ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂ ವೀ ಹೊಸ ಕಾದಂಬರಿ ‘ಜೈ ಭಜರಂಗಬಲಿ’

ಖ್ಯಾತ ಸಾಹಿತಿ ಕುಂ ವೀರಭದ್ರಪ್ಪ ಅವರ ಹೊಸ ಕಾದಂಬರಿ ಬಿಡುಗಡೆಗೆ ಸಜ್ಜಾಗಿದೆ.

‘ಜೈ ಭಜರಂಗಬಲಿ’ ಕೃತಿಯನ್ನು ಸಪ್ನಾ ಬುಕ್ ಹೌಸ್ ಪ್ರಕಟಿಸಿದೆ.

ಈ ಕೃತಿಗೆ ಹೆಸರಾಂತ ವಿಮರ್ಶಕರಾದ ಎಸ್ ದಿವಾಕರ್ ಅವರು ಬರೆದ ಮುನ್ನುಡಿ ಇಲ್ಲಿದೆ-

ಎಸ್. ದಿವಾಕರ್

ನಿಡುಗಾಲದ ಮಿತ್ರ ಕುಂ.ವೀರಭದ್ರಪ್ಪನವರ ‘ಜೈ ಭಜರಂಗಬಲಿ’ ಎಂಬ ಈ ಹೊಸ ಕಾದಂಬರಿಗೆ ಮುನ್ನುಡಿಯ ರೂಪದಲ್ಲಿ ನಾಲ್ಕು ಮಾತು ಬರೆಯುವುದು ನನಗಂತೂ ಸುಲಭವಲ್ಲ. ಅವರ ಅನೇಕ ಕತೆಗಳನ್ನೂ ಕೆಲವು ಕಾದಂಬರಿಗಳನ್ನೂ ಓದಿರುವ ನನಗೆ ಅವರನ್ನು ಕನ್ನಡದ ಯಾವ ಬರಹಗಾರರ ಜೊತೆಗೂ ಹೋಲಿಸಲಾಗದು.

ಅವರ ಹಾಗೆ ಬರೆಯುತ್ತಿರುವವರು ಇಂದು ಇಂಗ್ಲಿಷ್ ಸಾಹಿತ್ಯದಲ್ಲಾಗಲೀ ಯೂರೋಪಿಯನ್ ಸಾಹಿತ್ಯದಲ್ಲಾಗಲೀ ಇರಲಿಕ್ಕಿಲ್ಲ. ಸ್ವಲ್ಪಮಟ್ಟಿಗೆ ಅವರು ಬ್ರೆಜಿಲ್ ದೇಶದ, ಪೋರ್ಚುಗೀಸ್ ಭಾಷೆಯ ಜೋರ್ಜ್ ಅಮಾಡೊ ಥರ.

ಇಂಗ್ಲಿಷಿಗೆ ಅನುವಾದಗೊಂಡಿರುವ ಅಮಾಡೋನ ಮುಖ್ಯ ಕಾದಂಬರಿಗಳೆಂದರೆ “ಗಾಬ್ರಿಯೆಲಾ, ಕ್ಲೋವ್ ಅಂಡ್ ಸಿನಾಮನ್”, “ದೋನಾ ಫ್ಲೋರ್ ಅಂಡ್ ಹರ್ ಟೂ ಹಸ್ಬೆಂಡ್ಸ್” ಮತ್ತು “ಟೆಂಟ್ ಆಫ್ ಮಿರಾಕಲ್ಸ್”. ಬ್ರೆಜಿಲ್ಲಿನ ವಿವಿಧ ಪ್ರಾಂತಗಳ ಸಣ್ಣ ಸಣ್ಣ ಪಟ್ಟಣಗಳೇ ಕ್ರಿಯಾಕ್ಷೇತ್ರವಾಗಿರುವ ಈ ಕಾದಂಬರಿಗಳಲ್ಲಿ ಪಾರಂಪರಿಕ ಮೌಲ್ಯಗಳ ಪತನವೂ ಲೈಂಗಿಕತೆಯ ಬಗ್ಗೆ ಬ್ರೆಜಿಲಿನ್ನರಲ್ಲಿ ಕಾಣಿಸುವ ಮುಕ್ತ ಅಭಿವ್ಯಕ್ತಿಯೂ ಒಂದು ಬಗೆಯ ‘ಫಾರ್‌ಮ್ಯುಲಾ’ ಆಗಿವೆಯೆನ್ನಬೇಕು.

ಕಳೆದುಹೋದ ಕಾಲವನ್ನು ಕುರಿತ ಹಳಹಳಿಕೆ, ಲೈಂಗಿಕತೆಯ ಬಗ್ಗೆ, ಜನಾಂಗೀಯ ವೈಶಿಷ್ಟ್ಯದ ಬಗ್ಗೆ ರಾಜಕೀಯವಾಗಿ ಸರಿ ಎನ್ನಿಸುವಂಥ ನಿಲುವು, ಸಾಮಾಜಿಕ ಅಸಮಾನತೆಯ ವಿಕಾರ ಸ್ವರೂಪ, ಉದ್ದಕ್ಕೂ ಹರಿಯುವ ವೈನೋದಿಕ ಧಾಟಿ, ಇವೆಲ್ಲವುಗಳಿಂದಾಗಿ ಅವನ ಕೃತಿಗಳು ಉತ್ಕೃಷ್ಟ, ನಿಕೃಷ್ಟಗಳನ್ನು ಒಟ್ಟಿಗೆ ಹಿಡಿದುಕೊಡುವ, ಅತ್ಯತಿಶಯ ಧಾಟಿಯ ನಿರೂಪಣೆಯಿಂದ ಓದುಗರ ಮೇಲೆ ಸಮ್ಮೋಹನಾಸ್ತ್ರ ಬೀರಬಲ್ಲ ‘ಟಾಲ್‌ಟೇಲ್’ ಎನ್ನಬಹುದಾದ ಕಥನಗಳಾಗಿವೆ.

ಕುಂವೀಯವರಲ್ಲಿ ಕೂಡ ಇಂಥ ಅನೇಕ ಅಂಶಗಳು ಇರುವುವಾದರೂ ಅವರ ನಿರೂಪಣೆಯ ವೈನೋದಿಕ ಧಾಟಿಗೆ ಹರಿತವಾದೊಂದು ಸಾಮಾಜಿಕ ವಿಮರ್ಶೆಯ ಅಲಗೂ ಇರುವುದೊಂದು ವಿಶೇಷ.

ಪ್ರಸ್ತುತ ‘ಜೈ ಭಜರಂಗಬಲಿ’ ಕಾದಂಬರಿಯಲ್ಲಿ ಕುಂವೀಯವರದು ಅಡೆತಡೆಯಿಲ್ಲದ ಪ್ರವಾಹೋಪಾದಿಯ ಬರವಣಿಗೆ. ಅವರಿಲ್ಲಿ ಸೃಷ್ಟಿಸಿರುವ ನೂರಾರು ಪಾತ್ರಗಳು ಒಂದಿಡೀ ದೇಶವನ್ನೇ ಮೆರವಣಿಗೆ ಮಾಡಿಸಿಬಿಡಬಲ್ಲಷ್ಟು ವೈವಿಧ್ಯಮಯವಾಗಿವೆ. ಸಂದರ್ಭಕ್ಕೆ ತಕ್ಕಂತೆ ನಿರಾಯಾಸವಾಗಿ ಪಾತ್ರಗಳನ್ನು ಸೃಷ್ಟಿಸಬಲ್ಲ ಅವರು ಕೆಲವೇ ಮಾತುಗಳಲ್ಲಿ ಆ ಪಾತ್ರಗಳ ವ್ಯಕ್ತಿ ವಿಶೇಷವನ್ನು ಚಿತ್ರಿಸಬಲ್ಲರು; ತಮ್ಮ ಓದುಗರನ್ನು ಒಂದು ಸಣ್ಣ ಕೊಂಪೆಯಿಂದ ಅಮೆರಿಕಾ, ಆಫ್ರಿಕಾ, ದಕ್ಷಿಣ ಅಮೆರಿಕಾ ಖಂಡಗಳಿಗೂ ಕರೆದೊಯ್ಯಬಲ್ಲರು.

ಅಂದ ಹಾಗೆ, ಇವತ್ತಿನ ಭಾರತದ ಘೋರವಾಸ್ತವವನ್ನು ಅತ್ಯತಿಶಯ ವಿನೋದದಲ್ಲಿ ನಿರೂಪಿಸುವ ಕಾದಂಬರಿ ಹೇಗಿದ್ದೀತು? ಅದು ಸ್ವಾರ್ಥ, ಭಯ, ದ್ರೋಹ, ಭ್ರಾಂತಿ, ಅಸಂಬದ್ಧತೆ, ಇತ್ಯಾದಿಯನ್ನು ಕಾಲ್ಪನಿಕತೆಯ ಉತ್ತುಂಗದಿಂದ ಪರಿಶೀಲಿಸುವ, ರಾಜಕೀಯ ಬರವಣಿಗೆಯ ರೂಪಾಂತರವೇ ಎನ್ನಬಹುದಾದ ಕಾದಂಬರಿಯಾಗಿರುತ್ತದೆ, ಅಲ್ಲವೆ? ಅದಕ್ಕೆ ವಾಸ್ತವವಾದಿ ನಿರೂಪಣೆಯ ರಾಜಮಾರ್ಗವಷ್ಟೇ ಸಾಕಾಗುವುದಿಲ್ಲ.
ಕುಂವೀಯವರು ಈ ಕಾದಂಬರಿಯಲ್ಲಿ ರಾಜಕೀಯ ಬರವಣಿಗೆಯನ್ನು ಅಚ್ಚರಿ ಹುಟ್ಟಿಸುವಷ್ಟು ಶಕ್ತಿಯುಳ್ಳ ಅದ್ಭುತ ಕಾದಂಬರಿಯಾಗಿ ಸೃಷ್ಟಿಸಿದ್ದಾರೆ. ಮಂಗಗಳ ಕತೆಯ ಮೂಲಕ ಅವರು ಶ್ವಾನದೃಷ್ಟಿಯಲ್ಲಿ ಇಂದಿನ ಭಾರತ ಹೇಗೆ ಕಾಣಿಸುತ್ತದೆಯೆಂದು ತೋರಿಸಿದ್ದಾರೆ. ಬಹುಶಃ ಇದೇ ಕಾರಣದಿಂದ ಅವರು ನಮ್ಮ ವಾಸ್ತವವನ್ನು ನೇರವಾಗಿ ಗಮನಿಸದೆ, ತುಸು ಓರೆಯಾಗಿ ನೋಡಿದ್ದಾರೆನಿಸುತ್ತದೆ.

ಈ ಕಾದಂಬರಿ ಸಾಹಿತ್ಯದಲ್ಲಿ ‘ಅಲಿಗರಿ’ ಎಂದು ಕರೆಯುವ ತಂತ್ರ ಅಥವಾ ಪ್ರಭೇದಕ್ಕೆ ಸೇರುವಂಥದು. ಅನ್ಯೋಕ್ತಿ ಅಥವಾ ರ‍್ಯಾಯೋಕ್ತಿ ಎಂದು ಕರೆಯಲ್ಪಡುವ ಅಲಿಗರಿಯನ್ನು ಎರಡರ್ಥ ಅಥವಾ ಎರಡು ವಿಭಿನ್ನ ಧ್ವನಿಗಳಿರುವ ಕೃತಿ ಎನ್ನಬಹುದು. ಒಂದು, ಪ್ರಾಥಮಿಕ ಅಥವಾ ಮೇಲ್ಮೆಯ ಅರ್ಥ; ಇನ್ನೊಂದು ಎರಡನೆಯ ಅಥವಾ ಮೇಲ್ಮೆ ಅಡಿಯ ಅರ್ಥ. ಅಂದರೆ ಅಲಿಗರಿಯನ್ನು ಎರಡು ಪಾತಳಿಗಳಲ್ಲಿ ಓದಬಹುದು; ಎರಡು ರೀತಿ ವ್ಯಾಖ್ಯಾನಿಸಬಹುದು. ಬಹುಶಃ ಇದೇ ಕಾರಣದಿಂದ ಅಲಿಗರಿ ‘ಫೇಬಲ್’ಗೆ ತೀರ ಹತ್ತಿರವಾದದ್ದು.

ಈ ಪ್ರಭೇದದಲ್ಲಿ ತೀರ ಪರಿಚಿತವಾಗಿರುವ ಇಂಗ್ಲಿಷ್ ಕಾದಂಬರಿಯೆಂದರೆ ‘ಅನಿಮಲ್ ಫಾರಂ’. ಜಾರ್ಜ್ ರ‍್ವೆಲ್ ಬರೆದ ಆ ಕೃತಿಯಲ್ಲಿ ಹಿಂದಿನ ಸೋವಿಯೆಟ್ ಯೂನಿಯನ್ನಿನಲ್ಲಿದ್ದ ಆಡಳಿತ ವ್ಯವಸ್ಥೆಯ ತೀವ್ರ ವಿಡಂಬನೆಯಿದೆ. ಮಿಸ್ಟರ್ ಜೋನ್ಸ್ ಎಂಬವನ ಫಾರಂನಲ್ಲಿರುವ ಪ್ರಾಣಿಗಳು ತಮ್ಮ ಮನುಷ್ಯ ದಣಿಗಳ ವಿರುದ್ಧ ದಂಗೆಯೆದ್ದು ಅವರನ್ನು ಓಡಿಸುತ್ತವೆ; ಹಂದಿಗಳ ನೇತೃತ್ವದಲ್ಲಿ ಆ ಫಾರಂಅನ್ನು ಸಮಾನತೆಯ ಸೂತ್ರಗಳ ಆಧಾರದ ಮೇಲೆ ನಡೆಸಲು ನಿರ್ಧರಿಸುತ್ತವೆ. ಆದರೆ ಬಹುಬೇಗ ಆ ಹಂದಿಗಳೇ ತಮ್ಮ ಅಧಿಕಾರ ಮದದಿಂದ ಭ್ರಷ್ಟಗೊಂಡು ತಮ್ಮ ನಾಯಕತ್ವದಲ್ಲಿ ಹೊಸ ನಿರಂಕುಶ ವ್ಯವಸ್ಥೆಯನ್ನು ಜಾರಿಗೆ ತರುತ್ತವೆ. ಇದರ ಪರಿಣಾಮವೆಂದರೆ ಕ್ರಾಂತಿಯ ಕಾಲದಲ್ಲಿ ಮೊಳಗಿದ ಘೋಷಣೆಗಳು ಬದಲಾದ ಪರಿಸ್ಥಿತಿಗೆ ತಕ್ಕಂತೆ ಬದಲಾಗುವುದು. ಅಂದರೆ ಮನುಷ್ಯ ಸ್ವಾರ್ಥದ ಮುಂದೆ ಯಾವುದೇ ಸಿದ್ಧಾಂತ, ಅದು ಎಷ್ಟೇ ಉದಾತ್ತವಾಗಿದ್ದರೂ ಕೂಡ, ಸೋಲುವುದು ಶತಸ್ಸಿದ್ಧ ಎಂಬ ಎಂಬ ಧ್ವನಿ ಆ ಕೃತಿಯಲ್ಲಿದೆ.

ಕುಂವೀಯವರ ಈ ಕಾದಂಬರಿ ಕೂಡ ಒಂದು ಯಶಸ್ವಿ ಅಲಿಗರಿ. ಮರ್ಕಟಗಳನ್ನು ಸುತ್ತುವರಿದಿರುವ ಈ ವಿಶಿಷ್ಟ ಕಥಾನಕದಲ್ಲಿ ಮನುಷ್ಯರಿರುವ ಹಾಗೆ ಮಂಗಗಳೂ ಇವೆ. ಮನುಷ್ಯ ಕಣ್ಣುಗಳಿಂದ ಮಂಗಗಳನ್ನು ನೋಡುವುದೇನೋ ಸರಿ. ಆದರೆ ಮಂಗ ಕಣ್ಣುಗಳಿಂದ ಮನುಷ್ಯನನ್ನು ನೋಡುವಂತಾದರೆ? ಅಥವಾ ಮನುಷ್ಯನನ್ನೇ ಮಂಗದ ಜೊತೆ ಸಮೀಕರಿಸುವಂತಾದರೆ?

ಆಂಧ್ರದಲ್ಲಿರುವ ಕಸಾಪುರ ನೆಟ್ಟಕಂಟಯ್ಯಸ್ವಾಮಿಯ ಶ್ರೀಕ್ಷೇತ್ರ. ಅಲ್ಲಿ ಮೂಲಾ ನಕ್ಷತ್ರ ದಿನದಂದು ಮಹಾಮಂಗಳಾರತಿಯ ತಳಿಗೆಯಲ್ಲಿ ಒಂದು ಮಂಗ ಪ್ರತ್ಯಕ್ಷವಾಗುತ್ತದೆ. ಅದು ಸಾಕ್ಷಾತ್ ನೆಟ್ಟಕಂಟಯ್ಯಸ್ವಾಮಿಯೇ ಎಂದು ಭಕ್ತಾದಿಗಳು ನಂಬುವುದು, ಆನೆಗೊಂದು ಹುಲಿಜುಂಟಾಚಾರ್ಯರು ಅದನ್ನು ಹನುಮನಕಿಂಡಿ ಎಂಬ ತಮ್ಮ ಊರಿಗೆ ಕರೆತರುವುದು, ಕ್ರಮೇಣ ಮರ್ಕಟಾಚಾರ್ಯ ಎಂದು ಹೆಸರಾಗುವ ಆ ಮಂಗಕ್ಕೆ ಹೆಣ್ಣು ಮಂಗವೊಂದು ಜೊತೆಗೂಡುವುದು, ಅದು ಲಾವಣ್ಯ ಎಂದು ಕರೆಸಿಕೊಳ್ಳುವುದು, ಆ ಜೋಡಿ ಸ್ವಲ್ಪಕಾಲ ಕಣ್ಮರೆಯಾಗಿದ್ದು ಮತ್ತೆ ಪ್ರತ್ಯಕ್ಷವಾದಾಗ ಅವುಗಳಿಗೊಂದು ಮರಿಯಾಗಿರುವುದು, ಆ ದೈವಾಂಶಸಂಭೂತ ಮಂಗಕುಟುಂಬದ ಖ್ಯಾತಿಯಿಂದ ಹನುಮನಕಿಂಡಿ ಅಭಿವೃದ್ಧಿಪಥದಲ್ಲಿ ಮುನ್ನಡೆಯುವುದು, ಮಂಗಗಳೇ ಇಲ್ಲದಿದ್ದ ಊರು ಕ್ರಮೇಣ ನೂರಾರು ಮಂಗಗಳಿಂದ ತುಂಬಿಹೋಗುವುದು, ಸರಕಾರ ಅವುಗಳ ಪೋಷಣೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು, ಅವುಗಳ ಉಪಟಳ ಮಿತಿಮೀರಿದಾಗ ಅದನ್ನು ತಡೆಗಟ್ಟುವ ಬಗ್ಗೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು, ಕಡೆಗೆ ಆ ಊರಲ್ಲಿ ಮರ್ಕಟಾಚಾರ್ಯರ ಮರಿಯೊಂದೇ ಉಳಿಯುವುದು.

ಇದಿಷ್ಟು ಈ ಕಾದಂಬರಿಯ ಕಥನ ಎಂದರೆ ಏನು ಹೇಳಿದ ಹಾಗಾಯಿತು? ಏನೂ ಇಲ್ಲ. ಯಾಕೆಂದರೆ ಇದು ಕೇವಲ ಹಂದರ ಮಾತ್ರ. ಈ ಸಣ್ಣ ಹಂದರದಿಂದಲೇ ಕುಂವೀಯವರು ಮಾಂಸಖಂಡಗಳಿಂದ ಪುಷ್ಟಗೊಂಡ ಒಂದು ಮನುಷ್ಯ ಜಗತ್ತನ್ನು, ಅದರೆಲ್ಲ ಸೌಂದರ್ಯ ಕುರೂಪಗಳೊಡನೆ, ಅನಾವರಣಗೊಳಿಸಿಬಿಡುತ್ತಾರೆ. ಹನುಮನಕಿಂಡಿಯಂಥ ಹಳ್ಳಿಯೊಂದು ನಗರೀಕರಣಗೊಳ್ಳುವ ಪರಿ, ಪ್ರಕ್ರಿಯೆಗಳಲ್ಲೇ ಅದು ಇಡೀ ಭಾರತದ ಕೇಂದ್ರದಂತಾಗುವ ಸೂಚನೆಯಿದೆ.

ಈ ಕೃತಿಯಲ್ಲಿ ಜನಸಾಮಾನ್ಯರಿಂದ ಹಿಡಿದು ಮಂತ್ರಿಮಹೋದಯರವರೆಗೆ ಬಗೆಬಗೆಯ ಜನರಿದ್ದಾರೆ. ಮೂಢನಂಬಿಕೆಯ ಅಫೀಮು ತಿಂದು ವಿಚಾರಶಕ್ತಿಯನ್ನು ಕಳೆದುಕೊಂಡವರಿದ್ದಾರೆ. ಪಕ್ಷ ರಾಜಕೀಯ, ಪಕ್ಷಗಳ ಹೈಕಮ್ಯಾಂಡ್, ಜಾರಿ ನಿರ್ದೇಶನಾಲಯ, ಗಂಜಾ ಬೆಳೆಯುವವರು, ಗೂಂಡಾಗಳು, ಮಾಫಿಯಾ, ಸಾಧು ಸಂತರು, ಮೊಬೈಲು, ಟಿವಿ ವಾಹಿನಿ, ಇವುಗಳಿಗೆ ಸಂಬಂಧಪಟ್ಟ ಕಂಪೆನಿಗಳ ಒಕ್ಕೂಟ, ವೈದಿಕ ಪುರೋಹಿತರು, ರೈತರು, ಪೋಲಿಸ್ ಪಡೆ, ಅರೆ ಮಿಲಿಟರಿ ಪಡೆ, ಅಮೆಜಾನ್ ಚಿಂಪಾಂಜಿ, ಅದರ ಅಧ್ಯಯನ, ಇವೆಲ್ಲವೂ ಇವೆ. ಹಳ್ಳಿಯ ಮನಸ್ತಾಪ, ಜಗಳಗಳಿಗೂ ಸರ್ವಶಕ್ತ ರಾಷ್ಟ್ರಗಳ ಮನಸ್ತಾಪ, ಜಗಳಗಳಿಗೂ ವ್ಯತ್ಯಾಸವಿಲ್ಲ ಎಂದು ಸೂಚಿಸುವ ಮೂಲಕ ಜಾಗತೀಕರಣದ, ಅದರ ಪ್ರಭಾವಗಳ ವಿಡಂಬನೆಯನ್ನೂ ಇಲ್ಲಿ ಮಾಡಲಾಗಿದೆ. ಜೊತೆಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಮರ್ಶೆಯೂ ಕೂಡ.

ಕಾದಂಬರಿಯಲ್ಲಿ ಒಂದು ಕಡೆ ಹಾಲಿವುಡ್ ಸಿನಿಮಾ ನಿರ್ದೇಶಕ ರೂಟ್ ವ್ಯಾಟ್ ಹನುಮನಕಿಂಡಿಯ ಮಂಗಗಳ ಹಲ್ಲೆಗೊಳಗಾಗುತ್ತಾನೆ. ಆ ಸಂದರ್ಭದಲ್ಲಿ ಅಮೇರಿಕದ ವಿರೋಧ ಪಕ್ಷದವರ, ಅಲ್ಲಿನ ಅಧ್ಯಕ್ಷರ, ಮೂಕಪ್ರಾಣಿಗಳ ಮೂಲಭೂತ ಹಕ್ಕುಗಳ ಸಂಘದ, ಕಮ್ಯೂನಿಸ್ಟ್ ಪಕ್ಷದ, ಇಸ್ಲಾಂ ಭಯೋತ್ಪಾದಕ ಸಂಘದ ಪ್ರತಿಕ್ರಿಯೆ ಹೇಗಿತ್ತೆನ್ನುವುದಕ್ಕೆ ಈ ಮುಂದಿನ ಸಾಲುಗಳೇ ಸಾಕ್ಷಿ: “ಡೆಮೊಕ್ರಾಟಿಕ್ ಪಕ್ಷದ ಧುರೀಣರು ಪ್ರತಿಭಟಿಸಲು ಶ್ವೇತಭವನದ ಅಂಗಳ ಪ್ರಶಸ್ತವೆಂದು ಪರಿಗಣಿಸಿದರು. ವಾಷಿಂಗ್ಟನ್ ಟವರಿನಿಂದ ವೈಟ್‌ಹೌಸಿನವರೆಗೆ ಪಾದಯಾತ್ರೆ ಕೈಗೊಂಡರು. ಭಾರತದಲ್ಲಿನ ಮಂಗಗಳು ಹಲ್ಲೆ ನಡೆಸಿರುವುದು ವ್ಯಾಟ್ ರೂಪದಲ್ಲಿರುವ ಅಮೆರಿಕಾಕ್ಕೆ ಎಂದು ಬಣ್ಣಿಸಿದರು.

ಆದರೆ ಲೇಬರ್ ಪಕ್ಷ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಮಂಗಗಳು ವಿನಾಕಾರಣ ಕೆರಳುವುದಿಲ್ಲವೆಂದೂ, ಅವುಗಳ ಹಲ್ಲೆಯನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕೆಂದೂ ಅಧ್ಯಕ್ಷರನ್ನು ಕೇಳಿಕೊಂಡಿತು. ಅಂತರ‍್ರಾಷ್ಟ್ರೀಯ ಮೂಕಪ್ರಾಣಿಗಳ ಮೂಲಭೂತ ಹಕ್ಕುಗಳ ಸಂಘ ಇಂಡಿಯನ್ ಮಂಕಿಗಳ ಆಕ್ರಮಣಕಾರಿ ನೀತಿಯನ್ನು ಸಮರ್ಥಿಸಿತು. ವಿದೇಶಿ ಕಮ್ಯೂನಿಷ್ಟ್ ಪಕ್ಷಗಳು ಇಂಡಿಯನ್ ಮಂಕಿಗಳನ್ನು ಅಭಿನಂದಿಸಿದವು. ಇಸ್ಲಾಂ ಭಯೋತ್ಪಾದಕ ಸಂಘಟನೆಗಳು ಸಂಭ್ರಮಿಸಿದವು. ಪಾಕ್ ಬೆಂಬಲಿತ ಆತಂಕವಾದಿ ಸಂಘಟನೆಗಳು ತಾತ್ಕಾಲಿಕವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕದನವಿರಾಮ ಘೋಷಿಸುವುದಾಗಿ ಪ್ರಕಟಿಸಿದವು.”

ಕಾದಂಬರಿಯ ಕೊನೆಕೊನೆಗೆ ಮಂಗಗಳು ಕದ್ದೊಯ್ಯುವ ಅಮೂಲ್ಯ ಹರಳುಗಳುಳ್ಳ ಮುಖ್ಯಮಂತ್ರಿಯವರ ಕೃತಕ ಹಲ್ಲುಗಳ ಸೆಟ್ಟು ಇದೇ ರೂಟ್ ವ್ಯಾಟ್‌ಗೆ ಸಿಕ್ಕುವುದೂ, ಅವನು ಆ ಸೆಟ್ಟನ್ನು ಹಿನ್ನೆಲೆಗಿಟ್ಟುಕೊಂಡು ಒಂದು ಸಿನಿಮಾ ಮಾಡಲು ಸಿದ್ಧನಾಗುವುದೂ ಕುಂವೀಯವರ ಈ ಮಂಗಾಖ್ಯಾನಕ್ಕೆ ಹೊಸದೊಂದು ಆಯಾಮವನ್ನೇ ನೀಡುತ್ತದೆ.

ರಾಜ್ಯದ ಮುಖ್ಯಮಂತ್ರಿ ಹನುಮನಕಿಂಡಿಯ ಮಂಗಗಳ ಆರಾಧಕರಾದರೆ ದೇಶದ ಪ್ರಧಾನಿ ದೆಹಲಿಯ ಸಿಂಗಳೀಕಗಳ ಆರಾಧಕರಾಗಿರುತ್ತಾರೆ. ಈ ಮಂಗಗಳು, ಸಿಂಗಳೀಕಗಳು ಏನನ್ನು, ಯಾರನ್ನು ಪ್ರತಿನಿಧಿಸುತ್ತವೆಯೆಂದು ಪ್ರತೇಕವಾಗಿ ಹೇಳಬೇಕಾಗಿಲ್ಲ. ಯಾಕೆಂದರೆ ಈ ಕೃತಿಯಲ್ಲಿ ಮಂಗಗಳ ಬಗ್ಗೆ ಬರೆದದ್ದೆಲ್ಲವೂ ಮನುಷ್ಯರಿಗೇ ಅನ್ವಯಿಸುವಂತಿವೆ. ಇಲ್ಲದಿದ್ದರೆ, ಅಯೋಧ್ಯೆಯ ರಾಮಮಂದಿರ, ಸಾಧು ಮಹಾಜನರು, ವಿಭಿನ್ನ ಆಹಾರ ಸೇವನಾ ಪದ್ಧತಿ, ಏಕ ಸಂಸ್ಕೃತಿಯ ಹೇರಿಕೆ, ರೈತರ ಸಮಸ್ಯೆ, ಹೀಗೆ ನಮ್ಮ ದೇಶದ ಸಕಲೆಂಟು ಸಮಸ್ಯೆಗಳು ಇಲ್ಲಿನ ವಾನರಪುರಾಣದಲ್ಲಿ ಯಾಕಾಗಿ ಕಾಣಿಸಿಕೊಳ್ಳಬೇಕಾಗಿತ್ತು?

ಹನುಮನಕಿಂಡಿಯಲ್ಲಿ ಮಂಗಗಳಿಂದಾಗಿ ಸ್ಥಳೀಯರ ಬದುಕು ಅಸ್ತವ್ಯಸ್ತಗೊಂಡರೂ ಆ ಮಂಗಗಳ ದುರ್ವರ್ತನೆಯನ್ನು ಸಹಿಸಿಕೊಳ್ಳಬೇಕೆಂಬ ನಂಬಿಕೆ ಒಂದು ಹಂತದವರೆಗೂ ಇತ್ತು. ಆದರೆ ಅವುಗಳ ದಾಂಧಲೆ ಮಿತಿಮೀರಿದಾಗ ಪ್ರಜೆಗಳ ಹಿತದೃಷ್ಟಿಯಿಂದ ನಗರಸಭೆ ಅವುಗಳನ್ನು ಉಚ್ಛಾಟಿಸಲಾಗುವುದಿಲ್ಲ. ಯಾಕೆ ಎನ್ನುವುದನ್ನು ಚಿತ್ರಿಸುವ ಪ್ರಸಂಗವಿದು: “ನಗರಸಭೆ ಮಂಗಗಳ ಆಗಮನ ಕುರಿತಂತೆ ಆಸ್ಥೆ ವಹಿಸಿತ್ತೆತ್ತೇ ವಿನಃ ನಿರ್ಗಮನ ಕುರಿತಂತೆ ಆಸ್ಥೆ ವಹಿಸಿರಲಿಲ್ಲ. ನಗರಕ್ಕೆ ಮಂಗಗಳು ಆಗಮಿಸುತ್ತಿದ್ದವೇ ಹೊರತು ಆ ಸಂಖ್ಯೆಯಲ್ಲಿ ನಿರ್ಗಮಿಸುತ್ತಿರಲಿಲ್ಲ. ರಸ್ತೆಗಳಲ್ಲಿ ಟೋಲ್ ಸಂಗ್ರಹಿಸುವುದರ ಮೂಲಕ, ವಾಹನಗಳನ್ನು ನಿರ್ಬಂಧಿಸುವುದರ ಮೂಲಕ ಮನುಷ್ಯರ ಆಗಮನವನ್ನು ನಿಯಂತ್ರಿಸಬಹುದು. ಆದರೆ ಮಂಗಗಳ ಆಗಮನವನ್ನು ತಡೆಯುವುದು ಸಾಧ್ಯವೆ! ಅವುಗಳಿಗೆ ವಾಹನ ಸೌಕರ್ಯಗಳ ಅಗತ್ಯವಿದ್ದರೆ ತಾನೆ! ಅವು ಎಲ್ಲಿಂದ ಹೇಗೆ ಆಗಮಿಸುತ್ತಿದ್ದವೆನ್ನುವುದೆ ನಿಗೂಢ! …. ಆದರೆ ಮಂಗಗಳೆಂಬ ಬಿಸಿತುಪ್ಪವನ್ನು ನುಂಗುವಂತಾಗಲೀ ಉಗುಳುವಂತಾಗಲೀ ಇರಲಿಲ್ಲ. ಅಲ್ಲದೆ ಅವು ಸ್ಥಳೀಯ ಆದಾಯ ಹೆಚ್ಚಳಕ್ಕೆ ಕಾರಣವಾಗಿದ್ದವು. ಅವುಗಳಿಂದ ಅಲ್ಲವೆ ಹಾಲಿವುಡ್ ನಿರ್ದೇಶಕ ವ್ಯಾಟ್ ಆಸ್ಪತ್ರೆಗೆ ದಾಖಲಾಗಿರುವುದು, ವ್ಯಾಟಿನಿಂದಾಗಿಯೆ ಅಲ್ಲವೆ ತಮ್ಮ ಕಿಂಡಿ ಅಮೆರಿಕದಲ್ಲಿ ಹೆಸರುವಾಸಿಯಾಗಿರುವುದು, ಅಮೇರಿಕಾದಿಂದ ಅಲ್ಲವೆ ತಮ್ಮ ಕಿಂಡಿ ಪ್ರಧಾನಿಗಳ ಗಮನ ಸೆಳೆದಿರುವುದು…. ತಮ್ಮ ಕಿಂಡಿ ಪ್ರವರ್ಧಮಾನಕ್ಕೆ ಬಂದಿರುವುದು ಅವುಗಳಿಂದ! ತಮ್ಮ ನಗರಸಭೆಯ ಆದಾಯ ಹೆಚ್ಚರುವುದು ಅವುಗಳಿಂದ! ತಮ್ಮ ಕಿಂಡಿ ಅಭಿವೃದ್ಧಿಪಥದಲ್ಲಿ ನಾಗಾಲೋಟದಿಂದ ಸಾಗಿರುವುದು ಅವುಗಳಿಂದ! ತಮ್ಮ ಕಿಂಡಿಯಲ್ಲಿ ಗುಡಿಗುಂಡಾರಗಳ ಸಂಖ್ಯೆ ಹೆಚ್ಚಿರುವುದು ಅವುಗಳಿಂದ! ತಮ್ಮ ಕಿಂಡಿಯಲ್ಲಿ ವೈದಿಕರ ಪುರೋಹಿತರ ಸಂಖ್ಯೆ ಹೆಚ್ಚಿರುವುದು ಅವುಗಳಿಂದ!”

ಒಂದು ಪತ್ತೇದಾರಿ ಕಾದಂಬರಿಯಂತೆ ಮುಂದೇನು, ಮುಂದೇನು ಎಂಬ ಕುತೂಹಲದಿಂದ ಓದುಗರನ್ನು ಸೆಳೆದುಕೊಳ್ಳುವ ಈ ಕೃತಿಯಲ್ಲಿ ಕುಂವೀಯವರ ಕಥನಶಕ್ತಿ ರಪರಪ ಹೊಡೆಯುವ ಬಿರುಮಳೆಯಂತೆ ಅತ್ಯಂತ ವೇಗವಾಗಿ ಮುನ್ನುಗ್ಗುತ್ತದೆ. ಆ ವೇಗಕ್ಕೆ ಸರಿಸಮನಾಗಿ ಕಥಾ ಸಂವಿಧಾನದಲ್ಲಿ ಲೆಕ್ಕವಿಲ್ಲದಷ್ಟು ಅನಿರೀಕ್ಷಿತ ತಿರುವುಗಳು ಕಾಣಿಸಿಕೊಳ್ಳುತ್ತವೆ. ಸ್ವಾರ್ಥಪರ ರಾಜಕಾರಣ, ಆಡಳಿತ ವ್ಯವಸ್ಥೆಯ ಲೋಪದೋಷಗಳು, ಧರ್ಮಾಂಧತೆ, ಮೂಢನಂಬಿಕೆ, ಸಮೂಹ ಮಾಧ್ಯಮಗಳ ವಾಣಿಜ್ಯೇಕರಣ, ಭ್ರಷ್ಟಾಚಾರ, ನೈತಿಕ ಅಧಃಪತನ, ವಿಷಯಾಸಕ್ತಿ, ಹೀಗೆ ಅನೇಕ ವಸ್ತುಗಳನ್ನು ಒಳಗೊಂಡಿರುವ ಕಾದಂಬರಿಯಲ್ಲಿ ಮಂಗಗಳ ಚಂಚಲ ವರ್ತನೆ ಕಣ್ಣಿಗೆ ಕಟ್ಟುವಂತಿದ್ದು ಕಾದಂಬರಿಯುದ್ದಕ್ಕೂ ನನಗೆ ನಗು ತಡೆದುಕೊಳ್ಳಲಾಗಲಿಲ್ಲ.

ಕುಂವೀ ತಮ್ಮ ವ್ಯಂಗ್ಯ ಹೆಚ್ಚು ಹೆಚ್ಚು ಚುಚ್ಚಬೇಕೆನಿಸಿದಾಗಲೆಲ್ಲ ಸಂಸ್ಕೃತ ಪದಗಳನ್ನು ಮತ್ತು ನುಡಿಗಟ್ಟುಗಳನ್ನು ಉಪಯೋಗಿಸುವುದಿದೆಯಲ್ಲ, ಅದೊಂದು ವಿಶೇಷವೆಂದೇ ಹೇಳಬೇಕು. ಕಾದಂಬರಿಯಲ್ಲಿ ಅಸಂಗತ, ಅತಿವಾಸ್ತವಿಕ, ಅಲೌಕಿಕ, ಎಲ್ಲವೂ ಕಟು ವಾಸ್ತವವಾಗುತ್ತವೆ; ಏಕಮುಖ ನಿರೂಪಣೆಗೆ ಬಹುಮುಖತ್ವದ ಆಯಾಮ ದೊರೆಯುತ್ತದೆ; ನಿರೂಪಣೆಯ ವೈನೋದಿಕ ಧಾಟಿಯೇ ಬದುಕಿನ ದಾರುಣತೆಯನ್ನು ಅನಾವರಣಮಾಡುತ್ತದೆ.

ಇದುವರೆಗೆ ನಮ್ಮಲ್ಲಿ ಮಕ್ಕಳ ಕತೆಗಳಿಗಷ್ಟೇ ಸೀಮಿತವಾಗಿದ್ದ ಅಲಿಗರಿ ಕುಂವೀಯವರ ಈ ಹೊಸ ಕೃತಿಯಲ್ಲಿ ನಿಜಕ್ಕೂ ಪೂರ್ಣಾಂಗವಾಗಿ ನಮ್ಮ ಕಾದಂಬರಿ ಕ್ಷೇತ್ರದಲ್ಲಿ ಹೊಸದೊಂದು ದಾರಿಯನ್ನು ತೆರೆದು ತೋರಿಸಿದೆ. ಇದೊಂದು ಅಪರೂಪದ ಸಾಧನೆ. ಅದಕ್ಕಾಗಿ ಕುಂವೀಯವರನ್ನು ನಾನು ವಿಶೇಷತಃ ಅಭಿನಂದಿಸುತ್ತೇನೆ.

‍ಲೇಖಕರು avadhi

25 April, 2019

1 Comment

  1. Kotresh T A M

    ಮುನ್ನುಡಿ ಚೆನ್ನಾಗಿದೆ. ಪುಸ್ತಕ ಓದಲೇ ಬೇಕು.
    ಜೈ ಭಜರಂಗ ಬಲಿ….ಹ್ಹಹ್ಹಹ್ಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading