
ಗಿರಿಜಾ ಶಾಸ್ತ್ರಿ
ಕುಣಿಯಲಿ ಹೇಗೆ
ಪಟ ಹರಿದು
ಕಟ್ಟು ಮುರಿದು
ನಿಂತೇ ಬಿಟ್ಟ
ಧುತ್ತೆಂದು ಎದುರಿಗೆ.
ಹದುಳವೇ ಎಂದು ಕೇಳುತ್ತಾನೆ
ಸೀದಾ ಎದ್ದು ಬಂದು
ನವಿಲುಗರಿ ಪುಟದಿಂದಲೇ.
ಮುಖವೇ ಇಲ್ಲದ ಮೀಸೆಯಡಿ
ನಗುತ್ತಾ
ಹಿಂಬಾಲಿಸುತ್ತಾನೆ
ಅಡುಗೆ ಕೋಣೆಗೆ
ಎರಡೂ ಕೈ ಆತು
ಚೌಕಟ್ಟಿಗೆ
ತುಸುವೇ ಬಾಗಿ ನಿಂತು
ತಾಗಿಕೊಂಡೇ ನಿತಂಬಕ್ಕೆ
ಮಾತು ಮಾತು ಮಾತು.
ಕದಪು ಕೆಂಪಾಗುವುದಿಲ್ಲ
ರಕ್ತ ಬಿಸಿಯೇರುವುದಿಲ್ಲ
ಎಲಬು ಹಂದರದೊಳಗೆ
ಸಂದಿವಾತದ ಝಂಝಾವಾತ
ಬಗ್ಗುವುದಿಲ್ಲ ಸೊಂಟ
ನಿಲ್ಲುವುದಿಲ್ಲ ನೆಟ್ಟಗೆ
ಕುರುಳು ಕನಸು
ಬೋಳು ಮುಂದೆಲೆ
ನೆರಿಗೆ ಸೀರೆಗೆ
ಸಾವಿರ ಸುಕ್ಕು
ಮದರಂಗಿ ಕೈಗೂ.
ಅವನು ಹಿಡಿದ ನವಿಲುಗರಿ ಮಾತ್ರ
ಜಾಗರವಾಡುತ್ತದೆ
ವೇಣು ಮೃದಂಗ ವೀಣಾ ವಾದನ
ಕಣ್ಣುಕುಕ್ಕುವ ಬೆಳಕು.
ಕುಣೀ.. ಎಂದರೆ ಕುಣಿಯಲಿ ಹೇಗೆ…..
ಸಾವಿರದ ಕನಸು
ಹಗಲು ವೇಷ ತೊಟ್ಟಮೇಲೆ
ಬಿಸಿಲೇರದೆ ಇದ್ದೀತೇ
ಕಾದು ಡಾಂಬರು ರಸ್ತೆ
ಬರಿಗಾಲ ನಡಿಗೆ.
‘ಕತ್ತಲೆಗೆ ಕಾಯಬೇಕು’
ಸರಕು ಹೊತ್ತು ಸಾಗಿಸಲು
‘ನೂರಾರು ತಲೆ’
ಸಂತೆಯೊಳಗೆ ಕರಮತ್ತು
ಜನಜಾತ್ರೆ ನೂಕುನುಗ್ಗಲು.
ಯಾರ ಸಲುವಾಗಿಯೂ
ಇಲ್ಲ
ವ್ಯಾಪಾರ ಬದಲಾಗುವುದಿಲ್ಲ
ವ್ಯಾಪಾರಿಯೇ ಬದಲಾದರೆ
ಹೊಸಹಾದಿಯೇ ಎಲ್ಲ ……
‘ಅವರಿವರ ತಳ್ಳಿ ಮುನ್ನಗ್ಗಿ’
ಆಯತಪ್ಪದೇ ನಡೆಯಬಹುದೇ
‘ನಗರದಲ್ಲಿ ಬೆಳಗಾಗುವುದೇ ಹೀಗೆ’
ಎಂದರೆ ನಂಬಬಹುದೇ.
ಸಣ್ಣ ಸಣ್ಣ ಆಸೆ ಭರವಸೆಗಳ
ನೂರು ಚಕ್ರಗಳ ಮೇಲೆ
ಚೆಂದ ಉರುಳುವುದಾದರೆ
ಸಾವಿರದ ಕನಸು ಬೀಳಬಹುದೇ.





ನಗರದಲ್ಲಿ ಬೆಳಗಾಗುವುದೇ ಹೀಗೆ’
ಎಂದರೆ ನಂಬಬಹುದೇ.
ಗಿರಿಜಾ ಶಾಸ್ತ್ರಿಯವರನ್ನು ನಾನು ಜಾಸ್ತಿ ಓದಿಲ್ಲ. ಆದರೆ ಈ ಪದ್ಯಗಳನ್ನು ಓದುತ್ತಿದ್ದರೆ ಅವರ ಓದಿನ ಹರಹು ಗೊತ್ತಾಗುತ್ತದೆ. ಗ್ರಹಿಸಿ ಬರೆಯದೇ ಅರಿತು ಬರೆಯದೇ ಅನುಭವವನ್ನು ಕವಿತೆಯಾಗಿಸುವ ದಾರಿ ಕಷ್ಟದ್ದು. ಅದರಿಂದ ಹುಟ್ಟುವ ಕವಿತೆ ಸುಖದ್ದು.
ನಗರದಲ್ಲಿ ಹೀಗೆ ಬೆಳಗಾಯಿತು
ಗಿರಿಜಾ ಶಾಸ್ತ್ರಿ ಪದ್ಯಗಳ
ಹಾಗೆ.
ಥ್ಯಾಂಕ್ಸ್ ಗಿರಿಜಕ್ಕ.
ನಿಮ್ಮ ಅನಿರೀಕ್ಷಿತ ಪ್ರತಿಕ್ರಿಯೆ ನನಗೆ ಬಹಳ ಖುಷಿಯನ್ನುಂಟುಮಾಡಿದೆ. ಧನ್ಯವಾದಗಳು ಜೋಗಿಯವರೆ. ನಿಮಗೆ ನನ್ನ ಪುಸ್ತಕಗಳನ್ನು ಓದುವ ವ್ಯವಧಾನ ಮತ್ತು ಆಸಕ್ತಿ ಇದ್ದರೆ ಖಂಡಿತಾ ಕಳಿಸಿಕೊಡುತ್ತೇನೆ. ನಿಮ್ಮ ಇ.ಮೇಲ್ ವಿಳಾಸ ಕೊಡಬಹುದೇ?
ಪ್ರೀತಿಯಿಂದ
ಗಿರಿಜಾ
jogiwriter@gmail.com, ಇದಕ್ಕೆ ಕಳುಹಿಸಿಕೊಡಿ. ಖಂಡಿತಾ ಓದುತ್ತೇನೆ.
ಗಿರಿಜಕ್ಕಾ..
ಕುಣೀ.. ಎಂದರೆ ಕುಣಿಯಲಿ ಹೇಗೆ…..
ಈ ಕಡೆಯ ಸಾಲಲ್ಲಿ ನಿಂತುಬಿಟ್ಟಿದೇನೆ.
ಎಲ್ಲ ಸಾಲುಗಳ ಪಕ್ಕದಲ್ಲೂ ಮೆತ್ತಗೆ ಓಡಾಡಿ ನೇವರಿಸಿ ಬಂದೆ.
ಎಲ್ಲ ಜೀವಗಳ ಕುರುಳು ಕನಸು, ಬೋಳು ಮುಂದಲೆ, ಮದರಂಗಿ ಕೈಗೆ ಸಾವಿರ ಸುಕ್ಕು….
ನಕ್ಕು ನಕ್ಕೂ ಮರೆಸುವ ಬಿಕ್ಕು..
ಕುಣೀ ಎಂದರೆ ಕುಣಿಯಲಿ ಹೇಗೆ….
ಹಗಲು ವೇಷ ತೊಟ್ಟ ಮೇಲೆ.. ಕತ್ತಲೆಗೆ ಕಾಯಲೇ ಬೇಕು… ಏರುತಲೆ, ಆರುತಲೆ, ಇಳಿಯುತಲೆ …..ಇರಬೇಕು.
ಕುಣಿಯಲಾಗದಿದ್ದರೂ ಓಡುತಿರಬೇಕು.
ನಂಬು ಎಂದು ನೇರವಾಗಿ ನಿಂತಿದ್ದನ್ನು ತಳ್ಳಿ ನೂಕುನುಗ್ಗುಲಲ್ಲಿ ನುಗ್ಗಿ ನಂಬಬಾರದ್ದನ್ನೇ ಹಿಡಿದು ಜೋತಾಡುತ್ತಾ
ಸಣ್ಣ ಸಣ್ಣ ಆಸೆ ಭರವಸೆಗಳ ಕೈಯಾನಿಕೆಯ ಮೇಲೆ
ಬದುಕಿನ ನೂಲಿನ ಮೇಲೆ ಹೆಜ್ಜೆಯಿಡುತ್ತಾ ಬೀಳಲಾಗದ ಕನಸಿಗೆ ಹಾತೊರೆಯಲೇಬೇಕು.
ಕುಣೀ ಎಂದರೆ ಕುಣಿಯಲಿ ಹೇಗೆ?
ವಾಹ್ ಸಿಂಧೂ! ನನ್ನ ಕವಿತೆಗೆ ನಿಮ್ಮ counter ಕವಿತೆ ಸೊಗಸಾಗಿದೆ. thanks for your love.