರ ಫೇಸ್ತ ಇವೆಲ್ಲ ಇಲ್ಲಿಯ ಜನಜೀವನದ ಸಾಂಸ್ಕೃತಿಕ ಭಾಗಗಳೇ ಆಗಿವೆ. ಇತ್ತೀಚಿನ ಕುಮಟಾ ಹಬ್ಬ, ಕುಮಟಾ ಉತ್ಸವಗಳಲ್ಲಿ ಸಹಸ್ರಾರು ಜನರು ಸಂಭ್ರಮಿಸುವುದು ನೋಡಿದರೆ ಇವು ಜನಪದದ ಆಧುನಿಕ ಸ್ವರೂಪಗಳಾಗಿ ಕಾಣುತ್ತವೆ. ಇಂಥ ಕುಮಟೆಯಂಥ ಕುಮಟೆ ಇತ್ತೀಚೆಗೆ ಕೋಮುಬಣ್ಣ ಹಚ್ಚಿಕೊಂಡ ಗಲಭೆಗಳಾಯ್ತು! ಸೌಹಾರ್ದತೆಗೆ ಹೆಸರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಮನಸ್ಸುಗಳು ಕಲಕಿದೆ.
ಸಮಾಜವನ್ನು ಒಡೆದು ಆಳುವ ಅತ್ಯಂತ ಹೇಯ ಕೃತ್ಯದಲ್ಲಿರುವ ಪ್ರಸ್ತುತ ರಾಜಕಾರಣದ ಕ್ರೂರ ಮುಖ ಅನಾವರಣಗೊಂಡಿದೆ. ನಮ್ಮ ಮಕ್ಕಳ ಮನಸ್ಸುಗಳಲ್ಲಿ ವಿಷ ಬೀಜವನ್ನು ಬಿತ್ತಿ ಅವರಿಗೆ ನೆಮ್ಮದಿಯಿಲ್ಲದ ಭವಿಷ್ಯವನ್ನು ಬಿಟ್ಟುಹೋಗುತ್ತಿದ್ದೇವೆಯೇ?
ಖ್ಯಾತ ನಾಟಕಕಾರ ಅಸಘರ್ ವಜಾಹತ್ ಭಾರತ ಪಾಕಿಸ್ತಾನ ವಿಭಜನೆಯ ಹಿನ್ನಲೆಯಲ್ಲಿ ಉಂಟಾಗುವ ಧರ್ಮ ವಿಪ್ಲವದ ಕಥಾವಸ್ತುವಿರುವ “ರಾಬಿ ನದಿ ದಂಡೆಯಲ್ಲಿ”ಎನ್ನುವ ಪ್ರಸಿದ್ಧ ನಾಟಕವೊಂದನ್ನು ರಚಿಸಿದ್ದಾರೆ. ದೇಶವು ಇಬ್ಬಾಗವಾದ ಸಂದರ್ಭದಲ್ಲಿ ಪಾಕಿಸ್ತಾನದ ಲಾಹೋರಿನಲ್ಲಿ ಒಂಟಿಯಾಗುವ ಹಿಂದು ತಾಯಿಯೊಬ್ಬಳ ಕಥೆ ಇದು. ಹಿಂದು ಮುಸ್ಲಿಂ ದ್ವೇಷ ಭುಗಿಲೆದ್ದು ಲಕ್ಷಾಂತರ ಜನರ ಮಾರಣ ಹೋಮವಾಗುತ್ತದೆ.
ಭಾರತದಿಂದ ಮರಳಿ ಬರಬೇಕಾದ ಮಗನ ಕತೆ ಏನಾಯಿತೆಂದೇ ಈ ತಾಯಿಗೆ ತಿಳಿದಿರುವುದಿಲ್ಲ. ಮಗನ ನಿರೀಕ್ಷೆಯಲ್ಲಿ ಹೈರಾಣಾದರೂ ಅಕ್ಕಪಕ್ಕದ ಮುಸ್ಲಿಂ ಮಕ್ಕಳಲ್ಲಿ ತನ್ನ ಮಗನನ್ನು ಕಾಣುತ್ತಾ ಜೀವನ್ಮುಖಿಯಾಗುತ್ತಾಳೆ. ಯುಗಾದಿ ದೀಪಾವಳಿ ಹಬ್ಬಗಳನ್ನು ಸ್ವಾಗತಿಸುತ್ತಾ ಸಿಹಿ ಮಾಡಿ ಸುತ್ತಲಿನವರಿಗೆಲ್ಲ ಹಂಚುತ್ತಾ ಎಲ್ಲರ ನೆಚ್ಚಿನ ಅಮ್ಮ/ಅಜ್ಜಿಯಾಗಿರುತ್ತಾಳೆ.
ಅಂಥ ಪ್ರೀತಿಯ ಅಜ್ಜಿ ತೀರಿಕೊಂಡಾಗ ಅವಳ ಅಂತ್ಯ ಸಂಸ್ಕಾರ ಮಾಡುವ ಸಂದರ್ಭದಲ್ಲಿ ಸಮಸ್ಯೆ ಉಂಟಾಗುತ್ತದೆ. ಕೆಲವರು ಆಕೆ ಜೀವನದುದ್ದಕ್ಕೂ ಹಿಂದೂ ಆಗಿ ಬದುಕಿದವಳು, ಅವಳನ್ನು ಹಿಂದೂ ಧರ್ಮದ ಪ್ರಕಾರವೇ ಅಗ್ನಿಸ್ಪರ್ಷ ಮಾಡುವ ಮೂಲಕ ಅಂತ್ಯ ಸಂಸ್ಕಾರ ಮಾಡುವುದು ಧರ್ಮ ಎಂದು ವಾದಿಸುತ್ತಾರೆ. ಅದು ಸಾಧ್ಯವೇ ಇಲ್ಲ, ಮುಸ್ಲಿಂರಾದ ನಾವು ಹಿಂದೂ ಧರ್ಮದ ಸಂಪ್ರದಾಯಗಳನ್ನು ಪಾಲಿಸುವುದು ನಮ್ಮ ಧರ್ಮದ ಖಿಲಾಫ್ ಆಗುತ್ತದೆ! ಮುಸ್ಲಿಂ ಧರ್ಮದಂತೆ ದಫನ್ ಮಾಡುವ ಮೂಲಕ ಅವಳನ್ನು ಖುದಾ ಇದ್ದಲ್ಲಿಗೆ ಕಳಿಸೋಣ ಎಂದು ಇನ್ನೊಂದು ಗುಂಪು ವಾದಿಸುತ್ತದೆ.
ಎರಡೂಗುಂಪುಗಳಲ್ಲಿ ಭಿನ್ನಾಭಿಪ್ರಾಯ ದ್ವೇಷಕ್ಕೆತಿರುಗಿ ಪರಸ್ಪರ ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪುತ್ತದೆ. ನಿಮ್ಮೆಲ್ಲರಿಗೂ ಪ್ರೀತಿಯನ್ನೇ ಕೊಟ್ಟಿದ್ದ ಆಕೆಯನ್ನು ಆಕೆ ನಂಬಿದ ಧರ್ಮದ ಪ್ರಕಾರವೇ ಅಂತ್ಯಸಂಸ್ಕಾರ ಕೈಗೊಳ್ಳಬೇಕು ಎಂದು ಮೌಲ್ವಿ ನಿರ್ಣಯಿಸುತ್ತಾನೆ. ಕೊನೆಗೂ ಆಕೆಯ ಚಟ್ಟವನ್ನು ಹೊತ್ತು “ರಾಮ್ ನಾಮ್ ಸತ್ಯ ಹೈ” ಎಂದು ಪ್ರಾರ್ಥಿಸುತ್ತಾ ಅವಳನ್ನು ಚಿತೆಗೆ ಅರ್ಪಿಸಲಾಗುತ್ತದೆ.
ಮುಂಬಯಿ ಕರ್ನಾಟಕ ಸಂಘ ಕನ್ನಡ ರಂಗಭೂಮಿ ಪ್ರದರ್ಶಿಸಿದ ಆ ನಾಟಕದಲ್ಲಿ ನಾನು ಮೌಲ್ವಿಯ ಪಾತ್ರವನ್ನು ನಿರ್ವಹಿಸಿದ್ದೆ! ಸ್ವಧರ್ಮನಿಷ್ಠನಾಗಿಯೂ ಅನ್ಯಧರ್ಮವನ್ನು ಗೌರವಿಸುವ ಮೌಲ್ವಿ ಪಾತ್ರದಿಂದಾಚೆಗೂ ನನ್ನೊಳಗೆ ಇಳಿದಿದ್ದ. ಉದ್ಯೋಗ ನಿಮಿತ್ತ ನಾನೀಗ ಮುಂಬೈನಲ್ಲಿದ್ದರೂ ನನ್ನರ್ಧ ಕುಟುಂಬ ಕುಮಟೆಯಲ್ಲೇ ಇರುವುದರಿಂದ ತಿಂಗಳಿಗೊಮ್ಮೆಯಾದರೂ ಊರಿಗೆ ಬರುವುದು ಮಾಡುತ್ತಿರುತ್ತೇನೆ.

ಮುಂಬೈನಿಂದ ಹೊರಡುವ ಮತ್ಸ್ಯಗಂಧ ನಸುಕಿನಲ್ಲಿ ಕುಮಟೆಯಲ್ಲಿ ಇಳಿಸಿ ಹೊನ್ನಾವರದ ಕಡೆ ಬಾಗುತ್ತಾ ಬಳಕುತ್ತಾ ಮುಂದೆ ಹೋಗುತ್ತಾಳೆ. ಹತ್ತು ಹದಿನೈದು ನಿಮಿಷಗಳಲ್ಲಿ ತಲುಪಬಹುದಾದಷ್ಟು ಸಮೀಪದಲ್ಲೆ ಮನೆ ಇರುವುದರಿಂದ ನಾನು ಸಾಮಾನ್ಯವಾಗಿ ನಡೆದೇ ಹೋಗುತ್ತೇನೆ. ರೈಲಿನಿಂದ ಇಳಿದವನೇ ಪ್ಲಾಟಫಾರ್ಮ ಇಳಿದು ಒಂದು ಹತ್ತು ಮಾರಾದರೂ ಬರಿಗಾಲಲ್ಲಿ ನಡೆಯುತ್ತೇನೆ.
ಮಣ್ಣು, ಚಿಕ್ಕ ಚಿಕ್ಕ ಗುಜ್ಜುಗಳು, ಇಬ್ಬನಿ ಅಂಟಿರುವ ಗರಿಕೆಗಳು ಪಾದ ಸ್ಪರ್ಷವಾಗುವ ಆ ಗಳಿಗೆಯಲ್ಲಿ ಪೂರ್ತಿ ಮಣ್ಣಿಗೆ ಮರಳಿದ ಭಾವವೊಂದು ಕಚಗುಳಿ ನೀಡುತ್ತದೆ. ಮುಂಬೈ ಧಾವಂತದ ಬದುಕಿನಿಂದ ಬಿಡುಗಡೆಗೊಂಡು ಹಗುರವಾದಂತೆ ಅನಿಸುತ್ತದೆ. ಮಾಸ್ತಿಕಟ್ಟೆ ಬಳಿ ಬಂದಾಗ ಪುರ ಪ್ರವೇಶದ ಹೆಬ್ಬಾಗಿಲಿನಲ್ಲಿ ನೆಲೆಸಿರುವ ಮಹಾಸತಿ ದೇವಿ ಇನ್ನೂ ಯೋಗನಿದ್ರೆಯಲ್ಲಿರುತ್ತಾಳೆ.
ಹಗಲು ಹೊತ್ತಿನಲ್ಲಿ ಪುರಜನರ ತರಾವರಿ ಬೇಡಿಕೆಗಳನ್ನು ಆಲಿಸಬೇಕಾದ ದೇವಿಗೆ ಈ ನಸುಕಿನಲ್ಲಿ ನಿದ್ರಾಭಂಗ ಮಾಡಕೂಡದು ಎಂದರಿತು ನನ್ನೆಲ್ಲ ಬೇಡಿಕೆಗಳನ್ನು ಬದಿಗಿರಿಸಿ ಬರೀ ಗುಡ್ ಮಾರ್ನಿಂಗ್ ಹೇಳಿ ಹಾಗೇ ಮುಂದೆ ಹೋಗುತ್ತೇನೆ! ಆದರೆ ಈ ಬಾರಿ ಕುಮಟೆಗೆ ಹೋದಾಗ ಹಾಗೆ ಸುಮ್ಮನೇ ಹೋಗುವುದು ಸಾಧ್ಯವಿಲ್ಲ.
ಅವಳನ್ನುಎಬ್ಬಿಸಬೇಕು. ಎಬ್ಬಿಸಿ ಕೇಳಬೇಕು “ತಾಯಿ ನಿನ್ನ ಆಸ್ಥಾನದಲ್ಲಿ ಈ ಅಶಾಂತಿ ಯಾಕೆ ಉಂಟಾಯ್ತು? ಸಾಮರಸ್ಯದಿಂದ ಇದ್ದವರು ಸಂಶಯದ ಕರಿನೆರಳಲ್ಲಿ ಯಾಕೆ ನರಳುವಂತಾಗಿದೆ? ತಪ್ಪು ಮಾಡಿದರೆ ಕಪಾಳಕ್ಕೊಂದು ಕೊಟ್ಟು ಬುದ್ಧಿ ಹೇಳಬೇಕಾದ ಕಿಶೋರನನ್ನು ಕೊಂದು ಹಾಕುವಷ್ಟು ಕ್ರೌರ್ಯ ಈ ಲೋಕದಲ್ಲಿ ಯಾಕಿದೆ?
ಈ ತ್ವೇಷಮಯ ಸನ್ನಿವೇಶದಲ್ಲೂ ನಿನ್ನ ಆ ದಿವ್ಯ ಮುಗುಳುನಗೆಯಲ್ಲಿ ನಿಂತಿರುವೆಯಾ? ಏಳು ತಾಯೆ! ಜೊತೆಜೊತೆಗಿದ್ದವರೇ ಹೊಡೆದಾಡುವ ಹಂತಕ್ಕೆ ಬಂದಿರುವುದನ್ನು ನಿನ್ನ ದಿವ್ಯ ದೃಷ್ಟಿಯಿಂದಾದರೂ ನೋಡು. ಮನಸ್ಸು ಮುರಿದು ನಿಂತಿರುವ ಜನರಿಗೆ ಸಮಾಧಾನದ ಬುದ್ಧಿ ಕೊಡು. ಸಮಚಿತ್ತವನ್ನು , ವಿವೇಕವನ್ನು, ಸಹನೆಯನ್ನು ನೀಡು. ಒಡೆದ ಮನಸುಗಳನ್ನು ಒಂದಾಗಿಸಿ ಶಾಂತಿ ನೀಡು ದೇವಿ… ”
ಮಾಸ್ತಿಯಮ್ಮ ಕಣ್ತೆರೆಯುವವರೆಗೂ ಹೀಗೇ ಪ್ರಾರ್ಥಿಸಬೇಕು ಎಂದುಕೊಂಡಿದ್ದೇನೆ!






ವಿಷಯವನ್ನು ಸರಳ, ಸಹಜ ರೀತಿಯಲ್ಲಿ ಓದುಗರಿಗೆ ತಲುಪಿಸುವ ನಿಮ್ಮ ಕಲೆ ಪ್ರಶಂಸನೀಯ.