ಕುಂ ವೀ ಬರೆದ ನೀಳ್ಗತೆ

ಪಿಂಚಣಿ

ಕುಂ ವೀರಭದ್ರಪ್ಪ

ಬಾನಕ್ಕೆ ಮೊಸರು ಸುರಿವಿಕೊಳ್ಳುತ್ತ ಏನನ್ನೋ ಯೋಚಿಸಿದಳು, ಮುಖವನ್ನು ಕಿವುಚಿಕೊಂಡಳು, ಎಲಾ ಮುದಿಮುಂಡೇ ಎಂದೂ ಉದ್ಗರಿಸಿದಳು, ಆಕೆಯ ಕಣ್ಣುಗಳು ಇದ್ದಕ್ಕಿದ್ದಂತೆ ಒಣಮೆಣಸಿನಕಾಯಿಯಾದವು, ಎಂಜಲಗೈಯನ್ನು ಸೀರೆಗೆ ಒರೆಸಿಕೊಳ್ಳುತ್ತ ಮೇಲೆದ್ದಳು,ನಿಂತೇಟಿಗೆ ನಗಂದಿಗೆ ತಲೆ ಬಡಿದರೂ ಲೆಕ್ಕಿಸಲಿಲ್ಲ, ಬಿರುಗಾಳಿಯೋಪಾದಿಯಲ್ಲಿ ಅಂಗೈಯಗಲದ ಕಿಟಿಕಿಯನ್ನು ತಲುಪಿ ಇಣುಕಿದಳು, ಮುದೇದು ಚೌಡವ್ವನ ಗುಡಿ ಕಡೆಯಿಂದ ಅದೇನನ್ನೋ ಗೊಣುತ್ತ ಮೊಣಕಾಲಿಗೆ ಕೈಗಳನ್ನೂರಿ ನಡೆಯುತ್ತ ಬರುತ್ತಿರುವುದು ಕೆಟ್ಟಕನಸಿನಂತೆ ಗೋಚರಿಸಿತು. ಓಹೋ ಈ ದರಿದ್ರ ಪೋಸ್ಟಾಪೀಸಿನಿಂದ ಬಂದಗೈತೆ ಎಂದುಕೊಳ್ಳುತ್ತ ನಖಶಿಖಾಂತ ಕಂಪಿಸಿದಳು, ಮಾಯಮ್ಮ ಎರಡೇ ಸಾವ್ರ ಮುಂಗಡ ಕಟ್ಟಿದರೆ ಈ ಹತ್ಸಾವ್ರ ಬೆಲೆ ಬಾಳೋ ಮಾಂಗಲ್ಯದ ಸರ ನಿಂದೆ ಎಂದು ಕಡ್ಡಿಮುರಿದಂತೆ ಹೇಳಿದ ಭೀಮಾಚಾರಿಯ ಮುತ್ತಿನಂಥ ಮಾತನ್ನು ನೆನಪಿಸಿಕೊಂಡಳು, ತನಗೆ ಕೊಡಲಿಕ್ಕಿಲ್ಲವೆಂಬ ಅನುಮಾನ ಕಾಡಿತು. ಅದಕ್ಕೆ ತನ್ನ ಹೆಣ್ಣುಮಕ್ಕಳೆಂದರೆ ಜೀವ, ಏಸೊಂದು ಮಂದಿ ಹೆಣುಮಕ್ಕಳು! ಶಿವ ಶಿವಾ, ಹಡಕೊಂಡಾಗಿದೆ, ಮದುವೆ ಮಾಡಿಕೊಟ್ಟಾಗಿದೆ, ಅವರೆಲ್ಲ ಅಲ್ಲಲ್ಲಿ ಹೆಂಗಿರಬೇಕೋ ಹಂಗದಾರೆ, ತನ್ನಂಥ ಮನೆ ಸೊಸ್ತೆಯರಿಗಿಂತ ಅವರೆಲ್ಲ ಹೆಚ್ಚಾದರೇನು? ಅವರೆಲ್ಲ ನೆನಪಾದೊಡನೆ ಅವುಡುಗಚ್ಚಿದಳು, ದವಡೆಗೆ ದವಡೆ ಮಸೆದಳು, ಖಾಲಿ ಸಿಲವಾರ ತಟ್ಟೆಯೊಡನೆ ತೊಡರಲೆತ್ನಿಸಿದ ಎರಡು ವರುಸದ ಮಗಳನ್ನು ಕಾಲಿನಿಂದ ಝಾಡಿಸಿ ತಳ್ಳಿದಳು! ಮಂಗಳಿ ಹೆಸರಿನ ಅದು ಮೂಲೆಯಲ್ಲಿದ್ದ ಬೆಳಕಿನ ಕೋಲಲ್ಲಿ ಜಾಜ್ವಲ್ಯಮಾನದಿಂದ ಹೊಳೆಯುತ್ತ ಹೋ ಎಂದು ಅರಚಲಾರಂಭಿಸಿತು, ಮನೆಯೊಳಗಿದ್ದ ಬೆಕ್ಕೂ, ಅಂಗಳಲ್ಲಿದ್ದ ನಾಯಿಯೂ ಆ ದುಕ್ಕಕ್ಕೆ ಪಕ್ಕವಾದ್ಯ ನುಡಿಸಲಾರಂಭಿಸಿದವು, ಈ ಮುದುಕಿಯ ಸೊಂಟ ಮುರಿದು ಮೂಲೆಗುಂಪು ಮಾಡಬೇಕೆಂದು ನಿರ್ಧರಿಸಿದಳು, ಮುದುಕಿ ನರಳುವ ದೃಶ್ಯ ಕಲ್ಪಿಸಿಕೊಂಡಳು, ದೇಹದೊಳಗಿನ ಸಮಸ್ತ ರಕುತದ ಕಣಗಳು ರಣಕೇಕೆ ಹಾಕಿ ಆಕೆಯನ್ನು ಹುರಿದುಂಬಿಸಲಾರಂಭಿಸಿದವು.
ಅಂಗಳವನ್ನು ಪ್ರವೇಶಿಸುವ ಮುನ್ನ ತಲಬಾಗಿಲಿಗೆ ಎರಡೂ ಕೈಗಳನ್ನು ಆನಿಸಿ ಹೊರ ಇಣುಕಿದಳು, ಬರುತ್ತಿರುವ ಮುದುಕಿಯನ್ನು ಹೊರತುಪಡಿಸಿ ಯಾವೊಂದು ನರಹುಳದ ಸುಳಿವಿಲ್ಲ, ಕಿವಿಯಾನಿಸಿ ಕೇಳಿದಳು, ಯಾರದೊಂದು ಧ್ವನಿ ಗೋಚರಿಸಲಿಲ್ಲ, ಹೊಸ್ತಿಲನ್ನು ದಾಟಿ ನಿಂತಳು, ಸೆರಗಿನ ತುದಿಯನ್ನು ಸೊಂಟಕ್ಕೆ ಸಿಕ್ಕಿಸಿದಳು, ವಾಸ್ತವದ ಪರಿವಿರದಿದ್ದ ಮುದುಕಿ ಅದೇ ತಾನೆ ಅಂಗಳವನ್ನು ಪ್ರವೇಶಿಸಿತು, ತನ್ನ ಸೀರೆಯ ಬಾಳೆಕಾಯಿ ಗಂಟನ್ನು ಭದ್ರಪಡಿಸಿಕೊಂಡಿತು, ರುದ್ರಜ್ಜನ ಅಂಗಡಿಯಿಂದ ಮೊಮ್ಮಕ್ಕಳಿಗೆ ಕೊಡಲೆಂದು ಫಳಾರದ ಪೊಟ್ಟಣವನ್ನು ಮುಟ್ಟಿ ಖಚಿತಪಡಿಸಿಕೊಂಡಿತು, ಬೆಳ್ಳಿ ಹುಬ್ಬಿಗೆ ಕೈಹಚ್ಚಿ ಮೆಲ್ಲಗೆ ತಲೆ ಎತ್ತಿತು, ಬೊಚ್ಚು ಬಾಯಿಯನ್ನು ಮೆಲ್ಲಗೆ ತೆರೆದು ಯ್ಯೋಯ್ ಮಂಗಳಿ, ಯ್ಯೋಯ್ ಸಿದ್ದ, ಯ್ಯೋಯ್ ಚಂದ್ರಾ ಎಂದು ಸುಶ್ರಾವ್ಯವಾಗಿ ಕೂಗಿತು, ಆ ಕೂಗು ಎಲ್ಲೆಲ್ಲಿ ತಲುಪಿತೋ ಅಲ್ಲಲ್ಲಿ ಆಯಾ ಫಲಾನುಭವಿಗಳು ತಮ್ಮತಮ್ಮ ಸಿಲೇಟು ಪುಸ್ತಕಗಳನ್ನು ಬ್ಯಾಗಿನಲ್ಲಿ ತುರುಕಲಾರಂಭಿಸಿದರು. ನೀನೂ ತಿನ್ನು ಎಂದು ಸೊಸೆಗೆ ಹೇಳಬೇಕೆನ್ನುವಷ್ಟರಲ್ಲಿ ಮಾಯಿ ಅದಕ್ಕೆ ಉಸಿರಳತೆಯಲ್ಲಿ ನಿಂತಳು, ಮೂರನೆ ಕಣ್ಣನ್ನು ತೆರೆದು ದುರುಗುಟ್ಟಿದಳು, ಎಲ್ಡು ಸಾವ್ರ ಕೊಡ್ತೀಯೋ ಇಲ್ಲೋ ಎಂದು ಸೊಸೆ ಅಬ್ಬರಿಸಿದಳು, ಅದಕ್ಕೆ ಮುದುಕಿ ತನ್ನ ಮತ್ತು ಪೋಸ್ಟಾಪೀಸಿನ ಅಂಬಣ್ಣಾಚಾರಿ ನಡುವೆ ನಡೆದ ಮಾತುಕತೆ ವಿವರಿಸಬೇಕೆಂದೆತ್ನಿಸಿತು, ಸ್ವಂತ ತಮ್ಮನ ಮಗಳಾದ ನಿನಗೆ ತನ್ನಿಂದ ಅನ್ಯಾಯವಾಗುವುದುಂಟೆ ಎಂದೇನೇನೋ ಹೇಳಲೆಂದು ಬಾಯಿ ತೆರೆಯಿತು, ಆದರೆ ಹೊಟ್ಟೆಯಲ್ಲಿ ಕೂಳಿರದಿದ್ದ ಕಾರಣಕ್ಕೆ ಗಂಟಲಿನಿಂದ ಮಾತುಗಳು ಧ್ವನಿರೂಪ ಪಡೆಯಲಿಲ್ಲ, ಆದರೆ ಮಾಯಿ ಅದನ್ನು ಅಪಾರ್ಥ ಮಾಡಿಕೊಂಡಳು, ಇನ್ನೇಸು ವರ್ಸ ಬದುಕಕಂತ ಮಾಡಿಯೇ ಮುದುಕಿ ಎಂದವಳೆ ಕುತ್ತಿಗೆಗೆ ಕೈಹಚ್ಚಿದಳು, ರಣೋತ್ಸಾಹ ಇಮ್ಮಡಿಗೊಳಿಸಿಕೊಂಡಳು, ಬೀಳಲಿದ್ದ ಮುದುಕಿ ಎರಡೆಳೆ ಚಿನ್ನದ ಸರದಂತೆ ಗೋಚರಿಸಿತು, ಅದರ ತರಗೆಲೆಯಂಥ ಸರೀರದ ಬಲಗಣ್ಣು ಹಾರುವುದನ್ನು ತಾನು ಲೆಕ್ಕಿಸಲಿಲ್ಲ, ಕೇವಲ ಬಲಿಷ್ಟ ಎಡಗೈಯಿಂದ ಆಕೆ ಈ ಪ್ರಕಾರವಾಗಿ ಉಫೆಂದು ತಳ್ಳಿದೊಡನೆ ಅದು ಸುಂದರವಾದ ರಂಗೋಲಿ ಮೇಲೆ ಬೀಳುತ್ತಲೇ ಅಯ್ಯೋ ನನ್ನ ಭಂಗಾರದಂಥ ಸೊಸೆಯೇ ಎಂದು ಆದಷ್ಟು ಮೆಲ್ಲಗೆ ಉದ್ಗರಿಸಿರಿಸಿತು, ತನ್ನ ಸೊಸೆಯ ಮರುವಾದೆ ಬೀದಿಪಾಲಾದರೇನು ಗತಿ ಎಂಬ ಕಾರಣಕ್ಕೆ! ಅದು ಬೀಳುತ್ತಿರುವಾಗ ಅಯ್ಯೋ ನನ್ನಿಂದ ಇಂಥ ಹೀನಾಯ ಕೆಲಸ ಮಾಡಿಸಿದ ನೀನೆಂಥ ದೇವರು ಎಂದುಕೊಳ್ಳುತ್ತ ಮಾಯಿ ಮನೆಯ ತಲಬಾಗಿಲನ್ನು ಪ್ರವೇಶಿಸಿ ಗದ್ಗದಿತಳಾದಳು, ಬಾಯಿಗೆ ಸೆರಗಿರಿಸಿಕೊಂಡು ಬಿಕ್ಕಳಿಸಿದಳು.
ಚೌಡಮ್ಮನ ಗುಡಿ ಕಟ್ಟಿಸಲಿಕ್ಕೆಂದು ತಂದಿರಿಸಿದ್ದ ಸೈಜುಗಲ್ಲುಗಳ ಮೇಲೆ ಬಿದ್ದು ಮುದುಕಿ ಹಿಂದಲೆಗೂ, ಬೆನ್ನಮೂಳೆಯ ಮೇಲೂ ಗಾಯ ಮಾಡಿಕೊಂಡಿತು, ನರಳಿದರೆಲ್ಲಿ ಓಣಿ ಕೇಳಿಸಿಕೊಳ್ಳುವುದೋ, ನರಳದೇ ಇದ್ದರೆಲ್ಲಿ ತನ್ನ ಶರೀರ ಶಪಿಸುವುದೋ! ಉಭಯಸಂಕಟದಲ್ಲಿ ಅದು ಎಲ್ಲಿಯವರೆಗೆ ಮುಂದುವರೆಯಲಾದೀತು! ಅದರ ಗಾಯದಿಂದ ಬೀಳ್ಕೊಂಡ ನೆತ್ತರ ರೇಖೆಗಳು ಅಲ್ಲೊಂದು ಚಿತ್ತಾರವನ್ನು ರಚಿಸಿದವು, ಅದಕ್ಕೆ ಆಕರ್ಷಿತಗೊಂಡು ಬಂದ ನಾಯಿ ನೆತ್ತರನ್ನೂ, ಮುದುಕಿಯ ಹಿಂದಲೆಯಲ್ಲಿದ್ದ ಗಾಯವನ್ನೂ ಮೂಸಿ ಓಹೋ ಎಂದು ಊಳಿಟ್ಟಿತು, ಅಲ್ಲಲ್ಲಿಂದ ಅವರೂ ಇಲ್ಲಲ್ಲಿಂದ ಇವರೂ.. ಅವರಿವರೊಂದೇ ಅಲ್ಲದೆ ಅದರ ಜೇಷ್ಠಪುತ್ರ ಕೆಂಚ, ಅಂದರೆ ಈರಕ್ಕನ ಗಂಡನು ಈಶಾನ್ಯ ದಿಕ್ಕಿನಿಂದಲೂ, ಅದರ ದ್ವಿತೀಯ ಸುಪುತ್ರ ಅಟುಬಿ, ಅಂದರೆ ಮಾಯಿಯ ಗಂಡ ಅಗ್ನಿ ದಿಕ್ಕಿನಿಂದಲೂ ಬಂದರು, ಇನ್ನೂ ಅಷ್ಟು ದೂರದಲ್ಲಿದ್ದ ಆ ತ್ರಿಕಾಲಜ್ಞಾನಿಗಳು ಓ ಎವ್ವಾ ಓ ಎವ್ವಾ ಎಂದು ಗಗ್ಗರಿಸುತ್ತ ಆಗಮಿಸಿ ಮುದುಕಿಯ ಎರಡೂ ಮಗ್ಗುಲು ಕೂತು ಲಬೋಲಬೋ ಬಾಯಿ ಬಾಯಿ ಬಡಿದುಕೊಳ್ಳಲಾರಂಭಿಸಿದರು. ಮೊದಲೇ ಆ ಥೆಳಗೇರಿ ವಾಸಿಗಳು ಭೂತದಯೆಗೆ ಹೆಸರಾಗಿದ್ದಂಥವರು, ಅವರು ತಮ್ಮತಮ್ಮ ಮನೆಗಳಲ್ಲಿ ಝೋಪಡಿಗಳಲ್ಲಿ ಸುಮ್ಮನಿರಲಾಗುವುದೆ! ತಮ್ಮತಮ್ಮ ಹೆಂಡರೊಡನೆ ಗಂಡಂದಿರೂ, ತಮ್ಮತಮ್ಮ ಗಂಡಂದಿರೊಡನೆ ಹೆಂಡಂದಿರೂ, ತಮ್ಮತಮ್ಮ ಮಕ್ಕಳುಮರಿಗಳೊಡನೆ ತಾಯಿಯಂದಿರೂ, ತಮ್ಮತಮ್ಮ ಕೈಗೋಲುಗಳೊಡನೆ ಮುಪ್ಪಾನುಮುದುಕರೂ, ಅವರನ್ನು ಕರೀರಿ ಇವರನ್ನು ಕರೀರಿ ಎಂದನಕಂತ..

ಈ ನಿರ್ಣಾಯಕ ಸಂದರ್ಭದಲ್ಲಿ ತಾನೇನಾದರೂ ಮಹಾಮಳ್ಳಿಗಳಂತೆ ಒಳಗಿದ್ದ ಪಕ್ಷದಲ್ಲಿ! ಮಾಯಿಯು ಅಡುಗೆ ಮನೆಯಿಂದ, ಅದೂ ಉಣ್ಣುವ ತಟ್ಟೆಯೊಡನೆ ಅಂಗಳಕ್ಕೆ ಬಂದವಳೆ ಅಯ್ಯೋ ಎತ್ತೇ, ಉಂಬಾಕಿಡಲಕಂತ ಬಂದ್ರೆ ಬಿದ್ದು ಗಾಯ ಮಾಡ್ಕೊಂಡೀಯಲ್ಲೇ ಎಂದನಕಂತ ತನ್ನೆದೆಯನ್ನು ಅನಾವರಣಗೊಳಿಸಿ ದುಃಖತಪ್ತ ವಾತಾವರಣವನ್ನು ಸಮ್ಮೋಹನಗೊಳಿಸಲು ಪ್ರಯತ್ನಸಿದಳು. ಹಂಗೇನಾದರೂ ಅತ್ತು ಪಿಂಚಣಿಯನ್ನು ತನ್ನ ವಾರೆಗಿತ್ತಿ ಲಪಟಾಯಿಸಿದರೇನು ಗತಿ ಎಂದು ಯೋಚಿಸಿದ ಈರಕ್ಕ ಅದೇ ಮನೆಯ ಹಿಂಬಾಗಿಲಿಂದ ಬಂದವಳೆ ನಮ್ಮೆತ್ತೇನ ಈ ಚಿನಾಲಿಯೇ ದೂಕಿರೋದು, ಬೇಕಾದ್ರೆ ಇದನ್ನ ಕೇಳ್ರಿ ಎಂದು ಎಳೆದು ಸಭಾಸದರ ಮುಂದೆ ನಿಲ್ಲಿಸಿದಳು, ಥರಗುಟ್ಟಿ ನಡುಗಲಾರಂಭಿಸಿದ್ದ ಮಂಗಳಿ ತನ್ನ ತಾಯಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದೋ ಬೇಡವೋ ಎಂದು ಉಭಯ ಸಂಕಟವನ್ನು ಅನುಭವಿಸತೊಡಗಿತು, ಅದೂ ತನ್ನ ಬಾಯಿಯಲ್ಲಿ ಹೆಬ್ಬೆಟ್ಟನ್ನು ಚೀಪುತ್ತ, ಪಿಳಿಪಿಳಿ ಕಣ್ಣುಬಿಟ್ಟು ತನ್ನ ಕಡೆಗೇ ನೋಡುತ್ತಿದ್ದ ಮುದುಕಿಯ ದೇಹಕ್ಕಂಟಿದ್ದ ಫಳಾರದ ಪೊಟ್ಟಣವನ್ನು ನೋಡುತ್ತ, ಪರಿಮಳವನ್ನು ಆಸ್ವಾದಿಸುತ್ತ.
ತಮ್ಮಂಥ ಮುದುಕರು ಈ ಪ್ರಪಂಚದಲ್ಲಿರುವುದು ಬೇಕೋ ಬೇಡವೋ! ಇವತ್ತು ಈಕೆಗಾದ ಗತಿ ನಾಳೆ ತಮಗೂ ತಪ್ಪಿದ್ದಲ್ಲ! ಕೇರಿಯ ಹಿರೀಕರಾದ ಯಮುನಜ್ಜ, ಗಿಡ್ಡನುಮಜ್ಜ, ಅಯ್ಯಾಳಿಯೇ ಮೊದಲಾದ ಕೇರಿ ಹಿರೀಕರು ಯೋಚಿಸುತ್ತಲೂ ನಿಡುಸುಯ್ಯುತ್ತಲೂ ನೋಟಗಳೆಂಬ ಪ್ರಶ್ನೆಗಳನ್ನು ಮಾಯಿಯ ಕಡೆ ಎಸೆಯಲಾರಂಭಿಸಿದ್ದನ್ನು ಗಾಯಾಳು ಮುದುಕಿಗೆ ಸೈರಿಸಲಾಗಲಿಲ್ಲ, ಇದರಲ್ಲಿ ಅಕಿದೇನು ತೆಪ್ಪಿಲ್ರಪ್ಪೋ ಎಲ್ಲಾನು ಇನ್ನೂ ಬೊದುಕಿರೋ ತನ್ನ ಕರ್ಮ ಎನ್ನುತ್ತಿರುವಷ್ಟರಲ್ಲಿ ಒಡಲೊಳಗೆ ನಿಶ್ಚಲವಾಗಿದ್ದ ದ್ರವಪದಾರ್ಥವು ನೆತ್ತಿಗೇರಿದ ಪರಿಣಾಮವಾಗಿ ಕೆಂಚನು ಸಾಯಿಗೊಲ್ಲಾಕ ನಮ್ಮವ್ವೇನು ಮಾಡಿದ್ಲೇ ಭೋಸೂಡಿ ಎಂದವನೆ ಮಾಯಿಯ ತಲೆಗೂದಲನ್ನು ಹಿಡಿದನಲ್ಲದೆ, ದರದರ ಎಳೆದಾಡಿ ಆಕೆಯ ಬೆನ್ನ ಮೇಲೆ ಒಂದು ಬಾರಿಯಲ್ಲ.. ಮೂರು ಬಾರಿ ಗುದ್ದಿದನು, ಮೊದಲೇ ಬಾಯಿಬಡುಕಿಯಾದ ಮಾಯಿ ಹೇಗೆ ಸುಮ್ಮನಿದ್ದಾಳು? ತರಾವರಿ ಅಶ್ಲೀಲ ಪದಪ್ರಯೋಗಗಳನ್ನು ಮಾಡಿ, ತನಗೆ ತಾಳಿ ಕಟ್ಟಿದ ಗಂಡನನ್ನುದ್ದೇಶಿಸಿ ಏನೇನೋ ಅಂದಾಡಿದಾದ ಬಳಿಕ ಥೂ ನಿನ ಬಾಯಾಗ ನನ ಹಾಟುಯ್ಯಾ. ಎಂದು ಕ್ಯಾಕರಿಸಿದಳು. ಆಕೆಯ ಗಂಡ ಅಟುಬಿಯಾದರೋ ಬಾಲ್ಯದಲ್ಲಿಯೇ ಪೋಲಿಯೋ ಪೀಡಿತನಾಗಿ ತನ್ನೊಂದು ಕಾಲನ್ನು ಕಳೆದುಕೊಂಡಿದ್ದನು, ಒಂದು ಕಾಲನ್ನು ಎಳೆದೆಳೆದು ಹಾಕಿ ನಡೆಯುತ್ತಿದ್ದ ಕಾರಣಕ್ಕೆ ಗುರುವ ಎಂಬ ಅಸಲಿ ನಾಮವಾಚಕವನ್ನು ವಿಸರ್ಜಿಸಿಕೊಂಡಿದ್ದನು, ಅದಕ್ಕೆ ಬದಲಾಗಿ ಸಾಮಾಜಿಕರಿಂದ ಅಟುಬಿ ಎಂಬ ವಿಶಿಷ್ಟವೂ ವಿಲಕ್ಷಣವೂ ಆದ ನಾಮವಾಚಕದಿಂದ ಕೇರಿಯಲ್ಲಿ ಪ್ರಸಿದ್ದನಾಗಿದ್ದನು, ಅಂಗವೈಕಲ್ಯ ಪ್ರಮಾಣ ಪತ್ರಪಡೆದು ತಳವಾರ ಡೋಮನ ಪರುಸನಲ್ಲು ಸೆಕೆರಟರಿಯಾಗಿ ತನ್ನ ವರ್ಚಸ್ಸು ಹೆಚ್ಚಿಸಿಕೊಂಡಿದ್ದನು, ಎಂಥದ್ದೋ ಒಂದು ಸರಕಾರಿ ಪಗಾರ ಪಡೆಯುವನೆಂಬ ಅರ್ಹತೆಯ ಕಾರಣದಿಂದ ದೂಪದಳ್ಳಿ ನೀರಗಂಟಿ ಉರುಕುಂದಿಯು ತನ್ನ ಮೆಳ್ಳೆಗಣ್ಣ ಮಗಳು ಮಾಯಿಯನ್ನು ಮುಫತ್ತಾಗಿ ದಾರೆ ಎರೆದುಕೊಟ್ಟಿದ್ದನು.
ಇಂಥ ತನ್ನ ಹೆಂಡತಿಯನ್ನು ಅಂಥ ಬಸ್ ಸ್ಟ್ಯಾಂಡಮಾಲಿಯಾಗಿ ಸಂಸಾರ ಪೊರೆಯುತ್ತಿರುವ ಯಕಃಶ್ವಿತ್ ಅಗ್ರಜನು ಕೂದಲಿಡಿದೆಳೆದಾಡುವುದೆಂದರೇನು? ಅದಕ್ಕೆ ಪ್ರತಿಯಾಗಿ ತನ್ನ ಹೆಂಡತಿಯು ಪತಿದೇವನಾದವನ ಬಾಯಿಯಲ್ಲಿ ಹಾಟುಯ್ಯಾ ಎಂದು ಶಪಿಸಿ ಅವಮಾನ ಮಾಡುವುದೆಂದರೇನು? ಇನ್ನು ತಾನು ಸುಮ್ಮನಿರಬಾರದೆಂದು ನಿರ್ಧರಿಸಿದ ಅಟುಬಿಯು..ದೇಹದ ಸಮಸ್ತ ಶಕುತಿಯನ್ನೂ, ತಲೆಯ ಸಮಸ್ತ ಯುಕುತಿಯನ್ನೂ ಏಕೈಕ ಕಾಲಿಗೆ ಸಂಚಯಿಸಿಕೊಂಡನು, ಆಕಾಶಕ್ಕೆ ಅಟೆಯುವ ರೀತಿಯಲ್ಲಿ ನಿಂತನು, ಎಡಗಾಲನ್ನು ಹಿಂಬದಿಯಾಗಿ ಎತ್ತಿದ್ದನ್ನೂ, ಅದರ ಕಾಲ್ಮರಿಯನ್ನು ಬಲಗೈಗೆ ವರ್ಗಾಯಿಸಿದ್ದನ್ನೂ, ನಿಗಿನಿಗಿ ಉರಿಯತೊಡಗಿದ್ದನ್ನೂ ಅಲ್ಲಿ ನೆರೆದಿದ್ದ ದೈವಸ್ಥರು ಗಮನಿಸಲಿಲ್ಲ, ಈ ಹೆಳವ ತನ್ನನ್ನೇನು ಮಾಡಲು ಸಾಧ್ಯ ಎಂದು ಅಸಡ್ಡೆಯಿಂದಿದ್ದ ಕೆಂಚನೂ ಗಮನಿಸಲಿಲ್ಲ. ಗಮನಿಸಿದವರೆಂದರೆ ಮುದುಕಿಗೆ ಪ್ರಥಮ ಚಿಕಿತ್ಸೆ ಆರಂಭಿಸಿದ್ದ ಆರೆಂಪಿ ಕುರುಬರ ಸೋಮಣ್ಣ ಮತ್ತು..
ತಪ್ಪಿಸಿಗ್ಯಾ ಎಂದು ಈರಕ್ಕ ಹೇಳುತ್ತ ತಡೆಯಬೇಕೆನ್ನುವಷ್ಟರಲ್ಲಿ ಅಟುಬಿ ತನ್ನಣ್ಣನ ಬೆನ್ನ ಡುಬ್ಬದ ಮೇಲೆ ಕಾಲ್ಮರಿಯಿಂದ ಭಾರಿಸಿಯೇಬಿಟ್ಟನು, ಅದೂ ಮಿಂಚಿನೋಪಾದಿಯಲ್ಲಿ! ತನ್ನ ಗಂಡನ ಮಾನರಕ್ಷಣೆಗೆ ಧಾವಿಸಿದ ಸತೀಮಣಿಯ ಎದೆಯ ಮೇಲೂ ಬಿದ್ದ ಏಟು ಆಯತಪ್ಪಿದ್ದಾಗಿತ್ತು, ಆಕೆ ಮೊದಲೆ ನಾಲ್ಕು ತಿಂಗಳ ಬಾಣಂತಿ, ಮೊಲೆಯಿಂದ ಚಿಮ್ಮಿದ ಹಾಲು ಏಟುಕೊಟ್ಟ ಕಾಲ್ಮರಿಯನ್ನು ಒದ್ದೆ ಮಾಡದೆ ಇರಲಿಲ್ಲ, ಅಲ್ಲದೆ ಆಕೆಯೂ ತನ್ನ ಗಂಡನಂತೆ ಆಜಾನುಬಾಹು, ಅವರಿಬ್ಬರು ಒಟ್ಟಾದರೆಂದರೆ ಅಟುಬಿ ಯಾವಲೆಕ್ಕ! ದಂಪತಿಗಳೀರ್ವರೂ ಒಟ್ಟಿಗೆ ನಡೆಸಿದ ದಾಳಿಯಿಂದಾಗಿ ಅಟುಬಿ ಸತ್ನೆಪೋ ಎಂದರಚಲಾರಂಭಿಸಿದನು. ಗಿಡ್ಡಕಿದ್ದರೂ ಜಾಣೆಯಾದ ತಾನು ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡಿದ್ದ ಕಾರಣಕ್ಕೆ ದೈಹಿಕವಾಗಿ ದಷ್ಟಪುಷ್ಟಳಿದ್ದ ಮಾಯಿ ಚಂಗನೆ ಜಿಗಿದು ವಾರಗಿತ್ತಿಯ ಹಿಂದಲೆಗೂದಲನ್ನು ಹಿಡಿದುಕೊಂಡು ಸರ್ರನೆ ಎಳೆದು ನೆಲಕ್ಕೆ ಕೆಡವಿಕೊಂಡಳು, ಅತ್ತ ಮಲ್ಲಯುದ್ದ ಆರಂಭಿಸಿದ ಒಡಹುಟ್ಟಿದವರೂ! ಅಯ್ಯೋ ನನ ಕರುಮವೆ ಎಂದು ಹಣೆಹಣೆ ಚಚ್ಚಿಕೊಳ್ಳುತ್ತಿದ್ದ ಅಂಥ ಗಾಯಾವಸ್ಥೆಯಲ್ಲಿದ್ದ ಮುದುಕಿಯೂ, ನೀವೇನು ಮನುಶ್ಯರೋ ಕತ್ತೆಗಳೋ ಎಂದು ತಾವಿದ್ದಲ್ಲಿಂದಲೇ ಹಿಡಿಹಿಡಿ ಶಾಪ ಹಾಕುತ್ತಿರುವ ಕೇರಿಯ ಹಿರೀಕರೂ..
ಎಲ್ಲಿಯವರೆಗೆ ಆ ಘನಘೋರ ಕಾಳಗವನ್ನು ನೋಡುತ್ತಿರಲಾದೀತು! ಒಂದು ಕಾಲಕ್ಕೆ ಬಾಡಿಬಿಲ್ಡರಾಗಿದ್ದ ಆರೆಂಪಿ ಸೋಮಣ್ಣನು ತನ್ನ ಮನೆಯ ದೈನಂದಿನ ಖರ್ಚನ್ನು ನೆನಪು ಮಾಡಿಕೊಳ್ಳುತ್ತ ಎದ್ದು ಬಂದವನೆ ಎಡಗೈಯಿಂದ ಕೆಂಚನನ್ನೂ ಬಲಗೈಯಿಂದ ಅಟುಬಿಯನ್ನು ಕಾಳಗದಿಂದ ಬೇರ್ಪಡಿಸಿದ, ನನ್ ಪೀಜ್ ನೂರ್ರುಪಾಯಿ ಕೊಟ್ ಆಮೇಲೆ ಜಗಳಾಡಿಕೊಳ್ಳಿ ಎಂದನಕಂತ ಅವರಿಬ್ಬರ ನಡುವೆ ಅಡ್ಡಗೋಡೆಯಂತೆ ನಿಂತ. ಆ ಅಣ್ಣತಮ್ಮಂದಿರ ಜೇಬಿನಲ್ಲಿ ಹತ್ತು ರೂಪಾಯಿಗಿಂತ ಹೆಚ್ಚು ಹಣವಿರದಿದ್ದರೂ ಅವರ ಹೆಂಡಂದಿರ ಆಯಕಟ್ಟಾದ ಜಾಗಗಳಲ್ಲಿ ಐದುನೂರಕ್ಕಿಂತ ಕಡಿಮೆ ಇರಲಿಲ್ಲ, ಅವರೀರ್ವರನ್ನು ತಮ್ಮತಮ್ಮ ಹೆಗಲುಗಳ ಮೇಲೆ ಆಡಿ ಬೆಳೆಸಿದ, ಅವರೀರ್ವರಿಗೆ ತಾವೇ ನಿಂತು ಮದುವೆ ಮಾಡಿಸಿದ, ಅವರ ದೈನಂದಿನ ಜಗಳದಲ್ಲಿ ಮದ್ಯಪ್ರವೇಶಿಸಿ ಬಿಡಿಸುತ್ತಿರುವ, ಮುದುಕಿಯ ಆಯಾಸ ಪ್ರಯಾಸಗಳಿಗೆ ತಮ್ಮ ಕೈಲಾದಮಟ್ಟಿಗೆ ಸ್ಪಂದಿಸುತ್ತಿರುವ ಕೇರಿಯ ಹಿರೀಕರು ಹೊಟ್ಟೆಗೇನು ತಿಂಥೀರಿ ಎಂದು ಗದರಿಸಿ ಹೇಳಿದರೂ ಪ್ರಯೋಜನವಾಗಲಿಲ್ಲ. ಕೇರಿಯ ಸಮಸ್ತ ಶುನಕಗಳು ಒಟ್ಟಾಗಿ ಬೊವ್ವೋ ಎಂದು ಬೊಗಳಿದರೂ ಅವರ ಎದೆಗಳು ಕರಗಲಿಲ್ಲ. ಪ್ರತಿಯೊಂದು ಮಾತಿಗೂ ಕೊಡೋಕೆ ನನಗೇನು ಗ್ರಾಚಾರ ಎಂಬ ಹಾರಿಕೆ ಉತ್ತರ ಕೇಳೀಕೇಳಿ ರೋಸಿದ ಆರೆಂಪಿಯು ಕೊಡಲಿಲ್ಲಾಂದ್ರೆ ಪೋಲಿಸಿಕಬಾಲಗೆ ಹೇಳ್ತೀನಿ ಎಂದು ಧಮಕಿ ಹಾಕುವುದೆ! ಇಕಬಾಲು ಎಂಬ ನಾಮವಾಚಕ ಕಿವಿಗೆ ಬಿದ್ದೊಡನೆ..

ಆ ಬಡೇಲಡುಕು ಎಂಬ ಹೆಸರಿನ ಬೇಚಿರಾಕ್ ಗ್ರಾಮದಲ್ಲಿ ಇಕ್ಬಾಲು ಎಂಬ ಹೆಸರಿನ ಕನಿಷ್ಟಬಿಲ್ಲೆಯು ಕಳೆದೇಳು ದಿವಸಗಳಿಂದ ಕ್ಯಾಂಪ್ ಹಾಕಿದ್ದನು, ಪಾಳೆ ಇರಲಿ ಬಿಡಲಿ, ತಾನೆಲ್ಲೇ ಇದ್ದರೂ ಎರಡು ಮೂರು ದಿವಸಕ್ಕೊಂದು ಸಲವಾದರೂ ಆ ಗ್ರಾಮದಲ್ಲಿ ಒಂದು ರಾತ್ರಿಯಾದರೂ ಕಳೆಯುತ್ತಾನೆ, ಊರ ಉಸಾಬರಿಗಳನ್ನು ಬಗೆ ಹರಿಸುತ್ತಾನೆ, ಬಡೇಲಡುಕು ಗ್ರಾಮದಲ್ಲಿ ಕಳ್ಳತನ ಮಾಡಿದಿರೆಂದರೆ ಹುಷಾರ್ ಎಂದು ಪರಿಚಯಸ್ಥ ಕಳ್ಳರನ್ನು ಎಚ್ಚರಿಸಿದ್ದಾನೆ. ಅಲ್ಲದೆ ಅವರಿಂದ ಸಹಾಯ ಪಡೆದು ಗ್ರಾಮದಲ್ಲಿ ನಡೆಯುವ ಭಜನೆ ಆಟಬಯಲಾಟಗಳನ್ನು ಪ್ರೋತ್ಸಾಹಿಸುತ್ತಾನೆ, ತನಗಾಗದವರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಹಿಂಸಿಸುತ್ತಾನೆ, ಹೀಗಾಗಿ ಆತನ ಹೆಸರು ಕೇಳಿದೊಡನೆ ಎಂಥವರೂ ತಮ್ಮ ದೋತರಗಳನ್ನು ಒದ್ದೆ ಮಾಡಿಕೊಳ್ಳುವುದು ಮಾಮೂಲು. ಈ ಎಲ್ಲಾ ಶ್ರೇಯಸ್ಸು ನಿಸ್ಸಂದೇಹವಾಗಿ ಮೂಲಿಮನಿ ರೇಣುಕಾಗಳಿಗೆ ಸಲ್ಲುವುದು, ಆಕೆಯ ಪೂರ್ವಾಪರವೇನೆಂದರೆ..
ಕುಂದಗೋಳ ಕಂಪನಿಯ ಮಾಲಕ ದಸೂಢಿ ಆಕೆಯನ್ನು ಪತ್ನಿ ಹೆಸರಿನಲ್ಲಿ ಒತ್ತೆ ಇರಿಸಿಕೊಂಡಿದ್ದನಂತೆ, ತನ್ನ ನಾಟಕಗಳಿಗೆ ಹಾಡುಗಳನ್ನು ಹಾಡಿಸುತ್ತಲೂ, ಹಲವಾರು ಪಾತ್ರಗಳನ್ನು ಮಾಡಿಸುತ್ತಲೂ ಶೋಷಿಸುತ್ತಿದ್ದನಂತೆ, ನಾಟಕಗಳು ತೋಪೆದ್ದಾಗ ಆಕೆಯನ್ನು ಹೊಡೆದುಬಡಿದು ಹಿಂಸಿಸುತ್ತಿದ್ದನಂತೆ, ಹಣದ ಅಡಚಣೆಯಾದಾಗ ಆಕೆಯನ್ನು ಧನಿಕರ ಹಾಸಿಗೆಗಳಿಗೆ ಕಳಿಸುತ್ತಿದ್ದನಂತೆ, ಇಂಥ ಆಕೆ ಈತನ ಕೈಗೆ ಹೇಗೆ ಸಿಕ್ಕಳೆನ್ನುವುದು ತಿಳಿಯದು, ದಸೂಢಿ ಈಕೆಯನ್ನು ಇಕ್ಬಾಲನ ಜೊತೆ ಯಾವ ಕಾರಣಕ್ಕೆ ಕಳಿಸಿಕೊಟ್ಟನೆನ್ನುವುದು ತಿಳಿಯದು. ಈ ಪೂರ್ವಾಪರ ಏನೇ ಇರಲಿ, ಇಕ್ಬಾಲ ರೇಣುಕಾಳನ್ನು ವೃತ್ತಿರಂಗಭೂಮಿ ಸೃಂಖಲೆಯಿಂದ ಬಿಡಿಸಿರುವುದು ಎಷ್ಟು ನಿಜವೋ, ಆಕೆಯನ್ನು ಆಕೆಯ ತವರುಮನೆಯಾದ ಬಡೇಲಡುಕು ಗ್ರಾಮದಲ್ಲಿ ತಂದಿಟ್ಟಿರುವುದು ಅಷ್ಟೇ ನಿಜ. ಆಕೆ ಪಾಡಿಗೆ ಆಕೆಯೂ, ಆತನ ಪಾಡಿಗೆ ಆತನೂ ಇದ್ದಿದ್ದಲ್ಲಿ ಯಾರೊಬ್ಬರು ಹೆದರುವ ಪ್ರೇಮೇಯವಿರುತ್ತಿರಲಿಲ್ಲ. ಗ್ರಾಮದ ಅಗಸರು ಆ ಮನೆಯ ಬಟ್ಟೆಗಳನ್ನು ಫ್ರೀಯಾಗಿ ತೊಳೆದುಕೊಡಬೇಕು, ಕುಂಬಾರರು ಮಡಕೆಗಳನ್ನೂ, ರೈತರು ಕಾಳುಕಡಿಯನ್ನೂ, ಹಜಾಮರು ಕ್ಷೌರವನ್ನೂ, ಥೆಳಗೇರಿಯ ಹೆಂಗಸರು ಆ ಮನೆಯ ಕಸಮುಸರಿಯನ್ನೂ! ಈ ವೆಟ್ಟಿಚಾಕರಿಗಳಲ್ಲಿ ಯಾವುದಾದರೊಂದು ವ್ಯತ್ಯಯವಾಯಿತೆಂದರೆ ಅಂಥವರಿಗೆ ಮುಂದೆ ಯಮಯಾತನೆ ಕಾದಿರುವುದೆಂದೇ ಅರ್ಥ! ಈ ಚೌಡಿಕೆ ಮನೆಯ ಕೆಂಚನಾಗಲೀ, ಅಟುಬಿಯಾಗಲೀ, ಹೆಣ್ಣಾಳುಗಳಾದ ಈರಕ್ಕಾಗಲೀ, ಮಾಯಿಯಾಗಲೀ ಕಳೆದ ಕೆಲವು ದಿವಸಗಳಿಂದ ರೇಣುಕಾ ಹೆಸರಿನ ದೊರೆಸಾನಿ ಮನೆಯ ವೆಟ್ಟಿಚಾಕರಿಗೆ ಹೋಗಿಲ್ಲ. ಹೋಗುತ್ತಿದ್ದರೇನೋ! ಅನ್ನಭಾಗ್ಯ, ವೃದ್ಯಾಪ್ಯ ವೇತನಗಳಂಥ ಜನಪ್ರಿಯ ಯೋಜನೆಗಳನ್ನು ಸರ್ಕಾರ ಪ್ರಕಟಿಸಿದಂದಿನಿಂದ ಇವರೆಲ್ಲ ಏನಾದರೊಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿರುವರು.
ತಮ್ಮ ಕಥೆ ಏನೇ ಇರಲಿ, ಆದರೆ ಆರೆಂಪಿ ಸೋಮಣ್ಣ ಮಾತ್ರ ದಿನಕ್ಕೊಮ್ಮೆ ಗ್ರಾಮದ ನಟ್ಟನಡುವೆ ಇರುವ ಆರಂಕಣದ ಮನೆಗೆ ಹೋಗುತ್ತಿರುವನು, ರೇಣುಕಾಳ ಬೀಪಿ ಪರೀಕ್ಷಿಸಲು, ಮಾತ್ರೆ ಇಂಜೆಕ್ಷನ್ ಹೊತ್ತುಹೊತ್ತಿಗೆ ನೀಡಲೆಂದು. ಅಂಥ ಸೋಮಣ್ಣ ಪೋಲೀಸಪ್ಪಗೆ ಹೇಳಿದನೆಂದರೆ ತಮ್ಮ ಕಥೆ ಮುಗಿದಂತೆಯೇ! ನೀನು ಕೊಡು ತಾನು ಕೊಡು ಎಂದು ಪುನಃ ವಾಗ್ವಾದ ಶುರುವಾಯಿತು, ಅದರಿಂದ ರೋಸಿದ ಹೀರೀಕರ ಪೈಕಿ ಗುರುಪಾದಪ್ಪ ಎದ್ದುನಿಂತ, ಮೂರು ವರ್ಷಗಳಹಿಂದೆ ಭೋದಪಡೆದು ಸಾಧುವೇಷ ಧರಿಸಿರುವ ಆತ ಚಿಕಿತ್ಸಕ ನೋಟ ಬೀರಿದ. ಅವಧೂತರ ಪರಿಭಾಷೆಯಲ್ಲಿ ಮುದುಕಿ ಗಂಗವ್ವಳನ್ನು ಆದಿಶಕ್ತಿಗೆ ತುಲನೆ ಮಾಡುವುದನ್ನು ಮರೆಯಲಿಲ್ಲ, ತನ್ನನ್ನೂ ತನ್ನ ಹೆಂಡತಿಯನ್ನೂ ಅಲಕ್ಷಿಸಿ ಅಕಾಲ ಮರಣಕ್ಕೆ ತುತ್ತಾದ ತನ್ನ ಮಕ್ಕಳನ್ನೂ ಉದಾಹರಿಸುವುದನ್ನು ಮರೆಯಲಿಲ್ಲ. ಅದರಿಂದ ಸ್ಪೂರ್ತಿಪಡೆದ ಯಮುನಜ್ಜ “ಹೊಟ್ಟೆಗೆ ಅನ್ನ ತಿನ್ನೋವಾಗಿದ್ರೆ ತಿಳಕಂತಿದ್ವು ತಾತ, ಇಂಥ ಮಕ್ಕಳನ್ನು ಹಡಕೊಳ್ಳೋದ್ಕಿಂತ ನಮ್ ಗಂಗವ್ವ ಗೊಡ್ಡಿಯಾಗಿದ್ರೆ ಏಟೋ ಬೇಸಿತ್ತು. ಡಾಟ್ರು ಸೋಮಣ್ಣನೂ ಮಕ್ಕಳೊಂದಿಗ, ನಾವೇ ತಲಾಕೀಟೀಟು ಪಟ್ಟಿ ಹಾಕಿ ಕೊಟ್ರಾಯ್ತುಬುಡು” ಎನ್ನುತ್ತ ಖಲ್ಲಿಬೊಕ್ಕಣದಿಂದ ಹತ್ತರ ನೋಟನ್ನು ಹೊರತೆಗೆದ, ಉಳಿದವರೂ ಸಹ! ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅದುವರೆಗೆ ಗಮನಿಸುತ್ತಿದ್ದ ಗಂಗವ್ವ ಸಾವರಿಸಿಕೊಳ್ಳುತ್ತ “ಬುಡ್ತನ್ನು ಗುರುಪಾದೆಪ್ಪ, ಯಾವ ಜಲುಮದಲ್ಲಿ ಪುಣ್ಯ ಮಾಡಿದ್ನೋ ಇಂಥ ಭಂಗಾರದಂಥ ಮಕ್ಕಳನ್ನು ಪಡೆಯೋದ್ಕೆ, ನನ್ನಿಬ್ರು ಸೊಸ್ತೇರು ಅಸ್ಟೆ, ಅವ್ರೂ ಒಳ್ಳೆಯವ್ರೆ, ಆದ್ರೇನು ಮಾಡೋದು? ನನ್ನ ಗ್ರಾಚಾರ ನೆಟ್ಟಗಿಲ್ಲ” ಎಂದು ನಿಟ್ಟುಸಿರಿಟ್ಟಾದ ಬಳಿಕ ಚೇತರಿಸಿಕೊಂಡು “ಸೋಮಣ್ಣ ನೀನು ನನ್ನ ಮಗನಿದ್ದಂಗೆ, ನಾಳೆ ನಾಡಿದ್ದು ಪಿಂಚಣಿ ಬಂದ್ಕೂಡ್ಲೆ ನಿನ್ನ ಪೀಜ್ನ ಬಡ್ಡಿ ಸಮೇತ ಕೊಡ್ತೀನಪ್ಪ” ಎಂದು ಹೇಳಿತು, ಅದಕ್ಕೆ ಸೋಮಣ್ಣ “ಈ ಪ್ರಪಂಚದಾಗ ಯಾರೇನು ಹೊತ್ಗಂಡೋತಾರವ್ವ, ಈ ಮುಠ್ಠಾಳರಿಗೆ ಕುಡೀಲಿಕ್ಕೆ ಬರ್ತದೆ, ಹೆತ್ತಾಯೀನ ನೋಡ್ಕೊಳ್ಳಿಕ್ಕೆ ಬರೊಲ್ಲೇನು? ನಂಗೇನು? ದೇವ್ರು ಇಲ್ಲಿ ಅಲ್ಲದಿದ್ರೆ ಇನ್ನೊಂದು ಕಡೆ ಕೊಡ್ತಾನೆ, ಕೊಡುವಂತೆ ಬಿಡು ಎಲ್ಲಿ ಹೋಗ್ತದೆ, ಮನಿಗೆ ಹೋಗುತ್ಲೆ ಗುಳಿಗೆ ಕಳಿಸ್ತೀನಿ, ಒಂದೆರಡು ದಿವಸ ಮಲಗಿದಲ್ಲಿಂದ ಕದಲಬಾರ್ದು, ಹುಷಾರು” ಎಂದು ಹೇಳಿದ, ತನ್ನ ವೈದೈಕೀಯ ಪರಿಕರಗಳನ್ನು ಬ್ಯಾಗಿಗೆ ತುಂಬಿಕೊಳ್ಳುತ್ತ ಅದರ ಮಕ್ಕಳ ಕಡೆ ತೀಕ್ಷ್ಣನೋಟ ಬೀರಿದ, ಹಾಗೆಯೇ ನಿಡಿದಾದ ಉಸಿರನ್ನೂ..
ಆ ಉಸಿರು ಉಪಸಂಹರಿಸಿಕೊಳ್ಳುತ್ತಿರುವಾಗಲೇ ಕೆಂಚ, ಅಟುಬಿ ತಲಾಕೈವವತ್ತು ಕೊಟ್ಟರು, ಅದನ್ನು ತೆಗೆದುಕೊಳ್ಳುವ ಮೊದಲು ಮುದುಕಿಯನ್ನು ವಾರದಿನಮಾನ ಸರಿಯಾಗಿ ನೋಡಿಕೊಳ್ಳುವುದಾಗಿ ಹೇಳಿದರೆ ಮಾತ್ರ ಫೀಜ್ ತೆಗೆದುಕೊಳ್ಳುವುದಾಗಿ ಪಟ್ಟು ಹಿಡಿದ. ಅವರು ಹಾಗೆ ಹೇಳಿದರೇನೋ ಸರಿ, ಗುಂಪಿನಲ್ಲಿದ್ದ ಎಂಕಟಿ ಅವ್ರು ನೋಡಿಕೊಳ್ಳದಿದ್ದರೇನಾಯ್ತು ಡಾಟ್ರೆ, ನಾವು ನೋಡ್ಕೊಳ್ಳುವುದಾಗಿ ತಾನಿದ್ದಲ್ಲಿಂದಲೇ ಕೂಗಿ ಹೇಳಿದ. ಅದನ್ನು ಕೇಳಿಸಿಕೊಂಡಾದ ಬಳಿಕ.. ಅದುವರೆಗೆ ನಿಶ್ಚಲವಾಗಿ ನಿಂತಲ್ಲಿಯೇ ನಿಂತಿದ್ದ ಸೂರ್ಯ ಚಲನೆ ಆರಂಭಿಸಿದ, ಜೊತೆಗೆ ಸಚರಾಚರವನ್ನು ಪುನ್ಚೇತನಗೊಳಿಸಿದ. ತಮ್ಮ ಮೈಮೇಲೆ ಬಿದ್ದ ಬೆಳಕಿನಿಂದ ಜೀವ ತಳೆದ ಎಂಟೇಸಿಯ ನಾಯಿಯಾದ ಅರ್ಜುನನೂ, ಕೆಲಸೇರ ಪರಮೇಸಿಯ ನಾಯಿಯಾದ ಭೀಮನೂ ಮಲಗಿದಲ್ಲಿಂದ ಎದ್ದವಲ್ಲದೆ ಮೈಕೊಡವಿದವು. ಅದರ ತಿಕಭಾಗವನ್ನು ಇದೂ, ಇದರ ತಿಕಭಾಗವನ್ನು ಅದೂ ಮೂಸಿ ಇನ್ನಷ್ಟು ಚೈತನ್ಯವನ್ನು ಆವಹಿಸಿಕೊಂಡವು. ಭವಿಷ್ಯವನ್ನು ತಿಳಿಯಲೆಂದು ಮುಗಿಲಿಗೆ ಮುಖಮಾಡಿ ಮೋಡಗಳಾಚೆ ಇದ್ದ ಅತ್ಮಗಳೊಂದಿಗೆ ಸಂಭಾಷಿಸಿದವು. ಹೋ ಎಂದು ಊಳಿಡುವುದರ ಮೂಲಕ ಥೆಳಗೇರಿಯ ವರ್ತಮಾನವನ್ನು ದೇವಲೋಕಕ್ಕೆ ರಫ್ತು ಮಾಡಿದವು, ಬಳಿಕ ಅವು ಯ್ಯಾಂಟೆನಾ ಸದೃಶ ತಮ್ಮ ಬಾಲಗಳನ್ನು ಅಲ್ಲಾಡಿಸುತ್ತಲೂ ಕುಯ್ಯು ಕಯ್ಯೋ ರಾಗಾಲಾಪನೆ ಮಾಡುತ್ತಲೂ..
***
ತಲುಪುವಷ್ಟರಲ್ಲಿ ಗಂಗವ್ವಜ್ಜಿ ಸುತ್ತ ಅಷ್ಟದಿಕ್ಪಾಲಕರೋಪಾದಿಯಲ್ಲಿ ನೆರೆದಿದ್ದ ಮುಪ್ಪಾನುಮುದುಕಿಯರಾದ ಸುಂಕಲವ್ವ, ಚವಡವ್ವ, ಕಂದಾರೆವ್ವ, ದುರುಗವ್ವ,ತಿಂದವ್ವ, ಕೊಟ್ರವ್ವ, ಎಲುಗವ್ವ,ಬಯಲವ್ವರು ಉಭಯಕುಶಲೋಪರಿ ಆರಂಭಿಸಿದ್ದರು. ಅವರು ಅಪ್ಯಾಯತೆಯಿಂದ ಬಾ ಅಜ್ಜುನ, ಬಾ ಬೀಮಾ ಎಂದು ಸ್ವಾಗತಿಸಿದರಲ್ಲದೆ ತಾವು ನಮಲುತಲಿದ್ದ ಅನಾಮಧೇಯ ತಿಂಡಿಯ ಚೂರುಗಳೆನ್ನೆಸೆದು ಸತ್ಕರಿಸಿದರು. ತನ್ನ ವಾರಿಗೆಯ ಮುದುಕಿಯರು ಬಿಡುತ್ತಿದ್ದ ಉಸಿರನ್ನೂ, ಸಾಂತ್ವನಕಾರಿ ಮಾತುಗಳನ್ನೂ ಅವುಷದಗಳನ್ನಾಗಿ ಪರಿವರ್ತಿಸಿ ಸ್ವೀಕಾರ ಮಾಡುತ್ತಿದ್ದ ಗಂಗವ್ವಜ್ಜಿ ಅಲುಪಸೊಲುಪ ಚೇತರಿಸಿಕೊಂಡಿತ್ತಲ್ಲದೆ ಕಾಲುಗಳನ್ನು ನಿಡಿದಾಗಿ ಚಾಚಿ ತನ್ನ ಸವಕಲು ಬೆನ್ನನ್ನು ಸಯಜುಗಲ್ಲಿಗೆ ಆನಿಸಿ ಕುಳಿತುಕೊಂಡಿತ್ತು. ಅದೋ ಗೋಧೂಳಿ ವ್ಯಾಳೆ, ಎಲ್ಲಂದರಲ್ಲಿ ಒಂದಾ ಎರಡಾ ಸಮಯ, ಥೆಳಗೇರಿಗೆ ಕಳಸಪ್ರಾಯವಾಗಿದ್ದ ತಿಪ್ಪೆ ಚರಂಡಿಗಳ ಆಶ್ರಯದಲ್ಲಿತ್ತು ಚವುಡಿಕೆಯರ ಅನಾದಿಕಾಲದ ಮಣ್ಣಿನಮನೆ, ಅದರ ಆಸುಪಾಸು ಪರಿಸರ ವಿಸರ್ಜನಾ ಚತುರರಿಗೆ ಆಶ್ರಯ ಕಲುಪಿಸಿತ್ತಷ್ಟೆ ಅಭಾವದಿಂದಾಗಿ ಮುಕ್ಕಾಲುವಾಸಿ ನೀರಿದ್ದ ಚೆರಗಿಯನ್ನು ಕೈಲಿ ತುಳುಕಿಸುತ್ತ ಹಿಡಿದುಕೊಂಡು ಸರಪರ ಹಿಂಗ ಕಾಣಿಸಿಕೊಂಡು ಹಂಗ ಹೋಗುತ್ತಿದ್ದ ವಿವಿಧ ವಯೋಮಾನದ ನರಮಾನ್ನವರು ಸಂತ್ರಸ್ಥೆಯ ಕ್ಷೇಮಲಾಭ ವಿಚಾರಿಸುತ್ತಿದ್ದರು. ಕೆಲವರು ಇದನ ತಿನ್ನು ಅದನ ತಿನ್ನು ಎಂದನಕಂತ ಹೋಗುತ್ತಿದ್ದರೆ ಇನ್ನು ಕೆಲವರು ಮುದುಕರಾದವರು ಗಪ್ಪಂತ ಕಣ್ಣನ ಮುಚ್ಚಬೇಕೆಂದು ಸಲಹೆ ನೀಡುತ್ತಿದ್ದರು. ಮತ್ತೂ ಕೆಲವರು ಪಿಂಚಣಿ ಸೊಮ್ಮನ್ನುಜೋಪಾನ ಜತನದಿಂದ ಕಾಪಾಡಿಕೊಂಡು ದಿನ ಎಣೆಸಬೇಕೆಂದು ಸಲಹೆ ನೀಡುವುದನ್ನು ಮರೆಯಲಿಲ್ಲ. ಆಯತಪ್ಪಿ ಅದರ ಸೊಸ್ತೆಯರನ್ನು ಶಪಿಸುವ ಧೈರ್ಯ ಪ್ರದರ್ಶಿಸಲಿಲ್ಲ, ಈರಕ್ಕ, ಮಾಯಿ ಮಹಾಜಗಳಗಂಟಿಯರು ಎಂಬ ಕಾರಣಕ್ಕೆ. ಅವರಿಬ್ಬರು ಅಂಗಳದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬಹುದೆಂಬ ಕಾರಣಕ್ಕೆ. ಅದು ಅಕ್ಷರಶಃ ನಿಜವಾಗಿತ್ತು. ಅವರಿಬ್ಬರು ತಾವಿದ್ದಲ್ಲಿಂದಲೇ ತಮ್ಮ ಆರನೆಯ ಇಂದ್ರಿಯದ ಮೂಲಕ ಅಂಗಳದ ವಿದ್ಯಾಮಾನವನ್ನು ಗಮನಿಸುತ್ತಿರುವಷ್ಟರಲ್ಲಿ..
ಚಾಪಲಮ್ಮೋ ಚಾಪಲು ಎಂಬುದು ಅಲೆಅಲೆಯಾಗಿ ಕೇಳಿಸಿತು, ಆ ಧ್ವನಿಗುಂಟ ಸಾಗಿ ಅರೆ ರಸೂಳಣ್ನ್ಎಂದು ತಮ್ಮಷ್ಟಕ ತಾವೇ ಆ ನಾಮವಾಚಕದ ಸ್ಮರಣೆ ಮಾಡಿದರು. ಹಿಂದೆಲ್ಲಾ ತಿಂಗಳಿಗೊಮ್ಮೆ ಬರುತ್ತಿದ್ದ ರಸೂಲು ಗೋರುಮೆಂಟು ಹಲವು ಯೋಜನೆಗಳನ್ನು ಜಾರಿಗೊಳಿಸಿದ ಲಾಗಾಯ್ತು ವಾರ ವಾರ ಬರಲಾರಂಭಿಸಿದ್ದ. ತಾನಿರೋ ಹಗರಿಸಾಲಿಗೂ, ಬಡೇಲಡಕಿಗೂ ಅಜಗಜಾಂತರ ವ್ಯತ್ಯಾಸ. ಹೊರಡುವಾಗ ಬದುಕಿರುತ್ತಿದ್ದ ಬಹುಪಾಲು ಮೀನುಗಳು ಬಡೇಲಡಕು ಗ್ರಾಮದ ಮೇರೆ ಪ್ರವೇಶಿಸುವಷ್ಟರಲ್ಲಿ ಸತ್ತಿರುತ್ತಿದ್ದವು. ಉಳಿದ ಕೆಲವನ್ನು ಬದುಕಿಸಲು ಹರಸಾಹಸ ಪಡುತ್ತಿದ್ದನು, ಆ ದಿವಸವೂ..
ಕೇಳಿಸಿಕೊಂಡವರ ಬಾಯೊಳಗೆ ಹೊಳೆ ಕಾಣಿಸಿಕೊಂಡಿತು. ಮುದುಕಿ ಕಡೆ ಇದ್ದವರು ಅತ್ತ ಕತ್ತೊರಳಿಸಿದರು, ಮನೆಮನೆಗಳಲ್ಲಿ ಅಡಗಿದ್ದವರು ಬೀದಿಗೆ ಬಂದು ಇಣುಕಿದರು, ಸಾಲೆಯಲ್ಲಿ ಕಲಿಯೋ ಮಕ್ಕಳುಮರಿಗಳು ಇಟಮಿನ್ನೂ ಪುರೋಟೀನೂ ಎಂದನಕಂತ ಬಾಯೊಳಗೆ ಹೆಬ್ಬೆರಳನ್ನಿರಿಸಿಕೊಂಡು ಬೀದಿಯಲ್ಲಿ ನಿಂತವು. ಉಸಿರು ತಗೊಂಡು ಉಸಿರು ಬಿಡುವಷ್ಟರಲ್ಲಿ ಸಯಕಲ್ಲು ಟ್ರಿಣ್ ಟ್ರಿಣ್ ಅಂದದ್ದೂ ತಡಾಗಲಿಲ್ಲ, ತುಟಿ ಸಂದಿಯಲ್ಲಿ ಚುಟ್ಟ ಇರಿಸಿಕೊಂಡಿದ್ದ ರಸೂಲು ಕಾಣಿಸಿಕೊಂಡದ್ದೂ ತಡಾಗಲಿಲ್ಲ. ತನ್ನೊಂದು ಕೈಯಲ್ಲಿ ಮೀನುಗಳ ಸರಮಾಲೆಯನ್ನೂ ಇನ್ನೊಂದು ಕೈಯಲ್ಲಿ ನೀರಿದ್ದ ಚರಕಲಿ ಇಟುಕೊಂಡಿದ್ದ ರಸೂಲು ಚಾಪಲಮ್ಮೋ ಚಾಪಲು ಎಂದು ಕೂಗಿದ, ಯೋಜನೆಗಳ ಫಲಾನುಭವಿಗಳ ಪೈಕಿ ಕೆಲವರು ಎಷ್ಟು ಕೇಜಿ ಅಕ್ಕಿಗೆ ಎಷ್ಟು ಮೀನು ಎಂದು ಚೌಕಾಸಿಗೆ ಇಳಿದರು, ಮತ್ಸ್ಯಸುಗಂಧ ಪರಿಮಳ ಸವಿಯಲೆಂದು ಖಾಲಿ ಪೆಟಾರಿಯೊಳಗಿಣುಕಿದರು. ಕೈಯಲ್ಲಿ ಹೊರತುಪಡಿಸಿದರೆ ಇನ್ನೊಂದು ಮೀನು ಇರಲಿಲ್ಲವೆಂಬ ಕಾರಣಕ್ಕೆ ಸಿಕ್ಕವರಿಗೆ ಸಿವಲಿಂಗ ಎನ್ನುವ ಪರಿಸ್ಥಿತಿ ತಲೆದೋರಿತು. ಮೇರಾ ಪಾಸ್ ಮುರ್ದಾ ನಹೀ ಎಂದನಲ್ಲದೆ ನೀರು ಚಿಮುಕಿಸಿ ಸಾಯಲಿದ್ದ ಮೀನುಗಳನ್ನು ಬದುಕಿಸುತ್ತ ದೇಕೋ ಸಬೀ ಜಿಂದಾ ಹೈ ಎಂದು ತೋರಿಸಿದನು. ರೊಕ್ಕ ಇದ್ದವರು ರೊಕ್ಕ ಕೊಟ್ಟರೆ, ಬೀಪಿಎಲ್ ಕಾರುಡಿನವರು ರೊಕ್ಕಕ್ಕೆ ಬದಲಿಗೆ ಕೇಜಿಗಟ್ಟನೆ ಅಕ್ಕಿ ಅಳೆದು ಮೀನನ್ನು ಖರೀದಿಸಿದರು. ಎಲ್ಲಾ ಮೀನುಗಳು ಬಿಕರಿಯಾಗಿ ಕೊನೆಗುಳಿದ ಒಂದೇಒಂದು ಮೀನಿಗೆ ಪಯಿಪೋಟಿ ನಡೆಯಿತು. ರಸೂಲು ಏನು ಹೇಳಿದನೆಂದರೆ ಇದು ನಮ್ ಗಂಗಮ್ತಾಯೀದು ಎಂದು ಖಡಾಖಂಡಿತವಾಗಿ ಹೇಳಿದ, ಅವರಿವರನ್ನು ವಿಚಾರಿಸುತ್ತ ಕೊನೆಗೆ ಚೌಡಿಕೆಯರ ಮನೆಯಂಗಳ ಪ್ರವೇಶಿಸಿದ.
ಯಾಕಾಯ್ತು ಏನಾಯ್ತು ಎಂದು ವಿಚಾರಿಸುವ ಗೋಜಿಗಿಳಿಯಲಿಲ್ಲ, ಮತ್ಸ್ಯಗಳ ಸಹವಾಸದಿಂದ ತ್ರಿಕಾಲಜ್ಞಾನಿಯಾಗಿದ್ದ ತಾನು ಹಗರಿಸಾಲಿನಲ್ಲಿದ್ದುಕೊಂಡೇ ದೂರದ ಬಡೇಲಡಕು, ಕಕ್ಕುಪ್ಪಿ, ಕೊರಲಗುಂದಿ, ಯಾಲಪಿ ಕಗ್ಗಲ್ಲುಗಳಲ್ಲಿ ನಡೆಯುವ ವಿದ್ಯಾಮಾನಗಳನ್ನು ಗ್ರಹಿಸಬಲ್ಲವನಾಗಿದ್ದ. ಮುದುಕಿಯ ಬೆನ್ನಮೇಲೆ ಕೈಯಿರಿಸಿ ಕೆಟ್ಟವರನ್ನು ಒಳ್ಳೆಯವರನ್ನಾಗಿಸು ಎಂದು ಅಲ್ಲಾಹುನಲ್ಲಿ ನಮಾಜು ಸಲ್ಲಿಸಿದ. ಕಣ್ಣಲ್ಲಿ ನೀರು ತಂದುಕೊಂಡರೆಲ್ಲಿ ತನ್ನ ಸೊಸೆ ಮಾಯಿಯ ಆಯುಷ್ಯ ಕಡಿಮೆಯಾಗುವುದೋ ಎಂಬ ಅಂಜಿಕೆಯಿಂದ ಮುದುಕಿ ಜೋಲಿ ಬಂದು ಬಿದ್ದೆ ಸಾಬಣ್ಣ ಎಂದು ಹೇಳಿತು, ಅಲ್ಲದೆ ರಸೂಲು ಕುಟುಂಬದ ಕ್ಷೇಮಲಾಭ ವಿಚಾರಿಸಿತು.
ರಸೂಲನಿಗೂ ತಮ್ಮ ಚೌಡಿಕೆ ಮನೆತನಕ್ಕೂ ಅವಿನಾಭಾವ ಸಂಬಂಧ. ಮಕ್ಕಳೊಂದಿಗನಾದ ರಸೂಲನ ಹಣಕಾಸಿನ ಪರಿಸ್ಥಿತಿ ಈ ಮೊದಲು ಅಷ್ಟಕಷ್ಟೆ ಇತ್ತು, ಕುಟುಂಬ ನಿರ್ವಹಣೆಗಾಗಿ ಎಲ್ಲಾ ದಗದಗಳನ್ನು ದಣಿವರಿಯದೆ ಮಾಡುತ್ತಿದ್ದ, ಚರ್ಮದ ವ್ಯಾಪಾರ ಕೈಹಿಡಿಯದಿದ್ದಲ್ಲಿ ಆತ ದುಬ್ಯಾಗೆ ಪಲಾಯನ ಮಾಡಬೇಕಿತ್ತು. ಐವತ್ತರವತ್ತು ಮೈಲಿ ಫಾಸಲೆಯಲ್ಲಿ ಸಾಲಿಯಾನ ನಡೆಯುತ್ತಿದ್ದ ಹೆಣ್ಣುದೇವತೆಗಳ ಹಬ್ಬಗಳಂದು ಆಯಾ ಊರುಗಳಲ್ಲಿ ಠಿಕಾಣಿ ಹೂಡುತ್ತಿದ್ದ, ಕಟುಕರಿರದ ಊರುಗಳಲ್ಲಿ ತಾನೇ ಕಟುಕನಾಗುತ್ತಿದ್ದ, ಗರಂಮಸಾಲೆದಿನಿಸುಗಳೊಂದೇ ಅಲ್ಲದೆ ಬ್ರಾಂದಿ ಬಾಟಲುಗಳನ್ನೂ ಸರಬರಾಜು ಮಾಡುತ್ತಿದ್ದ, ತಿನ್ನುವ ಕುಡಿಯುವ ಕೌಶಲ್ಯವನ್ನೂ ಪರಿಚಯಿಸುತ್ತಿದ್ದ, ಕೆಲವು ಕಡೆ ತಾನೇ ಮಾಂಸಖಾದ್ಯಗಳನ್ನು ತಯಾರಿಸಿ ಉಣಬಡಿಸುತ್ತಿದ್ದ, ಅಪ್ಪಾ ಅಣ್ಣಾ ಚಿಕ್ಕಪ್ಪ ದೊಡ್ಡಪ್ಪ ಮಾವ ಇತ್ಯಾದಿ ಸಂಬಂಧವಾಚಕಗಳನ್ನು ನಿರರ್ಗಳವಾಗಿ ಪ್ರಯೋಗಿಸುತ್ತ ಆಯಾ ಕುಟುಂಬಗಳ ಅನಧಿಕೃತ ಸದಸ್ಯನಾಗುತ್ತಿದ್ದ, ಉರ್ದು ಕನ್ನಡ ಮಿಶ್ರಿತ ಮಾತಿನಿಂದ ಪರವಶಗೊಳಿಸುತ್ತಿದ್ದ, ಅತಿಕಡಿಮೆ ಬೆಲೆಗೆ ಕುರಿ ಮೇಕೆಗಳ ತೊಗಲನ್ನು ಖರೀದಿಸುತ್ತಿದ್ದ. ಖರೀದಿಸಿದ ಚರ್ಮವನ್ನು ನಂಬುಗಸ್ಥರ ಮನೆಗಳಲ್ಲಿ ದಾಸ್ತಾನು ಮಾಡುತ್ತಿದ್ದ, ಚರ್ಮದ ವ್ಯಾಪಾರವೂ ಅಷ್ಟಕಷ್ಟೆ, ಲಾಭ ಸಿಗದಿದ್ದರೂ ಲುಕ್ಸಾಣ ಮಾತ್ರ ಆಗುತ್ತಿರಲಿಲ್ಲ, ಮುಂದೆ ಸರ್ಕಾರ ಹಗರಿಗೆ ಬಸರಕೋಡಿನ ಬಳಿ ಚಿಕ್ಕ ಜಲಾಶಯ ನಿರ್ಮಿಸಿತು, ಉಳಿದ ವ್ಯವಹಾರಗಳ ಜೋಡಿ ಮೀನಿನ ವ್ಯಾಪಾರವನ್ನೂ ಕೈಗೆತ್ತಿಕೊಂಡ. ಬಿಕರಿಯಾಗುವ ತನಕ ಮೀನುಗಳು ಸಾಯದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದ, ಈ ಇಂಥ ವ್ಯವಹಾರಿಕ ಕೌಶಲ್ಯದಿಂದಾಗಿ..
ರಸೂಲ ಮತ್ತು ಚೌಡಕಿ ಕೊಟ್ರಪ್ಪನ ನಡುವೆ ಯಾವಾಗ ಯಾವ ಕಾರಣಕ್ಕೆ ಸ್ನೇಹ ಏರ್ಪಟ್ಟಿತೆನ್ನುವುದು ನಿಗೂಢ.ರಸೂಲ ಬಡೇಲಡಕಿಗೆ ಬಂದಾಗಲೆಲ್ಲ ಚೌಡಕಿಯವರ ಮನೆಯಲ್ಲೂ, ಕೊಟ್ರಪ್ಪ ಹಗರಿ ಕಡೆ ಹೋದಾಗಲೆಲ್ಲ ರಸೂಲನ ಮನೆಯಲ್ಲೂ..ಆತನ ಮಕ್ಕಳನ್ನು ಈತ ಎತ್ತಿ ಆಡಿಸಿರುವುದುಂಟು, ಹಾಗೆಯೇ ಈತನ ಮಕ್ಕಳನ್ನು ಆತ ಎತ್ತಿ ಆಡಿಸಿರುವುದುಂಟು. ತಾನು ಎತ್ತಿ ಆಡಿಸಿರುವ ಕೊಟ್ಟಪ್ಪನ ಮಕ್ಕಳ ಮದುವೆಯನ್ನು ತಾನೇ ಖುದ್ದನಿಂತು ಮಾಡಿರುವ ಸಲಿಗೆ ಬೇರೆ. ಇಂಥ ತನ್ನನ್ನು ಮಾತನಾಡಿಸುವ ಸೌಜನ್ಯ ತೋರಿಸದಿದ್ದಾಗ! ಹೆಸರುಗುಂಟ ಕೂಗಿದ, ಹ್ಹಾ ಇಲ್ಲ, ಹ್ಹೂ ಇಲ್ಲ, ಆದ ಬೇಸರವನ್ನು ತೋರಗೊಡಲಿಲ್ಲ. ಇನ್ನು ಸುಮ್ಮನಿರಬಾರದೆಂದು ನಿರ್ಧರಿಸಿದ. ಅಷ್ಟರಲ್ಲಿ ಹೊರಗೆ ಕಾಣಿಸಿಕೊಂಡ ಮಾಯಿಯ ಕ್ಷೇಮ ವಿಚಾರಿಸಿದ, ಮೊಳಗಾತ್ರದ ಮೀನನ್ನು ಆಕೆಗೆ ಒಪ್ಪಿಸುತ್ತ “ ಈ ಗೌರೀನ ನಿಮ್ಮತ್ತೆಗಂತ ತಂದೀನಿ ಕಣವ್ವ, ನೀನ್ಯಾವಾಗ ಅಡುಗೆ ಮಾಡ್ತೀಯೋ ಅಲ್ಲಿವರೆಗೆ ನೀರನ ಚುಮುಕಿಸ್ತಾ ಇರು, ಬದುಕಿರ್ತದೆ, ಸೊಲುಪ ಹುಳಿ ಮುಂದು ಮಾಡೋದನ ಮರೀಬ್ಯಾಡ ತಾಯಿ” ಎಂದು ಸಲಹೆ ನೀಡುವುದನ್ನು ಮರೆಯಲಿಲ್ಲ. ಅರ್ಜುನ ಭೀಮ ಒಟ್ಟಿಗೆ ಕೇಳಿಸಿಕೊಳುತ್ತ, ಇನ್ನು ತಾನು ಹೊರಡುವ ಮೊದಲು..
 
(ಮುಂದುವರಿಯುವುದು)
 

‍ಲೇಖಕರು G

April 6, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: